ಸೋಮವಾರ, ಡಿಸೆಂಬರ್ 9, 2019
25 °C

ತ್ರಿಪುರಾ: ಕಟ್ಟಕಡೆಯ 'ಕೆಂಪು ಕಿಲ್ಲೆ'ಯೇ?

ಡಿ. ಉಮಾಪತಿ
Published:
Updated:
ತ್ರಿಪುರಾ: ಕಟ್ಟಕಡೆಯ 'ಕೆಂಪು ಕಿಲ್ಲೆ'ಯೇ?

ಈಶಾನ್ಯ ಭಾರತದ ಪುಟ್ಟ ರಾಜ್ಯ ತ್ರಿಪುರಾ ವಿಧಾನಸಭೆ ಚುನಾವಣೆಯ ಜನಾದೇಶ ಭಾನುವಾರ ಮತಯಂತ್ರಗಳಲ್ಲಿ ಭದ್ರವಾಯಿತು. ಫಲಿತಾಂಶ ಮಾರ್ಚ್ ಮೂರರಂದು ಹೊರಬೀಳಲಿದೆ.

ಸಿಪಿಎಂ ನೇತೃತ್ವದ ಸರ್ಕಾರವು 25 ವರ್ಷಗಳಿಂದ ಇಲ್ಲಿ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ 1998ರಲ್ಲಿ ಅಧಿಕಾರ ವಹಿಸಿಕೊಂಡವರು ಆನಂತರ ಸೋತೇ ಇಲ್ಲ. ಪಶ್ಚಿಮ ಬಂಗಾಳವೂ ಹೀಗೆಯೇ. 1977ರಿಂದ 2011ರ ತನಕ ಎಡರಂಗಕ್ಕೆ ಸತತ ಸಡ್ಡು ಹೊಡೆದವರಿಲ್ಲ. ಈ ಕಾರಣಕ್ಕಾಗಿಯೇ ಈ ಎರಡೂ ರಾಜ್ಯಗಳು ಎಡಪಕ್ಷಗಳ ಗಢವೆಂದು ಕರೆಸಿಕೊಂಡವು. ಒಂದು ಅವಧಿಗೆ ಎಡರಂಗವನ್ನೂ ಮತ್ತೊಂದು ಅವಧಿಗೆ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನೂ ಆರಿಸುತ್ತ ಬಂದಿರುವ ಕೇರಳವನ್ನು ಕಮ್ಯುನಿಸ್ಟರ ಭದ್ರಕೋಟೆ ಎಂದು ಕರೆಯಲು ಬರುವುದಿಲ್ಲ. ಪಶ್ಚಿಮ ಬಂಗಾಳದ ಪರಾಭವದ ನಂತರ ಉಳಿದದ್ದು ತ್ರಿಪುರಾ. ಹೀಗಾಗಿ ರಾಜಕೀಯ ಪಂಡಿತರ ಒಂದು ವರ್ಗ, ತ್ರಿಪುರಾವನ್ನು ಕಟ್ಟಕಡೆಯ ಕೆಂಪು ಕಿಲ್ಲೆ ಎಂದು ಬಣ್ಣಿಸಿದೆ.

ಆದರೆ ಶಕ್ತಿರಾಜಕಾರಣದ ಹಲ್ಲಾಹಲ್ಲಿಯಲ್ಲಿ ಯಾವುದೂ ಕಾಯಂ ಆಗಿ ಮೊಟ್ಟಮೊದಲನೆಯದೋ ಅಥವಾ ಕಟ್ಟಕಡೆಯದೋ ಆಗಿ ಉಳಿಯುವುದು ಸಾಧ್ಯವಿಲ್ಲ. ಒಂದು ಕಾಲಕ್ಕೆ ಕಟ್ಟಕಡೆಯದಾಗಿದ್ದ ಬಿಜೆಪಿ ಇಂದು 19 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವುದನ್ನು ಅಲ್ಲಗಳೆಯಲು ಬಂದೀತೇ? ಸ್ವಾತಂತ್ರ್ಯದ ಮೊದಲ ದಶಕಗಳಲ್ಲಿ ದೈತ್ಯ ಬಹುಮತದಿಂದ ದೇಶವನ್ನೇ ವ್ಯಾಪಿಸಿ ಮೊಟ್ಟ ಮೊದಲನೆಯದಾಗಿದ್ದ ಕಾಂಗ್ರೆಸ್ ಪಕ್ಷ ಈಗ ಕಟ್ಟಕಡೆಯ ಸ್ಥಿತಿಗೆ ಇಳಿದು, ಮತ್ತೆ ಚಿಗಿತುಕೊಳ್ಳುವ ಸೂಚನೆಗಳನ್ನು ಪ್ರಕಟಿಸಿರುವುದೂ ವಾಸ್ತವ ಅಲ್ಲವೇ?

ಸಿಪಿಎಂ ಅಧಿಕಾರ ವಹಿಸಿಕೊಂಡಾಗ ತ್ರಿಪುರಾ ಹೇಗಿತ್ತು ಎಂಬ ದೂರದ ಕಲ್ಪನೆಯಾದರೂ ನಿಮಗೆ ಇದೆಯೇ? ಇಪ್ಪತ್ತು ವರ್ಷಗಳಿಂದ ಅಭಿವೃದ್ಧಿಯ ಓಟದಲ್ಲಿ ತ್ರಿಪುರಾ ಹಿಂದೆ ಬಿದ್ದಿದೆ ಎನ್ನುವವರಿಗೆ, ಆ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಕೇಳುವ ಪ್ರಶ್ನೆಯಿದು.

ಹೌದು, ಅವರ ಕೆಲಸ ಕಷ್ಟದ್ದು. ಏನೇ ಆದರೂ ಸರಿ, ಕೆಂಪು ಕಿಲ್ಲೆಯನ್ನು ಉರುಳಿಸಲೇಬೇಕು ಎಂದು ಹಟ ತೊಟ್ಟು ಕಣಕ್ಕೆ ಇಳಿದಿರುವ ಬಿಜೆಪಿಯ ಜೊತೆ ಜೊತೆಗೆ ತ್ರಿಪುರಾದ ಜನರ ನೆನಪನ್ನು, ಅದರಲ್ಲೂ ವಿಶೇಷವಾಗಿ ಕಮ್ಯುನಿಸ್ಟ್ ಸರ್ಕಾರಗಳ ವಿನಾ ಇನ್ನೇನನ್ನೂ ನೋಡಿಲ್ಲದ ಯುವಸಮೂಹದ ಪ್ರಜ್ಞೆಯನ್ನು ಕಾಲು ಶತಮಾನದಷ್ಟು ಹಿಂದಕ್ಕೆ ಒಯ್ಯಬೇಕಿದೆ ಅವರು.

ಎರಡು ದಶಕಗಳಲ್ಲಿ ಜನಾಂಗೀಯ ಕಲಹ, ಪ್ರತ್ಯೇಕತಾವಾದ ಹಾಗೂ ಉಗ್ರವಾದ, ಮಾರಣಹೋಮ, ರಕ್ತಪಾತದ ಉರುಳಿನಿಂದ ಹೊರಬಿದ್ದಿರುವುದು ಈ ರಾಜ್ಯದ ಅತಿ ಮಹತ್ವದ ಮುನ್ನಡೆ. ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ ಎಂಬುದು ಜನತಂತ್ರದ ಆಶಯವನ್ನೇ ಅಣಕಿಸುವ ಶಾಸನ. ಈ ಕರಾಳ ಕಾಯ್ದೆಯ ನೊಗವನ್ನು ಐದು ವರ್ಷಗಳ ಹಿಂದೆಯೇ ಕಳಚಿಕೊಂಡಿತು ಈ ರಾಜ್ಯ. ಜನಜೀವನವನ್ನು ಶಾಂತಿಯ ಮಡಿಲಿಗೆ ಮರಳಿಸಿದ ಮಾಣಿಕ್ ಸರ್ಕಾರ್ ಸಾಧನೆ ಸಾಮಾನ್ಯವಲ್ಲ.

ಆದರೆ ಆಧುನಿಕ ಜಗತ್ತಿನ ಆಶೋತ್ತರಗಳನ್ನು ಎದೆಯಲ್ಲಿ ಹೊತ್ತ ಹೊಸ ಪೀಳಿಗೆಗೆ ಗತದ ಘರ್ಷಣೆಯ ರಕ್ತಸಿಕ್ತ ಅಧ್ಯಾಯಗಳ ಗೊಡವೆಯಿಲ್ಲ. ಕಣ್ಣು ಕೋರೈಸುವ ಮಹಾನಗರಗಳ ರಸ್ತೆಗಳು, ಮಾಲ್‌ಗಳು, ಕಾರು-ಮೋಟರ್ ಸೈಕಲ್‌ಗಳು, ನುಣುಪಾದ ರಸ್ತೆ- ಫ್ಲೈಓವರುಗಳು... ಜೊತೆಗೆ ಉನ್ನತ ಶಿಕ್ಷಣ ಸೌಲಭ್ಯ, ಉದ್ಯೋಗಾವಕಾಶಗಳ ಹಿಂದೆ ಬೀಳುವುದು ಸ್ವಾಭಾವಿಕ. ರಕ್ತಪಾತ ಅಳಿದು ಶಾಂತಿ ಬೇರುಬಿಟ್ಟ ಸಮಾಜದ ಕಣ್ಣ ಮುಂದೆ ಬಣ್ಣ ಬಣ್ಣದ ಕನಸುಗಳ ಹರವಿ ಮತ ಕೇಳುವ ವ್ಯಾಪಾರಿಗಳು ಬಂದಿದ್ದಾರೆ. ಶಾಂತಿ, ಅನ್ನ ಅರಿವೆ, ಅಕ್ಷರ, ನೀರು ನೆರಳು, ರಸ್ತೆ, ರೈಲು ಮಾರ್ಗ, ವಿಮಾನ ಸಂಚಾರಗಳ ನೆಲೆ ನಿಲ್ಲಿಸಲು ಇಷ್ಟು ಕಾಲ ಬಡಿದಾಡಿದ ಒಬ್ಬ ಮುಖ್ಯಮಂತ್ರಿ ಇದೀಗ ಬಣ್ಣದ ಕನಸುಗಳ ಮೇಲೆ ನೆಟ್ಟಿರುವ ಆಸೆ ಕಣ್ಣುಗಳ ನೋಟಗಳನ್ನು ಕದಲಿಸುವುದು ಕಠಿಣ. ಅಭಿವೃದ್ಧಿಯ ಮುಂದಿನ ಹಂತಕ್ಕೆ ಹೊರಳುತ್ತಿದ್ದೇವೆ ಎಂಬ ಅವರ ಮಾತು ಈ ಪೀಳಿಗೆಗೆ ಕೇಳಿಸುವಂತೆ ತೋರುತ್ತಿಲ್ಲ. ಬಿಜೆಪಿ ರೂಪಿಸಿರುವ ‘ಚಲೋ ಪಲ್ಟೋಯ್’ (ಬನ್ನಿ ಪಲ್ಟಿ ಹೊಡೆಸೋಣ ಅಥವಾ ಬದಲಿಸೋಣ) ಘೋಷಣೆ ಈ ಚುನಾವಣೆಗಳಲ್ಲಿ ಅತ್ಯಂತ ಜನಪ್ರಿಯ. ಸತತ 34 ವರ್ಷಗಳ (1977ರಿಂದ 2011) ಕಾಲ ಆಡಳಿತ ನಡೆಸಿದ ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಸರ್ಕಾರವನ್ನು ಕೆಡವಲು ಮಮತಾ ಬ್ಯಾನರ್ಜಿ ಅವರು ರೂಪಿಸಿದ ಪದ ‘ಪರಿಬೊರ್ತನ್’.

‘ನಾವು ಅಧಿಕಾರ ವಹಿಸಿಕೊಂಡಾಗ ಬುಡಕಟ್ಟು ಬಂಡುಕೋರ ಹಿಂಸೆ ಚರಮಸೀಮೆ ಮುಟ್ಟಿತ್ತು. ಜನ ಭಯಭೀತರಾಗಿದ್ದರು. ಬಾಂಗ್ಲಾದೇಶದ ನೆಲೆಗಳಿಂದ ಬಂಡುಕೋರ ಶಸ್ತ್ರಸಜ್ಜಿತ ಗುಂಪುಗಳು ತ್ರಿಪುರಾದ ಮೇಲೆ ದಾಳಿ ನಡೆಸುತ್ತಿದ್ದವು. ಇವುಗಳನ್ನು ಪಾಕಿಸ್ತಾನದ ಐಎಸ್‌ಐ ಉತ್ತೇಜಿಸಿತ್ತು. ಅಮೆರಿಕೆಯ ಸಿ.ಐ.ಎ. ಕೂಡ ಖಳನಾಯಕನೇ. ಜನರನ್ನು ಜನಾಂಗೀಯ ಆಧಾರದ ಮೇಲೆ ಒಡೆದು ಹಿಂಸೆಯನ್ನು ಬಿತ್ತಿ ಬೆಳೆಸಿದವು. ಶಾಂತಿಯ ಮರುಸ್ಥಾಪನೆ ಬಹುದೊಡ್ಡ ಸವಾಲಾಗಿತ್ತು. ಅಂದಿನ ಬಾಂಗ್ಲಾ ಸರ್ಕಾರ ಸಹಕರಿಸುತ್ತಿರಲಿಲ್ಲ. ಗಡಿ ದಾಟಿ ಬಾಂಗ್ಲಾ ದೇಶದೊಳಕ್ಕೆ ನುಗ್ಗಿ, ಅಲ್ಲಿನ ಬಂಡುಕೋರ ನೆಲೆಗಳನ್ನು ನಾಶ ಮಾಡಿದ್ದೆವು’ ಎನ್ನುತ್ತಾರೆ ಸರ್ಕಾರ್.

ತ್ರಿಪುರಾ ರಾಜಮನೆತನದ ಪ್ರದ್ಯೋತ್ ಮಾಣಿಕ್ಯ ದೇಬ್‌ಬರ್ಮನ್ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರು. ಬಿಜೆಪಿ ಸೇರುತ್ತಾರೆಂಬ ದಟ್ಟ ವದಂತಿಗಳು ಹುಸಿಯಾದವು. ಮಾಣಿಕ್ ಸರ್ಕಾರ್ ಕೇವಲ ಬಂಗಾಳಿಗಳನ್ನು ರಕ್ಷಿಸಿ, ಬುಡಕಟ್ಟು ಜನಾಂಗದ ನಾಯಕರ ಬೇಟೆಯಾಡಿದರು. ತ್ರಿಪುರಾದ ಬಂಗಾಳಿ ಬಹುಸಂಖ್ಯಾತ ಮೀಡಿಯಾ ತಮ್ಮದೇ ಬಂಗಾಳಿ ಮುಖ್ಯಮಂತ್ರಿಯ ವರ್ಚಸ್ಸನ್ನು ಉದಾರವಾಗಿ ಕಟ್ಟಿ ಬೆಳೆಸಿದವು ಎಂಬುದು ಪ್ರದ್ಯೋತ್‌ ಟೀಕೆ.

ಪೂರ್ವಕ್ಕೆ ಅಸ್ಸಾಂ, ಮಿಜೋರಂ ಬಿಟ್ಟರೆ ಉಳಿದ ಮೂರೂ ದಿಕ್ಕುಗಳಲ್ಲಿ ತ್ರಿಪುರಾಕ್ಕೆ ಬಾಂಗ್ಲಾ ದೇಶವೇ ನೆರೆಹೊರೆ. ರಾಜಧಾನಿ ಅಗರ್ತಲಾದಿಂದ ಕೇವಲ ಎರಡು ಕಿ.ಮೀ. ದೂರದಲ್ಲಿದೆ ಬಾಂಗ್ಲಾ ಗಡಿ. ಗಡಿ ಭಾಗಗಳ ಹಲವೆಡೆ ಬಾಂಗ್ಲಾ ಮತ್ತು ತ್ರಿಪುರಾ ಸಂತೆಗಳು ಜರುಗುತ್ತವೆ. ಗಡಿ ದಾಟಲು ರಹದಾರಿ ಪತ್ರದ ಅಗತ್ಯವಿದ್ದರೂ, ಅಕ್ರಮ ಸಂಚಾರವೇ ಹೆಚ್ಚು. ಶೇ 70ರಷ್ಟು ಜನಸಂಖ್ಯೆ ಬಂಗಾಳಿಗಳಾದ ಕಾರಣ ಅವರ ಭಾಷೆ- ಸಾಹಿತ್ಯ- ಸಂಸ್ಕೃತಿಯೇ ವ್ಯಾಪಕ.

1977ರ ತನಕ ಕಾಂಗ್ರೆಸ್ ಸರ್ಕಾರಗಳೇ ಈ ರಾಜ್ಯವನ್ನು ಆಳಿದವು. 1978ರಿಂದ 1988 ಮತ್ತು 1993ರಿಂದ ಇಲ್ಲಿಯ ತನಕ ಸಿಪಿಎಂ ನೇತೃತ್ವದ ಎಡರಂಗದ ಸರ್ಕಾರಗಳಿಗೆ ಜನಾದೇಶ ದೊರೆತಿತ್ತು.

ಎಡರಂಗ ಸರ್ಕಾರವನ್ನು ಟೀಕಿಸುವವರು ಕೂಡ ಮಾಣಿಕ್ ಸರ್ಕಾರ್ ಅವರ ಸಚ್ಚಾರಿತ್ರ್ಯ, ಸರಳ ಬದುಕನ್ನು ಮೆಚ್ಚುತ್ತಾರೆ. ದೇಶದಲ್ಲಿಯೇ ಅತ್ಯಂತ ಕಡಿಮೆ ಆಸ್ತಿ ಉಳ್ಳ ಮುಖ್ಯಮಂತ್ರಿ ಅವರು. ಅವರ ಆಸ್ತಿ ಮೌಲ್ಯ ₹ 26 ಲಕ್ಷ. ತಮ್ಮ ಸಂಬಳವನ್ನು ಪಕ್ಷಕ್ಕೆ ಕೊಡುತ್ತಾರೆ. ಇವರ ಖರ್ಚುಗಳಿಗೆಂದು ಪಕ್ಷ ತಿಂಗಳಿಗೆ ಎಂಟು ಸಾವಿರ ರೂಪಾಯಿ ಭತ್ಯವನ್ನು ಕೊಡುತ್ತದೆ.

ಆದರೆ ತಮ್ಮದೇ ಸಂಪುಟದ ಮಂತ್ರಿಗಳ ಮೇಲಿನ ಭ್ರಷ್ಟಾಚಾರದ ಆರೋಪಗಳ ಕುರಿತು ಅವರು ತಲೆಕೆಡಿಸಿಕೊಂಡಿಲ್ಲ. ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣದಲ್ಲಿ ಅವರ ಮಂತ್ರಿಗಳ ಕೈ ಮಲಿನವಾಗಿದೆ ಎಂಬುದು ಬಿಜೆಪಿ ಆಪಾದನೆ.

ನಿರುದ್ಯೋಗ ಈ ರಾಜ್ಯದ ಬಹುದೊಡ್ಡ ಸಮಸ್ಯೆ. 38 ಲಕ್ಷ ಜನಸಂಖ್ಯೆಯಲ್ಲಿ ಆರು ಲಕ್ಷ ನೋಂದಾಯಿತ ನಿರುದ್ಯೋಗಿಗಳು ಭಾರೀ ಸಂಖ್ಯೆಯೇ ಸರಿ. ಆದರೆ ನಿರುದ್ಯೋಗ ಕೇವಲ ತ್ರಿಪುರಾದ ಸಮಸ್ಯೆಯೇ? ನಿರುದ್ಯೋಗದಿಂದ ಭಾರತ ಮುಕ್ತವಾಗಿದೆ ಎಂಬಂತೆ ಮಾತಾಡುತ್ತಿರುವುದು ನ್ಯಾಯವೇ? ದೇಶದಲ್ಲಿ ನಿರುದ್ಯೋಗ ಮುಕ್ತವಾಗಿರುವ ಯಾವುದಾದರೂ ಒಂದು ಜಿಲ್ಲೆಯನ್ನು ತೋರಿಸಿಬಿಡಲಿ ಎಂಬುದು ಮಾಣಿಕ್ ಸರ್ಕಾರ್ ವಾದ.

2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಗಳಿಸಿದ್ದ ಮತಗಳ ಪ್ರಮಾಣ ಶೇ 1.5 ಮಾತ್ರ. ಅಂತಹ ಪಾತಾಳದಿಂದ ಇಂದಿನ ಆಕಾಶಕ್ಕೆ ನೆಗೆದಿರುವ ಬಿಜೆಪಿಯ ಸಾಧನೆ ಅಸಾಧಾರಣವೇ ಹೌದು. ಒಂದು ಕಾಲಕ್ಕೆ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಈಗ ನೆಲಕಚ್ಚಿದೆ. ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ನಾಯಕರು-ಶಾಸಕರನ್ನು ಅನಾಮತ್ತು ತನ್ನ ಪಾಳೆಯಕ್ಕೆ ಎತ್ತಿ ಹಾಕಿಕೊಂಡಿರುವ ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ತಲೆಯೆತ್ತಿದೆ. ಎಡರಂಗದ ಶಾಂತಿ- ಸಹಬಾಳ್ವೆಯ ಮಂತ್ರವನ್ನು ಅಭಿವೃದ್ಧಿಯ ಪ್ರತಿಮಂತ್ರದಿಂದ ಕಟ್ಟಿ ಹಾಕಲು ತನ್ನ ಎಲ್ಲ ಶಕ್ತಿ-ಸಾಧನಗಳನ್ನೂ ಪಣಕ್ಕೆ ಇರಿಸಿದೆ. ಗ್ರಾಮಾಂತರ ತ್ರಿಪುರಾದಲ್ಲಿ ಸಿಪಿಎಂ ದಶಕಗಳಿಂದ ಕಟ್ಟಿರುವ ಸಮರ್ಪಿತ ಕಾರ್ಯಕರ್ತರ ಪಡೆಗೆ ಪ್ರತಿಯಾಗಿ ಶೇ 30ರಷ್ಟಿರುವ ಬುಡಕಟ್ಟು ಜನರ ಮತಗಳನ್ನು ಒಟ್ಟು ಹಾಕಿ ತನ್ನತ್ತ ಸೆಳೆಯತೊಡಗಿದೆ ಬಿಜೆಪಿ. ಬಹುಸಂಖ್ಯಾತರ ರಾಜಕಾರಣದಲ್ಲಿ ಯಶಸ್ಸು ಕಂಡಿರುವ ಕೇಸರಿ ಪಕ್ಷ ತ್ರಿಪುರಾದಲ್ಲಿ ತಂತ್ರ ಬದಲಿಸಿದೆ.

ಪ್ರತ್ಯೇಕತಾವಾದಿ ಆಂದೋಲನದಲ್ಲಿ ನಂಬಿಕೆ ಇರಿಸಿರುವ ತ್ರಿಪುರಾ ಮೂಲನಿವಾಸಿ ಜನಜಾತಿಗಳ ರಂಗದೊಂದಿಗೆ (ಇಂಡೈಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ- ಐ.ಪಿ.ಎಫ್.ಟಿ) ಬಿಜೆಪಿ ಚುನಾವಣೆ ಮೈತ್ರಿ ಮಾಡಿಕೊಂಡಿದೆ. 1988ರ ಚುನಾವಣೆಯಲ್ಲಿ ಎಡರಂಗ ಸರ್ಕಾರವನ್ನು ಸೋಲಿಸಲು ಪ್ರತ್ಯೇಕತಾವಾದಿಗಳ ಜೊತೆ ಕೈಗೂಡಿಸಿದ್ದ ಕಾಂಗ್ರೆಸ್ಸಿನ ಪರಂಪರೆಯನ್ನೇ ಬಿಜೆಪಿ ಕೂಡ ಮುಂದುವರೆಸಿದೆ. ತ್ರಿಪುರಾ ನ್ಯಾಷನಲ್ ವಾಲಂಟೀರ್ಸ್ (ಟಿ.ಎನ್.ವಿ) ಎಂಬ ಪ್ರತ್ಯೇಕತಾವಾದಿ ಸಂಘಟನೆಗೆ ಸೇರಿದ ತ್ರಿಪುರಾ ಉಪಜಾತಿ ಯುವ ಸಮಿತಿಯ (ಟಿಯುಜೆಎಸ್) ನೆರವಿನಿಂದ 1988ರಿಂದ ಐದು ವರ್ಷ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು, ಇದೀಗ ಬಿಜೆಪಿ ಚುನಾವಣಾ ಮೈತ್ರಿ ಬೆಳೆಸಿರುವ ಸಂಘಟನೆಯ ಶಕ್ತಿಮೂಲ ಕೂಡ ಇದೇ ಟಿ.ಎನ್.ವಿ- ಟಿಯುಜೆಎಸ್. 80ರ ದಶಕದ ಕಾಂಗ್ರೆಸ್- ಟಿಯುಜೆಸ್-ಟಿ.ಎನ್.ವಿ ನಾಯಕರು ತೃಣಮೂಲ ಕಾಂಗ್ರೆಸ್ಸಿಗೆ ನಡೆದು ಅಲ್ಲಿಂದ ಇದೀಗ ಬಿಜೆಪಿಯಲ್ಲಿದ್ದಾರೆ.

ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾದ (ಎನ್.ಎಲ್.ಎಫ್.ಟಿ.) ಕೈಗೂಸು ಐ.ಪಿ.ಎಫ್.ಟಿ. ಆದರೆ ಈಗಲೂ ಎನ್.ಎಲ್.ಎಫ್.ಟಿ. ನಿಷೇಧಿತ ಸಂಘಟನೆ. ಕೇಂದ್ರ ಸರ್ಕಾರವೇ ವಿಧಿಸಿರುವ ನಿಷೇಧವಿದೆ. ಅವರ ಕ್ಯಾಂಪುಗಳು ಈಗಲೂ ಬಾಂಗ್ಲಾದೇಶದಲ್ಲಿವೆ. ಈ ಸಂಘಟನೆಗಳು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿವೆ.

1947ರ ಬಂಗಾಳದ ಅಂತಿಮ ವಿಭಜನೆ ತ್ರಿಪುರಾದ ಪಾಲಿಗೆ ಭಾರೀ ಅನರ್ಥ ಆಯಿತು. ಪೂರ್ವ ಬಂಗಾಳದಿಂದ ವಲಸೆಯ ಪ್ರವಾಹವೇ ಹರಿದು ಪುಟ್ಟ ರಾಜ್ಯದ ಜನಸಂಖ್ಯೆಯ ರೂಪುರೇಷೆಗಳನ್ನು ತಲೆಕೆಳಗಾಗಿಸಿತು. ಬಂಗಾಳಿಗಳ ಬಹುಸಂಖ್ಯೆಯ ವಿರುದ್ಧ ಬುಡಕಟ್ಟು ಸಶಸ್ತ್ರ ಬಂಡುಕೋರ ಚಟುವಟಿಕೆಯು ದಶಕಗಳ ಕಾಲ ಈ ಸೀಮೆಯನ್ನು ನೆತ್ತರಿನಲ್ಲಿ ತೋಯಿಸಿಬಿಟ್ಟಿತು. ಮೂರು ದಿಕ್ಕುಗಳಲ್ಲಿ ಬಾಂಗ್ಲಾದೇಶದಿಂದ ಸುತ್ತುವರೆದು 'ಬಂದಿ'ಯಾಯಿತು. ಭಾರತದ ಹಿತ್ತಿಲಲ್ಲಿ ಮೂಲೆಗುಂಪಾಗಿ ಅಭಿವೃದ್ಧಿಗೆ ಎರವಾಯಿತು.

1874ರಲ್ಲಿ ಶೇ 63.77ರಷ್ಟಿದ್ದ ಬುಡಕಟ್ಟು ಜನರ ಪ್ರಮಾಣ 1981ರ ಹೊತ್ತಿಗೆ ಶೇ 28.44ಕ್ಕೆ ಕುಸಿದಿತ್ತು. ಬುಡಕಟ್ಟು ಜನಾಂಗಕ್ಕೆ ಸೇರಿದ್ದ ತ್ರಿಪುರಾದ ಅರಸು ಆಳ್ವಿಕೆಯ ಅಂತ್ಯದೊಂದಿಗೆ ರಾಜಕೀಯ ಅಧಿಕಾರವೂ ಬುಡಕಟ್ಟು ಜನರ ಕೈ ತಪ್ಪಿತ್ತು. 1978ರ ತನಕ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರಗಳೂ ಬುಡಕಟ್ಟು ಜನರ ಭಾವನೆಗಳನ್ನು ಕಡೆಗಣಿಸಿದ್ದವು.

ಕಮ್ಯುನಿಸ್ಟರು ಮಾಡಿದ ಐತಿಹಾಸಿಕ ತಪ್ಪೊಂದು, ಬುಡಕಟ್ಟು ಜನರನ್ನು ದೂರ ಮಾಡಿಕೊಂಡ ಅವರ ಪಾಲಿಗೆ ಈಗಲೂ ಬಲು ದುಬಾರಿಯಾಗಿ ಪರಿಣಮಿಸಿದೆ. ತ್ರಿಪುರಾದಲ್ಲಿ ಕಮ್ಯುನಿಸ್ಟರು ಮೊದಲ ಸಲ ಅಧಿಕಾರಕ್ಕೆ ಬಂದಿದ್ದು 1978ರಲ್ಲಿ. ಬುಡಕಟ್ಟು ಜನಾಂಗಕ್ಕೆ ಸೇರಿದ ಏಕೈಕ ಕಮ್ಯುನಿಸ್ಟ್ ತಲೆಯಾಳು ದಶರಥ ದೇಬ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಮತ್ತೊಬ್ಬ ನಾಯಕ ಬೀರೇನ್ ದತ್ತ ಅವರ ಮಾತನ್ನು ಪಕ್ಷ ಲೆಕ್ಕಿಸಲಿಲ್ಲ. ಅಪ್ರತಿಮ ಹೋರಾಟಗಾರರಾಗಿದ್ದ ನೃಪೇನ್ ಚಕ್ರವರ್ತಿ ಅವರನ್ನು ಆರಿಸಲಾಯಿತು. ಪಕ್ಷ ಮತ್ತು ಬುಡಕಟ್ಟು ಜನರ ನಡುವಣ ಸಂಬಂಧ ದೂರ ದೂರ ಸರಿದದ್ದು ಅದೇ ಕಾಲಘಟ್ಟದಲ್ಲಿ. 1993ರಲ್ಲಿ ಪಕ್ಷ ಪುನಃ ಅಧಿಕಾರಕ್ಕೆ ಬಂದಾಗ ದಶರಥ ದೇಬ್ ಅವರನ್ನು ಮುಖ್ಯಮಂತ್ರಿ ಮಾಡಿದ್ದೇನೋ ಹೌದು. ಆದರೆ ಅಷ್ಟು ಹೊತ್ತಿಗೆ ಬಹಳ ತಡವಾಗಿತ್ತು. ಸ್ವಾಯತ್ತ ಬುಡಕಟ್ಟು ಜಿಲ್ಲಾ ಮಂಡಳಿ ರಚನೆಯಂತಹ ಕ್ರಮಗಳು ಫಲ ನೀಡಲಿಲ್ಲ. ಬುಡಕಟ್ಟು ಉಗ್ರವಾದ ಹಿಂಸಾಚಾರ ಕೈ ಮೀರುತ್ತಲೇ ಹೋಯಿತು.

‘ಅಭಿವೃದ್ಧಿ’ ಎಂಬುದು ಶಾಂತಿಯನ್ನು ಬಲಿಗೊಟ್ಟೇ ಬರಬೇಕೆ ಎಂಬ ಜಿಜ್ಞಾಸೆಗೆ ತ್ರಿಪುರಾ ಸದ್ಯದಲ್ಲಿಯೇ ಉತ್ತರ ಹೇಳಲಿದೆ.

ಪ್ರತಿಕ್ರಿಯಿಸಿ (+)