`ತೆಂಡೂಲ್ಕರ್ ಟ್ರೋಫಿ' ಎಂದು ಏಕೆ ಹೆಸರಿಡಬಾರದು...?

7

`ತೆಂಡೂಲ್ಕರ್ ಟ್ರೋಫಿ' ಎಂದು ಏಕೆ ಹೆಸರಿಡಬಾರದು...?

ರಾಮಚಂದ್ರ ಗುಹಾ
Published:
Updated:
`ತೆಂಡೂಲ್ಕರ್ ಟ್ರೋಫಿ' ಎಂದು ಏಕೆ ಹೆಸರಿಡಬಾರದು...?

ಮುಂಬೈ ದಾಳಿ ಪ್ರಕರಣದ ಬಳಿಕ ನಡೆದ ಭಾರತ-ಪಾಕಿಸ್ತಾನ ನಡುವಿನ ಮೊದಲ ಕ್ರಿಕೆಟ್ ಸರಣಿಗೆ ಲಭಿಸಿದ ಪ್ರತಿಕ್ರಿಯೆ ಅದ್ಭುತ. ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಇದರಿಂದ ಪ್ರೇರಿತರಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಾಕಾ ಅಶ್ರಫ್, ಉಭಯ ದೇಶಗಳ ನಡುವೆ ನಿರಂತರವಾಗಿ ಕ್ರಿಕೆಟ್ ಸರಣಿ ನಡೆಯುತ್ತಿರಬೇಕು ಹಾಗೂ ಆ ಸರಣಿಗೆ `ಜಿನ್ನಾ-ಗಾಂಧಿ' ಟ್ರೋಫಿ  ಎಂದು ಹೆಸರಿಡಬೇಕು ಎಂಬ ಸಲಹೆ ನೀಡಿದರು. ಆದರೆ ಇದೇ ರೀತಿ ಸಲಹೆಯೊಂದನ್ನು ದಶಕಗಳ ಹಿಂದೆಯೇ `ಡಾನ್' ದಿನಪತ್ರಿಕೆಯಲ್ಲಿ ಓದಿದ್ದು ನನ್ನ ನೆನಪಿಗೆ ಬಂತು. ಅದನ್ನು ನಾನು ನೋಟ್ ಮಾಡಿಟ್ಟುಕೊಂಡಿದ್ದೆ ಕೂಡ. ಅದನ್ನು ನಾನಿಲ್ಲಿ ನೆನಪಿಸಲು ಇಷ್ಟಪಡುತ್ತೇನೆ. 1955ರಲ್ಲಿ ವಿನೂ ಮಂಕಡ್ ಸಾರಥ್ಯದ ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಪಾಕ್ ಪ್ರವಾಸ ಕೈಗೊಂಡಿತ್ತು. ದೇಶ ವಿಭಜನೆಯಾಗಿ ಏಳು ವರ್ಷಗಳು ಕಳೆದಿದ್ದವು. ಅಷ್ಟರಲ್ಲಾಗಲೇ ಉಭಯ ದೇಶಗಳ ನಡುವಿನ ದ್ವೇಷದ ಗಾಯ ಮಾಯುತ್ತಾ ಬಂದಿತ್ತು. `ಭಾರತ ತಂಡಕ್ಕೆ ಲಭಿಸಿದ ಆತ್ಮೀಯ ಸ್ವಾಗತ ಉಭಯ ದೇಶಗಳ ನಡುವಿನ ಭಾವನೆಗಳಲ್ಲಿನ ಬದಲಾವಣೆಯ ಸೂಚನೆಯಾಗಿದೆ. ಇದು ಮುಂದೆ ಪರಸ್ಪರ ಸಹಾಯವಾಗಲಿದೆ' ಎಂದು ಕರಾಚಿಯ ಹಿಂದೂ ವ್ಯಕ್ತಿಯೊಬ್ಬ ಪತ್ರಿಕೆಯಲ್ಲಿ ಬರೆದಿದ್ದ. ಅದಕ್ಕೆ ಪೂರಕವಾಗುವಂತೆ ಸುಮಾರು 10 ಸಾವಿರ ಭಾರತೀಯ ಅಭಿಮಾನಿಗಳು ಲಾಹೋರ್ ಟೆಸ್ಟ್ ಪಂದ್ಯ ವೀಕ್ಷಿಸಲು ವಾಘಾ ಗಡಿ ದಾಟಿ ಹೋಗಿದ್ದರು. 1947ರಲ್ಲಿ ಅನಿವಾರ್ಯವಾಗಿ ಪಶ್ಚಿಮ ಪಂಜಾಬ್ ತೊರೆದು ಓಡಿಬಂದಿದ್ದ ಅನೇಕ ಸಿಖ್ ಹಾಗೂ ಹಿಂದೂಗಳು ಕೂಡ ಕ್ರಿಕೆಟ್ ವೀಕ್ಷಣೆಗೆ ತೆರಳಿದ್ದರು.ಆದರೆ ಕ್ರಿಕೆಟ್ ಪಂದ್ಯಗಳು ನೀರಸವಾಗಿದ್ದವು. ಏಕೆಂದರೆ ಐದೂ ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದ್ದವು. ಆದರೆ, ಉಭಯ ದೇಶಗಳ ಸಾರ್ವಜನಿಕರ ಭಾವನೆಗಳಲ್ಲಿ ವ್ಯಕ್ತವಾದ ಆತ್ಮೀಯತೆ ಎಷ್ಟಿತ್ತೆಂದರೆ ಭಾರತ-ಪಾಕ್ ನಿರಂತರವಾಗಿ ಕ್ರಿಕೆಟ್ ಆಡಲಿಕ್ಕೆ ಒತ್ತಾಯಿಸಬೇಕೆಂಬ ಭಾವನೆಗೆ ಉತ್ತೇಜನ ನೀಡಿದವು. ಉಭಯ ದೇಶಗಳ ನಡುವೆ `ಆ್ಯಷಸ್' ರೀತಿಯ ಕ್ರಿಕೆಟ್ ಸರಣಿ ನಡೆಯಬೇಕು ಎಂದು ಭಾರತದ ವೀಕ್ಷಕ ವಿವರಣೆಗಾರ `ವಿಜ್ಜಿ' ಸಲಹೆ ನೀಡಿದ್ದರು. ಒಬ್ಬ ಸಾಮಾನ್ಯ ಕ್ರಿಕೆಟ್ ಪ್ರೇಮಿ ಶೇಖ್ ಖಾನ್ ಬಹದ್ದೂರ್ ಎಂಬಾತ ವಿಶೇಷ ಸಲಹೆಯೊಂದನ್ನು ನೀಡಿದ್ದ. ಉಭಯ ದೇಶಗಳ ಸರಣಿಗೆ `ಗಾಂಧಿ-ಜಿನ್ನಾ' ಟ್ರೋಫಿ ಎಂದು ಹೆಸರಿಡಬೇಕು ಎಂದು `ಡಾನ್' ಪತ್ರಿಕೆಗೆ ಬರೆದ ಪತ್ರದಲ್ಲಿ ತಿಳಿಸಿದ್ದ. ಆ ಟ್ರೋಫಿಯಲ್ಲಿ ಉಭಯ ಮುತ್ಸದ್ದಿಗಳು ಜೊತೆಗಿರುವ ಫೋಟೊ ಇರಬೇಕು ಎಂದಿದ್ದ.ಶೇಖ್ ಖಾನ್ ಬಹದ್ದೂರ್ ಬರೆದ ಆ ಪತ್ರ ಹಾಗೂ ಅದರ ಹಿಂದಿನ ಉದ್ದೇಶವನ್ನು ನನ್ನ ಪುಸ್ತಕ `ಎ ಕಾರ್ನರ್ ಆಫ್ ಎ ಫಾರಿನ್ ಫೀಲ್ಡ್'ನಲ್ಲಿ ಪ್ರಸ್ತಾಪಿಸಿದ್ದೇನೆ. ಆದರೆ ನನ್ನ ಅನುಭವದ ಪ್ರಕಾರ ಕೆಲವೇ ಕೆಲವು ಕ್ರಿಕೆಟಿಗರು ಪುಸ್ತಕ ಓದುತ್ತಾರೆ. ಅದರಲ್ಲೂ ಕ್ರಿಕೆಟ್ ಆಡಳಿತಗಾರರು  ಓದುವುದು ಇನ್ನೂ ಕಡಿಮೆ. ಹಾಗಾಗಿ ಇತ್ತೀಚಿಗಿನ ತಮ್ಮ ಸಲಹೆಯು 67 ವರ್ಷಗಳ ಹಿಂದಿನದ್ದು ಎಂಬುದು ಜಾಕಾ ಅಶ್ರಫ್ ಅವರಿಗೆ ಗೊತ್ತೇ ಇಲ್ಲ ಎನಿಸುತ್ತದೆ. ಆದರೂ ಇಲ್ಲಿ ಒಂದು ವ್ಯತ್ಯಾಸವಿದೆ. ಏಕೆಂದರೆ ಮೊದಲು ಸಲಹೆ ನೀಡಿದ್ದ ಆ ಸಾಮಾನ್ಯ ಪಾಕಿಸ್ತಾನಿ  ವ್ಯಕ್ತಿ `ಗಾಂಧಿ-ಜಿನ್ನಾ' ಟ್ರೋಫಿ ಎಂದಿದ್ದ (`ಜೆ'ಗಿಂತ `ಜಿ' ಮೊದಲು ಬರುತ್ತದೆ ಎಂಬ ಕಾರಣಕ್ಕಾಗಿ ಇರಬಹುದು), ಆದರೆ  ಪಿಸಿಬಿ ಅಧ್ಯಕ್ಷ ಜಾಕಾ ಅಶ್ರಫ್ `ಜಿನ್ನಾ-ಗಾಂಧಿ' ಟ್ರೋಫಿ  ಎಂದಿದ್ದಾರೆ ಅಷ್ಟೆ.ನಿರಂತರ ಭಾರತ - ಪಾಕ್ ಕ್ರಿಕೆಟ್ ಪಂದ್ಯಕ್ಕಾಗಿ ಇಟ್ಟಿದ್ದ ಪ್ರಸ್ತಾವ 50ರ ದಶಕದ ಮಧ್ಯಭಾಗದಲ್ಲಿ ನೆಲಕಚ್ಚಿತು. 1960-61ರಲ್ಲಿ ಪಾಕ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಆ ಬಳಿಕ ನಡೆದ ಎರಡು ಯುದ್ಧಗಳ ಕಾರಣ ಸರಣಿ ಸ್ಥಗಿತಗೊಂಡಿತು. 1978ರಲ್ಲಿ ಕ್ರಿಕೆಟ್ ಸರಣಿ ಪುನರಾರಂಭವಾಯಿತು. ಆದರೆ ಅಲ್ಲಿಂದ ಕ್ರಿಕೆಟ್‌ನಲ್ಲಿ ರಾಜಕೀಯ ವೈರತ್ವದ ಪಾತ್ರವೇ ದೊಡ್ಡದಾಯಿತು. 1980, 1990ರ ದಶಕಗಳಲ್ಲಿ ಭಾರತ ತಂಡ ಪಾಕ್ ಎದುರು ಆಡಿದಾಗಲೆಲ್ಲಾ ಉಭಯ ದೇಶಗಳ ಅಭಿಮಾನಿಗಳು ಅತಿರೇಕದ ದೇಶಪ್ರೇಮ ತೋರಿಸಲು ಆರಂಭಿಸಿದರು.ಬೆಂಗಳೂರಿನಲ್ಲಿ ಜಾವೇದ್ ಮಿಯಾಂದಾದ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಪಂದ್ಯ ಆಡಿದಾಗ ನಾನು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಂತಹ ಆ ನೋವಿನ ನೆನಪು ಇನ್ನೂ ಹಸಿರಾಗಿದೆ. ಏಕೆಂದರೆ, ಆ ಸ್ಟ್ಯಾಂಡ್‌ನಲ್ಲಿ  ಹಾಗೆ ಚಪ್ಪಾಳೆ ತಟ್ಟಿದವನು ನಾನೊಬ್ಬನೇ. ಇತರರ ಭಾವನೆಗಳಿಗೆ ಧ್ವನಿ ನೀಡುವಂತೆ ಅಲ್ಲಿದ್ದ ಒಬ್ಬಾತ ಹೇಳಿದ್ದ ನುಡಿಗಳಿವು:   `ಧನ್ಯವಾದ ದೇವರೇ, ಈ ಸೂ.ಮಗನನ್ನು ನಾನು ಮತ್ತೆ ನೋಡಬೇಕಿಲ್ಲ' ಎಂದಿದ್ದ. (ಜಾವೇದ್ 1996ರಲ್ಲಿನ್ನೂ ದಾವೂದ್ ಇಬ್ರಾಹಿಂನ ಬಂಧು ಆಗಿರಲಿಲ್ಲ. ಕೇವಲ ಒಬ್ಬ ಶ್ರೇಷ್ಠ  ಕ್ರಿಕೆಟಿಗನಾಗಿದ್ದರು ಎಂಬುದನ್ನು ಹೇಳಲು ಇಷ್ಟಪಡುತ್ತೇನೆ.)ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಕ್ರಿಕೆಟ್ ಅಭಿಮಾನಿಗಳು ಹೆಚ್ಚು  ಪ್ರಬುದ್ಧರಾಗಿದ್ದಾರೆ. ರಾಜಕೀಯ ಅಥವಾ ಯುದ್ಧ ಎಂದು ಭಾವಿಸುವುದರ ಬದಲು ಕ್ರಿಕೆಟ್‌ನತ್ತ ಮಾತ್ರ ತಮ್ಮ ಚಿತ್ತ ಹರಿಸುತ್ತಿದ್ದಾರೆ. 2005ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಟೆಸ್ಟ್ ಪಂದ್ಯ ಗೆದ್ದಾಗ ಇಂಜಾಮಾಮ್ ಹಾಗೂ ಅವರ ಬಳಗವನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು. ಸಂಜಯ್ ಮಾಂಜ್ರೇಕರ್ ನನ್ನ ಪ್ರಕಾರ ಬುದ್ಧಿವಂತ ಭಾರತದ ಕ್ರಿಕೆಟಿಗ. ಜೊತೆಗೆ ಸ್ವತಂತ್ರವಾಗಿ ಚಿಂತಿಸಬಲ್ಲ ಮನಸ್ಥಿತಿಯ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ.ಅವರು ಹೇಳಿದಂತೆ ಭಾರತೀಯರು ತಮ್ಮ ರಾಷ್ಟ್ರದ ಅಳಿವು ಉಳಿವು ಹಾಗೂ ತಮ್ಮ ವೈಯಕ್ತಿಕ ಭವಿಷ್ಯದ ಬಗ್ಗೆ ಹೆಚ್ಚು ಕಾತರ ಹೊಂದಿಲ್ಲದೇ ಇರುವುದು ಇದಕ್ಕೆ ಕಾರಣ ಇರಬಹುದು. ಪಾಕಿಸ್ತಾನದ ಹಗೆತನದ ಪ್ರಭಾವದಿಂದಾಗಿ ದೇಶ ಹಲವು ಭಾಗಗಳಾಗಿ ಒಡೆದು ಹೋಗಲಿದೆ ಎಂಬಂಥ ವಿಷಯದ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಾರರು. ಏಕೆಂದರೆ `ಖಲಿಸ್ತಾನ' ಸತ್ತು ಹೋಗಿದೆ, `ಕಾಶ್ಮೀರ' ತಣ್ಣಗಾಗಿದೆ. ಈ ಮಧ್ಯೆ, ಒಂದೂವರೆ ದಶಕದ ಸ್ಥಿರ ಆರ್ಥಿಕ ಪ್ರಗತಿ ಭಾರತದ ಅದೆಷ್ಟೊ ಮಂದಿಯನ್ನು ಮಧ್ಯಮ ವರ್ಗದವರನ್ನಾಗಿ ಮಾಡಿದೆ.ಮಾಂಜ್ರೇಕರ್ ಅವರ ಈ ಹೇಳಿಕೆ ಮನವೊಲಿಸುವಂಥದ್ದು ಎಂಬುದು ನನಗೆ ಗೊತ್ತಿದೆ. ಈ ಬಾರಿಯ ಸರಣಿಯಲ್ಲಿ ಕೂಡ ಪಾಕಿಸ್ತಾನದ ಕೈಯಲ್ಲಿನ ಸೋಲನ್ನು ಭಾರತದ ಅಭಿಮಾನಿಗಳು ಹಾಗೂ ಪ್ರೇಕ್ಷಕರು ತುಂಬಾ ಶಾಂತಿಯುತವಾಗಿ  ತೆಗೆದುಕೊಂಡರು. ರಾಷ್ಟ್ರೀಯ ಪ್ರತಿಷ್ಠೆಯಿಂದ ಕ್ರೀಡೆಯನ್ನು ಬೇರ್ಪಡಿಸಬಲ್ಲ  ಈ ಹೊಸ ಶಕ್ತಿ ಸ್ವಾಗತಾರ್ಹವಾದುದು. ದೋನಿ ಬಳಗವನ್ನು ಹಿಮ್ಮೆಟ್ಟಿಸಿದ ಮಿಸ್ಬಾ ಬಳಗ ಗೆಲುವು ಸಾಧಿಸಿತು. ಆದರೆ ಈ ಅಂಶವನ್ನು ಪಾಕಿಸ್ತಾನದ ಸೇನೆಗೆ ಭಾರತದ ಸೇನಾಪಡೆ ಶರಣಾಯಿತು ಎಂದು ಹೋಲಿಸಲು ಸಾಧ್ಯವೇ ಇಲ್ಲ (ಅಥವಾ ಅದಲು ಬದಲು). ಏಕೆಂದರೆ ಕ್ರೀಡಾಂಗಣದೊಳಗೆ ಚೆಂಡು-ಬ್ಯಾಟ್‌ನ  ಹೋರಾಟವದು; ಗಿರಿಕಂದರಗಳಲ್ಲಿನ ಟ್ಯಾಂಕ್‌ಗಳು ಹಾಗೂ ಬಾಂಬ್‌ಗಳ  ಯುದ್ಧವಲ್ಲ.ಈ ರೀತಿಯ ಬದಲಾದ ವಾತಾವರಣದಲ್ಲಿ ಉಭಯ ದೇಶಗಳ ನಡುವೆ ಸರಣಿ ನಿರಂತರವಾಗಿ ನಡೆಯುತ್ತಿರಬೇಕು. ಭಾರತ ಹಾಗೂ ಪಾಕಿಸ್ತಾನ ನಡುವೆ ಮೊದಲ ಟೆಸ್ಟ್ ನಡೆದು 60 ವರ್ಷಗಳಾಗಿವೆ. ಇಂತಹ ಸಮಯದಲ್ಲಿ ಸೂಕ್ತ ನಿರ್ಧಾರಕ್ಕೆ ಬರಲು ಇದು ಉತ್ತಮ ಅವಕಾಶ. ಜೊತೆಗೆ ಉಭಯ ದೇಶಗಳ ಸರಣಿಗೆ ಸೂಕ್ತವಾದ ಒಂದು ಹೆಸರಿಡಬೇಕು. ಜಾಕಾ ಅಶ್ರಫ್ ಹಾಗೂ ಮರೆತು ಹೋಗಿರುವ ಶೇಖ್ ಖಾನ್ ಬಹದ್ದೂರ್ ಅವರ ಸಲಹೆ ಹೊರತುಪಡಿಸಿ ಉಭಯ ದೇಶಗಳ ಟ್ರೋಫಿಗೆ ಏನೆಂದು ಹೆಸರಿಡಬಹುದು? ಆದರೆ ಉಭಯ ದೇಶಗಳ ರಾಷ್ಟ್ರಪಿತರ ಹೆಸರಿಡಲು ಕೆಲವು ಆಕ್ಷೇಪಣೆ ಉದ್ಭವಿಸಬಹುದು. ಏಕೆಂದರೆ ಗಾಂಧಿ ಅವರಾಗಲಿ, ಜಿನ್ನಾ ಅವರಾಗಲಿ ಕ್ರೀಡೆ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿರಲಿಲ್ಲ. ಜೊತೆಗೆ ಯಾರ ಹೆಸರು ಮೊದಲಿರಬೇಕು ಎಂಬುದರ ಬಗ್ಗೆ ವಿವಾದ ಸೃಷ್ಟಿಯಾಗಬಹುದು.ರಾಜಕೀಯ ಸ್ಪರ್ಶ ಇಲ್ಲದಿದ್ದರೆ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಮತ್ತಷ್ಟು ಆಸಕ್ತಿ ಹಾಗೂ ಕುತೂಹಲದಾಯಕವಾಗಿರುತ್ತದೆ. ಹಾಗಾಗಿ ಜಿನ್ನಾ-ಗಾಂಧಿ (ಅಥವಾ ಗಾಂಧಿ-ಜಿನ್ನಾ) ಟ್ರೋಫಿ ಸಲಹೆಯನ್ನು ಬದಿಗಿಡೋಣ. ಹಾಗಾದರೆ ಟ್ರೋಫಿಗೆ ಯಾರ ಹೆಸರು ಇಡಬಹುದು? ಉಭಯ ದೇಶಗಳ ಪ್ರಮುಖ ಆಸಕ್ತಿಯನ್ನು ಪರಿಗಣಿಸಿದರೆ `ಲತಾ-ನೂರ್ ಜೆಹಾನ್' ಟ್ರೋಫಿ ಎಂದು ಹೆಸರಿಸಬಹುದು. ಅಥವಾ ಉಭಯ ದೇಶಗಳ ಖ್ಯಾತ ಬರಹಗಾರರು-ಚಿಂತಕರಿಗೆ ಗೌರವ ನೀಡಲು `ಇಕ್ಬಾಲ್-ಟ್ಯಾಗೋರ್' ಟ್ರೋಫಿ  ಎನ್ನಬಹುದು.ಪಿಸಿಬಿ ಅಧ್ಯಕ್ಷರು ನೀಡಿರುವ ಸಲಹೆಗಿಂತ ಈ ಹೆಸರುಗಳಲ್ಲಿ ಯಾವುದೇ ವಿವಾದ ಇಲ್ಲ. ಆದರೆ ಅವು ತೃಪ್ತಿದಾಯಕ ಆಗಿಲ್ಲದೇ ಇರಬಹುದು. ಹಾಗಾಗಿ ಕ್ರಿಕೆಟಿಗರ ಹೆಸರಿನಲ್ಲಿಯೇ ಸರಣಿ ಆಯೋಜಿಸಬಹುದು. ಬಾರ್ಡರ್-ಗಾವಸ್ಕರ್ ಟ್ರೋಫಿ (ಆಸ್ಟ್ರೇಲಿಯಾ-ಭಾರತ ಸರಣಿ) ಹಾಗೂ ವಾರ್ನ್-ಮುರಳೀಧರನ್ ಟ್ರೋಫಿ (ಆಸ್ಟ್ರೇಲಿಯಾ-ಶ್ರೀಲಂಕಾ ಸರಣಿ) ಅತ್ಯುತ್ತಮ ಉದಾಹರಣೆ ನೀಡಬಹುದು. ಈ ಕಾರಣ ಭಾರತ-ಪಾಕ್ ಸರಣಿಗೆ `ಇಮ್ರಾನ್-ಕಪಿಲ್ ದೇವ್' ಟ್ರೋಫಿ ಅಥವಾ `ಕುಂಬ್ಳೆ-ವಾಸೀಮ್' ಟ್ರೋಫಿ ಎಂದು ಹೆಸರಿಸಬಹುದು. ಮೊದಲನೆಯದ್ದು ಉಭಯ ದೇಶಗಳ ಖ್ಯಾತ ಆಲ್‌ರೌಂಡರ್‌ಗಳಿಗೆ ಸಲ್ಲಿಸುವ ಗೌರವ. ಎರಡನೆಯದ್ದು ಪಂದ್ಯ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಉಳ್ಳ ಆಟಗಾರರಿಗೆ ನೀಡುವ ಗೌರವ.ಅಥವಾ ಕೇವಲ  ಏಕವ್ಯಕ್ತಿ  ಕ್ರಿಕೆಟಿಗನ ಹೆಸರಲ್ಲಿ ಸರಣಿಯನ್ನು ಹೆಸರಿಸಲು ಯೋಚಿಸಬಹುದು. ಇದಕ್ಕೂ ಇಲ್ಲಿ ಉದಾಹರಣೆಗಳಿವೆ. ಆಸ್ಟ್ರೇಲಿಯಾ-ವೆಸ್ಟ್‌ಇಂಡೀಸ್ ನಡುವಿನ ಫ್ರಾಂಕ್ ವೊರೆಲ್ ಟ್ರೋಫಿ, ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ನಡುವಿನ ಬಾಸಿಲ್ ಡಿ ಆಲಿವೆರಿಯಾ ಟ್ರೋಫಿಯನ್ನು ನೆನಪಿಸಿಕೊಳ್ಳಬಹುದು. ಹಾಗಾಗಿ ಈ ವಿಧಾನವನ್ನು ಅನುಸರಿಸಿ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಭಾರತ-ಪಾಕ್ ಸರಣಿಗೆ ಇಡಬಹುದು. ಏಕೆಂದರೆ ಭಾರತ-ಪಾಕ್ ನಡುವಿನ ಕ್ರಿಕೆಟ್ ವ್ಯಾಖ್ಯಾನಿಸಲು ಈ ವ್ಯಕ್ತಿಗಿಂತ ಮತ್ತೊಬ್ಬರು ಸೂಕ್ತರಲ್ಲ. 1989ರಲ್ಲಿ ಸಚಿನ್ ಪಾಕ್‌ನಲ್ಲಿ ಮೊದಲ ಟೆಸ್ಟ್ ಆಡಿದ್ದರು. 2011ರಲ್ಲಿ ಪಾಕ್ ಎದುರು ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪಂದ್ಯ ಆಡಿದ್ದರು.ಕ್ರಿಕೆಟ್‌ನ ಎಲ್ಲಾ ಪ್ರಕಾರದಲ್ಲಿ ಹಾಗೂ ಎಲ್ಲಾ ಕ್ರೀಡಾಂಗಣಗಳಲ್ಲಿ 22 ವರ್ಷ ಆಡಿರುವ ಸಚಿನ್ ಎಷ್ಟು ರನ್ ಗಳಿಸಿದರು ಹಾಗೂ ಯಾವಾಗ ಔಟಾದರು ಎಂಬುದರ ಮೇಲೆ ಕೆಲವೊಮ್ಮೆ ಫಲಿತಾಂಶ ಏನಾಗಬಹುದು ಎಂಬುದು ಗೊತ್ತಾಗಿದ್ದಿದೆ. ತೆಂಡೂಲ್ಕರ್ ಅವರ ಅತ್ಯುತ್ತಮ ಇನಿಂಗ್ಸ್‌ಗಳು ಪಾಕ್ ಎದುರು ಬಂದಿವೆ. ಆದರೆ ಭಾರತ ಅದರಲ್ಲಿ ಕೆಲವೊಮ್ಮೆ ಸೋತಿದೆ. ಚೆನ್ನೈ ಟೆಸ್ಟ್‌ನಲ್ಲಿ ಗಳಿಸಿದ ಅಮೋಘ ಶತಕ ಅದಕ್ಕೊಂದು ಉದಾಹರಣೆ. ಅದರಲ್ಲಿ ಪಾಕ್ 13 ರನ್‌ಗಳಿಂದ ಗೆದ್ದಿತ್ತು.ತೆಂಡೂಲ್ಕರ್ ಹೆಸರಿನಲ್ಲಿ ಸರಣಿ ಆಯೋಜಿಸಲು ಪಾಕಿಸ್ತಾನದ ಹೆಚ್ಚಿನವರು ಸಮ್ಮತಿ ಸೂಚಿಸಬಹುದು. ಏಕೆಂದರೆ ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ಈ ಆಟಗಾರನ ಬಗ್ಗೆ ಹೆಮ್ಮೆ ಪಡುತ್ತಾರೆ. 1999ರ ವಿಶ್ವಕಪ್ ವೇಳೆ ರಾಜ್ ಸಿಂಗ್ ಡುಂಗರ್‌ಪುರ್ ಹೇಳಿದ ಮಾತೊಂದು ನನಗೆ ಇನ್ನೂ ನೆನಪಿದೆ. ಬಕ್ಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಕಿಸ್ತಾನದ ಯುವ ಆಟಗಾರರು ಸಚಿನ್ ಜೊತೆಗಿರಲು ಹಾತೊರೆದ ಕ್ಷಣವನ್ನು ಅವರು ವಿವರಿಸಿದ್ದರು.ಸಚಿನ್ ಅವರ ಬ್ಲೇಜರ್ ಮುಟ್ಟಲು ಹಾಗೂ ಅವರ ಜೊತೆ ಫೋಟೊ ತೆಗೆಸಿಕೊಳ್ಳಲು ಉತ್ಸುಕರಾಗಿದ್ದರಂತೆ. ಹಾಗಾಗಿ ತೆಂಡೂಲ್ಕರ್ ಕೇವಲ ಕ್ರಿಕೆಟಿಗ ಮಾತ್ರವಲ್ಲದೇ, ಯಾವುದೇ ವಿವಾದಕ್ಕೆ ಸಿಲುಕದ ವ್ಯಕ್ತಿ ಎಂಬುದು ಪಾಕ್ ಕ್ರಿಕೆಟ್ ಮಂಡಳಿಗೂ ಗೊತ್ತಿದೆ. ನನ್ನ ಪ್ರಕಾರ ಈ ಪ್ರಸ್ತಾವವನ್ನು ಅವರು ಹೆಮ್ಮೆಯಿಂದ ಸ್ವೀಕರಿಸಬಹುದು. ಈ ಪ್ರಕಟಣೆಯನ್ನು ಶೀಘ್ರದಲ್ಲಿಯೇ ಹೊರಡಿಸಲಿ. ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry