ಗುರುವಾರ , ಮೇ 13, 2021
24 °C

ತೃತೀಯ ರಂಗದ ಬೆನ್ನ ಏರಿ...

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ತೃತೀಯ ರಂಗದ ಬೆನ್ನ ಏರಿ...

ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಮುರಿದು ಬಿದ್ದಿರುವುದು ನಿರೀಕ್ಷಿತ ಬೆಳವಣಿಗೆ. ಇದು ಯಾವಾಗಲೋ ಆಗಬೇಕಾಗಿತ್ತು. ಸ್ವಲ್ಪ ತಡವಾಗಿದೆ ಅಷ್ಟೇ. ಬಿಜೆಪಿ ಕಾರ್ಯಕಾರಿಣಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರದ ಜವಾಬ್ದಾರಿ ಕೊಟ್ಟಾಗಲೇ ಜೆಡಿಯು ಹೆಚ್ಚುಕಮ್ಮಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವುದು ನಿಶ್ಚಯವಾಗಿತ್ತು. ಕೊನೆ ಗಳಿಗೆಯಲ್ಲಿ ಏನಾದರೂ `ಪವಾಡ'ಗಳು ನಡೆಯಬಹುದೇನೋ ಎನ್ನುವ ಸಣ್ಣ ಭರವಸೆಯಿಂದ ಎರಡೂ ಪಕ್ಷಗಳು ಒಂದು ವಾರ ಎಳೆದಾಡಿದವು.ನಿತೀಶ್ ಕುಮಾರ್ ಅವರಿಗೆ ಮೋದಿ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ಸ್ಥಳೀಯ ಕಾರಣದಿಂದ ಗುಜರಾತ್ ಮುಖ್ಯಮಂತ್ರಿ ಅವರನ್ನು ಮೊದಲಿಂದಲೂ ವಿರೋಧಿಸಿಕೊಂಡೇ ಬರುತ್ತಿದ್ದಾರೆ. ಅವರನ್ನು ಅಪ್ಪಿಕೊಂಡರೆ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಮರು ತಮ್ಮ ಕೈ ಬಿಡಬಹುದು ಎನ್ನುವ ಆತಂಕ ಅವರಿಗಿತ್ತು. `ಗೋಧ್ರಾ ಹಿಂಸಾಚಾರ'ಕ್ಕೆ ಪ್ರತೀಕಾರವಾಗಿ ನಡೆದ `ನರೋಡ ಪಾಟಿಯಾ' ನರಮೇಧದ ಕಲೆ ಕೈಗೆ ಅಂಟಿಕೊಂಡ ಮೇಲಂತೂ ಮೋದಿ ಜೆಡಿಯುಗೆ `ಮೈಲಿಗೆ' ಆಗಿಬಿಟ್ಟರು.ಗುಜರಾತಿನ ಮುಸ್ಲಿಮರು `ಹಿಂದೂ ಭಯೋತ್ಪಾದನೆ'ಯನ್ನು ಮೌನವಾಗಿ ಸಹಿಸಿಕೊಂಡಿದ್ದಾರೆ. ಈ ಸಮುದಾಯ ಮೋದಿ ವಿರುದ್ಧ ದನಿ ಎತ್ತಲಾಗದೆ ಅಸಹಾಯಕವಾಗಿದೆ. ಬೇರೆ ಭಾಗಗಳ ಮುಸ್ಲಿಮರು ಮೋದಿ ಮೇಲೆ ಕಿಡಿ ಕಾರುತ್ತಿದ್ದಾರೆ.ನಿತೀಶ್ ಮಾತ್ರವೇ ಮೋದಿಯವರ ವೈರಿಯಲ್ಲ. ಎನ್‌ಡಿಎ ಮತ್ತೊಂದು ಮಿತ್ರ ಪಕ್ಷ ಶಿವಸೇನೆ `ಗುಜರಾತ್ ಮುಖ್ಯಮಂತ್ರಿ ನಾಯಕತ್ವ ಬೇಡ' ಎಂದು ತಕರಾರು ತೆಗೆದಿದೆ.ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಪರವಾಗಿ ಕೈ ಎತ್ತಿದೆ. ಆದರೆ, ಮಿತ್ರ ಪಕ್ಷಗಳ ಮಾತನ್ನು ಬಿಜೆಪಿ ಕಿವಿ ಮೇಲೇ ಹಾಕಿಕೊಳ್ಳದೆ ಮೋದಿಗೆ ಜೈ ಎಂದಿದೆ. ಏಕೆಂದರೆ ಮೋದಿ ಪಕ್ಷದ `ನಂಬರ್ ಒನ್ ನಾಯಕ'. ಅವರನ್ನು ಬಿಟ್ಟರೆ ಬಿಜೆಪಿಗೆ ಬೇರೆ ನಾಯಕನಿಲ್ಲ. ಸೈದ್ಧಾಂತಿಕವಾಗಿ ಬೆಳೆದಿರುವ ರಾಷ್ಟ್ರೀಯ ಪಕ್ಷವೊಂದು ನಾಯಕನೊಬ್ಬನ ಹಿಂದೆ ಬಿದ್ದಿರುವುದು ನಿಜಕ್ಕೂ ವಿಪರ್ಯಾಸ!

ಮೋದಿ ಹೆಸರು ಪ್ರಕಟವಾದಾಗಿನಿಂದ ಬಿಜೆಪಿ ಒಳಗೆ ಮತ್ತು ಹೊರಗೆ ಬಿಕ್ಕಟ್ಟುಗಳು ಸೃಷ್ಟಿಯಾಗಿವೆ.

ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಬಿಜೆಪಿ ಸಂಸದೀಯ ಮಂಡಳಿ, ಚುನಾವಣೆ ಸಮಿತಿ ಹಾಗೂ ಕಾರ್ಯಕಾರಿಣಿಗೆ ರಾಜೀನಾಮೆ ಕೊಟ್ಟು ಮನೆಯೊಳಗೆ ಮುನಿಸಿಕೊಂಡು ಕುಳಿತಿದ್ದರು. ಎರಡು ದಿನ ಅವರ ಮನವೊಲಿಸಲು ಆರ್‌ಎಸ್‌ಎಸ್ ಮುಖಂಡರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಡ್ವಾಣಿ ಮನವೊಲಿಕೆ ಯತ್ನ ಫಲ ಕೊಡುತ್ತಿದ್ದಂತೆ ಬಿಹಾರದಲ್ಲಿ ಮೈತ್ರಿ ಕೊಚ್ಚಿಕೊಂಡು ಹೋಗಿದೆ. ನಿತೀಶ್ ಕುಮಾರ್ ಗುಜರಾತ್ ಮುಖ್ಯಮಂತ್ರಿಗೆ ಸರಿಸಮನಾಗಿ ನಿಲ್ಲುವ ನಾಯಕರೆಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ವಯಸ್ಸಿನಲ್ಲಿ ಮೋದಿ ಅವರಿಗಿಂತ ಆರು ತಿಂಗಳು ಚಿಕ್ಕವರು. ಅಭಿವೃದ್ಧಿ ವಿಷಯದಲ್ಲೂ ಬಿಹಾರ ಹಿಂದೆ ಇಲ್ಲ. ಗುಜರಾತಿಗೆ ಹೋಲಿಸಿದರೆ ಬಿಹಾರ ಅತೀ ಹಿಂದುಳಿದ ರಾಜ್ಯ. ಬಡತನ, ಅನಕ್ಷರತೆ, ನಿರುದ್ಯೋಗ ಕಿತ್ತು ತಿನ್ನುತ್ತಿವೆ. ತಮ್ಮ ರಾಜ್ಯವನ್ನು ಹಳಿ ಮೇಲೆ ನಿಲ್ಲಿಸಲು ನಿತೀಶ್ ಶ್ರಮಿಸುತ್ತಿದ್ದಾರೆ. ಲಾಲೂ ಪ್ರಸಾದ್ ಸರ್ಕಾರದ ದೋಷಗಳನ್ನು ಸರಿಪಡಿಸುತ್ತಿದ್ದಾರೆ. ಈ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸುಧಾರಿಸುವುದೇ ದೊಡ್ಡ ಸವಾಲು. ಆ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಆರ್ಥಿಕ ಪ್ರಗತಿ ದರವನ್ನು ಹೆಚ್ಚಿಸಲು ಗಮನ ನೀಡಿದ್ದಾರೆ.ನಿತೀಶ್ ಕುಮಾರ್ ತಮ್ಮ ಸಂಪುಟದಿಂದ ಬಿಜೆಪಿ ಸಚಿವರನ್ನು ಕಿತ್ತೊಗೆದಿರುವುದರಿಂದ ರಾಜ್ಯ ಸರ್ಕಾರದ ಉಳಿವಿಗೆ ತೊಂದರೆ ಇಲ್ಲ. ಇದರಿಂದ ಕಾಂಗ್ರೆಸ್- ಬಿಜೆಪಿ ಹೊರತುಪಡಿಸಿದ `ತೃತೀಯ ರಂಗ' ಸ್ಥಾಪನೆಗೆ ಪ್ರಯತ್ನಗಳು ಚುರುಕುಗೊಳ್ಳಲಿವೆ. ಕೆಲ ವರ್ಷಗಳಿಂದ ಆಗಾಗ್ಗೆ ಈ ರೀತಿಯ ಪ್ರಯತ್ನಗಳು ನಡೆದಿವೆ. ಕೆಲವೊಮ್ಮೆ ಪ್ರಮುಖ ಪಕ್ಷಗಳ ಹೊರ ಬೆಂಬಲದಿಂದ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಮಿಂಚಿವೆ.ಹದಿನೇಳು ವರ್ಷದ ಹಿಂದಿನ ಮಾತು. ಕಾಂಗ್ರೆಸ್‌ಗೆ ನಿಷ್ಠನಾಗಿದ್ದ ಮತದಾರ ಮನಸು ಬದಲಿಸಿದ್ದ. ಬಿಜೆಪಿ ಸೋಲಿನ ಕಹಿ ಉಂಡಿತ್ತು. `ದೆಹಲಿ ಗದ್ದುಗೆ'ಗೆ ಲಗ್ಗೆ ಹಾಕಿದ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್ ಹೊರಗಿನಿಂದ ಬೆಂಬಲ ನೀಡಿತ್ತು. ಎದುರಾಳಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಇದು ಅನಿವಾರ್ಯವೂ ಆಗಿತ್ತು. ಆಗಲೇ ಎಚ್.ಡಿ.ದೇವೇಗೌಡರಿಗೆ ಅದೃಷ್ಟ ಒಲಿದಿದ್ದು. ಮುಖ್ಯಮಂತ್ರಿ ಕುರ್ಚಿಗಾಗಿ ಗುದ್ದಾಡಿದ್ದ `ಮಣ್ಣಿನ ಮಗ'ನಿಗೆ 14 ತಿಂಗಳಲ್ಲಿ ಪ್ರಧಾನಿ ಪಟ್ಟ ಹುಡುಕಿಕೊಂಡು ಬಂತು. ಪಶ್ಚಿಮ ಬಂಗಾಳದ ಹಿರಿಯ ನಾಯಕ ಜ್ಯೋತಿ ಬಸು ದೇಶದ ಜವಾಬ್ದಾರಿ ಬೇಡವೆಂದರು. ರಾಮಕೃಷ್ಣ ಹೆಗಡೆ ಅವರಿಗೆ ಬಯಸಿದರೂ ಭಾಗ್ಯ ಸಿಗಲಿಲ್ಲ. ಮುಲಾಯಂ, ಲಾಲೂ, ಚಂದ್ರಬಾಬು ನಾಯ್ಡು ಮೊದಲಾದವರು `ಗೌಡರಿಗೆ ಜೈ' ಎಂದರು.ದೇವೇಗೌಡರು ಹತ್ತು ತಿಂಗಳಲ್ಲಿ ಮಾಜಿಯಾದರು. ಸಣ್ಣಪುಟ್ಟ ಭಿನ್ನಮತದಿಂದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ ಬೆಂಬಲ ವಾಪಸ್ ಪಡೆದು ಸರ್ಕಾರ ಉರುಳಿಸಿದರು. ಮುಂದಿನ ಆರು ತಿಂಗಳು ಐ. ಕೆ. ಗುಜ್ರಾಲ್ ಪಾಳಿ. ಕೇಸರಿ ಜತೆಗಿನ ಸಂಬಂಧ ಸರಿಪಡಿಸಿಕೊಂಡಿದ್ದರೆ ದೇವೇಗೌಡರು ಇನ್ನೂ ಕೆಲಕಾಲ ಅಧಿಕಾರದಲ್ಲಿ ಇರಬಹುದಿತ್ತು. ರಾಜಕಾರಣದಲ್ಲಿ ಅಂದುಕೊಂಡಂತೆ ಎಲ್ಲವೂ ನಡೆಯಬೇಕಲ್ಲ. `ಪವರ್ ಗೇಮ್'ನಲ್ಲಿ ತಾಕತ್ತಿದ್ದವರು ಉಳಿದುಕೊಳ್ಳುತ್ತಾರೆ. 11ತಿಂಗಳು ಅಧಿಕಾರ ನಡೆಸಿದ ವಿ.ಪಿ.ಸಿಂಗ್, ಆರು ತಿಂಗಳು ಪ್ರಧಾನಿಯಾದ ಚಂದ್ರಶೇಖರ್ ಸರ್ಕಾರವೂ ಇದಕ್ಕೆ ಹೊರತಲ್ಲ.ಎರಡು ದಶಕದಿಂದ ದೊಡ್ಡ ಪಕ್ಷಗಳಿಗೂ `ದೆಹಲಿ' ಕಲ್ಲುಮುಳ್ಳಿನ ದಾರಿ. ಬೇರೆ ಪಕ್ಷಗಳ ಬೆಂಬಲವಿಲ್ಲದೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಕಾಲ ಮುಗಿದಿದೆ. `ಸಮ್ಮಿಶ್ರ ಸರ್ಕಾರದ ಪರ್ವ' ಶುರುವಾಗಿದೆ. ವಾಜಪೇಯಿ ಅವರ ಎನ್‌ಡಿಎ ಸರ್ಕಾರ ಐದು ವರ್ಷ ಪೂರ್ಣಗೊಳಿಸಿದ್ದು; ಇನ್ನೇನು 10 ವರ್ಷಕ್ಕೆ ಕಾಲಿಡುವ ಮನಮೋಹನ್ ಸಿಂಗ್ ಸರ್ಕಾರಕ್ಕೂ ಈ ಪಕ್ಷಗಳೇ ಊರುಗೋಲು. 2014ರ ಲೋಕಸಭೆ ಚುನಾವಣೆಯಲ್ಲೂ ಸ್ವಂತ ಸಾಮರ್ಥ್ಯದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸ ಯಾವ ಪಕ್ಷಕ್ಕೂ ಇಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿ ಬಲ ಅನೇಕ ರಾಜ್ಯಗಳಲ್ಲಿ  ಚುನಾವಣೆಯಿಂದ ಚುನಾವಣೆಗೆ ಕುಗ್ಗಿದೆ. ಕೈತಪ್ಪಿರುವ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಈ ಎರಡೂ ಪಕ್ಷಗಳು ಪರದಾಡುತ್ತಿವೆ. ಹಗರಣಗಳಿಂದ ಕಾಂಗ್ರೆಸ್ ಸೊರಗಿದೆ. ಭ್ರಷ್ಟಾಚಾರ- ಒಳಜಗಳದಿಂದ ಬಿಜೆಪಿ ಕಂಗೆಟ್ಟಿದೆ. ಇದೇ ಕಾರಣದಿಂದ ಕರ್ನಾಟಕದ ಬಿಜೆಪಿ ಸರ್ಕಾರ ಹೋಗಿದ್ದು.ಕಳೆದ ಮೂರು ಲೋಕಸಭೆ ಚುನಾವಣೆ ಗಮನಿಸಿದರೆ ಬಿಜೆಪಿ ಶಕ್ತಿ ಕುಸಿದಿದೆ. ಕಾಂಗ್ರೆಸ್ ಅಲ್ಪಸ್ವಲ್ಪ ಚೇತರಿಸಿಕೊಂಡಿದೆ. 99ರ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿದ್ದು 182 ಸ್ಥಾನಗಳು. 2004ರಲ್ಲಿ 44 ಸೀಟುಗಳು ಕಡಿಮೆಯಾದವು. ಐದು ವರ್ಷ `ಯಶಸ್ವಿ ಆಡಳಿತ' ಕೊಟ್ಟ ವಾಜಪೇಯಿ ಜನಪ್ರಿಯತೆ ಎಷ್ಟಿತ್ತು ಎನ್ನುವುದನ್ನು ಇದು ತೋರಿಸಿತು. ಹೋದ ಸಲದ ಚುನಾವಣೆಯಲ್ಲಿ ಬಿಜೆಪಿ ಸಂಖ್ಯೆ 116ಕ್ಕೆ ಕುಸಿಯಿತು. ಕಾಂಗ್ರೆಸ್ ಇದೇ ಅವಧಿಯಲ್ಲಿ ತನ್ನ ಸಾಮರ್ಥ್ಯವನ್ನು 113 ರಿಂದ 205 ಸ್ಥಾನಗಳಿಗೆ ಹೆಚ್ಚಿಸಿಕೊಂಡಿದೆ.ಹೋದ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಪಾಲು 180, ಸಿಪಿಐ ಮತ್ತು ಸಿಪಿಎಂ ಸದಸ್ಯರ ಸಂಖ್ಯೆ 20. ಲೋಕಸಭೆ ಒಟ್ಟು ಸದಸ್ಯರ ಸಂಖ್ಯೆ 545. ಇವೆಲ್ಲವನ್ನು ಗಮನಿಸಿದರೆ ಪ್ರಾದೇಶಿಕ ಪಕ್ಷಗಳ ಮಹತ್ವ ಅರಿವಾಗುತ್ತದೆ. ಇತ್ತೀಚೆಗೆ ಯುಪಿಎಯಿಂದ ಟಿಎಂಸಿ ಮತ್ತು ಡಿಎಂಕೆ ಹೊರ ಹೋದಾಗ ಮನಮೋಹನ್ ಸಿಂಗ್ ಸರ್ಕಾರ ಎಂಥ ಸಮಸ್ಯೆಗೆ ಸಿಕ್ಕಿಕೊಂಡಿತು. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲ ಮಾಡಿತು. `ಸಂಕಟ ಬಂದಾಗ ವೆಂಕಟರಮಣ' ಎನ್ನುವ ಗಾದೆ ಮಾತಿನಂತೆ ನಿತೀಶ್ ಕುಮಾರ್ ಅವರಿಗೂ ಗಾಳ ಹಾಕಿತು.

ಜೆಡಿಯು ನಾಯಕ ಬಿಜೆಪಿ- ಎನ್‌ಡಿಎಯಿಂದ ಸಮಾನ ದೂರವಿರಲು ಚಿಂತನೆ ಮಾಡಿದಂತಿದೆ. ಇವೆರಡೂ ಪಕ್ಷಗಳಿಗೆ ಹೊರತಾದ `ತೃತೀಯ ರಾಜಕೀಯ ರಂಗ' ಸ್ಥಾಪನೆಯತ್ತ ಅವರ ಚಿತ್ತವಿದ್ದಂತಿದೆ.ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತೂ ಕಾಂಗ್ರೆಸ್, ಬಿಜೆಪಿ ಮತ್ತು ಎಡ ಪಕ್ಷಗಳಿಲ್ಲದ ಹೊಸದೊಂದು ರಾಜಕೀಯ ರಂಗದತ್ತ ಒಲವು ತೋರಿದ್ದಾರೆ. ನಿತೀಶ್ ಮತ್ತು ಒಡಿಶಾ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಜತೆ ಮಾತುಕತೆ ನಡೆಸಿದ್ದಾರೆ. ರಾಷ್ಟ್ರೀಯ ರಂಗ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತೆಲುಗುದೇಶಂ ಮುಖಂಡ ಚಂದ್ರಬಾಬು, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಒಳಗೊಂಡಂತೆ ಅನೇಕರು ತೃತೀಯ ರಂಗದತ್ತ ಆಸಕ್ತಿ ತೋರಿದ್ದಾರೆ. ರಾಜ್ಯ ಮಟ್ಟದಲ್ಲಿ ಪರಸ್ಪರರನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಪರ್ಯಾಯವಾಗಿ ಹೇಗೆ ಒಗ್ಗೂಡುತ್ತವೆಂದು ಈಗಲೇ ಊಹಿಸುವುದು ಕಷ್ಟ.ಯುಪಿಎ ಮೈತ್ರಿಕೂಟದಿಂದ ಟಿಎಂಸಿ, ಡಿಎಂಕೆ ಹೊರಬಂದಂತೆ ಜೆಡಿಯು ಮತ್ತು ಬಿಜೆಡಿ ಕೂಡಾ ಎನ್‌ಡಿಎ ತೊರೆದಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ತೃತೀಯ ರಂಗ ಸ್ಪಷ್ಟವಾದ ರೂಪ ಪಡೆಯಬಹುದು. ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳು ವಿಭಿನ್ನ ದಿಕ್ಕುಗಳಲ್ಲಿ ಸಾಗಿದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್ ಪಕ್ಷದಿಂದ ಹೊರ ಬಂದರೂ ಅದರ ಭಾಗಿವಾಗೇ ಮುಂದುವರಿದಿರುವ ಶರದ್ ಪವಾರ್ ಕಡೆಗೂ ತೃತೀಯ ರಂಗ ಹುಟ್ಟುಹಾಕಲು ಹೊರಟಿರುವ ನಾಯಕರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಎನ್‌ಡಿಎ ಕಡೆ ಮುಖ ಮಾಡುವರೇ ಅಥವಾ ತೃತೀಯ ರಂಗದ ಜತೆ ಕೈಜೋಡಿಸುವರೇ ಎನ್ನುವ ಕುತೂಹಲವಿದೆ. ಇದುವರೆಗೆ ಬಿಜೆಪಿ ಜತೆ ಕಲ್ಲು ಬಂಡೆಯಂತೆ ನಿಂತಿರುವ ಪಂಜಾಬಿನ ಶಿರೋಮಣಿ ಅಕಾಲಿದಳ ಏನು ನಿಲುವು ತಳೆಯಲಿದೆ. ಉತ್ತರ ಪ್ರದೇಶದ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಯಾವ ದಿಕ್ಕಿಗೆ ತಿರುಗುವುದೋ? ಕರ್ನಾಟಕದಲ್ಲಿ ದೇವೇಗೌಡರ ಜೆಡಿಎಸ್ ತೃತೀಯ ರಂಗದತ್ತ ವಾಲುವುದು ಬಹುತೇಕ ಖಚಿತವಾಗಿದೆ. ಬಿಜೆಪಿಯಿಂದ ಸಿಡಿದು ಹೋಗಿ ಹೊಸ ಪಕ್ಷ ಕಟ್ಟಿರುವ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳುವರೇ ಎಂಬ ಪ್ರಶ್ನೆಗಳು ಕುತೂಹಲ ಹುಟ್ಟಿಸಿವೆ.ಅಡ್ವಾಣಿ ಅವರನ್ನು ಪ್ರಬಲವಾಗಿ ವಿರೋಧಿಸುವ ಬಿ.ಎಸ್.ಯಡಿಯೂರಪ್ಪ ಅವರನ್ನು ಮೋದಿ ಕರೆದೊಯ್ಯುವರೇ. `ಶತ್ರುವಿನ ಶತ್ರು ಮಿತ್ರ' ಎನ್ನುವ ಥಿಯರಿ ಕೆಲಸ ಮಾಡುವುದೇ? ದೇವೇಗೌಡರು ಅನೇಕ  ಸಲ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಳ್ಳಬಹುದೆಂದು ಭಾವಿಸಲಾಗಿರುವ ಜೆಡಿಎಸ್ ಹಾಗೂ ಕೆಜೆಪಿ ರಾಷ್ಟ್ರ ಮಟ್ಟದಲ್ಲೂ ಒಂದೇ ದೋಣಿಯಲ್ಲಿ ಸಾಗಬಹುದೇ ಎಂಬ ಸಂಗತಿಗಳು ಇನ್ನು ಸ್ಪಷ್ಟವಾಗಬೇಕಿದೆ.ಪ್ರಾದೇಶಿಕ ಪಕ್ಷಗಳಲ್ಲಿ ಪ್ರಧಾನಿ ಆಗಬಲ್ಲ ಸಾಮರ್ಥ್ಯ ಇರುವವರು ಹಲವರಿದ್ದಾರೆ. ಹಿಂದೆ ಉತ್ತರ ಪ್ರದೇಶದಲ್ಲಿ ಗೆದ್ದವರು ದೇಶ ಆಳುತ್ತಾರೆಂಬ ನಂಬಿಕೆ ಇತ್ತು. ಸಂಸತ್ತಿನ ಐವರು ಸದಸ್ಯರಲ್ಲಿ ಒಬ್ಬರು ಈ ರಾಜ್ಯದವರು ಇರುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ದೇಶದ ಅತ್ಯಂತ ದೊಡ್ಡ ರಾಜ್ಯದಲ್ಲಿ ಪ್ರಮುಖ ಪಕ್ಷಗಳು ನೆಲ ಹಿಡಿದಿವೆ. ಎಸ್‌ಪಿ ಮತ್ತು ಬಿಎಸ್‌ಪಿ ಸರದಿ ಮೇಲೆ ಸಾಮರ್ಥ್ಯ ಪ್ರದರ್ಶನ ಮಾಡುತ್ತಿವೆ. ಇವೆಲ್ಲ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ. ಯಾರು ಸೋಲುತ್ತಾರೆಂದು ಹೇಳುವುದು ಸುಲಭವಿಲ್ಲ.ದೇವೇಗೌಡರು ಹೇಳುವಂತೆ ತೃತೀಯ ರಂಗ ಅಸ್ತಿತ್ವಕ್ಕೆ ಬರುವುದನ್ನು ಯಾರೂ ತಡೆಯಲಾಗದು. ಅಕಸ್ಮಾತ್ ತೃತೀಯ ರಂಗ ಅಧಿಕಾರಕ್ಕೆ ಬಂದರೆ ಪ್ರಧಾನಿ ಯಾರಾಗುತ್ತಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಏಕೆಂದರೆ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆಯಂತೆ. ಗೌಡರು ಕರ್ನಾಟಕದಲ್ಲೇ ಇದ್ದುಕೊಂಡು ತಮ್ಮ ಪಕ್ಷದ ನಾಯಕರಿಗೆ ಸಲಹೆ ಕೊಡುತ್ತಾರಂತೆ.  

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.