ಜುಗ್ಗ ಮಹೇಶ

7

ಜುಗ್ಗ ಮಹೇಶ

Published:
Updated:

ಗತ್ತು ನಿಂತಿರೋದೆ ದುಡ್ಡಿನ ಮೇಲೆ. ದುಡ್ಡಿದ್ರೆ ಮಾತ್ರ ಮಜವಾಗಿರಬಹುದು ಎನ್ನುತ್ತಿದ್ದ  ಗೆಳೆಯ ಮಹೇಶ. ಹೇಳಿಕೇಳಿ ಆತ ಅರ್ಥಶಾಸ್ತ್ರದ ಉಪನ್ಯಾಸಕ. ಹೀಗಾಗಿಯೋ ಏನೋ, ಅವನ ಪಾಠದ ಸಿದ್ಧಾಂತಗಳು ಬದುಕಿನಲ್ಲೂ ಬೆಸೆದು ಹೋಗಿದ್ದವು. ಅವನ ಜಿಪುಣತನ ನನಗೆ ಕುತೂಹಲ ಎನಿಸುತ್ತಿತ್ತು. ಒಂದು ರೂಪಾಯಿಯ ವಸ್ತು ಖರೀದಿಗೆ, ಆತ ಎರಡು ಗಂಟೆ ಸತತ ಚೌಕಾಶಿ ಮಾಡುತ್ತಿದ್ದ. ಹಟಕ್ಕೆ ಬಿದ್ದು ಕೊರೆದಾಟ ಮಾಡುವ ಸ್ವಭಾವ ಅವನಿಗೆ ರಕ್ತಗತವಾಗಿ ಹೋಗಿತ್ತು. ಅಂಗಡಿಯವರು ಇವನ ಜಗ್ಗಾಟದ ವ್ಯಾಪಾರಕ್ಕೆ ರೋಸಿ ಹೋಗುತ್ತಿದ್ದರು.ಎಷ್ಟೋ ಸಲ ಅವರೇ ಸಾಕಾಗಿ ‘ಸಾರ್ ಬೇಕಾದ್ರೆ ಮಾಲನ್ನು ಫ್ರೀಯಾಗಿ ತಗೊಂಡೋಗಿ, ಒಂದೆರಡು ರೂಪಾಯಿಗೆಲ್ಲಾ ತಲೆ ತಿಂತ ನಿಲ್ಬೇಡಿ’ ಎಂದು ಅಸಹಾಯಕರಾಗಿ ಗೋಳಿಡುತ್ತಿದ್ದರು. ಹಿಂದಿನಿಂದ ‘ಇವನೊಬ್ಬ ಲೆಕ್ಚರರ್ ಅಂತೆ. ಕರ್ಮದ ನನ್ಮಗ’ ಎಂದು ಆಡಿಕೊಳ್ಳುತ್ತಿದ್ದರು. ಅಂಗಡಿ ಇಟ್ಟವರ ಮಿದುಳನ್ನೇ ಸ್ವಲ್ಪಹೊತ್ತು ಕಿತ್ತಿಟ್ಟುಕೊಂಡು, ಅದನ್ನು ಬುಗುರಿಯಂತೆ ಆಟವಾಡಿಸುತ್ತಿದ್ದ. ಪೈಸೆಗಳು ಚಲಾವಣೆಯಲ್ಲಿ ನಿಂತು ಶತಮಾನಗಳು ಕಳೆದಿದ್ದರೂ, ಅವನ್ನೂ ಲೆಕ್ಕಹಾಕುತ್ತಿದ್ದ. ಪೈಸೆಗಳೇ ಕೋಟಿಯಾಗುವುದು ಎನ್ನುತ್ತಿದ್ದ.ಈತನ ಜೊತೆ ಶಾಪಿಂಗ್‌ಗೆ ಹೋಗೋಕೆ ಪ್ರಾಣಸಂಕಟವಾಗುತ್ತಿತ್ತು. ಗಂಟೆಗಟ್ಟಲೆ ನಡೆಯುವ ಇವನ ಕೊಸರು, ಕೊರೆದಾಟ, ಎಳೆದಾಟ ಎಲ್ಲವನ್ನು ನಾವೂ ಸಹಿಸಿಕೊಳ್ಳ ಬೇಕಿತ್ತು. ಹಾಳಾದವನು ನಮ್ಮ ಬಿಟ್ಟು ಯಾವ ಅಂಗಡಿಗೂ ಹೋಗುತ್ತಿರಲಿಲ್ಲ. ಕಾವಲಿಗೆ ನಾವು ಇರಲೇಬೇಕಿತ್ತು. ಈತನ ವ್ಯಾಪಾರ ಬೇಗ ಮುಗಿಸಲು ಮೂಗುತೂರಿಸಲು ಹೋಗಿ, ಬಹಳಷ್ಟು ಸಲ ಕೈಯಿಂದ ಕಾಸು ಕಳೆದುಕೊಂಡಿ ದ್ದೇವೆ. ಹಗ್ಗ ಜಗ್ಗಾಟದ ವ್ಯವಹಾರ ಇಡೀ ದಿನ ನಡೆದರೂ ಇವನು ಮಾತ್ರ ಸುಸ್ತಾಗುತ್ತಿರಲಿಲ್ಲ. ಉಳುಮೆ ಮಾಡುವ ಎತ್ತುಗಳು ಚಂಡಿ ಹಿಡಿದು ನೆಲ ಹಿಡಿಯುವಂತೆ, ಕೂತೇ  ಬಿಡುತ್ತಿದ್ದ.ಒಂದು ಸಲ ಅವನ ಜೊತೆ ಚಪ್ಪಲಿ ಅಂಗಡಿಗೆ ಹೋದೆವು. ಇವನು ಕಮ್ಮಿ ರೇಟಿನ ಚಪ್ಪಲಿಗಳನ್ನೇ ಒಂದು ಗಂಟೆ ನೋಡಿದ. ಅಂಗಡಿಯವನು ತನ್ನ ಬೆಲೆ ಹೇಳಿದ ಮೇಲೆ, ಇವನು ತನ್ನ ರೇಟನ್ನು ಘೋಷಿಸಿದ. ಅಂಗಡಿಯವನು ಮಹೇಶ ಹೇಳಿದ ಬೆಲೆ ಕೇಳಿ ಹೌಹಾರಿ ಹೋದ. ‘ನೀವು ಕೇಳಿದಷ್ಟು ಕಮ್ಮಿ ರೇಟಿಗೆ ಚಪ್ಲಿ ರೆಡಿ ಮಾಡಕ್ಕೆ ಚಪ್ಲಿ ಕಂಪ್ನಿಯವನಿಗೂ ಸಾಧ್ಯ ಆಗಿರಲ್ಲ ಸ್ವಾಮಿ. ನೀವು ಕೇಳುವ ರೇಟಿನ ಚಪ್ಲಿ ನನ್ನತ್ರ ಅಲ್ಲ, ಇಡೀ ಜಗತ್ತಿನಲ್ಲೇ ಇದ್ದಂಗಿಲ್ಲ. ಸುಮ್ನೆ ಯಾಪಾರದ ಟೈಮ್ನಲ್ಲಿ ನಮ್ಮ ಟೆನ್ಷನ್ ಜಾಸ್ತಿ ಮಾಡಬೇಡಿ’ ಎಂದು ವಿನೀತನಾಗಿ ಅಂಗಡಿಯವನು  ಮಹೇಶ ನಿಗೆ ಕೈ ಮುಗಿದ. ಎಂದೂ ಸುಲಭಕ್ಕೆ ಸುಮ್ಮನಾಗದ ಮಹೇಶ  ‘ಹೋಗ್ಲಿ ಸೆಕೆಂಡ್ ಹ್ಯಾಂಡ್ ಚಪ್ಲಿ ಇದ್ರೆ ಕೊಡ್ರಿ.ಅದನ್ನಾದ್ರೂ ತಗೋತೀನಿ’ ಎಂದು ಮತ್ತೊಂದು ವರಸೆ ಬಿಗಿದ. ಇವನ ಜಿಗುಟುತನ ನೋಡಿ ಒಮ್ಮೆಗೇ ಮುಖ ಕಿವುಚಿಕೊಂಡ ಅಂಗಡಿಯಾತ ‘ಹೊಸ ಚಪ್ಲಿ ತಗೊಂಡೋರು ಬ್ಯಾಡಾಂತ ಬಿಸಾಕಿ ಹೋಗಿರೋ ಹಳೇ ಮೆಟ್ಟು ಅಲ್ಲಿ ಬೇಜಾನ್ ಬಿದ್ದಿದ್ದಾವೆ. ಎಷ್ಟು ಬೇಕಾದ್ರೂ ಆರಿಸಿಕೊಂಡು ಹೋಗ್ರಿ. ನಾನೊಂದು ನಯಾ ಪೈಸೆನೂ ನಿಮಗೆ ಕೇಳಲ್ಲ. ಬೇಕಾದ್ರೆ ಫ್ರೀಯಾಗಿ ಕವರ್ ಕೊಡ್ತೀನಿ’ ಎಂದು ಸತ್ತ ಹೆಗ್ಗಣಗಳಂತೆ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಕೆರಗಳ ರಾಶಿ ತೋರಿಸಿದ. ಒಂದಿಷ್ಟೂ ಬೇಸರಪಡದ ಮಹೇಶ, ತಾಳ್ಮೆಯಿಂದ ಕೂತು ಮೂರು ಜೊತೆ ಚಪ್ಲಿ ಆರಿಸಿಕೊಂಡ. ಹೊಲಿಯೋನಿಗೆ ಯಾಕೆ ರೊಕ್ಕ ಕೊಡಬೇಕೆಂದು ತಾನೇ ಸೂಜಿದಾರ ತಂದು ಹೊಲಿದುಕೊಂಡ.ಮಹೇಶ ಅಂಗಡಿಗೆ ಹೊಸ ವಸ್ತುಗಳ ಖರೀದಿಗೆ ಅಂತ ಹೋದರೂ, ಸಿಕ್ಕಷ್ಟು ಸೆಕೆಂಡ್ ಹ್ಯಾಂಡ್ ವಸ್ತುಗಳನ್ನೇ ಆರಿಸಿ ತರುತ್ತಿದ್ದ. ಒಟ್ಟಾರೆ, ದುಡ್ಡು ಖರ್ಚಾಗುವುದು ಅವನಿಗೆ ಇಷ್ಟವಿರಲಿಲ್ಲ. ನಮ್ಮ ದುಡ್ಡು ನಾವು ಖರ್ಚು ಮಾಡಿದರೂ ಅವನ ದುಡ್ಡೇ ಖಾಲಿಯಾದಷ್ಟು ತೀವ್ರ ಸಂಕಟವನ್ನು ಅನುಭವಿಸುತ್ತಿದ್ದ. ಮೊದ ಮೊದಲು ಈ ಬಡ್ಡೀಮಗ ಬೇಕಂತಲೇ ಹೀಗೆ ಮಾಡ್ತಾನೆ ಅಂತ ತಪ್ಪಾಗಿ ತಿಳಿದಿದ್ದೆವು. ಆದರವನ ಹುಟ್ಟುಗುಣವೇ ಹಾಗಿದೆ ಎಂಬುದು ಸ್ಪಷ್ಟವಾದ ಮೇಲೆ ಇದು ಎಂದೆಂದೂ ರಿಪೇರಿಯಾಗದ ಕೇಸೆಂದು  ನಿರ್ಧರಿಸಿ ತೆಪ್ಪಗಾದೆವು.ಮಹೇಶ ತನ್ನಲ್ಲಿರುವ ಹಣವನ್ನು ಅತಿ ಜಾಗ್ರತೆಯಿಂದ ಇಟ್ಟುಕೊಳ್ಳುತ್ತಿದ್ದ. ಒಂದು ಪ್ಲಾಸ್ಟಿಕ್ ಕವರಿನಲ್ಲಿ ನೋಟುಗಳನ್ನು ಜೋಡಿಸಿಕೊಂಡು, ಆಮೇಲೆ ತನ್ನ ಅಂಡರ್‌ವೇರ್‌ನ ಜೇಬಿನಲ್ಲಿ ಸೇರಿಸಿಕೊಳ್ಳುತ್ತಿದ್ದ. ಅದರ ಮೇಲೊಂದು ಸೇಫ್ಟಿ ಪಿನ್ನನ್ನು ಚುಚ್ಚಿ ಲಾಕ್ ಮಾಡಿಕೊಳ್ಳುತ್ತಿದ್ದ. ಜಗತ್ತಿನ ಯಾವ ಕಳ್ಳನೂ ಕೈ ಹಾಕಬಾರದಂಥ ಭದ್ರ ಜಾಗದಲ್ಲಿ ಅದು ಸೇಫಾಗಿರುತ್ತಿತ್ತು. ಅಂಗಡಿಗಳಲ್ಲಿ ತನ್ನ ವ್ಯಾಪಾರ ಮುಗಿಸಿದ ಮೇಲೆ ಮಹೇಶ ಒಂದು ಸೈಡಿಗೆ ಹೋಗಿ ನಿಂತು ತನ್ನ ಪ್ಯಾಂಟು ಬಿಚ್ಚಿ ಅರೆನಗ್ನವಾಗುತ್ತಿದ್ದ. ಎಷ್ಟು ಬೇಕೋ ಅಷ್ಟು ರೊಕ್ಕವನ್ನು ಮಾತ್ರ ನಾಜೂಕಾಗಿ ಹಿಂಜುತ್ತಿದ್ದ. ಶರ್ಟಿನ, ಪ್ಯಾಂಟಿನ ಜೇಬುಗಳಲ್ಲಿ ಅವನು ಯಾವತ್ತೂ ಲಕ್ಷ್ಮಿಯನ್ನು ಮಡಗುತ್ತಿರಲಿಲ್ಲ. ಪ್ರತಿ ದಿನದ ಖರ್ಚಿನ ಪೈಸೆ ಪೈಸೆಯನ್ನೂ ಚಿಕ್ಕ ಡೈರಿಯಲ್ಲಿ ಬರೆದಿಡುತ್ತಿದ್ದ. ನಾವು ಚಿಂದಿ ಉಡಾಯಿಸಿದ ನಮ್ಮ ದುಡ್ಡಿನ ಲೆಕ್ಕಪತ್ರಗಳನ್ನೂ, ತಾನೇ ಬರೆದಿಟ್ಟು ನಾವು ಬೇಡವೆಂದರೂ ನಮಗೆ ತೋರಿಸುತ್ತಿದ್ದ.ಇವನು ವ್ಯಾಪಾರಕ್ಕೆ ಹೋದ ಕಡೆಯೆಲ್ಲಾ ಹೀಗೆ ಪ್ಯಾಂಟು ಬಿಚ್ಚುವುದು ನೋಡಿ ನೋಡಿ ನಮಗಂತೂ ಸಾಕಾಗಿ ಹೋಗಿತ್ತು. ಆತನ ಅರೆನಗ್ನ ತೊಡೆಗಳ ದರ್ಶನ, ನಮಗೆ ಕಾಯಮ್ಮಾಗಿತ್ತು.  ಅಂಗಡಿಯವರು, ಖರೀದಿಗೆ ಬಂದ ಬೇರೆ ಗಿರಾಕಿಗಳು, ಇವನ ಅವಸ್ಥೆಯನ್ನು ಕುತೂಹಲ ದಿಂದ ನೋಡಿ ಕಿಸಿಕಿಸಿ ಎಂದು ನಗುತ್ತಿದ್ದರು. ‘ನೀನು ಪದೇಪದೇ ಎಲ್ಲೆಂದರಲ್ಲಿ ಪ್ಯಾಂಟು ಬಿಚ್ಚಿ ನಮ್ಮ ಮರ್ಯಾದೆ ತೆಗೀಬ್ಯಾಡಪ್ಪ. ಕೆಲವು ಕಡೆ ಹೆಣ್ಣು ಮಕ್ಕಳು ಇರ್ತಾರೆ. ನಿನಗೆ ಅದ್ಯಾವುದರ ಖಬರೂ ಇರೋದಿಲ್ಲ. ಪುಸುಕ್ಕಂತ ಎಲ್ಲಂದರಲ್ಲಿ ಪ್ಯಾಂಟು ಕಳಚ್ತೀಯ.ಅದೆಷ್ಟು ಬೇಕು ಹೇಳು. ಈಗ ನಾವೇ ಕೊಟ್ಟಿರ್ತೀವಿ. ಆಮೇಲೆ ರೂಮಿಗೆ ಬಂದು ಸ್ವಲ್ಪ ಯಾಕೆ, ಪೂರ್ತಿ ಬಟ್ಟೆಯನ್ನೇ ಕಳಚಿಟ್ಟು ಆಮೇಲೆ ಕಾಸು ಕೊಡುವಿಯಂತೆ’ ಎಂದರೂ ಅವನು ಒಪ್ಪುತ್ತಿರಲಿಲ್ಲ. ಇವನ ಈ ವಸ್ತ್ರಾಪಹರಣದ ದೆಸೆಗೆ ಹೆದರಿ ನಾವು ಇವನ ಜೊತೆ ಹೋಟೆಲ್ಲಿಗೆ ಹೋಗುವುದನ್ನೂ ಬಿಟ್ಟೆವು. ಜನ ಇವನ ವರ್ತನೆ ನೋಡಿ ಘೋಳ್ ಎನ್ನು ವಾಗ, ಪಕ್ಕ ನಿಂತಿರುತ್ತಿದ್ದ ನಮ್ಮನ್ನೂ ಜಮಾಕ್ಕೆ ತೆಗೆದುಕೊಂಡೇ ನಗುತ್ತಿದ್ದರು. ಮಹೇಶ ಪ್ಯಾಂಟು ಬಿಚ್ಚಿದಾಗೆಲ್ಲಾ, ನಮ್ಮ ಪ್ಯಾಂಟುಗಳೇ ಅಲ್ಲಿ ಉದುರಿ ಬಿದ್ದಷ್ಟು ಅವಮಾನ, ಆತಂಕ ನಮಗಾಗುತ್ತಿತ್ತು. ಮಹೇಶ ಸದಾ ಕಮ್ಮಿ ರೇಟಿನ ಅಂಗಿ, ಚಡ್ಡಿ, ಪ್ಯಾಂಟುಗಳನ್ನೇ ಕೊಳ್ಳುತ್ತಿದ್ದ. ಸುಡುಗಾಡು ಈ  ಬಟ್ಟೆಗಳು ಮೊದಲ ಒಗೆತದಲ್ಲೇ ತಮ್ಮ ಬಣ್ಣ ಬಿಡುತ್ತಿದ್ದವು. ನಮ್ಮ ದುರಾದೃಷ್ಟಕ್ಕೆ  ರೂಮಿನಲ್ಲಿ ಒಂದೇ ಬಕೆಟ್ ಇತ್ತು. ಅದರಲ್ಲೇ ಸರ್ಫ್ ಹಾಕಿ, ಎಲ್ಲರ ಬಟ್ಟೆಗಳನ್ನು ನೆನೆಯಲು ಬಿಡುತ್ತಿದ್ದೆವು. ಒಮ್ಮೆ ಮಹೇಶ ಕೊಂಡು ತಂದ ಕೆಂಪು ಅಂಗಿಯೊಂದನ್ನು ನೆನೆಯಲು ಹಾಕಿದ್ದ. ಅದು ತನ್ನ ಕೆಂಬಣ್ಣವನ್ನೆಲ್ಲಾ ಬಿಟ್ಟುಕೊಟ್ಟು ನಮ್ಮ ಬಟ್ಟೆಗಳನ್ನು ರಂಗ್‌ರಂಗೀಲಾ ಮಾಡಿಬಿಟ್ಟಿತ್ತು.  ನಮ್ಮ ಬಿಳಿಯ ಬನೀನು, ಶರ್ಟುಗಳು ಇನ್ಯಾವತ್ತೂ ಹಾಕಲಾಗದಂತೆ, ಕೆಂಪು ಚಿತ್ರಕಲೆಗಳು ಅದರಲ್ಲಿ ಮೂಡಿ ಹೋಗಿದ್ದವು. ಚಂದ್ರಪ್ಪ ಕಾಲೇಜಿಗೆ ಹಾಕಲೆಂದು ಹೊಸದಾಗಿ ಹೊಲಿಸಿಟ್ಟಿದ್ದ ಬಿಳಿ ಬಣ್ಣದ ಜುಬ್ಬ ಕುಷ್ಟ ರೋಗಿಯ ಮುಖದಂತಾಗಿತ್ತು.ಮಹೇಶನ ಜಿಗುಟುತನದ ಕಮ್ಮಿ ರೇಟಿನ ಬಟ್ಟೆಗಳು ನಮ್ಮ ಮೇಲೆ ಹೀಗೆಲ್ಲಾ ಸೇಡು ತೀರಿಸಿಕೊಳ್ಳುತ್ತಿದ್ದವು. ಅವತ್ತೇ ಕೊನೆ. ‘ಇನ್ಮೇಲೆ, ನಿನ್ ಹಸಿಬಟ್ಟೆ ನಮ್ಮ ಹತ್ರ ತರಬ್ಯಾಡ. ನಿನಗೊಂದು ಹೊಸ ಬಕೆಟ್ ತಂದಿದ್ದೀವಿ. ನಿನ್ನ ಮುಂಡ ಏನಿದ್ರೂ ಇದರಲ್ಲಿ ಮೋಚ್ಕೊ. ನಮ್ ಸುದ್ದಿಗೆ ಬರಬ್ಯಾಡ’ ಎಂದೆವು. ‘ಒಳಗಿನ ಉಡುಪುಗಳಿಗೆ ಬಣ್ಣ ಮುಖ್ಯ ಅಲ್ಲ. ಅಲ್ಯಾರು ಬಗ್ಗಿ ನೋಡ್ತಾರೆ’ ಎಂದು ಮಹೇಶ ಗೊಣಗಿಕೊಂಡೇ ಹೊಸ ಬಕೆಟ್ ಇಸ್ಕೊಂಡಿದ್ದ.   ರಾತ್ರಿ ನಾವೆಲ್ಲಾ ಮಲಗಿದ ಮೇಲೆ ಆತ ಎದ್ದು ಕೂತು ತನ್ನ ದುಡ್ಡನ್ನೇ ಹತ್ತಾರು ಸಲ ಎಣಿಸಿಕೊಳ್ಳುತ್ತಿದ್ದ. ನೋಟಿನ ಗೆರೆಗಳು, ಅಂಕಿಗಳು ಎಲ್ಲಾದರೂ ಎಡವಟ್ಟಾಗಿದ್ದಾವಾ ಎನ್ನುವಂತೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ. ರಾತ್ರಿ ಮಲಗಿದ್ದಾಗಲೂ ದುಡ್ಡಿನ ಚೀಲ ಅವನ ದೇಹಕ್ಕೆ ಅಂಟಿಕೊಂಡಿರುತ್ತಿತ್ತು. ಎಚ್ಚರವಾದಾಗೆಲ್ಲಾ ಎದ್ದು ಮುಟ್ಟಿನೋಡಿಕೊಂಡು, ಗ್ಯಾರಂಟಿಯಾದ ಮೇಲೆ ಮತ್ತೆ ಬಿದ್ದು ಗೊರಕೆ ಚಚ್ಚುತ್ತಿದ್ದ. ಸ್ನಾನ ಮಾಡಲು ಹೋದರೂ ಆ ಗಂಟು ಅವನ ಹತ್ತಿರ ಇರಬೇಕಿತ್ತು. ಜಗತ್ತಿನಲ್ಲಿನ ಯಾರನ್ನೂ, ಯಾವುದನ್ನೂ ಆತ ನಂಬುತ್ತಿರಲಿಲ್ಲ.ಹೊಸದಾಗಿ ಉಪನ್ಯಾಸಕರಾದ ನಾನು, ಚಂದ್ರಪ್ಪ, ಮಹೇಶ, ಸೂರಿ, ಎಲ್ಲಾ ಒಂದೇ ರೂಮಿನಲ್ಲಿದ್ದೆವು. ಆಗಿನ್ನೂ ಯಾರ ಮದುವೆ ಗಳೂ ಆಗಿರಲಿಲ್ಲ. ಹೀಗಾಗಿ, ಜೀವನದಲ್ಲಿ ಸಿಗುವ ಸಂಗಾತಿಗಳ ಬಗ್ಗೆ, ಅವರ ಜೊತೆಗಿನ ಭವಿಷ್ಯದ ಜೀವನದ ಬಗ್ಗೆ, ಪುಂಖಾನುಪುಂಖವಾಗಿ ಚರ್ಚೆ ನಡೆಸುತ್ತಿದ್ದೆವು. ಆಗ ಮಹೇಶ ಬಾಯಿಹಾಕಿ ‘ನಾನ್ ಮಾತ್ರ ಕೆಲ್ಸದಲ್ಲಿರೋ ಹುಡುಗೀನೆ ಮದ್ವೆಯಾಗದಪ್ಪ. ಅವಳ್ ಸಂಬ್ಳನ್ನೆಲ್ಲಾ ತಂದು ನನ್ ಕೈಗೆ ಕೊಡ್ಬೇಕು. ಅದೇ ನನ್ ಮೊದಲ್ನೇ ಕಂಡೀಶನ್. ಇದಕ್ಕೆ ಒಪ್ಕೊಂಡ್ರೆ ಮಾತ್ರ ಮ್ಯಾರೇಜು. ಇಲ್ಲಾಂದ್ರೆ ಕ್ಯಾನ್ಸಲ್.ಕೆಲ್ಸದಲ್ಲಿರೋ ಹುಡ್ಗಿ ಸಿಗದಷ್ಟೇ ಅಲ್ಲ ಕಣ್ರೋ, ಒಬ್ಬಳೇ ಮಗಳಿರೋ, ದಿಮ್ಮುಗೆ ಆಸ್ತಿ ಮಾಡಿರೋ ಗಟ್ಟಿ ಕುಳ  ಸಿಕಬೇಕು. ನಾನಂತೂ, ಅಂಥ ಜಬರದಸ್ತ್ ಗಿರಾಕಿನೆ ಹುಡುಕ್ತಾ ಇದ್ದೀನಿ’ ಎನ್ನುತ್ತಿದ್ದ.ಮಹೇಶ ತನ್ನ ಜಿಪುಣತನದ ದೆಸೆಯಿಂದ ನಮ್ಮೆಲ್ಲರಿಗೂ ಹಾಸ್ಯದ ವಸ್ತುವಾಗಿದ್ದ. ಉದ್ದ ಗೀರಿನ ಬಾರ್ ಸೋಪನ್ನು ಬಟ್ಟೆ ಒಗೆಯಲೆಂದು ತರುತ್ತಿದ ಮಹೇಶ ಆ ಸೋಪಿನ ಕವರುಗಳನ್ನು ನೀಟಾಗಿ ಜೋಡಿಸಿಟ್ಟುಕೊಳ್ಳುತ್ತಿದ್ದ. ಆ ಸೋಪಿನ ರ್‍್ಯಾಪರುಗಳನ್ನು ಒಂದಕ್ಕೆ ಹತ್ತು ಪೈಸೆಯಂತೆ  ತಿರುಗಿ ಅಂಗಡಿಯವನಿಗೇ ಮಾರುತ್ತಿದ್ದ.  ನಮ್ಮ ಇಸ್ತ್ರಿ ಪೆಟ್ಟಿಗೆ ತಗೊಂಡು, ಬಟ್ಟೆ ಜೊತೆಗೆ ದುಡ್ಡನ್ನು ಇಸ್ತ್ರಿ ಮಾಡಿಟ್ಟುಕೊಳ್ಳುತ್ತಿದ್ದ. ನೋಟುಗಳು ಗರಿಗರಿಯಾಗಿರಬೇಕು ಎಂದು ಹಂಬಲಿಸುತ್ತಿದ್ದ. ಶೇವಿಂಗ್ ಬ್ಲೇಡಿನ ಮೇಲೆ ತನ್ನ ಗಡ್ಡ ಕೆರೆದುಕೊಂಡ ಡೇಟುಗಳನ್ನು ನಮೂದಿಸಿಡು ತ್ತಿದ್ದ. ಅವನ ಸೂಟ್ ಕೇಸಿನ ಬೀಗವನ್ನಂತೂ ನೂರು ಸಲ ಅದು ಬಿದ್ದಿದ್ದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳುತ್ತಿದ್ದ.‘ಇಷ್ಟೊಂದು ರೊಕ್ಕ ಬೇಕಾಬಿಟ್ಟಿ ಉಡಾಯಿಸಿ ಮಜಾ ಮಾಡ್ತೀರಲ್ಲ ನನ್‌ಮಕ್ಳಾ. ನೋಡ್ತಾ ಇರಿ. ಒಂದು ದಿನ ನೀವೆಲ್ಲಾ ಭಿಕ್ಷೆ ಬೇಡಬೇಕಾಯ್ತದೆ’ ಎಂದು ನಮ್ಮ ಭವಿಷ್ಯ ಹೇಳುತ್ತಿದ್ದ. ಮೂರು ಹೊತ್ತು ಚಿಕ್ಕಾಸುಗಳ ಬಗ್ಗೆಯೇ ಕೊರೆಯುವ ಅವನ ಮಾತು, ನಡವಳಿಕೆಗಳು ನಮಗೆ ಬೋರು ಹೊಡೆಸಿದರೂ ಸಹಿಸಿಕೊಂಡಿದ್ದೆವು.ಜಗತ್ತಿನ ಶ್ರೀಮಂತರ ಬಗ್ಗೆ ಮಹೇಶನಿಗೆ ಬಹಳ ಅಭಿಮಾನವಿತ್ತು. ಬ್ಯಾಂಕಿಗೆ ನುಗ್ಗಿ ಕಳ್ಳತನ ಮಾಡಿ ವಿಜಯಶಾಲಿಗಳಾಗುವ ಕಳ್ಳರ ಬಗ್ಗೆ ಒಲವಿತ್ತು. ಸಿಕ್ಕಾಕಿಕೊಂಡು ಪೊಲೀಸರಿಂದ ಒದೆ ತಿಂದು ಮೂಳೆ ಮುರಿಸಿಕೊಂಡ ಕಳ್ಳರ ಬಗೆಗೆ ಅನುಕಂಪ ವ್ಯಕ್ತಪಡಿಸುತ್ತಿದ್ದ. ‘ತನ್ನ ದಂಧೆ  ಅಂದಮೇಲೆ ಸರಿಯಾಗಿ ನಿಭಾಯಿಸಬೇಕಪ್ಪ. ಒಂದಿಷ್ಟು ಚಾಲಾಕಾಗಿರಬೇಕು.

ಕರೆಕ್ಟ್ ತಯಾರಿ ಮಾಡಿಕೊಳ್ಳದೆ, ಹಲ್ಕಾ ನನ್ಮಕ್ಕಳು ಹೆಂಗೆ ಸಿಕ್ಕಿಬಿದ್ದಿದ್ದಾರೆ ನೋಡು. ಅದೇ, ಎಸ್ಕೇಪ್ ಆಗಿದ್ರೆ ಎಷ್ಟು ಸುಖವಾಗಿರ್್ತಿದ್ರು ಅಲ್ವಾ. ದಿನಾ ನೋಟ್ ಎಣಿಸಿಕೊಂಡೇ ಕಾಲ ಹಾಕಬಹುದಾಗಿತ್ತು. ಛೇ, ಸ್ವಲ್ಪದರಲ್ಲಿ ಮಿಸ್ ಮಾಡ್ಕೊಂಡಿದ್ದಾರೆ ಈಡಿಯಟ್ಸ್’ ಎಂದು ಕಳ್ಳರ ನೆಂಟನಂತೆ ಪರಿತಪಿಸುತ್ತಿದ್ದ. ಹೆಂಗಾದ್ರೂ ಸರೀನೆ. ಒಟ್ನಲ್ಲಿ ದುಡ್ಡು ಮಾಡಬೇಕು ಎನ್ನುವುದು ಅವನು ಸದಾ ಒರಲುತ್ತಿದ್ದ ವೇದವಾಕ್ಯವಾಗಿತ್ತು.ಒಂದೆರಡು ವರ್ಷಗಳಲ್ಲಿ ನಮಗೆಲ್ಲಾ ವರ್ಗಾವಣೆಯಾಗಿ ನಾವೆಲ್ಲಾ ಚದುರಿ ಹೋದೆವು. ಮಹೇಶ ಅವನ ಸ್ವಂತ ಊರಿನ ಕಡೆ ಹೊರಟು ಹೋದ. ಕೆಲಸದಲ್ಲಿರುವ ಶ್ರೀಮಂತರ ಹುಡುಗಿ ಯನ್ನು ಮದುವೆಯಾದ. ಆಗಾಗ ನಾವು ಫೋನು ಮಾಡಿದಾಗ ತಾನು ಶ್ರೀಮಂತನಾಗುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ. ಷೇರು ಮಾರುಕಟ್ಟೆ ಯಲ್ಲಿ, ಚೀಟಿ ವ್ಯವಹಾರಗಳಲ್ಲಿ ತನ್ನ ರೊಕ್ಕವನ್ನು ತೊಡಗಿಸಿ ಅದೆಲ್ಲಾ ದ್ವಿಗುಣವಾಗುವ ಕನಸಿನ ಲೆಕ್ಕಾಚಾರ ಹೇಳುತ್ತಿದ್ದ. ಹೀಗೆ ಐದಾರು ವರ್ಷಗಳು ಕಳೆದು ಹೋದವು. ಮಹೇಶನ ಸಂಪರ್ಕ ಕಡಿದೇ ಹೋಗಿತ್ತು. ಒಂದು ದಿನ ಗೆಳೆಯ ಚಂದ್ರಪ್ಪ ಇದ್ದಕ್ಕಿದ್ದಂತೆ ಬೆಂಗಳೂರಿನಿಂದ ಗಾಬರಿಯಿಂದ ಫೋನು ಮಾಡಿದ. ‘ಮಹೇಶನಿಗೆ ಸಿರಿಯಸ್ಸಾಗಿದೆ. ಬೇಗ ಬಾ’ ಎಂದು ದುಃಖದ ಧ್ವನಿಯಲ್ಲಿ ಹೇಳಿದ. ಹೋಗಿ ನೋಡಿದಾಗ, ಮಹೇಶ ನಿಮ್ಹಾನ್ಸ್ ಆಸ್ಪತ್ರೆ ವಾರ್ಡಿನಲ್ಲಿದ್ದ. ಅವನ ಮುಖ ಕಳಚಿ ಹೋಗಿತ್ತು. ಬೆಕ್ಕಿನಂತೆ ಅಡ್ಡಾದಿಡ್ಡಿಯಾಗಿ ಕಣ್ಣು ಬಿಡುತ್ತಿದ್ದ. ನಡುನಡುವೆ ಪುಸಕ್ಕನೆ ನಗುತ್ತಿದ್ದ. ಎದುರಿಗೆ ಹೋಗಿ ನಿಂತ ನನ್ನ ಗುರುತನ್ನು ಅವನು ಹಿಡಿಯಲಿಲ್ಲ. ಆತನ ಹೆಂಡತಿ ಕಣ್ಣೀರು ಹಾಕುತ್ತಾ ನಿಂತಿದ್ದರು. ‘ಷೇರು ಪೇಟೆಯಲ್ಲಿ ಹಾಕಿದ್ದ ದುಡ್ಡು ಮುಳುಗಿ ಹೋಯಿತು. ಅವತ್ತಿಂದ ಹಿಂಗಾಗಿ ದ್ದಾರೆ’ ಎಂದು ದುಃಖದ ದನಿಯಲ್ಲಿ ಹೇಳಿದರು.ನಾನು ಮಹೇಶನನ್ನು ಮಾತಾಡಿಸಲು ಪಕ್ಕ ಹೋಗಿ ಕೂತೆ. ಅವನು ಹೆದರಿ ಹಿಂದಕ್ಕೆ ಸರಿದು ಕೂತ. ಅವನಿಗೆ ಆಟವಾಡಲೆಂದು ನ್ಯೂಸ್ ಪೇಪರ್, ಕೆಲವು ಮ್ಯಾಗ್‌ಝೀನ್‌ಗಳನ್ನು ಕೊಟ್ಟಿದ್ದರು. ‘ಯಾವ ಪೇಪರ್ ಕಂಡ್ರೂ, ಫಟಾರಂತ ಕಸ್ಕೊತಾರೆ. ಅವರಿಗೆ ಟ್ರೀಟ್‌ಮೆಂಟ್ ಮಾಡುವ ಫೈಲ್ ದಿಂಬಿನ ಹತ್ತಿರ ನೇತಾಕಿದ್ರು. ಅದನ್ನೂ ಬಿಟ್ಟಿಲ್ಲ. ಅದರಲ್ಲಿರೋ ರಿಪೋರ್ಟ್‌ ಗಳನ್ನೆಲ್ಲಾ ಹರಿದು ಚೂರು ಮಾಡಿದ್ದಾರೆ ನೋಡಿ’ ಎಂದು ಖಾಲಿ ಕ್ಲಿಪ್ ಬೋರ್ಡ್‌ ಅನ್ನು ಮಹೇಶನ ಹೆಂಡತಿ ತೋರಿಸಿದರು.ಕಣ್ಣೀರನ್ನು ತುಂಬಿಕೊಂಡು ಮಹೇಶನ ನೋಡಿದೆ. ಅವನು ಆಟವಾಡುವ ಮಗುವಾಗಿದ್ದ. ಎಲ್ಲಾ ಪೇಪರ್‌ಗಳನ್ನು ಹರಿದು ದುಡ್ಡಿನಂತೆ ಜೋಡಿಸಿ, ಜೋಪಾನ ಮಾಡಿಟ್ಟುಕೊಂಡಿದ್ದ. ಆ ತುಂಡು ಕಾಗದಗಳನ್ನೇ ಮತ್ತೆ ಮತ್ತೆ ಎಣಿಸುತ್ತಿದ್ದ. ತಕ್ಷಣವೇ ಎಚ್ಚರವಾದವನಂತೆ ಆ ಚೂರುಗಳನ್ನು ಎದೆಗವಚಿಕೊಂಡು ‘ನಾನು ಯಾರಿಗೂ ಕೊಡಲ್ಲಪ. ಇದು ನನ್ನ ದುಡ್ಡು’ ಎಂದು ಕೂಗಾಡುತ್ತಿದ್ದ.ಜಿಪುಣ ಈ ಜಗತ್ತಿನ ಶೇಷ್ಠ ದಾನಿ ಎಂದು ಬಲ್ಲವರು ಹೇಳುತ್ತಾರೆ. ಅದು ನಿಜವಿರಬಹುದು. ಮಹೇಶ ಜೀವಮಾನದಲ್ಲಿ ತಾನು ಗಳಿಸಿದ, ಜಿಗುಟುತನದಿಂದ ಜೋಪಾನ ಮಾಡಿದ ಎಲ್ಲವನ್ನೂ ಒಂದೇ ಸಲಕ್ಕೆ ಕಣ್ಣಿಗೆ ಕಾಣದ ಯಾರಿಗೋ ದಾನ ಮಾಡಿ ಕೂತಿದ್ದ. ರದ್ದಿ ಕಾಗದಗಳಲ್ಲಿ ಕಳೆದುಕೊಂಡ ಗರಿಗರಿ ನೋಟುಗಳ ಹುಡುಕುತ್ತಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry