ಭಾನುವಾರ, ಮೇ 9, 2021
22 °C

ತಿರುಗು ತಕಲಿ ತಿರುಗು, ನಕಲಿಗೆದುರು ತಿರುಗು!

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ತಿರುಗು ತಕಲಿ ತಿರುಗು, ನಕಲಿಗೆದುರು ತಿರುಗು!

‘ನಾನು ಗೀತೆ, ಕುರಾನ್, ರಾಮಾಯಣ ಓದುತ್ತಿರುವಾಗ ಕೆಲವು ಸಲ ನನ್ನ ಮನಸ್ಸು ಎಲ್ಲೆಲ್ಲೋ ಅಲೆದಾಡುತ್ತಿರುತ್ತದೆ. ಆದರೆ ನಾಲ್ಕು ಗಂಟೆಗಳ ಕಾಲ ಚರಕದಿಂದ ನೂಲುವಾಗ ಮಾತ್ರ ಒಂದೇ ಒಂದು ಅಶುದ್ಧ ಯೋಚನೆಯೂ ನನ್ನ ಮನಸ್ಸಿನಲ್ಲಿ ಸುಳಿಯುವುದಿಲ್ಲ’.ಮಹಾತ್ಮ ಗಾಂಧಿ 1922ರಲ್ಲಿ ಯರವಡಾ ಜೈಲಿನಲ್ಲಿದ್ದಾಗ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಅಜಮಲ್ ಖಾನ್ ಅವರಿಗೆ ಬರೆದ ಮಾತುಗಳಿವು. ಜೈಲಿನಲ್ಲಿ ಗಾಂಧೀಜಿಯ ಮೂರು ಮುಖ್ಯ ದಿನಚರಿಗಳು: ಓದುವುದು, ಚಿಂತಿಸುವುದು, ಚರಕದಿಂದ ನೂಲುವುದು. ಚರಕ, ಗಾಂಧೀಜಿಯ ದಿನಚರಿಯ ಭಾಗವಾದ ಕತೆ ಅವರ ಬದುಕಿನ ಉಜ್ವಲ ಆಯಾಮವೊಂದನ್ನು ಹೇಳುತ್ತದೆ; ಅದು ಗಾಂಧೀಜಿ ದೈಹಿಕ ದುಡಿಮೆಯ ಅರ್ಥಪೂರ್ಣತೆಯನ್ನು ಮೈಗೂಡಿಸಿಕೊಂಡ ವಿಶಿಷ್ಟ ಪ್ರಕ್ರಿಯೆಯೂ ಹೌದು. ಬ್ರಿಟಿಷ್ ಇಂಡಿಯಾದಲ್ಲಿ ಮಗ್ಗಗಳು ನಾಶವಾಗಿದ್ದರಿಂದ ಉಂಟಾಗಿದ್ದ ‘ಬಡತನವನ್ನು ಚರಕ ಮಾತ್ರ ಹೋಗಲಾಡಿಸಬಲ್ಲದು’ ಎಂದು ‘ಹಿಂದ್ ಸ್ವರಾಜ್ (1908)’ ಪುಸ್ತಕದಲ್ಲಿ ಬರೆಯುವಾಗ ‘ನಾನಿನ್ನೂ ಮಗ್ಗವನ್ನಾಗಲೀ ಚರಕವನ್ನಾಗಲೀ ನೋಡಿರಲಿಲ್ಲ’ ಎಂದು ಗಾಂಧಿ ಬರೆಯುತ್ತಾರೆ.ಚರಕ ಬಡತನವನ್ನು ಓಡಿಸುವುದರೊಂದಿಗೆ ಸ್ವರಾಜ್ಯವನ್ನೂ ತರಬಲ್ಲದು ಎಂದು ನಂಬಿದ್ದ ಗಾಂಧಿ, 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಾಗಲೂ ಚರಕವನ್ನು ಕಣ್ಣಾರೆ ನೋಡಿರಲಿಲ್ಲ. ಸಬರಮತಿಯಲ್ಲಿ ಸತ್ಯಾಗ್ರಹ ಆಶ್ರಮವನ್ನು ಶುರು ಮಾಡಿದಾಗ ಅಲ್ಲಿ ಕೆಲವು ಮಗ್ಗಗಳಿದ್ದವು. ಆದರೆ ಅಲ್ಲಿ ಯಾರೂ ಕುಶಲಕರ್ಮಿಗಳಿರಲಿಲ್ಲ.ಗಾಂಧೀಜಿಯೂ ಸೇರಿದಂತೆ ಆಶ್ರಮವಾಸಿಗಳಿಗೆಲ್ಲ ನೇಯುವುದನ್ನು ಕಲಿಸಲು ನುರಿತ ನೇಕಾರನೊಬ್ಬ ಬೇಕಾಗಿತ್ತು. ಆದರೆ ನೆಯ್ಗೆ ಕಲಿಸಲು ಬಂದವನು ಆಶ್ರಮವಾಸಿಗಳಿಗೆ ನೆಯ್ಗೆಯ ಕೌಶಲವನ್ನು ಕಲಿಸಲಾರದೇ ಹೋದ. ಅಷ್ಟೊತ್ತಿಗೆ ಆಶ್ರಮವಾಸಿಗಳೆಲ್ಲ ಗಿರಣಿಬಟ್ಟೆಗಳನ್ನು ಬಹಿಷ್ಕರಿಸಿ, ತಾವೇ ನೆಯ್ದ ಬಟ್ಟೆಗಳನ್ನು ತೊಡಲು ತೀರ್ಮಾನಿಸಿದ್ದರು.ಬಟ್ಟೆ ನೇಯಲು ಬೇಕಾದ ನೂಲು ಹುಡುಕಿ ಹೊರಟ ಗಾಂಧೀಜಿಗೆ ನೇಕಾರರ ಸಮಸ್ಯೆಗಳು, ಅವರಿಗೆ ಆಗುತ್ತಿದ್ದ ಮೋಸ, ಅವರ ಸಾಲಚಕ್ರಗಳ ಪರಿಚಯವಾಗತೊಡಗಿತು.ಆ ಘಟ್ಟದಲ್ಲಿ ಗಾಂಧೀಜಿ ಚರಕದ ಬೆನ್ನು ಹತ್ತಿದ ಕತೆ ಅವರ ಹಲವು ಮಹತ್ವದ ಅನ್ವೇಷಣೆಗಳಂತೆಯೇ ಇದೆ. ಗಾಂಧೀಜಿ ಹಾಗೂ ಸಂಗಡಿಗರು ಗಿರಣಿಗಳಿಂದ ನೂಲು ತಂದು, ಬಟ್ಟೆ ನೆಯ್ದು ನೋಡಿದರು. ನಂತರ ನೂಲುವುದನ್ನು ಕಲಿಯಲೇಬೇಕೆಂದು ಹಲ ಬಗೆಯ ಚಕ್ರಗಳನ್ನು ಬಳಸಿ ಪ್ರಯೋಗ ಮಾಡಿದರು. ಆದರೂ ತಕಲಿಯ ಕಲೆ ಕೈ ಹತ್ತಲಿಲ್ಲ. ಆ ಕಲೆ ಬಲ್ಲ ಮಹಿಳೆಯೊಬ್ಬಳು ಹಳ್ಳಿಯೊಂದರಲ್ಲಿ ಸಿಕ್ಕರೂ, ಆಕೆಗೆ ಆಶ್ರಮವಾಸಿಗಳಿಗೆ ನೂಲು ತೆಗೆಯುವ ಗುಟ್ಟನ್ನು ಹೇಳಿಕೊಡಲಾಗಲಿಲ್ಲ! ಕೊನೆಗೂ ಪರಿಹಾರ ಸಿಕ್ಕಿದ್ದು ಗಂಗಾಬೆನ್ ಮಜುಂದಾರ್ ಎಂಬ ದಿಟ್ಟ ಮಹಿಳೆ ಗಾಂಧೀಜಿಗೆ ಸಿಕ್ಕಾಗ.‘ವಿಧವೆಯಾಗಿದ್ದ ಗಂಗಾಬೆನ್ ಅಸ್ಪೃಶ್ಯತೆಯ ಶಾಪವನ್ನು ಎದುರಿಸಿ ಹೊರಬಂದಿದ್ದಳು. ಅಕ್ಷರ ಕಲಿಯದ ಆಕೆ ನಿರ್ಭಿಡೆಯಿಂದ ಶೋಷಿತ ವರ್ಗಗಳ ಜೊತೆ ತೊಡಗುತ್ತಾ, ಅವರಿಗೆ ನೆರವಾಗುತ್ತಿದ್ದಳು. ಸದೃಢ ಮೈಕಟ್ಟಿನ ಆಕೆ ಒಬ್ಬಳೇ ಕುದುರೆ ಏರಿ ಎಲ್ಲೆಂದರಲ್ಲಿ ಹೋಗಬಲ್ಲವಳಾಗಿದ್ದಳು’ ಎಂದು ಗಾಂಧೀಜಿ ಆಕೆಯನ್ನು ಆರಾಧನಾಭಾವದಿಂದ ವರ್ಣಿಸುತ್ತಾರೆ. ಗುಜರಾತಿನುದ್ದಕ್ಕೂ ಅಡ್ಡಾಡಿದ ಗಂಗಾಬೆನ್ ಕೊನೆಗೂ ಬರೋಡದ ವಿಜಾಪುರದಲ್ಲಿ ಚರಕವನ್ನು ಪತ್ತೆ ಹಚ್ಚುತ್ತಾಳೆ!ಅಷ್ಟೊತ್ತಿಗಾಗಲೇ ವಿಜಾಪುರದ ನೇಕಾರರು ಚರಕದಿಂದ ಪ್ರಯೋಜನವಿಲ್ಲ ಎಂದು ಅವನ್ನು ಅಟ್ಟದ ಮೇಲೆ ಒಟ್ಟಿದ್ದರು. ಗಂಗಾಬೆನ್ ಅವರನ್ನು ಕಂಡಾಗ, ‘ನೀವು ಹಂಜಿ ಕೊಡಿಸಿದರೆ ಹಾಗೂ ನಾವು ತೆಗೆದ ನೂಲನ್ನು ಕೊಳ್ಳುವುದಿದ್ದರೆ ಚರಕ ತಿರುಗಿಸಲು ಸಿದ್ಧ’ ಎಂದರು. ಗಂಗಾಬೆನ್ ಗಾಂಧೀಜಿಗೆ ಈ ಸಂತಸದ ಸುದ್ದಿ ಹೇಳಿದಾಗ, ಹಂಜಿಯನ್ನೆಲ್ಲಿಂದ ತರುವುದು ಎಂಬ ಪ್ರಶ್ನೆ ಎದುರಾಯಿತು.ಉಮರ್ ಸೊಬಾನಿ ಎಂಬ ಗಾಂಧೀ ಮಿತ್ರ ತನ್ನ ಗಿರಣಿಯಿಂದ ಹಂಜಿ ಒದಗಿಸಿದ. ವಿಜಾಪುರದ ತಕಲಿಗಳು ಮತ್ತೆ  ತಿರುಗಲಾರಂಭಿಸಿದವು. ಆದರೆ ‘ಮಿಲ್ಲಿನಿಂದ ತಂದ ಹಂಜಿಯನ್ನು ಬಳಸುವುದಾದರೆ, ಮಿಲ್ಲಿನಿಂದ ತಂದ ನೂಲನ್ನೂ ಬಳಸಬಹುದಲ್ಲ?’ ಎಂಬ ಸೂಕ್ಷ್ಮಪ್ರಶ್ನೆ ಗಾಂಧೀಜಿಗೆ ಎದುರಾಯಿತು! ಈ ಪ್ರಶ್ನೆಯನ್ನು ಗಾಂಧೀಜಿ ಬಗೆಹರಿಸಿಕೊಂಡ ರೀತಿ ಇಂಡಿಯಾದ ಗತಕಾಲವನ್ನು ಹಿಂದಿರುಗಿನೋಡಿ, ಅವರು ಪಡೆಯುತ್ತಿದ್ದ ಬಗೆಬಗೆಯ ವಿವೇಕದ ಅದ್ಭುತ ಉದಾಹರಣೆಯಂತಿದೆ.ಗಾಂಧೀಜಿ ಬರೆಯುತ್ತಾರೆ: ‘ನಮ್ಮ ಹಿರಿಯರಿಗೆ ಯಾವ ಗಿರಣಿಗಳೂ ಹಂಜಿ ಒದಗಿಸಿರಲಿಲ್ಲವಲ್ಲ?  ಹಾಗಾದರೆ ಅವರಿಗೆ ಹಂಜಿಯನ್ನು ಕೊಡುತ್ತಿದ್ದವರಾರು? ನಾನಾಗ ಗಂಗಾಬೆನ್‌ಗೆ ಹಂಜಿ ಮಾಡುವವರನ್ನು ಹುಡುಕಲು ಕೇಳಿಕೊಂಡೆ. ಗಂಗಾಬೆನ್ ಆ ಕೆಲಸವನ್ನೂ ಮಾಡಿಯೇತೀರುತ್ತೇನೆಂದು ಹೊರಟಳು. ಹತ್ತಿಯನ್ನು ಹಲ್ಲುಹಣಿಗೆಯಿಂದ ಒಪ್ಪ ಮಾಡಿ ಹಂಜಿ ಮಾಡುವ ಒಬ್ಬನನ್ನು ಹುಡುಕೇಬಿಟ್ಟಳು.  ಆಮೇಲೆ ಗಂಗಾಬೆನ್ ಹೀಗೆ ಹತ್ತಿಯಿಂದ ಹಂಜಿ ತೆಗೆಯಬಲ್ಲ ತರುಣರನ್ನೂ ತಯಾರು ಮಾಡಿದಳು.ನಾನು ಬಾಂಬೆಯ ಯಶವಂತ ಪ್ರಸಾದ್ ದೇಸಾಯರಿಂದ ಹತ್ತಿಯನ್ನು ಬೇಡಿ ಪಡೆದೆ. ಅಷ್ಟರಲ್ಲೇ ಗಂಗಾಬೆನ್ ವಿಜಾಪುರದಲ್ಲಿ ತಯಾರಾದ ನೂಲನ್ನು ನೇಯಲು ಮಗ್ಗದವರನ್ನು ಕರೆತಂದಳು. ಗಂಗಾಬೆನ್ ಸಾಹಸ ನಮ್ಮೆಲ್ಲರ ನಿರೀಕ್ಷೆ ಮೀರಿ ಫಲ ಕೊಟ್ಟಿತು. ‘ವಿಜಾಪುರ ಖಾದಿ’ ಎಲ್ಲೆಡೆ ಹೆಸರಾಯಿತು’.ಇದೆಲ್ಲ ನಡೆಯುತ್ತಿರುವಾಗಲೇ ನೇಕಾರ ರಾಮ್‌ಜಿ ಮತ್ತವನ ಪತ್ನಿ (ಆಕೆಯ ಹೆಸರೂ ಗಂಗಾಬೆನ್!) ಸಬರಮತಿ ಆಶ್ರಮ ಸೇರಿದರು. ಗಂಡಹೆಂಡಿರಿಬ್ಬರೂ ಆಶ್ರಮಕ್ಕೆ ಬೇಕಾದ ಖಾದಿ, ಧೋತಿಗಳನ್ನು ನೆಯ್ದು ಕೊಡತೊಡಗಿದರು. ‘ಇವರಿಬ್ಬರೂ ಗುಜರಾತಿನಲ್ಲಷ್ಟೇ ಅಲ್ಲ, ಅದರಾಚೆಗೂ ಚರಕದಿಂದ ತೆಗೆದ ನೂಲನ್ನು ನೇಯುವ ಕಲೆಯನ್ನು ಸಾವಿರಾರು ಮಂದಿಗೆ ಕಲಿಸಿದರು’ ಎಂದು ಬರೆಯುತ್ತಾ, ಗಾಂಧೀಜಿ ಕೊಡುವ ಒಂದು ಆತ್ಮೀಯ ಚಿತ್ರ: ‘ಮಗ್ಗದೆದುರು ಕೂತು ನೇಯುತ್ತಿದ್ದ ಗಂಗಾಬೆನ್‌ಳನ್ನು ನೋಡಿದರೆ ಎದೆ ತುಂಬಿ ಬರುತ್ತಿತ್ತು.ಈ ಅನಕ್ಷರಸ್ಥ ತಂಗಿ ಮೈಮೇಲೆ ಬಂದವಳಂತೆ ಆ ನೆಯ್ಗೆಯಲ್ಲಿ ಎಷ್ಟು ಮುಳುಗಿರುತ್ತಿದ್ದಳೆಂದರೆ ಅವಳ ಗಮನವನ್ನು ಬೇರೆಡೆಗೆ ಸೆಳೆಯುವುದು ಕಷ್ಟವಿತ್ತು; ಆಕೆ ಅಷ್ಟೊಂದು ಪ್ರೀತಿಸುವ ಮಗ್ಗದಿಂದ ಆಕೆಯ ಕಣ್ಣು ಬೇರೆಡೆಗೆ ಹೊರಳುವಂತೆ ಮಾಡುವುದಂತೂ ಇನ್ನಷ್ಟು ಕಷ್ಟವಿತ್ತು’. ಹಲವರಿಂದ ಹಲವನ್ನು ಕಲಿತ ಗಾಂಧೀಜಿ ಚರಕ ಎಂಬುದು ಧ್ಯಾನ ಎಂಬುದನ್ನು ತಂಗಿ ಗಂಗಾಬೆನ್‌ಳಿಂದ ಕೂಡ ಕಲಿತಿರಬಹುದಲ್ಲವೆ? ಹಾಗೆಯೇ ಹಳ್ಳಿಯ ಹೆಂಗಸರ ಆರು ತಿಂಗಳ ಬಿಡುವಿನಲ್ಲಿ ಚರಕ ಅವರಿಗೆ ಆರ್ಥಿಕವಾಗಿ ಹೇಗೆ ನೆರವಾಗಬಲ್ಲದು ಎಂಬ ಸರಳ ಅರ್ಥಶಾಸ್ತ್ರವನ್ನೂ ಇಂಥ ಹೆಂಗಸರಿಂದಲೇ ಕಲಿತಿರಬಹುದು; ರಾಜಮೋಹನ್ ಗಾಂಧಿ ಗುರುತಿಸುವಂತೆ, ಚರಕ ಗಾಂಧೀಜಿಯನ್ನು ನೇಕಾರ ಕವಿಗಳಾದ ಕಬೀರ, ತಿರುವಳ್ಳುವರ್ ತನಕ ಕರೆದೊಯ್ದಿತು.ನೇಕಾರ ಮನೆತನದಿಂದ ಬಂದ ಕಬೀರ್ ಹಿಂದೂ-ಮುಸ್ಲಿಮರ ನಡುವಣ ಬಿರುಕನ್ನು ಬೆಸೆಯಲೆತ್ನಿಸಿದ ರೀತಿ; ತಿರುವಳ್ಳುವರ್ ಕಲಿಸಿದ ಕರುಣೆ, ಸಮಾನತೆಗಳ ಪಾಠ ಕೂಡ ಗಾಂಧೀಜಿಗೆ ಮುಖ್ಯವಾಗಿತ್ತು.ನಮ್ಮ ಆದಿ ವಚನಕಾರ ದೇವರದಾಸಿಮಯ್ಯ ನೆಯ್ಗೆಯವರಾಗಿದ್ದರು ಎಂಬುದನ್ನು ಯಾರಾದರೂ ಗಾಂಧೀಜಿಗೆ ಹೇಳಿದ್ದರೆ ಅವರು ದಾಸಿಮಯ್ಯನವರ ವಚನಗಳಿಂದಲೂ ಸ್ಫೂರ್ತಿ ಪಡೆಯುತ್ತಿದ್ದರೇನೋ. ಗಾಂಧೀಜಿಗೆ ಚರಕ ಎಂದರೆ: ಧ್ಯಾನ. ದೈಹಿಕ ದುಡಿಮೆ. ಆತ್ಮವಿಶ್ವಾಸ. ಮೀರುವಿಕೆ. ಹಳ್ಳಿಯ ಆರ್ಥಿಕತೆ… ಹೀಗೆ ಹಲವು ಅರ್ಥಗಳು. ಚರಕದ ಇಂಥ ವಿಶಾಲ ಗ್ರಹಿಕೆಯನ್ನು ಪ್ರದರ್ಶನಕಾತುರ ರಾಜಕಾರಣಿಗಳಿಂದ ನಿರೀಕ್ಷಿಸಲಾದೀತೆ? ಗಾಂಧೀಯುಗದ ನಂತರದ ಕೆಲವೇ ವರ್ಷಗಳಲ್ಲಿ ಚರಕ ಎನ್ನುವುದು ರಾಜಕಾರಣಿಗಳ ನಿರ್ಲಜ್ಜ ಸಾರ್ವಜನಿಕ ಪ್ರದರ್ಶನದ ಸಂಕೇತವಾಯಿತು.  ಆದರೂ ಚರಕದ ಸಾಂಕೇತಿಕತೆಯನ್ನು ವಿಸ್ತರಿಸಿದ ಲೋಹಿಯಾ, ಅದನ್ನು ಹಳ್ಳಿಗೆ ಬೇಕಾದ ಪುಟ್ಟ ಯಂತ್ರ ಎಂಬುದಾಗಿ ವಿವರಿಸಿದರು.ಗ್ರಾಮವೇ ತನಗೆ ಬೇಕಾದ್ದನ್ನು ತಯಾರಿಸಿಕೊಳ್ಳಬಹುದೆಂಬ ಪುಟ್ಟ ಪ್ರಯೋಗವನ್ನೂ ಕರ್ನಾಟಕದ ರೈತ ಚಳವಳಿ ಹಿಂದೆ ಹಳ್ಳಿಗಳಲ್ಲಿ ಮಾಡಿನೋಡಿತು. ಸಣ್ಣ ಪ್ರಮಾಣದಲ್ಲಿ ಸೋಪು, ಬೆಂಕಿಪೊಟ್ಟಣ, ಮೇಣದಬತ್ತಿಗಳನ್ನು ಮಾಡುವ  ಪುಟ್ಟ ಉದ್ಯಮಗಳನ್ನು ರೈತಯುವಕರು ಶುರು ಮಾಡಿದ್ದರು.ಇವತ್ತು ಸಾಗರದ ಬಳಿಯ ಭೀಮನಕೋಣೆಯಲ್ಲಿರುವ ಪ್ರಸನ್ನರ ಮಾರ್ಗದರ್ಶನದ ‘ಚರಕ’ ಸಂಸ್ಥೆ ಮಹಿಳೆಯರನ್ನೇ ತೊಡಗಿಸಿ, ಚರಕದ ಸುಧಾರಿತ ಪ್ರಯೋಗಗಳ ಮೂಲಕ ಸೃಷ್ಟಿಸಿರುವ ಉಡುಪು ಕರ್ನಾಟಕದಲ್ಲಿ ಪುಟ್ಟ ಕ್ರಾಂತಿಯನ್ನೇ ಮಾಡಿದೆ. ಇಂಡಿಯಾದ ಬಿಸಿಲು, ಚಳಿ ಎರಡನ್ನೂ ತಡೆಯಬಲ್ಲ ಖಾದಿ ಬಟ್ಟೆ, ಖಾದಿ ಟೋಪಿಯನ್ನು ತೊಡುವ ಉತ್ತರ ಕರ್ನಾಟಕದ ಸಾಮಾನ್ಯರಿಗೆ ಖಾದಿ ಅವರ ಜೀವನದ ಸಹಜ ಅಂಗ. ಹೀಗೆ ಚರಕ ಇಂಡಿಯಾದ ವಾಸ್ತವವೂ ಹೌದು; ಶ್ರಮಜೀವಿ ಗ್ರಾಮದ ಸಂಕೇತವೂ ಹೌದು.‘ರೂಪಕಗಳ ಜೊತೆ ಹುಡುಗಾಟ ಆಡಬಾರದು’ ಎಂದು ಝೆಕ್ ಕಾದಂಬರಿಕಾರ ಮಿಲನ್ ಕುಂದೇರ ತನ್ನ ಕಾದಂಬರಿಯೊಂದರಲ್ಲಿ ಬರೆಯುತ್ತಾನೆ. ಹಾಗೆಯೇ ಸಂಕೇತಗಳ ಜೊತೆಯೂ ಹುಡುಗಾಟ ಆಡಬಾರದು. ‘ಮುಂದಿನ ಜನ್ಮದಲ್ಲಿ ಭಂಗಿಯಾಗಿ ಹುಟ್ಟುತ್ತೇನೆ’ ಎಂದ ಗಾಂಧೀಜಿ ಸಬರಮತಿ ಆಶ್ರಮದಲ್ಲಿ ಪೊರಕೆ ಹಿಡಿದು, ಎಲ್ಲ ಜಾತಿಯವರೂ ಪೊರಕೆ ಹಿಡಿಯುವಂತೆ ಮಾಡಿದರು.ಆಶ್ರಮದಲ್ಲಿ ಶೌಚಾಲಯಗಳನ್ನು ಎಲ್ಲರೂ ತೊಳೆಯಬೇಕೆಂದು ಅವರು ಮಾಡಿದ ನಿಯಮ ಅಸ್ಪೃಶ್ಯರ ಮೇಲೆ ಈ ಕೆಲಸವನ್ನು ಹೇರಿರುವ ಹಿಂದೂ ಕ್ರೌರ್ಯದ ವಿರುದ್ಧ ಸಾರಿದ ಸಮರವಾಗಿತ್ತು. ಬಸವಣ್ಣನವರಂತೆ ಗಾಂಧೀಜಿಯಲ್ಲಿ ಕೂಡ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗಳೆರಡೂ ಬೆರೆತಿದ್ದವು. ಆದರೆ ಎರಡು ವರ್ಷಗಳ ಕೆಳಗೆ ನರೇಂದ್ರ ಮೋದಿ ಮತ್ತವರ ಹಿಂಬಾಲಕರು ಗಾಂಧೀಜಿ ಹಿಡಿದ ಪೊರಕೆಯನ್ನು ಸ್ವಚ್ಛ ಭಾರತದ ಒಣಪ್ರದರ್ಶನದ ವಿಕೃತಿಯನ್ನಾಗಿಸಿದರು.ಪೊರಕೆ ‘ಆಮ್ ಆದ್ಮಿ ಪಕ್ಷ’ದ ಸಂಕೇತವಾಗಿದ್ದರಿಂದ, ದೆಹಲಿ ಚುನಾವಣೆಯ ಸಂದರ್ಭದಲ್ಲಿ ಆ ಸಂಕೇತವನ್ನು ಹೈಜಾಕ್ ಮಾಡಲು ಕೂಡ ಆಡಿದಂತಿದ್ದ ಈ  ಪೊರಕೆಯಾಟವನ್ನು ಜನರೇ ತಿರಸ್ಕರಿಸಿದರು. ಇದೀಗ ಹೊಸ ನೋಟುಗಳ ಮೇಲೆ ಗಾಂಧೀಕನ್ನಡಕದ ಜೊತೆಗೇ ಸ್ವಚ್ಛ ಭಾರತದ ಘೋಷಣೆಯನ್ನೂ ಮುದ್ರಿಸಲಾಗಿದೆ; ಈ  ನೋಟು ಹಿಡಿದವರ ಕಣ್ಣೆದುರಿಗೇ ಆ ಘೋಷಣೆಗೆ ತದ್ವಿರುದ್ಧವಾದ ಕೊಳಕು ರಾಚುತ್ತಿರುವ ವಿಲಕ್ಷಣ ಸನ್ನಿವೇಶವೂ ಇಂಡಿಯಾದಲ್ಲಿದೆ!ಇದೀಗ ಚರಕದ ಸಂಕೇತದ ಜೊತೆ ಹುಡುಗಾಟ ಶುರುವಾಗಿದೆ. ಈ ದೇಶದ ಸಾರ್ವಜನಿಕ ಜೀವನದಲ್ಲಿ ಬೂಟಾಟಿಕೆಯೇ ಕಾಯಂಸ್ಥಿತಿ ಎಂದು ತೋರಿಸುವ ಬಾಲಿಶ ಪ್ರಯತ್ನಗಳೆಲ್ಲ ಚರಿತ್ರೆಯಲ್ಲಿ ನಗೆಪಾಟಲಿಗೀಡಾಗಿವೆ. ಸಿನಿಮಾಗಳಲ್ಲಿ ಪಿಟೀಲು, ಸಿತಾರು ಹಿಡಿದು ನಟರು ನಟಿಸುವುದನ್ನು ಕಂಡಾಗ, ಈ ವಾದ್ಯಗಳನ್ನು ನುಡಿಸಲು ಹತ್ತಾರು ವರ್ಷ ಶ್ರಮಪಟ್ಟಿರುವ ಅಸಲಿ ಸಂಗೀತಗಾರರು ನಗಬಹುದಲ್ಲವೆ? ಹಾಗೆಯೇ ಜೀವನೋಪಾಯಕ್ಕಾಗಿ ಪ್ರಾಮಾಣಿಕವಾಗಿ ತಕಲಿ ಹಿಡಿದವರು ನಕಲಿಗಳ ಚಿತ್ರಗಳನ್ನು ಕಂಡು ನಗುತ್ತಾರಷ್ಟೆ! ಇಂಥ ನಕಲಿಗಳ ಬದಿಗೇ ನಿಜವಾದ ತಕಲಿಯೂ ಎದೆಗುಂದದೇ ತಿರುಗುತ್ತಲೇ ಇರಬೇಕಾಗುತ್ತದೆ.ಕೊನೆ ಟಿಪ್ಪಣಿ: ತಕಲಿಗೆ ಕವಿಸ್ಪಂದನ ಈ ಸಲದ ಅಂಕಣದಲ್ಲಿ ಬಳಸಿರುವ ಶೀರ್ಷಿಕೆ ಕವಿ ಲಕ್ಷ್ಮೀಪತಿ ಕೋಲಾರ ಅವರ ‘ತಿರುಗು ತಕಲಿ ತಿರುಗು’ ಪದ್ಯದ ಪಲ್ಲವಿಯಿಂದ ಆರಿಸಿದ್ದು. ಈ ಪದ್ಯದ ಕೊನೆಯ ಪಂಕ್ತಿ:ತಿರುಗು ನೀನೆ ತಿಗರಿ ನೀನೆ

ತಿರೆ ತುಳಿಯುವ ತಿಮಿರನಿಳಿಸೋ

ತಲೆ ತಿರುಗುವ ತತ್ವಾಂಧಕೆ

ಗುನ್ನ ಹೊಡೆವ ಬುಗುರಿ ನೀನೆ.ಕೆಲವು ವರ್ಷಗಳ ಕೆಳಗೆ ಪ್ರಕಟವಾದ ‘ನೀಲಿ ತತ್ತಿ’ ಸಂಕಲನದಲ್ಲಿರುವ ಈ ಪದ್ಯದ ಸಾಲುಗಳು ಇವತ್ತಿನ ‘ತಲೆತಿರುಗುವ ತತ್ವಾಂಧ’ದ ಸಂದರ್ಭಕ್ಕೆ ಕರಾರುವಾಕ್ಕಾಗಿ ಅನ್ವಯವಾಗುವಂತಿವೆ! ಈ ಪದ್ಯದ ಗುಂಗಿನಲ್ಲಿರುವಾಗಲೇ, ಕವಿಗೋಷ್ಠಿಯೊಂದರಲ್ಲಿ ಹೊಸ ತಲೆಮಾರಿನ ಕವಿ ಬೇಲೂರು ರಘುನಂದನ ಓದಿದ ಪದ್ಯವೊಂದರಲ್ಲಿ ‘ಚರಕ ಹಿಡಿದರೇನಂತೆ? ನೇಯಬಹುದೇ?’ ಎಂಬ ಸವಾಲು ಕೇಳಿ ವಿಸ್ಮಯವಾಯಿತು. ಎರಡು ತಲೆಮಾರಿನ ಕನ್ನಡ ಕವಿಗಳ ಈ ಸೂಕ್ಷ್ಮ ವಿಮರ್ಶೆ ರಾಜಕಾರಣಿಗಳನ್ನೂ ತಲುಪಲಿ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.