ತಪ್ಪು ಪ್ರಮಾಣಪತ್ರ ನೀಡುವ ಸಂಸದರನ್ನು ದಂಡಿಸಬೇಕು

7

ತಪ್ಪು ಪ್ರಮಾಣಪತ್ರ ನೀಡುವ ಸಂಸದರನ್ನು ದಂಡಿಸಬೇಕು

ಎ.ಸೂರ್ಯ ಪ್ರಕಾಶ್
Published:
Updated:
ತಪ್ಪು ಪ್ರಮಾಣಪತ್ರ ನೀಡುವ ಸಂಸದರನ್ನು ದಂಡಿಸಬೇಕು

ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ನೀಡುವ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ ಬಗ್ಗೆ, ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ತಪ್ಪು ಮಾಹಿತಿ ನೀಡುವ ಹಾಗೂ ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸುವ ಸಂಸದರು ಮತ್ತು ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರಿವೆ.

ಈ ಎರಡು ಅರ್ಜಿಗಳಲ್ಲಿ ಮೊದಲನೆಯದ್ದು ‘ಲೋಕ ಪ್ರಹರಿ’ ಎನ್ನುವ ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿರುವ ಅರ್ಜಿ. ನಾಮಪತ್ರಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಆಸ್ತಿ ವಿವರವನ್ನು ಪ್ರಮಾಣಪತ್ರದ ಮೂಲಕ ಘೋಷಿಸಿದರೆ ಮಾತ್ರ ಸಾಲದು ಎಂದು ಈ ಅರ್ಜಿಯಲ್ಲಿ ವಾದಿಸಲಾಗಿದೆ. ಹಲವು ಶಾಸಕರು ಮತ್ತು ಸಂಸದರ ಆಸ್ತಿಯು ಎರಡು ಚುನಾವಣೆಗಳ ನಡುವಿನ ಅವಧಿಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿರುವ ಕಾರಣ, ನಾಮಪತ್ರ ಸಲ್ಲಿಸುವ ಪ್ರತಿ ಅಭ್ಯರ್ಥಿಯೂ ತನ್ನ ಆದಾಯದ ಮೂಲ ಘೋಷಿಸಬೇಕು ಎಂದು ಅರ್ಜಿ ಆಗ್ರಹಿಸಿದೆ. 2014ರಲ್ಲಿ ಲೋಕಸಭೆಗೆ ಪುನರಾಯ್ಕೆ ಕಂಡ 320 ಸಂಸದರ ಆಸ್ತಿಯ ಮೌಲ್ಯ ಶೇಕಡ 100ರಷ್ಟು ಹೆಚ್ಚಾಗಿದೆ ಎಂದೂ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆರು ಜನ ಸಂಸದರ ಆಸ್ತಿಯ ಮೌಲ್ಯ ಶೇಕಡ 1000ದಷ್ಟು, 26 ಜನ ಸಂಸದರ ಆಸ್ತಿ ಮೌಲ್ಯ ಶೇ 500ರಷ್ಟು ಹೆಚ್ಚಾಗಿದೆ. ಹಾಗೆಯೇ, ಅನೇಕ ಶಾಸಕರ ಆಸ್ತಿಯ ಮೌಲ್ಯದಲ್ಲಿ ಕೂಡ ಭಾರಿ ಪ್ರಮಾಣದ ಹೆಚ್ಚಳ ಆಗಿದೆ. ಪ್ರಕರಣಗಳ ಪರಿಶೀಲನೆ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು, ಏಳು ಜನ ಸಂಸದರು ಹಾಗೂ 98 ಶಾಸಕರು ಚುನಾವಣೆ ಸಂದರ್ಭದಲ್ಲಿ ಘೋಷಿಸಿಕೊಂಡ ಆಸ್ತಿಯ ಮೌಲ್ಯವು ಅವರ ಘೋಷಿತ ಆದಾಯಕ್ಕಿಂತ ಹೆಚ್ಚಿನದ್ದಾಗಿತ್ತು ಎಂದು ಹೇಳಲು ಆಧಾರಗಳು ಸಿಕ್ಕಿವೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಸಂಸದರು ಹಾಗೂ ಶಾಸಕರಿಗೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಆರಂಭಿಸಬೇಕು ಎಂದು ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಹೇಳಿದೆ.

‘ಆಸ್ತಿ, ಶೈಕ್ಷಣಿಕ ಅರ್ಹತೆ ಹಾಗೂ ಅಪರಾಧ ಹಿನ್ನೆಲೆಯ ಬಗ್ಗೆ ಅಭ್ಯರ್ಥಿಗಳು ಪ್ರಮಾಣಪತ್ರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ವ್ಯವಸ್ಥೆ ರೂಪಿಸಿದೆ. ಆದರೆ, ಅಭ್ಯರ್ಥಿಗಳು ಪ್ರಮಾಣಪತ್ರದಲ್ಲಿ ಹೇಳುವ ಸಂಗತಿಗಳು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲ’ ಎಂದು ಎರಡನೆಯ ಅರ್ಜಿಯಲ್ಲಿ ಹೇಳಲಾಗಿದೆ. ಅಲ್ಲದೆ, ತಪ್ಪು ಪ್ರಮಾಣಪತ್ರ ಸಲ್ಲಿಸುವ ಅಭ್ಯರ್ಥಿಗಳನ್ನು ಶಿಕ್ಷಿಸಲು ಯಾವುದೇ ವ್ಯವಸ್ಥೆ ಇಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಸುಪ್ರೀಂ ಕೋರ್ಟ್‌ ಹಲವು ಕ್ರಮಗಳನ್ನು ಕೈಗೊಂಡಿದೆ, ಅಭ್ಯರ್ಥಿಗಳು ಬೇರೆ ಬೇರೆ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ, ಹೀಗಿದ್ದರೂ ಅಭ್ಯರ್ಥಿಗಳು ಸಲ್ಲಿಸುವ ಪ್ರಮಾಣಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಇಂಥದ್ದೊಂದು ವ್ಯವಸ್ಥೆಯನ್ನು ರೂಪಿಸಬೇಕಿದೆ. ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ಜಾರಿಯಲ್ಲಿರುವ ಕಾನೂನುಗಳಿಗೆ ಹಾಗೂ ಆಯ್ಕೆ ಮಾಡುವ ಜನರಿಗೆ ಚುನಾಯಿತ ಪ್ರತಿನಿಧಿಗಳನ್ನು ಉತ್ತರದಾಯಿ ಆಗಿಸುವಲ್ಲಿ ನಾವು ಎಷ್ಟರಮಟ್ಟಿಗೆ ಮುಂದಡಿ ಇಡುತ್ತೇವೆ ಎಂಬುದನ್ನು ಈ ಎರಡು ಪ್ರಕರಣಗಳ ಫಲಿತಾಂಶಗಳು ತೀರ್ಮಾನಿಸಲಿವೆ. ಆದರೆ ಈ ಎಲ್ಲ ವಿಚಾರಗಳಲ್ಲಿ ದೇಶದ ರಾಜಕಾರಣಿಗಳು ಪಾರದರ್ಶಕವಾಗಿ ಇರುವಂತೆ ಮಾಡಿದ್ದು ಸುಲಭದ ಕೆಲಸವೇನೂ ಆಗಿರಲಿಲ್ಲ. ಇದೊಂದು ಸುದೀರ್ಘ ಯುದ್ಧ.

ಅಭ್ಯರ್ಥಿಯ ಆಸ್ತಿ ಹಾಗೂ ಆತ ಎದುರಿಸುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯ ಮಾಡಲು ಪ್ರಜಾ ಪ್ರಾತಿನಿಧ್ಯ ಕಾಯ್ದೆ – 1951ಕ್ಕೆ ತಿದ್ದುಪಡಿ ತರಬೇಕು ಎಂದು ಕಾನೂನು ಆಯೋಗವು 1999ರಲ್ಲಿ ಸಲ್ಲಿಸಿದ ತನ್ನ 170ನೇ ವರದಿಯಲ್ಲಿ ಹೇಳಿತು. ಇದು ಪಾರದರ್ಶಕತೆಯ ವಿಚಾರದಲ್ಲಿ ಇಟ್ಟ ಮೊದಲ ಹೆಜ್ಜೆ. ಆದರೆ ಚುನಾಯಿತ ಪ್ರತಿನಿಧಿಗಳು ಈ ವಿಚಾರದಲ್ಲಿ ಮೌನವಾಗಿದ್ದರು. ಏಕೆಂದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತರುವ ಯಾವುದೇ ಸುಧಾರಣಾ ಕ್ರಮ ಶಾಸಕರಿಗೆ, ಸಂಸದರಿಗೆ ಇಷ್ಟವಾಗುವುದಿಲ್ಲ. ಆದರೆ, 2002ರಲ್ಲಿ ಮುಂದಡಿ ಇಟ್ಟ ಸುಪ್ರೀಂ ಕೋರ್ಟ್‌, ಈ ವಿಚಾರವಾಗಿ ಹೆಚ್ಚೂಕಮ್ಮಿ ಒಂದು ನಿಯಮವನ್ನೇ ರೂಪಿಸಿದ ನಂತರ, ರಾಜಕೀಯ ವ್ಯಕ್ತಿಗಳು ಈ ಶಿಫಾರಸುಗಳನ್ನು ಒಪ್ಪಿಕೊಳ್ಳಲೇಬೇಕಾಯಿತು.

ಅಭ್ಯರ್ಥಿಗಳು ಎದುರಿಸುತ್ತಿರುವ ಕ್ರಿಮಿನಲ್‌ ಪ್ರಕರಣಗಳು ಸೇರಿದಂತೆ ಉಳಿದೆಲ್ಲ ಮಾಹಿತಿಗಳನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸುವ ವಿಚಾರದಲ್ಲಿ ಸಹಾಯ ಮಾಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತು. ಎಲ್ಲ ಕಡೆಗಳಿಂದಲೂ ಒತ್ತಡಕ್ಕೆ ಒಳಗಾದ ಸಂಸತ್ತು, ಸುಪ್ರೀಂ ಕೋರ್ಟ್‌ನ ಆದೇಶವನ್ನು ಆಂಶಿಕವಾಗಿ ಅಸಿಂಧುಗೊಳಿಸುವಂತಹ ಕ್ರಮಕ್ಕೆ ಮುಂದಾಯಿತು. ಕಾಯ್ದೆಗೆ ತಿದ್ದುಪಡಿ ತಂದು, ಕೋರ್ಟ್‌ಗಳು ಕ್ರಿಮಿನಲ್‌ ಪ್ರಕರಣಗಳಲ್ಲಿ ಅಭ್ಯರ್ಥಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಿದ್ದರೆ, ಅಂತಹ ಮಾಹಿತಿಯನ್ನು ಮಾತ್ರ ಪ್ರಮಾಣಪತ್ರದಲ್ಲಿ ನೀಡಿದರೆ ಸಾಕು ಎಂದು ಹೇಳಲಾಯಿತು. ಆಸ್ತಿ, ಶೈಕ್ಷಣಿಕ ಅರ್ಹತೆ ಹಾಗೂ ಚುನಾವಣಾ ಪ್ರಾಧಿಕಾರಗಳು ಬಯಸುವ ಇನ್ಯಾವುದೇ ಮಾಹಿತಿ ನೀಡುವ ಅಗತ್ಯವಿಲ್ಲ ಎಂದೂ ಹೇಳಲಾಯಿತು.

ಈ ತಿದ್ದುಪಡಿಗಳನ್ನು ಇನ್ನೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಮತ್ತೊಮ್ಮೆ ಮಧ್ಯಪ್ರವೇಶ ಮಾಡಿದ ಸುಪ್ರೀಂ ಕೋರ್ಟ್‌, ತನ್ನ ಹಿಂದಿನ ಆದೇಶವನ್ನು ಆಂಶಿಕವಾಗಿ ಅಸಿಂಧುಗೊಳಿಸುವ ಕ್ರಮ ಅಸಾಂವಿಧಾನಿಕ ಎಂದು ಸಾರಿತು. ಈ ತೀರ್ಪು ಹೊರಬಿದ್ದ ನಂತರ, ಈ ಎಲ್ಲ ಅಂಶಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವುದು ಅಭ್ಯರ್ಥಿಗಳ ಪಾಲಿಗೆ ಕಡ್ಡಾಯವಾಯಿತು.

ರಾಜ್ಯಗಳ ಶಾಸನಸಭೆಗಳು ಹಾಗೂ ಸಂಸತ್ತಿಗೆ ನಡೆಯುವ ಚುನಾವಣೆಗಳಲ್ಲಿ ಅಭ್ಯರ್ಥಿ ಆದವರು ತಮ್ಮ ಆಸ್ತಿ, ಅಪರಾಧ ಹಿನ್ನೆಲೆ ಬಗ್ಗೆ ಮಾಹಿತಿ ನೀಡುವುದು ಈಗ ಕಡ್ಡಾಯ. ಪ್ರಮಾಣಪತ್ರವು ಅಭ್ಯರ್ಥಿಯ ಪ್ಯಾನ್ ಸಂಖ್ಯೆ, ಅಭ್ಯರ್ಥಿಯ, ಅಭ್ಯರ್ಥಿಯ ಪತಿ/ಪತ್ನಿಯ ಹಾಗೂ ಅಭ್ಯರ್ಥಿಯ ಎಲ್ಲ ಅವಲಂಬಿತರ ಆದಾಯ ತೆರಿಗೆ ರಿಟರ್ನ್ಸ್‌ ವಿವರ, ಅಭ್ಯರ್ಥಿ, ಅಭ್ಯರ್ಥಿಯ ಪತಿ/ಪತ್ನಿ ಹಾಗೂ ಅವಲಂಬಿತರು ಹೊಂದಿರುವ ಸ್ಥಿರ ಮತ್ತು ಚರಾಸ್ತಿಯ ವಿವರ, ಅಭ್ಯರ್ಥಿಯು ಸರ್ಕಾರಿ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹೊಂದಿರುವ ಋಣಭಾರದ ವಿವರ ನೀಡಬೇಕು. ಅಭ್ಯರ್ಥಿಯು ತನ್ನ ವೃತ್ತಿ, ಉದ್ಯೋಗ ಹಾಗೂ ಶೈಕ್ಷಣಿಕ ಅರ್ಹತೆಯ ಬಗ್ಗೆಯೂ ಮಾಹಿತಿ ನೀಡಬೇಕು.

ಚುನಾವಣಾ ಕಣದಲ್ಲಿ ಪಾರದರ್ಶಕತೆ ತರುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ 2002ರಲ್ಲಿ ನೀಡಿದ ತೀರ್ಪು ಬಹುದೊಡ್ಡ ಸುಧಾರಣೆಯನ್ನು ತಂದಿತು. ಇಂಥದ್ದೊಂದು ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸುವವರೆಗೆ ಮತದಾರರಿಗೆ ಅಭ್ಯರ್ಥಿಯ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿರುತ್ತಿರಲಿಲ್ಲ. ಸುಪ್ರೀಂ ಕೋರ್ಟ್‌ನ ಕ್ರಮವು ಪಾರದರ್ಶಕತೆಯನ್ನು ತಂದಿದೆ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ, ಈಗ ಸುಪ್ರೀಂ ಕೋರ್ಟ್‌ ಮುಂದೆ ಇರುವ ಎರಡು ಅರ್ಜಿಗಳು ಹೇಳುತ್ತಿರುವಂತೆ, ಇನ್ನೂ ಹೆಚ್ಚಿನ ಕೆಲಸಗಳು ಆಗಬೇಕಿವೆ.

ಲೋಕ ಪ್ರಹರಿ ಸಂಸ್ಥೆಯು ಒಗ್ಗೂಡಿಸಿರುವ ಮಾಹಿತಿ ಹೇಳುತ್ತಿರುವಂತೆ, ಐದು ವರ್ಷಗಳ ಅವಧಿಯಲ್ಲಿ ಹಲವು ಜನ ಶಾಸಕರು ಹಾಗೂ ಸಂಸದರ ಆಸ್ತಿಯ ಮೌಲ್ಯದಲ್ಲಿ ಶೇ 500ರಷ್ಟು ಹೆಚ್ಚಳ ಆಗಿದೆ. ಇದು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಹಾಗೂ ಆದಾಯ ತೆರಿಗೆ ಇಲಾಖೆಯ ತನಿಖೆಗೆ ಸೂಕ್ತವಾದ ಪ್ರಕರಣ. ಅಲ್ಲದೆ, ಅಭ್ಯರ್ಥಿಯ ಆದಾಯ ಮೂಲ ಏನು ಎಂಬ ಬಗ್ಗೆ ವಿವರಣೆ ಇರುವುದಿಲ್ಲ. ಎರಡನೆಯ ಅರ್ಜಿಯು ಹೇಳುತ್ತಿರುವಂತೆ, ಪ್ರಮಾಣಪತ್ರದಲ್ಲಿ ತಿಳಿಸಿರುವ ಮಾಹಿತಿಯನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲ. ಹಾಗೆಯೇ, ತಮ್ಮ ಹೇಳಿಕೆಗಳಿಗೆ ಪೂರಕವಾಗಿ ಅಭ್ಯರ್ಥಿಗಳು ದಾಖಲೆಗಳನ್ನು ಸಲ್ಲಿಸಬೇಕು ಎಂಬುದಿಲ್ಲ. ಈ ಎರಡು ಅರ್ಜಿಗಳ ವಿಚಾರದಲ್ಲಿ ಏನಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಚುನಾವಣಾ ರಾಜಕೀಯವನ್ನು ಪರಿಶುದ್ಧಗೊಳಿಸುವ ನಿಟ್ಟಿನಲ್ಲಿ ಇನ್ನೊಂದು ದೊಡ್ಡ ಹೆಜ್ಜೆ ಕೂಡ ಇದಾಗಿರಬಹುದು. ಕೆಲವು ರಾಜಕಾರಣಿಗಳ ಪಾಲಿಗೆ ಚುನಾವಣಾ ಯಶಸ್ಸು ಹಾಗೂ ಸಂಪತ್ತಿನ ಸಂಗ್ರಹ ಒಟ್ಟೊಟ್ಟಿಗೇ ಆಗುವುದು ಹೇಗೆ ಎಂಬುದೂ ನಮಗೆ ಗೊತ್ತಾಗಬಹುದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry