ದಸ್ತಗಿರಿ ಮಾಡಿದ್ದಕ್ಕೆ ಚಾರಿತ್ರ್ಯವಧೆಯ ಹುನ್ನಾರ

7

ದಸ್ತಗಿರಿ ಮಾಡಿದ್ದಕ್ಕೆ ಚಾರಿತ್ರ್ಯವಧೆಯ ಹುನ್ನಾರ

Published:
Updated:

ವೃತ್ತಿಮಾತ್ಸರ್ಯ ಪೊಲೀಸ್ ಇಲಾಖೆಯವರನ್ನು ಸಾಕಷ್ಟು ಕಾಡಿದೆ. ಕೆಲವರು ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳುವುದುಂಟು. ತಮ್ಮ ಆಪ್ತರು, ತಮ್ಮದೇ ಜಾತಿಯ ಪತ್ರಕರ್ತರ ಸಹಾಯ ಪಡೆದುಕೊಂಡು ಅಧಿಕಾರಿಗಳನ್ನು ಕುಗ್ಗಿಸುವ ಯತ್ನ ಮಾಡಿರುವ ಅನೇಕರಿದ್ದಾರೆ. ಅಂಥದ್ದೇ ಒಂದು ಘಟನೆ ನನ್ನ ವೃತ್ತಿಬದುಕಿನಲ್ಲೂ ನಡೆಯಿತು.ಅಶೋಕನಗರ ಠಾಣೆಯಲ್ಲಿ ನಾನು ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭ. ರಾಷ್ಟ್ರೀಯ ಪಕ್ಷವೊಂದರ ಹಿಂದುಳಿದ ವರ್ಗದವರ ಸಂಘಟನೆಯ ಅಧ್ಯಕ್ಷನನ್ನು ಬಂಧಿಸಲು ಒಮ್ಮೆ ವಾರೆಂಟ್ ಬಂತು. ಭೂವ್ಯವಹಾರದಲ್ಲಿ ಆತ ಬಿಲ್ಡರ್ ಒಬ್ಬರಿಗೆ 50 ಲಕ್ಷ ರೂಪಾಯಿ ಮೋಸ ಮಾಡಿದ್ದರು. ಭೂ ಪರಿವರ್ತನೆ ಮಾಡಿಸಿ ಕೊಡುವುದಾಗಿ ಹಣ ಪಡೆದು, ಕೆಲಸ ಮಾಡಿಕೊಟ್ಟಿರಲಿಲ್ಲ. ಹಣಕ್ಕೆ ಬದಲಾಗಿ ಚೆಕ್ ಕೊಟ್ಟಿದ್ದರೂ ಅದು ಬೌನ್ಸ್ ಆಗಿತ್ತು. `ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಆಕ್ಟ್~ ಪ್ರಕಾರ ಅದು ನ್ಯಾಯಾಲಯದಲ್ಲಿ ನೇರವಾಗಿ ತೀರ್ಮಾನವಾಗಬೇಕಾದ ಪ್ರಕರಣ. ಅಂತೆಯೇ ನ್ಯಾಯಾಲಯ ಸಮನ್ಸ್ ಜಾರಿಮಾಡಿದಾಗ ಚೆಕ್ ಕೊಟ್ಟಿದ್ದ ವ್ಯಕ್ತಿ ಅದಕ್ಕೆ ಗೌರವ ಕೊಡಲಿಲ್ಲ. ಸಂಪೂರ್ಣವಾಗಿ ಸಮನ್ಸ್ ನಿರ್ಲಕ್ಷಿಸಿದರು. ನ್ಯಾಯಾಲಯಕ್ಕೆ ಕೂಡ ಹೋಗಲಿಲ್ಲ. ನ್ಯಾಯಾಲಯ ಅವರಿಗೆ ವಾರೆಂಟ್ ಜಾರಿಮಾಡಿತು. ಅದಕ್ಕೂ ಆ ವ್ಯಕ್ತಿ ಬೆಲೆ ಕೊಡಲಿಲ್ಲ. ಕೊನೆಗೆ ಮ್ಯಾಜಿಸ್ಟ್ರೇಟರು, ಜಾಮೀನು ರಹಿತ ವಾರೆಂಟ್ ಇದ್ದರೂ ಅವನನ್ನು ಯಾಕೆ ಬಂಧಿಸಿಲ್ಲ ಎಂದು ಕರೆಸಿ ಕೇಳಿದರು. ಬಲಿಷ್ಠರ ಮೇಲೆ ಸಮನ್ಸ್, ವಾರೆಂಟ್‌ಗಳು ಜಾರಿಯಾಗದೇ ಇದ್ದರೆ ವ್ಯವಸ್ಥೆಯ ಮೇಲೆ ನಂಬಿಕೆ ಜನರಿಗೆ ಹೊರಟುಹೋಗುತ್ತದೆ. ಹಾಗಾದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳ ಗೌರವ ಕುಗ್ಗುತ್ತದೆಂಬುದು ನನ್ನ ಅಭಿಪ್ರಾಯವೂ ಆಗಿತ್ತು. ಮ್ಯಾಜಿಸ್ಟ್ರೇಟರ ಮಾತನ್ನು ನಾನು ಗಂಭೀರವಾಗಿ ಪರಿಗಣಿಸಿದೆ. ಮೋಸ ಮಾಡಿದ್ದ ವ್ಯಕ್ತಿಯ ಮನೆಗೆ ನನ್ನ ಠಾಣೆಯ ಕೆಲವು ಪೊಲೀಸರನ್ನು ಕಳುಹಿಸಿದೆ.ಪೊಲೀಸರು ಅವರ ಮನೆಗೆ ಹೋದರು. ಆದರೆ, ಆ ವ್ಯಕ್ತಿ ಪೊಲೀಸರನ್ನು ಹೀನಾಮಾನವಾಗಿ ಬೈದರು. ತಮ್ಮ ಕಾಲೇಜು ಸಹಪಾಠಿಯೇ ಐಜಿಪಿಯೆಂದೂ ತಮಗೆ ಇಂತಿಂಥ ಅಧಿಕಾರಿಗಳು ಗೊತ್ತೆಂದೂ ದಬಾಯಿಸಿದರು. ಅಷ್ಟೇ ಅಲ್ಲದೆ ಕೆಲವು ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡಿ, ಅವರ ಜೊತೆ ಮಾತನಾಡುವಂತೆ ಅಲ್ಲಿಗೆ ಹೋಗಿದ್ದ ಪೊಲೀಸರಿಗೆ ತಾಕೀತು ಮಾಡಿದರು. ಅಧಿಕಾರಿಗಳೇ ಫೋನ್‌ನಲ್ಲಿ ಆ ವ್ಯಕ್ತಿಯ ಪರವಾಗಿ ಮಾತನಾಡಿದ್ದರಿಂದ ಕಂಗಾಲಾಗಿ ಅವರು ವಾಪಸ್ ಬಂದರು.ಇದು ಯಾಕೋ ಅತಿ ಎನ್ನಿಸಿತು. ಆ ವ್ಯಕ್ತಿಯನ್ನು ದಸ್ತಗಿರಿ ಮಾಡಲು ಹೋಗಿದ್ದ ನಮ್ಮ ಠಾಣೆಯ ಪೊಲೀಸರ ಜೊತೆ ಫೋನ್‌ನಲ್ಲಿ ಮಾತನಾಡಿದ್ದ ಅಧಿಕಾರಿಗಳಿಗೂ ನಾನು ನೇರವಾಗಿ ಇರುವ ವಿಷಯ ತಿಳಿಸಿದೆ. ಅವರಿಗೆ ತಮ್ಮ ವಕೀಲರನ್ನಾದರೂ ಕಳಿಸಿ ವಾರೆಂಟ್ ವಾಪಸ್ ತೆಗೆದುಕೊಳ್ಳಲು ಹೇಳಿ ಎಂದೆ. ವಾರೆಂಟ್ ವಾಪಸ್ ಪಡೆಯುವಂತೆ ಮಾಡಿ ಮತ್ತೆ ಪ್ರಕರಣ `ರಿಕಾಲ್~ ಮಾಡಿಸುವುದು ಸಾಧ್ಯವಿದೆ. ಆದರೆ, ಆ ವ್ಯಕ್ತಿ ನನ್ನ ಈ ಸಲಹೆಗೂ ಮಣಿಯಲಿಲ್ಲ.ಮತ್ತೊಮ್ಮೆ ನಮ್ಮ ಠಾಣೆಯ ಪೊಲೀಸರನ್ನು ಆತನ ಮನೆಗೆ ಕಳುಹಿಸಿದೆ. ಮಧ್ಯಾಹ್ನ ನಾನು ಮನೆಗೆ ಊಟಕ್ಕೆ ಬಂದಿದ್ದೆ. ಎರಡೂವರೆ ಗಂಟೆ ಸಮಯದಲ್ಲಿ ಅಲ್ಲಿಗೆ ಹೋಗಿದ್ದ ಪೊಲೀಸರು ಫೋನ್ ಮಾಡಿದರು. ಎರಡು ನಾಯಿಗಳನ್ನು ಅವರ ಮೇಲೆ ಬಿಟ್ಟು, ಆತ ನಿಕೃಷ್ಟವಾಗಿ ಮಾತಾಡಿದ್ದರು. ನನಗೆ ಇದು ಅತಿರೇಕಕ್ಕೆ ಹೋಗುತ್ತಿದೆ ಎನ್ನಿಸಿ ಖಡಕ್ ಆಗಿದ್ದ ನಮ್ಮ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಇನ್ನೊಬ್ಬ ಧೈರ್ಯಶಾಲಿ ಪೊಲೀಸರನ್ನು ಕಳುಹಿಸಿದೆ. ಅವರನ್ನೂ ಹಿಗ್ಗಾಮುಗ್ಗಾ ಬೈದು, `ಅವನ್ಯಾರು ಇನ್ಸ್‌ಪೆಕ್ಟರ್ ನಿಮ್ಮನ್ನು ಕಳುಹಿಸಿರುವುದು~ ಎಂದು ದಬಾಯಿಸಿದರಂತೆ.ನನಗೂ ಆ ವ್ಯಕ್ತಿಯ ಪರಿಚಯವಿತ್ತು. ಫೋನ್ ಮೂಲಕ ನ್ಯಾಯಾಲಯದಲ್ಲಿ ಪ್ರಕರಣವನ್ನು `ರಿಕಾಲ್~ ಮಾಡಿಸಿ ಎಂದು ಪರಿಪರಿಯಾಗಿ ಹೇಳಿದೆ. ನನಗೂ ಉಚಾಯಿಸಿ ಮಾತನಾಡಿದರು. ಕೊನೆಗೆ ದಸ್ತಗಿರಿ ಮಾಡುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದೆ. ಮಧ್ಯಾಹ್ನ ಮೂರು ಗಂಟೆ ಸಮಯ. ಅವರನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಅವರ ವಕೀಲರ ಹತ್ತಿರ ಹೇಳಿದೆ.ದಸ್ತಗಿರಿ ಮಾಡುವುದು ಬೇಡ ಎಂದು ವಕೀಲರು ಒತ್ತಡ ಹಾಕತೊಡಗಿದರು. ಆಗ ಆ ವಕೀಲರಿಗೂ ನನಗೂ ಮಾತಾಯಿತು. ನಾನು ಯಾವ ಒತ್ತಡಕ್ಕೂ ಮಣಿಯದೆ ನನ್ನ ಠಾಣೆಯ ಪೊಲೀಸರ ಮೂಲಕ ಮ್ಯಾಜಿಸ್ಟ್ರೇಟರ ಎದುರು ಹಾಜರುಪಡಿಸಲು ಕರೆದುಕೊಂಡು ಹೋದೆ.ಮ್ಯಾಜಿಸ್ಟ್ರೇಟರು ಬಂದರು. ಆ ವ್ಯಕ್ತಿಯ ಉದ್ಧಟತನ, ನ್ಯಾಯಾಲಯದಲ್ಲಿ ನಡೆದುಕೊಂಡ ರೀತಿ, ಹಾವಭಾವ ಎಲ್ಲವನ್ನೂ ಗಮನಿಸಿ ಅವರು ನ್ಯಾಯಾಂಗ ಬಂಧನಕ್ಕೆಂದು ಆತನನ್ನು ಜೈಲಿಗೆ ಕಳುಹಿಸಿದರು. ಎರಡು ಮೂರು ದಿನ ಜೈಲಿನಲ್ಲಿದ್ದು, ಬಿಡುಗಡೆಯಾದರು. ಪಟ್ಟಭದ್ರ ಹಿತಾಸಕ್ತಿಗಳು ಬೇಕೆಂದೇ ತಮ್ಮ ಬಂಧನಕ್ಕೆ ಕಾರಣವಾದವು ಎಂದು ಆ ವ್ಯಕ್ತಿ ಒಂದು ಸುದ್ದಿಗೋಷ್ಠಿ ನಡೆಸಿ ಹೇಳಿದರು.ಟ್ಯಾಬ್ಲಾಯ್ಡ ಒಂದರಲ್ಲಿ ಇದ್ದಕ್ಕಿದ್ದಂತೆ ಒಂದು ಲೇಖನ ಪ್ರಕಟವಾಯಿತು. ಬಿ.ಕೆ.ಶಿವರಾಂ ಎಂಬ ಪೊಲೀಸ್ ಗಾಂಧಿನಗರದಲ್ಲಿ ಒಂದು ದೊಡ್ಡ ಕಾಂಪ್ಲೆಕ್ಸ್ ಕಟ್ಟುತ್ತಿದ್ದಾರೆ. ಕುಖ್ಯಾತ ರೌಡಿಗಳು ಅದಕ್ಕೆ ಸಿಮೆಂಟು ಮತ್ತಿತರ ವಸ್ತುಗಳನ್ನು ಕೊಟ್ಟಿದ್ದಾರೆ ಎಂದು ಅದರಲ್ಲಿ ಬರೆಯಲಾಗಿತ್ತು. ನನಗೆ ಆಶ್ಚರ್ಯ, ಬೇಸರ ಎರಡೂ ಆಯಿತು. ನಾವೆಲ್ಲಾ ಅಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ಇಂಥ ಪ್ರತಿಫಲವೇ ಸಿಗುವುದು ಎಂದು ಪೇಚಾಡಿಕೊಂಡೆ. ನನಗೆ ಗೊತ್ತಿರುವವರಿಂದ ಯಾಕೆ ಹೀಗೆ ಬರೆದಿರಬಹುದು ಎಂದು ತಿಳಿಯಲೆತ್ನಿಸಿದೆ.ಟ್ಯಾಬ್ಲಾಯ್ಡ ಲೋಕದಲ್ಲಿ ನನ್ನನ್ನು ವಿರೋಧಿಸುತ್ತಿದ್ದವರು ಕೂಡ ಅಂಥ ಲೇಖನ ಪ್ರಕಟಿಸಲು ನಿರಾಕರಿಸಿದ್ದರಂತೆ. ಅದನ್ನು ಬರೆದವರನ್ನು ಸಂಪರ್ಕಿಸಲು ಎಷ್ಟು ಯತ್ನಿಸಿದರೂ ಅವರು ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಕನಿಷ್ಠ ಮಾತಿಗೂ ಸಿಗಲಿಲ್ಲ. ಕೊನೆಗೆ ನಾನು ಚೆಕ್ ಬೌನ್ಸ್ ಪ್ರಕರಣದಲ್ಲಿ ದಸ್ತಗಿರಿ ಮಾಡಿದ್ದ ವ್ಯಕ್ತಿಯೇ ಹುನ್ನಾರ ಮಾಡಿ ಈ ಲೇಖನ ಪ್ರಕಟಿಸಲು ಕುಮ್ಮಕ್ಕು ಕೊಟ್ಟಿದ್ದಾರೆ ಎಂಬ ಸಂಗತಿ ಗೊತ್ತಾಯಿತು.ನನ್ನ ಆಪ್ತರು ಸುಮ್ಮನೆ ಕೂರುವುದು ಸರಿಯಲ್ಲ ಎಂದು ಸಲಹೆ ಕೊಟ್ಟರು. ಹಾಗಾಗಿ ಆ ಲೇಖನ ಪ್ರಕಟಿಸಿದ ಟ್ಯಾಬ್ಲಾಯ್ಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದೆ. ಆ ಲೇಖನ ಬರೆದಿದ್ದವರು ಸಾಹಿತಿಯೂ ಆಗಿದ್ದರು. ನನ್ನ ಆಘಾತಕ್ಕೆ ಅದೂ ಒಂದು ಕಾರಣವಾಗಿತ್ತು. ನ್ಯಾಯಾಲಯದಲ್ಲಿ ನಾನು ದಾಖಲಿಸಿದ್ದ ಪ್ರಕರಣ ವಿಚಾರಣೆಗೆ ಬಂದ ಸಂದರ್ಭದಲ್ಲೇ ಅದೇ ಲೇಖಕರು ಇನ್ನೊಂದು ಪ್ರಕರಣದಲ್ಲಿ ಸಿಲುಕಿದ್ದರು.ಒಬ್ಬ ಐಎಎಸ್ ಅಧಿಕಾರಿ ವಿರುದ್ಧ ಅವರು ಬರೆದಿದ್ದ ಇನ್ನೊಂದು ಲೇಖನವೂ ಮಾನನಷ್ಟ ಮೊಕದ್ದಮೆಗೆ ಕಾರಣವಾಗಿತ್ತು. ಜುಲ್ಮಾನೆ, ಶಿಕ್ಷೆ ಎರಡೂ ಪ್ರಕಟವಾಗಿತ್ತು. ಜೈಲು ಶಿಕ್ಷೆ ಪ್ರಶ್ನಿಸಿ ಪತ್ರಿಕೆಯವರು ಹೈಕೋರ್ಟ್‌ನಲ್ಲಿ ಅಪೀಲು ಹೋಗಿದ್ದರು. ಏಕಕಾಲದಲ್ಲಿ ಮೇಲಿಂದ ಮೇಲೆ ಮಾನನಷ್ಟ ಪ್ರಕರಣಗಳನ್ನು ಒಬ್ಬ ಲೇಖಕ ಎದುರಿಸಿದರೆ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.ಅದನ್ನರಿತ ಆ ಹಿರಿಯ ವರದಿಗಾರರು ನನ್ನ ಬಳಿ ಬಂದು, ಆತುರದ ಬುದ್ಧಿಯಿಂದ ಹಾಗೆ ಬರೆದು ತಪ್ಪು ಮಾಡಿದ್ದಾಗಿ ಅಲವತ್ತುಕೊಂಡರು. ಪತ್ರಿಕೆಯಲ್ಲಿ ಅದುವರೆಗೆ ಯಾರಿಗೂ ರಿಜಾಯಿಂಡರ್ ಹಾಕಿರುವ ಉದಾಹರಣೆಯೇ ಇಲ್ಲ. ಆದರೆ, ತಮ್ಮ ವಿಷಯದಲ್ಲಿ ದೊಡ್ಡ ಸ್ಪಷ್ಟನೆ ಹಾಕುವುದಾಗಿ ಭರವಸೆ ಕೊಟ್ಟರು. ಟ್ಯಾಬ್ಲಾಯ್ಡಗಳಲ್ಲಿ ಕ್ರಾಂತಿ ಮಾಡಿದ್ದ ಆ ಪತ್ರಿಕೆಯಲ್ಲಿ ಸ್ಪಷ್ಟನೆ ಹಾಕುವುದು ಖಾತರಿಯಾಯಿತು. ಸ್ಪಷ್ಟನೆ ಹಾಕುವುದಾದರೆ ಕೇಸನ್ನು ವಾಪಸ್ ಪಡೆಯಲು ಸಿದ್ಧವೆಂದು ನಾನು ನ್ಯಾಯಾಲಯದಲ್ಲಿ ಒಪ್ಪಿದೆ.ಅಂತೆಯೇ ಆಯಿತು. ಸ್ಪಷ್ಟನೆಯೂ ಪ್ರಕಟವಾಯಿತು. ಕೇಸನ್ನು ನಾನು ವಾಪಸ್ ಪಡೆದೆ. ಯಾರದ್ದೋ ಮಾತು ಕೇಳಿಕೊಂಡು ತಪ್ಪಾಗಿ ಬರೆದದ್ದಕ್ಕೆ ಆ ಅನುಭವಿ ಪತ್ರಕರ್ತರು ಪೇಚಾಡಿಕೊಂಡರು.ಪೊಲೀಸರ ವಿರುದ್ಧ ವಂಚಕರು, ಮೋಸಗಾರರು ಎಂಥ ದೊಡ್ಡ ಮಟ್ಟದಲ್ಲಿ ಚಾರಿತ್ರ್ಯವಧೆಯ ಹುನ್ನಾರ ಹೂಡುತ್ತಾರೆ, ನೋಡಿ.

ಮುಂದಿನವಾರ: ಬೇಜವಾಬ್ದಾರಿ ವರದಿಗಾರಿಕೆಯಿಂದ ಆದ ತಪ್ಪು.

ಶಿವರಾಮ್ ಅವರ ಮೊಬೈಲ್ ಸಂಖ್ಯೆ: 9448313066

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry