ಡಿಟಿಎಚ್ : ಸ್ಟುಡಿಯೊದಿಂದ ನೇರ ಮನೆಗೆ

7

ಡಿಟಿಎಚ್ : ಸ್ಟುಡಿಯೊದಿಂದ ನೇರ ಮನೆಗೆ

ಯು.ಬಿ. ಪವನಜ
Published:
Updated:
ಡಿಟಿಎಚ್ : ಸ್ಟುಡಿಯೊದಿಂದ ನೇರ ಮನೆಗೆ

ಮನೆಯ ತಾರಸಿಯ ಮೇಲೆ ಆಂಟೆನಾ ಜೋಡಿಸಿ ಟಿ.ವಿ.ಯಲ್ಲಿ ಕೇವಲ ಒಂದು ಚಾನೆಲ್ ವೀಕ್ಷಿಸುತ್ತಿದ್ದ ಕಾಲವೊಂದಿತ್ತು. ನಂತರ ಎರಡನೆ ಚಾನೆಲ್ ಬಂತು. ಅದಕ್ಕೆ ಪ್ರತ್ಯೇಕ ಕಿರಿದಾದ ಇನ್ನೊಂದು ಆಂಟೆನಾ ಬಂತು. ಉಪಗ್ರಹ ಪ್ರಸಾರ ಪ್ರಾರಂಭವಾದಾಗ ಮನೆಯ ಮಹಡಿಯ ಮೇಲೆ ಅತಿದೊಡ್ಡ ಪರವಲಯಾಕಾರದ (parabolic) ಡಿಶ್ ಆಂಟೆನಾ ಬಂದು ಕುಳಿತಿತು. ಇಲ್ಲೊಂದು ಸಮಸ್ಯೆ ಇತ್ತು. ಬೇರೆ ಬೇರೆ ಉಪಗ್ರಹಗಳಲ್ಲಿ ಬೇರೆಬೇರೆ ಚಾನೆಲ್‌ಗಳು ಲಭ್ಯವಿದ್ದವು. ಎಲ್ಲ ಚಾನೆಲ್‌ಗಳನ್ನು ವೀಕ್ಷಿಸಬೇಕಿದ್ದರೆ ಎರಡು ಮೂರು ಡಿಶ್ ಇಟ್ಟುಕೊಳ್ಳಬೇಕಿತ್ತು. ಇದನ್ನೇ ಒಂದು ಅವಕಾಶವಾಗಿ ಬಳಸಿಕೊಂಡು ಒಂದು ಹೊಸ ಉದ್ಯಮವೇ ಸೃಷ್ಟಿಯಾಯಿತು.ಮೂರು ನಾಲ್ಕು ಡಿಶ್‌ಗಳನ್ನು ಇಟ್ಟುಕೊಳ್ಳುವುದು, ಎಲ್ಲ ಡಿಶ್‌ಗಳಿಗೂ ಪ್ರತ್ಯೇಕ ಡಿಸೀವರ್ ಇಟ್ಟುಕೊಂಡು ಕೊನೆಗೆ ಎಲ್ಲ ರಿಸೀವರ್‌ಗಳಿಂದ ಬರುವ ಸಿಗ್ನಲ್‌ಗಳನ್ನು ಒಂದುಗೂಡಿಸಿ ಕೇಬಲ್ ಮೂಲಕ ಮನೆಮನೆಗಳಿಗೆ ತಲುಪಿಸುವ ವ್ಯವಸ್ಥೆ ಒಂದು ದೊಡ್ಡ ಉದ್ಯಮವೇ ಆಯಿತು. ಮನೆ ದೂರ ಆದಂತೆಲ್ಲ ಸಿಗ್ನಲ್ ಗುಣಮಟ್ಟ ಕಡಿಮೆ ಆಗುತ್ತಿತ್ತು. ಹಳ್ಳಿಗಳಲ್ಲಿ ಮನೆಮನೆಗೆ ಕೇಬಲ್ ಸಂಪರ್ಕ ನೀಡುವುದು ಸ್ವಲ್ಪ ಕಷ್ಟದ ಕೆಲಸ. ದಾರಿ ಮಧ್ಯದಲ್ಲಿ ಕೇಬಲ್ ತುಂಡಾಗುವುದು, ಕಡಿಮೆ ಗುಣಮಟ್ಟದ ಸಿಗ್ನಲ್ ಇವೆಲ್ಲ ಕೇಬಲ್‌ನಲ್ಲಿ ಸಾಮಾನ್ಯ. ಅದರ ಜೊತೆ ಕೇಬಲ್‌ವಾಲಾ ನೀಡಿದ ಚಾನೆಲ್ ಮಾತ್ರ ವೀಕ್ಷಿಸಬಹುದು. ನಮಗೆ ಬೇಕಿದ್ದ ಚಾನೆಲ್‌ಗಳಿಗೆ ಮಾತ್ರ ದುಡ್ಡು ಕೊಡುತ್ತೇನೆ ಎಂಬ ಸೌಲಭ್ಯ ಇಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಬಂದುದೇ ಡಿಟಿಎಚ್ (DTH = Direct To Home) ಎಂದರೆ ನೇರ ಮನೆಗೆ ಪ್ರಸಾರ.ಡೈರೆಕ್ಟ್ ಟು ಹೋಮ್ ಅರ್ಥಾತ್ ಡಿಟಿಎಚ್ ಉಪಗ್ರಹ ಪ್ರಸಾರದ ಆಧುನಿಕ ವಿಧಾನ. ಈ ಲೇಖನದ ಮೊದಲನೆಯ ಪ್ಯಾರಾದಲ್ಲಿ ವಿವರಿಸಿದ್ದು ಸ್ವಲ್ಪ ಹಳೆಯ ಅನಲಾಗ್ ವಿಧಾನ. ಅದರಲ್ಲಿ ಬಳಸುವ ಡಿಶ್ ಹತ್ತು ಹನ್ನೆರಡು ಅಡಿ ಅಥವಾ ಅದಕ್ಕೂ ದೊಡ್ಡದಿತ್ತು. ಈಗ ಬಳಕೆಯಾಗುತ್ತಿರುವುದು ಡಿಜಿಟಲ್ ವಿಧಾನ.ಇದರಲ್ಲಿ ಕ್ಯು(Ku) ಬ್ಯಾಂಡಿನಲ್ಲಿ ಟಿ.ವಿ. ಸಿಗ್ನಲ್‌ಗಳನ್ನು ಡಿಜಿಟೈಸ್ ಮಾಡಿ ಪ್ರಸಾರ ಮಾಡಲಾಗುತ್ತದೆ. ಕ್ಯು ಬ್ಯಾಂಡ್ ಬಳಸುವುದು ಚಿಕ್ಕ ಡಿಶ್. ಸುಮಾರು 18 ಇಂಚು ಗಾತ್ರದ್ದು. ಟಿ.ವಿ. ಕೇಂದ್ರದಿಂದ ಸಿಗ್ನಲ್‌ಗಳನ್ನು ಡಿಜಿಟೈಸ್ ಮಾಡಿ ಉಪಗ್ರಹಕ್ಕೆ ಕಳುಹಿಸಲಾಗುತ್ತದೆ. ಉಪಗ್ರಹದಿಂದ ಮರುಪ್ರಸಾರ ಆದ ಸಿಗ್ನಲ್‌ಗಳನ್ನು ಮನೆಯ ಮೇಲೆ ಅಳವಡಿಸಲಾದ ಚಿಕ್ಕ ಡಿಶ್ ಸ್ವೀಕರಿಸುತ್ತದೆ. ಈ ಡಿಶ್ ಪರವಲಯ ಆಕಾರದಲ್ಲಿರುತ್ತದೆ. ಪರವಲಯ ಆಕಾರದ ಡಿಶ್ ತನ್ನ ಮೇಲೆ ಬಿದ್ದ ತರಂಗಗಳನ್ನು ತನ್ನ ಕೇಂದ್ರದಲ್ಲಿರುವ ಗ್ರಾಹಕದ ಮೇಲೆ ಕೇಂದ್ರೀಕರಿಸುತ್ತದೆ. ಗ್ರಾಹಕವನ್ನು ಮನೆಯಲ್ಲಿರುವ ಡಿಟಿಎಚ್ ಪೆಟ್ಟಿಗೆಗೆ ಜೋಡಿಸಿರುತ್ತಾರೆ. ಈ ಪೆಟ್ಟಿಗೆಗೆ ಸಾಮಾನ್ಯ ಹೆಸರು ಸೆಟ್ ಟಾಪ್ ಬಾಕ್ಸ್ ಎಂದು. ಎಂದರೆ ಟಿ.ವಿ.ಯ ಮೇಲೆ ಇಡುವ ಪೆಟ್ಟಿಗೆ ಎಂದು ಅರ್ಥವಾಗುತ್ತದೆ. ಈಗ ಟಿ.ವಿ.ಗಳನ್ನು ಗೋಡೆಗೆ ನೇತು ಹಾಕಲಾಗುತ್ತಿದೆ. ಡಿಟಿಎಚ್ ಗ್ರಾಹಕ ಪೆಟ್ಟಿಗೆ ಪಕ್ಕದಲ್ಲಿ, ಕೆಳಗೆ ಅಥವಾ ಇನ್ನೊಂದು ಕಪಾಟಿನಲ್ಲಿ ಕುಳಿತಿರುತ್ತದೆ. ಅಂದ ಮೇಲೆ ಈ ಸೆಟ್ ಟಾಪ್ ಬಾಕ್ಸ್ ಎಂಬ ಬಳಕೆಯೇ ತಪ್ಪು.

ಡಿಟಿಎಚ್ ಹೆಚ್ಚುಗಾರಿಕೆಗಳು

ನಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೇಬಲ್‌ನವನು ಮಾಡುವಂತೆ ನಮಗೆ ಬೇಕಿರಲಿ ಇಲ್ಲದಿರಲಿ ಅವನು ನೀಡುವ ಎಲ್ಲ ಚಾನೆಲ್‌ಗಳಿಗೆ ಹಣ ನೀಡಬೇಕಾಗಿಲ್ಲ. ಎಲ್ಲ ಡಿಟಿಎಚ್ ಸೇವೆ ನೀಡುವವರು ಹಲವು ನಮೂನೆಯ ಪ್ಯಾಕೇಜ್‌ಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿಕೊಂಡ ಪ್ಯಾಕೇಜಿಗೆ ಮಾತ್ರ ಹಣ ನೀಡತಕ್ಕದ್ದು. ಡಿಟಿಎಚ್ ವಿಧಾನದಲ್ಲಿ ಟಿ.ವಿ. ಕಾರ‌್ಯಕ್ರಮಗಳನ್ನು ಪ್ರಸಾರ ಮಾಡುವುದು ಮಾತ್ರವಲ್ಲದೆ ಇನ್ನೂ ಹಲವು ನಮೂನೆಯ ಸೌಲಭ್ಯಗಳನ್ನು ನೀಡಬಹುದು.ಕೆಲವು ಡಿಟಿಎಚ್ ಸೇವೆ ನೀಡುವವರು ಇಂತಹ ಅಧಿಕ ಸೇವೆಗಳನ್ನೂ ನೀಡುತ್ತಿದ್ದಾರೆ. ತಮ್ಮದೇ ವಿಶೇಷ ಪ್ರಸಾರ ಕಾರ‌್ಯಕ್ರಮ ಮಾಡುತ್ತಿದ್ದಾರೆ. ಇವುಗಳಲ್ಲಿ ಬಹುಪಾಲು ಶಿಕ್ಷಣ, ಮಾಹಿತಿ, ಧಾರ್ಮಿಕ ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಡಿಟಿಎಚ್ ಬ್ಯಾಂಡಿನಲ್ಲಿ ಇರುವ ಖಾಲಿ ಬ್ಯಾಂಡ್‌ವಿಡ್ತ್‌ನಲ್ಲಿ ಅಂತರಜಾಲ ಸಂಪರ್ಕವನ್ನೂ ನೀಡಬಹುದು. ಆದರೆ ಸದ್ಯಕ್ಕೆ ಯಾರೂ ಇಂತಹ ಸೇವೆ ನೀಡುತ್ತಿಲ್ಲ. ಡಿಟಿಎಚ್ ಸಿಗ್ನಲ್ ಡಿಜಿಟಲ್ ಆಗಿರುವುದರಿಂದ ಉತ್ತಮವಾಗಿರುತ್ತದೆ. ಯಾವುದೇ ಕಿರಿಕಿರಿ (noise) ಇರುವುದಿಲ್ಲ. ಕೆಲವು ಡಿಟಿಎಚ್ ಸೇವೆ ನೀಡುವವರು ಹೈಡೆಫಿನಿಶನ್ ಚಾನೆಲ್‌ಗಳನ್ನೂ ನೀಡುತ್ತಿದ್ದಾರೆ. ನಿಮ್ಮಲ್ಲಿ ಹೈಡೆಫಿನಿಶನ್ ಟಿ.ವಿ. ಇದ್ದಲ್ಲಿ ಆ ಚಾನೆಲ್‌ಗಳಿಗೂ ಚಂದಾದಾರರಾಗಬಹುದು.

ಡಿಟಿಎಚ್ ಗ್ರಾಹಕ ಪೆಟ್ಟಿಗೆ

ಈ ಪೆಟ್ಟಿಗೆಯೂ ಹಲವು ನಮೂನೆ ಮತ್ತು ಸೌಲಭ್ಯಗಳಲ್ಲಿ ದೊರೆಯುತ್ತವೆ. ಮುಖ್ಯವಾಗಿ ಹೈಡೆಫಿನಿಶನ್ ಇದೆಯೋ ಇಲ್ಲವೋ, ರೆಕಾರ್ಡಿಂಗ್ ಸೌಲಭ್ಯ ಇದೆಯೋ ಇಲ್ಲವೋ, ಎಷ್ಟು ನಮೂನೆಯ ಔಟ್‌ಪುಟ್ ಇದೆ, ಇತ್ಯಾದಿ. ಹೈಡೆಫಿನಿಶನ್ ಸೌಲಭ್ಯ ಇರುವುದನ್ನೇ ಕೊಂಡುಕೊಂಡರೆ ಉತ್ತಮ. ರೆಕಾರ್ಡಿಂಗ್ ಸೌಲಭ್ಯ ಇದ್ದಲ್ಲಿ ಅದರಲ್ಲಿ ಒಂದು ಹಾರ್ಡ್‌ಡಿಸ್ಕ್ ಇರುತ್ತದೆ. ಅಂತೆಯೇ ಅದರ ಬೆಲೆಯೂ ಸುಮಾರು ನಾಲ್ಕೈದು ಸಾವಿರ ರೂ. ಜಾಸ್ತಿ ಇರುತ್ತದೆ. ಯಾವುದೇ ಡಿಟಿಎಚ್ ಪೆಟ್ಟಿಗೆಯಲ್ಲಿ ಯುಎಸ್‌ಬಿ ಡ್ರೈವ್ ಹಾಕಿ ಅದಕ್ಕೆ ರೆಕಾರ್ಡಿಂಗ್ ಮಾಡುವ ಸೌಲಭ್ಯ ಇರುವುದಿಲ್ಲ. ರೆಕಾರ್ಡಿಂಗ್ ಸೌಲಭ್ಯ ಇರುವ ಪೆಟ್ಟಿಗೆಯಲ್ಲೂ ಅದರಲ್ಲಿ ಅಡಕವಾಗಿರುವ ಹಾರ್ಡ್‌ಡಿಸ್ಕ್‌ಗೆ ಮಾತ್ರ ರೆಕಾರ್ಡ್ ಮಾಡಿಕೊಳ್ಳಬಹುದು. ಅದನ್ನು ಯುಎಸ್‌ಬಿ ಡ್ರೈವ್‌ಗಾಗಲಿ, ಗಣಕಕ್ಕಾಗಲೀ ಪ್ರತಿ ಮಾಡಿಕೊಳ್ಳುವಂತಿಲ್ಲ. ಈ ಸೌಲಭ್ಯ ಯಾರೂ ನೀಡಿಲ್ಲ, ನೀಡುವಂತಿಲ್ಲ. ಯಾಕೆಂದರೆ ಆಗ ಅದು ಕಾಪಿರೈಟ್ ಕಾಯಿದೆಯ ಉಲ್ಲಂಘನೆ ಆದಂತಾಗುತ್ತದೆ.

ಡಿಟಿಎಚ್ ಕೊಳ್ಳುವ ಮುನ್ನ

ಯಾವ ಡಿಟಿಎಚ್ ಕೊಳ್ಳುವುದು? ಮೊದಲನೆಯದಾಗಿ ಸೇವೆ ನೀಡುವವರು ಎಷ್ಟೆಲ್ಲ ಚಾನೆಲ್‌ಗಳನ್ನು ನೀಡುತ್ತಾರೆ, ಯಾವ ಪ್ಯಾಕೇಜಿಗೆ ಎಷ್ಟು ದರ ನಿಗದಿ ಮಾಡಿದ್ದಾರೆ ಎಂಬುದನ್ನು ಅಧ್ಯಯನ ಮಾಡಬೇಕು. ಹೈಡೆಫಿನಿಶನ್ ಸೌಲಭ್ಯಕ್ಕೆ ಹೆಚ್ಚಿಗೆ ಹಣ ನೀಡಬೇಕೇ? ಹೌದಾದಲ್ಲಿ ಎಷ್ಟು ಹೆಚ್ಚಿಗೆ ನೀಡಬೇಕು ಎಂಬುದೂ ಮುಖ್ಯವಾಗುತ್ತದೆ. ನಂತರ ಡಿಟಿಎಚ್ ಪೆಟ್ಟಿಗೆ ಬಗ್ಗೆ ಗಮನ ಕೊಡಬೇಕು. ರೆಕಾರ್ಡಿಂಗ್ ಸೌಲಭ್ಯ ಬೇಕಿದ್ದಲ್ಲಿ ಅದಕ್ಕೆ ಎಷ್ಟು ದರ, ಹೈಡೆಫಿನಿಶನ್‌ಗೆ ಎಷ್ಟು, ಎಷ್ಟು ನಮೂನೆಯ ಔಟ್‌ಪುಟ್‌ಗಳಿವೆ, ಇತ್ಯಾದಿ ಮಾನದಂಡಗಳ ಮೂಲಕ ಅಳತೆ ಮಾಡಬೇಕು. ನಾನು ಗಮನಿಸಿದಂತೆ ಹೈಡೆಫಿನಿಶನ್ ವಿಷಯದಲ್ಲಿ ತುಂಬ ಜಾಗರೂಕರಾಗಿರಬೇಕು. ಕೆಲವೇ ಕೆಲವು ಕಂಪೆನಿಯ ಡಿಟಿಎಚ್ ಪೆಟ್ಟಿಗೆಗಳಲ್ಲಿ ಪೂರ್ತಿ ಹೈಡೆಫಿನಿಶನ್ (1080) ಸೌಲಭ್ಯ ಇವೆ. ಒಂದು ಕಂಪೆನಿಯ ಡಿಟಿಎಚ್ ಪೆಟ್ಟಿಗೆ ಕೊಂಡುಕೊಂಡರೆ ಡಿಟಿಎಚ್ ಸೇವೆ ಕೂಡ ಅವರದೇ ಆಗುತ್ತದೆ. ಇದು ಹಲವು ವರ್ಷಗಳ ಕಾಲ ಬಳಸುವ ಪ್ರಕ್ರಿಯೆಯಾಗಿರುವುದರಿಂದ ಇದನ್ನು ಆಯ್ಕೆ ಮಾಡುವಾಗ ತುಂಬ ಎಚ್ಚರಿಕೆಯಿಂದ ಮಾಡಬೇಕು.ಗ್ಯಾಜೆಟ್ ಸಲಹೆ

ರಾಜೂರ(ಗಜೇಂದ್ರಗಡ)ದ ಡಾ. ಮಲ್ಲಿಕಾರ್ಜುನ ಕುಂಬಾರ ಅವರ ಪ್ರಶ್ನೆ: ನಮ್ಮ ಕ್ಯಾಮೆರಾವನ್ನು ಕಂಪ್ಯೂಟರ್‌ಗೆ ಜೋಡಿಸಿದಾಗ  ಕಂಪ್ಯೂಟರ್‌ನಲ್ಲಿದ್ದ ವೈರಸ್‌ಗಳು ಕ್ಯಾಮೆರಾದಲ್ಲಿರುವ ಮೆಮೊರಿ ಕಾರ್ಡಿನಲ್ಲಿ ಸೇರುತ್ತವೆ. ಅವು ಕ್ಯಾಮೆರಾವನ್ನು ಸೇರಿ ಅದನ್ನು ಹಾಳುಮಾಡುತ್ತವೆಯೇ? ವೈರಸ್‌ಗಳು ಮೆಮೊರಿ ಕಾರ್ಡಿಗೆ ಬಾರದಂತೆ ಏನು ಮಾಡಬೇಕು?

ಉ: ಗಣಕದ ವೈರಸ್‌ಗಳು ಕ್ಯಾಮೆರಾಗೆ ದಾಳಿ ಇಡಲಾರವು. ಮೆಮೊರಿ ಕಾರ್ಡ್‌ನಲ್ಲಿರುವ ಫೋಟೊಗಳನ್ನು ಕೆಡಿಸಬಲ್ಲವು. ಆದರೆ ಕ್ಯಾಮೆರಾಗೆ ಏನೂ ಮಾಡಲಾರವು. ಏಕೆಂದರೆ ಕಂಪ್ಯೂಟರ್ ವೈರಸ್‌ಗಳು ಒಂದು ನಿರ್ದಿಷ್ಟ ಕಾರ್ಯಾಚರಣ ವ್ಯವಸ್ಥೆಯಲ್ಲಿ ಮಾತ್ರ ಕೆಲಸ ಮಾಡಬಲ್ಲವು. ಗಣಕ ಮತ್ತು ಕ್ಯಾಮೆರಾಗಳ ಕಾರ್ಯಾಚರಣ ವ್ಯವಸ್ಥೆಗಳು ಬೇರೆ ಬೇರೆ. ವೈರಸ್ ಬರದಂತೆ ಮಾಡಲು ನಿಮ್ಮ ಗಣಕವನ್ನು ಸೂಕ್ತ ವೈರಸ್ ನಿರೋಧಕ ತಂತ್ರಾಂಶ ಬಳಸಿ ಸ್ವಚ್ಛ ಮಾಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry