ಗುರುವಾರ , ಡಿಸೆಂಬರ್ 5, 2019
20 °C

ದಿನಾ ಕೊಂದರೂ ಸಾಯದ ಗಾಂಧಿ

ನಾರಾಯಣ ಎ
Published:
Updated:
ದಿನಾ ಕೊಂದರೂ ಸಾಯದ ಗಾಂಧಿ

ವ್ಯಕ್ತಿಗಳು ಹೇಗೆ, ಎಲ್ಲಿ ಹುಟ್ಟಬೇಕು ಎನ್ನುವುದನ್ನು ನಿರ್ಣಯಿಸುವ ನಿಯಾಮಕ ಶಕ್ತಿಯೊಂದು ಇದ್ದದ್ದೇ ಆದರೆ ಅದು ತಾನು ಸೃಷ್ಟಿಕಾರ್ಯದಲ್ಲಿ ತೊಡಗಿರುವಾಗ ಒಂದು ಕ್ಷಣ ತೂಕಡಿಸಿರಬೇಕು. ಆ ತೂಕಡಿಕೆಯ ಫಲವಾಗಿ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಎಂಬ ವ್ಯಕ್ತಿ ಭಾರತದಲ್ಲಿ ಜನಿಸಿರಬೇಕು. ಯಾವ ಕಾಲಕ್ಕೋ ಎಲ್ಲಿಗೋ ಸಿದ್ಧವಾದ ಮಾದರಿಯೊಂದು ಸೃಷ್ಟಿಕರ್ತನ ಗಲಿಬಿಲಿಯಿಂದಾಗಿ ಭಾರತದ ಮಣ್ಣಿನಲ್ಲಿ ತಪ್ಪಾಗಿ ಉದಯಿಸಿತು ಅನ್ನಿಸುತ್ತದೆ. ಯಾಕೆಂದರೆ ಗಾಂಧಿಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಅರಗಿಸಿಕೊಳ್ಳಲು ಬೇಕಾದ ಸಿದ್ಧತೆ ಮತ್ತು ಪ್ರಬುದ್ಧತೆ ಭಾರತಕ್ಕೆ ಗಾಂಧೀಜಿ ಜೀವಿತಾವಧಿಯಲ್ಲಿ ಇರಲಿಲ್ಲ, ಈಗಲೂ ಅದು ಇದೆ ಎಂದು ಅನ್ನಿಸುವುದಿಲ್ಲ.

ಭಾರತಕ್ಕೆ ಗಾಂಧೀಜಿಯನ್ನು ಅರ್ಥೈಸಲು ಕಷ್ಟವಾಗಿ ಹೋದದ್ದು ಅವರು ಮಹಾತ್ಮರಾಗಿದ್ದರು ಎನ್ನುವ ಕಾರಣಕ್ಕಲ್ಲ. ಅವರು ಒಬ್ಬ ಮನುಷ್ಯರಾಗಿದ್ದರು ಎನ್ನುವ ಕಾರಣಕ್ಕೆ! ಜೀವನವಿಡೀ ರಾಜಕಾರಣದಲ್ಲಿದ್ದುಕೊಂಡೂ ಮನುಷ್ಯರಾಗಿಯೇ ಉಳಿದರು ಎನ್ನುವ ಕಾರಣಕ್ಕೆ ಮಹಾತ್ಮ ಎನ್ನುವ ಬಿರುದನ್ನು ಗಾಂಧಿಯವರಿಗೆ ಯಾರೋ ನೀಡಿದರು. ರಾಷ್ಟ್ರಪಿತ ಎನ್ನುವ ಬಿರುದನ್ನೂ ಅವರಿಗೆ ಯಾರೋ ನೀಡಿದರು. ಈಗ ಅವರನ್ನು ಮಹಾತ್ಮ, ರಾಷ್ಟ್ರಪಿತ ಮುಂತಾಗಿ ಕರೆಯುವಲ್ಲಿ ಹಲವರಿಗೆ ತಕರಾರಿದೆ. ಅಂತಹವರು, ಗಾಂಧಿಯವರಿಗೆ ಈ ಬಿರುದುಗಳನ್ನು ಯಾರು ನೀಡಿದರೋ ಅವರಲ್ಲಿ ತಮ್ಮ ಅಹವಾಲು ಮಂಡಿಸಬಹುದು. ಆದರೆ ಗಾಂಧೀಜಿ ಒಬ್ಬ ಮನುಷ್ಯ ಎಂದು ಒಪ್ಪಿಕೊಳ್ಳುವಲ್ಲಿ ತಕರಾರಿರುವರು ತಮ್ಮ ಎದೆ ಮುಟ್ಟಿ ನೋಡಿಕೊಳ್ಳಬೇಕು.

ಗಾಂಧೀಜಿ ಅಂದಿಗೂ ಇಂದಿಗೂ ಕಾಣಿಸುವುದು ಒಬ್ಬ ಅಪ್ಪಟ ಮನುಷ್ಯನಾಗಿ. ಗಾಂಧೀಜಿ ಪ್ರಕಟಿಸಿದ್ದು, ಪ್ರದರ್ಶಿಸಿದ್ದು ಕೇವಲ ಮನುಷ್ಯತ್ವವನ್ನು. ಗಾಂಧೀಜಿಯ ಮನುಷ್ಯತ್ವ ಈ ದೇಶದಲ್ಲಿ ಮಹಾತ್ಮತ್ವವಾಗಿ ಯಾಕೆ ಕಂಡಿತು ಮತ್ತು ಈಗಲೂ ಬಹುತೇಕರಿಗೆ ಅದು ಯಾಕೆ ಹಾಗೆ ಕಾಣಿಸುತ್ತದೆ ಎನ್ನುವುದು ಪ್ರಶ್ನೆ. ಅದಕ್ಕೆ ಉತ್ತರ ಇಷ್ಟೇ. ಯಾವುದು ವಿರಳವಾಗಿದೆಯೋ ಅದು ಯಾವತ್ತೂ ವಿಶೇಷವಾಗಿ ಕಾಣಿಸುತ್ತದೆ. ಅಪ್ಪಟ ಮನುಷ್ಯನೊಬ್ಬ ಈ ಮಣ್ಣಿನಲ್ಲಿ ಮಹಾತ್ಮನಾಗಿ ಕಾಣಿಸಿಕೊಂಡರೆ ಇಲ್ಲಿ ವಿರಳವಾಗಿ ಇದ್ದದ್ದು ಮತ್ತು ಇರುವುದು ಏನಾಗಿರಬಹುದು? ಇದು ಯೋಚಿಸಬೇಕಾದ ವಿಚಾರ.

ಗಾಂಧೀಜಿ ಪ್ರತಿಮೆಗೆ ಯಾರೇ ಬೇಕಾದರೂ ಕಲ್ಲೆಸೆಯಬಹುದು. ಅವರ ಕುರಿತು ಯಾರು ಏನು ಬೇಕಾದರೂ ಸಾರ್ವಜನಿಕವಾಗಿಯೇ ಹೇಳಿ ದಕ್ಕಿಸಿಕೊಳ್ಳಬಹುದು. ಗಾಂಧೀಜಿ ಇಲ್ಲೂ ಎಲ್ಲರಿಗಿಂತಲೂ ಭಿನ್ನ. ಇದು ಅವರ ಹೆಚ್ಚುಗಾರಿಕೆ. ಗಾಂಧಿಯವರನ್ನು ಕೊಂದದ್ದು ಲೇಸಾಯ್ತು ಅಂತ ಓರ್ವ ಹಿಂದೂ ಮೊನ್ನೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಹೇಳಿದ್ದು ವರದಿಯಾಗಿದೆ. ಗಾಂಧಿಯವರ ಬಗ್ಗೆ ಪಠ್ಯಪುಸ್ತಕದಲ್ಲಿರುವ ಪುಟ್ಟ ಪಾಠಕ್ಕಿಂತ ಆಚೆಗೆ ಏನೂ ಓದದ ಎಳೆಯ ಮಕ್ಕಳು ಕೂಡಾ ಈಗೀಗ ‘ಆ ಗಾಂಧಿ ಸರಿ ಇಲ್ಲ’ ಅಂತ ತೀರ್ಪು ನೀಡುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಒಬ್ಬಾಕೆ ಕಾಲೇಜು ಬಾಲಕಿ, ಗಾಂಧೀಜಿ ಕೈಗೊಂಡ ಎಲ್ಲಾ ನಿರ್ಧಾರಗಳಿಗೂ ಆಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಳೋ ಎನ್ನುವಂತೆ ಅವರ ತಪ್ಪುಗಳ ಕುರಿತು ದೇಶಭಕ್ತಿಯ ಭಾಷಣ ಬಿಗಿಯುತ್ತಾಳೆ. ಆಕೆ ಈಗ ಜಿಲ್ಲೆಯಲ್ಲಿ ಬಹು ಬೇಡಿಕೆ ಇರುವ ಭಾಷಣಗಾರ್ತಿ. ಈ ಎಳೆಯ ಮನಸ್ಸುಗಳ ಒಳಗೆ ಈ ರೀತಿ ಗಾಂಧಿ ದ್ವೇಷವನ್ನು ತುಂಬುವುದು ಎಂದರೆ ಅವರಲ್ಲಿ ಭಾರತೀಯ ಸಂಸ್ಕಾರ ಬೆಳೆಸುವುದು ಎಂದು ಬಹುಮಂದಿ ಹಿಂದೂ ತಂದೆ-ತಾಯಿಗಳು ಕಂಡುಕೊಂಡ ಹಾಗಿದೆ. ಅವರೆಂತಹ ಆತ್ಮಘಾತಕ ಕೆಲಸ ಮಾಡುತ್ತಿದ್ದಾರೆ ಎಂದು ಅವರಿಗೆ ಗೊತ್ತಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಂತೂ ಗಾಂಧಿ-ದ್ವೇಷ ಹರಡಲು ಒಂದು ವ್ಯವಸ್ಥಿತ ಕೀಲಾಲು ಅಥವಾ ಟ್ರಾಲ್‌ಗಳ ಪಡೆಯೇ ಇದೆ. ಗಾಂಧಿ ಎನ್ನುವ ಜೀವಿ ಈ ದೇಶದಲ್ಲಿ ಹುಟ್ಟಿದ್ದೇ ಈ ದೇಶದ ದುರದೃಷ್ಟ ಎಂದು ನಂಬಿಸಲು ಬೇಕಾದ ಸುಳ್ಳುಗಳನ್ನು, ಅರ್ಧ ಸತ್ಯಗಳನ್ನು ಜಾಲತಾಣಗಳಲ್ಲಿ ಸೇರಿಸುವುದು ಪರಮ ದೇಶ ಸೇವೆ ಎಂದು ಅವರೆಲ್ಲ ನಂಬಿದಂತಿದೆ. ಅವರ ಪ್ರಯತ್ನ ಫಲ ನೀಡಲಾರಂಭಿಸಿದೆ. ‘ಐಡಿಯಾ ಆಫ್ ಇಂಡಿಯಾ’ ಎಂಬ ಕೃತಿಯ ಮೂಲಕ ಗಮನಸೆಳೆದ ಪ್ರಖ್ಯಾತ ವಿದ್ವಾಂಸ ಪ್ರೊ. ಸುನಿಲ್ ಖಿಲ್ನಾನಿ ಇತ್ತೀಚೆಗೆ ‘ ಇಂಡಿಯಾ ಇನ್ 50 ಲೈವ್ಸ್’  (‘50 ಬದುಕುಗಳಲ್ಲಿ ಭಾರತ’ )ಎಂಬ ಪುಸ್ತಕ ಬರೆದಿದ್ದಾರೆ. ಆ 50 ಬದುಕುಗಳಲ್ಲಿ ಗಾಂಧಿಯವರದ್ದೂ ಒಂದು ಅಂತ ಬೇರೆ ಹೇಳಬೇಕಿಲ್ಲ. ಸುನಿಲ್ ಖಿಲ್ನಾನಿ ಗಾಂಧೀಜಿಯ ಬದುಕಿನ ಕಥನದ ಪ್ರಾರಂಭದಲ್ಲಿ ನೀಡಿದ ಒಂದು ಚಿತ್ರಣ ಮನುಷ್ಯ ಮಾತ್ರರನ್ನು ಬೆಚ್ಚಿ ಬೀಳಿಸುವಂತಿದೆ. ಗಾಂಧೀಜಿ ಕುರಿತಾದ ಚಲನಚಿತ್ರವೊಂದನ್ನು ನೋಡಲು ಹೋಗಿದ್ದಾಗ ಸ್ವತಃ ಖಿಲ್ನಾನಿ ಗುಜರಾತಿನ ಗಾಂಧಿನಗರದ ಸಿನಿಮಾ ಮಂದಿರದಲ್ಲಿ ಕಂಡ ದೃಶ್ಯದ ಚಿತ್ರಣವದು. ಸಿನಿಮಾದ ಕೊನೆಯಲ್ಲಿ ನಾತುರಾಂ ಗೋಡ್ಸೆ ಹಾರಿಸಿದ ಗುಂಡಿನೇಟಿಗೆ ಗಾಂಧೀಜಿ ನೆಲಕ್ಕುರುಳುವ ದೃಶ್ಯ ಪರದೆಯಲ್ಲಿ ಮೂಡಿ ಬರುತ್ತಿದ್ದಂತೆಯೇ ಸಿನಿಮಾ ನೋಡುತಿದ್ದ ಅಷ್ಟೂ ಮಂದಿಯೂ ಎದ್ದು ನಿಂತು ಹರ್ಷೋದ್ಗಾರ ಮಾಡುತ್ತಾ ಚಪ್ಪಾಳೆ ತಟ್ಟಿದರು ಎಂದು ಖಿಲ್ನಾನಿ ಬರೆಯುತ್ತಾರೆ.

ಗಾಂಧೀಜಿ ತನ್ನನ್ನು ತಾನು ಒಂದು ಧರ್ಮದ, ಒಂದು ವರ್ಗದ, ಒಂದು ಜಾತಿಯ ನೇತಾರನನ್ನಾಗಿ ರೂಪಿಸಿಕೊಂಡಿದ್ದರೆ ಗಾಂಧಿದ್ವೇಷದ ಈ ಬಹಿರಂಗ ಪ್ರದರ್ಶನ ರಕ್ತಪಾತಕ್ಕೆ ಕಾರಣವಾಗುತ್ತಿತ್ತು. ಜಾತಿ, ಧರ್ಮ ಮತ್ತು ವರ್ಗ ಇತ್ಯಾದಿಗಳನ್ನೆಲ್ಲಾ ಮೀರಿ, ಯಾರನ್ನೂ ದ್ವೇಷಿಸದೆ, ಎಲ್ಲರನ್ನೂ ಪ್ರೀತಿಸಿದ ಅಪ್ಪಟ ಮಾನವನಾಗಿ ಪ್ರಕಟಗೊಂಡ ಒಂದೇ ಕಾರಣಕ್ಕೆ ಈ ದೇಶದಲ್ಲಿ ಗಾಂಧಿ ದ್ವೇಷ ಹುಟ್ಟಿಕೊಂಡಿರುವುದು. ಆ ಕಾರಣದಿಂದಲೇ ಗಾಂಧಿಯ ಸಮರ್ಥನೆಗೆ ಯಾರೂ ಮುಂದಾಗದೆ ಇರುವುದು. ಆದುದರಿಂದ ಗಾಂಧಿ ದ್ವೇಷದ ಒಂದೊಂದು ಪ್ರಕಟಣೆಯೂ ಗಾಂಧಿಯ ಮಹಾನ್ ಚಾರಿತ್ರ್ಯವನ್ನು ಎತ್ತಿ ತೋರಿಸುತ್ತದೆ. ಅದೇ ವೇಳೆ ಅದು ಭಾರತದಲ್ಲಿ ಅಪ್ಪಟ ಮನುಷ್ಯನೊಬ್ಬನ ಸ್ಥಾನ ಏನು ಎನ್ನುವುದನ್ನು ಸಾರುತ್ತದೆ. ದಿನೇ ದಿನೇ ಭಾರತದಲ್ಲಿ ಹೆಚ್ಚುತ್ತಿರುವ ಗಾಂಧಿ ದ್ವೇಷ ಭಾರತ ಮೂಲಭೂತ ಮಾನವ ತತ್ವಗಳಿಂದ ಎಷ್ಟು ದೂರವಾಗುತ್ತಿದೆ ಎನ್ನುವುದರ ನಿದರ್ಶನ.

ಗಾಂಧಿ ದ್ವೇಷದಲ್ಲಿ ಮೇಲ್ಜಾತಿಯ ಹಿಂದೂಗಳು ಎಂದು ಕರೆಸಿಕೊಳ್ಳುವವರು ಮತ್ತು ದಲಿತರು ಎಂದು ಕರೆಸಿಕೊಳ್ಳುವವರು ವಿಲಕ್ಷಣವಾಗಿ ಒಂದಾಗುತ್ತಾರೆ. ಅದೆಷ್ಟು ಬಾರಿ ದೇಶ ವಿಭಜನೆಯ ಕುರಿತಾದ ಸಂಕೀರ್ಣ ಸತ್ಯಗಳನ್ನು ತೆರೆದಿರಿಸಿದರೂ ಮೇಲ್ವರ್ಗದವರು ಗಾಂಧೀಜಿ ಓರ್ವ ಮುಸ್ಲಿಂ ಪಕ್ಷಪಾತಿ ಎನ್ನುವ ಅಪಪ್ರಚಾರ ನಿಲ್ಲಿಸುವುದಿಲ್ಲ. ದೇಶ ವಿಭಜನೆಯಾಗುವುದಕ್ಕೆ ಮೊದಲೇ, ಮುಸ್ಲಿಂ ಪ್ರಶ್ನೆ ದೊಡ್ಡದಾಗಿ ಮೂಡಿಬರುವುದಕ್ಕೆ ಮೊದಲೇ ಒಂದಲ್ಲ ಎರಡು ಬಾರಿ ಗಾಂಧೀಜಿಯ ಕೊಲೆ ಪ್ರಯತ್ನ ನಡೆದದ್ದು ಯಾಕೆ ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ಹಾಗೆಯೇ ಅದೆಷ್ಟು ಬಾರಿ ಜಾತಿ ವ್ಯವಸ್ಥೆಯ ಕುರಿತು ಗಾಂಧೀಜಿಯ ನಿಜ ನಿಲುವನ್ನು ವಿಶದೀಕರಿಸಿದರೂ ‘ಗಾಂಧಿ ಮೇಲ್ಜಾತಿಗಳ ಪಕ್ಷಪಾತಿ’ ಎನ್ನುವ ಆಪಾದನೆಯನ್ನು ದಲಿತರು ನಿಲ್ಲಿಸುವುದಿಲ್ಲ. ಗಾಂಧಿ ದ್ವೇಷವೇ ದೇಶಪ್ರೇಮ ಅಂತ ಮೇಲ್ವರ್ಗದ ಮಂದಿ ಚಿಂತಿಸಿದರೆ ಗಾಂಧಿ ದ್ವೇಷವೇ ತಮ್ಮ ಅಸ್ಮಿತೆ ಎಂದು ದಲಿತರು ಯೋಚಿಸುತ್ತಿರುವ ಹಾಗಿದೆ. ಒಟ್ಟಿನಲ್ಲಿ ಗಾಂಧಿಮುಕ್ತ ಭಾರತವನ್ನು ಕಟ್ಟಲು ನಡೆಯುತ್ತಿರುವ ಈ ಜಾತ್ಯತೀತ ಕರಸೇವೆಯು ಭಾರತವನ್ನು ಎಲ್ಲಿಗೆ ಒಯ್ಯಬಹುದು ಎನ್ನುವುದು ಈ ಕ್ಷಣ ನಮ್ಮನ್ನು ಕಾಡಬೇಕಾದ ಪ್ರಶ್ನೆ. ಬೆಳೆಯುತ್ತಿರುವ ತಲೆಮಾರಿನ ಮುಂದೆ ಸಾರ್ವತ್ರಿಕ ನೈತಿಕ ಮಾದರಿಗಳೇ ಇಲ್ಲದ ಒಂದು ದೇಶದಲ್ಲಿ ಇದ್ದ ಒಂದೇ ಒಂದು ಮಾದರಿಯನ್ನು ಈ ರೀತಿ ಕೆಡವಿದರ ಪರಿಣಾಮ ಈಗಾಗಲೇ ಕಾಣಿಸುತ್ತಿದೆ. ಹಾಲುಗಲ್ಲದ ಮಕ್ಕಳು ಒಂದೇ ಒಂದು ದಿನದ ರಜೆಗೋಸ್ಕರ ತಮ್ಮ ಸಹಪಾಠಿಗಳನ್ನೇ ಕೊಲೆ ಮಾಡುತ್ತಿರುವ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ಗಾಂಧಿಮುಕ್ತ ಭಾರತದ ಒಂದು ಝಲಕ್ ಅಷ್ಟೇ.

ಗಾಂಧೀಜಿ ಬಗ್ಗೆ ಇರುವ ಸದಭಿಪ್ರಾಯವನ್ನು ಭಾರತೀಯರ ಸಮಷ್ಟಿ ಪ್ರಜ್ಞೆಯಿಂದಲೇ ಅಳಿಸಿಬಿಡಬೇಕು ಎಂದು ಇಷ್ಟೆಲ್ಲಾ ಶ್ರಮಿಸಿಯೂ ಗಾಂಧಿಯವರನ್ನು ಬಿಟ್ಟಿರಲಾರದ ಭಾರತದ ತಾಕಲಾಟವನ್ನು ನೋಡಿ. ಒಂದೆಡೆ ತಮ್ಮ ಪಕ್ಷವನ್ನು ಬೆಂಬಲಿಸುವ ಕಾಲಾಳುಗಳು ಮತ್ತು ಕೀಲಾಲುಗಳು ಗಾಂಧಿಯವರ ವಿರುದ್ಧ ಕೀಳುಮಟ್ಟದ ಬೌದ್ಧಿಕ ಸಮರದಲ್ಲಿ ಮೈಮರೆತಿರುವಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತಮ್ಮ ನೆಚ್ಚಿನ ‘ಸ್ವಚ್ಛ ಭಾರತ್’ ಯೋಜನೆಯ ಲಾಂಛನಕ್ಕೆ ಗಾಂಧಿಯವರ ಕನ್ನಡಕದ ಚಿತ್ರವೇ ಬೇಕಾಗುತ್ತದೆ. ಮೊನ್ನೆ ಮೊನ್ನೆ ದಾವೋಸ್‌ನಲ್ಲಿ ಪ್ರಧಾನ ಮಂತ್ರಿ ಮಾಡಿದ ಯಶಸ್ವೀ ಭಾಷಣದಲ್ಲಿ ಒಂದಲ್ಲ ಎರಡು ಬಾರಿ ಅವರು ಗಾಂಧಿಯವರ ಬಗ್ಗೆ ಪ್ರಸ್ತಾಪಿಸುತ್ತಾರೆ. ಜಾಗತೀಕರಣಕ್ಕೆ ಎದುರಾಗಿರುವ ಹಿನ್ನಡೆಯನ್ನು ಪ್ರಶ್ನಿಸಲು ಮೋದಿಯವರಿಗೆ ಗಾಂಧಿಯವರ ಯೋಚನೆಗಳು ಬೇಕಾಯಿತು. ಜಾಗತಿಕ ಹವಾಮಾನ ವೈಪರೀತ್ಯದ ಬಗ್ಗೆ ಮಾತನಾಡುವಾಗಲೂ ಅವರಿಗೆ ಗಾಂಧಿಯವರ ಚಿಂತನೆಗಳೇ ಪ್ರಸ್ತುತವಾಗಿ ಕಂಡಿತು. ಯಾಕೆ?

ಮೋದಿ ಅವರು ದಾವೋಸ್‌ನಲ್ಲಿ ಭಾರತದ ಉದಾತ್ತ, ಮುಕ್ತ ಮಾನವೀಯ ಪರಂಪರೆಯ ಬಗ್ಗೆ ಮಾತನಾಡಿದರು. ಗ್ರಂಥದಲ್ಲಿ ಮಾತ್ರ ಕಾಣಿಸುವ ಆ ಪರಂಪರೆಗಳಿಗೆ ಲೌಕಿಕ ಬದುಕಿನಲ್ಲಿ ಜಗತ್ತು ಗುರುತಿಸುವ ಒಂದೇ ಒಂದು ಜೀವಂತ ನಿದರ್ಶನ ಅಂತ ಆಗಿಹೋಗಿದ್ದರೆ ಅದು ಗಾಂಧೀಜಿ ಮಾತ್ರ. ದಾವೋಸ್‌ನಲ್ಲಿ ಮೋದಿ ಹಿಂದಿಯಲ್ಲಿ ಮಾತನಾಡಿದರು. ಅಲ್ಲಿ ಸೇರಿದ್ದ ಜಾಗತಿಕ ನಾಯಕರು ಇಡೀ ಭಾಷಣದಲ್ಲಿ ಭಾಷಾಂತರವಿಲ್ಲದೆ ಅರ್ಥೈಸಿಕೊಂಡ ಒಂದೇ ಒಂದು ಪದ ಅಂತ ಇದ್ದರೆ ಅದು ಮಹಾತ್ಮ ಗಾಂಧಿ. ಅದು ತಿಳಿದೇ ಮೋದಿಯೂ ಗಾಂಧಿ ಮಂತ್ರ ಜಪಿಸಿದ್ದು.

ಗಾಂಧೀಜಿ ಓರ್ವ ಮಾನವಪ್ರೇಮಿ. ಗಾಂಧಿಯವರ ಎದೆಗೆ ಗುಂಡಿಕ್ಕಿದ ಗೋಡ್ಸೆ ಓರ್ವ ದೇಶಪ್ರೇಮಿ ಮತ್ತು ಸ್ವಧರ್ಮ ಪ್ರೇಮಿ. ಮಾನವ ಪ್ರೇಮಿಯಾದವ ಸಹಜವಾಗಿಯೇ ದೇಶಪ್ರೇಮಿಯೂ ಧರ್ಮಪ್ರೇಮಿಯೂ ಆಗಿರುತ್ತಾನೆ. ಆದರೆ ಬರೀ ದೇಶಪ್ರೇಮದ ಮತ್ತು ಸ್ವಧರ್ಮ ಪ್ರೇಮದ ಅಮಲನ್ನು ತಲೆಗೇರಿಸಿಕೊಂಡ ವ್ಯಕ್ತಿಯೊಬ್ಬ ಮಾನವ ಪ್ರೇಮಿಯಾಗಿ ಇರಬೇಕೆಂದೇನೂ ಇಲ್ಲ. ಅಂತಹ ವ್ಯಕ್ತಿಯು ಎಷ್ಟು ಮಾನವ ವಿರೋಧಿಯಾದಾನು ಎನ್ನುವುದಕ್ಕೆ ಸಾರ್ವಕಾಲಿಕ ಸಾಕ್ಷಿಯಾಗಿ ನಮ್ಮ ಮುಂದಿರುವುದು ಗೋಡ್ಸೆ ಎಂಬ ದೇಶಪ್ರೇಮಿ ಹಿಂದೂವೊಬ್ಬ ಅಪ್ಪಟ ಹಿಂದೂವೂ, ನೈಜ ದೇಶಪ್ರೇಮಿಯೂ ಆಗಿದ್ದ ಗಾಂಧಿಯವರನ್ನು ಕೊಂದ ಕತೆ. ಆ ಕತೆಗೆ ಇಂದಿಗೆ ಎಪ್ಪತ್ತು ವರ್ಷ ತುಂಬಿದೆ. ಗಾಂಧೀಜಿಯನ್ನು ಕೊಂದದ್ದಕ್ಕೆ ಶಾಸನಬದ್ದ ಪ್ರತೀಕಾರವಾಗಿ ಸರ್ಕಾರ ಗೋಡ್ಸೆಯನ್ನು ಗಲ್ಲಿಗೇರಿಸಿ ಕೊಲ್ಲುತ್ತದೆ. ಅದು ಗಾಂಧಿ ಮೆಚ್ಚುವ ಕೆಲಸವಾಗಿರಲಿಲ್ಲ. ತನ್ನನ್ನು ಗೋಡ್ಸೆ ಕೊಂದ ನೋವಿಗಿಂತ ಹೆಚ್ಚಾಗಿ ಗೋಡ್ಸೆಯನ್ನು ಸರ್ಕಾರ ಕೊಂದ ನೋವು ಗಾಂಧೀಜಿಯ ಆತ್ಮವನ್ನು ಇಂದಿಗೂ ಭಾದಿಸುತ್ತಿರಬಹುದು.

ಗೋಡ್ಸೆ ಗಾಂಧಿಯವರನ್ನು ಕೊಂದ ಸತ್ಯದ ವಿಸ್ತೃತ ಸತ್ಯ ಏನು ಎಂದರೆ ಗೋಡ್ಸೆ ಕೊಂದದ್ದು ಗಾಂಧೀಜಿಯ ದೇಹವನ್ನು ಮಾತ್ರ. ಗಾಂಧಿ ಎಂಬ ಶಕ್ತಿಯನ್ನು ಆತನಿಂದ ಕೊಲ್ಲಲು ಆಗಲಿಲ್ಲ. ಅದು ಎಂದಿಗೂ ಸಾಯುವುದಿಲ್ಲ. ವ್ಯವಸ್ಥಿತ ಅಪಪ್ರಚಾರ ಮತ್ತು ಅರ್ಧ ಸತ್ಯಗಳ ಸಹಾಯದಿಂದ ಕೊಲೆಯಾದ ಗಾಂಧಿಯವರನ್ನು ನಿತ್ಯವೂ ಕೊಲ್ಲುತ್ತಾ ಅವರಿಗೆ ಶಾಶ್ವತ ಗೋರಿ ಕಟ್ಟಲು ನಡೆಯುತ್ತಿರುವ ಸಂಘಟಿತ ಕೆಲಸ ಸಿಸಿಫಸ್‌ನ ಮಿಥ್ಯೆಯ ಕತೆಯಂತೆ ಒಂದು ನಿರರ್ಥಕ ಪ್ರಯತ್ನ. ಸರ್ಕಾರ ಕೊಂದು ಹಾಕಿದ ಗೋಡ್ಸೆಯೂ ಅಷ್ಟೇ. ಆತ ಸಾಯಲು ಭಾರತೀಯ ಮನಸ್ಸುಗಳು ಎಂದಿಗೂ ಅವಕಾಶ ನೀಡುವುದಿಲ್ಲ. ಗ್ವಾಲಿಯರ್‌ನಲ್ಲಿ ಗೋಡ್ಸೆಗಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ನಿಮಗೆ ಆಹ್ವಾನ ಬಯಸುವ ಜಾಹೀರಾತು ಸದ್ಯದಲ್ಲೇ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಬಹುದು. ನಿರೀಕ್ಷಿಸಿ.

ಪ್ರತಿಕ್ರಿಯಿಸಿ (+)