ದಕ್ಷಿಣದವರಿಗೆ ಶಿಕ್ಷೆ,‘ಬಿಮಾರು’ಗೆ ಉಡುಗೊರೆ?!

7

ದಕ್ಷಿಣದವರಿಗೆ ಶಿಕ್ಷೆ,‘ಬಿಮಾರು’ಗೆ ಉಡುಗೊರೆ?!

ಎ.ಸೂರ್ಯ ಪ್ರಕಾಶ್
Published:
Updated:
ದಕ್ಷಿಣದವರಿಗೆ ಶಿಕ್ಷೆ,‘ಬಿಮಾರು’ಗೆ ಉಡುಗೊರೆ?!

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ಜನರ ಆಶಯಗಳಿಗೆ ನಿಜವಾದ ಪ್ರಾತಿನಿಧ್ಯ ಕೊಡಿಸಬೇಕು’ ಎಂಬ ಉದ್ದೇಶದಿಂದ ಲೋಕಸಭೆಯ ಸಂಖ್ಯಾಬಲವನ್ನು ಹೆಚ್ಚಿಸುವುದರ ಪರವಾಗಿ ಈಚೆಗೆ ಮಾತನಾಡಿದ್ದಾರೆ. ಬ್ರಿಟನ್ ಸಂಸತ್ತಿನ ಸಂಖ್ಯಾಬಲ 600 ಆಗಬಹುದು ಎಂದಾದರೆ 128 ಕೋಟಿ ಜನರಿರುವ ಭಾರತದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳು ಏಕಿರಬಾರದು ಎಂದು ಅವರು ಕೇಳಿದ್ದಾರೆ. 

 

ಸಂಸತ್ತಿನಲ್ಲಿ ಜನರಿಗೆ ಇನ್ನಷ್ಟು ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು, ಆ ಪ್ರಾತಿನಿಧ್ಯ ಇನ್ನಷ್ಟು ಅರ್ಥಪೂರ್ಣ ಆಗಿರಬೇಕು ಎಂಬ ಕಳಕಳಿ ಒಳ್ಳೆಯದೇ. ಆದರೆ, ರಾಜ್ಯಗಳ ಜನಸಂಖ್ಯೆಯನ್ನು ಮಾತ್ರ ಆಧರಿಸಿ, ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಯಾಂತ್ರಿಕವಾಗಿ ಹೆಚ್ಚಿಸುವುದರ ರಾಜಕೀಯ ಪರಿಣಾಮಗಳು ಗಂಭೀರವಾಗಿರುತ್ತವೆ.

 

ಇದರಿಂದಾಗಿ, ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ಶ್ರದ್ಧೆಯಿಂದ ಜಾರಿಗೆ ತಂದ ದಕ್ಷಿಣ ಭಾರತದ ರಾಜ್ಯಗಳು ಹಾಗೂ ಪಶ್ಚಿಮ ಮತ್ತು ಪೂರ್ವದ ಕೆಲವು ರಾಜ್ಯಗಳನ್ನು ಶಿಕ್ಷೆಗೆ ಗುರಿಪಡಿಸಿದಂತೆ ಆಗುತ್ತದೆ. ಭಾರತದ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿರುವ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮದ ಅನುಷ್ಠಾನದಲ್ಲಿ ಬೇಜವಾಬ್ದಾರಿ ತೋರಿದ ‘ಬಿಮಾರು’ (ಬಿಹಾರ, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ) ರಾಜ್ಯಗಳಿಗೆ ಪಾರಿತೋಷಕ ನೀಡಿದಂತೆಯೂ ಆಗುತ್ತದೆ.

 

‘ಲೋಕಸಭೆಯಲ್ಲಿ ರಾಜ್ಯಗಳಿಗೆ ಸಿಗುವ ಸ್ಥಾನಗಳು ಹಾಗೂ ರಾಜ್ಯಗಳ ಜನಸಂಖ್ಯೆಯ ನಡುವಣ ಅನುಪಾತವು ಸಾಧ್ಯವಾದಷ್ಟರಮಟ್ಟಿಗೆ ಎಲ್ಲ ರಾಜ್ಯಗಳಿಗೂ ಒಂದೇ ಆಗಿರಬೇಕು’ ಎಂದು ಲೋಕಸಭಾ ಕ್ಷೇತ್ರಗಳ ಹಂಚಿಕೆಯ ವಿಚಾರದಲ್ಲಿ ಸಂವಿಧಾನದ 81(2)(ಎ) ವಿಧಿ ಹೇಳುತ್ತದೆ.

 

ಹತ್ತು ವರ್ಷಗಳಿಗೆ ಒಮ್ಮೆ ನಡೆಯುವ ಜನಗಣತಿಯ ನಂತರ, ಪ್ರತಿ ರಾಜ್ಯಕ್ಕೆ ಎಷ್ಟು ಲೋಕಸಭಾ ಕ್ಷೇತ್ರಗಳನ್ನು ನೀಡಬೇಕು ಎಂಬುದನ್ನು ತೀರ್ಮಾನಿಸಲು ಸಂಸತ್ತು ಪ್ರಾಧಿಕಾರವೊಂದನ್ನು ನೇಮಿಸಬಹುದು ಎಂದು 82ನೇ ವಿಧಿಯಲ್ಲಿ ಹೇಳಲಾಗಿದೆ.

 

ಆದರೆ, ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಅನುಷ್ಠಾನಕ್ಕೆ ತಂದರೆ, ‘ಬಿಮಾರು’ ರಾಜ್ಯಗಳು ಇದರಲ್ಲಿ ಹಿಂದೆ ಬಿದ್ದವು. ಹಾಗಾಗಿ, ಜನಸಂಖ್ಯೆ ಹಾಗೂ ಲೋಕಸಭಾ ಸ್ಥಾನಗಳ ಅನುಪಾತ ಕಾಯ್ದುಕೊಳ್ಳುವ ಯಾಂತ್ರಿಕ ಕ್ರಿಯೆಯು ಸೂಕ್ತವಲ್ಲ.

 

ಜನಸಂಖ್ಯೆಯೊಂದನ್ನು ಮಾತ್ರ ಆಧರಿಸಿ ಲೋಕಸಭಾ ಸ್ಥಾನಗಳನ್ನು ಪರಿಷ್ಕರಿಸಿದರೆ ಆಗುವ ರಾಜಕೀಯ ಅಸಮತೋಲನವನ್ನು ಈ ಲೇಖಕ 1981ರ ಜನಗಣತಿಯ ನಂತರ ಮೊದಲ ಬಾರಿಗೆ ಗಮನಿಸಿದ. ಆ ಜನಗಣತಿಯ ನಂತರದ ದಿನಗಳಲ್ಲಿ ರಾಜಕೀಯ ಅಸಮಾನತೆಯು ಇನ್ನಷ್ಟು ಎದ್ದುಕಾಣುತ್ತಿದೆ.

 

ಸಮಸ್ಯೆ ಹೀಗಿದೆ: 1981ರಿಂದ 1991ರ ನಡುವಣ ಅವಧಿಯಲ್ಲಿ ‘ಬಿಮಾರು’ ರಾಜ್ಯಗಳ ಒಂದು ದಶಕದ ಜನಸಂಖ್ಯಾ ಬೆಳವಣಿಗೆಯ ಶೇಕಡಾವಾರು ಪ್ರಮಾಣ ಈ ರೀತಿ ಇತ್ತು: ಬಿಹಾರ- 23.54, ಮಧ್ಯಪ್ರದೇಶ- 26.84, ರಾಜಸ್ತಾನ- 28.44, ಉತ್ತರಪ್ರದೇಶ- 25.85. ಈ ಅವಧಿಯಲ್ಲಿ ದಕ್ಷಿಣದ ನಾಲ್ಕು ರಾಜ್ಯಗಳ ಒಂದು ದಶಕದ ಜನಸಂಖ್ಯಾ ಬೆಳವಣಿಗೆಯ ಶೇಕಡಾವಾರು ಪ್ರಮಾಣ ಈ ರೀತಿ ಇತ್ತು: ಕೇರಳ- 14.32 , ತಮಿಳುನಾಡು- 15.39, ಕರ್ನಾಟಕ- 21.12 ಮತ್ತು ಆಂಧ್ರಪ್ರದೇಶ- 24.20.

 

ನಂತರದ ದಶಕದಲ್ಲಿ, ಅಂದರೆ 1991ರಿಂದ 2001ರ ನಡುವಣ ಅವಧಿಯಲ್ಲಿ, ‘ಬಿಮಾರು’ ಹಾಗೂ ದಕ್ಷಿಣದ ರಾಜ್ಯಗಳ ನಡುವೆ ವ್ಯತ್ಯಾಸ ಇನ್ನಷ್ಟು ಹೆಚ್ಚಾಯಿತು. ಈ ದಶಕದಲ್ಲಿ ‘ಬಿಮಾರು’ ರಾಜ್ಯಗಳ ಜನಸಂಖ್ಯಾ ಬೆಳವಣಿಗೆ ದರ ಹೀಗಿತ್ತು: ಬಿಹಾರ- 28.62, ಮಧ್ಯಪ್ರದೇಶ- 24.26, ರಾಜಸ್ತಾನ- 28.41, ಉತ್ತರ ಪ್ರದೇಶ- 25.85.

 

ಇದೇ ಅವಧಿಯಲ್ಲಿ ದಕ್ಷಿಣದ ರಾಜ್ಯಗಳ ಜನಸಂಖ್ಯಾ ಬೆಳವಣಿಗೆ ದರ ಹೀಗಿತ್ತು: ಕೇರಳ- 9.43, ತಮಿಳುನಾಡು- 11.72, ಕರ್ನಾಟಕ- 17.51 ಮತ್ತು ಆಂಧ್ರಪ್ರದೇಶ- 14.59. ದಕ್ಷಿಣದ ರಾಜ್ಯಗಳ ಜನಸಂಖ್ಯಾ ಬೆಳವಣಿಗೆ ದರವು ‘ಬಿಮಾರು’ ರಾಜ್ಯಗಳ ಬೆಳವಣಿಗೆ ದರದ ಅರ್ಧದಷ್ಟು ಅಥವಾ ಮೂರನೆಯ ಒಂದರಷ್ಟು ಮಾತ್ರ ಎಂಬುದು ಇಲ್ಲಿ ತಿಳಿಯುತ್ತದೆ.

 

2001ರಿಂದ 2011ರ ನಡುವಣ ಅವಧಿಯಲ್ಲಿ ಈ ವ್ಯತ್ಯಾಸವು ಕಣ್ಣಿಗೆ ರಾಚುವಂತೆ ಬೆಳೆಯಿತು. ಈ ಅವಧಿಯಲ್ಲಿ ‘ಬಿಮಾರು’ ರಾಜ್ಯಗಳ ಜನಸಂಖ್ಯಾ ಬೆಳ

ವಣಿಗೆ ದರ ಈ ರೀತಿ ಇತ್ತು: ಬಿಹಾರ- 25.07, ಮಧ್ಯಪ್ರದೇಶ- 20.30, ರಾಜಸ್ತಾನ- 21.44, ಉತ್ತರ ಪ್ರದೇಶ- 20.09. ದಕ್ಷಿಣದ ರಾಜ್ಯಗಳ ಜನಸಂಖ್ಯಾ ಬೆಳವಣಿಗೆ ದರ ಹೀಗಿತ್ತು: ಕೇರಳ- 4.86, ತಮಿಳುನಾಡು- 15.60, ಕರ್ನಾಟಕ- 15.67, ಆಂಧ್ರಪ್ರದೇಶ- 11.10.

 

1991ರಿಂದ 2001ರ ನಡುವೆ ಬಿಹಾರದ ಜನಸಂಖ್ಯೆಯು ಶೇಕಡ 28.62ರಷ್ಟು ವೃದ್ಧಿಯಾದರೆ, ಕೇರಳದ ಜನಸಂಖ್ಯೆ ಹೆಚ್ಚಾಗಿದ್ದು ಶೇಕಡ 9.43ರಷ್ಟು ಮಾತ್ರ. 2001ರಿಂದ 2011ರ ನಡುವೆ ಬಿಹಾರದ ಜನಸಂಖ್ಯೆ ಶೇಕಡ 25ರಷ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಿತು, ಕೇರಳದ ಜನಸಂಖ್ಯೆ ಶೇಕಡ 4.86ರಷ್ಟು ಮಾತ್ರ ಹೆಚ್ಚಾಯಿತು.

 

ಇದೇ ರೀತಿ, ಬಿಹಾರದ ಜನಸಂಖ್ಯೆ ಬೆಳವಣಿಗೆ ದರ ತೀವ್ರವಾಗಿದ್ದ ಎರಡು ದಶಕಗಳಲ್ಲಿ ತಮಿಳುನಾಡಿನ ಜನಸಂಖ್ಯೆ ಶೇಕಡ 11.72ರಷ್ಟು, 15.60ರಷ್ಟು ಮಾತ್ರ ಹೆಚ್ಚಾಯಿತು. ಬೆಳವಣಿಗೆ ದರದಲ್ಲಿನ ಈ ವ್ಯತ್ಯಾಸವು ದಕ್ಷಿಣದ ಇತರ ರಾಜ್ಯಗಳ ವಿಚಾರದಲ್ಲೂ ಇದೇ ರೀತಿ ಇದೆ.

 

‘ಬಿಮಾರು’ ರಾಜ್ಯಗಳ ಜನಸಂಖ್ಯಾ ವೃದ್ಧಿ ದರ ಹಾಗೂ ಪಶ್ಚಿಮ, ಪೂರ್ವದ ಕೆಲವು ರಾಜ್ಯಗಳ ಜನಸಂಖ್ಯಾ ಬೆಳವಣಿಗೆ ದರದ ನಡುವಣ ವ್ಯತ್ಯಾಸ ಕೂಡ ಕಳೆದ 20 ವರ್ಷಗಳ ಅವಧಿಯಲ್ಲಿ ಸ್ಪಷ್ಟವಾಯಿತು. ಉದಾಹರಣೆಗೆ, ಪೂರ್ವದ ಒಡಿಶಾ ರಾಜ್ಯದ ಜನಸಂಖ್ಯಾ ವೃದ್ಧಿ ದರ 1991ರಿಂದ 2001ರ ನಡುವೆ ಶೇಕಡ 16.25ರಷ್ಟು, 2001ರಿಂದ 2011ರ ನಡುವೆ ಶೇಕಡ13.97ರಷ್ಟಿತ್ತು.

 

ಪಶ್ಚಿಮದ ಗೋವಾ ರಾಜ್ಯದ ಜನಸಂಖ್ಯಾ ವೃದ್ಧಿ ಈ ಎರಡು ದಶಕಗಳ ಅವಧಿಯಲ್ಲಿ ಕ್ರಮವಾಗಿ ಶೇಕಡ 15.21 ಮತ್ತು ಶೇಕಡ 8.17ರಷ್ಟು ಮಾತ್ರ. ವಾಸ್ತವ ಹೀಗಿರುವಾಗ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮದ ರಾಜ್ಯಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಿದ್ದನ್ನು ಪರಿಗಣಿಸದೆಯೇ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚು ಮಾಡುವುದಕ್ಕೆ ಸಮರ್ಥನೆ ಇದೆಯೇ?

 

1976ರಿಂದ 2001ರ  ಜನ ಗಣತಿಯವರೆಗೆ ಲೋಕಸಭೆ ಹಾಗೂ ವಿಧಾನಸಭೆಗಳ ಸಂಖ್ಯಾಬಲದಲ್ಲಿ ಬದಲಾವಣೆ ಮಾಡಲಿಲ್ಲ. ಸಂಖ್ಯಾಬಲ ಪರಿಷ್ಕರಿಸುವ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ 2003ರಲ್ಲಿ ಆಲೋಚಿಸಿತಾದರೂ, ದಕ್ಷಿಣದ ರಾಜ್ಯಗಳಿಗೆ ಪ್ರಾಮುಖ್ಯ ನೀಡಬೇಕು ಎಂಬ ವಾದ ಬಲಗೊಂಡಿದ್ದರಿಂದ ಆ ಆಲೋಚನೆ ಕೈಬಿಟ್ಟಿತು. 2026ರ ನಂತರ ನಡೆಯುವ ಜನಗಣತಿಯವರೆಗೆ ಸಂಖ್ಯಾಬಲದ ಪರಿಷ್ಕರಣೆ ತಡೆಹಿಡಿಯುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತು. ಅಂದರೆ, ಪರಿಷ್ಕರಣೆ ಬರುವುದು 2031ರ ಜನಗಣತಿಯ ನಂತರ.

 

ಲೋಕಸಭೆಯ ಸಂಖ್ಯಾಬಲವನ್ನು ಹೆಚ್ಚಿಸುವುದರಿಂದ ದಕ್ಷಿಣದ ರಾಜ್ಯಗಳು ಹಾಗೂ ಇತರ ಕೆಲವು ರಾಜ್ಯಗಳು ದುರ್ಬಲಗೊಳ್ಳುವುದಲ್ಲದೆ ಇತರ ಪರಿಣಾಮಗಳೂ ಇರಲಿವೆ. ಪ್ರತಿ 10 ಲಕ್ಷ ಜನರಿಗೆ ಒಬ್ಬ ಸಂಸದ ಇರಬೇಕು ಎನ್ನುವುದಾದರೆ, ಲೋಕಸಭೆಯಲ್ಲಿ 1,300 ಸಂಸದರು ಇರಬೇಕಾಗುತ್ತದೆ. ಈಗಿನ ಲೋಕಸಭೆಯಲ್ಲಿ ಇರುವ 545 ಸಂಸದರು ಪರಸ್ಪರರನ್ನು ಅಪಮಾನಿಸಿಕೊಳ್ಳುವುದನ್ನು ತಡೆಯಲು ಸ್ಪೀಕರ್‌ ಹೆಣಗಾಡಬೇಕಾದ ಸ್ಥಿತಿ ಇರುವಾಗ, 1,300 ಸಂಸದರನ್ನು ನಿಭಾಯಿಸುವವರು ಯಾರು?

ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಕಡಿಮೆ ಜನಸಂಖ್ಯಾ ಬೆಳವಣಿಗೆ ಪ್ರಮಾಣ ಸಾಧಿಸಿರುವ ರಾಜ್ಯಗಳಿಗೆ ಸೂಕ್ತ ಪ್ರಾಧಾನ್ಯ ನೀಡುವ ಸೂತ್ರವೊಂದನ್ನು ರೂಪಿಸು

ವವರೆಗೆ ಲೋಕಸಭೆಯ ಸಂಖ್ಯಾಬಲವನ್ನು ಹೆಚ್ಚಿಸಬಾರದು. ಹಾಗೆ ರೂಪಿಸುವ ಸೂತ್ರವು ಜನಸಂಖ್ಯೆ ಬೆಳವಣಿಗೆ ಪ್ರಮಾಣ ಕಡಿಮೆ ಇರುವ ರಾಜ್ಯಗಳನ್ನು ಗೌರವಿ

ಸುವಂತೆ ಇರಬೇಕು.

 

ಇದಕ್ಕಿಂತ ಮುಖ್ಯವಾಗಿ, ರೂಪಿಸುವ ಸೂತ್ರವು ಕೇರಳ ಹಾಗೂ ಉತ್ತರಪ್ರದೇಶ ನಡುವೆ ಈಗಿರುವ ಅನುಪಾತವನ್ನು (20:80 ಅಥವಾ 1:4) ಕೇರಳಕ್ಕೆ ತೊಂದರೆಯಾಗುವಂತೆ ಬದಲಿಸಬಾರದು. ಇದು ಸಾಧ್ಯವಾಗಬೇಕು ಎಂದಾದರೆ, ಸಂಖ್ಯೆಗಳ ಬಗ್ಗೆ ಮಾತ್ರ ಮಾತನಾಡುವ ಸಂವಿಧಾನದ 81ನೇ ವಿಧಿಗೆ ತಿದ್ದು

ಪಡಿ ತರಬೇಕು. ಜನಸಂಖ್ಯೆಯ ಬೆಳವಣಿಗೆಗೆ ಅಂಕುಶ ಹಾಕದ ಬೇಜವಾಬ್ದಾರಿ ರಾಜ್ಯಗಳಿಗೆ ಉತ್ತೇಜನ ನೀಡುವ, ಕೇಂದ್ರ ಸರ್ಕಾರದ ಕುಟುಂಬ ಯೋಜನೆ ಕಾರ್ಯ

ಕ್ರಮವನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದ ರಾಜ್ಯಗಳಿಗೆ ಶಿಕ್ಷೆ ನೀಡುವ ಪ್ರತಿಪಾದನೆಯನ್ನು ಯಾರೂ ಒಪ್ಪಲಾಗದು.

 

ಇಷ್ಟೆಲ್ಲದರ ನಡುವೆಯೂ, ದಕ್ಷಿಣದ ನಾಲ್ಕು ರಾಜ್ಯಗಳು ಹಾಗೂ ಒಡಿಶಾ ಮತ್ತು ಗೋವಾ ರಾಜ್ಯಗಳ ಹಿತಾಸಕ್ತಿ ರಕ್ಷಿಸುವ ಸೂತ್ರಕ್ಕೆ ‘ಬಿಮಾರು’ ರಾಜ್ಯಗಳಿಂದ ಪ್ರತಿರೋಧ ಎದುರಾದರೆ, ಲೋಕಸಭೆಯ ಸಂಖ್ಯಾಬಲವನ್ನು ಎಂದೆಂದಿಗೂ ಬದಲಿಸಬಾರದು!

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry