ಬುಧವಾರ, ಅಕ್ಟೋಬರ್ 16, 2019
21 °C

ತಂಗ್ಲಿಷ್ ಪ್ರಣಯ ದುರಂತ ಮರೆಮಾಚಿದ ಕೊಲವೆರಿ

Published:
Updated:

ಇತ್ತೀಚಿನ ದಿನಗಳಲ್ಲಿ ಇನ್ನೂ ಬಿಡುಗಡೆಯಾಗಬೇದ ತಮಿಳು ಸಿನಿಮಾದ ಹಾಡೊಂದು ವಿಶ್ವದಾದ್ಯಂತ ಅಭೂತಪೂರ್ವ ಜನಪ್ರಿಯತೆ ಪಡೆಯಿತು. ಅದು ಅಂತರ್ಜಾಲದ ಯೂ ಟ್ಯೂಬ್‌ನಲ್ಲಿ ಪ್ರಕಟವಾದ ಮೂರು ವಾರಗಳಲ್ಲೇ 30 ದಶಲಕ್ಷಕ್ಕೂ ಹೆಚ್ಚು ಜನ ಅದನ್ನು ಕೇಳಿಸಿಕೊಂಡಿದ್ದರು.

 

ಇಂಡಿಯಾದಲ್ಲಂತೂ ಅದು ಎಲ್ಲ ಸಿನಿಮಾ ಪ್ರೇಮಿಗಳ, ವಿಶೇಷವಾಗಿ ಯುವಪೀಳಿಗೆಯ ಅಚ್ಚುಮೆಚ್ಚಿನ ಹಾಡಾಗಿಬಿಟ್ಟಿತ್ತು. ಎಲ್ಲರ ಬಾಯಲ್ಲೂ ಆ ಹಾಡಿನ ಸಾಲುಗಳು. ಅದರ ಮಾಂತ್ರಿಕತೆ ಕೇವಲ ಇಂಡಿಯಾಕ್ಕೆ ಸೀಮಿತವಾಗಿರಲಿಲ್ಲ.ಇಂಡಿಯಾದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ಹಲವು ಭಾಷೆಗಳಲ್ಲಿ ಅದರ ನಕಲುಗಳು ಹಠಾತ್ ನಿರ್ಮಾಣವಾದವು. ಜಪಾನಿನ ಹುಡುಗ ಹುಡುಗಿಯರು ಅದರ ಮಟ್ಟಿಗನುಸಾರ ಹೆಜ್ಜೆ ಹಾಕುತ್ತಾ ಆನಂದತುಂದಿಲರಾಗಿ ಕುಣಿಯತೊಡಗಿದರು.ಭಾರತೀಯ ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿಯಿರುವ ಜರ್ಮನಿಯಲ್ಲೂ ಅದರ ಪ್ರಭಾವ ಗೋಚರವಾಗತೊಡಗಿತು. ನನ್ನ ಪರಿಚಯದ ಹೆಣ್ಣುಮಗಳೊಬ್ಬಳು ಒಂದು ದಿನ ಈ ಹಾಡಿನ ಹುಚ್ಚು ಜನಪ್ರಿಯತೆಯ ಬಗ್ಗೆ ಸಿಟ್ಟಿಗೆದ್ದಿದ್ದಳು. ಜನರ ಅವಿಮರ್ಶಾತ್ಮಕ ಅರಳುಮರಳುತನವನ್ನು ಕಠೋರವಾಗಿ ಖಂಡಿಸಿದ್ದಳು.

 

ಆದರೆ ಅದೇ ಹುಡುಗಿ, ಒಂದು ವಾರದ ನಂತರ ಆಫೀಸಿನ ಕೆಲಸದ ನಡುವೆ ತನಗೇ ಗೊತ್ತಿಲ್ಲದಂತೆ ಅದನ್ನು ಗುನುಗತೊಡಗಿದ್ದಳು. `ಹೀಗೇಕೆ?~ ಎಂದು ಕೇಳಿದಾಗ `ನಾನು ಕೂಡ ಆ ಹಾಡಿನ ಫ್ಯಾನ್ ಆಗಿದ್ದೇನೆ, ಅದರ ಮಾಂತ್ರಿಕ ಸೆಳೆತವನ್ನು ಯಾರು ತಾನೇ ತಪ್ಪಿಸಿಕೊಳ್ಳಬಹುದು?~ ಎಂದಳು.ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ನಿರ್ದೇಶನದ ತಮಿಳು ಚಿತ್ರಕ್ಕಾಗಿ ರಜನಿ ಅವರ ಅಳಿಯ ಧನುಷ್ ಚಿತ್ರದ  ನಾಯಕ. ಅವರೇ ಈ ಹಾಡನ್ನು ರಚಿಸಿ ಹಾಡಿದ್ದಾರೆ. ಈ ಹಾಡಿನ ಸಂಗೀತ ನಿರ್ದೇಶನ ಹದಿನೆಂಟರ ಅನಿರುಧ್ ರವಿಚಂದ್ರನ್ ಅವರದು. ಜನಪ್ರಿಯತೆಯಲ್ಲಿ ಸಿನಿಸಂಗೀತದ ದೈತ್ಯ ಪ್ರತಿಭೆ ಎ. ಆರ್. ರೆಹಮಾನ್ ಅವರನ್ನು ಕೆಲವೇ ವಾರಗಳಲ್ಲಿ ಹಿಂದೆ ಹಾಕಿದ ಕೀರ್ತಿಗೆ ಅವರು ಭಾಜನರಾಗಿದ್ದಾರೆ.

 

ಯು ಟ್ಯೂಬ್ ಇದನ್ನು ಅತ್ಯಂತ ಜನಪ್ರಿಯ ಹಾಡೆಂದು ಆಯ್ಕೆ ಮಾಡಿ ಚಿನ್ನದ ಪದಕ ನೀಡಿದೆ. ವಿಶ್ವದ ಅತ್ಯಂತ ಪ್ರಭಾವಿ ಸುದ್ದಿ ಮಾಧ್ಯಮ ಬಿಬಿಸಿ ಇದರ ಜನಪ್ರಿಯತೆಯ ಕಾರಣವನ್ನು ವಿಶ್ಲೇಷಿಸಿತು. ಸಿಎನ್‌ಎನ್ ಈ ಹಾಡನ್ನು 2011ರ ಅತ್ಯಂತ ಜನಪ್ರಿಯ ಹಾಡೆಂದು ಪರಿಗಣಿಸಿತು.

 

ಧನುಷ್ ಅವರ ಕೀರ್ತಿ ಎಲ್ಲಿಗೆ ಮುಟ್ಟಿತೆಂದರೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಪಾನಿನ ಪ್ರಧಾನಿ ಯೊಶಿಹಿಕೋ ನಿಡಾ ಅವರಿಗೆ ತಾವು ನೀಡಿದ ಭೋಜನಕೂಟಕ್ಕೆ ಧನುಷ್ ಅವರಿಗೂ ಆಮಂತ್ರಣ ನೀಡಿದರು. ಇಷ್ಟು ಹೊತ್ತಿಗೆ 40 ದಶಲಕ್ಷ ಜನ ಈ ಹಾಡನ್ನು ಅಥವಾ ಇದರ ಬೇರೆಬೇರೆ ಆವೃತ್ತಿಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡಿದ್ದರು.ತನ್ನ ಪ್ರೇಯಸಿ ಕೈ ಕೊಟ್ಟ ಬಳಿಕ ಹುಡುಗನೊಬ್ಬನು ಹಾಡುವ ವಿರಹ ಗೀತೆಯಿದು. ಈ ಹಾಡು ಹಾಡುವಾಗ ಅವನು `ಗುಂಡು~ ಹಾಕಿರುತ್ತಾನೆ. ಈ ಸಂದರ್ಭಕ್ಕೆ ಒಂದು ಹಾಡು ಬೇಕೆಂದು ನಿರ್ದೇಶಕಿ ಸೂಚಿಸಿದಾಗ ಅನಿರುಧ್ ಐದು ನಿಮಿಷಗಳಲ್ಲಿ ಇದರ ಮಟ್ಟನ್ನು ತಯಾರಿಸಿದರು.ಅದಕ್ಕನುಗುಣವಾಗಿ ತಮಿಳು ಯುವಕರು ಬಳಸುವ ಕೆಲವು ಇಂಗ್ಲಿಷ್ ಪದಗಳನ್ನು ಹೊಸ ನಮೂನೆಯಲ್ಲಿ ಅಳವಡಿಸಿ ಧನುಷ್ ಗೀತೆ ರಚಿಸಿದರು. ಆಗ ಬಹುಶಃ ಅವರಲ್ಲಿ ಯಾರಿಗೂ ಇದು ಗಳಿಸಲಿರುವ ಅಪಾರ ಜನಪ್ರಿಯತೆಯ ಅಂದಾಜು ಇರಲಿಲ್ಲ.ಜನಪ್ರಿಯತೆಯ ಮನೋವಿಜ್ಞಾನವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಅದರಲ್ಲಿ ಕೆಲವು ಫಾರ್ಮುಲಾಗಳನ್ನು ಜನಪ್ರಿಯತೆಯ ತರುವಾಯ ಹುಡುಕಿ ತೆಗೆಯಬಹುದು, ನಿಜ.

 

ಆದರೆ ಫಾರ್ಮುಲಾಗಳಿಂದ ತಯಾರಿಸಿದ ಜನಪ್ರಿಯ ಕಲೆಗಳು ಗಳಿಸುವ ಮೆಚ್ಚುಗೆ ಸೀಮಿತವಾದುದು. `ಕೊಲವೆರಿ~ ಹಾಡಿನ ಅನಿರೀಕ್ಷಿತ ಜನಪ್ರಿಯತೆಯ ಬಗ್ಗೆ ಬಹಳ ಚಿಂತನಶೀಲರು ತಲೆಕೆಡಿಸಿಕೊಂಡಿದ್ದಾರೆ. ಕೆಲವರ ಪ್ರಕಾರ ಹಾಡಿನ ವಿಶ್ವಾತ್ಮಕತೆ ಅದರ ಜನಪ್ರಿಯತೆಗೆ ಮೂಲಕಾರಣ.

 

ಇನ್ನು ಕೆಲವರು ಅದರ ವಿಶಿಷ್ಟ ಸಂಗೀತ ಸಂಯೋಜನೆಯಲ್ಲಿ ಕಾರಣವನ್ನು ಅರಸಿದ್ದಾರೆ. ತಮಿಳು ಜಾನಪದ ಮಟ್ಟನ್ನು ಮತ್ತು ಸಾಂಪ್ರದಾಯಿಕ ವಾದ್ಯಗಳಾದ ನಾದ ಸ್ವರ, ಶೆಹನಾಯ್‌ಗಳನ್ನು ಆಧುನಿಕ ವಾದ್ಯಗಳಾದ ಗಿಟಾರ್, ಸ್ಯಾಕ್ಸಫೋನ್‌ಗಳ ಜೊತೆಗೆ ಮೇಳೈಸಿರುವ ಹೊಸತನವನ್ನು ಜನಪ್ರಿಯತೆಯ ಕಾರಣಗಳಾಗಿ ಗುರುತಿಸಲಾಗಿದೆ.ಈ ಕಾರಣಗಳು ಅಷ್ಟು ಸರಿಯಾಗಿ ಕಾಣುತ್ತಿಲ್ಲ. ವಸ್ತುವಿನಲ್ಲಿ ಕಾರಣ ಹುಡುಕುವುದು ನಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ಇದರಂತಹ ನೂರಾರು ವಿರಹ ಗೀತೆಗಳು ನಮ್ಮ ಎಲ್ಲ ಭಾಷೆಯ ಸಿನಿಮಾಗಳಲ್ಲಿ ಬಂದಿವೆ.

 

ಅವೆಲ್ಲವೂ ತಮ್ಮ ಮಟ್ಟಿಗೆ ಜನಪ್ರಿಯತೆ ಗಳಿಸಿವೆಯಾದರೂ ಆ ಜನಪ್ರಿಯತೆಯ ಮಟ್ಟವನ್ನು `ಕೊಲವೆರಿ~ಗೆ ಹೋಲಿಸಲಾಗದು. ಇನ್ನು ಸಾಂಪ್ರದಾಯಿಕ ಮತ್ತು ಆಧುನಿಕ ಸಂಗೀತ ಶೈಲಿಗಳ ಬೆರಕೆಯನ್ನೇ ಕಾರಣ ಅನ್ನುವುದಾದರೆ ಈ ರೀತಿಯ ಪ್ರಯೋಗಗಳೂ ಲೆಕ್ಕವಿರದಷ್ಟು ಆಗಿವೆ.

 

ದಕ್ಷಿಣ ಭಾರತದ ಸಂದರ್ಭದಲ್ಲಿ ಇಳೆಯರಾಜ ಅವರು ಶುರು ಮಾಡಿದ ಈ ಪರಿಪಾಟವನ್ನು ಹೊಸರೀತಿಯ ಸಂಕೀರ್ಣತೆಗೆ ಕೊಂಡುಹೋದವರು ಎ ಆರ್ ರೆಹಮಾನ್. ಈ ಮಿಶ್ರಶೈಲಿಗಳ ಹಾಡುಗಳಿಗೆ ಸಿಕ್ಕದ ಮನ್ನಣೆ `ಕೊಲವೆರಿ~ಗೆ ಹೇಗೆ ಸಿಕ್ಕಿತು?ಹಾಡಿನ ಭಾಷೆಯಲ್ಲಿ ಕಾರಣ ಹುಡುಕಿದವರೂ ಕುಂಟು ಕಾರಣಗಳನ್ನು ಕೊಟ್ಟಿದ್ದಾರೆ. ಒಬ್ಬರ ಪ್ರಕಾರ ಶಬ್ದಗಳ ಅರ್ಥಹೀನತೆ ಕಾರಣ. ಇನ್ನೊಬ್ಬರ ಪ್ರಕಾರ ತಮಿಳು ಬೀದಿ ಜನರ ಹಾಸ್ಯಪ್ರಜ್ಞೆ ಹಾಡಿನಲ್ಲಿರುವುದೇ ಜನಪ್ರಿಯತೆಯ ಕಾರಣ.ಕಲಾಕೃತಿಯೊಂದರ ಜನಪ್ರಿಯತೆಯ ಕಾರಣಗಳು ಸಾಮಾನ್ಯವಾಗಿ ನಮ್ಮ ವಿಮರ್ಶಾ ಬುದ್ಧಿಗೆ ಸವಾಲುಗಳಾಗಿಯೇ ಇರುತ್ತವೆ. ಅವು ತರ್ಕದ ತೆಕ್ಕೆಗೆ ಪೂರ್ತಿಯಾಗಿ ಸಿಗುವಂಥವಲ್ಲ. ಇಷ್ಟಾದರೂ ಜನಪ್ರಿಯತೆಯ ಕಾರಣಗಳನ್ನು ಆದಷ್ಟೂ ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಬೇಕಾದ ಸಾಮಾಜಿಕ ಜವಾಬುದಾರಿ ನಮ್ಮ ಮೇಲಿದೆ.

 

ಹೀಗಾಗಿ ಜನಪ್ರಿಯ ಕಲೆಗಳನ್ನು ಸಾಂಪ್ರದಾಯಿಕ ಗಂಭೀರಪ್ಪಗಳೋಪಾದಿಯಲ್ಲಿ ತಳ್ಳಿಹಾಕುವ ತಪ್ಪನ್ನು ನಾವಿಂದು ಮಾಡಲಾಗದು. ಎಲ್ಲರಿಗೂ ಸುಲಭವಾಗಿ ದಕ್ಕುವ ಗಣಕ ಮಾಧ್ಯಮಗಳ ಯುಗದಲ್ಲಿ ಸಮಕಾಲೀನ ಜನಪ್ರಿಯ ಕಲೆಗಳ ಸಾಮಾಜಿಕ ಮತ್ತು ಮನೋವೈಜ್ಞಾನಿಕ ಪರಿಣಾಮ ಹಿಂದೆಂದಿಗಿಂತಲೂ ಅಧಿಕವಾಗಿದೆ.

 

ಇಂದು ಸಾಂಪ್ರದಾಯಿಕ ಜನಪ್ರಿಯ ಕಲೆಗಳಾದ ಕತೆ, ಪುರಾಣಗಳು, ಸಂಗೀತ-ನಾಟಕಗಳು, ಸಾಹಿತ್ಯಕೃತಿಗಳು ಹೆಚ್ಚು ಜನರನ್ನು ಮುಟ್ಟಬೇಕೆಂದರೆ ದೃಶ್ಯ ಮತ್ತು ಗಣಕ ಮಾಧ್ಯಮಗಳ ಆಶ್ರಯ ಅನಿವಾರ್ಯವಾಗುತ್ತಿದೆ.ದೃಶ್ಯ ಮತ್ತು ಗಣಕ ಮಾಧ್ಯಮಗಳ ಪ್ರಭಾವ ಸರ್ವ ವ್ಯಾಪಕವಾಗಿ ಇಂದು ಬೆಳೆದಿರುವುದು ನಿಸ್ಸಂಶಯ. `ಕೊಲವೆರಿ~ಯ ಜನಪ್ರಿಯತೆಗೆ ಈ ಮಾಧ್ಯಮಗಳ ಬಳಕೆಯೂ ತುಂಬಾ ಸಹಾಯ ಮಾಡಿದೆ ಎಂದು ತರ್ಕಿಸಬಹುದಾದರೂ ಇದೊಂದೇ ಕಾರಣವೆಂದು ಹೇಳಬರುವುದಿಲ್ಲ. ಯಾಕೆಂದರೆ ಪ್ರತಿ ದಿವಸ ಅದೆಷ್ಟೋ ಹಾಡುಗಳು ಗಣಕ ಭಿತ್ತಿಗಳಲ್ಲಿ ಪ್ರಕಟವಾಗುತ್ತಿರುತ್ತವೆ.ಹಾಗಿದ್ದರೆ `ಕೊಲವೆರಿ~ಯ ಅನುಪಮ ಜನಪ್ರಿಯತೆಗೆ ಕಾರಣ ಏನಿರಬಹುದು?

ಒಂದು ವೇಳೆ ಈ ಹಾಡಿನ ರಚನೆ ಶುದ್ಧ ತಮಿಳಿನಲ್ಲಿ ಆಗಿದ್ದರೆ? ತಮಿಳಿನಲ್ಲಿ ಈಗಾಗಲೇ ಜನಜನಿತವಾಗಿರುವ ಅಸಂಖ್ಯಾತ ಸಿನಿ ವಿರಹಗೀತೆಗಳ ಪಟ್ಟಿಗೆ `ಕೊಲವೆರಿ~ಯೂ ಸೇರಿಹೋಗುತ್ತಿತ್ತು.

 

ಅಥವಾ ಶುದ್ಧ ಇಂಗ್ಲಿಷ್‌ನಲ್ಲಿ ರಚನೆಯಾಗಿದ್ದರೂ ಅಷ್ಟೆ. ಇಲ್ಲಿ ಬಳಕೆಯಾಗಿರುವ ಭಾಷೆಯನ್ನು ತಂಗ್ಲಿಷ್ ಅಂತ ಕರೆಯಲಾಗಿದೆ. ಇದು ತಮಿಳು ಮತ್ತು ಇಂಗ್ಲಿಷ್‌ಗಳ ಮಿಶ್ರಣವಾಗಿದೆ.

 

`ಕೊಲವೆರಿ~ಯ ದ್ವಿಭಾಷಿಕತೆ ನಮ್ಮೆಲ್ಲರ ಇಂದಿನ ದ್ವಿಭಾಷಿಕ ಸಂದಿಗ್ಧಗಳನ್ನು ಸೂಚಿಸುವುದಲ್ಲದೆ, ಈ ಸನ್ನಿವೇಶದಲ್ಲಿ ಹುಟ್ಟಬಹುದಾದ ಹೈಬ್ರಿಡ್ ಭಾಷೆಯೊಂದನ್ನು ಸಂಭ್ರಮಿಸುತ್ತಿರುವುದು ಆ ಹಾಡಿನ ಜನಪ್ರಿಯತೆಗೆ ಮೂಲಕಾರಣವಾಗಿರುವ ಹಾಗೆ ಕಾಣುತ್ತಿದೆ.ಬ್ರಿಟಿಷ್ ಕವಿ ಸ್ಟೀವನ್ ಸ್ಪೆಂಡರ್ ಭಾರತಕ್ಕೆ ಬಂದಾಗ ಒಂದು ಮಾತು ಕೇಳಿದ್ದರು: `ಇಂಗ್ಲಿಷಿನ ಜೊತೆಗೆ ಇಂಡಿಯ ಒಂದು ದುರಂತ ಪ್ರಣಯ ನಡೆಸುತ್ತಿದೆ~. ಅವರ ಪ್ರಕಾರ `ಇಂಡಿಯನ್ನರು ಇಂಗ್ಲಿಷಿನ ಜನಕ್ಕೆ ಹಿತವಾಗುವಂಥ ಇಂಗ್ಲಿಷ್ ಬರೆಯಲಾಗುವುದಿಲ್ಲ~.

 

ಆದರೆ ಮುಂದಿನ ಇಂಡಿಯನ್ ಇಂಗ್ಲಿಷ್ ಸಾಹಿತ್ಯದ ಇತಿಹಾಸ ಅವರ ಮಾತನ್ನು ಸುಳ್ಳಾಗಿಸಿದೆ. ಇವೊತ್ತು ಇಂಡಿಯನ್ ಇಂಗ್ಲಿಷಿನ ಪ್ರಭಾವ ಮತ್ತು ಪ್ರಸಿದ್ಧಿ ಇಂಗ್ಲಿಷ್ ಮಾತೃಭಾಷೆಯ ನಾಡುಗಳಲ್ಲಿ ಅಭೂತಪೂರ್ವವಾಗಿ ಬೆಳೆದುನಿಂತಿದೆ.ಇಂದು ವಿದೇಶಗಳಲ್ಲಿ ಭಾರತದ ಜನಪ್ರಿಯ ಸಾಂಸ್ಕೃತಿಕ ರಾಯಭಾರಿಗಳೆಂದರೆ ಬಾಲಿವುಡ್ ತಾರೆಗಳು, `ಎಕ್ಸ್‌ಪೋರ್ಟ್ ಕ್ವಾಲಿಟಿ~ ಗುರುಗಳು ಮತ್ತು ಇಂಡಿಯನ್ ಇಂಗ್ಲಿಷ್ ಬರಹಗಾರರು. ಇಂಗ್ಲೆಂಡು ಅಥವಾ ಉತ್ತರ ಅಮೆರಿಕದ ಬರಹಗಾರರಿಗಿಂತ ಹೆಚ್ಚಿನ ಯಶಸ್ಸನ್ನು ಈ ಜಾತಿಯ ಬರಹಗಾರರು ಪಡೆದುಕೊಂಡಿದ್ದಾರೆ. ಆದರೆ ಇಂಡಿಯನ್ ಇಂಗ್ಲಿಷ್ ಬರಹಗಾರರ ಯಶಸ್ಸೊಂದರಿಂದಲೇ ಇಂಡಿಯ ಮತ್ತು ಇಂಗ್ಲಿಷ್‌ಗಳ ಪ್ರಣಯ ಸುಖಾಂತವಾಗಲು ಸಾಧ್ಯವಿಲ್ಲ.ಇಂಗ್ಲಿಷ್ ಶಿಕ್ಷಣ ಮತ್ತು ಮಾತೃಭಾಷೆಯ ಮಾಧ್ಯಮಗಳ ನಡುವಣ ಅಸಮಾನ ಕೊಡುಕೊಳೆಯ ಮೇಲೆ ನಿಂತಿರುವ ನಮ್ಮ ಶೈಕ್ಷಣಿಕ ಮತ್ತು ಸಾಮಾಜಿಕ ತಥ್ಯ ಇಂಗ್ಲಿಷ್ ಶಿಕ್ಷಿತರಿಗೆ ಸ್ವರ್ಗವೂ, ಹಾಗಲ್ಲದವರಿಗೆ ನರಕವೂ ಆಗುತ್ತಿದೆ.ಇಂಗ್ಲಿಷ್ ಕಲಿಯದ ಬಡಪಾಯಿ ವಿದ್ಯಾರ್ಥಿಗಳು ಎಷ್ಟು ಪ್ರತಿಭಾವಂತರಾದರೂ ಅಪಾರ ಕೀಳರಿಮೆಯಿಂದ ನರಳಿ ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುವ ದುರಂತವನ್ನು ನನ್ನ ಹಲವು ವಿದ್ಯಾರ್ಥಿಗಳಲ್ಲಿ ಕಂಡಿದ್ದೇನೆ.ಮಾತೃಭಾಷೆಯ ಜನರಾದ ನಮಗೆ ಇಂಗ್ಲಿಷ್ ಶಿಕ್ಷಿತರಾಡುವ ಮಾತೃಭಾಷೆ ಯಾವುದೋ ಅನ್ಯಗ್ರಹದ ಭಾಷೆಯ ಹಾಗೆ ಕೇಳಿಸುತ್ತದೆ. ಅದೇ ರೀತಿ ಮಾತೃ ಭಾಷಾ ಶಿಕ್ಷಿತರ ಇಂಗ್ಲಿಷ್ ಕೂಡಾ ತುಂಬಾ ವಿಚಿವಿಚಿತ್ರವಾಗಿರುತ್ತದೆ. ಇಂಗ್ಲಿಷ್ ಶಿಕ್ಷಿತರಿಗೆ ಇಂಥ ವಿಚಿವಿಚಿತ್ರವಾದ ಇಂಗ್ಲಿಷ್ ನಗೆಪಾಟಲಿನ ವಸ್ತು.

 

ಅಂಥ ನಗೆಪಾಟಲಿನ ತಂಗ್ಲಿಷ್ ಅನ್ನು ಹಾಡಿನ ಭಾಷೆಯಾಗಿ ಮಾಡಿಕೊಂಡಿರುವ ಧನುಷ್ ಅವರ ಪ್ರಯೋಗ ವಿನೂತನವಾಗಿದ್ದು ತಂಗ್ಲಿಷರ ಕುಸಿದ ಆತ್ಮವಿಶ್ವಾಸವನ್ನು ಮೇಲೆತ್ತಿದೆ. ಹಾಗೆಯೇ ಇಡೀ ಹಾಡು ತನ್ನನ್ನು ತಾನೇ ತಮಾಷೆ ಮಾಡುವ ಸ್ವಯಂ ವ್ಯಂಗ್ಯದಿಂದ ಕೂಡಿರುವುದರಿಂದ ಇಂಗ್-ತಮಿಳರಿಗೆ ಭರ್ಜರಿ ಮೋಜನ್ನುಂಟುಮಾಡುತ್ತದೆ.ಹಾಗಿದ್ದರೆ ಇಂಗ್ಲಿಷ್ ಮತ್ತು ತಮಿಳು (ಅಥವಾ ಕನ್ನಡ ಅಥವಾ ತೆಲುಗು ಇತ್ಯಾದಿ) ಭಾಷೆಗಳ ದುರಂತಮಯ ಪ್ರೇಮದ ಹೊರಗಿನವರಿಗೆ `ಕೊಲವೆರಿ~ಯ ಜಾದೂ ಯಾವ ತೆರನದು? ಬಹುಶಃ ಅವರನ್ನು ಸೆಳೆಯುವುದು ಸಂಗೀತದ ಜಾದು. `ಕೊಲವೆರಿ~ಯ ಸಂಗೀತ ಶೈಲಿ ಗಂಭೀರವಾದ ಫ್ಯೂಷನ್ ಸಂಗೀತಕ್ಕೆ ತದ್ವಿರುದ್ಧ.ಫ್ಯೂಷನ್ ಪರಸ್ಪರ ವಿರುದ್ಧವಾದ ಸಂಗೀತ ಶೈಲಿಗಳ ನಡುವಣ ಸಂಘರ್ಷವನ್ನು ಅನ್ವೇಷಿಸುತ್ತದೆ. ಆದರೆ `ಕೊಲವೆರಿ~ ಪರಸ್ಪರ ಭಿನ್ನವಾದ ವಿರುದ್ಧವಾದ ಶೈಲಿಗಳ ವೈರುಧ್ಯವನ್ನು ಪರಿಕಿಸುವ ಬದಲಿಗೆ ಸಂಭ್ರಮಿಸುತ್ತದೆ.ಹೀಗೆ ವೈರುಧ್ಯಗಳನ್ನು ಸಂಭ್ರಮಿಸುವುದು ಆಧುನಿಕೋತ್ತರ ಸಂಸ್ಕೃತಿಯ ಲಕ್ಷಣ. ಯಾವ ವೈರುಧ್ಯಗಳನ್ನು ಅಧುನಿಕತೆ ಕೆಚ್ಚೆದೆಯಿಂದ ಎದುರುಗೊಂಡಿತ್ತೋ ಅದನ್ನು ಆಧುನಿಕೋತ್ತರ ಪ್ರವೃತ್ತಿ ಸಂಭ್ರಮಿಸುತ್ತದೆ. `ಕೊಲವೆರಿ~ ಹಾಡು ಬಾಲಿವುಡ್ ಸಿನಿಮಾಗಳಂತೆ.`ಮರ್ಡರ್~ನಂಥ ಸಿನಿಮಾ ನವ ಬಂಡವಾಳಶಾಹಿ ಸಂಸ್ಕೃತಿಯ ಮುಕ್ತ ಲೈಂಗಿಕತೆ ಮತ್ತು ಸಾಂಪ್ರದಾಯಿಕ ಪುರುಷಪ್ರಧಾನ ಕುಟುಂಬ ವ್ಯವಸ್ಥೆ ಎರಡನ್ನೂ ಏಕಕಾಲದಲ್ಲಿ ವೈಭವೀಕರಿಸುತ್ತದೆ. `ಕೊಲವೆರಿ~ ಇಂಗ್ಲಿಷ್ ಮತ್ತು ತಮಿಳಿನ ಪ್ರಣಯದ ದುರಂತಮಯತೆಯನ್ನು ಮರೆಮಾಚಿಸಿ ಅವೆರಡರ ನಂಟನ್ನು ತನ್ನೆಲ್ಲ ವ್ಯಂಗ್ಯಗಳ ಮಧ್ಯವೂ ಕೊಂಡಾಡುತ್ತದೆ.ವೈರುಧ್ಯಗಳ ನಡುವಣ ಘೋರ ನಿರಾಶೆಯನ್ನು ಆಧುನಿಕತೆ ತನ್ನ ಅನ್ವೇಷಣೆಯ ಸಮಾಧಾನವನ್ನು ಹಲವು ಸಲ ಪರೋಕ್ಷವಾಗಿ, ಕೆಲವು ಸಲ ಪ್ರತ್ಯಕ್ಷವಾಗಿ ಪ್ರಶ್ನಿಸುತ್ತಿತ್ತು.ನಿರಂತರತೆಯ ಸಂಸ್ಕೃತಿಗೆ ಸವಾಲಾಗಿ ಕ್ಷಣಭಂಗುರತೆಯ ಸಂಸ್ಕೃತಿ ಬಂದಾಗ ಷೇಕ್ಸ್‌ಪಿಯರನ ನಾಟಕಗಳು ಅಥವಾ ಘಾಲಿಬ್‌ನ ಕವಿತೆಗಳು ಅವುಗಳ ಅಸಹನೀಯ ದ್ವಂದ್ವವನ್ನು ಬುಡಹತ್ತ ಪರೀಕ್ಷಿಸಿದವು. ಆದರೆ ಸಮಾನತಾವಾದಿ ವಿಶ್ವದೃಷ್ಟಿಯ ಮುಸ್ಸಂಜೆಯಲ್ಲಿ ಮೂಡಿದ ಅವಕಾಶವಾದಿ ಸಂಸ್ಕೃತಿ ಈ ದ್ವಂದ್ವವನ್ನು ಅಲಂಕರಿಸುತ್ತದೆ, ಸಿಂಗರಿಸುತ್ತದೆ.ಹಾಗೆ ಮಾಡುವುದರ ಮೂಲಕ ವೈರುಧ್ಯಗಳ ಮತ್ತು ನಮ್ಮ ನಡುವೆ ನಾಜೂಕಾದ ರಾಜಿಯನ್ನು ಉಂಟುಮಾಡುತ್ತದೆ. ಇದೇ ಇಂದಿನ ಜನಪ್ರಿಯ ಕಲೆಗಳ ಲಕ್ಷಣ. ಅವುಗಳ ಪರಂಪರೆಯಲ್ಲಿ ಜನಪ್ರಿಯ ಸಂಸ್ಕೃತಿಯ ಸಾರೋದ್ಧಾರವಾಗಿರುವ `ಕೊಲವೆರಿ~ ಒಂದು ವಿನೂತನ ಪ್ರಯೋಗ.ವಿಮರ್ಶಾತ್ಮಕತೆಯ ವಿಸ್ಮೃತಿಯನ್ನು ಪ್ರೇರೇಪಿಸುವ ಶಕ್ತಿಗಳ ಜೊತೆಗೆ ರಾಜಿ ಮಾಡಿಕೊಂಡಿರುವ ಜನಪ್ರಿಯ ಸಂಸ್ಕೃತಿಯ ಶರದೃತುವಿನ ಫಲ `ಕೊಲವೆರಿ~ ಹಾಡು.ಹಾಡಿನ ಕೆಲವು ಸಾಲುಗಳು ಹೀಗಿವೆ:

ವೈ ದಿಸ್ ಕೊಲವೆರಿ ಕೊಲವೆರಿ ಡಿ

ಡಿಸ್ಟನ್ಸಿಲ ಮೂನು ಮೂನು

ಮೂನು ಕಲರು ವೈಟು

ವೈಟು ಬ್ಯಾಕ್‌ಗ್ರೌಂಡ್ ನೈಟು ನೈಟು

ನೈಟು ಕಲರು ಬ್ಲಾಕು..

ವೈಟು ಸ್ಕಿನ್ನು ಗರ್ಲು ಗರ್ಲು

ಗರ್ಲು ಹಾರ್ಟು ಬ್ಲಾಕು

ಐಸ ಯೈಸಯ ಮೀಟು ಮೀಟು

ಮೈ ಫ್ಯೂಚರ‌್ರು ಡಾರ್ಕು..

ಹ್ಯಾಂಡಲೆ ಗ್ಲಾಸು ಗ್ಲಾಸುಲೆ ಸ್ಕಾಚು

ಐಸು ಫುಲ್ಲಾ ಟಿಯರು

ಎಂಪ್ಟಿ ಲೈಫು ಗರ್ಲು ಕಮ್ಮು

ಲೈಫು ರಿವರ್ಸು ಗಿಯರು

ಲವ್ವಲವ್ವ ಓ ಮೈ ಲವ್ವ

ಯು ಶೋಡ್ ಮಿ ಬವ್ವ

ಕವ್ವ ಕವ್ವ ಹೋಲಿ ಕವ್ವ

ಐ ವಾಂಟ್ ಯು ಹಿಯರ್ ನವ್ವ

ಗಾಡ್ ಐ ಆಮ್ ಡಯಿಂಗ್ ನವ್ವ

ಶಿ ಇಸ್ ಹ್ಯಾಪಿ ಹವ್ವ

(ನಿಮ್ಮ ಅನಿಸಿಕೆಗಳನ್ನು ತಿಳಿಸಿ:editpagefeedback@prajavani.co.in)

Post Comments (+)