ಜೇಟ್ಲಿ, ಸಿನ್ಹಾ ಜಗಳ ಹೇಳುವ ಪಾಠ!

ಬುಧವಾರ, ಜೂನ್ 19, 2019
22 °C

ಜೇಟ್ಲಿ, ಸಿನ್ಹಾ ಜಗಳ ಹೇಳುವ ಪಾಠ!

Published:
Updated:
ಜೇಟ್ಲಿ, ಸಿನ್ಹಾ ಜಗಳ ಹೇಳುವ ಪಾಠ!

ಎನ್‌ಡಿಟಿವಿ ವಾಹಿನಿಯ ಸಂಸ್ಥಾಪಕ ಪ್ರಣಯ್ ರಾಯ್ ಜೊತೆ ನಾನು ಕೆಲವು ದಿನಗಳ ಹಿಂದೆ ತುಸು ಹೊತ್ತು ಕಳೆದೆ. ಅವರು ಅದ್ಭುತ ವ್ಯಕ್ತಿ, ವೃತ್ತಿಯ ಬಗೆಗಿನ ಬದ್ಧತೆಯ ಕಾರಣದಿಂದಾಗಿ ಅವರನ್ನು ಕಿರುಕುಳಕ್ಕೆ ಗುರಿಪಡಿಸಲಾಗಿದೆ. ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ವೇಳೆ ರಾಯ್ ಅವರು ಕಾಂಗ್ರೆಸ್ಸಿನ ಒಬ್ಬ ರಾಜಕಾರಣಿಯ ಬಗ್ಗೆ ಉಲ್ಲೇಖಿಸಿದರು. ಈ ವ್ಯಕ್ತಿ ಅಸಾಧ್ಯ ಎನಿಸುವಷ್ಟು ಗರ್ವಿ ಎಂಬುದನ್ನು ನಾವಿಬ್ಬರೂ ಒಪ್ಪಿದೆವು.

ಕಾಂಗ್ರೆಸ್ಸಿನ ಉನ್ನತ ನಾಯಕರು ಸಹಿಸಲು ಅಸಾಧ್ಯವಾದಷ್ಟು ಕಠೋರವಾಗಿ ವರ್ತಿಸುತ್ತಿದ್ದರು, ಅವರಲ್ಲಿ ಸೌಮ್ಯ ಸ್ವಭಾವ ಎಂಬುದು ಇರಲಿಲ್ಲ ಎನ್ನುವುದು ಹಿರಿಯ ಪತ್ರಕರ್ತರಿಗೆ (ಇಂದಿರಾ ಕಾಲದ ನೆನಪು ಇದ್ದವರಿಗೆ) ಗೊತ್ತಿರುತ್ತದೆ. ಆಗಿನ ಸಚಿವರು ‘ರಾಜಕಾರಣಿ’ಗಳಂತೆ ವರ್ತಿಸುವ ಬದಲು ‘ಆಡಳಿತಗಾರ’ರ ರೀತಿ ವರ್ತಿಸುತ್ತಿದ್ದರು. ಅವರ ವರ್ತನೆಯು ಕಳೆದ ಎರಡು ದಶಕಗಳ ಅವಧಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬದಲಾಗಿರಬಹುದು. ಆದರೆ, ಕಾಂಗ್ರೆಸ್ಸಿನ ಸುವರ್ಣ ಯುಗ ಮುಗಿದಿದ್ದರೂ, ಅಂತಹ ವರ್ತನೆ ಪೂರ್ತಿಯಾಗಿ ಕಣ್ಮರೆ ಆಗಿಲ್ಲ.

ದುರದೃಷ್ಟವಶಾತ್, ಆ ಬಗೆಯ ಗರ್ವವು ಇಂದು ಭಾರತೀಯ ಜನತಾ ಪಕ್ಷಕ್ಕೆ ಬಂದಿರುವುದನ್ನು ಕಾಣಬಹುದು. ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಹಾಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಈಚೆಗೆ ಮಾತಿನ ದಾಳಿ ನಡೆಸಿದ ಸಂದರ್ಭದಲ್ಲಿ ಇದು ಕಂಡುಬಂತು. ಮಾತಿನ ದಾಳಿಯ ಹೂರಣ ಏನೇ ಇದ್ದಿರಬಹುದು, ಇಲ್ಲಿ ಎರಡೂ ಕಡೆಯವರ ಮೇಲೆ ಬೊಟ್ಟು ಮಾಡಬೇಕಿದೆ.

ನಾಲ್ಕು ಸಚಿವಾಲಯಗಳ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು, ಹಣಕಾಸು ಸಚಿವನ ಕರ್ತವ್ಯ ನಿರ್ವಹಣೆಯಲ್ಲಿ ಜೇಟ್ಲಿ ಅವರು ವಿಫಲರಾಗಿದ್ದಾರೆ ಎಂದು ಸಿನ್ಹಾ ಅವರು ತಮ್ಮ ಬರಹದಲ್ಲಿ ವ್ಯಂಗ್ಯದ ಧಾಟಿಯಲ್ಲಿ ಹೇಳಿದಾಗ ಹಾಗೂ ಜೇಟ್ಲಿ ಅವರನ್ನು ‘ಸೂಪರ್‌ಮ್ಯಾನ್‌’ ಎಂದು ಕರೆದಾಗ ಈ ಜಗಳ ಆರಂಭವಾಯಿತು. ಅರ್ಥವ್ಯವಸ್ಥೆ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಸಿನ್ಹಾ ಅವರು ಪಟ್ಟಿಮಾಡಿದ್ದಾರೆ. ಅಲ್ಲದೆ, ಹಳೆಯ ಮಾದರಿಯ ಲೆಕ್ಕಾಚಾರ ಅನುಸರಿಸಿ ಹೇಳುವುದಾದರೆ, ತ್ರೈಮಾಸಿಕದಲ್ಲಿ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಬೆಳವಣಿಗೆ ದರವು ಶೇಕಡ 3.7ರಷ್ಟು ಮಾತ್ರ ಆಗಿರಬಹುದು ಎಂಬ ಆಶ್ಚರ್ಯಕರ ವಾದವನ್ನೂ ಅವರು ಮುಂದಿಟ್ಟಿದ್ದಾರೆ. ಜಿಡಿಪಿ ಲೆಕ್ಕಹಾಕಲು ಅನುಸರಿಸುತ್ತಿದ್ದ ಹಳೆಯ ಮಾದರಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೈಬಿಟ್ಟಿದೆ.

ಅವರು ತಮ್ಮ ಬರಹವನ್ನು ಈ ಮಾತುಗಳ ಮೂಲಕ ಕೊನೆಗೊಳಿಸಿದ್ದಾರೆ: ‘ಬಡತನವನ್ನು ಬಹಳ ಹತ್ತಿರದಿಂದ ಕಂಡಿರುವುದಾಗಿ ಪ್ರಧಾನಿಯವರು ಹೇಳುತ್ತಾರೆ. ಭಾರತದ ಎಲ್ಲರೂ ಬಡತವನ್ನು ಅಷ್ಟೇ ಹತ್ತಿರದಂತೆ ನೋಡುವಂತೆ ಮಾಡಲು ಹಣಕಾಸು ಸಚಿವರು ಬಹಳ ಶ್ರಮವಹಿಸುತ್ತಿದ್ದಾರೆ’.

ಸಿನ್ಹಾ ಹೇಳಿರುವುದರ ಬಗ್ಗೆ ನನಗೆ ತಕರಾರು ಇದೆ. ಆ ಬಗ್ಗೆ ನಂತರ ಮಾತನಾಡುವೆ. ಅದಕ್ಕೂ ಮೊದಲು, ಜೇಟ್ಲಿ ಅವರ ಪ್ರತಿಕ್ರಿಯೆಯನ್ನು ಗಮನಿಸೋಣ. ಸಿನ್ಹಾ ಅವರು 80 ವರ್ಷ ವಯಸ್ಸಿನಲ್ಲಿ ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಜೇಟ್ಲಿ ಹೇಳಿದರು. ಸಿನ್ಹಾ ಅವರು ಹಣಕಾಸು ಸಚಿವರಾಗಿದ್ದಾಗಿನ ಸಾಧನೆ ಉತ್ತಮವಾಗೇನೂ ಇಲ್ಲ, ಸಿನ್ಹಾ ಅವರು ತಾವು ಹಣಕಾಸು ಸಚಿವರಾಗಿದ್ದ 1998ರಿಂದ 2002ರ ನಡುವಣ ಅವಧಿಯಲ್ಲಿ ಆಗಿರುವ ತಪ್ಪುಗಳು ಎಂದುಕೊಂಡಿರುವುದನ್ನೇ ಲೇಖನದಲ್ಲಿ ಹೇಳಿದ್ದಾರೆ ಎಂದು ಜೇಟ್ಲಿ ಪ್ರತಿಕ್ರಿಯೆ ನೀಡಿದರು.

‘ನಾವು ಮಾತನಾಡಬೇಕಿರುವುದು ವಿಚಾರಗಳ ಬಗ್ಗೆಯೇ ವಿನಾ ವ್ಯಕ್ತಿಗಳ ಬಗ್ಗೆ ಅಲ್ಲ. ವ್ಯಕ್ತಿಗಳನ್ನು ದೂಷಿಸುವುದರಿಂದ ವಿಚಾರಗಳು ಬಹಳ ಸುಲಭವಾಗಿ ನೇಪಥ್ಯಕ್ಕೆ ಸರಿದುಬಿಡುತ್ತವೆ’ ಎಂದು ಎಲ್.ಕೆ. ಅಡ್ವಾಣಿ ಅವರು ಆಡಿದ್ದ ಮಾತುಗಳನ್ನು ಜೇಟ್ಲಿ ಅವರು ನೆನಪಿಸಿಕೊಂಡರು ಎಂಬುದಾಗಿ ವರದಿಯಾಯಿತು.

ಅವರು ಈ ರೀತಿ ಮಾತನಾಡುತ್ತಿರುವುದು ನನಗೆ ಆಶ್ಚರ್ಯ ತರಿಸುತ್ತಿದೆ. ಏಕೆಂದರೆ ಜೇಟ್ಲಿ ಅವರು ಅಡ್ವಾಣಿ ಅವರಿಂದ ಏನನ್ನೂ ಕಲಿತಿಲ್ಲ ಎಂಬುದು ಸ್ಪಷ್ಟ. ಸಿನ್ಹಾ ಅವರಿಗೆ ವಯಸ್ಸಾಗಿದೆ, ಅವರು ಉದ್ಯೋಗ ಅರಸುತ್ತಿದ್ದಾರೆ ಎನ್ನುವ ಮೂಲಕ ಜೇಟ್ಲಿ ಅವರು ಮಾಡಿದ್ದು ವ್ಯಕ್ತಿಯ ಮೇಲೆ ದಾಳಿ ನಡೆಸುವ ಕೆಲಸವನ್ನು. ವಿಚಾರಗಳ ಬಗ್ಗೆ ಮಾತನಾಡಬೇಕು ಎಂಬುದು ಜೇಟ್ಲಿ ಅವರ ಇಚ್ಛೆಯಾಗಿದ್ದಿದ್ದರೆ ಅವರು ಸಿನ್ಹಾ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಜೇಟ್ಲಿ ಅವರು ಹಣಕಾಸು ಸಚಿವರಾಗಿರುವ ಅವಧಿಯಲ್ಲಿ, ಜಿಡಿಪಿಯ ಬೆಳವಣಿಗೆ ದರವು ಆರು ತ್ರೈಮಾಸಿಕಗಳಿಂದ ಕುಸಿಯುತ್ತಿದೆ ಎಂಬುದು ಸತ್ಯವಲ್ಲವೇ? ಜಿಡಿಪಿ ಬೆಳವಣಿಗೆ ದರ ಕುಸಿದಿರುವುದು ಒಳ್ಳೆಯ ಕಾರಣಕ್ಕೆ ಎಂದಿದ್ದರೂ, ಅದನ್ನು ವಿವರಿಸಿ ಹೇಳುವುದು ಜೇಟ್ಲಿ ಅವರ ಹೊಣೆ. ಹಾಗೆಯೇ, ಹಳೆಯ ಮಾದರಿಯ ಲೆಕ್ಕಾಚಾರದ ಪ್ರಕಾರ ಜಿಡಿಪಿ ಬೆಳವಣಿಗೆ ದರವು ಶೇಕಡ 3.7ರಷ್ಟು ಮಾತ್ರ ಎಂದು ಸಿನ್ಹಾ ಹೇಳಿರುವುದು ಸರಿ ಎಂದು ನಾನು ಭಾವಿಸಿಲ್ಲ. ಈ ವಿಚಾರವನ್ನು ಜೇಟ್ಲಿ ಅವರು ಪ್ರಶ್ನೆ ಮಾಡಬೇಕಿತ್ತು. ಏಕೆಂದರೆ, ಹಳೆಯ ಲೆಕ್ಕಾಚಾರದ ಪ್ರಕಾರ ನಮ್ಮ ಜಿಡಿಪಿ ಬೆಳವಣಿಗೆ ದರ ಶೇಕಡ 5ರಷ್ಟು ಇದೆಯೇ ವಿನಾ 3.7ರಷ್ಟು ಅಲ್ಲ ಎಂದು ಬ್ಯಾಂಕ್‌ ಆಫ್‌ ಅಮೆರಿಕದಂತಹ ಸಂಸ್ಥೆಗಳು ಹೇಳುತ್ತಿವೆ.

ಆದರೆ ಇಂತಹ ಸಂಗತಿಗಳನ್ನು ಹೇಳುವ ಬದಲು ಹಣಕಾಸು ಸಚಿವರು ಆಯ್ಕೆ ಮಾಡಿಕೊಂಡ ಮಾರ್ಗ ಅನುಚಿತವಾಗಿತ್ತು. ಸಿನ್ಹಾ ಅವರು ಇರುವ ಸಮಸ್ಯೆಯನ್ನು ಈ ರೀತಿಯಾಗಿ ಚಿತ್ರಿಸಿದ್ದು ಕೂಡ ಉತ್ತಮ ಅಭಿರುಚಿಯಿಂದ ಕೂಡಿರಲಿಲ್ಲ. ನೀತಿ ನಿರೂಪಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದು ಮೋದಿ ಅವರು. ಆದರೆ, ಸಿನ್ಹಾ ಅವರು ಜೇಟ್ಲಿ ವಿರುದ್ಧ ನಡೆಸಿದ ದಾಳಿಯು ಪ್ರಧಾನಿಯರನ್ನು ಸಂಪೂರ್ಣವಾಗಿ ಹೊರಗಿಟ್ಟಿರುವಂತೆ ಕಾಣುತ್ತಿದೆ. ನೋಟು ರದ್ದತಿಯ ತೀರ್ಮಾನವು ಜೇಟ್ಲಿ ಅವರ ಹಂತದಲ್ಲಿ ಆಗಿದ್ದಲ್ಲ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ. ಅಲ್ಲದೆ, ನೋಟು ರದ್ದತಿ ತೀರ್ಮಾನದ ಬಗ್ಗೆ ಅಂತಿಮ ಹಂತದವರೆಗೂ ಜೇಟ್ಲಿ ಅವರಿಗೆ ಮಾಹಿತಿ ಇರಲಿಲ್ಲ. ಈ ವಿಚಾರಗಳು ಸಿನ್ಹಾ ಅವರಿಗೂ ತಿಳಿದಿವೆ ಎಂಬುದು ಖಚಿತ. ಪ್ರಧಾನಿಯವರ ಪಾತ್ರವನ್ನು ಉಲ್ಲೇಖಿಸದೆಯೇ, ಹಣಕಾಸು ಸಚಿವರ ಸಾಧನೆಯ ಬಗ್ಗೆ ಮಾತ್ರ ಟೀಕೆ ಮಾಡುವ ಬರಹವನ್ನು ಉದ್ದೇಶಪೂರ್ವಕವಾಗಿ ಬರೆಯಲಾಗಿದೆ. ಮೋದಿ ಅವರ ವಿಚಾರದಲ್ಲಿ ಸಿನ್ಹಾ ಅವರು ದಾಸ್ಯ ಮನೋಭಾವದಿಂದ ವರ್ತಿಸುತ್ತಿದ್ದಾರೆ ಎಂದು ಜೇಟ್ಲಿ ಅವರು ವ್ಯಾಖ್ಯಾನಿಸಿದ್ದರ ಹಿಂದಿನ ಕಾರಣ ಅರ್ಥ ಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ. ಏಕೆಂದರೆ, ಇವೆಲ್ಲವೂ ಹಾಗೆಯೇ ಕಾಣುತ್ತವೆ.

ನಾನು ಹೇಳುತ್ತಿರುವ ಪ್ರಮುಖ ವಿಚಾರ ಇದು. ತಮ್ಮ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ ಅಥವಾ ಪಕ್ಷಕ್ಕೆ ವಿವರಣೆ ಕೊಡಬೇಕಾಗಿಲ್ಲ ಎನ್ನುವ ಧೋರಣೆ ಹೊಂದಿದ್ದ ಸಚಿವರನ್ನು ನಾವು ಕಂಡಿದ್ದೇವೆ. ಇಂಥ ಸ್ಥಿತಿಯಿಂದ ನಾವು ದೂರ ಸಾಗಬೇಕು. ವಿಶ್ವದ ಯಾವುದೇ ದೇಶದ ಜನರಂತೆ ಭಾರತೀಯರು ಕೂಡ ಅಂಕಿ-ಅಂಶಗಳನ್ನು ಕಂಡು ಅರ್ಥ ಮಾಡಿಕೊಳ್ಳಬಲ್ಲರು. ಕೆಲವು ವಿಷಯಗಳು ಸಂಕೀರ್ಣವಾಗಿದ್ದರೂ, ಅವುಗಳನ್ನು ನಾವೂ ಅರ್ಥ ಮಾಡಿಕೊಳ್ಳಬಲ್ಲೆವು. ‘ವ್ಯಕ್ತಿಯೊಬ್ಬನಿಗೆ 80 ವರ್ಷ ವಯಸ್ಸಾಗಿದೆ. ಹಾಗಾಗಿ ಅವರ ಟೀಕೆಗಳನ್ನು ನಿರ್ಲಕ್ಷಿಸಬೇಕು’ ಎಂದು ಹೇಳುವುದು ನಮಗೆ ಅವಮಾನ ಮಾಡಿದಂತೆ. ಸಾರ್ವಜನಿಕವಾಗಿರುವ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ವಾಸ್ತವ ಸಂಗತಿಗಳನ್ನು ಮಾತ್ರ ಉಲ್ಲೇಖಿಸಿ ಮಾತನಾಡಬೇಕು.

ಜೇಟ್ಲಿ ಹಾಗೂ ಸಿನ್ಹಾ ಅವರು ತೋರಿಸಿಕೊಂಡಿರುವಂತಹ ವೈಯಕ್ತಿಕ ಸಿಟ್ಟು ಹಾಗೂ ಗರ್ವವನ್ನು ಸಾರ್ವಜನಿಕವಾಗಿ ತೋರಿಸುವ ಅಗತ್ಯ ಇಲ್ಲ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry