ದಲಿತರು ಎಲ್ಲಿದ್ದರೋ ಅಲ್ಲಿಯೇ ಇದ್ದಾರೆ...

7

ದಲಿತರು ಎಲ್ಲಿದ್ದರೋ ಅಲ್ಲಿಯೇ ಇದ್ದಾರೆ...

ಕುಲದೀಪ ನಯ್ಯರ್
Published:
Updated:
ದಲಿತರು ಎಲ್ಲಿದ್ದರೋ ಅಲ್ಲಿಯೇ ಇದ್ದಾರೆ...

ಅದೊಂದು ಹಳ್ಳಿ. ಅಲ್ಲಿದ್ದ ವಿವಾದಾತ್ಮಕ ಜಾಗ ಒಂದರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಕಂಬವೊಂದನ್ನು ನೆಟ್ಟು ಅದರ ಮೇಲೆ ತ್ರಿವರ್ಣ ಧ್ವಜವನ್ನು ಏರಿಸಿದರು.ಇದು ಆ ಹಳ್ಳಿಯ ಮೇಲ್ಜಾತಿಯ ಜನರ ಕಣ್ಣು ಕೆಂಪಗಾಗಿಸಿತು. ಏಕೆಂದರೆ ತಮ್ಮದಲ್ಲದ ಆ ಜಾಗವನ್ನು ಅವರೆಲ್ಲಾ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ತ್ರಿವರ್ಣ ಧ್ವಜ ಏರಿಸಿದ ವ್ಯಕ್ತಿಯ ಕಗ್ಗೊಲೆಯಾಯಿತು. ಅವರಿಗೆ ಸೇರಿದ ಗುಡಿಸಲನ್ನೂ ಕಿತ್ತೊಗೆಯಲಾಯಿತು. ಹತ್ತು ವರ್ಷ ವಯಸ್ಸಿನ ಮಗುವೂ ಸೇರಿದಂತೆ ಅವರ ಕುಟುಂಬದವರನ್ನೆಲ್ಲಾ ಅಲ್ಲಿಂದ ಓಡಿಸಲಾಯಿತು.

ಇಂತಹ ದೌರ್ಜನ್ಯ ಮತ್ತು ಸಾಮಾಜಿಕ ತಾರತಮ್ಯ ಭಾರತೀಯ ಸಮಾಜದೊಳಗೆ ವಿಷ ಜ್ವಾಲೆಯಂತಿದೆ. ಈ ದೇಶದ ಶೇಕಡ ಎಂಬತ್ತರಷ್ಟು ಜನರು ಜಾತೀಯ ಮನೋಭಾವವನ್ನು ತುಂಬಿಕೊಂಡಿರುವುದು ವಾಸ್ತವ. ಅಂತಹದ್ದೊಂದು ಹಳ್ಳಿಯಲ್ಲಿ ನಡೆದ ದಲಿತ ವ್ಯಕ್ತಿಯೊಬ್ಬರ ಕಗ್ಗೊಲೆಯು, ಘಟನೆ ನಡೆದ ಕೆಲವು ದಿನಗಳ ನಂತರ ಬಯಲುಗೊಂಡಿದೆ. ಟಿ.ವಿ. ವಾಹಿನಿಯೊಂದರ ವರದಿಗಾರರು ಸ್ಥಳಕ್ಕೆ ಹೋಗಿ ಮಾಹಿತಿ ಕಲೆಹಾಕಿ ಪ್ರಸಾರ ಮಾಡಿದ್ದರಿಂದ ಅದು ಹೊರ ಜಗತ್ತಿಗೆ ಗೊತ್ತಾಯಿತು. ಅದು ಪ್ರಸಾರವಾಗದೇ ಇದ್ದಿದ್ದರೆ ದೇಶದಾದ್ಯಂತ ನಿತ್ಯವೂ ನಡೆಯುವ ಇಂತಹ ನೂರೆಂಟು ಘಟನೆಗಳಲ್ಲಿ ಒಂದಾಗಿ ಕಳೆದು ಹೋಗುತ್ತಿತ್ತು. ಇಲ್ಲಿ ಮೇಲ್ಜಾತಿ ಜನರ ಅಟ್ಟಹಾಸ ಮತ್ತು ಕ್ರೌರ್ಯದ ಮುಖ ಗೊತ್ತಾಗುತ್ತದೆ. ಹೌದು, ಇದೊಂದು ಕಗ್ಗತ್ತಲ ಲೋಕ. ಎಲ್ಲಿಯೂ ಬೆಳಕಿನ ಕಿಂಡಿ ಕಾಣಿಸುತ್ತಲೇ ಇಲ್ಲ.ಅರವತ್ತು ವರ್ಷಗಳ ಹಿಂದೆಯೇ ಅಸ್ಪೃಶ್ಯತೆಯನ್ನು ನಮ್ಮ ಸಂವಿಧಾನವೇ ನಿಷೇಧಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದಶಕಗಳ ಕಾಲ ನಡೆದ ಆಂದೋಲನದ ಗುರಿ  ಸ್ವಾತಂತ್ರ್ಯ ಗಳಿಸುವುದಷ್ಟೇ ಆಗಿರಲಿಲ್ಲ, ಇಂತಹ ಸಾಮಾಜಿಕ ಅನಿಷ್ಟಗಳ ನಿವಾರಣೆಯ ಹೆಗ್ಗುರಿಯೂ ಇತ್ತು. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆ ದಿನಗಳಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಶಾಲೆ, ಕಾಲೇಜುಗಳ ಯಾವುದೇ ಅರ್ಜಿಯಲ್ಲಿ ಜಾತಿಯ ಮಾಹಿತಿ ಕೋರುವ ಅಂಶವನ್ನೇ ಕಿತ್ತೊಗೆದರು. ಶಾಲಾ ಪ್ರವೇಶ ಪರೀಕ್ಷೆಗಳಿಗೆ ಕುಳಿತುಕೊಳ್ಳಬೇಕಿದ್ದವರು ನೀಡಬೇಕಿದ್ದ ಅರ್ಜಿಯಲ್ಲಿ ಜಾತಿಗೆ ಸಂಬಂಧಿಸಿದ ಅಂಶ ಇರದಂತೆ ನೋಡಿಕೊಳ್ಳಲಾಯಿತು. ಆದರೂ ಜಾತೀಯ ಮನೋಭಾವ ಕಡಿಮೆಯಂತೂ ಆಗಿಲ್ಲ ಬಿಡಿ.

 

ಮಹಾತ್ಮ ಗಾಂಧೀಜಿಯವರು ದಲಿತರನ್ನು ಹರಿಜನ (ದೇವರ ಮಕ್ಕಳು) ಎಂದೂ ಕರೆದರು. ಆದರೆ ಈ ತೆರನಾದ ನಾಮಕರಣವನ್ನು ದಲಿತರು ಇಷ್ಟಪಡಲಿಲ್ಲ. ಜಾತೀಯತೆ ಎನ್ನುವ ಸಾಮಾಜಿಕ ಪಿಡುಗನ್ನು ಇಂದಿಗೂ ಹಿಂದೂ ಸಮಾಜದಿಂದ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಇವತ್ತಿಗೂ ಹಲವು ಕಡೆ ದಲಿತ ಸಮುದಾಯದ ಮದುವೆ ಗಂಡು ಸಾಂಪ್ರದಾಯಿಕವಾಗಿ ಹೆಣ್ಣನ್ನು ಕರೆತರಲು ತೆರಳುವಾಗ ಕುದುರೆಯ ಮೇಲೆ ಕುಳಿತು ಹೋಗುವುದಿಲ್ಲ. ಇವತ್ತಿಗೂ ಕೆಲವು ಹಳ್ಳಿಗಳ ರಸ್ತೆಗಳಲ್ಲಿ ದಲಿತರು ಕಾಲಿಡುವಂತಿಲ್ಲ. ಬಡ ದಲಿತರು ಬಹುತೇಕ ಹಳ್ಳಿಗಳಲ್ಲಿ ಊರ ಹೊರಗೆ ವಾಸಿಸುತ್ತಿದ್ದರೆ, ನಗರ ಪ್ರದೇಶಗಳಲ್ಲಿ ಕೊಳೆಗೇರಿಗಳ ನಿವಾಸಿಗಳಾಗಿದ್ದಾರೆ.ಆದರೆ ಹಿಂದೂಗಳ ರಾಷ್ಟ್ರೀಯ ಪಕ್ಷ ಎಂದೇ ಗುರುತಿಸಿಕೊಂಡಿರುವ ಭಾರತೀಯ ಜನತಾ ಪಕ್ಷ ಕೂಡಾ ಈ ದೇಶದ ಜಾತಿ ವ್ಯವಸ್ಥೆಯ ವಿರುದ್ಧ ಕಿಡಿ ಕಾರಿದ್ದನ್ನು ನಾನಂತೂ ಕಂಡಿಲ್ಲ, ಕೇಳಿಲ್ಲ. ಈ ಪಕ್ಷ ಯಾವತ್ತೂ ರಾಜಕೀಯ ಚಟುವಟಿಕೆಗಳಲ್ಲಿಯೇ ತನ್ನನ್ನು ತೊಡಗಿಸಿಕೊಂಡಿದೆ. ಸಾಮಾಜಿಕ ಸುಧಾರಣೆ ಬಗ್ಗೆ ಅದಂತೂ ಯಾವತ್ತೂ ಗಮನಹರಿಸಿಲ್ಲ, ಬಿಡಿ. ಬ್ರಾಹ್ಮಣ ಸಮುದಾಯದವರನ್ನೇ ಹೆಚ್ಚಿಗೆ ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉನ್ನತ ಮಟ್ಟದ ಸಮಿತಿ ಹೇಳುವುದೇ ಬಿಜೆಪಿಗೆ ವೇದವಾಕ್ಯವಾಗಿರುವಾಗ ಆ ಪಕ್ಷದಿಂದ ಈ ನಿಟ್ಟಿನಲ್ಲಿ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ, ಅಲ್ಲವೇ?ದುರದೃಷ್ಟವೆಂದರೆ ಈ ದೇಶದ ಮುಸ್ಲಿಮರು ಮತ್ತು ಕ್ರೈಸ್ತರ ಆಲೋಚನೆಯೊಳಗೂ ಜಾತೀಯತೆಯ ಸೋಂಕು ತಾಗಿದೆ. ಈ ಎರಡೂ ಮತಗಳ ಮೂಲಧಾತುವೇ ಸಮಾನತೆ. ಎರಡೂ ಧರ್ಮಗಳು ಸಮಾನತೆಯ ಬದುಕಿನ ಬಗ್ಗೆಯೇ ಹೆಚ್ಚು ಬೋಧಿಸುತ್ತವೆ. ಆದರೆ ವಾಸ್ತವಕ್ಕೆ ಬಂದಾಗ ಆ ಸಮುದಾಯದ ಮಂದಿಯೂ ಹಿಂದೂಗಳಂತೆಯೇ ವರ್ತಿಸುವುದನ್ನು ಕಂಡಿದ್ದೇನೆ. ಹಿಂದೂ ಧರ್ಮದೊಳಗಿನ ಜಾತಿಯ ಪಿಡುಗಿನಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಗಳಿಗೆ ಮತಾಂತರಗೊಂಡವರನ್ನು ಈ ಎರಡೂ ಸಮುದಾಯಗಳ ಮಂದಿ ತೀರಾ ಕಡೆಗಣಿಸಿ ನೋಡುವುದೂ ಇದೆ.ಈ ಸಂದರ್ಭದಲ್ಲಿ ಮಾಯಾವತಿಯವರ ಧೋರಣೆ ಬಗ್ಗೆಯೂ ಯೋಚಿಸುವಂತಹದ್ದೇ ಆಗಿದೆ. ಇವರು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದವರು. ಇವರು ತಮ್ಮ ಹೋರಾಟದ ಮೂಲಕವೇ ಜನಮನ್ನಣೆ ಗಳಿಸಿ ಎತ್ತರಕ್ಕೇರಿದವರು. ಕೆಲವೊಮ್ಮೆ ಇವರು ಅತಿರೇಕದ ನಿಲುವುಗಳನ್ನೂ ತೆಗೆದುಕೊಂಡು ಬಿಡುತ್ತಾರೆ. ಸರ್ಕಾರಿ ಅಧಿಕಾರಿಗಳು ಅಥವಾ ನೌಕರ ವರ್ಗದಲ್ಲಿ ಬಡ್ತಿ ನೀಡುವಾಗ ಮೀಸಲಾತಿ ನಿಯಮವನ್ನು ಅನುಸರಿಸಬೇಕೆಂದು ಘೋಷಿಸಿದ್ದಾರೆ. ಇದು ದೇಶದಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದೆ. ನನ್ನ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿ ನೌಕರಿಗೆ ಸೇರುವಾಗ ಮೀಸಲಾತಿ ನೀಡಿದರೆ ಸಾಕು. ಸೇವೆಯಲ್ಲಿರುವವರಿಗೆ ಬಡ್ತಿ ನೀಡುವಾಗ ಮೀಸಲಾತಿಯನ್ನು ಅನುಸರಿಸಿದರೆ, ಮೀಸಲಾತಿ ಸಿಗದ ಇತರ ಜಾತಿಯ ಮಂದಿ ಅಸಮಾಧಾನಗೊಳ್ಳಬಹುದು. ಸ್ಪರ್ಧಾತ್ಮಕ ಕಠಿಣ ಪರೀಕ್ಷೆಗಳ ಮೂಲಕ ಹಾದು ಬಂದು ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿರುವವರ ಸ್ಥೈರ್ಯವನ್ನು ಇದು ಕುಸಿಯುವಂತೆ ಮಾಡಿದರೂ ಅಚ್ಚರಿ ಏನಿಲ್ಲ.ದಲಿತರೂ ಅತ್ಯಂತ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಗೆದ್ದು, ಇತರರಿಗೆ ಸರಿಸಮಾನರಾಗಿಯೇ ಅಧಿಕಾರಶಾಹಿಯ ಒಳಗೆ ಕಾಲಿಟ್ಟಿರುತ್ತಾರೆ. ಆದರೆ ಆ ವೇಳೆಗೆ ಮೀಸಲಾತಿಯೂ ಅವರಿಗೆ ಒಂದಷ್ಟು ನೆರವು ನೀಡಿರುತ್ತದೆ ಎನ್ನುವುದೂ ಸತ್ಯ.ಅದೇನೇ ಇದ್ದರೂ, ಇದೀಗ ಕಾಂಗ್ರೆಸ್ ಮತ್ತು ಬಿಜೆಪಿಯೂ ಮಾಯಾವತಿಯವರ ಈ ನಿಲುವನ್ನು ಬೆಂಬಲಿಸಿವೆ. ಏಕೆಂದರೆ ಈ ಎರಡೂ ಪಕ್ಷಗಳು ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೇಲೆ ಕಣ್ಣಿಟ್ಟಿವೆ ಎನ್ನುವುದು ವಾಸ್ತವ. ದೇಶದಲ್ಲಿ ಮೀಸಲಾತಿಯ ಪ್ರಮಾಣ ಇದೀಗ ಏರಿದೆ. ಏಕೆಂದರೆ ಇತರೇ ಹಿಂದುಳಿದ ವರ್ಗ (ಒಬಿಸಿ)ದವರಿಗೂ ಮೀಸಲಾತಿಯನ್ನು ವಿಸ್ತರಿಸಲಾಗಿದೆ. ಒಬಿಸಿ ಮಂದಿ ಕೂಡಾ ಮುಂದಿನ ದಿನಗಳಲ್ಲಿ ಬಡ್ತಿಯ ಸಂದರ್ಭದಲ್ಲಿ ಮೀಸಲಾತಿ ನಿಯಮವನ್ನು ಅನುಸರಿಸಬೇಕೆಂಬ ಬೇಡಿಕೆ ಒಡ್ಡಬಹುದಲ್ಲವೇ. ಇನ್ನೂ ಹಲವು ವರ್ಗ, ಸಮುದಾಯದವರೂ ಇದೇ ತೆರನಾದ ಬೇಡಿಕೆಯನ್ನು ಮುಂದಿಡಬಹುದು. ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಇಂತಹದ್ದೆಲ್ಲಾ ಸಾಧ್ಯವಿಲ್ಲದ ಮಾತು. ಶೇಕಡ 49.5ರಷ್ಟು ಮೀಸಲಾತಿಯೇ ಗರಿಷ್ಠ ಪ್ರಮಾಣದ್ದು ಎಂದು ಕೋರ್ಟ್ ಈಗಾಗಲೇ ನಿಗದಿಪಡಿಸಿದೆ. ಒಂದು ವೇಳೆ ಮಾಯಾವತಿಯವರು ಅಪೇಕ್ಷಿಸುತ್ತಿರುವಂತೆ ಸಂಸತ್ತಿನಲ್ಲಿ ತಿದ್ದುಪಡಿಗೆ ಒಪ್ಪಿಗೆ ಪಡೆದರೂ, ಅದನ್ನು `ಸಂವಿಧಾನಬಾಹಿರ' ಎಂದು ಸುಪ್ರೀಂ ಕೋರ್ಟ್ ಪರಿಗಣಿಸಲೂಬಹುದು.ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಈಗಾಗಲೇ ಮಸೂದೆ ಮಂಡಿಸಲಾಗಿದ್ದು, ರಾಜ್ಯಸಭೆಯಲ್ಲಂತೂ ಒಪ್ಪಿಗೆ ಪಡೆದಾಗಿದೆ. ಆದರೆ ಅಲ್ಲಿ, ಒಬಿಸಿಗಳ ಪಕ್ಷವೆಂದೇ ಪರಿಗಣಿಸಲಾಗಿರುವ ಸಮಾಜವಾದಿ ಪಕ್ಷ ಈ ತಿದ್ದುಪಡಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ಬಹುಮತವಿಲ್ಲ, ನಿಜ. ಆದರೆ ಯಾವುದೇ ತಿದ್ದುಪಡಿಯ ವಿರುದ್ಧ ಸದಸ್ಯರ ಸಂಖ್ಯೆಯನ್ನು ಹೆಚ್ಚು ಹೊಂದಿಸಿಕೊಂಡು ಬಹುಮತ ಪಡೆಯಲು ಇವತ್ತಿಗೂ ಕಾಂಗ್ರೆಸ್ ಸಮರ್ಥವಾಗಿದೆ.ಸಂವಿಧಾನದಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದ ಮಂದಿಗೆ ಮೀಸಲಾತಿ ನೀಡಬೇಕೆಂದು ಬಹಳ ಸ್ಪಷ್ಟವಾಗಿ ಹೇಳಿದೆ. ಆದರೆ ಇವತ್ತು ದಲಿತರಲ್ಲಿರುವ `ಕೆನೆಪದರ' ವರ್ಗವೇ ಮೀಸಲಾತಿ ಸೌಲಭ್ಯಗಳನ್ನು ಹೆಚ್ಚಾಗಿ ಬಾಚಿಕೊಳ್ಳುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಹಿಂದೊಮ್ಮೆ ಬೆಟ್ಟು ಮಾಡಿ ತೋರಿಸಿದೆ. ಇತರೇ ಹಿಂದುಳಿದ ವರ್ಗಗಳಲ್ಲಿಯೂ ಇದೇ ರೀತಿ ಆಗಿದೆ. ಹೀಗಾಗಿ ಈ ಎರಡೂ ಸಮುದಾಯದ ಕೆಳವರ್ಗಕ್ಕೂ ಮೀಸಲಾತಿ ಸೌಲಭ್ಯ ಸಿಗುವಂತೆ ಮಾಡಬೇಕಾದುದು ಎರಡೂ ಸಮುದಾಯಗಳ ಜಾಗೃತ ಮಂದಿಯ ಜವಾಬ್ದಾರಿಯಾಗಿದೆ.ಕಾನೂನಿಗೆ ಸಂಬಂಧಿಸಿದಂತೆ ನನ್ನ ತಿಳಿವಳಿಕೆ ಉನ್ನತ ಮಟ್ಟದ್ದೇನಲ್ಲ. ಆದರೂ ಜನಗಣತಿಯ ವೇಳೆ ಸ್ವಯಂ ಸೇವಕರು ಸಂಬಂಧಪಟ್ಟ ವ್ಯಕ್ತಿಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಭರ್ತಿ ಮಾಡುವಾಗ ಜಾತಿಯನ್ನು ಕೇಳುವುದು ಸಂವಿಧಾನಕ್ಕೆ ವಿರುದ್ಧ ಎಂದುಕೊಂಡಿದ್ದೇನೆ. ಇದು ಸಂವಿಧಾನದ ಮೂಲತತ್ವವನ್ನೇ ಉಲ್ಲಂಘಿಸಿದಂತಾಗುವುದಿಲ್ಲವೇ? ಜಾತಿ ಆಧಾರದ ಮೇಲೆ ಆರ್ಥಿಕ ಸೌಲಭ್ಯಗಳನ್ನು ವಿತರಿಸಲಾಗುವುದು. ಇದೂ ಸಂವಿಧಾನದ ಮುಖ್ಯ ಅಂಶಗಳನ್ನೇ ಕಡೆಗಣಿಸಿದಂತಾಗುವುದಿಲ್ಲವೇ? ಸಂವಿಧಾನದಲ್ಲಿ ಭಾರತವನ್ನು ಸಮಾಜವಾದ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದೆನ್ನಲಾಗಿದೆ ತಾನೆ. ಹೀಗಾಗಿ ಪ್ರಜಾಪ್ರಭುತ್ವ ಮತ್ತು ತಾರತಮ್ಯ ಧೋರಣೆ ಜತೆಜತೆಯಾಗಿ ಒಂದೇ ದಿಕ್ಕಿನಲ್ಲಿ ನಡೆಯಲು ಸಾಧ್ಯವೇ ಇಲ್ಲ.ನಾನು ಕೇಶವಾನಂದ ಭಾರತಿ ಪ್ರಕರಣವನ್ನು ಗಮನಿಸಿದಂತೆ, ಸುಪ್ರೀಂ ಕೋರ್ಟ್, `ಜನರಿಂದ ನೇರವಾಗಿ ಸಂಸದರು ಆಯ್ಕೆಯಾಗಿರಬಹುದು. ಇವರಲ್ಲಿ ಬಹುಸಂಖ್ಯಾತ ಸಂಸದರು ಒಂದು ನಿರ್ಧಾರಕ್ಕೆ ಬರಬಹುದು. ಆದರೆ ಅದು ಸಂವಿಧಾನ ವಿರೋಧಿ ಎನಿಸಿದರೆ ಸುಪ್ರೀಂ ಕೋರ್ಟ್ ಅಂತಹ ನಿರ್ಧಾರವನ್ನು ಕಡೆಗಣಿಸಬಹುದಾಗಿದೆ' ಎಂದು ಹೇಳಿದೆ. ಹೀಗಾಗಿ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವಂತಹ ಯಾವುದೇ ತಿದ್ದುಪಡಿಯನ್ನೂ ಸುಪ್ರೀಂ ಕೋರ್ಟ್ ಒಪ್ಪದಿರಬಹುದು.ಬಡ್ತಿಗೆ ಸಂಬಂಧಿಸಿದ ವಿಷಯದಲ್ಲಿ ಮೀಸಲಾತಿ ತರುವಂತಹ ಸಂಗತಿಯು ನೌಕರಶಾಹಿ ಮೇಲೆ ಯಾವ ತೆರನಾದ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸರ್ಕಾರ ಕಿಂಚಿತ್ತೂ ಯೋಚಿಸದಿರುವುದು ಅಚ್ಚರಿ ಮೂಡಿಸುವಂತಿದೆ. ಸುಮಾರು ಒಂದೂವರೆ ಶತಮಾನದ ಕಾಲ ಈ ದೇಶವನ್ನು ತಮ್ಮ ಬಿಗಿ ಮುಷ್ಟಿಯಲ್ಲಿರಿಸಿಕೊಂಡಿದ್ದ ಬ್ರಿಟಿಷರು ಸದಾ ಒಡೆದು ಆಳುವ ನೀತಿಯನ್ನೇ ಅನುಸರಿಸಿಕೊಂಡು ಬಂದಿದ್ದರು. ಇಂತಹ ಚಾರಿತ್ರಿಕ ಅಂಶಗಳು ನಮ್ಮ ಜನರಿಗೆ ಗೊತ್ತಿಲ್ಲವೆಂದೇನಲ್ಲ. ಇದೀಗ ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವಾಗ ರಾಷ್ಟ್ರೀಯ ಭಾವೈಕ್ಯ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆಯಬೇಕಿದೆ. ಜಾತಿಯ ಸಮಸ್ಯೆ ಬಹಳ ಸಂಕೀರ್ಣವಾದುದು. ಈ ಸಮಸ್ಯೆಗೆ ಸಂಬಂಧಿಸಿದಂತೆ ಏನೇ ಮಾಡಲು ಹೊರಟರೂ ಅದು ಇಡೀ ದೇಶದ ಒಡಲಿನ ಒಳಗೆ ತಳಮಳ ಉಂಟು ಮಾಡುವಂತಹದ್ದಾಗಿರುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ. ದೇಶವನ್ನು ನಾವು ಶತಮಾನಗಳ ಹಿಂದಕ್ಕೆ ಕೊಂಡೊಯ್ಯಬೇಕಿಲ್ಲ. ಅಮೆರಿಕದಲ್ಲಿ ಕಪ್ಪು ಜನರ ಏಳಿಗೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳು ನಮ್ಮ ಮೀಸಲಾತಿಗಿಂತಲೂ ಉತ್ತಮ ಫಲವನ್ನೇ ನೀಡಿವೆ ಎನ್ನಬಹುದೇನೋ? ಅದೇನೇ ಇರಲಿ, ಈ ನಾಡು ಕಂಡ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ನಾಡಿನ ಸಂವಿಧಾನವನ್ನು ರೂಪಿಸಿದರು. ಅವರು ಆಗ ಮೀಸಲಾತಿಯನ್ನು ಹತ್ತು ವರ್ಷಗಳಿಗೆ ಎಂದು ಮಿತಿಗೊಳಿಸಿದ್ದರು, ನಿಜ. ಆದರೆ ಈಗ ಅರ್ಧ ಶತಮಾನಕ್ಕೂ ಹೆಚ್ಚು ಅವಧಿ ಉರುಳಿದೆ. ದಲಿತರ ಸ್ಥಿತಿಗತಿ ಸುಧಾರಿಸಿದೆಯೇ?ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry