ಬುಧವಾರ, ಅಕ್ಟೋಬರ್ 23, 2019
27 °C

ತೀರ್ಥಕ್ಷೇತ್ರ

ಗುರುರಾಜ ಕರ್ಜಗಿ
Published:
Updated:

ಇಬ್ಬರು ತರುಣ ಸನ್ಯಾಸಿಗಳು ಯಾತ್ರೆಗೆ ಹೊರಟಿದ್ದರು. ಅವರು ಸನ್ಯಾಸ ತೆಗೆದುಕೊಂಡು ಒಂದೆರಡು ತಿಂಗಳುಗಳು ಕಳೆದಿದ್ದವು. ಅವರಿಗೆ ತಮ್ಮ ಸನ್ಯಾಸದ ಬಗ್ಗೆ ತುಂಬ ಹೆಮ್ಮೆ. ಒಮ್ಮಮ್ಮೆ ತ್ಯಾಗವೂ ಹೆಮ್ಮೆಗೆ ಕಾರಣವಾಗುವುದುಂಟು. ಅವರಿಗೂ ತಮ್ಮ ಓದಿನ ಬಗ್ಗೆ, ಸನ್ಯಾಸತ್ವದ ಬಗ್ಗೆ ಹೆಮ್ಮೆ ಇತ್ತು. ಇಬ್ಬರೂ ಊರಿಂದ ಊರಿಗೆ ತಿರುಗುತ್ತ ಬರುವಾಗ ಸಂಜೆಯಾಯಿತು.ಹತ್ತಿರದ ಊರಿನಲ್ಲಿ ರಾತ್ರಿಯನ್ನು ಕಳೆಯುವುದೆಂದು ತೀರ್ಮಾನಿಸಿ ಹಿರಿಯರೊಬ್ಬರನ್ನು ಕೇಳಿದರು,  ನಮಗೆ ಒಂದು ರಾತ್ರ್ರಿ ಇಲ್ಲಿ ಕಳೆಯಬೇಕಾಗಿದೆ. ನಾವು ಸನ್ಯಾಸಿಗಳಾದ್ದರಿಂದ ಎಚ್ಚರಿಕೆಯಿಂದ ಪವಿತ್ರರಾದವರ ಮನೆಯಲ್ಲೇ ಇರಬೇಕಾಗುತ್ತದೆ. ಹಾಗೆ ಅತ್ಯಂತ ಪರಿಶುದ್ಧರಾದವರ ಮನೆ ಈ ಊರಿನಲ್ಲಿದ್ದರೆ ತಿಳಿಸಿ.

 

ಅವರು ಹೇಳಿದರು,  `ಸ್ವಾಮೀ, ನಮ್ಮ ಊರಿನಲ್ಲಿ ಒಬ್ಬರು ಬಾಬಾ ಇದ್ದಾರೆ. ಅವರಿಗೆ ಸಾಧು ಸಜ್ಜನರನ್ನು ಕಂಡರೆ ಬಹಳ ಪ್ರೀತಿ. ಅವರನ್ನು ಆದರದಿಂದ ನೋಡಿಕೊಳ್ಳುತ್ತಾರೆ. ನಾವು ಅವರನ್ನು ತುಂಬ ಗೌರವಿಸುತ್ತೇವೆ. ತಾವು ಅವರೊಂದಿಗೆ ಇರಬಹುದು.~ಸನ್ಯಾಸಿಗಳು ಬಾಬಾನ ಮನೆಗೆ ಹೋದರು. ಆತ ಬಹಳ ಆದರದಿಂದ, ಗೌರವದಿಂದ ಅವರನ್ನು ಬರಮಾಡಿಕೊಂಡು ಸತ್ಕರಿಸಿ, ಊಟಕ್ಕೆ ಅನುಕೂಲ ಮಾಡಿಕೊಟ್ಟು ಮಲಗಲು ವ್ಯವಸ್ಥೆ ಮಾಡಿದ. ಅವನ ಮನೆಯಲ್ಲಿ ದೇವರ ಒಂದೆರಡು ಪಟಗಳನ್ನು ಬಿಟ್ಟರೆ ಪೂಜಾಮಂದಿರ, ಅಲಂಕಾರಗಳ ಯಾವ ಲಕ್ಷಣಗಳೂ ಕಾಣಲಿಲ್ಲ.

 

ಊಟ ಮಾಡಿ ಮಲಗುವ ಮುನ್ನ ಸನ್ಯಾಸಿಗಳು ಬಾಬಾನೊಂದಿಗೆ ಮಾತನಾಡುತ್ತ ಕೇಳಿದರು,  `ನೀವು ನಮ್ಮ ದೇಶದ ಯಾವ ಯಾವ ತೀರ್ಥಕ್ಷೇತ್ರಗಳಿಗೆ ಹೋಗಿ ಬಂದಿದ್ದೀರಿ?~ ಬಾಬಾ ನಕ್ಕು ಹೇಳಿದ,  `ನಾನೆಲ್ಲಿಗೆ ಹೋಗಲಿ ಸ್ವಾಮೀ? ನನ್ನಲ್ಲಿ ದೇಹಶಕ್ತಿಯೂ ಇಲ್ಲ, ಧನಶಕ್ತಿಯೂ ಇಲ್ಲ.

 

ನನ್ನ ಮನೆಯೇ ನನಗೆ ತೀರ್ಥಕ್ಷೇತ್ರ. ಇಲ್ಲಿಯೇ ಆನಂದದಿಂದ ಭಗವಂತನನ್ನು ಪ್ರಾರ್ಥಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ತಮ್ಮಂತಹ ಜ್ಞಾನಿಗಳು, ಸಂತರು ಬಂದಾಗ ಅವರನ್ನೇ ದೇವರೆಂದು ತಿಳಿದು ಸೇವೆ ಮಾಡುತ್ತೇನೆ. ನನಗೆ ಯಾವ ಮಂತ್ರವಾಗಲೀ, ಪೂಜಾವಿಧಾನವಾಗಲೀ ತಿಳಿದಿಲ್ಲ~ ಎಂದ.ಸನ್ಯಾಸಿಗಳಿಗೆ ಗಾಬರಿಯಾಯಿತು. ತಾವು ಇಂಥ ಧರ್ಮಹೀನನ ಮನೆಯಲ್ಲಿ ಉಳಿಯುವುದು ಮಾತ್ರವಲ್ಲ, ಅವನ ಅನ್ನವನ್ನೂ ತಿಂದಿದ್ದಾಯಿತು. ಈ ರಾತ್ರಿ ಹೊರಗೆ ಹೋಗುವುದಾದರೂ ಎಲ್ಲಿ? ಒಂದೂ ಯಾತ್ರೆ ಮಾಡದ ಈ ಪಾಪಿಯ ಅನ್ನವನ್ನೂ ತಿಂದದ್ದಕ್ಕೆ ಪ್ರಾಯಶ್ಚಿತವಾಗಿ ಇನ್ನೆರಡು ತೀರ್ಥಕ್ಷೇತ್ರಗಳಿಗೆ ಹೋಗುವುದೆಂದು ತೀರ್ಮಾನಿಸಿ ಮಲಗಿದರು. ಈ ಪ್ರಾಪಪ್ರಜ್ಞೆಯ ಚಿಂತೆಯಲ್ಲಿ ನಿದ್ರೆ ಬರುವುದಾದರೂ ಹೇಗೆ? ಹಾಗೆಯೇ ಹೊರಳಾಡುತ್ತಿರುವಾಗ ಮಧ್ಯರಾತ್ರಿಯಾಯಿತು.ಆಗ ಬಾಬಾನ ಮನೆಯ ಮುಂದೆ ಏನೋ ಸದ್ದಾದ ಹಾಗೆ ಕೇಳಿಸಿತು. ಇವರಿಬ್ಬರೂ ಹೋಗಿ ಕಿಟಕಿಯಿಂದ ನೋಡಿದಾಗ ವಿಚಿತ್ರ ದೃಶ್ಯ ಕಾಣಿಸಿತು. ಮನೆಯ ಮುಂದೆ ಸೆಗಣಿಯಿಂದ ಸಾರಿಸಿದ ಅಂಗಳದಲ್ಲಿ ಕಪ್ಪು ಬಣ್ಣದ ಆಕಳೊಂದು ಬಂದಿತು. ನಂತರ ನೆಲದ ಮೇಲೆ ಉರುಳಾಡಿ ಎದ್ದಿತು. ಆಗ ಅದರ ಕರೀ ಬಣ್ಣ ಹೋಗಿ ಪೂರ್ತಿ ಬೆಳ್ಳಗಾಗಿತ್ತು.

ಅದು ಹೋಗುವಷ್ಟರಲ್ಲಿ ಮತ್ತೊಂದು ಕಪ್ಪು ಆಕಳು ಬಂತು. ಅದೂ ಹೊರಳಾಡಿ ತನ್ನ ಬಣ್ಣ ಕಳೆದುಕೊಂಡು ಹೊರಟಿತು. ಹೀಗೆಯೇ ನಾಲ್ಕಾರು ಆಕಳು ಬಂದು ಹೋದವು. ಸನ್ಯಾಸಿಗಳಿಂದ ಈ ಆಶ್ಚರ್ಯವನ್ನು ತಡೆದುಕೊಳ್ಳುವುದಾಗಲಿಲ್ಲ.ಅವರು ಒಂದು ಆಕಳನ್ನು ಕೇಳಿದರು,  `ಗೋಮಾತೆ, ನೀನು ಯಾರು? ಎಲ್ಲಿಂದ ಬಂದೆ? ನಿನ್ನ ಕರಿಯ ಬಣ್ಣ ಹೀಗೆ ಬದಲಾಗುವುದರ ರಹಸ್ಯವೇನು?~ ಆಗ ಆಕಳು ಹೇಳಿತು,  `ನಾವು ತೀರ್ಥಗಳು. ಪಾಪಗಳನ್ನು ಹೊತ್ತುಕೊಂಡು ಜನ ನಮ್ಮಲ್ಲಿಗೆ ಬಂದು ಸ್ನಾನ ಮಾಡಿ ಆ ಪಾಪಗಳನ್ನು ನಮ್ಮಲ್ಲಿ ಸುರಿದು ಹೋಗುತ್ತಾರೆ.ನಮಗಿದ್ದ ಕರಿಯ ಬಣ್ಣ ಅವರ ಪಾಪಗಳ ಫಲ. ಅದನ್ನು ನಾವು ತೊಳೆದುಕೊಳ್ಳಲು ಮೋಹಗಳಿಂದ ಪಾರಾದ, ಯಾವ ಆಡಂಬರವೂ ಇಲ್ಲದೇ ಸದಾ ಪರಮಾತ್ಮನಲ್ಲಿ ವಿಶ್ರಾಂತಿ ಪಡೆದ, ದ್ವಂದ್ವಗಳಿಂದ ಮುಕ್ತರಾಗಿ ಪೂರ್ತಿ ಮಗುವಿನಂತೆಯೇ ಆದ ಈ ಬಾಬಾನಂಥವರ ಮನೆಯ ಮುಂದೆ ಹೊರಳಾಡುತ್ತೇವೆ.

 

ಆಗಲೇ ನಮ್ಮ ಪಾಪದ ಕರಿಯಲೇಪ ಹೋಗಿ ಮತ್ತೆ ಪರಿಶುದ್ಧರಾಗುತ್ತೇವೆ.~ ಹೀಗೆ ಹೇಳಿ ಆಕಳು ಮಾಯವಾಯಿತು. ಸನ್ಯಾಸಿಗಳ ಭ್ರಮೆ ಕರಗಿತು. ಮತ್ತೆ ತೀರ್ಥಯಾತ್ರೆಯ ಪ್ರಾಯಶ್ಚಿತ್ತಕ್ಕಿಂತ ಬಾಬಾನ ಸಹವಾಸ ಹೆಚ್ಚು ಪ್ರಯೋಜನಕಾರಿ ಎನ್ನಿಸಿ ಅಲ್ಲಿಯೇ ಉಳಿದರು.ಮನ ಶುದ್ಧಿಯಾಗಿದ್ದರೆ, ಮನೆಯೇ ದೇವಾಲಯ, ಅದೇ ತೀರ್ಥಕ್ಷೇತ್ರ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)