ತನ್ನನ್ನೇ ಗುಡಿಸತೊಡಗಿದೆಯೇ ಆಪ್ ಪೊರಕೆ?

7

ತನ್ನನ್ನೇ ಗುಡಿಸತೊಡಗಿದೆಯೇ ಆಪ್ ಪೊರಕೆ?

ಡಿ. ಉಮಾಪತಿ
Published:
Updated:
ತನ್ನನ್ನೇ ಗುಡಿಸತೊಡಗಿದೆಯೇ ಆಪ್ ಪೊರಕೆ?

ಕಾಂಗ್ರೆಸ್- ಬಿಜೆಪಿಗಳಿಗೆ ಹೋಲಿಸಿದರೆ ಆಮ್ ಆದ್ಮಿ ಪಾರ್ಟಿ ಎಂಬುದು ನೆನ್ನೆ ಮೊನ್ನೆ ಹುಟ್ಟಿದ ಅಂಬೆಗಾಲಿಕ್ಕುವ ಕೂಸು. ನಡೆವುದ ಕಲಿವ ಮುನ್ನವೇ ಓಡುವ ದುರಾಸೆ ಅದಕ್ಕೆ. ಪಂಜಾಬಿನಲ್ಲಿ ಅರೆಯಶಸ್ಸು ಕಂಡಿದೆ. ದೆಹಲಿಯ ಪೌರ ಚುನಾವಣೆಗಳಲ್ಲಿ ಮುಖ ಜಜ್ಜಿಸಿಕೊಂಡಿದೆ.

 

ಭ್ರಷ್ಟಾಚಾರ ವಿರೋಧಿ ಆಂದೋಲನದ ಫಲವಾಗಿ ಹುಟ್ಟಿದ ಈ ಪಕ್ಷ ದಿಲ್ಲಿಯಿಂದಾಚೆಗೂ ದೇಶದ ಮೂಲೆ ಮೂಲೆಗಳಲ್ಲಿ ಹೊಸ ರಾಜಕಾರಣದ ಕನಸನ್ನು ಹುಟ್ಟಿ ಹಾಕಿದ್ದು ಸುಳ್ಳಲ್ಲ.

 

ಕೊಳೆತ ಗಾಳಿಯ ರಾಜಕಾರಣದಿಂದ ಉಸಿರುಕಟ್ಟಿದ್ದ ಮಧ್ಯಮ-ಕೆಳಮಧ್ಯಮ ವರ್ಗದ ಜನಸಮೂಹಗಳು ಈ ಪಕ್ಷದತ್ತ ಆಸೆಗಣ್ಣು ಅರಳಿಸಿದ್ದವು. ಕೈಲಿದ್ದ ಕೆಲಸ  ಬಿಟ್ಟು, ಸ್ವಂತ ಇಚ್ಛೆಯಿಂದ ಆಮ್ ಆದ್ಮಿ ಪಾರ್ಟಿಯ ಗಾಂಧೀ ಟೋಪಿ ಧರಿಸಿದ ಸಾವಿರಾರು ಸ್ವಯಂಸೇವಕರ ಪಡೆಯೇ ಬೀದಿಗಿಳಿದು ಬಹಳ ವರ್ಷಗಳೇನೂ ಆಗಿಲ್ಲ. ಆದರೆ ಈ ಚೇತೋಹಾರಿ ವಿದ್ಯಮಾನ ಇಷ್ಟು ಬೇಗನೆ ಹಳಸಲು ಹಳವಂಡ ಆದೀತೆಂಬ ನಿರೀಕ್ಷೆ ಬಹಳ ಮಂದಿಗೆ ಇರಲಿಲ್ಲ.

 

ಒಂದು ಕಾಲಕ್ಕೆ ಕಾಂಗ್ರೆಸ್ ಪಕ್ಷ ‘ಸಹಾಯಹಸ್ತ’ ಚಾಚಿತ್ತು. ಸಿಪಿಎಂನ ಕರ್ಮಠ ಸಿದ್ಧಾಂತವಾದಿ ಪ್ರಕಾಶ್ ಕಾರಟ್ ಅವರ ಮನಸ್ಸನ್ನು ಕೂಡ ಕರಗಿಸಿ ಮೆದುವಾಗಿಸಿತ್ತು ಈ ಪೊರಕೆ ಪಕ್ಷ.

 

ಪಿಸುಮಾತು, ಮೆಲುನುಡಿ, ಕಲರವವನ್ನು ಆಲಿಸಿ ದಿಲ್ಲಿಯ ಜನರ ಪಾಲಿಗೆ ಹೊಸ ಶ್ರವಣ ಸಾಧನವೇ ಆಗಿಹೋಗಿದ್ದ ಆಮ್ ಆದ್ಮಿ ಪಾರ್ಟಿ ಬರ ಬರುತ್ತ ಈ ಮಹಾನಗರದ ಕೂಗು, ಕಿವಿ ಮೇಲೆ ಬೀಳದಷ್ಟು ಮರಗಿವುಡಾದದ್ದು ದುರಂತವಲ್ಲದೆ ಮತ್ತೇನಿದ್ದೀತು?

 

ಆತ್ಮರತಿಯಲ್ಲಿ ಮುಳುಗೇಳುತ್ತಿದ್ದರೂ ಬಿಜೆಪಿ ಕಾಲ ಕೆಳಗಿನ ನೋಟವನ್ನು ಕಳೆದುಕೊಳ್ಳಲಿಲ್ಲ. ಮೈಮರೆಯಲಿಲ್ಲ. ಹೊಸ ಮುಖಗಳನ್ನು ಸಾಲುಗಟ್ಟಿಸಿತು. ಕಿಲುಬನ್ನು ತಿಕ್ಕಿ ತೊಳಕೊಂಡಿತು. ಹೊಸ ಭರವಸೆಗಳನ್ನು ಹುಟ್ಟಿಸಿತು. ನಗರಕೇಂದ್ರಿತ ರಾಜಕಾರಣಕ್ಕೆ ಹೊಸ ಲವಲವಿಕೆಯನ್ನೂ ನವನಾವೀನ್ಯವನ್ನೂ ತಂದುಕೊಟ್ಟ ಆಪ್ ನೋಡ ನೋಡುತ್ತಿದ್ದಂತೆಯೇ ದಾರಿ ಕಳೆದುಕೊಂಡಿತು. ಇದೀಗ ತನ್ನ ಪೊರಕೆಯಿಂದ ತನ್ನನ್ನೇ ಗುಡಿಸಿ ಹಾಕಿಕೊಂಡಿದೆ ಎನ್ನುತ್ತಾರೆ ಸಮಾಜಶಾಸ್ತ್ರಜ್ಞ ಶಿವ ವಿಶ್ವನಾಥನ್.

 

ಅಧಿಕಾರದಲ್ಲಿದ್ದರೂ ಸದಾ ದೂರುವವರನ್ನು ಮತದಾರರು ಮೆಚ್ಚುವುದಿಲ್ಲ. ದಿಲ್ಲಿ ಅರೆರಾಜ್ಯ. ಜನತಾಂತ್ರಿಕ ಒಕ್ಕೂಟ ವ್ಯವಸ್ಥೆಯಲ್ಲಿ ಪೂರ್ಣಪ್ರಮಾಣದ ರಾಜ್ಯವೊಂದು ಅನುಭವಿಸುವ ಸ್ವಾಯತ್ತತೆ, ಅಧಿಕಾರಗಳು ದಿಲ್ಲಿಯಂತಹ ಅರೆರಾಜ್ಯಕ್ಕೆ ಸಿಗುವುದಿಲ್ಲ.

 

ಈ ಕೊರತೆಯ ಕೂದಲು ಸೀಳುವ ಸೂಕ್ಷ್ಮಗಳ ಕುರಿತು ಜನ ತಲೆ ಕೆಡಿಸಿಕೊಳ್ಳುವುದಿಲ್ಲ. 70ರ ಪೈಕಿ 67 ಸೀಟುಗಳಲ್ಲಿ ಗೆಲ್ಲಿಸಿ ದೈತ್ಯ ಬಹುಮತ ನೀಡಿ ಕಳಿಸಿದ್ದರೂ ಇವರಿಗೇನು ಧಾಡಿ ಎಂಬುದೇ ಅವರ ಭಾವನೆ. ಈ ನವಿರು ಕೇಜ್ರಿವಾಲ್ ಜಾಣ್ಮೆಗೆ ನಿಲುಕದೆ ಹೋಯಿತು. ಸದಾ ದೂರುತ್ತ, ಗಂಟುಮೋರೆ ಧರಿಸಿ ಗೊಣಗುವ ಹಟಮಾರಿ ಮುದುಕ-ಮುದುಕಿಯಂತೆ ಕಂಡು ಬಂದರು ಕೇಜ್ರಿವಾಲ್.

 

ಬಿಹಾರ– ಉತ್ತರಪ್ರದೇಶದ  ಪೂರ್ವಾಂಚಲ ಸೀಮೆಯ ವಲಸೆದಾರರು ದಿಲ್ಲಿ ಜನಸಂಖ್ಯೆಯ ಶೇ 32ರಷ್ಟು ಎಂಬ ಚುನಾವಣಾ ಗಣಿತವನ್ನು ಬಿಜೆಪಿ ಜಾಣತನದಿಂದ ದುಡಿಸಿಕೊಂಡಿತು. ಕೇವಲ ಮೂರು ವರ್ಷಗಳ ಹಿಂದೆ ರಾಜಕಾರಣ ಪ್ರವೇಶಿಸಿದ ಹೊಚ್ಚ ಹೊಸ ಮುಖ ಭೋಜ್‌ಪುರಿ ಚಿತ್ರನಟ ಮನೋಜ್ ತಿವಾರಿ ಅವರನ್ನು ಮುಂದೆ ಮಾಡಿತು.

 

ಆಮ್ ಆದ್ಮಿ ಪಾರ್ಟಿಯ ದಿಲ್ಲಿ ಪ್ರಯೋಗದ ಮೇಲೆ ಇದೀಗ ಇಡೀ ದೇಶದ ಕಣ್ಣು ಕಿವಿಗಳು ನೆಟ್ಟಿವೆ. ಎರಡು ನಾಲಗೆಯ ಕಿಲುಬುಗಟ್ಟಿದ ರಾಜಕಾರಣದ ನಡುವಿನಿಂದ ಹೊಚ್ಚ ಹೊಸ ಗಾಳಿಯಂತೆ ಬೀಸಿ ಬಂದಿದ್ದ ಪಕ್ಷ ಆಮ್ ಆದ್ಮಿ ಪಾರ್ಟಿ.

 

ಆಂದೋಲನದಿಂದ ನೇರವಾಗಿ ಅಧಿಕಾರದ ಗದ್ದುಗೆಯ ಮೇಲೆ ಧುಮುಕಿರುವ ಕೇಜ್ರಿವಾಲ್ ಸಂಗಾತಿಗಳ ಮುಂದೆ ಹಾಸಿ ಹಬ್ಬಿದ್ದ ದಾರಿ ಕಲ್ಲು ಮುಳ್ಳಿನದು. ಅಪಾರ ನಿರೀಕ್ಷೆಗಳ ಭಾರೀ ಬೆಟ್ಟವನ್ನು ಆಮ್ ಆದ್ಮಿ  ಪಾರ್ಟಿ ದಿಲ್ಲಿ ಜನರ ಮುಂದೆ ಎಬ್ಬಿಸಿ ನಿಲ್ಲಿಸಿದೆ.

 

ಈ ಭರವಸೆಗಳನ್ನು ಈಡೇರಿಸಲು ಈ ಹೊಸ ರಾಜಕೀಯ ಪ್ರಯೋಗ ವಿಫಲವಾಗಿ ರಾಜಕೀಯ ಪ್ರಪಾತಕ್ಕೆ ಬೀಳುವುದನ್ನೇ ಕಾತರದಿಂದ ಕಾಯುತ್ತಿದೆ ಸಾಂಪ್ರದಾಯಿಕ ರಾಜಕಾರಣ.

 

ಮುರಿದು ಕಟ್ಟುವ ಹೊಸ ಪರಿಭಾಷೆಯ, ಚೇತೋಹಾರಿ ಪ್ರತಿಮೆಗಳ ಸಂಪ್ರದಾಯವಿರೋಧಿ ರಾಜಕಾರಣವನ್ನು ಆಮ್ ಆದ್ಮಿ ಪಾರ್ಟಿ ಮುಂದೆ ಮಾಡಿತ್ತು. ಆದರೆ ರಾಜಕಾರಣ ಎಂಬುದು ಕೆಂಪು ದೀಪಗಳ ಕಾರುಗಳು, ಮಂತ್ರಿಗಳ ಸರ್ಕಾರಿ ಬಂಗಲೆಗಳು, ಮೈಗಾವಲು ಭಟರೇ ಮುಂತಾದ ಸವಲತ್ತುಗಳ ನಿರಾಕರಣೆ ಮತ್ತು ಸರಳ ಶೈಲಿಗಳ ಸಂಕೇತ, ಪ್ರತಿಮೆ, ರೂಪಕಗಳಲ್ಲಿ ನಿಲ್ಲುವುದಲ್ಲ.

 

ಅದರಾಚೆಗೆ ಆಡಳಿತ ವೈಖರಿಯೇ ಅಗ್ನಿಪರೀಕ್ಷೆಯ ಅಸಲು ವಿಷಯ. ಅಧಿಕಾರ ಹಿಡಿದ ಬಳಿಕ ಕೇಜ್ರಿವಾಲ್ ಅವರಿಗೆ ನಿಂತಲ್ಲಿ, ಕುಳಿತಲ್ಲಿ, ನೋಡಿದಾ ಕಡೆಯೆಲ್ಲೆಲ್ಲ ತಮ್ಮ ಪಕ್ಷ ಮತ್ತು ಸರ್ಕಾರದ ವಿರುದ್ಧ ಪಿತೂರಿಗಳೇ ಪಿತೂರಿಗಳು ಕಾಣತೊಡಗಿದವು.

 

ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳು ಮತ್ತು ಹೊಸ ಸಮೂಹ ಮಾಧ್ಯಮಗಳನ್ನು ತಮ್ಮ ಗುರಿ ಸಾಧನೆಗೆಂದು ಕೇಜ್ರಿವಾಲರಷ್ಟು ಜಾಣತನದಿಂದ, ಪೂರ್ವಸಜ್ಜಿತ ತಂತ್ರಗಾರಿಕೆಯಿಂದ ಬಳಸಿಕೊಂಡವರು ದೇಶದ ಸ್ವಾತಂತ್ರ್ಯೋತ್ತರ ರಾಜಕೀಯ ಇತಿಹಾಸದಲ್ಲಿ ಮತ್ತೊಬ್ಬರು ಕಂಡು ಬರುವುದಿಲ್ಲ. ಅಣ್ಣಾ ಹಜಾರೆ ಎಂಬ ಉತ್ಸವ ಮೂರ್ತಿಯನ್ನು ಮುಂದಿಟ್ಟುಕೊಂಡು ನಡೆಸಿದ ಭ್ರಷ್ಟಾಚಾರ ವಿರೋಧಿ ಆಂದೋಲನ ಮತ್ತು  ಆ ನಂತರ ರಾಜಕಾರಣಕ್ಕೆ ಇಳಿದು ಆಮ್ ಆದ್ಮಿ ಪಾರ್ಟಿಯನ್ನು ಗೆಲ್ಲಿಸಿಕೊಂಡ ಎರಡೂ ಕ್ರಿಯೆಗಳಿಗೆ ಈ ಮಾತು ಅನ್ವಯಿಸುತ್ತದೆ.ಒಂದು ಹಂತದಲ್ಲಿ ನರೇಂದ್ರ ಮೋದಿ- ಅಮಿತ್ ಷಾರಂತಹ ಅಸಾಧ್ಯ ಜೋಡಿ ಕೂಡ ಕೇಜ್ರಿವಾಲ್ ತಂತ್ರಗಾರಿಕೆಯ ನಕಲಿಗೆ ಮುಂದಾದದ್ದು ಸುಳ್ಳೇನಲ್ಲ. ಆದರೆ ದಿಲ್ಲಿ ಪೌರ ಚುನಾವಣೆಗಳ ಭಾರೀ ಸೋಲಿನ ನಂತರ ಈ ಸ್ಥಿತಿ ತುಸು ಮಟ್ಟಿಗಾದರೂ ತಲೆಕೆಳಗಾಗಿರುವುದು ಘೋರ ವಿಡಂಬನೆ. ಉತ್ತರಪ್ರದೇಶದ  ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ, ರಜಾ ದಿನಗಳಿಗೆ ಮಾಡಿರುವ ಕತ್ತರಿ ಪ್ರಯೋಗವನ್ನು ದಿಲ್ಲಿಯ ಆಪ್ ಸರ್ಕಾರ ನಕಲು ಮಾಡಿದೆ. ನಕಲು ತಪ್ಪಲ್ಲ. ಆದರೆ ಬೌದ್ಧಿಕ ದಿವಾಳಿತನ ಇಷ್ಟು ಲಗುಬಗೆಯಿಂದ ಕವಿದದ್ದು ನಿರಾಶೆಯ ಸಂಗತಿ.

 

ರಾಜಕಾರಣ ಮತ್ತು ಆಡಳಿತ ಜನರ ನಡುವಿನಿಂದ ಎದ್ದು ಬರಬೇಕು ಎಂಬ ಪರ್ಯಾಯ ರಾಜಕಾರಣದ ಮಂತ್ರವನ್ನು ಜಪಿಸಿತ್ತು ಪಕ್ಷ. ಈ ಚರ್ಯೆಗಳ ಹಿಂದೆ ಕೇಜ್ರಿವಾಲ್ ಅವರಂತೆ ಅಥವಾ ಅವರಿಗಿಂತ ಪ್ರಖರವಾಗಿ ಆಲೋಚಿಸುವ ಮಿದುಳುಗಳಿದ್ದವು. ಈ ಅಮೂಲ್ಯ ಆಧಾರವನ್ನು ಉಡಾಳ ಹುಡುಗನಂತೆ ಎಸೆದು ಚೆಲ್ಲಿದರು ಕೇಜ್ರಿವಾಲ್.

 

ಅರವಿಂದರಂತಹ ಅಪ್ಪಟ ಜನತಂತ್ರವಾದಿಯ ಆಳದ ಕತ್ತಲ ಮೂಲೆಯಲ್ಲೊಬ್ಬ ಸರ್ವಾಧಿಕಾರಿ ಮೊದಲೇ ಅಡಗಿ ಕುಳಿತಿದ್ದ. ಗದ್ದುಗೆ ಏರಿದ ಮರುಗಳಿಗೆಯೇ ಆಕಳಿಸಿ ಮೈ ಮುರಿದೆದ್ದ. ಆತನನ್ನು ತುಳಿಯುವ ಪ್ರಯತ್ನವನ್ನು ಅರವಿಂದ್ ಮಾಡಲೇ ಇಲ್ಲ. ಪಕ್ಷದ ಒಳ-ಹೊರಗೆ ಇದಿರಾಗಿ ನಿಂತವರನ್ನು ಈ ಸರ್ವಾಧಿಕಾರಿ ಸದೆಬಡಿದ. ಕನ್ನಡಿಯನ್ನು ಬದ್ಧವೈರಿಯೆಂದು ಬಗೆದ. ಅಡಗಿ ಕುಳಿತವನ ವಿಕೃತಿಗಳಿಗೆ ನಿಸ್ವಾರ್ಥ ಕಾರ್ಯಕರ್ತರ ಸೇನೆ, ಹಿತೈಷಿಗಳು-ಬೆಂಬಲಿಗ ಬಳಗ ಬೆಚ್ಚಿ ಬಿದ್ದಿತು. ಭ್ರಮನಿರಸನಕ್ಕೆ ಜಾರಿತು.

 

ದೇಶಕ್ಕೊಬ್ಬ ಪ್ರಭಾವಿ ಲೋಕಪಾಲ ಬೇಕೆಂಬ ಆಂದೋಲನದ ನಡುವಿನಿಂದ ಹುಟ್ಟಿ ಬಂದ ಪಕ್ಷ ತನ್ನದೇ ಆಂತರಿಕ ಲೋಕಪಾಲ ಅಡ್ಮಿರಲ್ ರಾಮದಾಸ್ ಅವರನ್ನು ಅವಹೇಳನಕ್ಕೆ ಗುರಿ ಮಾಡಿ ಕಿತ್ತೆಸೆದದ್ದು ವಿಶೇಷ ವ್ಯಂಗ್ಯ. ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಬಾಯಿ ತೆರೆದ ಭಿನ್ನಮತೀಯರನ್ನು ಝಾಡಿಸಿ ಒದ್ದು ಹೊರಹಾಕಿದವರು ಬಾಡಿಗೆ ಬೌನ್ಸರುಗಳು.

 

ಪಕ್ಷದ ಆತ್ಮಸಾಕ್ಷಿಗಳಂತಿದ್ದ ಪ್ರಶಾಂತ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಹೀನಾಯವಾಗಿ ಹೊರ ಹಾಕಿದ್ದು ಯಾಕೆಂದು ಅರವಿಂದ್ ಮನದಟ್ಟು ಮಾಡಿಕೊಟ್ಟಿಲ್ಲ. ಮೇಧಾ ಪಾಟ್ಕರ್ ಅವರಂತಹ ಜನಪರ ಚೈತನ್ಯ ಬೇಸತ್ತು ಹೊರ ನಡೆದದ್ದು ಅಧಃಪತನಕ್ಕೆ ಹಿಡಿದ ಕೈಮರ.

 

ಮೋಹಭಂಗ ಹಲವು ಹಂತಗಳಲ್ಲಿ ಜಿನುಗತೊಡಗಿ ಬಹಳ ಕಾಲವಾಯಿತು. ಭಟ್ಟಂಗಿತನದ ನಿರಾಕರಣೆಯಲ್ಲಿ ಹುಟ್ಟಿದ ಪಕ್ಷ ಕಡೆಗೆ ಅದೇ ಹಳಸಲು ಮೌಲ್ಯವನ್ನು ಅಪ್ಪಿಕೊಳ್ಳುವುದು ಆತ್ಮಘಾತಕ. ಈ ಘಟನೆಗಳತ್ತ ಒಮ್ಮೆ ಹಿಂತಿರುಗಿ ನೋಡಿ ಆತ್ಮಾವಲೋಕನ ಮಾಡಿಕೊಂಡರೆ ನಷ್ಟವೇನೂ ಇಲ್ಲ.

 

ಆಮ್ ಆದ್ಮಿ ಪಾರ್ಟಿ ದಿಲ್ಲಿಯ ಹೊರಗೂ ಜನಮನ ಗೆದ್ದರೆ ತನ್ನ ಗತಿಯೇನು ಎಂದು ಗಾಬರಿ ಬಿದ್ದ ರಾಷ್ಟ್ರೀಯ ಪಕ್ಷವೊಂದು ಹೊಸ ಪಕ್ಷವನ್ನು ಛಿದ್ರಗೊಳಿಸುವ ಹುನ್ನಾರಗಳಲ್ಲಿ ತೊಡಗಿದ್ದು ಹೌದು. ಆದರೆ ಈ ಹುನ್ನಾರಗಳಿಗೆ ತಾನೂ ತಾಳ ಹಾಕುತ್ತಿದ್ದೇನೆ ಎಂಬ ಅನುಮಾನ ಮೂಡಿಸುವಂತೆ ಮೀಡಿಯಾದ ಒಂದು ಗಣನೀಯ ವರ್ಗ ನಡೆದುಕೊಂಡಿರುವುದೂ ಸುಳ್ಳಲ್ಲ.

 

ಸಮೂಹ ಮಾಧ್ಯಮಗಳು ಮನಗಾಣಬೇಕು. ಒಬ್ಬರನ್ನು ತಲೆಯ ಮೇಲೆ ಹೊತ್ತಾಕ್ಷಣಕ್ಕೆ ಮತ್ತೊಬ್ಬರನ್ನು ಪಾತಾಳಕ್ಕೆ ತುಳಿಯಬೇಕಿಲ್ಲ. ಆದರೆ ಅಂತಹ ಪ್ರವೃತ್ತಿಯನ್ನು ಎದುರಿಸಲು ಅರವಿಂದ್ ಆರಿಸಿಕೊಂಡ ವಿಧಾನ ಮತ್ತು ಕೈಗೆ ಎತ್ತಿಕೊಂಡ ಹತಾರುಗಳು ಅಸಮರ್ಥನೀಯ.

 

ಆಮ್ ಆದ್ಮಿ ಪಾರ್ಟಿಯ ವೈಚಾರಿಕ ಸ್ಪಷ್ಟತೆ ಇನ್ನೂ ಹರಳುಗಟ್ಟಬೇಕಿದೆ. ಎಡ, ಬಲ, ಮಧ್ಯಮ ಪಂಥೀಯ ವಿಚಾರಧಾರೆಗಳ ಮೈತ್ರಿಕೂಟದಂತಿದೆ ಈ ಪಕ್ಷ. ಹೋರಾಟಗಳಿಗೆ ಕೇವಲ ನೈತಿಕ ನೆಲೆಯಿದ್ದರೆ ಸಾಲದು ಸೈದ್ಧಾಂತಿಕ ನಿಲುವು ಬೇಕು ಎನ್ನುವ ತತ್ವದಲ್ಲಿ ಈ ಪಕ್ಷಕ್ಕೆ ನಂಬಿಕೆಯಿಲ್ಲ. ವ್ಯಕ್ತಿಗಳನ್ನು ಬದಲಾಯಿಸಿದರೆ ಸಾಕು, ಅಸಮಾನತೆಯ ಮೂಲ ಬೇರುಗಳನ್ನು ಮುಟ್ಟುವ ಅಗತ್ಯವೇ ಇಲ್ಲ ಎಂಬ ಅತಿ ಸರಳೀಕೃತ ತಿಳಿವಳಿಕೆ ಈ ಪಕ್ಷದ ಬಹುಮುಖ್ಯ ಮಿತಿ.

 

ಹತ್ತು ವರ್ಷ ಕಾಲ ಮುಖ್ಯಮಂತ್ರಿ ಹುದ್ದೆಯ ನಂತರವೂ ಅದೇ ಹಳೆಯ ಕಬ್ಬಿಣದ ಪುಟ್ಟ ಟ್ರಂಕನ್ನು ಕೈಲಿ ಹಿಡಿದು ಮುಖ್ಯಮಂತ್ರಿ ನಿವಾಸ ತೊರೆದು ಸೈಕಲ್ ರಿಕ್ಷಾ ಏರಿ ಶಾಸಕರ ಭವನದ ಕೊಠಡಿಗೆ ಹೊರಟವರು ತ್ರಿಪುರಾದ ನೃಪೇನ್ ಚಕ್ರವರ್ತಿ.

 

ನಾಲ್ಕು ಬಾರಿ ತಮ್ಮ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ಮುಖ್ಯಮಂತ್ರಿಯೊಬ್ಬರು ಈಗಲೂ ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಾರೆ. ಸಂಬಳವನ್ನೆಲ್ಲ ಪಕ್ಷಕ್ಕೆ ಒಪ್ಪಿಸಿ, ಪಕ್ಷ ಕೂಡುವ ಐದು ಸಾವಿರ ರೂಪಾಯಿಗಳನ್ನಷ್ಟೇ ಪಡೆಯುವವರು ಅದೇ ತ್ರಿಪುರಾದ ಈಗಿನ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್.

 

ದಿನಗೂಲಿಯ ಸಂಬಳದಲ್ಲಿ ಬದುಕು ನಡೆಸಬೇಕೆಂದು ತಮ್ಮ ಪಕ್ಷ ಗೊತ್ತು ಮಾಡಿರುವ ಆದರ್ಶವನ್ನು ಚಾಚೂ ತಪ್ಪದೆ ಪಾಲಿಸುವವರು ಅವರು... ಇಂತಹ ಅಸಲೀ ಆಮ್ ಆದ್ಮಿಗಳ ಬದುಕುಗಳು ಕೇಜ್ರಿವಾಲ್ ಸಂಗಾತಿಗಳಿಗೆ ಆದರ್ಶ ಆಗಿರುವ ಸೂಚನೆಗಳು ಇನ್ನೂ ಒಡಮೂಡಿಲ್ಲ.

 

2015ರಲ್ಲಿ ಆಮ್ ಆದ್ಮಿ ಪಾರ್ಟಿ ಎಂಬ ಗುಬ್ಬಚ್ಚಿ, ಬಿಜೆಪಿಯ ಹದಿನೆಂಟು ಅಕ್ಷೋಹಿಣಿ ಸೈನ್ಯದ ಬ್ರಹ್ಮಾಸ್ತ್ರಗಳನ್ನು ಎದುರಿಸಿ ಗೆದ್ದಿತ್ತು. ಏಳೇ ತಿಂಗಳ ಹಿಂದೆ ಧಗಧಗಿಸಿದ್ದ ಮೋದಿ ವರ್ಚಸ್ಸಿಗೆ ಗುಬ್ಬಚ್ಚಿ ಗ್ರಹಣ ಹಿಡಿಸಿಬಿಟ್ಟಿತ್ತು. ಗುಬ್ಬಚ್ಚಿ ಈಗ ಗಿಡುಗನೇನೂ ಆಗಿಲ್ಲ. ಗುಬ್ಬಚ್ಚಿಯ ಸರಳತೆ, ವಿನಮ್ರತೆ ಕಾರ್ಯಕ್ಷಮತೆಗೆ ಮಂಕು ಕವಿದಿದೆ. ಜಡತೆ ಆವರಿಸಿದೆ. ಕೇಜ್ರಿವಾಲ್ ಕಂಪನಿಯನ್ನು ಹಣಿಯಲು ಹೊಸ ವ್ಯೂಹಗಳನ್ನು ಭಿನ್ನ ಅಸ್ತ್ರಗಳನ್ನು ಮೋದಿ- ಅಮಿತ್ ಷಾ ಜೋಡಿ ವರ್ಷಗಳಿಂದ ಹುಡುಕತೊಡಗಿತ್ತು. ಈ ಹುಡುಕಾಟ ಸದ್ಯಕ್ಕೆ ಫಲ ನೀಡಿದೆ.

 

ರಾಜಕೀಯ ವಿಶ್ಲೇಷಕರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಆಮ್ ಆದ್ಮಿ ಪಾರ್ಟಿಯನ್ನು ಮುಂದಕ್ಕೆ ನುಗ್ಗಿಸಿದ ಅಸಾಧಾರಣ ಬೆಳವಣಿಗೆಯ ಹಿಂದಿರುವ ಶಕ್ತಿ ದಿಲ್ಲಿಯ ಕೆಳವರ್ಗಗಳ ಜನಸಮುದಾಯ.

 

ಸಣ್ಣಪುಟ್ಟ ವ್ಯಾಪಾರಿಗಳು, ಕಾರ್ಮಿಕರು, ಕೂಲಿಗಳು, ಮನೆಕೆಲಸದ ಮಂದಿ, ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುವವರು, ಅಡುಗೆಯವರು, ಸೆಕ್ಯೂರಿಟಿ ಗಾರ್ಡುಗಳು, ಅಸಂಘಟಿತ ವಲಯಗಳ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮುಂತಾದ ಶ್ರಮಿಕ ವರ್ಗ. ಆನೆಯನ್ನೂ ಕೆಡವಬಲ್ಲದು ಇಂತಹ ಇರುವೆ ಸೈನ್ಯ.

 

2015ರ ಐತಿಹಾಸಿಕ ಗೆಲುವಿನ ನಂತರದ ಪಯಣದಲ್ಲಿ ಈ ಹೊಸ ಪಕ್ಷ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ.

 

ಆಮ್ ಆದ್ಮಿ ಪಾರ್ಟಿಯಂತಹ ಭಿನ್ನ ಬಗೆಯ ಹೊಸ ರಾಜಕೀಯ ಪಕ್ಷ ಎಡವಿ ಬೀಳುವ, ಎದ್ದೇಳುವ ಪ್ರಕ್ರಿಯೆ ಕೂಡ ಜನತಂತ್ರದ ಯಶಸ್ಸಿಗೆ ಬಹುಮೂಲ್ಯ ಪ್ರಯೋಗ ಎಂಬುದನ್ನು ಅಲ್ಲಗಳೆಯಲುಬಾರದು.

 

ನಾವೀನ್ಯಕ್ಕೂ ನಾಟಕೀಯತೆಗೂ ನೆಲ ಮುಗಿಲುಗಳ ಅಂತರವಿದೆ ಎಂಬ ಮಾತನ್ನು ಕೇಜ್ರಿವಾಲ್ ಸಂಗಾತಿಗಳು ಮತ್ತೆ ನೆನಪಿಸಿಕೊಳ್ಳಲಿ. ನೆಲಕ್ಕೆ ಕಿವಿಯಾನಿಸಿ ನಿಜ ಕಾಯಕದಲ್ಲಿ ತೊಡಗಿಸಿಕೊಳ್ಳುವುದು ಬಿಟ್ಟು ಯಶಸ್ಸಿಗೆ ಅಗ್ಗದ ಮತ್ತೊಂದು ದಾರಿಯಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry