ಸೋಮವಾರ, ಮೇ 23, 2022
29 °C

ಜೆಎಂಐಗೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಸ್ಥಾನಮಾನದ ಸುತ್ತ ವಿವಾದ

ಕುಲದೀಪ ನಯ್ಯರ್ Updated:

ಅಕ್ಷರ ಗಾತ್ರ : | |

ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ತಾವು ಪಾಲಿಸಿಕೊಂಡು ಬಂದ ಬಹುಸಂಸ್ಕೃತಿಯ ಧೋರಣೆ ಮತ್ತು  ಕಲಿಕಾ ಪದ್ಧತಿಯಿಂದ ಜನಮಾನಸದಲ್ಲಿ ಉನ್ನತ ಸ್ಥಾನಮಾನ ಪಡೆದಿರುತ್ತವೆ. ಈ ಸಂಸ್ಥೆಗಳು ದೀರ್ಘಕಾಲದಿಂದ ಅನುಸರಿಸುತ್ತ ಬಂದಿದ್ದ ನಿಯಮಾವಳಿಗಳಿಂದ ದೂರ ಸರಿಯುವ ಬಗ್ಗೆ ಜನರಲ್ಲಿ ಕೊಂಚ ಅನುಮಾನ ಮೂಡಿದರೂ ಅದರಿಂದ ಸಂಸ್ಥೆಯ ವರ್ಚಸ್ಸಿಗೆ ಖಂಡಿತವಾಗಿಯೂ ತೀವ್ರ ಧಕ್ಕೆ ಒದಗುತ್ತದೆ. 

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ  (ಜೆಎಂಐ) ಶೈಕ್ಷಣಿಕ ಸಂಸ್ಥೆಯನ್ನು ಈಗ ಅಲ್ಪಸಂಖ್ಯಾತ ಸಂಸ್ಥೆ ಎಂದು ಘೋಷಿಸಿದ್ದರಿಂದ ಇಲ್ಲಿಯವರೆಗೆ ಜತನದಿಂದ ಕಾಯ್ದುಕೊಂಡು ಬಂದಿದ್ದ ಪೂಜ್ಯಭಾವನೆಯ ಪ್ರಭಾವಳಿಗೆ ‘ಜೆಎಂಐ’ ಎರವಾಗುತ್ತಿದೆಯೇ ಎನ್ನುವ ಅನುಮಾನ ನನ್ನನ್ನು ಕಾಡಲು ಆರಂಭಿಸಿದೆ.

‘ಇಸ್ಲಾಮಿಕ್’ ಎನ್ನುವ ಒಂದೇ ಒಂದು ಶಬ್ದವು ಮುಸ್ಲಿಮರಿಗೆ ವಿಶೇಷ ಬಾಂಧವ್ಯ ಕಲ್ಪಿಸುತ್ತದೆ. ಇಸ್ಲಾಮಿಕ್ ಎನ್ನುವ ಶಬ್ದ ಅಂಟಿಕೊಂಡಿರುವುದರಿಂದಷ್ಟೆ  ಯಾವುದೇ ಒಂದು ಸಂಸ್ಥೆ ಅಲ್ಪಸಂಖ್ಯಾತ ಸಂಸ್ಥೆ ಎಂದು ಸಾಬೀತುಪಡಿಸಲೂ ಸಾಧ್ಯವಾಗುತ್ತಿದೆ.

‘ಜೆಎಂಐ’ನಲ್ಲಿ ಈಗಾಗಲೇ ಮುಸ್ಲಿಂ ವಿದ್ಯಾರ್ಥಿಗಳಿಗೆ ಮೀಸಲು ಸೌಲಭ್ಯ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳೂ (ಒಬಿಸಿ) ಇಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿವೆ. ಸಂಸ್ಥೆಯೊಂದರ ಅಲ್ಪಸಂಖ್ಯಾತ ಗುಣಲಕ್ಷಣಗಳಿಂದಾಗಿ ಇಂತಹ ಮೀಸಲಾತಿಯಲ್ಲಿ ಒಳ ಮೀಸಲಾತಿ ಒದಗಿಸುವ ಹೊಸ ಸಮಸ್ಯೆಗಳು ಸೃಷ್ಟಿಯಾಗಲಿವೆ. ಮುಸ್ಲಿಮರಲ್ಲಿಯೇ ಇರುವ ಇತರ ಹಿಂದುಳಿದ ವರ್ಗಗಳು ಕಡ್ಡಾಯವಾಗಿರುವ ಮೀಸಲಾತಿಗೆ ಎರವಾಗಲಿವೆ.

ಇಸ್ಲಾಮಿಯಾ ಹೆಸರು ತಳಕು ಹಾಕಿಕೊಂಡಿದ್ದರೂ ‘ಜಾಮಿಯಾ ಮಿಲಿಯಾ ಇಸ್ಲಾಮಿಯಾ’ ಸಂಸ್ಥೆಯನ್ನು ಜಾತ್ಯತೀತ ಸಂಸ್ಥೆಯೆಂದೇ ಪರಿಗಣಿಸುತ್ತ ಬರಲಾಗಿದೆ. ಈ ವಿಶಿಷ್ಟ ಸಂಸ್ಥೆಗೆ ಅಂಟಿಕೊಂಡ ಕೆಲವು ನಿರ್ದಿಷ್ಟ ಸಂಗತಿಗಳು, ‘ಜೆಎಂಐ’ ಅನ್ನು,  ಅಲೀಗಢ ಮುಸ್ಲಿಂ ವಿಶ್ವವಿದ್ಯಾನಿಲಯದಂತಹ (ಎಎಂಯು) ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳಿಂದ ಪ್ರತ್ಯೇಕಗೊಳಿಸುತ್ತದೆ.

ಆದರೆ, ಈಗ ಅದಕ್ಕೆ ಅಲ್ಪಸಂಖ್ಯಾತ ಸಂಸ್ಥೆಯ ಸ್ಥಾನಮಾನ ನೀಡುವುದರಿಂದ, 1920ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದ, ಆನಂತರ ಭಾರತದ ರಾಷ್ಟ್ರಪತಿಯೂ ಆಗಿ ಕಾರ್ಯನಿರ್ವಹಿಸಿದ್ದ ಡಾ. ಜಾಕೀರ್ ಹುಸೇನ್ ಅವರ ಮೂಲ ಆಶಯಕ್ಕೆ ಧಕ್ಕೆ ಒದಗಿಸಿದಂತಾಗುತ್ತದೆ ಎನ್ನುವುದು ನನ್ನ ಖಚಿತ ಅಭಿಪ್ರಾಯ.

ಒಂದು ವೇಳೆ ಜಾಕೀರ್ ಹುಸೇನ್ ಅವರು ಇದನ್ನು ಅಲ್ಪಸಂಖ್ಯಾತ ಸಂಸ್ಥೆಯಾಗಿಯೇ ಕಟ್ಟಿ ಬೆಳೆಸಬೇಕು ಎಂದು ಕನಸು ಕಂಡಿದ್ದರೆ, ಆರಂಭದಿಂದಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುತ್ತಿದ್ದರು. ಹಾಗೆ ಮಾಡಲು ಅವರಿಗೆ ಯಾವುದೇ ಶಕ್ತಿ ಅಡ್ಡಿ ಬರುತ್ತಿರಲಿಲ್ಲ. ಆದರೆ, ಉದ್ದೇಶಪೂರ್ವಕವಾಗಿಯೇ ಅವರು ಹಾಗೆ ಮಾಡಲಿಲ್ಲ. ಈ ಶಿಕ್ಷಣ ಸಂಸ್ಥೆಯನ್ನು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಲು ಅವರು ಇಷ್ಟಪಟ್ಟಿರಲಿಲ್ಲ. ಜಾತ್ಯತೀತ ಧೋರಣೆಯಲ್ಲಿ ದೃಢ ನಂಬಿಕೆ ಇಟ್ಟಿದ್ದ ಜಾಕೀರ್ ಸಾಹೇಬ್ ಅವರು, ಹಿಂದು - ಮುಸ್ಲಿಂ ಏಕತೆ ಬಗ್ಗೆಯೂ ಕಟಿಬದ್ಧರಾಗಿದ್ದರು.

ಮಹಾತ್ಮ ಗಾಂಧಿ ಅವರ ಕಟ್ಟಾ ಅನುಯಾಯಿಯಾಗಿದ್ದ ಜಾಕೀರ್ ಸಾಹೇಬ್, ಈ ಸಂಸ್ಥೆಯ ಭವಿಷ್ಯದ ಸ್ವರೂಪದ ಬಗ್ಗೆ ಅವರಲ್ಲಿ ಸುದೀರ್ಘವಾಗಿ ಚರ್ಚಿಸಿರುವ ಸಾಧ್ಯತೆಗಳಿವೆ. 1920ರಲ್ಲಿ ಖಿಲಾಫತ್ ಚಳವಳಿ ನಡೆದ ಸಂದರ್ಭದಲ್ಲಿ ಏಕತೆಯಲ್ಲಿ ಅನೇಕತೆಯ ಪರಿಕಲ್ಪನೆಗೆ ಸ್ಪಷ್ಟ ಸ್ವರೂಪ ನೀಡುವ ಉದ್ದೇಶದಿಂದಲೇ ಈ ಸಂಸ್ಥೆ ಸ್ಥಾಪಿಸಲಾಗಿತ್ತು. ಮೌಲಾನಾ ಶೌಕತ್ ಅಲಿ ಮತ್ತು ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಅವರು ಈ ಚಳವಳಿಯ ನೇತೃತ್ವ ವಹಿಸಿದ್ದರು. ಮಹಾತ್ಮ ಗಾಂಧಿ ಅವರು ಆರಂಭಿಸಿದ್ದ ‘ಅಸಹಕಾರ ಚಳವಳಿ’ಯಲ್ಲಿಯೂ ಇವರು ಧುಮುಕಿದ್ದರು. ನಿಜಕ್ಕೂ ಅದೊಂದು ಹಿಂದು - ಮುಸ್ಲಿಂ ಏಕತೆಗೆ ಅಪರೂಪದ ನಿದರ್ಶನವಾಗಿತ್ತು.

ಈ ಬೆಳವಣಿಗೆಗಳನ್ನು ಕಂಡು ಬ್ರಿಟಿಷರು ಚಿಂತಾಕ್ರಾಂತರಾಗಿದ್ದರೂ ಅಸಹಾಯಕರಾಗಿದ್ದರು. ಧರ್ಮನಿರಪೇಕ್ಷತೆ (ಸೆಕ್ಯೂಲರ್) ಪ್ರಚುರ ಪಡಿಸುವ ಸುಧಾರಣಾ ಪರ ನಾಯಕರಾಗಿದ್ದ ಜಾಕೀರ್ ಹುಸೇನ್ ಅವರು, ಗಾಂಧೀಜಿ ಅವರ ತತ್ವಾದರ್ಶಗಳನ್ನು ಪಾಲಿಸುವ ಕಟ್ಟಾ ಅನುಯಾಯಿಯಾಗಿದ್ದರು. ಇವರಿಬ್ಬರೂ ಸಮಾಜದಲ್ಲಿನ ಸಂಕುಚಿತ ಭಾವನೆ ಮೂಲೋತ್ಪಾಟನೆ ಮಾಡುವ ನಿಟ್ಟಿನಲ್ಲಿ ದೃಢಚಿತ್ತದಿಂದ ಕಾರ್ಯಪ್ರವೃತ್ತರಾಗಿದ್ದರು. ಈ ಉದ್ದೇಶ ಈಡೇರಿಕೆಗಾಗಿಯೇ ಜಾಕೀರ್ ಹುಸೇನ್ ಅವರು, ‘ಜೆಎಂಐ’ ಸ್ಥಾಪಿಸಲು ಮುಂದಾಗಿದ್ದರು. ಸಮಾಜಕ್ಕೆ ಇದೊಂದು ಅವರ ಸಣ್ಣ ಕೊಡುಗೆಯಾಗಿತ್ತು.

ಈ ಸೆಕ್ಯೂಲರ್ ಸಂಸ್ಥೆಗೆ ಅಲ್ಪಸಂಖ್ಯಾತ ಸಂಸ್ಥೆಯ ಸ್ಥಾನಮಾನ ನೀಡಬೇಕೆಂಬ ಹಕ್ಕೊತ್ತಾಯ ಮಂಡಿಸುವವರಲ್ಲಿ ಜಾಕೀರ್ ಹುಸೇನ್ ಅವರ ಮೊಮ್ಮಗನೂ ಆಗಿರುವ ಕೇಂದ್ರ ಅಲ್ಪಸಂಖ್ಯಾತರ ಸಚಿವ ಸಲ್ಮಾನ್ ಖುರ್ಷಿದ್ ಮುಂಚೂಣಿಯಲ್ಲಿದ್ದಾರೆ.

ಸದ್ಯಕ್ಕೆ ಈ ಸಂಸ್ಥೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಮೀಸಲಾತಿ ಸೌಲಭ್ಯ ಅನುಭವಿಸುತ್ತಿದ್ದಾರೆ. ಸಂಸ್ಥೆಗೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಸ್ಥಾನಮಾನ ಲಭಿಸುವುದರಿಂದ ಮುಸ್ಲಿಂ ವಿದ್ಯಾರ್ಥಿಗಳ ಮೀಸಲಾತಿ ವಿಷಯದಲ್ಲಿ ಕೆಲ ಮಟ್ಟಿಗೆ ಮಾತ್ರ ಸುಧಾರಣೆಯಾಗುವ ವಾಸ್ತವ ಸಂಗತಿಯು ಖುರ್ಷಿದ್ ಅವರಿಗೆ ಮನವರಿಕೆಯಾಗಿದೆಯೇ?

ಆದರೆ, ಈ ಸಂಸ್ಥೆ ರೂಢಿಸಿಕೊಂಡು ಬಂದಿರುವ ಸಮ್ಮಿಶ್ರ ಸಂಸ್ಕೃತಿಯ ಮೌಲ್ಯಗಳಲ್ಲಿ ಬದಲಾವಣೆ ತರುವ ಪ್ರಯತ್ನಗಳು, ‘ಜೆಎಂಐ’ನ ವರ್ಚಸ್ಸಿಗೆ ಹಲವಾರು ಪೆಟ್ಟುಗಳನ್ನು ನೀಡಲಿವೆ.

ಮುಸ್ಲಿಂ ಸಮುದಾಯವನ್ನು ಟೀಕಿಸಲು ಯಾವಾಗಲೂ ಅವಕಾಶಗಳಿಗಾಗಿ ಎದುರು ನೋಡುವ ಹಿಂದು ಸಂಕುಚಿತ ಮನೋಭಾವದವರಿಗೆ ಹೊಸ ವಿವಾದ  ಉಂಟುಮಾಡಲು ಇದು ಅವಕಾಶ ಒದಗಿಸಿಕೊಡಲಿದೆ. ಮುಸ್ಲಿಮರಲ್ಲಿನ ಕೆಲ ಸೆಕ್ಯೂಲರ್‌ವಾದಿಗಳೂ, ಸಂಸ್ಥೆಯ ಸಂಕುಚಿತ  ಸ್ವರೂಪವನ್ನು ಪ್ರಶ್ನಿಸಬಹುದು.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸಂಸ್ಥೆಗೆ ಅಲ್ಪಸಂಖ್ಯಾತ ಸಂಸ್ಥೆಯ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದ ವಿವಾದವು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಮತ್ತು ಸಲ್ಮಾನ್ ಖುರ್ಷಿದ್ ಮಧ್ಯೆ ವಿವಾದಕ್ಕೆ ಕಾರಣವಾಗಿರುವುದೂ  ನನ್ನ ಗಮನಕ್ಕೆ ಬಂದಿದೆ.

ಈ ಇಬ್ಬರ ಮಧ್ಯೆ ನಡೆಯುತ್ತಿರುವ ಸಂಘರ್ಷವು ಅನುಚಿತ ಸ್ವರೂಪ ಪಡೆದು ಅದಕ್ಕೆ ಧರ್ಮದ ಬಣ್ಣವೂ ಬಳಿದುಕೊಂಡಿದೆ.  ನಿಷ್ಠ ಕಾಂಗ್ರೆಸಿಗರಾಗಿರುವ ಇಬ್ಬರೂ ಸಚಿವರು ಈ ವಿವಾದ ತಮ್ಮ ಕೈಮೀರಿ ಹೋಗಲು ಅನುಮತಿ ನೀಡಲಾರರು.

ಆದರೂ, ಈ ವಿವಾದದಲ್ಲಿ ಸಲ್ಮಾನ್ ಖುರ್ಷಿದ್ ಅವರ ಕೈ ಮೇಲಾಗಿರುವಂತೆ ಕಂಡು ಬರುತ್ತದೆ. ಅಲ್ಪಸಂಖ್ಯಾತೇತರ ಸ್ಥಾನಮಾನವು, ಧಾರ್ಮಿಕ ಶಕ್ತಿಗಳು ಧರ್ಮದ ಹೆಸರಿನಲ್ಲಿ ಗುಲ್ಲೆಬ್ಬಿಸಬಹುದು ಎನ್ನುವ ಆತಂಕ ಕಾಂಗ್ರೆಸ್ ಪಕ್ಷದಲ್ಲಿ ಮನೆ ಮಾಡಿದೆ.

ಕುಟುಂಬದ ಸಮಸ್ಯೆಯನ್ನು ಬಹಿರಂಗಪಡಿಸದಿರುವುದು ಕಂಡು ನನಗೆ ಸಂತಸವಾಗುತ್ತಿದೆ. ಆದಾಗ್ಯೂ, ‘ಜೆಎಂಐ’ಗೆ ಅಲ್ಪಸಂಖ್ಯಾತ ಸಂಸ್ಥೆಯ ಸ್ಥಾನಮಾನ ಕಲ್ಪಿಸಲೇಬೇಕೆಂದು ಬಯಸುವವರು ತಮ್ಮ ಪ್ರಯತ್ನ ಮುಂದುವರೆಸಿದ್ದರು.

ಈಗ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸಂಸ್ಥೆಯನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೆಂದು ಘೋಷಿಸಲಾಗಿದೆ. ಜಾಕೀರ್ ಸಾಹೇಬ್ ಅವರು ಈ ಸಂಸ್ಥೆ ಬಗ್ಗೆ ಕಂಡಿದ್ದ ಅನಿಸಿಕೆಗಳನ್ನು ಉಳಿಸಿಕೊಳ್ಳಲು ಏನಾದರೂ ಮಾಡಬೇಕಾಗಿದೆ. ಅದೆಲ್ಲವೂ ಈ ಸಂಸ್ಥೆಯ ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಅವಲಂಬಿಸಿದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಸ್ಥಾನಮಾನದ ಹೊರತಾಗಿಯೂ, ಸಂಸ್ಥೆಯು ಪ್ರಜಾಪ್ರಭುತ್ವದ ಎರಡು ಮೂಲಭೂತ ತತ್ವಗಳಾದ ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸಬೇಕಾಗಿರುವುದನ್ನು ಇಲ್ಲಿಯ ವಿದ್ಯಾರ್ಥಿಗಳು ಮನಗಾಣಬೇಕಾಗಿದೆ.

‘ಜೆಎಂಐ’ಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದರಿಂದ ಈ ಸಂಸ್ಥೆಯಲ್ಲಿ ಧಾರ್ಮಿಕತೆಗೆ ಉತ್ತೇಜನ ನೀಡಲಿದೆ ಎನ್ನುವ ನನ್ನ ಆಲೋಚನೆ ತಪ್ಪಾಗಿರಲಿ ಎಂದೇ ನಾನು ಆಶಿಸುವೆ.ಇತರರಿಗಿಂತ ಮುಸ್ಲಿಂರಿಗೆ ಇಲ್ಲಿ ಹೆಚ್ಚು ಆದ್ಯತೆ ದೊರೆಯಲಿದೆ. ಮುಸ್ಲಿಮರಲ್ಲಿಯೇ ಅರ್ಹತೆ ಆಧಾರದ ಮೇಲೆಯೇ ಪ್ರವೇಶ ಇರಲಿದೆ. ಮುಸ್ಲಿಂ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗದಿದ್ದರೆ, ಸೀಟುಗಳನ್ನು ಖಾಲಿ ಬಿಡುವಂತಿಲ್ಲ. ಈ ಮೂಲಕ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಆದ್ಯತೆ ದೊರೆಯಲಿದೆ. ಇದು ಕೂಡ ಜಾತ್ಯತೀತ ಪರಿಕಲ್ಪನೆಯ ಎಲ್ಲೆಕಟ್ಟಿನ ವ್ಯಾಪ್ತಿ ಒಳಗೇ ಇರಲಿದೆ.

‘ಜೆಎಂಐ’ಗೆ ದೊರೆತಿರುವ ಹೊಸ ಸ್ಥಾನಮಾನದ ಫಲವಾಗಿ, ತಮ್ಮ ಪಾಲಿನ ಮೀಸಲಾತಿ ರದ್ದಾಗಲಿದೆ ಎನ್ನುವ ಆತಂಕ ಮುಸ್ಲಿಮರಲ್ಲಿಯೇ ಇರುವ ಇತರ ಹಿಂದುಳಿದ ವರ್ಗಗಳಲ್ಲಿ (ಒಬಿಸಿ) ಮನೆ ಮಾಡಿರುವುದೂ ನನ್ನ ಅನುಭವಕ್ಕೆ ಬಂದಿದೆ. ಇದು ನಿಜವೇ ಆಗಿದ್ದರೆ, ಆ ಬೆಳವಣಿಗೆಯು ಸಮಾನತೆ ಬೋಧಿಸುವ ಇಸ್ಲಾಂ ಧರ್ಮದ ಮೂಲ ಆಶಯಕ್ಕೇ ವಿರುದ್ಧವಾಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.