ಭಾನುವಾರ, ಡಿಸೆಂಬರ್ 8, 2019
21 °C

ತಲೆಮಾರುಗಳನ್ನು ರೂಪಿಸಿದ ಬೆಂಜಮಿನ್

ಟಿ.ಕೆ.ತ್ಯಾಗರಾಜ್
Published:
Updated:
ತಲೆಮಾರುಗಳನ್ನು ರೂಪಿಸಿದ ಬೆಂಜಮಿನ್

ಸುಮಾರು  ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ಆಗ ನನ್ನ ಮಗನಿಗೆ ಇನ್ನೂ ಮೂರು ವರ್ಷ. ನನ್ನ ಹುಟ್ಟೂರಾದ ಮಡಿಕೇರಿಗೆ ಹೋಗಿದ್ದೆವು. ತಾತ, ಅಜ್ಜಿ, ಅತ್ತೆ, ಚಿಕ್ಕಪ್ಪ ಸೇರಿದಂತೆ ಎಲ್ಲರಿಂದ ಮುದ್ದು ಮಾಡಿಸಿಕೊಂಡ ಖುಷಿಯಲ್ಲಿದ್ದ ನನ್ನ ಮಗ ಅಗ್ನಿತೇಜ್, ಷಹನಾಯ್ ತರಹದ ಮಕ್ಕಳ ಆಟಿಕೆ ವಾದ್ಯವನ್ನು ನುಡಿಸುತ್ತಿದ್ದ (ಊದುತ್ತಿದ್ದ ಎನ್ನುವುದೇ ಸರಿ). ಅವನ ಸಂಭ್ರಮವನ್ನು ಎಲ್ಲರೂಅನುಭವಿಸುತ್ತಿದ್ದರು.

ಕೆಲವೇ ಕ್ಷಣಗಳಲ್ಲಿ ಆ ಆಟಿಕೆ ವಾದ್ಯವನ್ನು ಊದುವ ಭಾಗದಲ್ಲಿ ಸಿಕ್ಕಿಸಿರುವ ಪೀಪಿ ಅದು ಹೇಗೋ ಸಡಿಲಗೊಂಡು ಬಾಯಿಯೊಳಗೆ ಹೋಗಿ ಗಂಟಲಲ್ಲಿ ಸಿಕ್ಕಿಕೊಂಡು ಉಸಿರು ಕಟ್ಟಿದಂತೆ ಸಂಕಟ ಅನುಭವಿಸುತ್ತಿದ್ದ. ನನ್ನ ಅಮ್ಮ ಸೇರಿದಂತೆ ಅಲ್ಲಿದ್ದ ಎಲ್ಲರೂ ಏನು ಮಾಡುವುದು ಎಂದು ತೋಚದೆ ಗಾಬರಿಯಾದರು. ಆದರೆ ನಾನು ಮಗನನ್ನು ಎತ್ತಿ ತಲೆ ಕೆಳಗೆ ಮಾಡಿ ಹಿಡಿದುಕೊಂಡಾಗ ಅವನ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಪೀಪಿ ಹೊರಕ್ಕೆ ಬಿತ್ತು. ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯ. ಆದರೆ ಹಾಗೆ ಮಾಡಬೇಕೆನ್ನುವುದು ನನಗೆ ಗೊತ್ತಿತ್ತು. ಒಟ್ಟಿನಲ್ಲಿ ಮುಂದೆ ಆಗಬಹುದಿದ್ದ ಅಪಾಯವೊಂದು ತಪ್ಪಿ ಹೋಗಿದ್ದ ಸಮಾಧಾನ ಎಲ್ಲರ ಮುಖದಲ್ಲಿ ವ್ಯಕ್ತವಾಗಿ ನಿಟ್ಟುಸಿರು ಬಿಟ್ಟಿದ್ದರು. ಅಂಥ ಸನ್ನಿವೇಶದಲ್ಲೂ ನನಗೆ ಆ ಉಪಾಯ ಹೊಳೆದದ್ದಾದರೂ ಹೇಗೆ ಎನ್ನುವ ಪ್ರಶ್ನೆ ಅಲ್ಲಿದ್ದ ಎಲ್ಲರದೂ ಆಗಿತ್ತು.

ಅದಕ್ಕೆ ಕಾರಣ ವಿಶ್ವವಿಖ್ಯಾತ ಮಕ್ಕಳ ತಜ್ಞ ಡಾ.ಬೆಂಜಮಿನ್ ಸ್ಪಾಕ್ (2-5-1903 ರಿಂದ 15-3-1998) ಬರೆದಿದ್ದ ‘Baby and child care’  ಎಂಬ ಮಕ್ಕಳ ಪಾಲನೆಯ ಮಾರ್ಗದರ್ಶಿ ಪುಸ್ತಕ. ನಾನು ಉಲ್ಲೇಖಿಸಿರುವುದು ಒಂದು ಸಣ್ಣ ಉದಾಹರಣೆ ಮಾತ್ರ. ಅದು ಒಂದರ್ಥದಲ್ಲಿ ಆಗಷ್ಟೇ ಮಕ್ಕಳನ್ನು ಪಡೆದ ಯುವ ದಂಪತಿಗಳ ಪಾಲಿನ ಬೈಬಲ್. ಮಕ್ಕಳನ್ನು ಕಟ್ಟುನಿಟ್ಟಾಗಿ, ಅತಿ ಶಿಸ್ತುಬದ್ಧವಾಗಿ ಬೆಳೆಸುವ ಸಂಪ್ರದಾಯಸ್ಥ ಮನೋಸ್ಥಿತಿಯನ್ನು ಆಕ್ಷೇಪಿಸಿ ಸಹಜವಾಗಿ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದನ್ನು ಹೇಳಿಕೊಡುವ ಈ ಕೃತಿ 1946ರಲ್ಲಿ ಮೊದಲು ಪ್ರಕಟವಾದ ನಂತರ ಐದು ಕೋಟಿಗೂ ಹೆಚ್ಚು ಪ್ರತಿಗಳು ಖರ್ಚಾಗಿ 42 ಭಾಷೆಗಳಲ್ಲಿ ಅನುವಾದಗೊಂಡಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಖರ್ಚಾಗಿರುವ ಕೃತಿ ಎಂಬ ದಾಖಲೆ ಇರುವ ಬೈಬಲ್ ನಂತರದ ಸ್ಥಾನ ಇದಕ್ಕಿದೆ.

ಒಂದೊಂದು ಮಗುವೂ ವಿಶಿಷ್ಟವಾಗಿದ್ದು ಯಾವುದೇ ಮಗು ಇನ್ನೊಂದಕ್ಕೆ ಮಾನದಂಡವಲ್ಲ ಎಂದು ಪ್ರತಿಪಾದಿಸಿದ ಸ್ಪಾಕ್ ಬಗ್ಗೆ ಪತ್ರಕರ್ತ, ಪ್ರಶಸ್ತಿ ಪುರಸ್ಕೃತ ಜೀವನಚರಿತ್ರೆಕಾರ ಥಾಮಸ್ ಮೇಯರ್ ‘Dr. Spock-An American Life’ ಎಂಬ ಕೃತಿ ರಚಿಸಿದ್ದಾರೆ. ಅದು ಅತ್ಯಂತ ಗೌರವಾನ್ವಿತ, ಶ್ರೇಷ್ಠ, ಪ್ರಭಾವಿ ವೈದ್ಯ, ಭಾವನಾತ್ಮಕ ಚಿಂತಕ ಮತ್ತು ದಾರ್ಶನಿಕನ ಜೀವನ ಚಿತ್ರವಷ್ಟೇ ಅಲ್ಲ, ವಿವಾದಾತ್ಮಕ ಮತ್ತು ಸಂಕೀರ್ಣ ವ್ಯಕ್ತಿತ್ವವನ್ನೂ ಬಿಚ್ಚಿಡುತ್ತದೆ. ಸ್ಪಾಕ್ ಜೀವನ ಚರಿತ್ರೆ ಇಪ್ಪತ್ತನೇ ಶತಮಾನದ ಅಮೆರಿಕದ ಬದುಕನ್ನೂ, ನಮ್ಮ ಸಮಾಜದ ಯಶಸ್ಸು ಮತ್ತು ವೈಫಲ್ಯಗಳನ್ನೂ ಪ್ರತಿಫಲಿಸುತ್ತದೆ. 

ಆರೋಗ್ಯಕರ ಸಮಾಜದ (ದೈಹಿಕ, ಮಾನಸಿಕ ಮತ್ತು ಸಾಮಾಜಿಕ) ಗುರಿ ಹೊತ್ತು ಅಲ್ಲಿನ ಮೂರು ತಲೆಮಾರುಗಳ ಮಕ್ಕಳನ್ನು ರೂಪಿಸಿದ ಸ್ಪಾಕ್‌ನ ವೈಯಕ್ತಿಕ ಬದುಕು ವೈಫಲ್ಯ ಮತ್ತು ದುರಂತಗಳಿಂದ ಅಲುಗಾಡಿತ್ತು. ಸಾಮಾನ್ಯವಾಗಿ ಜೀವನ ಚರಿತ್ರೆ ಎಂದರೆ ವ್ಯಕ್ತಿಯೊಬ್ಬನ ವೈಭವೀಕರಣದ ಪ್ರಯತ್ನವಾಗಿಯೇ ಕಾಣುವ ಭಾರತೀಯ ಸಮಾಜದಲ್ಲಿ ಇಂಥ ಪುಸ್ತಕಗಳು ವಿರಳ. ಸ್ಪಾಕ್ ಬಾಲ್ಯದಿಂದ ಹಿಡಿದು ವೃದ್ಧಾಪ್ಯದವರೆಗೆ ಆತನ ಬದುಕನ್ನು ಪ್ರಾಮಾಣಿಕವಾಗಿ, ಮುಕ್ತವಾಗಿ ತೆರೆದಿಡುವ ಪ್ರಯತ್ನದಲ್ಲಿ ಮೇಯರ್ ಯಶಸ್ವಿಯಾಗಿರುವುದನ್ನು ಇಲ್ಲಿ ಕಾಣಬಹುದು. ಸ್ಪಾಕ್ ಬದುಕಿದ್ದಾಗ ಆತನೊಂದಿಗೆ ಗಂಟೆಗಟ್ಟಲೆ ನಡೆಸಿದ ಸಂದರ್ಶನ, ಆತನ ಕುಟುಂಬ ಸದಸ್ಯರು, ಗೆಳೆಯರು ಜೀವನ ಚರಿತ್ರೆ ಬರೆಯುವ ಕಾರ್ಯದಲ್ಲಿ ಪ್ರಾಮಾಣಿಕವಾಗಿ ಮುಚ್ಚುಮರೆಯಿಲ್ಲದೆ ಅತ್ಯಂತ ಖಾಸಗಿ ವಿವರಗಳನ್ನೂ ಒದಗಿಸಿರುವುದು ಈ ಕೃತಿಗೆ ಅಪೂರ್ವತೆಯನ್ನು ತಂದುಕೊಟ್ಟಿದೆ.

ಒಂದು ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಕೆಲವು ಅಧ್ಯಾಯಗಳಂತೂ ಯೌವನದ ತೀವ್ರ ಪ್ರೇಮ, ಪ್ರಣಯಗಳನ್ನು ಕಾವ್ಯಮಯವಾಗಿ ವರ್ಣಿಸುವಲ್ಲಿ ಯಶಸ್ವಿಯಾಗಿವೆ. ಇಲ್ಲಿನ ಎಲ್ಲ ಜೀವಂತ ಪಾತ್ರಗಳು ನಿಮ್ಮ ಎದೆಯ ಕದವನ್ನು ತಟ್ಟದೇ ಇರುವುದು ಸಾಧ್ಯವೇ ಇಲ್ಲ ಎನ್ನುವಷ್ಟು ಸಮರ್ಥ ಅಭಿವ್ಯಕ್ತಿಗೆ ಸಾಕ್ಷಿಯಾಗಿವೆ.

ಕನೆಕ್ಟಿಕಟ್ ರಾಜ್ಯದ ನ್ಯೂ ಹೇವನ್‌ನ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಸ್ಪಾಕ್ ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದ್ದ ತಾಯಿಯಿಂದಾಗಿ ಬಾಲ್ಯದಲ್ಲಿ ಸಂಕೋಚದ ಮುದ್ದೆಯಂತಿದ್ದ. ಈ ಅನುಭವವೇ ಬಹುಶಃ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ಅವರ ಮಹಾನ್ ಕೃತಿಯ ರಚನೆಗೆ ಒಂದು ಕಾರಣವಾಗಿರಬಹುದು.

ಸ್ಪಾಕ್ ಬಾಲ್ಯಾವಸ್ಥೆ ಮುಗಿದು ಪುರುಷ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಆತನ ತಾಯಿ ಮಿಲ್ಡ್ರೆಡ್ ಸ್ಪಾಕ್ ಒಮ್ಮೆ ಮದುವೆಯ ಪಾವಿತ್ರ್ಯ, ದೇಹದ ತುಚ್ಛ ಬಯಕೆಗಳು ಇವೇ ಮೊದಲಾದ ವಿಷಯಗಳ ಬಗ್ಗೆ ತಾನು ಸತ್ಯ ಎಂದು ಭಾವಿಸಿದ್ದರ ಬಗ್ಗೆ ಪಾಠ ಮಾಡಿದ್ದಳು. ಹೆಣ್ಣಿನತ್ತ ನೋಡುವ ಯಾವುದೇ ಪುರುಷ ಅನೈತಿಕವಾದುದನ್ನೇ ಚಿಂತಿಸುತ್ತಿರುತ್ತಾನೆ ಮತ್ತು ಪ್ರಾಣಿಯಂತಿರುತ್ತಾನೆ ಎಂದು ತನ್ನ ತಾಯಿ ಭಾವಿಸಿದ್ದಳೆಂದು ಸ್ಪಾಕ್ ಆನಂತರದ ವರ್ಷಗಳಲ್ಲಿ ನೆನಪಿಸಿಕೊಂಡಿದ್ದ.

ಆದರೆ ಆಂಡಿವರ್‌ನ ವಸತಿ ಶಾಲೆ ಸೇರಿ ಮನೆಯ ಬಂಧನದಿಂದ ಮುಕ್ತನಾಗಿದ್ದ ಬಾಲಕ ಸ್ಪಾಕ್ ಎತ್ತರದ ಜಿಗಿತ ಸ್ಪರ್ಧೆಯಲ್ಲಿ ಐದು ಅಡಿ, ಆರು ಇಂಚು ಎತ್ತರ ಜಿಗಿದು ಸ್ವಾತಂತ್ರ್ಯದ ಸುಖ ಗೆಲುವನ್ನು ಹೇಗೆ ತಂದುಕೊಡುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದ. ಯೇಲ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಜೇನ್ ಚೆನಿ ಎಂಬ ಆಧುನಿಕ ಮನೋಧರ್ಮದ ಸುಂದರಿಯ ಪರಿಚಯ ಸ್ಪಾಕ್ ಪಾಲಿಗೆ ತಂಗಾಳಿಯಾಯಿತು. ಕೀಳರಿಮೆಯಿಂದ ಒದ್ದಾಡುತ್ತಿದ್ದ ಸ್ಪಾಕ್‌ಗೆ ಆತ್ಮವಿಶ್ವಾಸ ತುಂಬಿದವಳೂ ಇದೇ ಜೇನ್.

ಇಬ್ಬರ ನಡುವಿನ ತೀವ್ರ ಪ್ರೇಮದ ಪತ್ರಗಳು ರಾಬರ್ಟ್ ಬ್ರೌನಿಂಗ್‌ನ ಕಾವ್ಯದ ಒಳನೋಟ ಮತ್ತು ಆಲ್ಫ್ರೆಡ್ ಟೆನಿಸನ್ ಪ್ರತಿಭೆಯ ಕುರಿತ ಚರ್ಚೆಯನ್ನೂ ಒಳಗೊಂಡಿರುತ್ತಿದ್ದವು. ಬುದ್ಧ ಸೇರಿದಂತೆ ವಿದೇಶಿ ಚಿಂತನೆ ಮತ್ತು ತತ್ವಶಾಸ್ತ್ರದ ಬಗ್ಗೆ ಜೇನ್‌ಗೆ ಇರುವ ಒಲವು ಕಂಡು ಸ್ಪಾಕ್ ಇನ್ನಷ್ಟು ಕುತೂಹಲ ಬೆಳೆಸಿಕೊಂಡ.  ‘ಬಹುತೇಕ ಯಾವುದೇ ಮಹಿಳೆಗಿಂತ ತುಂಬ ಆಸಕ್ತಿ ಹುಟ್ಟಿಸುವಂಥ ಒಬ್ಬ ಪುರುಷನೂ ಇಲ್ಲ’ ಎನ್ನುವುದು ಆ ದಿನಗಳ ಸ್ಪಾಕ್‌ನ ನಂಬಿಕೆಯಾಗಿತ್ತು. ಪುಕ್ಕಲನಂತಿದ್ದ ಸ್ಪಾಕ್ ಎಲ್ಲ ಸಾಮಾನ್ಯ ಹುಡುಗರಂತೆ ಪರಿವರ್ತನೆಗೊಂಡಿದ್ದ.

ಆರು ಅಡಿ, ನಾಲ್ಕು ಇಂಚು ಎತ್ತರದ ಸ್ಪಾಕ್ ಯೇಲ್ ವಿಶ್ವವಿದ್ಯಾಲಯದಲ್ಲಿ ರೋಯಿಂಗ್ ತಂಡದಲ್ಲಿದ್ದಾಗ ಆರೋಗ್ಯ ವಿಭಾಗದಲ್ಲಿ ಇರಿಸಿದ್ದ ವಿಶೇಷ ಗ್ಯಾಸೋಮೀಟರ್ ಎಂಬ ಯಂತ್ರ ಬಳಸಿ ನಡೆಸಿದ ಪರೀಕ್ಷೆಯಲ್ಲಿ ಆತ ಎಂಜಿನ್‌ಗಿಂತ ವೇಗವಾಗಿ ದೋಣಿ ಚಲಿಸುವಂತೆ ಮಾಡಬಲ್ಲ ದೈಹಿಕ ಹಿರಿಮೆ ವೈಜ್ಞಾನಿಕವಾಗಿ ಸಾಬೀತಾಗಿತ್ತು. ಯಾವುದೇ ಮನುಷ್ಯನಿಂದ ಈ ಹಿಂದೆ ಇಂಥ ದಾಖಲೆ ಮಾಡಿರಲಿಲ್ಲ. ಇದೇ ತಂಡ 1924ರ ಪ್ಯಾರಿಸ್ ಒಲಿಂಪಿಕ್ಸ್ ರೋಯಿಂಗ್ ಸ್ಪರ್ಧೆಯಲ್ಲಿ (ಹುಟ್ಟು ಹಾಕುವ ದೋಣಿ ಸ್ಪರ್ಧೆ) ಚಿನ್ನ ಗೆದ್ದಾಗ ಸ್ಪಾಕ್ ಒಬ್ಬ ಅಸಾಧಾರಣ ಕ್ರೀಡಾಪಟು ಎನ್ನುವುದೂ ಸಾಬೀತಾಗಿತ್ತು. ಒಲಿಂಪಿಕ್ಸ್‌ಗೆ ಮುನ್ನ ಹೌಸ್‌ಟೋನಿಕ್ ನದಿಯಲ್ಲಿ ನಡೆಸಿದ ಕಠಿಣ ಅಭ್ಯಾಸಗಳ ಚಿತ್ರಣವಂತೂ ಅದ್ಭುತವಾಗಿದೆ.

ಸ್ಪಾಕ್ ತನ್ನ ವೃತ್ತಿ ಬದುಕಿನಲ್ಲಿ ಯಾವುದೇ ಪೋಪ್, ಅಧ್ಯಕ್ಷ ಅಥವಾ ರಾಜಕೀಯ ನಾಯಕನಿಗಿಂತ ಹೆಚ್ಚಾಗಿ ಮಕ್ಕಳ ಪಾಲನೆಯಲ್ಲಿ ಮೂಲಭೂತ ಬದಲಾವಣೆ ತರುವ ಅಸಾಧಾರಣ ಕ್ರಾಂತಿಯನ್ನು ಯಾವುದೇ ಕಾನೂನು, ಮತಧರ್ಮಶಾಸ್ತ್ರಗಳೂ ನಿರೀಕ್ಷೆ ಮಾಡದ ರೀತಿಯಲ್ಲಿ ಏಕಾಂಗಿಯಾಗಿ ಸಾಧ್ಯವಾಗಿಸಿದ್ದ. ಆರೋಗ್ಯಕರ ಸಮಾಜ ನಿರ್ಮಿಸುವ ತನ್ನ ನಿಲುವನ್ನು ಒಪ್ಪುವ ಪೋಷಕರು ರಾಜಕೀಯ, ಶಾಲೆಗಳು ಮತ್ತು ಸಾಮುದಾಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದ. ದೈಹಿಕ ಮತ್ತು ಮಾನಸಿಕ ಆರೋಗ್ಯ ಇರುವ ಮಕ್ಕಳಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಬಲವಾಗಿ ನಂಬಿದ್ದ.

ಭೂಮಂಡಲದಲ್ಲಿ ಅಣುಬಾಂಬ್ ಪರೀಕ್ಷೆ, ಕ್ಷಿಪಣಿ ಪರೀಕ್ಷೆ, ಯುದ್ಧ ನಡೆಸುವುದಕ್ಕೆ ಸ್ಪಾಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಮಾರ್ಟಿನ್ ಲೂಥರ್ ಕಿಂಗ್ ಜತೆಗೂಡಿ ವಿಯೆಟ್ನಾಂ ಸಮರ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ. ಯುವಜನರ ಪ್ರತಿಸಂಸ್ಕೃತಿ ಆಂದೋಲನಕ್ಕೆ ಚಾಲನೆ ನೀಡಿದಾಗ ಆತನ ಪುಸ್ತಕ ಓದಿದ ಪೋಷಕರು ಬೆಳೆಸಿದ ಅಶಿಸ್ತಿನ ಮಕ್ಕಳೇ ಆಂದೋಲನದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನೂ ಎದುರಿಸಿದ. ಅಗತ್ಯ ಇರುವವರಿಗೆ ಉಚಿತ ಆರೋಗ್ಯ ನಿರ್ವಹಣೆ ಒದಗಿಸಬೇಕೆಂಬ ಸ್ಪಾಕ್ ಆಗ್ರಹ ಹಣಪೀಕುವ ವೈದ್ಯರ ವಿರೋಧಕ್ಕೆ ಕಾರಣವಾಗಿತ್ತು.  ಈ ಮಧ್ಯೆ ಬಿಡುವಿಲ್ಲದ ಚಟುವಟಿಕೆಗಳಿಂದ ಕುಟುಂಬವನ್ನು ನಿರ್ಲಕ್ಷಿಸಿದ ಫಲವಾಗಿ ಆತನ ಮಕ್ಕಳೂ ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ.

ಅಪಾರವಾಗಿ ಪ್ರೀತಿಸಿ ಮದುವೆಯಾಗಿದ್ದ ಜೇನ್‌ಳಲ್ಲಿ ಏಕಾಂಗಿತನ ಕಾಡತೊಡಗಿತು. ಯೌವನದ ತೇಜಸ್ಸು, ಕೆಚ್ಚು ಮಾಯವಾಗಿ ಮದ್ಯಪಾನ, ಮಾದಕ ಪದಾರ್ಥಗಳ ವ್ಯಸನದಲ್ಲಿ ಮುಳುಗಿದಳು. ಅವಳ ನೋವಿನ ಮಾತುಗಳಿಗೆ ಸ್ಪಾಕ್ ಕಿವುಡಾಗಿದ್ದ. ಮಾತು ಮಾತಿಗೂ ಇಬ್ಬರ ನಡುವೆ ಜಗಳ, ಮನಸ್ತಾಪ, ಸಾರ್ವಜನಿಕ ಸಮಾರಂಭಗಳಲ್ಲೂ ಸ್ಪಾಕ್‌ಗೆ ಅವಮಾನವಾಗುವಂಥ ಘಟನೆಗಳಿಂದ ಸುಮಾರು ಐವತ್ತು ವರ್ಷಗಳ ದಾಂಪತ್ಯ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿತು. ಆಗ ಸ್ಪಾಕ್‌ಗೆ 72 ವರ್ಷ. ಹಾಗೆ ನೋಡಿದರೆ ಸ್ಪಾಕ್ ಬದುಕು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಮರ್ಪಿಸಿಕೊಂಡಂತಿತ್ತು. ಸ್ಪಾಕ್‌ನನ್ನೇ ನೆರಳಿನಂತೆ ಅನುಸರಿಸಿ ಆತನ ಏಳುಬೀಳುಗಳಲ್ಲಿ ಸಮಪಾಲು ಪಡೆದಿದ್ದ 65 ವರ್ಷದ ಆಸುಪಾಸಿನಲ್ಲಿದ್ದ ಜೇನ್ ಏಕಾಂಗಿಯಾಗುತ್ತಾಳೆ. ವಿಚ್ಛೇದನದ ಕೊರಗಿನಲ್ಲೇ ಕೊನೆಯಾಗುತ್ತಾಳೆ. ಎಲ್ಲೋ ಒಂದು ಕಡೆ ಜೇನ್ ಚೆನಿಯೇ ಸ್ಪಾಕ್‌ಗಿಂತ ಹೆಚ್ಚಿಗೆ ನಿಮ್ಮನ್ನು ಕಾಡುತ್ತಾ ಕಂಬನಿ ಮಿಡಿಯುವಂತೆ ಮಾಡುತ್ತಾಳೆ.  

ಆನಂತರ ಸ್ಪಾಕ್ ಜೀವನವನ್ನು ಪ್ರವೇಶಿಸಿದವಳೇ ಮೇರಿ ಮಾರ್ಗನ್. ಸ್ಪಾಕ್‌ಗಿಂತ 40 ವರ್ಷ ಚಿಕ್ಕವಳು. ಒಂದು ಹೆಣ್ಣು ಮಗುವನ್ನು ಪಡೆದು ವಿಚ್ಛೇದನ ಪಡೆದಿದ್ದ ಮೇರಿ ಎಲ್ಲೋ ಹೋಗಿ ಹಿಪ್ಪಿಯಾಗಿ ಬದುಕನ್ನೇ ನಿರ್ಲಕ್ಷಿಸಿ ಮಾಯವಾಗಿದ್ದವಳು. ಯಾವುದೋ ಉಪನ್ಯಾಸದಲ್ಲಿ ಸ್ಪಾಕ್ ಭೇಟಿಯೇ ಆಕರ್ಷಣೆಗೆ ಕಾರಣವಾಗಿ 1976ರಲ್ಲಿ ಮದುವೆಯಾದಳು. ಸಾವಿರಾರು ಕುಟುಂಬಗಳಲ್ಲಿ ಮಕ್ಕಳನ್ನು ಬೆಳೆಸುವ ಬೆಳಕಾಗಿದ್ದ ಸ್ಪಾಕ್ ತನ್ನ ಸ್ವಂತ ಮಕ್ಕಳನ್ನು ಬೆಳೆಸುವಲ್ಲಿಯೂ ಸವಾಲುಗಳನ್ನು ಎದುರಿಸಿದ್ದರು.

ಎರಡನೇ ಪತ್ನಿ ಮೊದಲ ಗಂಡನಿಂದ ಪಡೆದಿದ್ದ ಹೆಣ್ಣು ಮಗುವನ್ನು ಬೆಳೆಸುವುದು ಒಂದು ಸಮಸ್ಯೆಯೇ ಆಗುತ್ತದೆ ಎಂದು ಭಾವಿಸಿರಲಿಲ್ಲವಾದರೂ ಕ್ರಮೇಣ ಯಶಸ್ಸು ಪಡೆದ. ಸ್ಪಾಕ್ ಕೊನೇ ದಿನಗಳಲ್ಲಿ ಸ್ವಂತ ಚಿಕಿತ್ಸೆಯ ವೆಚ್ಚ ಹೆಚ್ಚಾಗಿ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಸ್ಪಾಕ್‌ನ ಇರಿಯುವ ಕಣ್ಣು, ಅಗಲವಾದ ಹಸ್ತ, ಎತ್ತರದ ವ್ಯಕ್ತಿತ್ವದಿಂದ ಒಲಿದು ಬಂದಿದ್ದ ಮೇರಿ ಅದೆಷ್ಟೇ ಕಷ್ಟಗಳು ಎದುರಾದರೂ ಕೊನೇ ಗಳಿಗೆವರೆಗೂ ಒಂದಿಷ್ಟೂ ವಿಚಲಿತಳಾಗದೆ ನೋಡಿಕೊಂಡಿದ್ದಳು. ಸ್ಪಾಕ್ ಬಗೆಗಿನ ಮೇರಿಯ ನಿಸ್ವಾರ್ಥ ಪ್ರೀತಿಯಿಂದಾಗಿ ಕೊನೆವರೆಗೂ ಆತನನ್ನು ಕಾಯುವ ಛಲ ನಿಮ್ಮ ಮನ ಕರಗುವಂತೆ ಮಾಡುತ್ತದೆ. 

ಸ್ಪಾಕ್ ನಿಧನದ ನಂತರ ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್ ಅಧ್ಯಯನ ನಡೆಸಿ ಸಿದ್ಧಪಡಿಸಿದ ನೂರು ಅಗ್ರಮಾನ್ಯ ಚಿಂತಕರ ಪಟ್ಟಿಯಲ್ಲಿ ಜಾರ್ಜ್ ಬರ್ನಾರ್ಡ್‌್ ಷಾ, ಸಾರ್ತ್ರೆ, ಕಾಮು, ಜಾರ್ಜ್ ಆರ್ವೆಲ್, ಹೆನ್ರಿ ಕಿಸಿಂಜರ್ ನಂತರ ಸ್ಪಾಕ್ ನಲವತ್ತೇಳನೇ ಸ್ಥಾನ ಪಡೆದಿದ್ದಾನೆ. ಅಮೆರಿಕದ ಮಕ್ಕಳಲ್ಲಿ ಬುದ್ಧಿಮತ್ತೆ ಸ್ಥಿರವಾಗಿ ಏರಿಕೆಯಾಗಿರುವುದಕ್ಕೆ ಅವರ ಕೃತಿಯೇ ಕಾರಣ ಎಂದು ಒಂದು ಅಧ್ಯಯನ ತಿಳಿಸಿದೆ. ಸ್ಪಾಕ್ ನಿಧನದ ನಂತರ ಆತನ ಚಿಂತನೆಗಳಿಗೆ ಅಮೆರಿಕ ಹೆಚ್ಚಿನ ಮನ್ನಣೆ ನೀಡತೊಡಗಿತು.

‘ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿರಲಿ. ಯಾಕೆಂದರೆ ನೀವು ನಿಮ್ಮ ಕೈಯ್ಯಲ್ಲಿ ಆಗಬಹುದು ಅಂದುಕೊಂಡಿರುವುದಕ್ಕಿಂತ ಹೆಚ್ಚಿನದನ್ನು ಮಾಡುವ ಸಾಮರ್ಥ್ಯ ಹೊಂದಿದ್ದೀರಿ’- ಇದು ಆಗಷ್ಟೇ ಹೆತ್ತ ಮಕ್ಕಳ ತಾಯಂದಿರಿಗೆ ಸ್ಪಾಕ್ ಸಲಹೆ. ಅಂದ ಹಾಗೆ ಜೇನ್ ವಿಚ್ಛೇದನದ ನಂತರ ಪರಿಷ್ಕೃತಗೊಂಡ ಸಂಪುಟವನ್ನು ‘To Jane with gratitude and love’  ಎಂದು ಅರ್ಪಣೆ ಮಾಡಿ ‘Her advice was always wise and practical’  ಎಂದು ಸಮಾಪ್ತಿಗೊಳಿಸಿದ್ದ.

ಪ್ರತಿಕ್ರಿಯಿಸಿ (+)