ಗುರುವಾರ , ಮೇ 6, 2021
25 °C

ಡಿಸೆಂಬರ್ 21: ಬ್ರಹ್ಮಾಂಡದ ಹೊಸ ಯುಗ ಆರಂಭವೇ?

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಪತ್ರಿಕೆಗಳಲ್ಲಿ, ಮಾಧ್ಯಮದ ಚಾನಲ್‌ಗಳಲ್ಲಿ, ಅಂತರ್ಜಾಲದಲ್ಲಿ-ಎಲ್ಲೆಲ್ಲೂ ಅದೇ ಆತಂಕ: ಡಿಸೆಂಬರ್ 21, 2012ರಂದು ಏನಾಗಬಹುದು?ದಕ್ಷಿಣ ಅಮೆರಿಕದ ಪ್ರಾಚೀನ ಮಾಯನ್ ಜನಾಂಗದವರ ಕಾಲಜ್ಞಾನದ ಪ್ರಕಾರ ಕಳೆದ 1,521ವರ್ಷಗಳಿಂದ ಚಾಲತಿಯಲ್ಲಿದ್ದ ನಾಲ್ಕನೆಯ ಸೂರ್ಯಯುಗ ಮುಗಿದು ಐದನೆಯ ಸೂರ್ಯನ ಯುಗ ಶುರುವಾಗಬೇಕು. ಈ ಭವಿಷ್ಯವಾಣಿಯ ಅಂತರಾರ್ಥದ ಬಗ್ಗೆ ಮಾಯನ್ ಜನಾಂಗದವರಲ್ಲೇ ಏಕಮತವಿಲ್ಲ. ಒಬ್ಬ ಮೆಕ್ಸಿಕನ್ ಹಿರೇಕನ ಹೇಳಿಕೆಯನುಸಾರ ಮಾಯನ್ ಜನಾಂಗದ ಕಾಲಜ್ಞಾನದಲ್ಲಿ ಆ ನಿರ್ಣಾಯಕ ದಿನ ಏನಾಗುವುದೆಂಬುದನ್ನು ಸ್ಪಷ್ಟವಾಗಿ ಬರೆದಿಡಲಾಗಿತ್ತು.ಆದರೆ ಸ್ಪೇನಿನ ವಸಾಹತುಶಾಹಿ ದಾಳಿಕಾರರ ಬರ್ಬರ ಹಲ್ಲೆಯ ಸಮಯದಲ್ಲಿ ಅವರ ಜ್ಞಾನರಾಶಿಯನ್ನು ವ್ಯಾಪಕವಾಗಿ ಧ್ವಂಸ ಮಾಡಿದ್ದರಿಂದ ಮಾಯನ್ ಜನಾಂಗದ ಸಾಮೂಹಿಕ ಜ್ಞಾನದ ಗ್ರಂಥರಾಶಿಯ ತುಣುಕುಗಳು ಮಾತ್ರ ಉಳಿದಿವೆ. ಅವುಗಳಲ್ಲಿ ಕೆಲವು ಸ್ಥೂಲ ವಿವರಗಳನ್ನು ಕಾಣಬಹುದೇ ಹೊರತು ಪೂರ್ಣವಿವರಗಳನ್ನು ಪಡೆಯುವುದು ಅಶಕ್ಯ. ಅಷ್ಟೇ ಅಲ್ಲ. ಆ ಪ್ರಾಚೀನ ನಾಗರೀಕತೆಯ ಲಿಪಿಯನ್ನು ಭಾಗಶಃ ಮಾತ್ರ ಅರ್ಥವಿಸಲಾಗಿದೆ. ಭವಿಷ್ಯದ ಅಪೂರ್ಣ ತಿಳುವಳಿಕೆಗೆ ಇದೂ ಒಂದು ಕಾರಣ. ಆದರೆ ಬಹಳ ಭಿನ್ನವಾದ ಮಾಯನ್ ಕಾಲಮಾನವನ್ನು ನಮ್ಮ ಕ್ರಿಸ್ತಮಾನಕ್ಕೆ ಅನುವಾದಿಸಿಕೊಂಡರೆ  ಡಿಸೆಂಬರ್ 21, 2012ರಂದು ಬ್ರಹ್ಮಾಂಡದ ಇತಿಹಾಸದ ಹಳೆಯ ಯುಗ ಕೊನೆಗೊಂಡು ಹೊಸ ಯುಗ ಶುರುವಾಗುತ್ತದೆಂಬುದು ಮಾಯನ್ನರ ಸರ್ವಾನುಮತದ ನಂಬಿಕೆ.ಭಿನ್ನಾಭಿಪ್ರಾಯವಿರುವುದು ಹೊಸ ಆದಿ ಅಂತ್ಯಗಳ ತೇದಿಯ ಬಗ್ಗೆ ಅಲ್ಲ. ಆಗ ನಡೆಯಬಹುದಾದ ಘಟನಾಳಿಗಳ ಬಗ್ಗೆ.

ಒಂದು ಅರ್ಥದಲ್ಲಿ ನಮ್ಮ ಯುಗದ ಭಿನ್ನ ಭಿನ್ನ ನಿಲುವುಗಳ ವ್ಯಕ್ತಿಗಳು ಗುಂಪುಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ಅದನ್ನು ಅರ್ಥವಿಸುತ್ತಿದ್ದಾರೆ. ಆಯಾ ವ್ಯಕ್ತಿ ಅಥವಾ ಗುಂಪುಗಳ ಮೊದಲುಕೊನೆಗಳ ಕಲ್ಪನೆಗಳಿಗೆ ಮಾಯನ್ ಭವಿಷ್ಯವಾಣಿ ಒಂದು ಕನ್ನಡಿಯೋ ನೆವವೋ ಆಗಿದೆ.ಒಂದು ಕಡೆ ನಿರಾಶಾವಾದಿಗಳು ಡಿಸೆಂಬರ್ 21ಕ್ಕೆ ಜಗತ್ತಿನ ಅಳಿವು ಖಚಿತವೆನ್ನುತ್ತಿದ್ದಾರೆ. ವೈಜ್ಞಾನಿಕ ದೃಷ್ಟಿಕೋನದ ಕೆಲವರು ಖಗೋಳವಿಜ್ಞಾನದ ವಿವರಗಳಲ್ಲಿ  ತಮ್ಮ ಭೀತಿಗೆ ಪುರಾವೆಗಳನ್ನು ಹುಡುಕುತ್ತಿದ್ದಾರೆ.ಆ ದಿವಸ ನಮ್ಮ ಸೌರಮಂಡಲ ಭೌತಿಕ ವಿಶ್ವದ ನುಂಗಣ್ಣನಾದ ಒಂದು ಧಡೂತಿ ಕಪ್ಪು ರಂಧ್ರದೊಳಗೆ ಹೋಗಿ ನಾವರಿತ ವಿಶ್ವವೇ ಫನಾ ಆಗಬಹುದೆಂದು, ಅಥವಾ ಸೂರ್ಯ ಮತ್ತು ಇತರ ಗ್ರಹಗಳು ಹೊಸದೊಂದು ಗ್ರಹದ ಜೊತೆಗೆ ಒಂದೇ ರೇಖೆಯಲ್ಲಿ ಬಂದಾಗ ಜಗ ಅಳಿದು ಹೋಗುವುದೆಂದು ಮುನ್ನುಡಿಯುತ್ತಿದ್ದಾರೆ. ಇಬ್ಬರು ಸೂರ್ಯರು ಒವ್ಮೆುಗೇ  ಸೌರಮಂಡಲವನ್ನಾವರಿಸಿ ಆ ಶಾಖದಿಂದ ಸರ್ವನಾಶವಾಗಬಹುದಂತೆ. ದಿನಗಟ್ಟಲೆ ಸೂರ್ಯ ನಾಪತ್ತೆಯಾಗಿ, ಪ್ರಕೃತಿ ವಿಕೋಪಗಳು ವಿಸ್ಫೋಟಿಸಿ, ಪೃಥ್ವಿಯ ಸಂಪರ್ಕ ವ್ಯವಸ್ಥೆಗಳು ಅಸ್ತವ್ಯಸ್ತವಾಗಿ, ಅರಾಜಕತೆ ವ್ಯಾಪಿಸಿ, ಇಡೀ ಮಾನವ, ಪ್ರಾಣಿ ಸಂಕುಲ ತತ್ತರಿಸಿಹೋಗಬಹುದಂತೆ. ಚಕ್ರೀಯ ಸ್ವರೂಪದ ಮಾಯನ್ ಕಾಲವ್ಯವಸ್ಥೆಯನ್ನು ಸರಳರೇಖಾತ್ಮಕ ಗತಿಯ ಯಹೂದೀಕಸ್ತ ಕಾಲಮಾನಕ್ಕೆ ತಕ್ಕಂತೆ ಬದಲಿಸಿಕೊಂಡು ಆ ದೃಷ್ಟಿಕೋನದವರು ಮಾಯನ್ ಭವಿಷ್ಯವಾಣಿಯಲ್ಲಿ ತಮ್ಮ ಧರ್ಮದ ಅಂತ್ಯದದಿವಸವನ್ನು ಕಾಣುತ್ತಿದ್ದಾರೆ. ಪಡುವಣದ ನೋಸ್ತ್ರದಾಮಸ್‌ನ ಕಾಲಜ್ಞಾನದಲ್ಲಿ  ನಂಬುಗೆಯಿರಿಸಿದ ಮಂದಿ ತಮ್ಮ ಗುರುವೂ ಅದೇ ದಿವಸ ಜಗ ಅಳಿಯುವುದೆಂದು ಹೇಳಿದ್ದನೆಂದು ಸಾಧಿಸಹೊರಟಿದ್ದಾರೆ.ಇದಕ್ಕೆ ವ್ಯತಿರಿಕ್ತವಾಗಿ, ಜಗದಳಿವಿನ ಬಗ್ಗೆ ಪುಕಾರು ಹಬ್ಬಿಸುತ್ತಿರುವ ಪ್ರಕ್ರಿಯೆಯೇ ಅಮೆರಿಕನ್ ಮೂಲದ ಒಂದು ಅಂತರರಾಷ್ಟ್ರೀಯ ಕುತಂತ್ರ ವೆನ್ನುತ್ತಿದ್ದಾರೆ ಆಶಾವಾದಿಗಳು. ಅವರ ಪ್ರಕಾರ 2009ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರ `2012 ` ಈ ಕುತಂತ್ರದ ಒಂದು ಮುಖ್ಯ ಅಭಿವ್ಯಕ್ತಿ. ಅತ್ಯಂತ ರಂಜಕವಾದ ದೃಶ್ಯಾವಳಿಗಳಿಂದ ಕೂಡಿದ ಈ ಬೃಹತ್ ಬಜೆಟ್ಟಿನ ಸಿನಿಮಾದಲ್ಲಿ ಕಥಾನಾಯಕ ಚೀಣಾದ ಸಮಾನಮನಸ್ಕರ ಸಹಕಾರದಿಂದ ಬೈಬಲ್ಲಿನ ನೋವಾನ ನೌಕೆಯನ್ನು ಹೋಲುವ ನೌಕೆಯೊಂದನ್ನು ನಿರ್ಮಿಸಿ ಅಮೆರಿಕನ್ನರ ಅಮೂಲ್ಯ ಜೀವಗಳನ್ನು ವಿಶ್ವವ್ಯಾಪಿ ವಿನಾಶದಿಂದ ಉಳಿಸುವ ಪ್ರಯತ್ನದಲ್ಲಿ ತೊಡಗಿರುತ್ತಾನೆ. 2000 ಮಿಲಿಯನ್ ಡಾಲರುಗಳ ಖರ್ಚಿನಿಂದ ನಿರ್ಮಾಣವಾದ ಈ ಚಿತ್ರ ಒಳ್ಳೆಯ ವಿಮರ್ಶೆ ಸಿಗದಿದ್ದರೂ ಜನಪ್ರಿಯವಾಗಿ 7700 ಮಿಲಿಯನ್ ಡಾಲರುಗಳನ್ನು ಸಂಪಾದಿಸಿಕೊಟ್ಟಿತು.ಜಗತ್ತಿನ ಇಂದಿನ ಜ್ವಲಂತ ಸಮಸ್ಯೆಗಳಾದ ಪರ್ಯಾವರಣನಾಶದ ತಥ್ಯಗಳಿಂದ ನಮ್ಮ ಗಮನವನ್ನು ದಾರಿತಪ್ಪಿಸುವ ಉದ್ದೇಶದಿಂದ ಖಳನಾಯಕ ಶಕ್ತಿಗಳು ಈ ಕಾರಸ್ಥಾನ ನಡೆಸಿವೆಯೆಂಬುದು ಅವರ ವಿಶ್ಲೇಷಣೆ.ಆಶಾವಾದಿಗಳಲ್ಲಿ ಕೆಲವರು ಫ್ಯಾಷನ್ನಿನಲ್ಲಿರುವ ಆಧ್ಯಾತ್ಮಿಕ ಪಂಥಗಳ ವಕ್ತಾರರು. ಅವರ ದೃಷ್ಟಿಯಲ್ಲಿ ಆ ದಿವಸ ಸತ್ಯಯುಗದ ಪ್ರಾರಂಭ. ಕುಂಭರಾಶಿಯ ನಕ್ಷತ್ರವ್ಯೆಹದಲ್ಲಿ ಸೌರಮಂಡಲ ಪ್ರವೇಶಿಸಿ ಸುವರ್ಣಯುಕ್ಕೆ ಕಾಲಿಡುವ ಶುಭ ಅವಸರ ಡಿಸೆಂಬರ್ 21ರಂದು. ಅವೊತ್ತಿನಿಂದ ಮಾನವಚೇತನದಲ್ಲಿ ಮಹಾನ್ ಜಿಗಿತವುಂಟಾಗಿ ಜಾಗತಿಕ ಚೇತನವು ಏಳಿಗೆಯ ಇನ್ನೊಂದು ಎತ್ತರವನ್ನು ತಲುಪುತ್ತದೆ. ಅವರು ನಂಬಿದ ಗುರುಗಳು ನಂಬಿದ ಅಪೌರುಷೇಯ ಗ್ರಂಥಗಳಲ್ಲಿ ಪ್ರಸ್ತುತದ ಬೆಳವಣಿಗೆಗಳ ಸವಿವರ ಚಿತ್ರಕಥೆಯನ್ನು ಯಾವತ್ತೋ ಹೇಳಿಯಾಗಿತ್ತು.ಈ ನಡುವೆ ವಾಸ್ತವವಾದಿಗಳ ನಿಲುವು ಬೇರೆಯದೇ ಆಗಿದೆ. ಆಶಾವಾದಿಗಳು ಮತ್ತು ನಿರಾಶಾವಾದಿಗಳು ಕೊಡುತ್ತಿರುವ ಕಾರಣಗಳು ಅವೈಜ್ಞಾನಿಕವೂ ಅತಾರ್ಕಿಕವೂ ಆಗಿವೆ. ಆಡುಮಾತಿನಲ್ಲಿ ಹೇಳಬೇಕೆಂದರೆ ಅವರೆಲ್ಲಾ ಬಾಯಿಗೆ ಬಂದಂತೆ ಬಂಡಲ್ ಬಿಡುತ್ತಿದ್ದಾರೆ. ಇಂಥಾ ಭವಿಷ್ಯವಾಣಿಗಳನ್ನು ಸಮರ್ಥಿಸುವ ಯಾವ ವೈಜ್ಞಾನಿಕ ಪುರಾವೆಗಳೂ ಇಲ್ಲ.ಅತ್ತ ಜ್ಞಾನಿಗಳೂ ಅಲ್ಲದ ಇತ್ತ ವಿಜ್ಞಾನಿಗಳೂ ಅಲ್ಲದ ನಮ್ಮಂಥ ಶ್ರೀಸಾಮಾನ್ಯರು ಇವನ್ನೆಲ್ಲಾ ಹೇಗೆ ನೋಡಬೇಕು?ಆದಿಮಕಾಲದಲ್ಲಿ ಆಕಾಶದ ನಕ್ಷತ್ರ ವಿಸ್ಮಯಗಳನ್ನು ಒಗಟುಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ ಶುರುವಾದಾಗಲಾಯ್ತು ಆಧುನಿಕ ಕಾಲದ ವರೆವಿಗೂ ಜನಾಂಗಗಳು ತಮ್ಮ ಬಗ್ಗೆ ಜಗತ್ತಿನ ಬಗ್ಗೆ ಕತೆ ಕಟ್ಟತೊಡಗಿದರು. ತಾವು ಮತ್ತು ಇದಿರುಗಳನ್ನು ಪೂರ್ತಿ ಬೇರ್ಪಡಿಸಲಾಗದ ಮನಸ್ಥಿತಿಯಲ್ಲಿ ತಮ್ಮ ಮರುಕಳಿಸುವ ಜೈವಿಕ ಘಟನೆಗಳನ್ನು (ಉಸಿರಾಟದ, ಋತುಮಾನಗಳ, ಹಗಲಿರುಳ ಚಕ್ರೀಯ ಗತಿಗಳನ್ನು) ಮೊದಲು-ನಡು-ಕೊನೆಗಳಿರುವ ಕತೆಯ ರೂಪದಲ್ಲಿ ದಂತಕತೆ, ಪುರಾಣಗಳನ್ನು ಅವುಗಳನ್ನು ಅಭಿನಯಿಸುವ ಆಚರಣೆಗಳನ್ನೂ ಅವುಗಳ ಮೇಲೆ ನಿಂತ ನಂಬುಗೆಯ ವ್ಯವಸ್ಥೆಗಳನ್ನೂ ನಿರ್ಮಿಸಿಕೊಳ್ಳತೊಡಗಿದರು.ಏಯಾ, ಆಫ್ರಿಕಾ. ವಸಾಹತುಪೂರ್ವ ಅಮೆರಿಕಗಳ ಸಂಸ್ಕೃತಿಗಳು ಈ ಕಥೆಗಳಿಗೆ ಪ್ರಧಾನವಾಗಿ ಚಕ್ರೀಯ ರಚನೆಯನ್ನು ನೀಡಿದವು. ಋತುಚಕ್ರಗಳಂತೆ, ದಿವಾರಾತ್ರಿಗಳ ಚಕ್ರದಂತೆ ಯುಗಚಕ್ರಗಳೂ ಪುನರುಕ್ತಗೊಳ್ಳುವವೆಂದು ನಂಬಿದ್ದರು. ಆದರೆ ಇಂದಿನ ನಾಗರೀಕತೆಯ ತನ್ನರಿವನ್ನು ವಸಾಹತುಯುಗದ ನಂತರ ಗಹನವಾಗಿ ಪ್ರಭಾವಿಸಿರುವ ದೃಷ್ಟಿಕೋನ ಯಹೂದೀಮೂಲದಿಂದ ಬಂದದ್ದು. ಅದರ ಪ್ರಕಾರ ಕಾಲವೊಂದು ಬಾಣದಂತೆ. ಅದರ ಚಲನೆ ಸರಳರೇಖಾತ್ಮಕವಾದದ್ದು. ಆಧುನಿಕ ವಿಜ್ಞಾನ ಯಹೂದೀಮೂಲ ಧಾರ್ಮಿಕ ನಿಲವುಗಳ ಕಡುವಿರೋಧಿಯಾಗಿ ಮೂಡಿದ್ದು ನಿಜ. ಆದರೆ ವಿಜ್ಞಾನದಲ್ಲೂ ಆ ಪರಂಪರೆಯ ಕಾಲದ ಕಲ್ಪನೆ ಆಳವಾಗಿ ಬೇರೂರಿತ್ತು. ಪಡುವಣದ ವಿಜ್ಞಾನಯುಗದ ಬುನಾದಿಯಾದ ವಿಕಾಸಯುಗದ ಹೊಸಿಲಿನಲ್ಲಿ ನಿಂತ ಇಂಗ್ಲೆಂಡಿನ ಜಾನ್‌ಡನ್ ಕವಿ ಸರಳರೇಖಾತ್ಮಕ ಕಾಲಕಲ್ಪನೆ ಉಂಟುಮಾಡಿದ ತಳಮಳವನ್ನು ಹೀಗೆ ಹೇಳುತ್ತಾನೆ:ಎಷ್ಟು ದುರ್ಬಲ ಮಾನವನ ಶಕ್ತಿಗಳು!ಕಳೆದೊಂದು ಗಂಟೆಯನ್ನೂ ವಾಪಸ್ ತರಲಾರವುಆಧುನಿಕ ವಿಜ್ಞಾನದ ಮೂಲಭೂತ ನಿಯಮಗಳಾದ ಥರ್ಮೋಡೈನಾಮಿಕ್ಸ್‌ನ ಎರಡನೆ ನಿಯಮ ಕಾಲದ ರೇಖಾತ್ಮಕ ಕಲ್ಪನೆಯ ಮೇಲೆ ನಿಂತದ್ದು. ಹಾಗೆಯೇ ವಿಜ್ಞಾನಿಗಳು ಬಹುಮಟ್ಟಿಗೆ ಒಪ್ಪುವ ಬ್ರಹ್ಮಾಂಡದ ಸೃಷ್ಟಿ ಸಿದ್ಧಾಂತವಾದ ಜೇಮ್ಸ ಜೀನ್ಸ್‌ನ ವಿಕಾಸಮುಖಿಯಾದ ವಿಶ್ವಕಲ್ಪನೆಗೂ ಅದೇ ಆಧಾರ. ಯಹೂದೀ ಧರ್ಮಮೂಲದವರು ನಂಬಿದ ಸರಳರೇಖಾತ್ಮಕ ಕಾಲದ ಕಲ್ಪನೆಯ ಅಡಿಪಾಯದ ಮೇಲೆ ಕಟ್ಟಲಾದ ಜನಾಂಗಗಳ ನೈತಿಕ, ಸಾಮಾಜಿಕ, ಕಲಾತ್ಮಕ ನಿಲವುಗಳನ್ನು ವಸಾಹತುಶಾಹಿ ಯುಗದಲ್ಲಿ ಕಾಲಚಕ್ರದ ಬುನಾದಿಯ ಕಲ್ಪನೆಗಳನ್ನು ಹೊಂದಿದ್ದ ಮೂರನೆ ಜಗತ್ತಿನ ರಾಷ್ಟ್ರಗಳ ಮೇಲೆ ಬರ್ಬರ ರೀತಿಯಲ್ಲಿ ಹೇರಲಾಯಿತೆಂದು ಮೆಕ್ಸಿಕನ್ ಕವಿ, ಚಿಂತಕ ಅಕ್ತೇವಿಯೋ ಪಾಜ್ ಮತ್ತು ನೈಜೀರಿಯನ್ ನಾಟಕಕಾರ, ಚಿಂತಕ ವೊಲೆ ಷೊಯಂಕಾನ ವಾದ. ಈ ಎರಡು ಪರಸ್ಪರ ಕಾಲಕಲ್ಪನೆಗಳ ಮಹಾಸಮರಕ್ಕೆ ವಸಾಹತುಗಳ ಚೇತನ ಹೇಗೆ ರಣಾಂಗಣವಾಯಿತೆಂಬುದನ್ನು ಆ ಜನಾಂಗಗಳ ಸೂಕ್ಕ್ಷ್ಮಕಾವ್ಯಾಭಿವ್ಯಕ್ತಿಗಳಲ್ಲಿ ಮತ್ತೆಮತ್ತೆ ಕಾಣಬಹುದು.ಕನ್ನಡದಿಂದಲೇ ಒಂದು ಉದಾಹರಣೆ ಕೊಡಬೇಕೆಂದರೆ ಬೇಂದ್ರೆಯವರ  ಯುಗಾದಿ  ಮಾಯಕ ಸಾಲುಗಳು ನೆನಪಾಗುತ್ತವೆ:

ಒಂದೆ ಒಂದು ಬಾಳಿನಲ್ಲಿಒಂದೆ ಹುಟ್ಟು ಒಂದೆ ಸಾವುನಮಗದಷ್ಟೇ ಏತಕೆ?ಕಾಲದ ಈ ಎರಡೂ ಕಲ್ಪನೆಗಳೂ ಅನುಭವಾಧಾರಿತವೇ. ಋತುಗಳ, ಹಗಲಿರುಳ, ಕಡಲುಬ್ಬರ ಇಳಿತಗಳ, ಜೀವನ-ಮರಣ ಚಕ್ರಗಳ ಪುನರುಕ್ತಿಗಳು ಹೇಗೆ ಅನುಭವಮೂಲವೋ ಹಾಗೇ ಬಾಲ್ಯದಿಂದ ಮುಪ್ಪಿನವರೆಗಿನ, ಹುಟ್ಟಿನಿಂದ ಸಾವಿನವರೆಗಿನ ಏಕಮುಖ ಚಲನೆಯೂ ಅನುಭವಾಧಾರಿತ. ಈ ಎರಡು ತುದಿಗಳ ನಡುವೆ ಜನಾಂಗಗಳು ತಮ್ಮ ಕತೆಯನ್ನೂ ಜಗತ್ತಿನ ಕತೆಯನ್ನೂ ಕಟ್ಟಿಕೊಳ್ಳುತ್ತಲೇ ಇರುತ್ತವೆ. ಈ ಕಥಾನಿರ್ಮಿತಿ ದಂತಕತೆಗಳಲ್ಲಿ, ಬಗೆಬಗೆಯ ಪುರಾಣಗಳಲ್ಲಿ, ಸಾಹಿತ್ಯ-ಕಲೆಗಳಲ್ಲಿ ಜರುಗುತ್ತಲೇ ಇರುತ್ತವೆ.ಕತೆ ಕತೆಯಾಗಬೇಕಾದರೆ ಅದಕ್ಕೊಂದು ಮೊದಲು, ಒಂದು ನಡು, ಒಂದು ಕೊನೆ ಇರಲೇಬೇಕು. ಕತೆಗಳೂ ಕಲಾನುಭವದ ಶಿಶುಗಳು. ಪುನರುಕ್ತಿಗೊಳ್ಳುವ ಹಾಗೂ ಪುನರುಕ್ತಿಗೊಳ್ಳದ ಕಾಲಕಲ್ಪನೆಗಳ ತಾಕಲಾಟವಿಲ್ಲದ ಯಾವ ಕತೆಯೂ ನನಗೆ ನೆನಪಾಗುತ್ತಿಲ್ಲ. ಕತೆಗಳನ್ನು ಹೇಳುವರು ಬರೀ ಕತೆಗಾರರು ಮಾತ್ರವಲ್ಲ. ವಿಜ್ಞಾನಿಗಳು, ಇತಿಹಾಸಕಾರರು, ಮಾಧ್ಯಮಕರ್ತರು ಎಲ್ಲರೂ ಕತೆ ಹೇಳುವವರೇ. ಆದರೆ ಕತೆಯ ಕಾಲರಚನೆಯಲ್ಲಿ  ಅವರಿಗೆ ಮೇಲೆ ಹೇಳಿದ ಕಾಲಕಲ್ಪನೆಗಳಲ್ಲಿ ಒಂದರ ಅಥವಾ ಅವುಗಳ ವಿವಿಧ ಪ್ರಮಾಣದ ಮಿಶ್ರಣದ ಆಯ್ಕೆ ಸಾಧ್ಯ.ಕತೆ ಕೊನೆಗೊಳ್ಳುವ ಸಮಯದಲ್ಲಿ ಘಟನೆಗಳು, ಸಂಘರ್ಷಗಳು, ಸಮಸ್ಯೆಗಳು ತಾರಕಕ್ಕೆ ಹೋಗುತ್ತವೆ. ಅದರಲ್ಲೆೀ ಕತೆಯ ಸ್ವಾರಸ್ಯ. ಅದೇ ಥರ ಜನಾಂಗದ ನಿಜ ಬದುಕಿನಲ್ಲಿ ಅಭೂತಪೂರ್ವ ಸಂಘರ್ಷಗಳು, ತೀವ್ರಬದಲಾವಣೆಗಳು ಬರುವ ಹಂತಗಳಲ್ಲಿ  ಕೊನೆಗೆ ಹೆಚ್ಚಿನ ಒತ್ತು ಸಿಗತೊಡಗುತ್ತದೆ. ಪರಿಚಿತ ದೃಷ್ಟಿಕೋನದ ತೆಕ್ಕೆಗೆ ಸಿಗದ ಸಂದರ್ಭಗಲ್ಲಿ ಅಂತ್ಯಕಥನಗಳು ಪ್ರಬಲವಾಗುತ್ತವೆ. ಒಂದು ಪರಿಚಿತ, ಪಾರಂಪರಿಕ ಮೌಲ್ಯಜಗತ್ತನ್ನು ಅಪರಿಚಿತ ಮೌಲ್ಯಜಗತ್ತು ಬರ್ಬರ ರೀತಿಯಲ್ಲಿ ಆಕ್ರಮಿಸತೊಡಗಿದಾಗ ಅಮತ್ಯಕಥನಗಳು ನಿರಾಶಾವಾದದ ಮುಖವಾಣಿಯಾಗುತ್ತವೆ.  ಆದರೆ ಮಾನವಚೇತನದಲ್ಲಿ ಆಸೆ ನಿರಾಸೆಗಳು ಹಗಲಿರುಳುಗಳಂತೆ, ರಾಗದ್ವೇಷಗಳಂತೆ ನಿರಂತರ ಜೊತೆಗಾರರಾದ್ದರಿಂದ ನಿರಾಸೆಯ ಬಸಿರಿನಲ್ಲಿ ಆಶಾವಾದೀ ಸಂರಚನೆಗಳೂ ಜನಿಸುತ್ತವೆ. ಯುಗಾಂತದ ಕಥನಗಳ ಜೊತೆಜೊತೆಗೇ ಯುಗಾದಿಯ ಕಥನಗಳೂ ಪ್ರಾದುರ್ಭವಿಸುತ್ತವೆ.ನಮ್ಮ ವ್ಯಕ್ತಿಗತ ಬದುಕಿನಲ್ಲಿ  ಆತ್ಯಂತಿಕ ಕ್ಷಣಗಳು ಬಂದುಹೋಗುವ ಹಾಗೇ ನಮಗೆ ಗೊತ್ತಿರುವ ಇತಿಹಾಸದಲ್ಲೂ ಆತ್ಯಂತಿಕ ಸಂದರ್ಭಗಳು ಬಂದು ಹೋಗುತ್ತವೆ. ಅವುಗಳ ಪ್ರೇರಣೆಯಿಂದ ಬಂದ ಯುಗಾಂತ-ಯುಗಾದಿಗಳ ಕಥನಗಳು, ಅವುಗಳ ನಡುವಿನ ತೀವ್ರ ಪೈಪೋಟಿ ಸಹಜವೇ.ಉದಾಹರಣೆಗೆ ಬಂಡವಾಳಯುಗದ ವಿಜ್ಞಾನದ ಪ್ರಗತಿಯಲ್ಲಿ ನಿರಾಶಾವಾದಿಯಾದ ಮಾಲ್ತಸ್ ದುರ್ಗತಿಯನ್ನು ಕಂಡ. ಆದರೆ ಆಶಾವಾದಿಯಾದ ಕಾರ್ಲ್‌ಮಾರ್ಕ್ಸ್ ಭರವಸೆಯನ್ನು ಕಂಡ.ನಮ್ಮ ನವಉದಾರವಾದೀ ಯುಗದಲ್ಲಿ ಜಗತ್ತಿನ ಅಂತರ್ವಿರೋಧಗಳು ಎಂದಿಗಿಂತಲೂ ತೀವ್ರವಾಗಿವೆ. ಅಭೂತಪೂರ್ವ ಯಶಸ್ಸಿನ, ಸಂಪತ್ತಿನ ರೋಫು ಹಾಕುತ್ತಿರುವ ಗೋಳೀಕರಣದ ಯುಗದಲ್ಲಿ ನಮ್ಮ ನದಿಗಳು ಮಾರಾಟವಾಗುತ್ತಿವೆ. ನಮ್ಮ ಪ್ರಾಣಿ ಮತ್ತು ಸಸ್ಯಲೋಕಗಳು ಜರ್ಜರಿತವಾಗುತ್ತಿವೆ. ಮನೆಗಳು, ಸಮುದಾಯಗಳು, ವ್ಯಕ್ತಿತ್ವಗಳು ಚಿಂದಿಚಿಂದಿಯಾಗುತ್ತಿವೆ. ಕಾಡುಗಳು ಕೊರಡುಗಳಾಗುತ್ತಿವೆ. ಉಸಿರಾಡುವ ಗಾಳಿ, ಕುಡಿಯುವ ನೀರು, ಉಣ್ಣುವ ಅನ್ನ ಎಲ್ಲವೂ ನಂಜಾಗುತ್ತಿವೆ. ಈ ಭೂಮಿ ಎಲ್ಲರಿಗೂ ಸೇರಿದ್ದು ಎಂದು ಯುಗಯುಗಗಳಿಂದ ನಂಬಿದ ಜನಾಂಗಗಳ ನೆಲೆಗಳು ಅವರ ಅನುಮತಿಯಿಲ್ಲದೆ ಖರೀದಿಗಿಡಲ್ಪಡುತ್ತಿವೆ. ಸಾಂಪ್ರದಾಯಿಕ ಉದಾರವಾದಗಳು, ಸಮಾಜವಾದಗಳು ನಿರ್ವಚನಗೊಳಿಸಲಾಗದ ವಿಷಮಪರಿಸ್ಥಿತಿಯಲ್ಲಿ ತತ್ತರಿಸಿದ ಮಾನವಚೇತನಗಳು ಘೋರನೈರಾಶ್ಯಗಳ, ದುರಂತಮಯ ಆಶಾವಾದಿತ್ವದ ಕಥನಗಳನ್ನು ಕಟ್ಟಿಕೊಳ್ಳಲು ಮಾಯನ್ ಜನಾಂಗದವರು ನುಡಿದರೆನ್ನಲಾದ ಭವಿಷ್ಯವಾಣಿ ಒಂದು ಭಿತ್ತಿಯಾಗಿದೆ. ಈ ಸಂದರ್ಭಕ್ಕೆ ಒಂದು ಪ್ರಹಸಾನಾತ್ಮಕ ಮಗ್ಗುಲೂ ಇದೆ. ಸುತ್ತಾ ಹಬ್ಬುತ್ತಿರುವ ಕಾಲಾಗ್ನಿಯಲ್ಲಿ ತಮ್ಮ ಬಾಡನ್ನು ಬೇಯಿಸಿಕೊಳ್ಳುವ `2012' ಸಿನಿಮಾದ ನಿರ್ಮಾತೃವಿನಂಥವರೂ ಇದ್ದಾರೆ. ಏಸೂ ಶಿಲುಬೆಯೇರಿದ ಸಮಯದಲ್ಲಿ ಜನರ ನೂಕುನುಗ್ಗಲಾದಾಗ ಅವರನ್ನು ಸಾಲಾಗಿ ನಿಲ್ಲಿಸಿ ಕಾಸು ವಸೂಲು ಮಾಡುವ ಡೇರಿಯೋ ಫೋನ ನಾಟಕಗಳ ರೋಮನ್ ಸಿಪಾಯಿಗಳ ಹಾಗೆ. ನಮ್ಮ ಆಶಾವಾದಿ ಅಥವಾ ನಿರಾಶಾವಾದ ಅಥವಾ ವಾಸ್ತವವಾದಿ ಕಣ್-ನೋಟಗಳು ಸೃಷ್ಟಿಯ ಪರಿಸ್ಥಿತಿಗಿಂತಾ ಹೆಚ್ಚಾಗಿ ನಮಗನುಕೂಲದ ದೃಷ್ಟಿಯ ರೂಹುಗಳು.ಡಿಸೆಂಬರ್ 21ರಂದು ಜಗತ್ತು ಬಹುಶಃ ನಾಶವಾಗುವುದಿಲ್ಲ. ಅಥವಾ ಅದು ನಾಶವಾಗುವುದೇ ಆದರೆ ಈ ಕ್ಷಣವೂ ಆಗಬಹುದು. ಅನುಭವಲೋಕವನ್ನು ಅನಿರೀಕ್ಷತೆಯ ದೆವ್ವ ಯಾವಾಗಲೂ ಕಾಡುತ್ತಲೇ ಇರುತ್ತದೆ. ಕಲ್ಪಿತವಾದ ಒಳ್ಳೆಯ ಅಥವಾ ಕೆಟ್ಟ ಭವಿಷ್ಯದ ಬಗ್ಗೆ ಚಿಂತಿತರಾಗುವ, ರೋಮಾಂಚಿತರಾಗುವ ಬದಲಿಗೆ ಲೇಸೆನಿಸಿಕೊಂಡು ಇರುವ ಈ ಕ್ಷಣವನ್ನು ಜೀವಿಸುವ ಅವಕಾಶದಿಂದ ನಾವೇಕೆ ವಂಚಿತರಾಗುತ್ತಿದ್ದೇವೆ. ಅಲ್ಲಮ ಹೇಳಿದ ಹಾಗೆ,ಹಿಂದೆ ಏಸು ಪ್ರಳಯವಾಯಿತ್ತೆಂದರಿಯೆಮುಂದೆ ಏಸುಪ್ರಳಯವಾಯಿತ್ತೆಂದರಿಯೆತನ್ನ ತಾನರಿತರೆ ಅದೇ ಪ್ರಳಯವಲ್ಲಾತನ್ನ ನುಡಿ ತನಗೆ ಹಗೆಯಾದರೆ ಅದೇ ಪ್ರಳಯವಲ್ಲಾ

ಗೊಗ್ಗೇಶ್ವರಾನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.