5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಜೀವನ ಮೌಲ್ಯ ಎತ್ತಿಹಿಡಿದ ನಿರ್ದೇಶಕ

ಗಂಗಾಧರ ಮೊದಲಿಯಾರ್
Published:
Updated:
ಜೀವನ ಮೌಲ್ಯ ಎತ್ತಿಹಿಡಿದ ನಿರ್ದೇಶಕ

ದೇಶದ ಉದ್ದಗಲಕ್ಕೂ ಚಲನಚಿತ್ರ ನಟನಟಿಯರು, ಸಂಗೀತ ನಿರ್ದೇಶಕರು ಸಂಸತ್ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಕಣಕ್ಕಿಳಿದು, ಗೆಲುವಿಗಾಗಿ ಹೋರಾಟ ನಡೆಸಿದ್ದಾರೆ. ಅವರನ್ನು ಬೆಂಬಲಿಸಿ ಪ್ರಚಾರ ನಡೆಸಲು ಮತ್ತಷ್ಟು ತಾರೆಯರು ದಂಡುದಂಡಾಗಿ ಕ್ಷೇತ್ರಗಳತ್ತ ಸಾಗಿ ಬಂದಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ರಾಜಕಾರಣದ ಬಿಸಿ ಏರಿದೆ. ಘರ್ಷಣೆ, ಹಣಹಂಚಿಕೆ, ಪ್ರಚಾರ ಭರಾಟೆ, ಯಾರು ಕೇಂದ್ರದ ಗದ್ದುಗೆ ಹಿಡಿಯುತ್ತಾರೆ ಎಂಬ ಊಹಾಪೋಹದ ಸಮೀಕ್ಷೆಗಳೆಲ್ಲಾ ಗರಿಗೆದರಿಕೊಂಡು ತೇಲಾಡುತ್ತಿವೆ. ಇಂತಹ ದೇಶವ್ಯಾಪಿ ಗದ್ದಲದ ನಡುವೆ ಗೀತರಚನಕಾರ, ನಿರ್ದೇಶಕ ಗುಲ್ಜಾರ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.39 ವರ್ಷದ ಹಿಂದೆ ತುರ್ತುಪರಿಸ್ಥಿತಿಯ ನಂತರ ಸಾರ್ವತ್ರಿಕ ಚುನಾವಣೆ ನಡೆಯುವ ಸಂದರ್ಭದಲ್ಲಿ ಗುಲ್ಜಾರ್ ಅವರ ‘ಆಂಧಿ’ ಚಲನಚಿತ್ರವನ್ನು ಸೆನ್ಸಾರ್ ಮಂಡಳಿ ರಾಜಕೀಯ ಕಾರಣಕ್ಕಾಗಿಯೇ ನಿಷೇಧಿಸಿತ್ತು ಎನ್ನುವುದು ಕಾಕತಾಳೀಯವಾಗಿರಬಹುದು. ಆದರೆ ೫೮ ವರ್ಷಗಳ ಕಾಲ ಚಲನಚಿತ್ರರಂಗದಲ್ಲಿ ಬದ್ಧತೆಯ ಸಿನಿಮಾ ಎಂದರೇನು ಎಂಬುದನ್ನು ರುಜುವಾತು ಮಾಡಿದ 79 ವರ್ಷ ವಯಸ್ಸಿನ ಗುಲ್ಜಾರ್ ಅವರಿಗೆ ಈ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆಯೂ ಇತ್ತು ಎನ್ನುವುದನ್ನೂ ಅಲ್ಲಗಳೆಯಲಾಗುವುದಿಲ್ಲ.ಇಂದಿರಾಗಾಂಧಿ ಅವರು 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ನಂತರ, ವಿ.ಸಿ. ಶುಕ್ಲಾ ಅವರು ವಾರ್ತಾ ಮತ್ತು ಪ್ರಸಾರ ಇಲಾಖೆಯ ಹೊಣೆ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ಕೂಡಲೇ ಮಾಧ್ಯಮಗಳು ಹದ್ದು ಮೀರಿ ಹೋಗುತ್ತಿವೆ, ಸಮೂಹ ಮಾಧ್ಯಮಗಳ ದುರ್ಬಳಕೆ ಪ್ರಜಾಪ್ರಭುತ್ವಕ್ಕೆ ಒಪ್ಪುವ ವಿಷಯವಲ್ಲ ಎಂದು ಶುಕ್ಲಾ ಅಭಿಪ್ರಾಯಪಟ್ಟರು. ಸಿನಿಮಾದವರ ಸ್ವಾತಂತ್ರ್ಯದ ಬಗ್ಗೆ ಹಸ್ತಕ್ಷೇಪ ಮಾಡಿದ ಶುಕ್ಲಾ, ಸೆನ್ಸಾರ್ ನಿಯಮಗಳನ್ನು ಬಿಗಿಗೊಳಿಸಿ, ಇಡೀ ಸಿನಿಮಾ ಉದ್ಯಮವನ್ನೇ ಹತೋಟಿಗೆ ತೆಗೆದುಕೊಳ್ಳಲು ವಿಫಲಯತ್ನ ನಡೆಸಿದ್ದರು. ಇಂತಹ ಸಮಯದಲ್ಲಿ ಗುಲ್ಜಾರ್, ನಿರ್ದೇಶನದ ‘ಆಂಧಿ’ ಬಿಡುಗಡೆಯಾಯಿತು.ರಾಜಕೀಯ ಆಕಾಂಕ್ಷೆಯುಳ್ಳ ಮಹಿಳೆ, ಸಾಂಸಾರಿಕ ಜೀವನದಲ್ಲಿ ಬಿರುಕು ತಂದುಕೊಳ್ಳುತ್ತಾಳೆ ಎನ್ನುವ ಆಶಯವುಳ್ಳ ಈ ಚಿತ್ರ ಸೆನ್ಸಾರ್‌ನ ಯಾವುದೇ ಆಕ್ಷೇಪಗಳಿಲ್ಲದೆ ತೆರೆಕಂಡಿತು. ಆದರೆ, ಈ ಚಿತ್ರದ ನಾಯಕಿಯ ಜೀವನ, ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಜೀವನಕತೆಯನ್ನೇ ಹೋಲುತ್ತದೆ ಎಂಬ ಸುದ್ದಿ ಹಬ್ಬಿತು. ತಕ್ಷಣವೇ ಸರ್ಕಾರ ಈ ಚಿತ್ರವನ್ನು ನಿಷೇಧಿಸಿತು. ದೇಶದ ಚುನಾವಣಾ ವ್ಯವಸ್ಥೆಯನ್ನೇ ಅಪಮಾನಗೊಳಿಸುವ ರೀತಿಯಲ್ಲಿರುವ ಈ ಚಿತ್ರವನ್ನು ಏಕೆ ನಿಷೇಧಿಸಬಾರದೆಂದು ನಿರ್ಮಾಪಕರಿಗೆ ಸೆನ್ಸಾರ್‌ ಮಂಡಳಿ ನೋಟೀಸ್ ನೀಡಿತು. ನಿಷೇಧದಿಂದಾಗಿ ನಿರ್ಮಾಪಕರು ತೀವ್ರ ನಷ್ಟಕ್ಕೊಳಗಾದರು. ಮತ್ತಷ್ಟು ನಷ್ಟ ತಪ್ಪಿಸಿಕೊಳ್ಳುವ ದೃಷ್ಟಿಯಿಂದ, ಸೆನ್ಸಾರ್ ಪಟ್ಟಿಮಾಡಿದ ಎಲ್ಲ ದೃಶ್ಯಗಳನ್ನೂ ಕತ್ತರಿಸಿ, ಪರಿಷ್ಕೃತಗೊಳಿಸಲಾಯಿತು. ಆದರೆ ಚುನಾವಣೆ ನಡೆದು, ಹೊಸ ಸರ್ಕಾರ ಬಂದ ನಂತರವೇ ಚಿತ್ರ (1976) ಬಿಡುಗಡೆಯಾಯಿತು.ದೇಶ ವಿಭಜನೆಯಾದ ನಂತರ ಪಾಕಿಸ್ತಾನಕ್ಕೆ ಸೇರಿಹೋದ ಜೀಲಂ ಜಿಲ್ಲೆಯನ್ನು ತೊರೆದು, ಮುಂಬೈಗೆ ಆಗಮಿಸಿದ ಸಂಪೂರ್ಣಸಿಂಗ್ ಕಾರ್ಲ, ‘ಗುಲ್ಜಾರ್’ ಎನ್ನುವ ಕಾವ್ಯನಾಮದ ಮೂಲಕವೇ ಕವಿಯಾಗಿ ಬೆಳೆದರು. ಆರಂಭದ ಕೆಲದಿನ ಮುಂಬೈನಲ್ಲಿ ಕಾರು ಮೆಕಾನಿಕ್ ಆಗಿದ್ದರೂ ಅವರ ಸೆಳೆತವೆಲ್ಲಾ, ಹಿಂದೂಸ್ತಾನಿ, ಪಂಜಾಬಿ ಭಾಷೆಯಲ್ಲಿ ಕಾವ್ಯರಚನೆ ಮಾಡುವತ್ತಲೇ ತುಡಿಯುತ್ತಿತ್ತು. ಐವತ್ತರ ದಶಕದಲ್ಲಿ ನಿರ್ದೇಶಕ ಬಿಮಲ್‌ರಾಯ್ ಸಂಪರ್ಕಕ್ಕೆ ಬಂದ ಗುಲ್ಜಾರ್, ‘ಬಂಧಿನಿ’ (1963) ಚಿತ್ರಕ್ಕೆ ಮೇರಾ ಗೋರಾ ಅಂಗ್ ಲಾಯ್‌ಲೇ... ಎಂಬ ಗೀತೆಯನ್ನು ರಚಿಸಿದರು. ಇದರೊಂದಿಗೆ ಚಿತ್ರರಂಗದೊಂದಿಗಿನ ಸಂಬಂಧಕ್ಕೆ ಶಂಕುಸ್ಥಾಪನೆ ಮಾಡಿಕೊಂಡರು.1944ರಲ್ಲಿ ‘ಉಡೇರ್ ಪತೇರ್’ ಬಂಗಾಳಿ ಚಿತ್ರದ ಮೂಲಕ ವಾಸ್ತವಿಕ ಚಿತ್ರಚಳವಳಿಯ ಬೆಳವಣಿಗೆಗೆ ಕಾರಣರಾಗಿದ್ದ ಬಿಮಲ್‌ರಾಯ್, ಈ ರೀತಿಯ ಚಿತ್ರ ಚಳವಳಿ ವಿಫಲವಾದ ನಂತರ ಮುಂಬೈಗೆ ಬಂದರು. ಮಾ (1952), ಪರಿಣಿತಾ (1953), ದೊ ಬಿಗಾ ಜಮೀನ್ (1953), ದೇವದಾಸ್, ಮಧುಮತಿ (1958), ಸುಜಾತ (1959) ಮೂಲಕ ಸಮಕಾಲೀನತೆ ಹಾಗೂ ಸಾಮಾಜಿಕ ಕಳಕಳಿಯನ್ನು ಮೆರೆದವರು.ಚಲನಚಿತ್ರ ಮಾಧ್ಯಮವನ್ನು ಸಮಾಜದ ವಾಸ್ತವಿಕ ಸ್ಥಿತಿಗತಿಗಳ ಕನ್ನಡಿಯಾಗಿಸಿ, ಆ ಮೂಲಕ ಮಾಧ್ಯಮದ ವಿಶಾಲ ಸಾಧ್ಯತೆಗಳನ್ನು ಹೇಳುವ ತವಕವಿದ್ದ ಬಿಮಲ್‌ರಾಯ್ ಅವರ ಈ ಬಗೆಯ ಚಿಂತನೆ, ‘ಬಂಧಿನಿ’ಯೊಂದಿಗೆ ಕೊನೆಗೊಂಡಿತು. ಗುಲ್ಜಾರ್ ಅವರ ಸಿನಿಮಾ ಪಯಣ ಈ ಚಿತ್ರದಿಂದಲೇ ಆರಂಭವಾಯಿತು. ಬಿಮಲ್‌ರಾಯ್ ಅವರ ನಂತರ ಗುಲ್ಜಾರ್, ಹೃಷಿಕೇಷ ಮುಖರ್ಜಿ, ಬಸು ಭಟ್ಟಾಚಾರ್ಯ ಅವರ ನಿರ್ದೇಶನದ ಚಿತ್ರಗಳಿಗೂ ಗೀತರಚನೆ ಮಾಡಿದರು. ಮಧ್ಯಮವರ್ಗದ ಜನರ ಕಷ್ಟನಷ್ಟಗಳಿಗೆ ಸ್ಪಂದಿಸುವ, ನವಿರಾದ ನಿರೂಪಣೆಯ ಮೂಲಕ ಕತೆ ಹೇಳುವ ಚಾತುರ್ಯವನ್ನು ಗುಲ್ಜಾರ್ ಗಳಿಸಿಕೊಂಡದ್ದು ಇಂತಹ ನಿರ್ದೇಶಕರುಗಳ ಸಹವಾಸದಲ್ಲೇ.ಗುಲ್ಜಾರ್, ಒಟ್ಟು 24 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎಲ್ಲ ಚಿತ್ರಗಳು ಸಮಾಜದ ಮಧ್ಯಮ ವರ್ಗದ ಭಾವನೆಗಳ ಪ್ರತೀಕವಾಗಿದೆ. ಅವರ ಮೇಲೆ ಬಿಮಲ್‌ರಾಯ್ ಅವರ ಪ್ರಭಾವ ದಟ್ಟವಾಗಿರುವುದನ್ನು ಸುಲಭವಾಗಿಯೇ ಗುರುತಿಸಬಹುದು. ಗುಲ್ಜಾರ್ ತಮ್ಮ ಚಿತ್ರಗಳಿಗೆ ಬಂಗಾಳಿ ಕಾದಂಬರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದುದು ಕೂಡ ಇಂತಹದ್ದೇ ಪ್ರಭಾವದಿಂದಾಗಿಯೇ. 1971ರಲ್ಲಿ ಗುಲ್ಜಾರ್, ‘ಮೇರೆ ಅಪ್ನೆ’ ಚಿತ್ರವನ್ನು ನಿರ್ದೇಶಿಸಿದರು. ಪಶ್ಚಿಮ ಬಂಗಾಳದಲ್ಲಿ ಬಿಡುಗಡೆಯಾಗಿ ಯಶಗಳಿಸಿದ್ದ ತಪನ್ ಸಿನ್ಹಾ ನಿರ್ದೇಶನದ ‘ಅಪಂಜನ್’ ಚಿತ್ರದ ರೀಮೇಕ್ ಇದು. ನಿರುದ್ಯೋಗಿ ಯುವಕರ ಶೋಷಣೆ, ಅಂತಹವರನ್ನು ರಾಜಕೀಯ ಪಕ್ಷಗಳು ಹೇಗೆ ದುರುಪಯೋಗ ಮಾಡಿಕೊಳ್ಳುತ್ತವೆ ಎನ್ನುವ ಕತೆಗೆ ಗುಲ್ಜಾರ್ ಅವರ ಸಾಹಿತ್ಯ ಹೊಸತೇ ಆದ ತಿರುವು ನೀಡಿತು. ವಿನೋದ್ ಖನ್ನಾ, ಶತ್ರುಘ್ನ ಸಿನ್ಹ, ಡ್ಯಾನಿ, ಅಸ್ರಾಣಿ ಮೊದಲಾದ ಹೊಸಮುಖಗಳ ಜೊತೆಗೆ ಮೀನಾಕುಮಾರಿ ಅವರಿಗೆ ಮರೆಯಲಾಗದ ಪಾತ್ರ ದೊರಕಿತ್ತು.ಗುಲ್ಜಾರ್ ಅವರ ನಿರ್ದೇಶನದ ಎರಡನೇ ಚಿತ್ರ ‘ಪರಿಚಯ್’ ರಾಜ್‌ಕುಮಾರ್ ಮೈತ್ರ ಅವರು ಬರೆದ ಬಂಗಾಳಿ ಕಾದಂಬರಿ ಆಧಾರಿತ. 1973ರಲ್ಲಿ ಅವರು ನಿರ್ದೇಶಿಸಿದ ‘ಅಚಾನಕ್’ ಮಹಾರಾಷ್ಟ್ರದ ನಾನಾವತಿ ಕೊಲೆ ಘಟನೆಯ ಸುತ್ತ ಹೆಣೆದ ಕತೆ. 1975ರಲ್ಲಿ ಬಿಡುಗಡೆಯಾಗಿ, ತುರ್ತುಪರಿಸ್ಥಿತಿ ಸಮಯದಲ್ಲಿ ವಿವಾದಕ್ಕೆ ಒಳಗಾಗಿ, ಸೆನ್ಸಾರ್ ಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡು ನರಳಿದ ‘ಆಂಧಿ’ ಕೂಡ ಕಮಲೇಶ್ವರ್ ಅವರ ಹಿಂದಿ ಕಾದಂಬರಿಯನ್ನು ಆಧರಿಸಿದ್ದು. ನಂತರ ಶರತ್‌ಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿ ಪಂಡಿತ್‌ಮಹಾಶಯ್ ಆಧರಿಸಿ ‘ಖುಷ್ಬೂ’ ನಿರ್ದೇಶಿಸಿದರು. ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿ, ಪ್ರಶಂಸೆಗೆ ಒಳಗಾದ ‘ಮೌಸಮ್’ ಕೂಡ ಆಂಗ್ಲ ಕಾದಂಬರಿ ಆಧರಿಸಿದ್ದಾಗಿದೆ. ‘ಅಂಗೂರ್’ (1982) ಕೂಡ ಷೇಕ್ಸ್‌ಪಿಯರ್‌ನ ಕಾಮಿಡಿ ಆಫ್ ಎರರ್ಸ್ ಆಧಾರ, ಈ ರೀತಿಯ ಸಾಹಿತ್ಯಕ ಮನೋಭಾವ ಅವರೊಳಗಿದ್ದುದರಿಂದಲೇ ಅವರು ಕಿರುತೆರೆಯತ್ತ ಬಂದಾಗಲೂ ಮಿರ್ಜಾಗಾಲಿಬ್, ತಹರೀರ್ ಮುನ್ಶಿ ಪ್ರೇಮ್‌ಚಂದ್ ಕಿ ಧಾರಾವಾಹಿಗಳನ್ನು ನಿರ್ಮಿಸಿದರು.‘ಕೋಶಿಷ್’ (1972) ಕೂಡ ಒಂದು ವಿಶಿಷ್ಟ ಪ್ರಯೋಗ. ಕಿವುಡ ಮುತ್ತು ಮೂಗ ದಂಪತಿಗಳ ಸಂಸಾರದಲ್ಲಿನ ನವಿರಾದ ಕತೆ. ಈ ಕತೆಯನ್ನು ಗುಲ್ಜಾರ್ ಅವರೇ ಬರೆದಿದ್ದಾರೆ. (ಇಂತಹದೇ ಪ್ರಯತ್ನವನ್ನು 1964ರಲ್ಲೇ ಕನ್ನಡ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ‘ನಾಂದಿ’ ಚಿತ್ರದ ಮೂಲಕ ಮಾಡಿದ್ದರು). ನಿರ್ದೇಶನಕ್ಕಿಳಿಯುವ ಮುನ್ನ ಸಂಘರ್ಷ್, ಆಶೀರ್ವಾದ್, ಖಾಮೋಷಿ, ಆನಂದ್ ಮೊದಲಾದ ಚಿತ್ರಗಳ ಪರಿಣಾಮಕಾರಿ ಸಾಹಿತ್ಯರಚನೆಯನ್ನು ಮರೆಯಲಾಗದು.ವಿಮರ್ಶಕರು ಮೆಚ್ಚುವ 24 ಚಲನಚಿತ್ರಗಳನ್ನು ಗುಲ್ಜಾರ್ ನಿರ್ಮಿಸಿರಬಹುದು. ನಗರದ ಜನ ಈ ಚಿತ್ರಗಳನ್ನು ಮೆಚ್ಚಿರಬಹುದು. ಪ್ರಶಸ್ತಿಗಳೂ ಬಂದಿರಬಹುದು. ಆದರೆ ಈ ಚಿತ್ರಗಳಾವುವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲಿಲ್ಲ. ಆದರೆ ಚಲನಚಿತ್ರ ಮಾಧ್ಯಮದ ಮೂಲ ಉದ್ದೇಶವನ್ನು ಗುಲ್ಜಾರ್ ಕೈ ಬಿಡಲಿಲ್ಲ ಎನ್ನುವುದು ಗಮನಾರ್ಹ. ಸಾಮಾಜಿಕ ಸಮಸ್ಯೆಗಳನ್ನು ಈ ಮೂಲಕ ಗುಲ್ಜಾರ್ ಚರ್ಚಿಸಿದರು. ಭ್ರಷ್ಟಾಚಾರವನ್ನು ಖಂಡಿಸಿದರು, ವೇಶ್ಯಾವೃತಿಯ ಮೂಲವನ್ನು ಹುಡುಕಿದರು. ಮಾನವೀಯ ಸಂಬಂಧಗಳಲ್ಲಿನ ಬಿರುಕು ಪತ್ತೆಹಚ್ಚಿದರು. ಸಿನಿಮಾ ಮಾಧ್ಯಮದ ಮೂಲಕ ಮಾನವೀಯ ಸಂಬಂಧಗಳ ಬೆಸುಗೆ ಹಾಗೂ ಜೀವನ ಮೌಲ್ಯವನ್ನು ಎತ್ತಿ ಹಿಡಿಯುವುದೇ ಗುಲ್ಜಾರ್ ಅವರ ಆಶಯವಾಗಿತ್ತು.ಸಾಹಿತ್ಯ ಮತ್ತು ಸಿನಿಮಾಗಳನ್ನು ಬೆಸೆದ ಪರಂಪರೆಯಲ್ಲಿ ಗುಲ್ಜಾರ್ ಹೆಸರು ಪ್ರಮುಖವಾಗುತ್ತದೆ. ಸಾಮಾನ್ಯವಾಗಿ ಸೃಜನಶೀಲ ಬರಹಗಾರರು ಸಿನಿಮಾ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಿಂಜರಿಯುತ್ತಾರೆ. ಸಿನಿಮಾ ಸಾಹಿತ್ಯವನ್ನು ಸಾಹಿತ್ಯ ಎಂದು ಅಪ್ಪಿತಪ್ಪಿಯೂ ಯಾರೂ ಗುರುತಿಸುವುದಿಲ್ಲ. ಆದರೂ ಸಿನಿಮಾ ಮತ್ತು ಸಾಹಿತ್ಯದ ನಡುವೆ ಸಿನಿಮಾ ಆರಂಭದ ದಿನಗಳಿಂದಲೂ ಒಂದು ಅಂತರ್ಗತ ಸಂಬಂಧ ಇರುವುದನ್ನು ಇತಿಹಾಸದ ಪುಟಗಳಲ್ಲಿ ಗುರುತಿಸಬಹುದು. ಅಂತಹ ಒಂದು ಉದಾಹರಣೆ ಗುಲ್ಜಾರ್. ಚಲನಚಿತ್ರಗಳಿಗೆ ಗುಲ್ಜಾರ್ ಬರೆದ ಸಾಹಿತ್ಯ ಒಂದು ಕಡೆಯಾದರೆ, ಅವರ ಕವನಸಂಕಲನಗಳು ಮತ್ತೊಂದು ಕಡೆ ಕಾಣಸಿಗುತ್ತವೆ. ಹೀಗಾಗಿ ಗುಲ್ಜಾರ್ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸಿನಿಮಾ ರಂಗದಲ್ಲಿನ ಕ್ರಿಯಾಶೀಲ ಕೊಡುಗೆಗಾಗಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೊಂದು ಅಪರೂಪದ ಸಂಗಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry