ತಾಯಿಕಾರುಣ್ಯದ ಹಂಪಿಯ ಸದಾಶಿವಯೋಗಿ

7

ತಾಯಿಕಾರುಣ್ಯದ ಹಂಪಿಯ ಸದಾಶಿವಯೋಗಿ

Published:
Updated:
ತಾಯಿಕಾರುಣ್ಯದ ಹಂಪಿಯ ಸದಾಶಿವಯೋಗಿ

ನಾನು ಹಂಪಿಗೆ ಹೋದ ಮೊದಲ ದಿನಗಳಲ್ಲಿ, ಅಲ್ಲಿದ್ದ ಸದಾಶಿವಯೋಗಿ ಅವರ ಬಗ್ಗೆ ಅನೇಕ ದಂತಕತೆಗಳು ಹಬ್ಬಿದ್ದವು. ಉದಾಹರಣೆಗೆ, ಅವರು ಹಂಪಿಗೆ ಎಲ್ಲಿಂದಲೊ ಬಂದವರು; ವಿರುಪಾಪುರ ಗಡ್ಡೆಯಲ್ಲಿ ಕೌಪೀನಧಾರಿಯಾಗಿ ಸೊಪ್ಪುಸದೆ ತಿಂದುಕೊಂಡು ಗುಹೆಗಳಲ್ಲಿ ಇದ್ದವರು; ಹಂಪಿಯ ಚಿಕ್ಕ ವಯಸ್ಸಿನ ಬೀದಿ ಹುಡುಗರ ಜತೆ ಹೊಳೆಯಲ್ಲಿ ನೀರಾಟವಾಡುತ್ತಿದ್ದವರು; ಇಡೀ ಭಾರತವನ್ನು ತಿರುಗಾಡಿದವರು; ಮೂಢನಂಬಿಕೆಗಳ ಮೇಲೆ ಸಮರ ಸಾರಿದ ವಿಚಾರವಾದಿಗಳು; ಹೊಸಪೇಟೆಯಲ್ಲಿ ನಡೆದ ವಿಚಾರವಾದಿಗಳ ಸಮ್ಮೇಳನಕ್ಕೆ ಅಬ್ರಾಹಂ ಕೊವೋರ್ ಬಂದಾಗ, ಸಭೆಯ ಅಧ್ಯಕ್ಷತೆ ವಹಿಸಿದ್ದವರು; ಅನೇಕ ಪವಾಡ ಪುರುಷರ ಮತ್ತು ಜ್ಯೋತಿಷಿಗಳ ಕೈಚಳಕ ಬಯಲು ಮಾಡಿದವರು; ಹಂಪಿಯಲ್ಲಿ ಹನುಮಂತನು ವಿಗ್ರಹರೂಪದಲ್ಲಿ ಉದ್ಭವಿಸುತ್ತಾನೆ ಎಂದು ಮಾಡಲಾದ ಯಾಗದ ಸಂಚನ್ನು ಬಯಲುಗೊಳಿಸಿದವರು- ಇತ್ಯಾದಿ.ಆ ಹೊತ್ತಿಗಾಗಲೇ ಅವರ ಪ್ರಸಿದ್ಧ ಕೃತಿ ‘ಭಾರತೀಯರಿಗೆ ಭಗವಂತರೆಷ್ಟು?’ ಪ್ರಕಟವಾಗಿ ಹಲವು ಮುದ್ರಣಗಳನ್ನು ಕಂಡಿತ್ತು. ಅದನ್ನು ಓದಿದ ಸಂಪ್ರದಾಯಸ್ಥರು ಅವರಿಗೆ ‘ಧರ್ಮನಿಂದಕ ದೈವನಿಂದಕನಾದ ನೀನು ನರಕಕ್ಕೇ ಹೋಗುತ್ತೀಯ’ ಎಂದು ಶಾಪ ಹಾಕಿದ್ದರು. ಅದಕ್ಕೆ ಸದಾಶಿವಯೋಗಿಯವರು- ‘ಈ ಸಮಾಜದಲ್ಲಿ ಈಗ ಅನುಭವಿಸುತ್ತಿರುವ ಘನಘೋರ ನರಕಕ್ಕಿಂತಲೂ ಮತ್ತೊಂದು ನರಕ ಎಲ್ಲೋ ಇದೆ ಎಂಬುದನ್ನು ನಾನು ನಂಬುವುದಿಲ್ಲ’ ಎಂದು ಉತ್ತರಿಸಿದ್ದರು. ಅನೇಕ ಮಠಾಧೀಶರ ಜತೆ ಅವರ ತಾತ್ವಿಕ-ವೈಚಾರಿಕ ಯುದ್ಧಗಳು ಸಂಭವಿಸಿದ್ದವು. ಇಷ್ಟೊಂದು ವರ್ಣರಂಜಿತ ವ್ಯಕ್ತಿತ್ವವುಳ್ಳ ಅವರನ್ನು ಕಾಣುವ ಅವಕಾಶ ನನಗೆ ಬರಲಿಲ್ಲ. ಆಶ್ರಮ ಯೋಗಿಗಳು ಸಂತರು ಎಂದರೆ ಕೊಂಚ ಅನುಮಾನದಿಂದ ದೂರ ಉಳಿಯುತ್ತಿದ್ದ ನನ್ನಂತಹವರಿಗೆ, ಅವರ ಜತೆ ಗುರುತಿಸಿಕೊಳ್ಳುವುದಕ್ಕೆ ಹಿಂಜರಿಕೆ; ಆದರೆ ಅವರ ಚಿಂತನೆ ಮತ್ತು ಚಟುವಟಿಕೆಗಳ ಬಗ್ಗೆ ಆಕರ್ಷಣೆ. ಈ ದ್ವಂದ್ವದಲ್ಲಿರುವಾಗ, ಅವರೇ ಒಮ್ಮೆ ನನ್ನನ್ನು ಆಶ್ರಮದ ಕಾರ್ಯಕ್ರಮವೊಂದಕ್ಕೆ ಕರೆದರು. ಅಷ್ಟು ಹೊತ್ತಿಗಾಗಲೇ ಸಂತರ ಹಾಗೂ ಸನ್ಯಾಸಿಗಳ ಸಹವಾಸ ಮಾಡಿ ‘ಕೆಟ್ಟು’ಹೋಗಿದ್ದ ನಾನು, ಹೋಗಲು ಹಿಂದೇಟು ಹಾಕಲಿಲ್ಲ.ಸದಾಶಿವ ಯೋಗಿಯವರ ಶಿವಾನಂದ ಯೋಗಾಶ್ರಮವು ಅನೇಕ ವಿಶಿಷ್ಟತೆಗಳಿಂದ ಕೂಡಿದೆ. ಒಳಗೆ ಕಾಲಿಟ್ಟೊಡನೆ ಎದುರಿಗೇ- ‘ಕಾಲಿಗೆ ಬೀಳುವಂತಹ ಹೀನಪದ್ಧತಿಯ ನಮಸ್ಕಾರವನ್ನು ಆಶ್ರಮದಲ್ಲಿ ನಿಷೇಧಿಸಲಾಗಿದೆ’ ಎಂಬ ಬೋರ್ಡು ಕಾಣುತ್ತದೆ. ಬಂದವರು ಅವರ ಜತೆ ಸಮಾನವಾಗಿ ಕೂರುವಂತೆ ಸುತ್ತಮುತ್ತ ಕುರ್ಚಿಗಳಿವೆ. ಆಶ್ರಮದ ಪಡಸಾಲೆಯಲ್ಲಿ ಮೂರು ಚಿತ್ರಗಳಿವೆ. 1. ಅವರ ಗುರುಗಳಾದ ಶಿವಾನಂದ ಪರಮಹಂಸರ ಯೋಗಭಂಗಿಯದು. 2. ಒಬ್ಬ ಜರ್ಮನ್ ವೈದ್ಯನದು. 3. ಸುಭಾಶ್ಚಂದ್ರ ಬೋಸರು ಮಿಲಿಟರಿ ಯೂನಿಫಾರ್ಮಿನಲ್ಲಿ ನಿಂತಿರುವುದು. ಆಶ್ರಮದಲ್ಲಿ ಸೈನಿಕ ಉಡುಪಿನ ಬೋಸರ ಚಿತ್ರವೇಕೆಂದು ವಿಚಾರಿಸಿದೆ. ತಿಪಟೂರಿನ ಸದಾಶಿವಯ್ಯನವರು (ಯೋಗಿಯವರ ಪೂರ್ವಾಶ್ರಮದ ಹೆಸರು) ತರುಣರಾಗಿದ್ದಾಗ, ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಲ್ಲಿ ಸರ್ಕಾರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದವರು. ಅವರಿಗೆ ಬೋಸರ ಸೇನೆ ಸೇರಬೇಕೆಂದು ತವಕವಿತ್ತಂತೆ. ವಯಸ್ಸು ಚಿಕ್ಕದಾದ ಕಾರಣ ಸಾಧ್ಯವಾಗಲಿಲ್ಲವಂತೆ. ನಾನು ಹೋಗಿದ್ದ ದಿನ ಗುರುಪೂರ್ಣಿಮೆ. ಶಿವಾನಂದ ಪರಮಹಂಸರ ಜಯಂತಿ ಕಾರ್ಯಕ್ರಮ. ಅಂದು ಸಮಸ್ತ ಜಾತಿಧರ್ಮಗಳಿಗೆ ಸೇರಿದ ಯೋಗಿಯವರ ಶಿಷ್ಯರು ಸೇರಿಕೊಳ್ಳುತ್ತಾರೆ. ‘ಜಿಜ್ಞಾಸುಗಳ ಜತೆ ಚರ್ಚೆ’ ಎಂಬ ಕಾರ್ಯಕ್ರಮವೂ ಇರುತ್ತದೆ. ಬಂದವರು ಯೋಗಿಯವರ ಜತೆ ಪ್ರಶ್ನೋತ್ತರ ನಡೆಸಬಹುದು. ಕನ್ನಡ, ಇಂಗ್ಲಿಷು, ಹಿಂದಿ, ತೆಲುಗು, ತಮಿಳು- ಹೀಗೆ ಅನೇಕ ಭಾಷೆಗಳಲ್ಲಿ ಅವರು ಉತ್ತರಿಸುತ್ತ ತಮ್ಮ ಚಿಂತನೆಯನ್ನು ಹಂಚಿಕೊಳ್ಳುತ್ತಾರೆ. ಯೋಗದ ಸ್ವರೂಪ ಮತ್ತು ಮಹತ್ವವನ್ನು ವಿವರಿಸುತ್ತಾರೆ. ಅವರ ಚಿಂತನೆಯ ಸಾರಾಂಶವಿಷ್ಟು:‘ಹೊರಮುಖಿಯಾದ ಮನಸ್ಸನ್ನು ಉಸಿರಾಟ ಹಾಗೂ ದೃಷ್ಟಿಯ ಜತೆ ಏಕತ್ರಗೊಳಿಸಿ ನಿಲ್ಲಿಸುವುದೇ ಯೋಗ. ಅದುವೇ ತನ್ನ ತಾನರಿವ, ತನ್ನೊಳಗಿನ ಚೈತನ್ಯವನ್ನು ತಿಳಿಯುವ ಪರಿ. ಈ ಚೈತನ್ಯವನ್ನು ಕಂಡುಕೊಳ್ಳುವುದರ ಆಚೆ ಬೇರೆ ಯಾವ ದೇವರೂ ಇಲ್ಲ. ಯೋಗದ ಉದ್ದೇಶ ಮಾನಸಿಕ ನೆಮ್ಮದಿ. ಇದಕ್ಕಾಗಿ ಸರ್ಕಸ್ಸಿನವರಂತೆ ದೇಹವನ್ನು ನುಲಿದು ಕಸರತ್ತು ಮಾಡಬೇಕಿಲ್ಲ. ಯೋಗದ ಅಂಶವು ಮಗುವನ್ನು ಮುದ್ದಿಸುವ ತಾಯಿ, ಆಲೋಚಿಸುವ ಲೇಖಕರು, ಒಕ್ಕಲುತನ ಮಾಡುವ ರೈತರು, ಯಂತ್ರರಿಪೇರಿಸುವ ಮೆಕ್ಯಾನಿಕ್ ಎಲ್ಲರಲ್ಲೂ ಇರುತ್ತದೆ. ಸಾಧಕರು ಅದನ್ನು ಗುರುಮುಖೇನ ಕಲಿಯುತ್ತಾರೆ’.ಸದಾಶಿವಯೋಗಿ ತಮ್ಮ ಯೌಗಿಕ ಚಿಂತನೆಯನ್ನು ‘ಯೋಚಿಸಿನೋಡಿ’, ‘ಶೈವತತ್ವ’ ಮುಂತಾದ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. ಇಷ್ಟೇ ಆಗಿದ್ದರೆ ಯೋಗತತ್ವವನ್ನು ಪ್ರತಿಪಾದಿಸುತ್ತಿರುವ ಅನೇಕ ನಿರಪಾಯಕಾರಿ ಯೋಗಿಗಳ ಸಾಲಿಗೆ ಅವರೂ ಸೇರಿಬಿಡುತ್ತಿದ್ದರು. ಆದರೆ ಅವರು, ಯೋಗತತ್ವವನ್ನು ಪ್ರತಿಪಾದಿಸುತ್ತ, ಧರ್ಮ ಮತ್ತು ದೇವರ ಹೆಸರಲ್ಲಿ ನಮ್ಮ ಸಮಾಜದಲ್ಲಿ ನಡೆಯುವ ಕಪಟ, ಢಾಂಬಿಕತೆ, ಪವಾಡ, ಜ್ಯೋತಿಷ, ಪುರೋಹಿತಶಾಹಿ- ಮುಂತಾದ ಚಟುವಟಿಕೆಗಳನ್ನು ಕಟುವಾಗಿ ವಿರೋಧಿಸಲಾರಂಭಿಸಿದರು.ಇಂತಹ ಚಟುವಟಿಕೆಗಾರರ ಕೈಗೆ ಸಿಕ್ಕು ತಮ್ಮ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿರುವ ಜನರ ಅಸಹಾಯಕತೆಗೆ ಮಿಡಿಯಲಾರಂಭಿಸಿದರು. ನಾವು ಯಾವ ತತ್ವ ಪ್ರತಿಪಾದನೆ ಮಾಡುತ್ತೇವೆ ಎಂಬುದಕ್ಕೆ ಅರ್ಥವು, ನಾವು ಏನನ್ನು ಪ್ರತಿರೋಧಿಸುತ್ತೇವೆ ಎನ್ನುವುದರಿಂದಲೂ ಬರುತ್ತದೆಯಷ್ಟೆ. ಪ್ರತಿರೋಧದ ಗುಣವು ಯೋಗಿಯವರ ಚಿಂತನೆಗೆ ಪ್ರಖರವಾದ ಸಾಮಾಜಿಕ ಆಕ್ಟಿವಿಸಂ ಹಾಗೂ ಮಾನವೀಯತೆಯ ಆಯಾಮ ಒದಗಿಸಿಬಿಟ್ಟಿತು.ತಮಗೆ ತಪ್ಪು ಎಂದು ಕಂಡದ್ದರ ವಿರುದ್ಧ ಕಾರ್ಯಾಚರಣೆಗೆ ಇಳಿಯುವುದು ಸದಾಶಿವ ಯೋಗಿಯವರ ಸ್ವಭಾವ. ಒಂದು ರಾತ್ರಿ ಅವರು ಫೋನು ಮಾಡಿದರು. ‘ಟೀವಿ ನೋಡ್ತಿದೀರಾ? ಯಾರೊ ಒಬ್ಬ ಜನರನ್ನು ವಶೀಕರಣ ಮಾಡಿ, ಅವರ ಹಿಂದಿನ ಜನ್ಮದ ಕಥೆಯನ್ನು ಹೇಳಿಸ್ತಿದಾನೆ. ನನಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲಾರೀ. ನನಗೆ ಟೀವಿಯಲ್ಲಿ ಅರ್ಧಗಂಟೆ ಅವಕಾಶ ಕೊಡಿಸ್ರೀ.ನನಗೂ ಹಿಪ್ನೊಟೈಜ್ ಮಾಡೋಕೆ ಬರುತ್ತೆ. ಅವನ ಸುಳ್ಳನ್ನು ತೋರಿಸ್ತೇನೆ. ಈಗಲೇ ಬೆಂಗಳೂರಿಗೆ ಹೋಗೋಣ ನಡೀರಿ’ ಎಂದರು. ಎದ್ದೆಯಾ ಎಂದರೆ ಹೆಗಲಮೇಲೆ ಕಂಬಳಿ ಎನ್ನುವ ಈ ಸನ್ಯಾಸಿಗಳಿಗೆ, ನನ್ನಂತಹ ಗೃಹಸ್ಥರ ತಾಪತ್ರಯ ಗೊತ್ತಾಗುವುದಿಲ್ಲ. ನಾನು ಏನೋ ಹೇಳಿ ಅವರನ್ನು ತಡೆದೆ. ಆದರೆ ಅತ್ಯಾಧುನಿಕ ತಂತ್ರಜ್ಞಾನದ ಭಾಗವಾಗಿರುವ ಈ ಟೀವಿ ಚಾನಲ್ಲುಗಳು, ಜನರನ್ನು ಮೌಢ್ಯಯುಗಕ್ಕೆ ಕರೆದೊಯ್ಯುವಂತಹ ಮತ್ತು ಪುರೋಹಿತಶಾಹಿಯನ್ನು ಮರುಸ್ಥಾಪಿಸುತ್ತಿರುವಂತಹ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. ಅವುಗಳ ಮೇಲೆ ಯುದ್ಧ ಸಾರಬೇಕಾದ ವಿಚಾರವಂತರು ನಿರ್ಲಿಪ್ತರಾಗಿರುವಾಗ, ಒಬ್ಬ ಯೋಗಿಗೆ ಇದು ಆಕ್ರೋಶ ಚಡಪಡಿಕೆ ಹುಟ್ಟಿಸಿದೆಯಲ್ಲ ಎಂದು ಆಲೋಚಿಸತೊಡಗಿದೆ.ಸದಾಶಿವಯೋಗಿ ಅವರ ಮಾತುಕತೆ ಮತ್ತು ಬರೆಹದ ಮುಖ್ಯ ಲಕ್ಷಣವೆಂದರೆ, ಅತಿಖಚಿತ ನಿಲುವು; ತಮಗೆ ಕೆಟ್ಟದ್ದು ಅನಿಸಿದ್ದನ್ನು ವಿರೋಧಿಸುವ ದೃಢತೆ. ಅದಕ್ಕಾಗಿ ಕಾರ್ಯಾಚರಣೆ ಮಾಡುವ ಸಾಹಸಶೀಲತೆ. ಜೀವಮಾನದ ತುಂಬ ನೂರಾರು ಜನರ ಜತೆ ದಾರ್ಶನಿಕ ಜಗಳ ಮಾಡಿರುವ ಅವರು, ತಾವು ಕಂಡಿರುವ ಹುಸಿಸಂತರ ಮತ್ತು ಕಪಟ ಆಶ್ರಮಗಳ ಕತೆಯನ್ನು ಹೇಳುತ್ತಾ ಹೋಗುತ್ತಾರೆ. ಅವರ ಪ್ರಕಾರ ಭಾರತದ ಹೆಚ್ಚಿನ ಸಾಧುಗಳಿಗೆ ಯೋಗದಲ್ಲಿ ಆಸಕ್ತಿಯೂ ಇಲ್ಲ.

ತಿಳಿವಳಿಕೆಯೂ ಇಲ್ಲ. ಸದಾಶಿವಯೋಗಿ ಅವರಿಗೆ ಖಚಿತ ವಿರೋಧಗಳಿರುವ ಹಾಗೆ, ಖಚಿತ ಆಯ್ಕೆಗಳೂ ಇವೆ. ಸಾವಿಲ್ಲದ ಸಾಸಿವೆ ತರಲುಹೇಳಿ, ಬಾಳಿನ ಗಾಢಸತ್ಯವೊಂದನ್ನು ಹೇಳಿದ ಬುದ್ಧನ ಜೀವಕರುಣೆ ಮತ್ತು ವಿವೇಕದ ಬಗ್ಗೆ ಅವರಿಗೆ ಮೆಚ್ಚುಗೆ. ಅವರು ಕಾಶ್ಮೀರದಲ್ಲಿದ್ದಾಗ ಸೂಫಿಗಳ ಸಂಗದಲ್ಲಿ ಇದ್ದರಂತೆ. ಸೂಫಿಗಳ ಪ್ರೇಮತತ್ವ, ಜೀವಕಾರುಣ್ಯತೆ,ಹಂಚಿತಿನ್ನುವ ಸ್ವಭಾವಗಳು ಅವರಿಗೆ ಹಿಡಿಸಿವೆ. ನಾಥಪಂಥದ ಅನೇಕ ಯೋಗಿಗಳ ಬಗ್ಗೆ ಅವರಿಗೆ ಗೌರವವಿದೆ. ತರ್ಕಜ್ಞಾನದ ಮೂಲಕ ಸತ್ಯವನ್ನು ಶೋಧಿಸುವ ಪ್ರಾಚೀನ ಭಾರತದ ಚಾರ್ವಾಕರ ಬಗ್ಗೆ ಪ್ರೀತಿಯಿದೆ. ಚಾರ್ವಾಕರನ್ನು ಪುರೋಹಿತಶಾಹಿಯು ವ್ಯವಸ್ಥಿತವಾಗಿ ನಾಶಮಾಡಿದ್ದು ನಾಡಿನ ದುರಂತ ಎನ್ನುತ್ತಾರೆ ಅವರು. ಜನರನ್ನು ಭಕ್ತ-ಭವಿ ಆಧಾರದಲ್ಲಿ ವಿಭಜಿಸಿದ ಬಸವಣ್ಣನ ಬಗ್ಗೆ ಅವರಿಗೆ ಭಿನ್ನಮತವಿದೆ. ಆದರೆ ಅಲ್ಲಮಪ್ರಭು, ದೇವರ ದಾಸಿಮಯ್ಯ, ಸಿದ್ಧರಾಮ, ಅಕ್ಕಮಹಾದೇವಿ, ಹೇರೂರ ವಿರುಪನಗೌಡ ಮುಂತಾದವರು ಅವರ ಪ್ರಕಾರ ದೊಡ್ಡ ಯೋಗಿಗಳು. ತರ್ಕದ ಮೂಲಕ ಸತ್ಯಶೋಧ ಮಾಡಬೇಕು ಎನ್ನುವ ಅವರು ಕಲ್ಪಿತ ದೇವರುಗಳನ್ನು ನಿರಾಕರಿಸುತ್ತಾರೆ. ಅವರ ಚಿಂತನೆಗಳು, ‘ಗುಡಿಚರ್ಚು ಮಸಜೀದುಗಳ ಬಿಟ್ಟು ಹೊರಬನ್ನಿ’ ಕರೆಗೊಟ್ಟ ಕುವೆಂಪು ಅವರ ನಿರಂಕುಶಮತಿ ಚಿಂತನೆಯನ್ನು ನೆನಪಿಸುತ್ತವೆ.ಸದಾಶಿವಯೋಗಿಯವರ ಜತೆ ಚರ್ಚಿಸುವುದು ಎಂದರೆ, ಕಿಡಿಸೂಸುವ ಅಗ್ನಿಕುಂಡದ ಮುಂದೆ ಕುಳಿತಂತೆ. ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವೂ ಇರುವ, ಅವರೊಬ್ಬ ವಿಶಿಷ್ಟ ಚಿಂತಕರು. ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಯೋಗಿಯೊಬ್ಬರು ಕನ್ನಡ ಸಾಹಿತ್ಯ ಪರಂಪರೆಯನ್ನು ತಮ್ಮದೇ ಆದ ಪರಿಯಲ್ಲಿ ಕಟ್ಟಿಕೊಳ್ಳುವ ಬಗ್ಗೆ ಕುತೂಹಲ. ಅವರು ದೊಡ್ಡ ಯೋಗಿ ಎಂದು ಕರೆಯುವ ತತ್ವಪದಕಾರ ಹೇರೂರ ವಿರುಪನಗೌಡರ ಹೆಸರನ್ನು ಸಾಹಿತ್ಯಾಭ್ಯಾಸಿಗಳಾದ ನಮ್ಮಲ್ಲನೇಕರು ಕೇಳಿಯೇ ಇರುವುದಿಲ್ಲ.ನಾಥರು ಮತ್ತು ಸೂಫಿಗಳು ಕುರಿತ ನನ್ನ ಅಧ್ಯಯನಗಳನ್ನು ಗಮನಿಸಿದ್ದ ಸದಾಶಿವಯೋಗಿಯವರು, ಒಂದು ದಿನ, ಚರ್ಚೆಗೆ ನನ್ನನ್ನು ಆಹ್ವಾನಿಸಿದರು. ನಾನು ಈ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿದ್ದರೂ, ಈ ಪಂಥಗಳಲ್ಲಿ ಹೊಕ್ಕುಬಳಕೆ ಮಾಡಿದ ಸಾಧಕರ ಕ್ರಿಯಾಜ್ಞಾನ ದೊಡ್ಡದು ಎಂದು ತಿಳಿದಿರುವವನು. ಸಾಧ್ಯವಾದರೆ ಅವರ ಸಂದರ್ಶನ ಮಾಡಬೇಕೆಂಬ ಇರಾದೆಯಿಂದ ಟೇಪ್‌ರೆಕಾರ್ಡರನ್ನು ಸಹ ತೆಗೆದುಕೊಂಡು ಹೋದೆ. ಶಿವಾನಂದಾಶ್ರಮವು ಹಂಪಿಯ ವಿರೂಪಾಕ್ಷ ಗುಡಿಯ ಎಡಮಗ್ಗುಲಿಗೆ ಹೊಳೆಯ ದಂಡೆಯ ಮೇಲಿರುವ ಪರ್ಯಾಯ ಗಡ್ಡೆಯಲ್ಲಿದೆ. ಗಡ್ಡೆಯ ಒಂದು ಭಾಗ ದಂಡೆಗೆ ಲಗತ್ತಾಗಿದ್ದು, ಮೂರು ಕಡೆ ಹೊಳೆಗೆ ಮುಖಮಾಡಿದೆ. ಹೊಳೆ ತುಂಬಿ ಹರಿಯುವಾಗ ಆಶ್ರಮದೊಳಗಿದ್ದರೆ ಹೊಳೆಯ ನಡುವೆ ಇದ್ದೇವೇನೊ, ಆಶ್ರಮವೇ ನೀರಲ್ಲಿ ತೇಲುತ್ತಿದೆಯೇನೊ, ಎಂಬಂತೆ ಭಾಸವಾಗುವುದು. ನಾನು ಬೇಕೆಂತಲೇ ಬೆಳುದಿಂಗಳ ಇರುಳನ್ನು ಅಲ್ಲಿ ಕಳೆಯಹೋಗಿದ್ದೆ. ತುಂಗಾ ಪ್ರವಾಹವು ಇಡೀ ರಾತ್ರಿ ಭೋರೆಂದು ಲಯಬದ್ಧವಾಗಿ ಸಪ್ಪಳಗೈಯುತ್ತ ಹರಿಯುತ್ತಿತ್ತು.ಹೊಳೆಗೆ ಅಭಿಮುಖ ಕುಳಿತು ಸದಾಶಿವಯೋಗಿಯವರು ತಮ್ಮ ತಿರುಗಾಟದ ಅನುಭವವನ್ನು ನಡುರಾತ್ರಿಯವರೆಗೆ ಹೇಳುತ್ತಾ ಹೋದರು. ನನಗೆ ಅದನ್ನು ರೆಕಾರ್ಡ್ ಮಾಡಿಕೊಳ್ಳುವುದೇ ಕೃತಕ ಅನಿಸಿ, ಸುಮ್ಮನೇ ಕೇಳುತ್ತ ಹೋದೆ. ಅವರ ಚಿಂತನೆಗಳಲ್ಲಿ ಕೆಲವು ನನಗೆ ಪ್ರಿಯವಾದವು. ಕೆಲವು ಒಪ್ಪಿಗೆಯಾಗಲಿಲ್ಲ. ಕೆಲವು ಅರ್ಥವಾಗಲಿಲ್ಲ. ಆದರೆ ಅರ್ಧಶತಮಾನ ಕಾಲ ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿರುವ ಅವರ ಅನುಭವಗಳನ್ನು ಕೇಳುವುದು ಮಾತ್ರ ಅಪೂರ್ವ ಅನುಭವ. ಅವರು ತಮ್ಮ ಚಾರಣದಲ್ಲಿ ಸಾವಿರಾರು ಬಗೆಯ ಜನರನ್ನು ಭೇಟಿಯಾಗಿದ್ದಾರೆ.ಹೃಷಿಕೇಶದಲ್ಲಿ ಅವರು ಖ್ಯಾತ ಗೀತಾಪ್ರವಚನಕಾರ ಚಿನ್ಮಯಾನಂದರ ಸಹಪಾಠಿ. ಪುಣೆಯ ಆಶ್ರಮದಲ್ಲಿ ಓಶೋ ಜತೆ ಒಂದು ರಾತ್ರಿ ಕಳೆದಿದ್ದಾರೆ. ಉಜ್ಜಯನಿಯಲ್ಲಿ ತನ್ನ ತಲೆಯನ್ನು ದೇವಿಯ ಎದುರು ಕತ್ತರಿಸಿಕೊಂಡ ಸಾಧಕನನ್ನು ನೋಡಿದ್ದಾರೆ. ಮಾನಸ ಸರೋವರಕ್ಕೆ ಹೋಗಿ ಹಿಮದಲ್ಲಿ ಸಿಲುಕಿ, ಚೀನೀ ಸೈನಿಕರಿಂದ ತಪ್ಪಿಸಿಕೊಂಡು ಬಂದಿದ್ದಾರೆ.ಧಾರವಾಡದ ರೈಲು ನಿಲ್ದಾಣದಲ್ಲಿ ಕಳ್ಳನೆಂಬ ಆರೋಪಕ್ಕೆ ಗುರಿಯಾಗಿ ಹೊಡೆತ ತಿಂದಿದ್ದಾರೆ. ಗುಜರಾತಿನ ಹುಲಿಕಾಡುಗಳಲ್ಲಿ ಓಡಾಡಿದ್ದಾರೆ. ಸಾಧುವೊಬ್ಬನ ಕೈಗೆ ಸಿಕ್ಕು ನರಬಲಿ ಆಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಹಸಿವಾದಾಗ ಯಾರನ್ನು ಬೇಡಬಾರದು ಎಂದು ಬಾಳೆಹಣ್ಣು ಸಿಪ್ಪೆ ತಿಂದುಕೊಂಡು ಬದುಕಿದ್ದಾರೆ.ಇಂತಹ ಎಷ್ಟೋ ಅನುಭವ ಮತ್ತು ಪ್ರಯೋಗಗಳಿಂದ ಕೂಡಿರುವ ಸದಾಶಿವಯೋಗಿಗಳ ಜೀವನ ಅಥವಾ ಆತ್ಮಚರಿತ್ರೆ ಈಚೆಗೆ ಪ್ರಕಟವಾಗಿದೆ. ಅವರ ಸಂದರ್ಶನ ಮಾಡಿ ಎಂ.ಕೆ.ವಿರೂಪಾಕ್ಷಪ್ಪನವರು ಇದನ್ನು ರಚಿಸಿದ್ದಾರೆ. ಈ ಕೃತಿ ಆಧುನಿಕ ವಿಚಾರವಾದಿಯೂ ಭಾರತೀಯ ದರ್ಶನಗಳ ಬಗ್ಗೆ ಆಸಕ್ತರೂ ಆಗಿದ್ದ ಲೋಹಿಯಾರ ಹೆಸರಿನ ಪ್ರಕಾಶನದಿಂದ ಪ್ರಕಟವಾಗಿರುವುದು ಸಾಂಕೇತಿಕವಾಗಿದೆ. ಈ ಕೃತಿ, ರೋಚಕ ಕಾದಂಬರಿಯಂತೆ, ಅದ್ಭುತ ಪ್ರವಾಸ ಕಥನದಂತೆ, ಕೆಲವೆಡೆ ಹಾಸ್ಯಲೇಖನದಂತೆ ಓದಿಸಿಕೊಂಡು ಹೋಗುತ್ತದೆ. ಉಜ್ಜಯನಿಯಲ್ಲಿ ರಾಮರಸ ಕುಡಿದು ಹೊಳೆಯನ್ನು ದಾಟಲು ಹೋದ ಪ್ರಸಂಗವು, ಕನ್ನಡದ ಅತ್ಯುತ್ತಮ ವಿನೋದ ಬರೆಹವಾಗಿದೆ. ಈ ಕೃತಿಯಲ್ಲಿ ನಮ್ಮ ಆಲೋಚನೆಯನ್ನು ಪ್ರಭಾವಿಸಬಲ್ಲ ಅನೇಕ ಚಿಂತನೆ ಮತ್ತು ಘಟನೆಗಳು ಇವೆ.ಪುಸ್ತಕದ ಬೆನ್ನುಡಿಯಲ್ಲಿ ಸದಾಶಿವಯೋಗಿಯವರ ಮಾತುಗಳಿವೆ: “ಸತ್ಯವನ್ನು ಹುಡುಕಲು ಹೋಗಿ ಬಹುವಿಧಗಳಿಂದ ನೊಂದಿರುವವನು. ನಾನು ಕುತರ್ಕಿಯಲ್ಲ. ಆದರೆ ತರ್ಕವಾದಿಯಂತೂ ಹೌದು. ತರ್ಕಿಸದೇ ಸತ್ಯವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಹಾಗೂ ತನ್ನ ಅನುಭವಕ್ಕೆ ಬಾರದೇ ಇದ್ದರೂ, ಅದನ್ನೇ ನಂಬಿ ಅನುಸರಿಸುವುದು ಅಂಧವಿಶ್ವಾಸವೆಂದೇ ನನ್ನ ಮತ. ‘ದೇವರು ಧರ್ಮ ಜಾತಿ ಕರ್ಮ ಮುಂತಾದ ವಿಚಾರದಲ್ಲಿ ನಾವು ಅಂಧರಂತೆ ಯಾರದೋ ಅನುಭವಹೀನರ ಆಜ್ಞೆಯಂತೆ ಅನುಸರಿಸಿ ನಡೆಯುತ್ತಿರುವ ರೀತಿ ತಪ್ಪೇ? ಎಂಬ ವಿಚಾರವು ತರ್ಕಬದ್ಧವಾಗಿ ವಿಮರ್ಶೆಯಾಗಿ, ಇದರಿಂದ ಯಥಾರ್ಥ ಸದ್ಯವು ತೇಲಿ ಹೊರಬರುವುದರಿಂದ, ಅಂತಹ ವಿಮರ್ಶಾ ಸಹಿತವಾದ ಸತ್ಯವು, ಒಂದೇ ಮಾನವಧರ್ಮದ ಉದಯಕ್ಕೆ ಕಾರಣವಾಗಿ, ಅಂತಹ ಮಾನವಧರ್ಮದತ್ತ ನಾವೆಲ್ಲರೂ ಒಂದಾಗಿ ಕೂಡಿ ಸಾಗೋಣ’’.ಆಶಯವೇನೊ ಚೆನ್ನಾಗಿದೆ. ಆದರೆ ಈ ಅಮೂರ್ತವಾದ ‘ಮಾನವಧರ್ಮ’ದತ್ತ ಮನುಕುಲ ಸಾಗುವುದಕ್ಕೆ ಮೂರ್ತವಾದ ಕಾರ್ಯಕ್ರಮ ಯಾವುದು? ಈ ಚಿಂತನೆಗಳನ್ನು ಸಾಮಾಜಿಕ ರಾಜಕೀಯವಾದ ಆಧುನಿಕ ಚಿಂತನೆ ಮತ್ತು ಚಳವಳಿಗಳ ಜತೆ ಬೆಸೆಯುವ ಬಗೆಯೆಂತು?  ಯೋಗದಿಂದ ವ್ಯಕ್ತಿಗಳಿಗೆ ಮನಶ್ಶಾಂತಿ ಸಿಗಬಹುದು. ಆದರೆ ತಮ್ಮದಲ್ಲದ ತಪ್ಪಿಗಾಗಿ ನತದೃಷ್ಟ ಬದುಕನ್ನು ಬದುಕುತ್ತಿರುವ ಜನಸಮುದಾಯಗಳ ಬದುಕನ್ನು ಆರೋಗ್ಯಪೂರ್ಣವಾಗಿ ಬದಲಾಯಿಸುವ ದಿಸೆಯಲ್ಲಿ ಈ ಯೌಗಿಕ ಹಾದಿ ಎಷ್ಟು ದೂರ ಬರಬಲ್ಲದು? ಅಥವಾ ಇಂತಹ ಹೊಣೆಯ ನಿಭಾವಣೆಯನ್ನು ಯೋಗತತ್ವದಿಂದ ನಿರೀಕ್ಷಿಸುವುದೇ ಸರಿಯಲ್ಲವೊ? ರಾಜಕಾರಣದಲ್ಲಿ ಧರ್ಮವನ್ನು ಬಳಸುತ್ತ ಜನರ ಮೂಲಸಮಸ್ಯೆಗಳನ್ನು ಮರೆಮಾಚುವಿಕೆ ಹಾಗೂ ಜ್ಯೋತಿಷ, ಮೋಡಿ, ಪವಾಡ ಮಾಡುವವರ ಮೋಸ- ಇವುಗಳಲ್ಲಿ ಯಾವುದು ಹೆಚ್ಚು ಅಪಾಯಕಾರಿ? ‘ಪವಾಡ ಬಯಲು’ ಕಾರ್ಯಕ್ರಮವು ಎಚ್.ನರಸಿಂಹಯ್ಯ ತರಹದ ಸೀಮಿತ ವೈಚಾರಿಕತೆಗೆ ನಿಲ್ಲಿಸಿಬಿಡಬಹುದೇ? ಮುಂತಾದ ಪ್ರಶ್ನೆಗಳು ಸದಾಶಿವಯೋಗಿಗಳ ಕೃತಿಗಳನ್ನು ಓದುವಾಗ ಏಳುತ್ತವೆ.ಆದರೆ ಅವರ ಎಲ್ಲ ಚಿಂತನೆ ಮತ್ತು ಕಾರ್ಯಕ್ರಮಗಳನ್ನು ನಾವು ಪೂರ್ಣವಾಗಿ ಒಪ್ಪದೆ ಇರಬಹುದು. ನನಗಿದು ಸಮ್ಮತವಿಲ್ಲ ಎಂದು ಅವರ ಜತೆ ಕೂತು ಜಗಳ ಮಾಡಬಹುದು. ತರ್ಕದ ಮೂಲವೇ ಜಗತ್ತನ್ನು ನೋಡಬಯಸುವ ವೈಚಾರಿಕತೆ, ತಾಯಿಯಂತೆ ಪ್ರೀತಿಸುವ ಕರುಳುತನ, ಜನರ ನೋವಿಗೆ ಮಿಡಿವ ಮಾನವೀಯತೆಗಳಿಂದ ಕೂಡಿದ ಸದಾಶಿವಯೋಗಿ ನಾನು ಕಂಡ ಘನವ್ಯಕ್ತಿತ್ವಗಳಲ್ಲಿ ಒಂದು. ನಿಮ್ಮ ಜೀವನದಲ್ಲಿ ಈಡೇರದ ಆಸೆಯೇನಾದರೂ ಇದೆಯೇ ಎಂದೊಮ್ಮೆ ಕೇಳಿದೆ. ಅವರು ಹೇಳಿದರು: ‘ಎಲ್ಲ ಜಾತಿ ಧರ್ಮದ ಮಕ್ಕಳನ್ನು ಸೇರಿಸಿಕೊಂಡು, ಪ್ರಶ್ನೆ ಮತ್ತು ತರ್ಕದ ಮೂಲಕ ಜಗತ್ತನ್ನು ಅರಿಯುವ ವಿಚಾರವಂತರನ್ನಾಗಿ ಬೆಳೆಸುವ ಒಂದು ಶಾಲೆ ತೆಗೀಬೇಕು ಅಂತ ಆಸೆಯಿತ್ತೂ ಕಂಡ್ರೀ. ಶಾಲೆ ಮಾಡಲು ಸಂಪನ್ಮೂಲ ಇರಲಿಲ್ಲ. ಈಗ ಸಂಪನ್ಮೂಲ ಐತೆ. ನನಗೀಗ ಶಕ್ತಿಯಿಲ್ಲ’.ಎಪ್ಪತ್ತೇಳರ ಹರೆಯದ ಸದಾಶಿವಯೋಗಿಯವರ ಸಾಹಸಶೀಲ ಬದುಕು, ಹೋರಾಟ ಮತ್ತು  ಕನಸುಗಾರಿಕೆ ನೋಡುವಾಗ, ಬೆಳಗೆರೆ ಕೃಷ್ಣಶಾಸ್ತ್ರಿಯವರ ‘ಯೇಗ್ದಾಗೆಲ್ಲ ಐತೆ’ ಕೃತಿಯ ಯೋಗಿ ಮುಕುಂದೂರುಸ್ವಾಮಿ ನೆನಪಾಗುತ್ತಾರೆ; ‘ಭಾರತೀಯರಿಗೆ ಭಗವವಂತರೆಷ್ಟು’ ಕೃತಿಯು ಪಂಡಿತ ತಾರಾನಾಥರ ‘ಧರ್ಮಸಂಭವ’ವನ್ನು ನೆನಪಿಸುತ್ತದೆ. ಆದರೇನಂತೆ- ಕಾರ್ಪೊರೇಟ್ ಜಗತ್ತಿನವರ ಸಂಕಟ ವಿಮೋಚನೆಗೆಂದು ಜನ್ಮತಳೆದಿರುವ ಹೈಟೆಕ್ ಯೋಗಿಗಳು, ಶಕ್ತಿರಾಜಕಾರಣದಲ್ಲಿ ಇರುವ ಭ್ರಷ್ಟರನ್ನು ರಕ್ಷಿಸುವ ಧಾರ್ಮಿಕ ನಾಯಕರು, ಲೈಂಗಿಕ ಹಗರಣದ ಆಶ್ರಮವಾಸಿಗಳು ಕರ್ನಾಟಕದಲ್ಲಿ ಪ್ರಭಾವಶಾಲಿಗಳಾಗಿದ್ದಾರೆ; ಪಂಡಿತ ತಾರಾನಾಥ, ಮುಕುಂದೂರುಸ್ವಾಮಿ, ಸದಾಶಿವಯೋಗಿ ಮುಂತಾದ ಸಾಧಕರು ಮತ್ತು ಚಿಂತಕರು ಸೀಮಿತ ನೆಲೆಯಲ್ಲಿ ಪ್ರಭಾವ ಬೀರುವಂತೆ ಉಳಿದುಬಿಟ್ಟಿದ್ದಾರೆ. ಇದು ನಮ್ಮ ಕಾಲದ ದೊಡ್ಡ ವೈರುಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry