5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ತಪ್ಪಿದ ದಾರಿ

ಗುರುರಾಜ ಕರ್ಜಗಿ
Published:
Updated:

ತಂದೆ- ಮಗ ಕಾಲೇಜಿನಿಂದ ಹೊರ­ಟರು. ಇಬ್ಬರೂ ಮಾತನಾಡಲಿಲ್ಲ. ತಂದೆಯ ಮುಖದಲ್ಲಿ ದುಗುಡ ಕುಣಿಯುತ್ತಿದ್ದುದು ಕಾಣುತ್ತಿತ್ತು. ಇಬ್ಬರೂ ಕಾರಿನಲ್ಲಿ ಕುಳಿತರು. ತಂದೆಯೇ ಕಾರು ನಡೆಸುತ್ತಿದ್ದರು. ಅರ್ಧ ಗಂಟೆಯ ಹಿಂದೆ ಪ್ರಾಂಶುಪಾಲರ ಕೊಠಡಿಯಲ್ಲಿ ನಡೆದ ಚರ್ಚೆಯ ನೆನಪಾಗಿ ಅವರ ಕೈ ಸ್ಟಿಯರಿಂಗ್ ಮೇಲೆ ಬಿಗಿಯಾಯಿತು.‘ನಿಮ್ಮ ಪ್ರಾಂಶು­ಪಾಲರು ಹೇಳಿದ್ದನ್ನು ಕೇಳಿಸಿ­ಕೊಂಡೆಯಾ? ನನಗಂತೂ ಮುಖಕೆಟ್ಟು ಹೋಯಿತು. ನನಗೆ ಈ ತರಹದ ಅಪಮಾನ ಎಂದೂ ಆಗಿರಲಿಲ್ಲ’ ಎಂದರು ತಂದೆ. ಚ್ಯೂಯಿಂಗ್‌­ಗಮ್ ಅಗೆಯುತ್ತಿದ್ದ ಮಗ ನಿರ್ವಿಕಾರವಾಗಿ ಕಿಟಕಿಯಾಚೆ ನೋಡುತ್ತಿದ್ದ. ಅಪ್ಪ ಹೇಳಿದ ಮಾತು ಕಿವಿಯ ಮೇಲೆಯೇ ಬಿದ್ದಂತಿರಲಿಲ್ಲ. ಅಪ್ಪ ಮತ್ತೆ ಕೇಳಿದರು, ‘ನಿಮ್ಮ ಪ್ರೊಫೆಸರರೂ ಅದೇ ಮಾತು ಹೇಳಿದರಲ್ಲ? ನೀನು ಸರಿಯಾದವರ ಜೊತೆಗೆ ಸ್ನೇಹ ಮಾಡಿಲ್ಲ.ಅವರಾರೂ ಓದಲು ಬಂದವರಲ್ಲ. ನೀನು ಇತ್ತೀಚಿಗೆ ಸಿಗರೇಟು ಸೇದುತ್ತಿದ್ದೀಯಂತೆ, ಹೌದೇ?’. ‘ಇಲ್ಲಪ್ಪ, ನೀನು ಸುಮ್ಮನೇ ವಿಷಯ­ವನ್ನು ದೊಡ್ಡದನ್ನಾಗಿ ಮಾಡು­ತ್ತಿದ್ದೀ. ಈ ಪ್ರಿನ್ಸಿಪಾಲರು, ಪ್ರೊಫೆಸರು­ಗಳು ಎಲ್ಲರ ಬಗ್ಗೆ ಹಾಗೆಯೇ ಹೇಳುತ್ತಾರೆ. ತಾವು ಸಣ್ಣವರಾಗಿದ್ದಾಗ ಹೇಗಿದ್ದರೋ, ನಾವೂ ಹಾಗೆಯೇ ಇರಬೇಕೆಂದು ಬಯಸುತ್ತಾರೆ’ ಎಂದ ಮಗ. ‘ಹಾಗೆ ಮಾತನಾಡ­ಬೇಡ ನೀನು. ಅವರು ಕೊನೆಗೆ ಹೇಳಿದ ಮಾತನ್ನು ನಾನು ಮರೆಯಲಾರೆ. ನಿಮ್ಮ ಹುಡುಗ ದಾರಿ ಬಿಟ್ಟು ಹೋಗುತ್ತಿದ್ದಾನೆ. ಅವನು ಹೀಗೆಯೇ ಮುಂದುವರೆದರೆ ಅವನಿಗೆ ಯಾವ ಭವಿಷ್ಯವೂ ಇಲ್ಲ. ಅವನನ್ನು ಕಾಲೇಜಿನಿಂದ ಹೊರಗೆ ಹಾಕಿಬಿಡುತ್ತೇವೆ ಎಂದರು ಕೇಳಿಸಲಿಲ್ಲವೇ?’ ತಂದೆಯ ಧ್ವನಿ ನಡುಗುತ್ತಿತ್ತು.‘ಹೌದಪ್ಪ, ನಿಮಗೆ ಅಭಿಮಾನ ಬರು­ವಂತಹ ಯಾವ ಕೆಲಸವನ್ನೂ ಮಾಡಿಲ್ಲ ನಿಜ. ನನಗೆ ಸ್ನೇಹಿತರ ಕಂಪನಿ ಬೇಕು, ಪಾರ್ಟಿ ಮಾಡಬೇಕು ಎನ್ನಿಸುತ್ತೆ. ಅದನ್ನು ಬಿಡಲಾರೆ. ಆದರೆ ಅಪ್ಪಾ, ನೀವು ಚಿಂತೆ ಮಾಡಬೇಡಿ. ನಾನು ದಾರಿ ತಪ್ಪಿದ್ದೇನೆ ಎಂದು ನಿಮಗನ್ನಿಸುತ್ತದಲ್ಲ? ನಾನು ಹೇಗೋ ಮತ್ತೆ ಮರಳಿ ದಾರಿಗೆ ಬಂದೇ ಬರುತ್ತೇನೆ’ ಎಂದ ಮಗ. ಕಾರು ಚಲಿಸುತ್ತಿತ್ತು. ಸ್ವಲ್ಪ ಸಮಯದ ನಂತರ ಮಗ ಕೂಗಿದ, ‘ಅಪ್ಪಾ ನಿಮ್ಮ ಲಕ್ಷ್ಯ ಎಲ್ಲಿದೆ? ಮನೆಗೆ ಹೋಗಲು ಎಡಗಡೆ ತಿರುಗ­ಬೇಕಿತ್ತಲ್ಲ? ಹಾಗೆಯೇ ಹೊರಟಿರಿ’. ‘ಪರವಾಗಿಲ್ಲ, ಸ್ವಲ್ಪ ಮುಂದೆ ಹೋಗಿ ಮುಂದಿನ ತಿರುವಿನಲ್ಲಿ ಕಾರು ತಿರುಗಿಸುತ್ತೇನೆ’ ಎಂದರು ತಂದೆ.ಮತ್ತೆ ಒಂದು ಕಿಲೋಮೀಟರ್ ದಾರಿ ಸವೆದಾಗ ಮತ್ತೆ ಮಗ ಕೂಗಿದ, ‘ಅಪ್ಪಾ, ಏನು ಮಾಡುತ್ತಿದ್ದೀರಿ? ಎಡಗಡೆಗೆ ಕಾರನ್ನು ತಿರುಗಿಸದೇ ಮುಂದೆಯೇ ಹೋಗು­ತ್ತಿದ್ದೀರಿ’. ಅವನ ಚಿಂತೆಯೆಂದರೆ ಹೀಗೆಯೇ ಮುಂದೆ ಹೋಗುತ್ತಿದ್ದರೆ ಮರಳಿ ಮನೆಗೆ ಹೋಗಲು ತುಂಬ ತಡವಾಗುತ್ತದೆ. ತನಗೂ ಕ್ರಿಕೆಟ್ ಆಡಲು ಹೋಗು­ವುದಕ್ಕೆ ವಿಳಂಬವಾ­ಗುತ್ತದೆ. ಕಾರು ಸಾಗುತ್ತಲೇ ಇತ್ತು. ಮಗ ಕಳವಳದಿಂದ ಹೇಳಿದ, ‘ಅಪ್ಪಾ ನಾವು ಹೀಗೆಯೇ ಸಾಗಿದರೆ ಮರಳಿ ಮನೆಗೆ ಹೋಗುವುದು ಕಷ್ಟ’. ಅಪ್ಪ ತಕ್ಷಣ ರಸ್ತೆಯಿಂದ ಕಣ್ಣು ತೆಗೆದು ಮಗನನ್ನು ದಿಟ್ಟಿಸಿ ಹೇಳಿದರು, ‘ಹೌದು ಮಗೂ, ತಪ್ಪು ದಾರಿಯಲ್ಲಿ ದೂರ ಹೋದಷ್ಟೂ ಮರಳಿ ಸರಿ­ದಾರಿಗೆ ಬರುವುದು ಕಷ್ಟವಾಗುತ್ತದೆ.ಮನೆಗೆ ಹೋಗುವ ದಾರಿ ತಪ್ಪಿದಾಗಲೇ ನಿನಗೆ ಆತಂಕವಾದರೆ ಜೀವನದ ದಾರಿ ತಪ್ಪುತ್ತಿರುವ ನಿನ್ನನ್ನು ಕಂಡು ನನಗೆಷ್ಟು ಆತಂಕವಾಗಬೇಡ?’ ಮಗನಿಗೆ ತನ್ನ ತಪ್ಪಿನ ಅರಿವಾಯಿತು. ಜೀವನದ ಸೆಳೆತಗಳ, ಆಕರ್ಷಣೆಗಳ ಹಿಡಿತ ತರುಣರ ಮೇಲೆ ಬಿಗಿಯಾಗುವುದು ಸುಲಭ. ಹಾಗಾ­ದಾಗ ಅವರು ತಮ್ಮ ಬದುಕಿನ ಸರಿಯಾದ ದಾರಿಯನ್ನು ಮರೆತು ಬೇರೆಡೆಗೆ ಹೋಗುವುದೂ ಉಂಟು. ಎಷ್ಟು ಬೇಗ ತಪ್ಪನ್ನು ಸರಿಪಡಿಸಿಕೊಂಡು ಸರಿದಾರಿಗೆ ಬರು­ತ್ತಾರೋ ಅಷ್ಟು ಅವರ ಜೀವನಕ್ಕೆ ಒಳ್ಳೆಯದು. ಮುಂದೆ ಸರಿಯಾದೀತು ಎಂದುಕೊಳ್ಳುತ್ತ ತಪ್ಪುದಾರಿಯಲ್ಲೇ ನಡೆದರೆ ಮರಳಿ ಸರಿದಾರಿಗೆ ಬರುವುದು ಕಷ್ಟ ಮಾತ್ರವಲ್ಲ ಅಸಾಧ್ಯವೂ ಆಗಬ­ಹುದು. ತುಂಬ ಎಚ್ಚರಿಕೆ ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry