ಟೆಂಟ್ ಟಾಕೀಸ್

7

ಟೆಂಟ್ ಟಾಕೀಸ್

Published:
Updated:

ಎಂ.ಎ ಓದುತ್ತಿದ್ದ ನಮಗೆ ಪುಸ್ತಕಗಳ ಓದೇ ಮುಖ್ಯ ಮನರಂಜನೆಯಾಗಿತ್ತು. ಹಳೆಯ ರೇಡಿಯೊ ಬಿಟ್ಟರೆ ಮತ್ತಿನ್ಯಾವ ಸಲಕರಣೆಗಳೂ ನಮ್ಮ ಬಳಿ ಇರಲಿಲ್ಲ. ಈ ಕಾರಣಕ್ಕೋ ಏನೋ ಅಂದಿನ ಓದು ನಮ್ಮಗಳ ಖಾಲಿ ತಲೆಗೆ ಮೆತ್ತಿಕೊಂಡಿತು. ಆಗಾಗ ಗೆಳೆಯರು ಸೇರಿ ಹೊಡೆಯುವ ಒಣಹರಟೆ, ತಿಂಡಿ ಅಡುಗೆ ಮಾಡಿ ತಿನ್ನುವ ಸಂಭ್ರಮ, ಭದ್ರಾ ಚಾನೆಲ್‌ನ ಸ್ನಾನ, ಇವೇ ಅಷ್ಟಿಷ್ಟು ರಿಲ್ಯಾಕ್ಸಿಂಗ್ ಸಂಗತಿಗಳು.ಅಷ್ಟರಲ್ಲಿ ನಮ್ಮ ಪುಣ್ಯಕ್ಕೆ ಎಂಬಂತೆ ನಮ್ಮ ವಿಶ್ವವಿದ್ಯಾಲಯಕ್ಕೆ ಹತ್ತಿರದ ಒಂದು ಸಣ್ಣ ಊರಿನಲ್ಲಿ ಟೆಂಟ್ ಟಾಕೀಸ್‌ ಒಂದು ತಲೆ ಎತ್ತಿತ್ತು. ಅದನ್ನ ಇತ್ತ ಪೂರಾ ಟಾಕೀಸ್ (ಥಿಯೇಟರ್‌ಗೆ ನಮ್ಮ ಕಡೆ ಕರೆಯುವುದು ಟಾಕೀಸ್ ಎಂದೇ) ಅನ್ನುವಂತೆಯೂ ಇರಲಿಲ್ಲ. ಅತ್ತ ಟೆಂಟೂ ಅನ್ನುವಂತಿರಲಿಲ್ಲ. ಟಾಕೀಸ್ ಮತ್ತು ಟೆಂಟುಗಳೆರಡೂ ಮಿಲಾಖಾತ್ ಆಗಿ ಟೆಂಟಾಕೀಸ್ ಆಗಿತ್ತು. ಹಲವು ದಿನಗಳಿಂದ ಲಾಸ್ ಆಗಿ ನಾಯಿ, ಕತ್ತೆಗಳ ತವರು ಮನೆಯಾಗಿದ್ದ  ಅದನ್ನು ಅಸೀಮ ಧೈರ್ಯವಂತನೊಬ್ಬ ಬಾಡಿಗೆ ಪಡೆದಿದ್ದ. ಸಂಜೆಯಾದರೆ ‘ನಮೋ ವೆಂಕಟೇಶ. ನಮೋ, ನಮೋ, ತಿರುಮಲೇಶ’ ಎಂಬ ಘಂಟಸಾಲ ಹಾಡಿದ ಸಾಂಗ್ ಹಾಕುತ್ತಿದ್ದ. ಈ ಹಾಡು ಸಿನಿಮಾ ಪ್ರೇಮಿಗಳಿಗೆ ಒಂಥರ ಕಾಲಿಂಗ್ ಬೆಲ್ ಇದ್ದ ಹಾಗೆ. ‘ಸಿನಿಮಾ ಈಗ ಶುರುವಾಗುತ್ತಿದೆ ಬೇಗ, ಬೇಗ ಬರ್ರಲೇ’ ಎಂಬ ಸೂಚನೆ ಅದು.ಅಲ್ಲಿ ಹಳೆಯ ಭಕ್ತಿ ಪ್ರಧಾನ ಕನ್ನಡ, ತಮಿಳು, ತೆಲುಗು ಸಿನಿಮಾಗಳು ಬರುತ್ತಿದ್ದವು. ಜನ ಅನೇಕ ಸಲ ಅವುಗಳನ್ನು ನೋಡಿ ಬೇಸತ್ತಿದ್ದರೂ, ಮನರಂಜನೆಯ ಅನ್ಯ ಮಾರ್ಗವಿಲ್ಲದ ಕಾರಣ ಮತ್ತೆ ಮತ್ತೆ ಅವನ್ನೇ ಹೋಗಿ ನೋಡುತ್ತಿದ್ದರು. ಹೆಚ್ಚು ಖರ್ಚಿಲ್ಲದ, ಡಬ್ಬಿ ಸೇರಿ ಲಡಾಸ್ ಆಗಿರುವ ಪ್ರಾಚೀನ ಸಿನಿಮಾಗಳನ್ನೇ ಆತ ಹೆಕ್ಕಿ ತಂದು ಹಾಕುತ್ತಿದ್ದ. ಹೀಗಾಗಿ, ಹೊಸ ಸಿನಿಮಾಗಳನ್ನು ನೋಡಬೇಕೆಂಬ ಖಯಾಲಿಯಲ್ಲಿರುತ್ತಿದ್ದ ನಮ್ಮ ಎಂ.ಎ. ಹುಡುಗರ್‍್ಯಾರು ಆ ಕಡೆ ತಲೆ ಹಾಕುತ್ತಿರಲಿಲ್ಲ. ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಬೇಸರ ಕಳೆಯಲು ವಾರದ ಸಂತೆ ಬಿಟ್ಟರೆ, ಇದ್ದಿದ್ದು ಈ ಟೆಂಟ್ ಟಾಕೀಸ್ ಒಂದೇನೆ.ಒಂದು ದಿನ ನಾವೆಲ್ಲಾ ಗೆಳೆಯರು ಗುಂಪಾಗಿ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದೆವು. ಆಗೊಬ್ಬ ಅಪರಿಚಿತ ವ್ಯಕ್ತಿ ತನ್ನ ಸೈಕಲ್ ನಿಲ್ಲಿಸಿ ನಮ್ಮೆದುರು ಅಡ್ಡ ಬಂದು ನಿಂತ. ಅವನು ಬಂದ ಸ್ಟೈಲು ನೋಡಿದರೆ ಹಳೆ ಬಾಕಿ ವಸೂಲಿಗೆ ನಮ್ಮೂರಿನ ಬಡ್ಡಿ ತಮ್ಮಣ್ಣ ಬಂದಂತ್ತಿತ್ತು. ಮೇಲಾಗಿ ನಮಗ್ಯಾರಿಗೂ ಆತ ಪರಿಚಿತನಲ್ಲ. ನಮ್ಮ ಕೆಲ ಸೀನಿಯರ್‌ಗಳನ್ನು ಆತ ಚೆನ್ನಾಗಿ ಬಲ್ಲವನಂತೆ ಕಾಣುತ್ತಿದ್ದ. ‘ಇವತ್ತು ರಾತ್ರಿ ಎಲ್ಲಾ ಬಂದು ಬಿಡಿ. ನಿಮಗಾಗಿ ಕಷ್ಟಪಟ್ಟು ನೀಲಿ ಚಿತ್ರ ತಂದಿದ್ದೇನೆ’ ಎಂದು ಪಿಸು ಮಾತಿನಲ್ಲಿ ಹೇಳಿದ. ನಮ್ಮ ಕಡೆ ಕೈ ತೋರಿಸಿ ‘ಈ ಹೊಸ ಹುಡುಗ್ರನ್ನೂ ಕರ್ಕೊಂಡ್ ಬನ್ರಿ’ ಎಂದು ನಗುತ್ತಾ ಹೇಳಿದ. ನೀಲಿ ಚಿತ್ರ ಎಂದರೇನು? ಎಂದು ಗೊತ್ತಿಲ್ಲದ ಮುಗ್ಧ ರಂಗಪ್ಪ ‘ಹಂಗಂದ್ರೆ ಏನ್ರಲೇ’ ಎಂದು ಬೆಚ್ಚಿಬಿದ್ದವನಂತೆ ಬಾಯಿ ಕಳೆದು ನಿಂತ. ಈ ಮಾತಿಗೆ ಕಿಸಕ್ಕೆಂದ ಉಳಿದ ಗೆಳೆಯರು ‘ಇವತ್ತು ಬಾ ರಾಜ. ಎಲ್ಲಾ ತೋರಿಸ್ತೀವಿ’ ಎಂದು ರಂಗಪ್ಪನನ್ನು ಕಿಚಾಯಿಸುವಂತೆ ನಗತೊಡಗಿದರು. ‘ಯಾವಾಗ ನೋಡಿದ್ರೂ ಬುಕ್ಕು, ಲೈಬ್ರರಿ, ನೋಟ್ಸು, ಎಕ್ಸಾಮು, ಅಸೈನ್‌ಮೆಂಟ್ ಅಂತ ಸಾಯೋ ನಿನ್ನ ಥರದ ದ್ರಾಬೆಗಳಿಗೆ ಅದೆಲ್ಲಾ ಎಲ್ಲಿ ಗೊತ್ತಾಗುತ್ತೆ? ಇವತ್ತು ರಾತ್ರಿ ನಮ್‌ ಜೊತೆ ಬಾ ಮೂದೇವಿ, ಅದೇನೂ ಅಂತ ನೋಡುವಿಯಂತೆ’ ಎಂದು ಬಸವರಾಜ ರಂಗಪ್ಪನ ಕೆನ್ನೆ ಚಿವುಟಿ ನಕ್ಕ.‘ನೀನು ಕೆನ್ನೆಗೆ ಯಾಕಲೆ ಕೈ ಹಾಕ್ತಿಯಾ. ನನಗಿಷ್ಟ ಆಗಲ್ಲ ನೋಡು’ ಎಂದು ರಂಗಪ್ಪ ಚಡಪಡಿಸಿದ. ‘ಏನು ವಿಸ್ವ ಸುಂದರಿ ಈ ನನ್ಮಗ. ಲೇ.. ಮುಸಿಯಾ, ನಿನ್ನ ಕೆನ್ನೆ ಮುಟ್ಟಿದ್ರೆ ಆಮೇಲೆ ಕೈತೊಳಕಬೇಕು. ಅಂಥ ಟಾರ್ ನನ್ಮಗ ನೀನು. ಅದೇನ್ ನಾಟ್ಕ ಮಾಡ್ತಿಯಲ್ಲೇ’ ಮತ್ತೆ ಛೇಡಿಸಿದ. ‘ಈ ಬಸವರಾಜ ಯಾವಾಗಲೂ ಹೀಗೇನೆ. ಈ ಪಾಪಿ ರಂಗಪ್ಪನ ಗೋಳ್ಹಾಕಿಕೊಳ್ಳದಿದ್ರೆ ಅವನಿಗೆ ತಿಂದ ಕೂಳು ಮೈಗತ್ತಲ್ಲ. ಅದಿರಲಿ ಎಲ್ಲರೂ ಸಂಜೆಗೆ ಓದೋದು, ಬರೆಯೋದು ಬಿಸಾಕಿ ಟೆಂಟಿಗೆ ಹೋಗಾನ ಕಣ್ರಲೆ’ ಎಂದು ಗುಂಪಿನ ಸೀನಿಯರ್ ಜಗ್ಗ ಫರ್ಮಾನು ಹೊರಡಿಸಿದ. ದುಸರಾ ಮಾತಿಲ್ಲದೆ ಎಲ್ಲರೂ ಕತ್ತು ಕುಣಿಸಿದೆವು. ಸಂಜೆ ಹೊತ್ತಿಗೆ ಎಲ್ಲಾ ಲಗುಬಗೆಯಿಂದ ರೆಡಿಯಾದೆವು. ‘ಏನ್ ಮಾಡಿದರೂ ನಾನು ಬರಾಕಿಲ್ಲ’ ಅಂತ ರಂಗಪ್ಪ ಜ್ವರ ಬಂದವನಂತೆ ಹಟ ಹಿಡಿದು ಕುಳಿತು ಬಿಟ್ಟ. ಎಲ್ಲರೂ ಸೇರಿ ಅವನನ್ನು ಪುಸಲಾಯಿಸಿದೆವು. ಅವನನ್ನು ಬಿಟ್ಟು ನಾವೆಲ್ಲಿಗೂ ಹೋಗುತ್ತಿರಲಿಲ್ಲ. ಬಸವರಾಜ ಕೆನ್ನೆ ಮುಟ್ಟಿದ ತಪ್ಪಿಗೆ ನಾಟಕೀಯವಾಗಿ ಕ್ಷಮೆಯನ್ನೂ ಕೋರಿದ.ನಮ್ಮ ಬಲವಂತಕ್ಕೆ ಎದ್ದು ಸ್ನಾನ ಮಾಡಿ ಬಂದ ರಂಗಪ್ಪ ಕನ್ನಡಿ ಮುಂದೆ ನಿಂತು  ಫೇರ್ ಅಂಡ್ ಲವ್ಲಿ ಮತ್ತು ಪೌಡರ್ ತಿಕ್ಕಲು ನಿಂತುಕೊಂಡ. ಸ್ನಾನ ಮುಗಿಸಲು ಐದು ನಿಮಿಷ ಮಾತ್ರ ಬಳಸುತ್ತಿದ್ದ ರಂಗಪ್ಪ ಮುಖ ಬಳಿದುಕೊಳ್ಳಲು ಬರೋಬ್ಬರಿ ಒಂದು ಗಂಟೆ ತೆಗೆದುಕೊಳ್ಳುತ್ತಿದ್ದ. ಏನು ಮಾಡಿದರೂ ಬೇಗ ಹೊರಡುತ್ತಿರಲಿಲ್ಲ. ‘ಒಳ್ಳೇ ಮದುವೆ ಮನೆಗೆ ಹೋಗೋನಂಗೆ ರೆಡಿಯಾಗ್ತಿದ್ದಿಯಲ್ಲೋ ಮಳ್ಳ ರಂಗ. ನಿನ್ನ ನೋಡೋಕೆ ಅಲ್ಲಿ ಹೆಣ್ಣು ಹೆತ್ತವರು ಯಾರೂ ಬರಲ್ಲ’ ಎಂದು ಬಸವರಾಜ ಮತ್ತೆ ಕ್ಯಾತೆ ತೆಗೆದ. ‘ನೀವು ಹಿಂಗೆಲ್ಲಾ ಆಕ್ಲಾಸ ಮಾಡಿದ್ರೆ ನಾನು ಬರಾಕಿಲ್ಲ ನೋಡು’ ಎಂದು ರಂಗಪ್ಪ ಮತ್ತೆ ಮುನಿಸಿಕೊಂಡ. ಕೊನೆಗೆ ಬಸವರಾಜನ ಗದರಿಸಿ ಸುಮ್ಮನಿರಿಸಿ ರಂಗಪ್ಪನ ಎಳೆದುಕೊಂಡು ಹೊರಟೆವು.ಅವತ್ತು ದಿನವಿಡೀ ತರಗತಿಯಲ್ಲಿ ನಾವು ಸಂಜೆಯ ನೀಲಿ ಚಿತ್ರದ ವಿಷಯವನ್ನೇ ಗುಟ್ಟಾಗಿ ಮಾತಾಡಿಕೊಳ್ಳುತ್ತಿದ್ದೆವು. ಇದನ್ನೆಲ್ಲಾ ಅತಿಸೂಕ್ಷ್ಮವಾಗಿ ಗಮನಿಸುತ್ತಿದ್ದ ನಮ್ಮ ಕ್ಲಾಸ್‌ಮೇಟ್ ಹುಡುಗಿಯರು ‘ಏನ್ರೋ ಸಮಾಚಾರ, ಎಲ್ಲಾ ಸೀಕ್ರೇಟಾಗಿ ಸೇರ್ಕೊಂಡು ಏನೋ ಸ್ಕೆಚ್ ಹಾಕಿದ್ಹಾಂಗಿದೆ’ ಎಂದು ವಿಚಾರಿಸಿಯೇ ಬಿಟ್ಟರು.ಇಂಥ ವಿಷಯಗಳಲ್ಲಿ ಹುಡುಗಿಯರು ಬಲು ಸೂಕ್ಷ್ಮ. ಒಂಚೂರು ನಮ್ಮಗಳ ವರ್ತನೆ ಬದಲಾದರೂ ಫಟಾರಂತ ಕಂಡುಹಿಡಿದು ಬಿಡುತ್ತಿದ್ದರು. ಅವರ ಅನುಮಾನಕ್ಕೆ ಉತ್ತರಿಸಿದ ಮಲ್ಲಿಕಾರ್ಜುನ ‘ಏನಿಲ್ಲ ಕಣ್ರೆ. ಇದು ಹುಡುಗರ ಪ್ರೈವೇಟ್ ವಿಚಾರ. ಇದರಲ್ಲಿ ನೀವೆಲ್ಲಾ ತಲೆ ಹಾಕಬಾರದು. ಪಾಪ ಸುತ್ಕೊಳ್ಳತ್ತೆ’ ಎಂದು ಬುದ್ಧಿವಾದ ಹೇಳಿದ.ನಮ್ಮ ಬದಲಾದ ನಡವಳಿಕೆ, ಪಿಸುಪಿಸು ಮಾತು ಕಂಡು ಪಕ್ಕಾ ಊಹಿಸಿದ ಕ್ಲಾಸ್‌ಮೇಟ್ ರಾಜೇಶ್ವರಿ, ‘ಥೂ ಪೋಲಿಗಳಾ. ನೀವು ನೇರ ನರಕಕ್ಕೆ ಹೋಗ್ತೀರ’ ಎಂದು ಜರಿದು ದೂರ ಹೊರಟಳು. ‘ಕನ್ನಡ ಎಂ.ಎ. ಮಾಡ್ತಿರೋ ನೀವೆಲ್ಲಾ ಏನ್ ಸ್ವರ್ಗಕ್ಕೆ ಹೋಗ್ತಿರಾ? ಸಾಧ್ಯನೇ ಇಲ್ಲ. ಕನ್ನಡ ಎಂ.ಎ. ಮಾಡಿದೋರಿಗೆ ನರಕಾನೇ ಕಾಯಂ ಅಂತ ಹತ್ತನೇ ಶತಮಾನದಲ್ಲೇ ರೂಲ್ಸು ಫಿಕ್ಸ್ ಆಗಿದೆ. ನೋಡ್ತಿರಿ ನೀವೂ ನಿಮ್ಮ ಗಂಡಂದಿರ ಜೊತೆ ಅಲ್ಲಿಗೆ ಬಂದೇ ಬರ್ತೀರಿ’ ಎಂದು ತಿರುಗಿ ಜವಾಬು ಕೊಟ್ಟನು. ಅವಳು ಮುಖ ಕೊಡವಿಕೊಂಡು ಹೊರಟೇ ಹೋದಳು. ಅದು ಡಿಸೆಂಬರ್ ತಿಂಗಳಾದ್ದರಿಂದ ರಕ್ತದ ಚಲನೆ ನಿಲ್ಲುವಷ್ಟು ಚಳಿಯಿತ್ತು. ನೀಲಿ ಚಿತ್ರ ನೋಡುವ ಎಲ್ಲಾ ಗೆಳೆಯರು ಸ್ಟೆಟರ್ ಹಾಕಿಕೊಂಡಿದ್ದರು. ಕೆಲವರು ಪರಸ್ಪರ ಗುರುತು ಪರಿಚಯವೇ ಸಿಗದಂತೆ ಮಂಕಿಕ್ಯಾಪ್ ಏರಿಸಿಕೊಂಡು ಬಂದಿದ್ದರು. ಅವತ್ತು ಇಡೀ ಟೆಂಟ್ ಟಾಕೀಸಿನಲ್ಲಿ ವಿಶ್ವವಿದ್ಯಾಲಯದ ಹುಡುಗರೇ ತುಂಬಿ ತುಳುಕಿ ಹೋಗಿದ್ದರು. ಸ್ಪೆಷಲ್ ಕ್ಲಾಸ್, ಸೆಮಿನಾರ್‌ಗಳೆಂದರೆ ಮುಖ ತಿರುಗಿಸುವ ರಸಿಕರೆಲ್ಲಾ ಇಲ್ಲಿ ಶಿಸ್ತಾಗಿ, ಸಮಯಕ್ಕೆ ಸರಿಯಾಗಿ ಬಂದು ಕೂತಿದ್ದರು. ನೀಲಿ ಚಿತ್ರ ನೋಡಲು ಅದೇನು ಶ್ರದ್ಧೆ, ಅದೇನು ಭಕ್ತಿ? ಎಲ್ಲರಿಗೂ ಪಿಕ್ಚರ್ ಯಾವಾಗ ಶುರುವಾಗುತ್ತೋ ಎಂಬ ಅವಸರ. ಭಾರಿ ಕುತೂಹಲ ಮೂಡಿಸಿಕೊಂಡ ಎಲ್ಲರೂ ಸೀಟಿಗೆ ಅಂಟಿಕೊಂಡು ಕೂತಿದ್ದರು.ಅಂತೂ ನೀಲಿ ಚಿತ್ರ ಶುರುವಾಯಿತು. ಟೆಂಟ್ ಟಾಕೀಸಿ ನವನು ಮೊದಲಿಗೆ ಒಂದಕ್ಕೊಂದು ಸಂಬಂಧವಿಲ್ಲದ, ಒಂದಿಷ್ಟೂ ತಲೆಬುಡ ತಿಳಿಯದ ಯಾವ್ಯಾವುದೋ ಅಡ್ನಾಡಿ ಇಂಗ್ಲಿಷ್ ಸಿನಿಮಾಗಳ ರೀಲುಗಳನ್ನು ತೋರಿಸತೊಡಗಿದ. ಏನು ಮಾಡಿದರೂ ನಿರೀಕ್ಷಿಸಿದ್ದ ಬಿಸಿಬಿಸಿ ದೃಶ್ಯಗಳು ಮೂಡಿ ಬರಲಿಲ್ಲ. ಅವು ಈಗ ಬಂದಾವು, ಆಗ ಬಂದಾವೆಂದು ಅರ್ಧ ತಾಸು ಕಾದು ಹೈರಾಣಾಗಿದ್ದಷ್ಟೇ ಬಂತು. ಆಗ ಸಿಟ್ಟಾದ ಹುಡುಗರೆಲ್ಲಾ ಒಮ್ಮೆಲೇ ‘ಹೋ’ ಎಂದು ಗಂಟಲು ಹರಿಯುವಂತೆ ಕಿರುಚಾಡತೊಡಗಿದರು. ನೀಲಿಚಿತ್ರದ ಬಗ್ಗೆ ಏನೇನೂ ಅರಿವಿಲ್ಲದ ರಂಗಪ್ಪ, ಬಸವರಾಜನಿಗೆ ತಿವಿಯುತ್ತಾ ‘ಇದೇನು ದರಿದ್ರ ಸಿನಿಮಾನಯ್ಯ. ಒಂದು ಹಾಡಿಲ್ಲ. ಒಂದು ಫೈಟಿಂಗ್ ಇಲ್ಲ. ಹೀರೊ ಯಾರೂಂತಾ ಇಷ್ಟೊತ್ತಾದ್ರೂ ಗೊತ್ತಾಗ್ಲಿಲ್ಲ. ಈ ಸುಡುಗಾಡು ಇಂಗ್ಲೀಷೋ ನಮ್ಮಪ್ಪನಾಣೆ ನಂಗೆ ಅರ್ಥವಾಗಲ್ಲ. ನಾನ್ ಹೋಗ್ತಿನಿ ನನ್ನ ಬಿಟ್ಬಿಡ್ರಪ್ಪೋ...’ ಎಂದು ಎದ್ದು ನಿಂತನು.ಮೊದಲೇ ನೀಲಿ ಚಿತ್ರ ಕಾಣದೆ ಕಂಗಾಲಾಗಿ, ರೋಸಿ ಹೋಗಿದ್ದ ಬಸಿಯಾ ‘ಲೇ.. ರಂಗ ಸುಮ್ನೆ ಕುತ್ಕೊಳ್ತೀಯೋ? ಇಲ್ಲ ಎತ್ತಿ ಎದಿಗೆ ಇಕ್ಕಲೋ. ಸುಮ್ಕಿರ್‍್ಲಾ. ಏನೋ ನೀನೊಂದಿಷ್ಟು ಜಾಣ ಆಗಲಿ. ಜನರಲ್ ನಾಲೆಜ್ ಬೆಳ್ಸಿಕೊಳ್ಲಿ ಅಂತ ನಾವೇ ಟಿಕೇಟಾಕಿ ಕರ್ಕೊಂಡ್ ಬಂದ್ರೆ ಇಲ್ಲಿ ಸುಶೀಲಿ ನಾಟಕ ಮಾಡ್ತಿಯಾ. ಮುಚ್ಕೊಂಡು ತೆಪ್ಪರ್ ಬಡಿಯಲ. ಕಥೆ ಗೊತ್ತಾಗದಿದ್ರೆ ನಾನಿಲ್ವ. ನಾಳೆ ಬಿಡಿಸಿ, ಬಿಡಿಸಿ ಹೇಳ್ತೀನಿ’ ಎಂದು ರಂಗಪ್ಪನ ಕುತ್ತಿಗೆ ಮೇಲೆ ಬಡಿದನು. ಮುಗ್ಧ ರಂಗಪ್ಪ ನನ್ನ ಕಡೆ ತಿರುಗಿ ‘ನೋಡೋ ಈ ಕೆಕ್ಕರ ಹೆಂಗ್ ಆಡ್ತಾನೆ. ನನಗೆ ಗೊತ್ತಾಗದೆ ಇರಾದು ಗೊತ್ತಾಗಿಲ್ಲ ಅಂದ್ರೂ ತಪ್ಪಾ. ಇಲ್ಲೊಂದಿಷ್ಟು ನ್ಯಾಯ ಹೇಳು’ ಎಂದು ನ್ಯಾಯಕ್ಕೆ ನಿಂತನು. ಆದರೆ, ರಂಗಪ್ಪನ ಮಾತನ್ನು ಕೇಳುವಷ್ಟು ವ್ಯವಧಾನ ಅಲ್ಲಿದ್ದ ಯಾರಿಗೂ ಇರಲಿಲ್ಲ. ಎಲ್ಲಾ ಟೆನ್ಷನ್‌ನಲ್ಲಿದ್ದರು.ಸೆನ್ಸಾರ್ ಬೋರ್ಡಿನವರು ಅಶ್ಲೀಲ ಎಂದು ಭಾವಿಸಿ ಕೆಲ ಸಿನಿಮಾಗಳ ರೀಲನ್ನೆಲ್ಲಾ ಕಟ್ ಮಾಡಿ ಕಸದ ರಾಶಿಗೆ ಎಸೆಯುತ್ತಾರೆ. ಇಂಥವೇ ಹಲವಾರು ರೀಲುಗಳನ್ನು ಈ ಟೆಂಟ್ ಮಾಲೀಕ ಆಯ್ದು ತಂದಂತೆ ಕಾಣುತ್ತಿತ್ತು. ಈ ಕಾರಣಕ್ಕೋ ಏನೋ ನೀಲಿಚಿತ್ರದ ಪಾತ್ರಗಳಿಗೂ, ಅದರ ಕಥೆ, ಸಂಭಾಷಣೆಗೂ, ಪರಸ್ಪರ ಪಾತ್ರಗಳಿಗೂ ಒಂದಕ್ಕೊಂದು ಸಂಬಂಧವೇ ಅಲ್ಲಿರಲಿಲ್ಲ. ಮೊದಲಿಗೆ ಇಂಗ್ಲಿಷ್ ಭಾಷೆಯಿಂದ ಚಾಲುಗೊಂಡ ಸಿನಿಮಾ ಹತ್ತು ನಿಮಿಷಕ್ಕೆ ಮಲಯಾಳಂ ಭಾಷೆಗೆ ಜಾರಿಕೊಂಡಿತು. ಆನಂತರ ಏಕ್‌ದಂ ಚೀನಿ ಭಾಷೆಗೆ ಹಾರಿ, ಮತ್ತೆ ತಮಿಳಿಗೆ ಬಂದು ನಿಂತಿತು. ನಡು ನಡುವೆ ಹಿಂದಿ, ಬಂಗಾಳಿ, ಗುಜರಾತಿ ಅಂತ ನಾನಾ ಭಾಷೆಯ ಪಾತ್ರಗಳು ಬಂದು ಓಡತೊಡಗಿದವು.ಇಡೀ ಸಿನಿಮಾದಲ್ಲಿ ಹತ್ತಾರು ಹೀರೊಗಳು, ಸಹಪಾತ್ರಗಳು ಬಂದು ಹೋದರೂ ಚಿತ್ರಕಥೆಯಲ್ಲಿ ಅವರ್‍್ಯಾರಿಗೂ ಪರಸ್ಪರ ಪರಿಚಯವಾಗಲೀ, ಖಾಸಾ ಸಂಬಂಧಗಳಾಗಿ ಇರಲಿಲ್ಲ.  ಹೀರೊಯಿನ್‌ಗಳು ಬಂದರೂ ನೆರೆದಿದ್ದ ಹುಡುಗರು ಬಯಸುತ್ತಿದ್ದ ಯಾವ ಅಭಿನಯವನ್ನೂ ಅವರು ಮಾಡುತ್ತಿರಲಿಲ್ಲ. ಎಷ್ಟು ಕಾದರೂ ನಿಜವಾದ ನೀಲಿ ಚಿತ್ರ ಪರದೆ ಮೇಲೆ ಮೂಡಲೇ ಇಲ್ಲ. ಈ ಅವ್ಯವಸ್ಥೆಯಿಂದ ಸಿಟ್ಟಾದ ಕೆಲ ಕ್ರಾಂತಿಕಾರಿ ಹುಡುಗರು ಸಿನಿಮಾ ನಿಲ್ಲಿಸಿ ಟೆಂಟ್ ಮಾಲೀಕನ ಕಾಲರ್ ಹಿಡಿದು ನಿಂತರು. ಅವನು ‘ಇಂಪಾರ್ಟೆಂಟ್ ಸೀನ್ ಮುಂದೆ ಬರ್ತಾವೆ ಸಾರ್ ಕಾಯ್ತಾ ಇರಿ’ ಎಂದು ಏನೇನೋ ಸಮಜಾಯಿಷಿ ಕೊಡುತ್ತಿದ್ದ. ಯಾರೂ ಅವನ ಮಾತನ್ನು ಕೇಳುವ ಸ್ಥಿತಿಯಲ್ಲೇ ಇರಲಿಲ್ಲ. ಯಾರದೋ ಮಾತು ಕೇಳಿ ನೀಲಿಚಿತ್ರ ಎಂದು ಯಾವ್ಯಾವುದೋ ಬಿಸಾಡಿದ ರೀಲುಗಳನ್ನು ಆರಿಸಿ ಅಂಟಾಕಿಕೊಂಡು ತಂದಿದ್ದ ಅವನು ಹುಡುಗರ ಕೈಲಿ ಸಿಕ್ಕು ಒದ್ದಾಡುತ್ತಿದ್ದ. ಹೋದ ಸಲ ಬಂದಾಗಲೂ ಹೀಗೆ ಮೋಸ ಆಯ್ತು ಎಂದು ಕೆಲವರು ಗೊಣಗಾಡುತ್ತಿದ್ದರು. ಎಲ್ಲಾ ಹುಡುಗರು ಹೀಗೆ ಒಟ್ಟಾಗಿ ತಗಲಾಕಿಕೊಂಡಿದ್ದರಿಂದ ಟೆಂಟ್ ಮಾಲೀಕ ಬೆಪ್ಪನಾಗಿ ನಿಂತುಬಿಟ್ಟಿದ್ದ. ಯಾರಾದರು ಬಂದು ಈ  ಹುಡುಗರಿಂದ ಬಿಡಿಸಿದರೆ ಸಾಕಪ್ಪಾ ಅಂತ ಕಾಯುತ್ತಿದ್ದ.ಅಷ್ಟರಲ್ಲಿ ಹುಡುಗರ ಗುಂಪನ್ನು ಭೇದಿಸಿಕೊಂಡು ನ್ಯಾಯ ಹೇಳಲು ಯಾರೋ ಯಜಮಾನರೊಬ್ಬರು ಎದ್ದು ಬಂದರು. ಬರೀ ಹುಡುಗರೇ ಅಲ್ಲದೆ, ಕದ್ದು ಬಂದ ಮಧ್ಯ ವಯಸ್ಕರೂ ಇದ್ದಾರೆ. ಸ್ವೆಟರ್ರು, ಫುಲ್ ಮಂಕಿ ಟೋಪಿಗಳಲ್ಲಿ ಕತ್ತಲಲ್ಲಿ ಅವರಿದ್ದಾರೆ ಅನ್ನೋದೇ ಗೊತ್ತಾಗಿರಲಿಲ್ಲ. ನ್ಯಾಯ ಹೇಳಲು ಬಂದ ಯಜಮಾನರನ್ನು ಕಂಡ ಕೆಲವರು ಮಾತ್ರ ‘ಅಯ್ಯಯ್ಯೋ ನಮ್ಮ ಡಿಪಾರ್ಟ್‌ಮೆಂಟ್ ಪ್ರೊಫೆಸರ್ ಬಂದಿದ್ದಾರೆ ಕಣ್ರೋ’ ಎಂದು ಹೌಹಾರಿ ಓಡತೊಡಗಿದರು. ದೂರದಲ್ಲಿ ನಿಂತಿದ್ದ ಕೆಲವರಿಗೆ ಪ್ರೊಫೆಸರ್ ಎನ್ನುವ ಬದಲು ಪೊಲೀಸರು ಅಂತ ಕೇಳಿಸಿತೋ ಏನೋ ಅವರೆಲ್ಲಾ ನಿಂತ ನಿಂತಲ್ಲಿಂದಲೇ ದಿಕ್ಕಾಪಾಲಾಗಿ ಓಡತೊಡಗಿದರು. ಕಲಿಸುವ ಗುರು ಎಲ್ಲಾ ಕಡೆಗೂ ಇರುತ್ತಾನೆ ಅನ್ನೋದಕ್ಕೆ ಇದೇ ಸಾಕ್ಷಿ. ಮಕ್ಕಳಿಗೆ ಪಾಠ ಹೇಳಿ, ಅವರ ಲೌಕಿಕದ ಜಗಳ ಬಿಡಿಸಲು ಇಂಥ ಕಡೆಯಲ್ಲೂ ಪ್ರತ್ಯಕ್ಷವಾದ ಇಂಥ ಮತ್ತೊಬ್ಬ ಗುರುಗಳ ಕಥೆಯನ್ನು ನಾನೆಲ್ಲೂ ಕೇಳಿಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry