ತಕ್ಷಣದ ಸೃಜನಶೀಲತೆ

7

ತಕ್ಷಣದ ಸೃಜನಶೀಲತೆ

ಗುರುರಾಜ ಕರ್ಜಗಿ
Published:
Updated:

ನಮ್ಮ ಕಿಟ್ಟಣ್ಣ ಅತ್ಯಂತ ಸೃಜನಶೀಲ ವ್ಯಕ್ತಿಯೆಂದು ಅವನ ವೈರಿಗಳೂ ಒಪ್ಪು­ತ್ತಾರೆ. ಅವನು ಯಾವಾಗ,  ಎಲ್ಲಿ,  ಹೇಗೆ ಯೋಚನೆ ಮಾಡುತ್ತಾ­ನೆಂಬುದು ಅಚ್ಚರಿಯ ಸಂಗತಿ. ಒಂದು ಬಾರಿ ಕಿಟ್ಟಣ್ಣ ಒಂದು ಸಂಗೀತ ಕಾರ್ಯ­ಕ್ರಮ ಮುಗಿಸಿಕೊಂಡು ರಾತ್ರಿ ಹನ್ನೆರಡಕ್ಕೆ ಮನೆಗೆ ಬಂದ.  ಮನೆಯವರೆಲ್ಲ ಊರಿಗೆ ಹೋಗಿದ್ದಾರೆ. ಹೇಗೂ ಊಟವಾಗಿ ಹೋಗಿದೆ. ಇನ್ನು ಮಲಗಿಕೊಳ್ಳುವು­ದಕ್ಕೆ ಅನುವಾಯಿತು ಎಂದು ತನ್ನ ಕೊಠಡಿಯ ಕಡೆಗೆ ಹೊರಟ.  ಅವನ ಕೊಠ­ಡಿಯ ಕಿಟಕಿಯಿಂದ ಮನೆಯ ಹಿಂಭಾಗ ಕಾಣುತ್ತದೆ.  ಅಲ್ಲಿ ಹಿಂದೆ ಒಂದು ಪುಟ್ಟ ಮನೆ ಇದೆ.  ಅದು ಕಿಟ್ಟಣ್ಣನ ಮನೆಗೆಲಸದವಳಿಗೆ ಕೊಟ್ಟದ್ದು. ಅದರ ಪಕ್ಕ ಒಂದು ಸ್ಟೋರ್ ರೂಮ್ ಇದೆ.  ಅದರಲ್ಲಿ ಬೇಕಾದಷ್ಟು ಸಾಮಾನು ತುಂಬಿದೆ. ಕಿಟ್ಟಣ್ಣ ಮಲಗ­ಬೇಕೆಂದಿ­ರುವಾಗ ಹಿಂದಿನ ಮನೆಯಿಂದ ಏನೋ ಸಣ್ಣ ಸದ್ದಾದಂತೆ ಕೇಳಿಸಿತು.  ಥಟ್ಟನೆ ಎದ್ದು ಕುಳಿತ ಕಿಟ್ಟಣ್ಣ. ಈಗೀಗ ಬಡಾವಣೆಗಳಲ್ಲಿ ಕಳ್ಳತನ ಹೆಚ್ಚಾಗಿ­ರುತ್ತದೆ.  ಅದರಲ್ಲೂ ತನ್ನ ಮನೆಯಲ್ಲಿ ಯಾರೂ ಇಲ್ಲ, ಮನೆಗೆಲಸದ­ವಳೂ ಊರಿಗೆ ಹೋಗಿದ್ದಾಳೆ.ಕಿಟ್ಟಣ್ಣ ನಿಧಾನವಾಗಿ ಕಿಟಕಿಯ ಪರದೆಯನ್ನು ಕೊಂಚವೇ ಪಕ್ಕಕ್ಕೆ ಸರಿಸಿ ಮರೆಯಿಂದ ಹಿಂದಿನ ಮನೆಯನ್ನೇ ದಿಟ್ಟಿಸಿ ನೋಡತೊ­ಡ­ಗಿದ. ಆ ಮನೆಯೊಳಗೆ ಯಾರೋ ಸೇರಿಕೊಂಡಿದ್ದಾರೆಂಬುದು ಖಚಿತವಾ­ಯಿತು.  ದೀಪ ಹಾಕದೇ ಕಳ್ಳರು ಬೆಂಕಿಕಡ್ಡಿ ಕೊರೆದು ಅದರ ಬೆಳಕಿನಲ್ಲಿ ಏನೋ ನೋಡು­­ತ್ತಿ­­ದ್ದಾರೆ.  ಒಂದು ಬೆಂಕಿಕಡ್ಡಿ ಮುಗಿದ ಮೇಲೆ ಮತ್ತೊಂದರಂತೆ ಬಳಸು­ತ್ತಿ­ದ್ದಾರೆ.  ಬೆಂಕಿಕಡ್ಡಿಯ ಬೆಳಕು ಅವರ ನೆರಳುಗಳನ್ನು ಮನೆಯ ಕಿಟಕಿಯ ಮೇಲೆ ಮೂಡಿ­ಸುತ್ತಿತ್ತು. ಕಿಟ್ಟಣ್ಣನಿಗೆ ಯಾವ ಸಂಶಯವೂ ಉಳಿಯಲಿಲ್ಲ.  ಈ ಕಳ್ಳರನ್ನು ಹಿಡಿಯಲೇ ಬೇಕು ಎಂದು ತೀರ್ಮಾನ ಮಾಡಿದ.  ತಾನೊಬ್ಬನೇ ಈ ಸಾಹಸಕ್ಕೆ ಕೈ ಹಾಕುವುದು ಸರಿಯಲ್ಲ. ಯಾಕೆಂದರೆ ಕಳ್ಳರು ಎಷ್ಟು ಜನ ಇದ್ದಾರೆಯೋ ತಿಳಿ­ಯದು. ಕಿಟ್ಟಣ್ಣ ಹಿಂದಿನ ಮನೆಯ ಮೇಲಿನ ತನ್ನ ಕಣ್ಣುಗಳನ್ನು ತೆಗೆಯದೇ ತನ್ನ ಮೊಬೈಲ್ ಫೋನ್‌ನಿಂದ ಪೊಲೀಸ್ ಸ್ಟೇಷನ್ನಿಗೆ ಫೋನ್ ಮಾಡಿದ.  ಎಷ್ಟೋ ಸಲ ಅದು ರಿಂಗಣಿಸಿದ ನಂತರ ಯಾರೋ ಅಧಿಕಾರಿ ಫೋನ್ ತೆಗೆದುಕೊಂಡರು. ಕಿಟ್ಟಣ್ಣ ಬೇಗಬೇಗನೇ ತನ್ನ ಮನೆಯ ವಿಳಾಸ, ಅದನ್ನು ತೀವ್ರವಾಗಿ ತಲುಪುವ ವಿಧಾ­ನ­ಗಳನ್ನೆಲ್ಲ ಹೇಳಿ ತನ್ನ ಮನೆಯ ಹಿಂದಿನ ಸ್ಟೋರ್ ರೂಮಿನಲ್ಲಿ ಕಳ್ಳರು ಸೇರಿಕೊಂಡಿದ್ದಾರೆಂತಲೂ, ಬೇಗನೇ ಬಂದು ಅವರನ್ನು ಹಿಡಿಯಬೇಕೆಂತಲೂ ಕೇಳಿದ.ಆ ಕಡೆಯಿಂದ ಅಧಿಕಾರಿ ಆಕಳಿಸುತ್ತಲೇ ಕೇಳಿದ, ‘ಕಳ್ಳರು ಇನ್ನೂ ಮನೆ­ಯ­ಲ್ಲಿಯೇ ಇದ್ದಾರೆಯೇ?’ ಕಿಟ್ಟಣ್ಣ, ‘ಹೌದು ಸ್ವಾಮಿ, ಇದ್ದಾರೆ.  ತಾವು ಬೇಗನೇ ಸಿಬ್ಬಂದಿ ಕಳುಹಿಸಿದರೆ ಹಿಡಿಯಬಹುದು’ ಎಂದ. ‘ಈಗೆಲ್ಲಿ ಆಗುತ್ತೇರೀ? ಒಂದು ಜೀಪೂ ಇಲ್ಲ. ಎಲ್ಲ ರೌಂಡ್ಸ್‌ ಮೇಲೆ ಹೋಗಿವೆ. ಯಾವ ಆಫೀಸರೂ ಇಲ್ಲ. ನೋಡೋಣ, ದೊಡ್ಡವರಿಗೆ ತಿಳಿಸುತ್ತೇನೆ’ ಎಂದ ಅಧಿಕಾರಿ. ಕಿಟ್ಟಣ್ಣನಿಗೆ ರೇಗಿ ಹೋಯಿತು, ‘ನೀವು ನಿಧಾನಕ್ಕೆ ಬನ್ನಿ. ನಾನು ಅಡುಗೆ ಮಾಡಿ, ಕಳ್ಳರಿಗೆ ಬಡಿಸಿ ಮಾತನಾ­ಡುತ್ತಿರುತ್ತೇನೆ.  ಸಾವಕಾಶವಾಗಿ ಸಾಧ್ಯವಾದಾಗ ಬಂದು ಅವರನ್ನು ಹಿಡಿದುಕೊಂಡು ಹೋಗಿ’ ಎಂದು ಪೋನ್ ಬಂದು ಮಾಡಿದ. ಸರಿಯಾಗಿ ಒಂದು ನಿಮಿಷದ ಮೇಲೆ ಮತ್ತೆ ಅದೇ ನಂಬರಿಗೆ ಫೋನ್ ಮಾಡಿದ, ‘ನಾನು ಕಿಟ್ಟಣ್ಣ, ಇದೇ ತಾನೇ ಫೋನ್ ಮಾಡಿದ್ದೆನಲ್ಲ.ಪಾಪ! ನಿಮ್ಮ ಹತ್ತಿರ ವಾಹನ, ಅಧಿಕಾರಿ­ಗಳು ಇರಲಿಲ್ಲ. ಏನೂ ಚಿಂತೆ ಬೇಡ.  ನಾನೇ ಹಿಂದಿನ ಮನೆಯ ಹತ್ತಿರ ಹೋಗಿ ಮೂವರೂ ಕಳ್ಳರನ್ನು ಗುಂಡಿಕ್ಕಿ ಕೊಂದುಬಿಟ್ಟಿದ್ದೇನೆ. ನಿಮಗೆ ಸಮಯ ದೊರೆ­ತಾಗ ಬನ್ನಿ’. ಮುಂದೆ ಎರಡೇ ಕ್ಷಣಗಳಲ್ಲಿ ಎರಡು ಪೋಲೀಸ್ ವ್ಯಾನು, ಒಂದು ಅಂಬುಲೆನ್ಸ್‌, ನಾಲ್ಕು ಅಧಿಕಾರಿಗಳು ದಡದಡನೇ ಮನೆಯ ಮುಂದೆ ಇಳಿದರು, ಹಿಂದಿನ ಮನೆಗೆ ನುಗ್ಗಿ ಕಳ್ಳರನ್ನು ಸೆರೆಹಿಡಿದರು.  ಹಿರಿಯ ಅಧಿಕಾರಿ ದುರು­ಗುಟ್ಟಿ­ಕೊಂಡು ಕಿಟ್ಟಣ್ಣನನ್ನು ನೋಡಿ ಕೇಳಿದರು, ‘ನೀವು ಕಳ್ಳರನ್ನು ಕೊಂದೇ ಬಿಟ್ಟಿದ್ದೇ­ನೆಂದು ಹೇಳಿದಿರಂತೆ’. ‘ಹೌದು ಸರ್, ಹಾಗೆ ಹೇಳದಿದ್ದರೆ ನಿಮ್ಮಲ್ಲಿ ವಾಹನಗಳು, ಅಧಿಕಾರಿ­ಗಳು ಎಲ್ಲಿ ಸಿಗುತ್ತಿದ್ದರು?’ ಎಂದು ಹೇಳಿ ಕೈತಟ್ಟಿ ನಕ್ಕ. ಸೃಜನಶೀಲತೆ ತಕ್ಷಣದಲ್ಲೇ ಉಕ್ಕುವಂತಹದ್ದು.  ಅದು ಎಂಥ ಸಮಯದಲ್ಲೂ ನಮ್ಮನ್ನು ಕಾಪಾಡುವ ಬ್ಯಾಟರಿ ಇದ್ದಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry