ಠೇವಣಿ ದುಡ್ಡಿಗಾಗಿ ತಡಕಾಡಿದ ಗುಂಡೂರಾವ್!

7

ಠೇವಣಿ ದುಡ್ಡಿಗಾಗಿ ತಡಕಾಡಿದ ಗುಂಡೂರಾವ್!

ಐ.ಎಂ.ವಿಠಲಮೂರ್ತಿ
Published:
Updated:
ಠೇವಣಿ ದುಡ್ಡಿಗಾಗಿ ತಡಕಾಡಿದ ಗುಂಡೂರಾವ್!

ನೆನಪಿನ ಓಟವೇ ಹಾಗೆ. ಆಗಿಹೋದ ಕಾಲವನ್ನೂ ಆಗಿನ ಸನ್ನಿವೇಶವನ್ನೂ ಎದುರಾದ ವ್ಯಕ್ತಿಗಳನ್ನೂ ಕಣ್ಣಮುಂದೆ ಧುತ್ತೆಂದು ತಂದು ನಿಲ್ಲಿಸಿ ಬಿಡುತ್ತದೆ. ರಾಜ್ಯದಲ್ಲಿ ಈಗಷ್ಟೇ ಚುನಾವಣೆ ಮುಗಿದು ಹೊಸ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದಿದೆ. ನನ್ನ ನೆನಪಿನ ಓಟ ಮಾತ್ರ ದಶಕಗಳ ಹಿಂದಿನ ಆ `ಕಪ್ಪು-ಬಿಳುಪು' ಬಿಂಬಗಳನ್ನು ಮತ್ತೆ ಮತ್ತೆ ಅನಾವರಣಗೊಳಿಸುತ್ತಿದೆ. ಆ ನೆನಪುಗಳು, ಸನ್ನಿವೇಶಗಳು ಸ್ಮರಣೆಗೆ ಬಂದಾಗ ಪುಳಕಗೊಂಡು ಒಂದು ರೀತಿಯ ರೋಮಾಂಚನವಾಗುತ್ತದೆ.

ಎರಡು ಚುನಾವಣೆಗಳು, ಅವು ನನಗೆ ನೀಡಿದ ಒಳನೋಟ ಮತ್ತು ವಿಶೇಷ ಅನುಭವಗಳ ಕಾರಣದಿಂದ, ಇಂದಿಗೂ ನನ್ನ ನೆನಪಿನಲ್ಲಿ ಹಸಿರಾಗಿವೆ. 1977ರ ಫೆಬ್ರುವರಿಯಲ್ಲಿ ನಾನು ಆಡಳಿತ ಸೇವೆಗೆ ನೇಮಕಗೊಂಡಾಗ ಆಗಷ್ಟೇ ದೇಶದಲ್ಲಿ ತುರ್ತು ಪರಿಸ್ಥಿತಿ ಕೊನೆಗೊಂಡಿತ್ತು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆ (ಎ.ಟಿ.ಐ)ಯಲ್ಲಿ ನಮಗೆ ನೌಕರಿ `ತಾಲೀಮು' ನಡೆದಿತ್ತು. ಆಗಲೇ ಮಹಾಚುನಾವಣೆ ಸಹ ಘೋಷಣೆಯಾಗಿತ್ತು. ಎ.ಟಿ.ಐ. ನಿರ್ದೇಶಕರಾಗಿದ್ದ ಎ.ಎಸ್. ಮೇಲುಕೋಟೆಯವರು ಇದೊಂದು `ಸುವರ್ಣಾವಕಾಶ' ಎಂದು ನಮ್ಮನ್ನೆಲ್ಲ ಚುನಾವಣಾ ಕಾರ್ಯಕ್ಕೆ ಮೈಸೂರಿನ ಜಿಲ್ಲಾಧಿಕಾರಿಗಳಿಗೆ ನಿಯೋಜಿಸಿದರು. ಕಾಲೇಜು ದಿನಗಳಲ್ಲಿ ನಾನು ಸಾಕಷ್ಟು ಚುನಾವಣೆಗಳನ್ನು ಕಂಡಿದ್ದೆನಾದರೂ ನನಗೆ ಸಾರ್ವತ್ರಿಕ ಚುನಾವಣೆ ಅನುಭವ ಸಿಕ್ಕಿದ್ದು ಅದೇ ಮೊದಲು.

ಬೆಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಸೊಸೈಟಿ ಅಧ್ಯಕ್ಷನಾಗಿದ್ದ ನನಗೆ, ಕಾಲೇಜು ರಾಜಕೀಯದ ಪರಿಚಯ ತಕ್ಕಮಟ್ಟಿಗೆ ಇತ್ತು. ಇದರೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ದೇವರಾಜ ಅರಸು ಅವರ ಪರಿಚಯ ಇದ್ದುದರಿಂದ ರಾಜಕಾರಣದ ನಡೆಗಳನ್ನು ಹತ್ತಿರದಿಂದ ನೋಡಿದ್ದೆ. ಆದರೆ, ಮಹಾ ಚುನಾವಣೆ ಸ್ವರೂಪವೇ ಬೇರೆಯಾದುದು.

ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ರಾಜಕೀಯ ನಾಯಕರು, ಅವರ ಹಿಂಬಾಲಕರು, ಮತದಾರರು, ಚುನಾವಣಾ ಕಾರ್ಯದಲ್ಲಿ ನಿರತರಾಗುವ ಅಧಿಕಾರಿಗಳು, ಸಿಬ್ಬಂದಿ... ಹೀಗೆ ಎಲ್ಲ ಸ್ತರಗಳಲ್ಲೂ ಎಲ್ಲರೂ ಒಂದು ರೀತಿಯ ಉದ್ವೇಗ, ಆಕ್ರೋಶ ಹಾಗೂ `ಪಾನಮತ್ತ'ರಾಗದೆ ನಶೆಯಲ್ಲಿ ಇರುತ್ತಾರೆ ಎಂಬುದು ನನ್ನ ಭಾವನೆ. ಜನಜಂಗುಳಿಯಿಂದ ತುಂಬಿ ತುಳುಕುವ ಊರುಗಳು, ಚುನಾವಣಾ ಸಂದರ್ಭದಲ್ಲಿ ಸಿಂಗಾರಗೊಳ್ಳುವ ಮತಗಟ್ಟೆಗಳು, ಮೇಲ್ನೋಟಕ್ಕೆ ಆತಂಕ ಉಂಟುಮಾಡುವ ಅವ್ಯವಸ್ಥೆ, ಎಷ್ಟೇ ತರಬೇತಿ ನೀಡಿದರೂ ಸಾಲದ ಚಾಕಚಕ್ಯತೆ, ಚುನಾವಣಾ ಸಿಬ್ಬಂದಿಯ ಮತಗಟ್ಟೆ ಯಾತ್ರೆ, ಮತಪೆಟ್ಟಿಗೆಗಳನ್ನು ಹೊತ್ತು ಭದ್ರತಾ ಕೊಠಡಿಗೆ ಬರುವ ದೃಶ್ಯಾವಳಿಗಳು ಒಂದು ರೀತಿಯಲ್ಲಿ ಅತಿ ಗಂಭೀರ ಹಾಗೂ ಅಷ್ಟೇ ತಮಾಷೆಯ ನೋಟಗಳು.

ಇವುಗಳ ಜತೆಗೆ ಮತದಾರರ ಆಕ್ರೋಶ, ರಾಜಕಾರಣಿಗಳ ಒತ್ತಡ, ಕಾಳ್ಗಿಚ್ಚಿನಂತೆ ಹರಡುವ ಗಾಳಿ ಸುದ್ದಿ... ಅಬ್ಬಬ್ಬಾ, ಅದೊಂದು ಅತ್ಯಂತ ರೋಚಕ ಅನುಭವಗಳ ಪಾಕಶಾಲೆ. ತುರ್ತು ಪರಿಸ್ಥಿತಿಗೆ ಕಾರಣವಾಗಿದ್ದ ಇಂದಿರಾ ಗಾಂಧಿ, ಚುನಾವಣೆಯಲ್ಲಿ ಮತಪೆಟ್ಟಿಗೆಗಳನ್ನೂ ಬದಲಾವಣೆ ಮಾಡಲಿದ್ದಾರೆ ಎನ್ನುವ ಗುಮಾನಿ ಎಲ್ಲೆಡೆ ಹರಡಿದ್ದ ಮತ್ತು ತಕ್ಷಣ ಅದನ್ನು ನಂಬಲು ಸಿದ್ಧವಿದ್ದ ಜನರ ಮನಃಸ್ಥಿತಿ ಚುನಾವಣಾ ಕರ್ತವ್ಯ ನಿರ್ವಹಿಸುವ ಎಲ್ಲರ ಆತಂಕ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿತ್ತು.

ಮತದಾನ ಮುಗಿದ ಮೇಲೆ ನಮ್ಮ ವ್ಯಾಪ್ತಿಯ 78ನೇ ನಂಬರಿನ ಮತಪೆಟ್ಟಿಗೆ ಬೇಗ ಬಾರದೆ ಎಡವಟ್ಟಾಯಿತು. ಆ ಸುದ್ದಿ ಕೊಠಡಿಯಿಂದ ಹೊರಗೆ ಹೋಗುವ ಹೊತ್ತಿಗೆ 78 ಮತಪೆಟ್ಟಿಗೆಗಳು ಕಾಣೆಯಾಗಿವೆ ಎಂಬ ಸ್ವರೂಪ ಪಡೆದಿತ್ತು. ಚುನಾವಣಾ ಕೇಂದ್ರದಲ್ಲಿ ಭದ್ರತಾ ಕೊಠಡಿಯ ಮುಂದೆ ಭಾರಿ ಪ್ರಮಾಣದಲ್ಲಿ ಜನ ಜಮಾಯಿಸಿದರು.

ಇಡೀ ವ್ಯವಸ್ಥೆಯನ್ನು ಅಪನಂಬಿಕೆಯಿಂದ ನೋಡುತ್ತಿದ್ದ ಕ್ಷಣವದು. ದೊಂಬಿ ಶುರುವಾಗುವ ಎಲ್ಲ ಲಕ್ಷಣಗಳು ಗೋಚರಿಸಿದವು. ಜಿಲ್ಲಾ ಚುನಾವಣಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ನಡೆದ ಘಟನೆ ಕುರಿತಂತೆ ಧ್ವನಿವರ್ಧಕದಲ್ಲಿ ಸ್ಪಷ್ಟನೆ ನೀಡಿದರು. ಭಗವಂತನ ಕೃಪೆಯಿಂದ ಅಷ್ಟರಲ್ಲಿ 78ನೇ ನಂಬರಿನ ಮತಪೆಟ್ಟಿಗೆ ಕೂಡ ಬಂತು. ಅದನ್ನು ಧ್ವನಿವರ್ಧಕದಲ್ಲಿ ಹೇಳಿದಾಗ ಜನಕ್ಕೆ ಚುನಾವಣೆಯಲ್ಲಿ ಗೆದ್ದಷ್ಟೇ ಖುಷಿ. ಫಲಿತಾಂಶ ಹೊರಬಿದ್ದ ಮೇಲೆ ಗೊತ್ತಾಯಿತು ಇಡೀ ದೇಶದಲ್ಲಿ ನಡೆದಿದ್ದ ಮೌನಕ್ರಾಂತಿಯ ಪ್ರಭಾವ. ಪ್ರಜಾಪ್ರಭುತ್ವ ಗೆದ್ದಿತ್ತು. ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವೊಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು.

ನಾನು ಸ್ವತಃ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, 1983ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ. ಆ ವೇಳೆಗೆ ನಾನು ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಸೋಮವಾರಪೇಟೆ ಕ್ಷೇತ್ರದ ಚುನಾವಣಾ ಅಧಿಕಾರಿಯನ್ನಾಗಿ ನನ್ನನ್ನು  ನೇಮಿಸಲಾಯಿತು. ಅದೊಂದು ಪ್ರತಿಷ್ಠಿತ ಕ್ಷೇತ್ರ. ಅಂದಿನ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅಲ್ಲಿಂದ ಸ್ಪರ್ಧಿಸಿದ್ದರು. ಸೋಮವಾರಪೇಟೆ ತಹಶೀಲ್ದಾರರಾಗಿದ್ದ ಸಹಾಯಕ ಚುನಾವಣಾಧಿಕಾರಿ ಜೆ.ಆರ್. ಲೋಬೊ (ಅವರೀಗ ಮಂಗಳೂರಿನ ಶಾಸಕ) ಅತ್ಯಂತ ಭಯ, ಭಕ್ತಿಯಿಂದ `ಸರ್, ಅವರಿಗೆ ಕಾಫಿ ವ್ಯವಸ್ಥೆ ಮಾಡೋಣವೆ' ಎಂದು ಕೇಳಿದರು. `ಅವರು ಈಗ ಒಬ್ಬ ಅಭ್ಯರ್ಥಿಯಷ್ಟೇ. ಮುಖ್ಯಮಂತ್ರಿಯಾಗಿ ಬರುತ್ತಿಲ್ಲ. ವಿಶೇಷ ಉಪಚಾರದ ಅಗತ್ಯವಿಲ್ಲ' ಎಂದು ನಾನು ಹೇಳಿದೆ. ನನಗೆ ತುಂಬಾ ಇಷ್ಟವಾದ ಮುಖ್ಯಮಂತ್ರಿಗಳಲ್ಲಿ ಗುಂಡೂರಾವ್ ಒಬ್ಬರು. ಅವರ ಆಕರ್ಷಕ ವ್ಯಕ್ತಿತ್ವ, ನೇರ ನಡೆ, ನುಡಿ, ಅಧಿಕಾರಿಗಳಿಗೆ ಹೇಳುತ್ತಿದ್ದ ಪ್ರೋತ್ಸಾಹದಾಯಕ ಮಾತುಗಳು ಅವರನ್ನು ಜನಪ್ರಿಯಗೊಳಿಸಿದ್ದವು.

ನಾಮಪತ್ರ ಸಲ್ಲಿಸಲು ತಮ್ಮ ಪತ್ನಿ ವರಲಕ್ಷ್ಮಿ ಅವರೊಂದಿಗೆ ಶ್ವೇತ ಸಫಾರಿಧಾರಿಯಾಗಿ ಎಂದಿನ ಗತ್ತಿನಲ್ಲಿ ಕಪ್ಪು ಕನ್ನಡಕ ಹಾಕಿಕೊಂಡು ಗುಂಡೂರಾವ್ ಬಂದಿದ್ದರು. ಅವರ ಆ ನಗುಮೊಗದ ಚಿತ್ರ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಗುಂಡೂರಾವ್ ನಾಮಪತ್ರ ಸಲ್ಲಿಸಿದರು. ಠೇವಣಿ ಕೊಡಲಿಲ್ಲ. ನಾನು ಠೇವಣಿ ಹಣ ಕೇಳಿದೆ. ಗುಂಡೂರಾವ್ ಗಲಿಬಿಲಿಯಿಂದ ಸಫಾರಿಯ ಎಲ್ಲ ಜೇಬುಗಳನ್ನು ತಡಕಾಡಿದರು.

ಆದರೆ, ಯಾವ ಜೇಬಿನಲ್ಲೂ ಒಂದು ರೂಪಾಯಿ ಸಹ ಇರಲಿಲ್ಲ. ವರಲಕ್ಷ್ಮಿ ಅವರ ಬಳಿ ಹಣವಿತ್ತು. ಅದೇ ಹಣ ಪಡೆದು ಗುಂಡೂರಾವ್ ಠೇವಣಿ ತುಂಬಿದರು. ಅವರು ಜೇಬು ತಡಕಾಡುತ್ತಿದ್ದ ಚಿತ್ರವನ್ನು `ಪ್ರಜಾವಾಣಿ' ವರದಿಗಾರ ಇಕ್ಬಾಲ್ ಜಾಗೀರದಾರ್ ತೆಗೆದರು. ಮರುದಿನ ಪತ್ರಿಕೆಯಲ್ಲಿ `ಠೇವಣಿ ದುಡ್ಡಿಗಾಗಿ ತಡಕಾಡಿದ ಗುಂಡೂರಾವ್' ಸುದ್ದಿ ಚಿತ್ರಸಹಿತ ಮುಖಪುಟದಲ್ಲೇ ಬಂದಿತ್ತು.

ಜನತಾ ಪಕ್ಷದಿಂದ ಬಿ.ಎ. ಜೀವಿಜಯ ಸ್ಪರ್ಧೆಗೆ ಇಳಿದಿದ್ದರು. ನಾಮಪತ್ರ ಸಲ್ಲಿಸಲು ಬಂದ ತಕ್ಷಣ ಅವರು ಕೈ ಮೇಲೆತ್ತಿ ಅಷ್ಟದಿಕ್ಕುಗಳಿಗೂ ಹೊರಳಿ ನಮಸ್ಕಾರ ಮಾಡುತ್ತಿದ್ದ ದೃಶ್ಯ `ಎಲ್ಲಾ ದೇವರುಗಳೇ, ನನ್ನನ್ನು ಗೆಲ್ಲಿಸಿ' ಎಂದು ಬೇಡಿದಂತಿತ್ತು. ಮತದಾನ ಹತ್ತಿರವಾದಂತೆ ಎಲ್ಲೆಡೆ ಉದ್ವಿಗ್ನ ವಾತಾವರಣ. ಸೀರೆ, ಪಂಚೆ ಹಾಗೂ ದುಡ್ಡಿನ ಹಂಚಿಕೆ ಜೋರಾಗಿತ್ತು. ಅದನ್ನು ತಡೆಯುವ ಪ್ರಯತ್ನ ಸತತವಾಗಿ ನಡೆಯುತ್ತಿತ್ತು. ಸ

ಿನಿಮಾ ನಟರುಗಳಾದ ಶಿವಾಜಿ ಗಣೇಶನ್, ಸಂಜಯ್ ಖಾನ್ ಅವರನ್ನು ಒಳಗೊಂಡಂತೆ ಕನ್ನಡದ ನಟನಟಿಯರೂ ಪ್ರಚಾರಕ್ಕೆ ಧಾವಿಸಿದರು. ವೀಕ್ಷಕರಾಗಿ ಬಂದಿದ್ದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಐ.ಬಿಯಲ್ಲಿ ಚೆನ್ನಾಗಿ ಭೋಜನ ಮಾಡಿ, ನಿದ್ದೆ ಹೊಡೆದು ಜಾಗ ಖಾಲಿ ಮಾಡಿದರು.ಮತದಾನ ಮುಗಿದ ನಂತರ, ಯಥಾಪ್ರಕಾರ ಮತಪೆಟ್ಟಿಗೆಗಳನ್ನು ರಾತ್ರೋರಾತ್ರಿ ಸ್ಥಳಾಂತರ ಮಾಡಿ ಬೇರೆ ಮತಪೆಟ್ಟಿಗೆಗಳನ್ನು ತಂದಿಡುತ್ತಾರೆಂದು ಗಾಳಿ ಸುದ್ದಿ ಬೇರೆ ಹಬ್ಬಲಾರಂಭಿಸಿತ್ತು.

ಇಂತಹ ಸಂದರ್ಭದಲ್ಲಿ ಒಬ್ಬ ಅಧಿಕಾರಿಯ ವಿಶ್ವಾಸಾರ್ಹತೆ ಮತ್ತು ನಿಷ್ಪಕ್ಷಪಾತ ನಡವಳಿಕೆಯನ್ನು ಜನ ಒರೆಹಚ್ಚಿ ನೋಡುತ್ತಾರೆ. ಜನತಾ ಪಕ್ಷದವರು, ರೈತಸಂಘದವರು ತಾವು ಮತಪೆಟ್ಟಿಗೆ ಇಟ್ಟಿದ್ದ ಭದ್ರತಾ ಕೊಠಡಿಗಳಿಗೆ ಅಹೋರಾತ್ರಿ ಕಾವಲಿರುವುದಾಗಿ ತಿಳಿಸಿ, ಸಶಸ್ತ್ರ ಸೈನಿಕರಂತೆ ಸಜ್ಜಾಗಿ ಕುಳಿತರು. ಪೊಲೀಸ್ ಮತ್ತು ಕೆ.ಎಸ್.ಆರ್.ಪಿ. ಕಾವಲು ಪಡೆಯ ಹೊರಸುತ್ತಿನಲ್ಲಿ ಈ ಸ್ವಯಂ-ನೇಮಿತ ಕಾವಲು ಪಡೆ ಬೀಡುಬಿಟ್ಟಿತು.

ಮತ ಎಣಿಕೆ ದಿನ ಬೆಳಿಗ್ಗೆ ಎರಡೂ ಗುಂಪುಗಳ ಜನರ ಹೃದಯಬಡಿತ ಅಳೆಯಲು ಸ್ಟೆಥಸ್ಕೋಪ್ ಬೇಕಾಗಿರಲಿಲ್ಲ. ಜಿಲ್ಲಾಧಿಕಾರಿ ವೀಣಾ ಎಸ್. ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಫಿ  ಶಮ್ನಾಡ್ ನಮ್ಮ ಮತ ಎಣಿಕೆ ಕೇಂದ್ರದಲ್ಲೇ ಮೊಕ್ಕಾಂ ಹೂಡಿದ್ದರು. ಗುಂಡೂರಾವ್ ಅವರ ಚುನಾವಣಾ ಏಜೆಂಟ್ ಆಗಿದ್ದ ರಾಜ್ಯಸಭಾ ಸದಸ್ಯ ಎಫ್.ಎಂ. ಖಾನ್ ಸಿಗರೇಟ್ ಹೊಗೆ ಬಿಡುತ್ತಾ ಅವರದೇ ಶೈಲಿಯಲ್ಲಿ ಎಣಿಕೆ ಕೇಂದ್ರಕ್ಕೆ ಎಂಟ್ರಿ ಕೊಟ್ಟರು. ನನಗೆ ಆ ದೃಶ್ಯ ಸಹ್ಯವಾಗಲಿಲ್ಲ. ಅವರನ್ನು ಕರೆದು ಬಹಳ ಸೌಜನ್ಯದಿಂದ ಅವರು ಮಾಡುತ್ತಿರುವುದು ಸರಿಯಲ್ಲವೆಂದೂ ಎಣಿಕಾ ಕೇಂದ್ರದಲ್ಲಿ ಸಿಗರೇಟ್ ಸೇದಬಾರದೆಂದೂ ತಿಳಿಸಿದೆ.

I am a chain smoker. I cannot be without smoking and I am Chief Minister’s Chief Election Agent ಎಂದು ಏರಿದ ಧ್ವನಿಯಲ್ಲಿ ಹೇಳಿದರು. ನನಗೂ ಕೋಪ ನೆತ್ತಿಗೆರಿತು. ಐI don’t care whether you smoke chain or cigarette but you cannot do inside the counting hall and you may please go out ಎಂದು ಏರಿದ ಅಧಿಕಾರಯುತ ಧ್ವನಿಯಲ್ಲಿಯೇ ಆದೇಶಿಸಿದೆ. ನನ್ನ ಉತ್ತರದಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶಾಕ್ ಆದಂತೆ ಕಂಡಿತು. ಖಾನ್ ಸಾಹೇಬರು ಮಾತನಾಡದೆ ದುಮುಗುಡುತ್ತಾ ಹೊರ ನಡೆದರು.

ಪ್ರತಿ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆ ಶಫಿ ಶಮ್ನಾಡ್ ಪ್ರತಿ ಎಣಿಕೆ ಟೇಬಲ್‌ನ ವಿವರ ಪಡೆದು ಯಾರಿಗೋ ಕೊಟ್ಟು ಬರುತ್ತಿದ್ದರು. ನಾನು ಒಂದೆರಡು ಬಾರಿ ಗಮನಿಸಿ ಸುಮ್ಮನಿದ್ದೆ. ಮತ್ತದೆ ಚಾಳಿಯನ್ನು ಮುಂದುವರಿಸಿದಾಗ ಅವರನ್ನು ಸಹ ಮತ ಎಣಿಕೆ ಕೆಂದ್ರದಿಂದ ಹೊರಹೋಗಲು ಸೂಚಿಸಿದೆ. ಬಳಿಕ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. `ಚುನಾವಣಾಧಿಕಾರಿ ಸಹಾಯ ಕೇಳದ ಹೊರತು ಪೊಲೀಸ್ ಅಧಿಕಾರಿಗಳು ಎಣಿಕೆ ಕೇಂದ್ರ ಪ್ರವೇಶಿಸುವಂತಿಲ್ಲ' ಎನ್ನುವ ನಿಯಮವನ್ನು ಉಲ್ಲೇಖಿಸಿ ನಾನು ಉತ್ತರ ಕೊಟ್ಟೆ.

ಕೊನೆಯ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದಾಗ ನನ್ನ ಬಳಿ ಇದ್ದ ಹಾಟ್ ಲೈನ್ ದೂರವಾಣಿಗೆ ಹಾರಂಗಿಯಲ್ಲಿ ತಂಗಿದ್ದ ಗುಂಡೂರಾವ್ ಅವರಿಂದ ಕರೆ ಬಂತು. `ಪರಿಸ್ಥಿತಿ ಹೇಗಿದೆ?' ಎಂದರು. `ಆರು ಸಾವಿರ ಮತಗಳಷ್ಟು ಹಿನ್ನಡೆ ಇದೆ' ಎಂದು ತಿಳಿಸಿದೆ. `ಹಾಗಾದರೆ ನಾನು ಸೋಲುವುದು ಗ್ಯಾರಂಟಿ ಬಿಡಿ' ಎಂದರು. ಆ ಎಫ್.ಎಂ. ಖಾನ್‌ನನ್ನು ಮೇಡಮ್‌ಗೆ (ಇಂದಿರಾ ಗಾಂಧಿ) ಹೇಳಿ ವಿದೇಶಕ್ಕೆ ಹೋಗುವ ನಿಯೋಗದಲ್ಲಿ ಕಳುಹಿಸಿಕೊಟ್ಟೆ. ಆದರೂ ಅಲ್ಲಿಂದ ತಪ್ಪಿಸಿಕೊಂಡು ಬಂದು ನನ್ನ ಪರವಾಗಿ ಪ್ರಚಾರ ಮಾಡಿ ಸೋಲಿಗೆ ಕಾರಣವಾದ' ಎಂದು ಪೇಚಾಡಿದರು. ಗುಂಡೂರಾವ್ ಸೋಲಿನ ಹಾದಿ ಹಿಡಿದಿದ್ದರು. ಜಿಲ್ಲಾಧಿಕಾರಿ ವೀಣಾ ಅವರ ಕಣ್ಣಲ್ಲಿ ನೀರಾಡುತ್ತಿತ್ತು. ಕೊನೆಗೂ ಗುಂಡೂರಾವ್ ಸೋತರು. ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಜನತಾ ಪಕ್ಷದ ಸರ್ಕಾರ ಬಂತು.

ನನ್ನ ವೃತ್ತಿ ಬದುಕಿನಲ್ಲಿ ಉತ್ತರ ಪ್ರದೇಶದ ಗಾಜಿಪುರ, ಆಗ್ರಾ, ಬಿಹಾರದ ಸುಲ್ತಾನ್‌ಪುರ, ರಾಜಗೀರ್, ಪಶ್ಚಿಮ ಬಂಗಾಳದ ಬಾಲೂರ್ ಘಾಟ್, ಕೋಲ್ಕತ್ತ, ಮಹಾರಾಷ್ಟ್ರದ ರತ್ನಾಗಿರಿಗಳಲ್ಲದೆ ಮಿಜೋರಾಂ ರಾಜ್ಯದಲ್ಲೂ ಚುನಾವಣಾ ವೀಕ್ಷಕನಾಗಿ ಕೆಲಸ ಮಾಡಿದ್ದೇನೆ. ಆ ನೆನಪುಗಳನ್ನು ಕೆದಕಿದರೂ ಬೇಕಾದಷ್ಟು ಕೌತುಕ ಸಂಗತಿಗಳು ಬಿಚ್ಚಿಕೊಳ್ಳುತ್ತವೆ.

ಬಿಹಾರದ ರಾಜಗೀರ್ ಸಮೀಪದಲ್ಲಿ ಲಾಲೂ ಪ್ರಸಾದ್ ಚುನಾವಣಾ ಭಾಷಣಕ್ಕೆ ಬಂದಿದ್ದರು. ಚುನಾವಣಾ ವೀಕ್ಷಕನಾಗಿದ್ದ ನಾನು ಅಧಿಕಾರಿ ಎಂಬುದನ್ನು ಗುರುತಿಸಿಕೊಳ್ಳದೆ ಸಭೆಯ ಸನಿಹದಲ್ಲಿದ್ದೆ. ಭಾಷಣ ಮುಗಿಸಿದ ಲಾಲೂ ಕೆಳಗೆ ಇಳಿಯುತ್ತಿದ್ದಂತೆ ಸುಮಾರು 50ಕ್ಕೂ ಅಧಿಕ ಮಹಿಳೆಯರು ಅವರನ್ನು ಅಡ್ಡಗಟ್ಟಿ `ಹಮಾರಾ ಗಾಂವ್ ಕೊ ಅಚ್ಛಾ ಸಡಕ್ ನಹೀ ಹೈ' ಎಂದು ತರಾಟೆಗೆ ತೆಗೆದುಕೊಂಡರು.

ಲಾಲೂ ಅವರನ್ನೆಲ್ಲ ಒಂದುಕ್ಷಣ ದಿಟ್ಟಿಸಿ ನೋಡಿದರು. ಅವರ ಹಾವಭಾವ ಮತ್ತು ವಿಲಕ್ಷಣ ಅಭಿನಯ ನೋಡುವುದೇ ಒಂದು ಖುಷಿ. `ಆಪ್ ಕೆ ಪಾಸ್ ಗಾಡಿ ಹೈ ಕ್ಯಾ? ಆಪ್ ಕೊ ಕ್ಯೊಂ ಅಚ್ಛಾ ಸಡಕ್ ಚಾಹಿಯೇ?' ಎಂದು ಒಂದು ಬಾರಿ ಅಬ್ಬರಿಸಿ, `ನಿಮ್ಮನ್ನೆಲ್ಲ ಇಲ್ಲಿ ಯಾರು ಕರೆ ತಂದಿದ್ದಾರೆಂದು ನನಗೆ ಗೊತ್ತು. ಅವರ ಹತ್ತಿರ ಪೈಸೆ ವಸೂಲ್ ಮಾಡಿಕೊಂಡು ನಮ್ಮ ಪಕ್ಷಕ್ಕೆ ವೋಟ್ ಹಾಕಿ' ಎಂದು ಹೇಳಿದಾಗ ಅಲ್ಲಿದ್ದ ಮಹಿಳಾ ಮಣಿಗಳು ಕಾಣದಂತೆ ಮಾಯವಾದರು.

ಬಾಲೂರ್‌ಘಾಟ್ ಬಾಂಗ್ಲಾದೇಶದ ಗಡಿಯಲ್ಲಿದ್ದ ಜಿಲ್ಲೆ. ಜಿಲ್ಲಾ ಕೇಂದ್ರದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ರ‍್ಯಾಲಿ ಸಂಘಟಿಸಲಾಗಿತ್ತು. ಕುತೂಹಲದಿಂದ ನಾನೂ ಹೋಗಿದ್ದೆ. ಸುಮಾರು ಮೂರು ಗಂಟೆ ತಡವಾಗಿ ಬಂದ ಮಮತಾ, ಭಾಷಣ ಮಾಡಲು ಮೈಕ್ ಮುಂದೆ ಬಂದು ನಿಂತರು. ಸಭಿಕರಲ್ಲಿ ಒಬ್ಬ ಎದ್ದುನಿಂತು ಬಂಗಾಳಿಯಲ್ಲಿ ಏನೋ ಕೇಳಿದ. ಅದಕ್ಕೆ ಸಿಟ್ಟಿನಿಂದ ಕೂಗಾಡಿ, ರೇಗಾಡಿದ ಮಮತಾ, ಸಭೆಯನ್ನು ಬರ್ಖಾಸ್ತುಗೊಳಿಸಿ ಎಷ್ಟು ವೇಗದಿಂದ ವೇದಿಕೆ ಹತ್ತಿದ್ದರೋ ಅದಕ್ಕಿಂತ ವೇಗವಾಗಿ ಇಳಿದು ಹೊರಟೇ ಬಿಟ್ಟರು. ಹೆಚ್ಚೆಂದರೆ ಮೂರು ನಿಮಿಷದಲ್ಲಿ ಕಾರ್ಯಕ್ರಮ ಮುಗಿದಿತ್ತು. ಇಂತಹ ವಿಲಕ್ಷಣ ನಾಯಕರು ನಮ್ಮ ರಾಜ್ಯದಲ್ಲಿ ಹುಡುಕಿದರೂ ಸಿಗುವುದಿಲ್ಲ. ನಮಗೆ ಅಂತಹ ಅದೃಷ್ಟವಿಲ್ಲ.

ನಮ್ಮ ಚುನಾವಣಾ ಆಯೋಗ ಇಡೀ ವಿಶ್ವದಲ್ಲೇ ಒಂದು ಅತ್ಯಂತ ಸಮರ್ಥವಾದ ಸಾಂವಿಧಾನಕ ಸಂಸ್ಥೆ. ಅದರಷ್ಟು ವಿಶ್ವಾಸಾರ್ಹ ಮತ್ತು ಶಕ್ತಿಯುತವಾದ ಸಂಸ್ಥೆ ಮತ್ತೊಂದಿಲ್ಲ. ಆದ್ದರಿಂದಲೇ ಆಯೋಗ ಮತ್ತು ಅದರ ಅಧಿಕಾರಿಗಳನ್ನು ಕಂಡರೆ ಎಲ್ಲರಿಗೂ ಭಯ ಹಾಗೂ ಗೌರವ. ಚುನಾವಣಾ ಕಾರ್ಯಕ್ಕೆ ವಿವಿಧ ರಾಜ್ಯಗಳಿಂದ ಬಂದ ಅಧಿಕಾರಿಗಳ ಮಧ್ಯೆ ಆಯಾ ರಾಜ್ಯದ ಆಡಳಿತ ವ್ಯವಸ್ಥೆ, ರಾಜಕಾರಣಿಗಳ ತರಲೆ ಕಥೆಗಳೂ ಬಿಚ್ಚಿಕೊಳ್ಳುತ್ತವೆ.

ಚುನಾವಣಾ ವೀಕ್ಷಕನಾಗಿ ಬಹಳಷ್ಟು ಹೊರರಾಜ್ಯಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರತಿಯೊಂದು ಚುನಾವಣೆ ನಂತರವೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ನನ್ನ ನಂಬಿಕೆ ಮತ್ತು ಗೌರವ ಇಮ್ಮಡಿಯಾಗುತ್ತಾ ಹೋಗಿದೆ. ರಾಜ್ಯದಲ್ಲಿ ಈಗತಾನೆ ಮುಗಿದ ಚುನಾವಣೆಯ ವಿಷಯದಲ್ಲೂ ಈ ಮಾತು ನಿಜ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry