ಭಾನುವಾರ, ಜೂನ್ 20, 2021
29 °C

ದಿಲ್ಲಿಗೂ ತಲುಪಿದ ಆನೆದಂತದ ಬೆಂಡೆಕಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವರು ವನವಾಸದಲ್ಲಿದ್ದಾಗ  ದ್ರೌಪ­ದಿಗೆ ಅಡುಗೆಯ ಸಮ­ಸ್ಯೆಯೇ ಇರಲಿಲ್ಲ. ಅಕ್ಷಯ ಪಾತ್ರೆಯನ್ನು ಹಿಡಿದು ಕೃಷ್ಣ­ನನ್ನು ಸ್ಮರಿಸಿ ಸೌಟು ಇಳಿಸಿದರೆ ಅನ್ನವನ್ನು ತೆಗೆಯಬಹುದಿತ್ತು. ಸೌದೆ ತರುವ ಶ್ರಮ ಇಲ್ಲ. ಒಲೆ ಊದುವ ರಗಳೆ ಇಲ್ಲ. ಕಳೆದ ವಾರ ದಿಲ್ಲಿ­ಯಲ್ಲಿ ತುಸು ಹೆಚ್ಚು ಕಮ್ಮಿ ಅಂಥದ್ದೇ ಪವಾಡ­ವನ್ನು ಬಂಗಾಳದ ಸುಂದರಬನದ ‘ರೈತ ವಿಜ್ಞಾನಿ­ಗಳು’ ಪ್ರದರ್ಶನ ಮಾಡಿದರು. ಅವರು ತಂದಿದ್ದ ‘ಕೋಮಲ್’ ಅಕ್ಕಿಯನ್ನು ಪಾತ್ರೆಗೆ ಹಾಕಿ ತಣ್ಣೀ­ರನ್ನು ಸುರಿದರೆ ಸಾಕು, ಕೆಲವು ಸಮಯದ ನಂತರ ಅನ್ನ ತಯಾರಾಗುತ್ತಿತ್ತು. ಬೇಯಿಸುವ ಅಗ­ತ್ಯವೇ ಇಲ್ಲ.ಭಾರತದ ಹದಿನೇಳು ರಾಜ್ಯಗಳಿಂದ ಬಂದ ರೈತರು ದಿಲ್ಲಿಯಲ್ಲಿ ಏರ್ಪಡಿಸಿದ್ದ ‘ಜೀವಿ ವೈವಿಧ್ಯ ಹಬ್ಬ’­ದಲ್ಲಿ ಇಂಥ ನಾನಾ ಬಗೆಯ ಸಸ್ಯ­ವಿಸ್ಮಯ­ಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಅರ್ಧ ಮೀಟರ್ ಉದ್ದದ ‘ಆನೆದಂತ’ದ ಬೆಂಡೆಕಾಯಿ; ನೆಲ ಬಿಟ್ಟು ಐದು ಮೀಟರ್ ಎತ್ತರದಲ್ಲಿ ಬೆಳೆಯ­ಬಲ್ಲ ಗೆಣಸಿನ ‘ಅಂತರಿಕ್ಷ’ ಗಡ್ಡೆ. ಬೇಯಿಸುವಾಗ ಬೆಳ್ಳಗಾಗಿ ಪರಿಮಳ ಸೂಸುವ ಕರೀ ಕಪ್ಪು ಅಕ್ಕಿ; ಹತ್ತು ಸೆಂಟಿಮೀಟರ್ ಉದ್ದನ್ನ ಹತ್ತಿಯ ಗೊಂಚ­ಲನ್ನು ಇಳಿಬಿಡಬಲ್ಲ ‘ಟ್ರೀ ಕಾಟನ್’.....ದೇಶದ ಮೊದಲ ‘ಬೀಜ ಸಂರಕ್ಷಕರ ರಾಷ್ಟ್ರೀಯ ಮೇಳ’ದಲ್ಲಿ ೨೩೦೦ ಬಗೆಯ ಆಹಾರ ಸಸ್ಯಬೀಜಗಳು ಬಂದಿದ್ದವು. ‘ಇಲ್ಲಿಗೆ ತಂದಿದ್ದು ಕೇವಲ ಸ್ಯಾಂಪಲ್ ಅಷ್ಟೆ. ನಮ್ಮ ದೇಶದ ನಾಟಿ ವಿಜ್ಞಾನಿಗಳ ಬಳಿ ಲಕ್ಷಗಟ್ಟಲೆ ವಿಶಿಷ್ಟ ಆಹಾರ ತಳಿಸಸ್ಯಗಳ ಸಂಗ್ರಹ (ಜೀನ್ ಬ್ಯಾಂಕ್) ಇದೆ. ಕೃಷಿ ಕಂಪೆನಿಗಳ ಹುನ್ನಾರ­ದಿಂದಾಗಿ ಅವು ಕಣ್ಮರೆಯಾಗುವ ಹಂತಕ್ಕೆ ಬಂದಿವೆ. ಅದಕ್ಕೇ ದಿಲ್ಲಿಯ ಜನರಿಗೆ ಈ ಸ್ಯಾಂಪ­ಲ್‌­­ಗಳನ್ನು ತೋರಿಸಿ ಹೋಗೋಣ ಅಂತ ಬಂದ್ವಿ’ ಎಂದು ಕರ್ನಾಟಕದ ಜಿ. ಕೃಷ್ಣ ಪ್ರಸಾದ್ ವಿವರಣೆ ನೀಡುತ್ತಿದ್ದರು.ಕೆಲದಿನಗಳ ಹಿಂದಷ್ಟೇ ಕೇಂದ್ರ ಸಚಿವ ಮೊಯಿಲಿ­­ಯವರು ಕುಲಾಂತರಿ ಆಹಾರ ಸಸ್ಯ­ಗಳಿಗೆ ಭಾರತದ ಹೆಬ್ಬಾಗಿಲನ್ನು ತೆರೆಯುವ ನಿರ್ಧಾರ ಕೈಗೊಂಡಿದ್ದು ಅನೇಕರ ಆತಂಕಗಳಿಗೆ ಕಾರಣ­­ವಾಗಿತ್ತು. ಅಧಿಕಾರ ವಹಿಸಿಕೊಂಡ ಮೂರೇ ವಾರಗಳಲ್ಲಿ ತೈಲ ಕಂಪೆನಿಗಳಿಗೆ, ಗಣಿ­ಗಾರಿಕೆಗೆ, ಲೋಹದ ಉದ್ಯಮಿಗಳಿಗೆ ಕಂತೆ­ಕಂತೆಯಾಗಿ ಹಸಿರು ನಿಶಾನೆ ತೋರಿಸಿದಷ್ಟೇ ಭರ­ದಲ್ಲಿ ಅವರು ಕೃಷಿ ಕಂಪೆನಿಗಳಿಗೆ ಅನುಕೂಲ ಮಾಡಿ­ಕೊಡಬಲ್ಲ ಇನ್ನೂರಕ್ಕೂ ಹೆಚ್ಚು ಬಗೆಯ ಬಿಟಿ ಸಸ್ಯಗಳ ನೆಲಪರೀಕ್ಷೆಗೆ ಅನುಮತಿ ನೀಡಿ­ದ್ದರು.ನಾನಾ ಬಗೆಯ ತರಕಾರಿ, ಎಣ್ಣೆ­ಬೀಜಗಳು, ಭತ್ತ, ದ್ವಿದಳ ಧಾನ್ಯ, ಗಡ್ಡೆಗೆಣಸು­ಗಳೆಲ್ಲ ಕುಲಾಂತರಿ ಕಂಪೆನಿ ಬೀಜಗಳಾಗಿ ಮಾರು­ಕಟ್ಟೆ ಪ್ರವೇಶ ಮಾಡುವ ದಿಗಿಲು ವ್ಯಾಪಿಸಿತ್ತು. ಅದಕ್ಕೆ ಕಾರಣವೂ ಇತ್ತು: ಬಿಟಿ ಹತ್ತಿಗೆ ಅನು­ಮತಿ ನೀಡಿ ಕೇವಲ ಹತ್ತೇ ವರ್ಷಗಳಲ್ಲಿ ದೇಶ­ದಲ್ಲಿ ಹತ್ತಿ ಬೆಳೆಯುವ ಶೇಕಡಾ ೯೮ರಷ್ಟು ಕ್ಷೇತ್ರ­ಗಳಲ್ಲಿ ಅದೊಂದೇ ವ್ಯಾಪಿಸಿ ಸ್ಥಳೀಯ ಹತ್ತಿ ತಳಿ­ಗಳೆಲ್ಲ ಕಣ್ಮರೆಯಾಗುವ ಹಂತಕ್ಕೆ ಬಂದಿದೆಯಲ್ಲ? ಅದೇರೀತಿ ನಾಳೆ ತರಕಾರಿ, ಬೇಳೆಕಾಳು, ಹಣ್ಣು­ಹಂಪಲುಗಳ ವೈವಿಧ್ಯಮಯ ತಳಿಗಳೂ ಕಣ್ಮರೆ­ಯಾದರೆ? ಅವುಗಳನ್ನು ಅವಲಂಬಿಸಿದ್ದ ವೈವಿಧ್ಯ­ಮಯ ದುಂಬಿ, ಜೇನ್ನೊಣ, ಚಿಟ್ಟೆ, ಪಕ್ಷಿಗಳೂ ಕಣ್ಮರೆ­ಯಾದರೆ?ಹಾಗೆಂದು ದಿಲ್ಲಿಯ ಈ ಮೇಳವೇನೂ ಮೊಯಿಲಿ­ಯವರ ಕಡತ ವಿಲೆವಾರಿ ಕ್ರಮವನ್ನು ಪ್ರತಿಭಟಿಸ­ಲೆಂದು ದಿಢೀರಾಗಿ ಆಯೋಜಿತ­ವಾಗಿ­ರಲಿಲ್ಲ. ನಮ್ಮ ದೇಶದ ಬಹುತೇಕ ಎಲ್ಲ ರಾಜ್ಯ­ಗಳಲ್ಲೂ ಕೆಲವು ರೈತ ಕುಟುಂಬಗಳು ತಳಿ­ವೈವಿಧ್ಯ­ವನ್ನು ಜೋಪಾನವಾಗಿ ಕಾಪಾಡಿ­ಕೊಂಡು ಬಂದಿವೆ. ಹಸಿರು ಕ್ರಾಂತಿಯ ಭರಾಟೆ­ಯಲ್ಲಿ ಸ್ಥಳೀಯ ತಳಿಗಳ ಬಹುದೊಡ್ಡ ಪಾಲು ನಾಶ­ವಾದರೂ ಅಲ್ಲಲ್ಲಿ ತೀರ ಕುಗ್ರಾಮಗಳಲ್ಲಿ (ಶಿವಾನಂದ ಕಳವೆ ಹೇಳುವಂತೆ, ‘ಡಾಂಬರು ರಸ್ತೆ­ಗಳು ತಲುಪಿಲ್ಲದ ಊರುಗಳಲ್ಲಿ’) ಅಪ­ರೂಪದ ತಳಿಗಳು ಉಳಿದಿವೆ. ಅಂಥ ಗ್ರಾಮ ಸಮು­ದಾಯ­ಗಳನ್ನು ಪತ್ತೆ ಹಚ್ಚಿ ಶಾಭಾಸ್ ಹೇಳಿ ಅವರನ್ನೆಲ್ಲ ಒಗ್ಗೂಡಿಸುವ ಯತ್ನಗಳು ಕಳೆದ ಹತ್ತೆಂಟು ವರ್ಷಗಳಿಂದ ನಡೆದೇ ಇದ್ದವು.ಸರ್ಕಾರ­ಗಳ ಮನವೊಲಿಸಿ ಅಂಥ ತಳಿರಕ್ಷಕರನ್ನು ಸನ್ಮಾನಿಸುವ ಕೆಲಸಗಳೂ ನಡೆದಿದ್ದವು. ಹೊರ­ಜಗತ್ತಿನ ಹುನ್ನಾರಗಳನ್ನು ಅರಿಯದ ಮುಗ್ಧ ತಳಿ­ರಕ್ಷಕರು ಹೀಗೆ ಬೆಳಕಿಗೆ ಬಂದಿದ್ದೇ ತಡ, ಲಾಭ­ಖೋರ ಕಂಪೆನಿಗಳು, ಕೃಷಿ ಇಲಾಖೆಯ ಕೆಲವು ವಿಜ್ಞಾನಿಗಳು ಗ್ರಾಮಗಳಲ್ಲಿದ್ದ ಅಪರೂಪದ ತಳಿ­ಗಳನ್ನು ಲಪಟಾಯಿಸಿ ತಮ್ಮ ಖಜಾನೆಗೆ ಸೇರಿಸಿ­ಕೊಂಡಿದ್ದೂ ನಡೆಯಿತು, ಆ ಮಾತು ಬೇರೆ. ಮುಂದೆ ಹೀಗಾಗದಂತೆ ಬೀಜರಕ್ಷಕರನ್ನು ರಾಷ್ಟ್ರ­ಮಟ್ಟದಲ್ಲಿ ಬೆಸೆಯುವ ಯತ್ನ ಕಳೆದ ಒಂದು ವರ್ಷ­ದಿಂದ ನಡೆದೇ ಇತ್ತು. ಅವರೆಲ್ಲ ಒಂದೆಡೆ ಸೇರುವ ತುಸು ಮೊದಲು ಬಿಟಿ ತಳಿಗಳನ್ನು ವಿಜ್ಞಾನಿ­ಗಳ ಪ್ರಯೋಗಶಾಲೆಗಳಿಂದ ಹೊರಕ್ಕೆ ಹೊರ­ಡಿಸಲು ಹಸಿರು ನಿಶಾನೆ ಸಿಕ್ಕಿದ್ದು ಕೇವಲ ಕಾಕ­ತಾಳೀಯ ಅಷ್ಟೆ.ಬೀಜ ರಕ್ಷಕರ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ದಿಲ್ಲಿಯನ್ನೇ ನೋಡಿರದ, ಗ್ರಾಮ್ಯನುಡಿಯನ್ನು ಬಿಟ್ಟು ಬೇರೆ ಭಾಷೆಯೂ ಗೊತ್ತಿಲ್ಲದವರೇ ಹೆಚ್ಚಿ­ನವ­ರಿ­ದ್ದರೂ ಅವರ ಮಧ್ಯೆ ಪ್ರಯೋಗಶೀಲ ವಿಜ್ಞಾನಿ­ಗಳೂ ಇದ್ದರು, ಕಲಾವಿದರೂ ಇದ್ದರು, ಒಂದಿ­ಬ್ಬರು ರೈತಪರ ಸರ್ಕಾರಿ ಕೃಷಿ ವಿಜ್ಞಾನಿ­ಗಳೂ ಇದ್ದರು; ಮನೆಯ ಕೈದೋಟದಲ್ಲೇ ತೀರ ಅಪ­ರೂಪದ ವಿಶಿಷ್ಟ ತರಕಾರಿ ಸಸ್ಯಗಳನ್ನು ಬೆಳೆ­ಸುತ್ತಿ­ರುವ ಗೃಹಿಣಿಯರೂ ಇದ್ದರು.ಬೆಂಗ­ಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲೇ ಡಾಕ್ಟರೇಟ್ ಪಡೆದು, ಅಮೆರಿಕದಲ್ಲಿ ಸಂಶೋ­ಧನೆ ನಡೆಸಿ ಮರಳಿ ಭಾರತಕ್ಕೆ ಬಂದು ಒರಿಸ್ಸಾ­ದಲ್ಲಿ ಗದ್ದೆ ಖರೀದಿಸಿ, ವಿನಾಶದ ಅಂಚಿನಲ್ಲಿದ್ದ ೯೨೦ ಬಗೆಯ ಭತ್ತದ ತಳಿಗಳನ್ನು ಸಂಗ್ರಹಿಸಿ ರೈತ­ರಿಗೆ ಉಚಿತ ಹಂಚುತ್ತಿರುವ ಡಾ. ದೇಬಲ್ ದೇಬ್ ಇದ್ದರು. ಬಿತ್ತನೆ ಕಾಲದಲ್ಲಿ ಬೀಜ­ರಥವನ್ನು ನಿರ್ಮಿಸಿಕೊಂಡು ತಮ್ಮಲ್ಲಿದ್ದ ಅಪ­ರೂಪದ ಭತ್ತದ ತಳಿಗಳನ್ನು ಊರೂರಿಗೆ ರವಾ­ನಿಸುತ್ತ ಹೋಗುವ ವಾರಾಣಸಿಯ ಜಯಪ್ರಕಾಶ ಕೂಡ ಇದ್ದರು. ಕೀಟನಾಶಕ, ಕಳೆನಾಶಕಗಳೆಂದರೆ ಏನೆಂದೇ ಗೊತ್ತಿಲ್ಲದ ಆಂಧ್ರದ ಅರಕು ಕಣಿವೆಯ ಏಳು ಹಳ್ಳಿಗಳ ಆದಿವಾಸಿಗಳು ತಮ್ಮಲ್ಲಿದ್ದ ೨೧೯ ಸೇಂದ್ರಿಯ ಸಸ್ಯ ಬೀಜಗಳನ್ನು ಪ್ರದರ್ಶನಕ್ಕೆ ತಂದಿ­ದ್ದರು.ಹಿಮಾಲಯದ ಗುಡ್ಡಗಾಡು­ಗಳಿಂದ, ಸುಂದರ­­ಬನದ ಜೌಗುಜಿಲ್ಲೆಗಳಿಂದ, ಆತ್ಮಹತ್ಯೆ­ಗಳ ನಾಭಿಕೇಂದ್ರವೆಂದೇ ಖ್ಯಾತಿ ಪಡೆದ ಮಹಾ­ರಾಷ್ಟ್ರದ ವಿದರ್ಭದಿಂದ ರೈತರು ಬಂದಿದ್ದರು. ಶಾಲಾ ಮಕ್ಕಳಿಗೆ ತಳಿರಕ್ಷಣೆಯ ಮಹತ್ವ ತಿಳಿ­ಸುತ್ತ ಅವರವರ ಶಾಲಾ ಆವರಣದಲ್ಲೇ ಮಧ್ಯಾ­ಹ್ನದ ಬಿಸಿಯೂಟಕ್ಕೆಂದು ತರಕಾರಿ, ಗಡ್ಡೆಗೆಣಸು ಬೆಳೆಸುವಂತೆ ಮಕ್ಕಳಿಗೆ ಪ್ರೇರಣೆ ನೀಡುವ ಉತ್ಸಾಹಿಗಳು ಅಸ್ಸಾಂನಿಂದ ಬಂದಿದ್ದರು. ಶಾಲಾ ಶಿಕ್ಷಕರಾಗಿ ನಿವೃತ್ತಿಯ ನಂತರ ತಳಿರಕ್ಷಣೆಗೆಂದೇ ತಮ್ಮ ಸಮಯವನ್ನೆಲ್ಲ ಮುಡಿಪಾಗಿಟ್ಟು ರಾಷ್ಟ್ರ­ಪ್ರಶಸ್ತಿ ಪಡೆದ ನಟಬರ್ ಸಾರಂಗಿ ಇದ್ದರು. ಮೈಸೂರಿನ ಕಿರುಗಾವಲಿನ ಬಳಿ ೭೦೦ ಬಗೆಯ ಭತ್ತದ ತಳಿಗಳನ್ನೂ ಟಿಪ್ಪೂಕಾಲದ ಮಾವಿನ ತಳಿ­ಗಳನ್ನೂ ಸಂರಕ್ಷಿಸಿಕೊಂಡು ಬಂದಿರುವ ಯುವಕ ಸಯ್ಯದ್ ಘನಿ ಬಂದಿದ್ದರು.ಇವರೆಲ್ಲರ ನಡುವೆ ಹರಿಹರದ ಬಳಿಯ ಕುಂಬ­ಳೂರಿನ ಆಂಜನೇಯರಂಥ ವಿಶಿಷ್ಟ ಸಾಧ­ನೆಯ ಯುವಕರೂ ಬಂದಿದ್ದರು. ಇವರು ತಮ್ಮೂ­ರಿನ ಸಮಾನಾಸಕ್ತಿಯ ಜನರನ್ನೆಲ್ಲ ಸೇರಿಸಿ ‘ಮುದ್ದಣ್ಣ ಸ್ಮಾರಕ’ ಬೀಜ ಸಂರಕ್ಷಣ ಸಂಘ ಕಟ್ಟಿಕೊಂಡು ೧೫೦ಕ್ಕೂ ಹೆಚ್ಚು ದೇಸೀ ಭತ್ತದ ತಳಿ­ಗಳನ್ನು ಮತ್ತೆ ಜನಪ್ರಿಯಗೊಳಿಸುವ ಕೆಲಸ­ದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ, ಜಪಾನಿನ ವಿಶಿಷ್ಟ ಗದ್ದೆಚಿತ್ರವನ್ನೂ ತಮ್ಮ ಜಮೀನಿನಲ್ಲಿ ನಿರ್ಮಿಸಿ ತೋರಿಸಿದ್ದಾರೆ. ತೆನೆ ಬಿಡುವ ಹಂತದಲ್ಲಿ ಎತ್ತರದಿಂದ ನೋಡಿದರೆ ಬೇರೆಬೇರೆ ಬಣ್ಣದ ಭತ್ತದ ಸಸಿಗಳ ಕಲಾಕೃತಿ ಕಾಣುವಂತೆ ವಿವಿಧ ತಳಿಗಳನ್ನು ಒಂದೇಗದ್ದೆಯಲ್ಲಿ ಏಕಕಾಲಕ್ಕೆ ಅವರು ನಾಟಿ ಮಾಡಿಸಿದ್ದರು. ಪೈರು ಬೆಳೆದಾಗ ಕ್ರೇನ್ ತರಿಸಿ, ಎತ್ತರದಿಂದ ತಾಯಿ, ಮಗು ಮತ್ತು ತೆನೆಯ ದೃಶ್ಯ ಮೂಡುವಂಥ ಚಿತ್ರ­ಗಳನ್ನು ತೆಗೆಸಿದ್ದರು. ‘ಜಪಾನಿನಲ್ಲಿ ಏಳು ವರ್ಣ­ಛಾಯೆ­ಗಳ ಗದ್ದೆಚಿತ್ರಗಳನ್ನು ಮೂಡಿಸಿ ಪ್ರತಿ­ವರ್ಷವೂ ಪ್ರವಾಸೀ ಆಕರ್ಷಣೆಯ ಕಾರ್ಯ­ಕ್ರಮ ಏರ್ಪಡಿಸುತ್ತಾರೆ. ನಮ್ಮ ದೇಶದಲ್ಲಿ ೧೩ ವರ್ಣ-­­­ಛಾಯೆಗಳ ಭತ್ತದ ತಳಿಗಳಿವೆ; ಎಷ್ಟೊಂದು ಸಾಧ್ಯತೆಗಳಿವೆ’ ಎಂದು ಆಂಜನೇಯ ವರ್ಣ­ಮಯ ಕನಸನ್ನು ಹೆಣೆಯುತ್ತಾರೆ.ಬಣ್ಣಗಳ ವಿಷಯ ಬಂದಾಗ ಪಾಂಡಿಚೇರಿಯ ಕನ್ನಡತಿ ದೀಪಿಕಾ ತಂದಿದ್ದ ತರಾವರಿ ತರಕಾರಿ ಬೀಜ­ಗಳು ಎಲ್ಲರನ್ನೂ ಆಕರ್ಷಿಸುತ್ತಿದ್ದವು. ಕೆಂಪು ರೆಕ್ಕೆ ಅವರೆ, ಜಾಂಬಳಿ ಬೆಂಡೆ, ಬೂದುಪುಂಡಿ, ಒಂದೆ ಎರಡೆ? ‘ಆದರೆ ನೋಡಿ, ಕೊಲ್ಲಾಪುರದ ಸರ್ಕಾರಿ ಕೃಷಿ ವಿಜ್ಞಾನಿಗಳು ನನ್ನಿಂದ ಜಾಂಬಳಿ ಬೆಂಡೆಯ ಬೀಜ ಒಯ್ದು ತಮ್ಮದೇ ಸಂಸ್ಥೆಯ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಿ­-ದ್ದಾರೆ. ಅದಕ್ಕೆ ಬೇಜಾರಿಲ್ಲ, ಆದರೆ ಯಾರೋ ಇಷ್ಟು ವರ್ಷ ಬಿತ್ತಿ ಬೆಳೆಸಿ, ಮತ್ತೆ ಮತ್ತೆ ಬಿತ್ತಿ ಬೆಳೆಸಿ ತಳಿ ಉಳಿಸಿದ್ದಕ್ಕೆ ಇನ್ಯಾರೋ ಪ್ರತಿಫಲ ಪಡೆ­ಯೋದು ನ್ಯಾಯಾನಾ?’ ಎಂದು ಕೇಳುತ್ತಾರೆ.ಅವರ ವಾದದ ಪ್ರಕಾರ, ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಸರ್ಕಾರಿ ಕೃಷಿ ವಿಜ್ಞಾನಿ­ಗಳಿಗಿಂತ ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡುವ ಕೃಷಿ ಕುಟುಂಬಗಳನ್ನು ಸರಕಾರ ಗುರುತಿಸಬೇಕು; ಇಂಥ ಗ್ರಾಮೀಣ ತಳಿಭಂಡಾರಗಳಿಗೆ ಮಾನ್ಯತೆ, ಅನುದಾನ ನೀಡಬೇಕು. ಇಂಥ ತಳಿಭಂಡಾರ­ಗಳನ್ನು ಯಾರೂ ದೋಚದಂತೆ ನಿಬಂಧನೆ ರೂಪಿಸ­ಬೇಕು.ತಳಿಚೌರ್ಯ­ವನ್ನು ತಡೆಗಟ್ಟಬಲ್ಲ ಕಾನೂನು­ಗಳು, ನಿಬಂಧನೆಗಳು ನಮ್ಮಲ್ಲಿವೆ. ಪ್ರತಿ ಪಂಚಾ­ಯತಿ ಮಟ್ಟದಲ್ಲೂ ಜೀವಿ ವೈವಿಧ್ಯ ಸಮಿತಿ ಇರಬೇಕೆಂದೂ ಎಲ್ಲ ಬಗೆಯ ಗಿಡಮರ, ಔಷಧ ಸಸ್ಯ, ಮೀನು, ಪಕ್ಷಿ, ಜೇಡಗಳನ್ನು ಗುರುತಿಸಿ ದಾಖ­ಲಾತಿ ಮಾಡಬೇಕೆಂದೂ ನಿಯಮ ಇದೆ. ಹಾಗೆ ಮಾಡಿದರೆ ಯಾವ ಕಂಪೆನಿಯೂ ಅದಕ್ಕೆ ಪೇಟೆಂಟ್ ಪಡೆಯುವಂತಿಲ್ಲ. ಗಿಡಮೂಲಿಕೆ­ಗಳನ್ನು ಎತ್ತೊಯ್ಯುವ ಔಷಧ ಕಂಪೆನಿಗಳಿಗೆ ಶುಲ್ಕ ವಿಧಿಸಿ   ಪಂಚಾಯತಕ್ಕೆ ಆದಾಯ ತರಲು­ಬಹುದು.ಕೃಷಿಕರೂ ವ್ಯಕ್ತಿಗತವಾಗಿ ತಾವು ಸಂರ­ಕ್ಷಿಸಿದ ತಳಿಗಳ ದಾಖಲಾತಿ ಮಾಡಿಕೊಳ್ಳಲು, ಹಣಕ್ಕೆ ಮಾರಬಹುದು. ಕೃತಿಚೋರರ ಮೇಲೆ ಅಥವಾ ದೋಚಬಂದವರ ಮೇಲೆ ದಾವೆ ಹೂಡಲು ಅವಕಾಶವಿದೆ. ಆದರೆ ರೈತರಿಗೆ ಸಿಗಲೇ­ಬೇಕಿದ್ದ ಅಂಥ ಮಾಹಿತಿಗಳೆಲ್ಲ ಸರ್ಕಾರಿ ಕಡತ­ಗಳಲ್ಲಿ ಉಳಿದಿವೆ. ಅವನ್ನು ಹಾಗೇ ಕಡತ­ಗಳಲ್ಲಿ ಬಚ್ಚಿಟ್ಟು ಕಂಪೆನಿಗಳಿಗೆ ಅನುಕೂಲ­ವಾಗು­ವಂಥ ಕಡತಗಳ ತರಾತುರಿ ವಿಲೆವಾರಿಯ ಈಗಿನ ಈ ಮೊಯ್ಲೀಬೇನೆಗೆ ಮದ್ದೆಲ್ಲಿದೆ?

‘ಇಲ್ಲಿದೆ ನೋಡಿ’ ಎಂದು ತಾವು ತೊಟ್ಟ ಹೊಸ ಅಂಗಿಯನ್ನೇ ಕೃಷ್ಣ ಪ್ರಸಾದ್ ತೋರಿಸು­ತ್ತಾರೆ. ಬೀಜ ಸಂರಕ್ಷಕರ ‘ಸಹಜ ಸಮೃದ್ಧ’ ಹೆಸ­ರಿನ ಸಂಸ್ಥೆಯನ್ನು ನಡೆಸುತ್ತಿರುವ ಅವರು ಉತ್ತರ ಕರ್ನಾಟಕದಲ್ಲಿ ರೈತರ ಹೊಲಗಳಲ್ಲಿ ಈರುಳ್ಳಿ, ಮೆಣ­ಸಿನ ಗಿಡಗಳ ಮಧ್ಯೆ ಸಹಜವಾಗಿ ಬೆಳೆ­ಯುವ ‘ಪಂಢರಾಪುರಿ’ ತಳಿಯ ಹತ್ತಿಯ ನೂಲಿ­ನಿಂದ ಮಾಡಿದ ಅಪ್ಪಟ ದೇಸೀ ಅಂಗಿಯನ್ನು, ದೇಸೀ ಹತ್ತಿಯ ನಾನಾ ತಳಿಗಳನ್ನೂ ಪ್ರದರ್ಶನಕ್ಕೆ ತಂದಿದ್ದರು. ಈ ಹತ್ತಿಗೆ ಕೀಟನಾಶಕ ಸಿಂಪಡನೆ ಬೇಕಿಲ್ಲ, ಅದಕ್ಕೆ ಕುಲಾಂತರಿಯ ಸೋಂಕಿಲ್ಲ. ಬ್ಯಾಂಡೇಜ್ ಪಟ್ಟಿಯಾಗಿ, ಮಗುವಿನ ಉಡು­ಪಾಗಿ, ಹೀರುವಸ್ತ್ರವಾಗಿ ಈ ಹತ್ತಿಯಲ್ಲಿ ಎಷ್ಟೆಲ್ಲ ಸದ್ಗುಣಗಳಿವೆ.ಆದರೆ ಅದನ್ನು ಮೂಲೆಗುಂಪು ಮಾಡಿ, ನೇಯ್ಗೆ ತಂತ್ರವನ್ನೂ ನಾಶ ಮಾಡಿ, ಅಮೆ­ರಿಕ ಮೂಲದ ಹರ್ಸೂಟಂ ಹತ್ತಿಯೇ ಎಲ್ಲಕಡೆ ವಿಜೃಂಭಿಸುತ್ತಿದೆ. ನಮ್ಮ ರೈತರ ಮಿಶ್ರ­ಬೆಳೆಯ ಹೊಲವನ್ನೆಲ್ಲ ಏಕಜಾತಿಯ ಹತ್ತಿಯ ಕಣಜವನ್ನಾಗಿ ಮಾಡಿ, ಮಣ್ಣಿಗೆ ವಿಷ ಸೇರಿಸಿ, ಬೆಳೆವೈವಿಧ್ಯವನ್ನೂ ಧ್ವಂಸ ಮಾಡಿ, ಆಹಾರ ಭದ್ರತೆಗೆ ಧಕ್ಕೆ ತಂದು, ಕುಲಾಂತರಿಯಾಗಿ ಈಗ ರಾಷ್ಟ್ರಧ್ವಜವನ್ನೂ ಆವರಿಸಿ ಕೂತಿದೆ. ‘ಅಲ್ಲಿಂದ ಅದನ್ನು ಇಳಿಸಬೇಕು. ದಿಲ್ಲಿಯ ಸಂಸತ್ತಿನ ಮೇಲೆ ಭಾರತದ ಹತ್ತಿಯ ನೂಲಿನದೇ ಧ್ವಜ ಹಾರಾಡ­ಬೇಕು. ಅದರ ಆರಂಭಿಕ ಹೆಜ್ಜೆಯೇ ಈ ಮೇಳ’ ಎಂದು ಕೃಷ್ಣಪ್ರಸಾದ್ ಹೇಳುತ್ತಾರೆ. ಆದರೆ ಚುನಾ­ವಣೆಯ ಲೆಕ್ಕಾಚಾರದಲ್ಲಿ ಮುಳುಗಿದ್ದ ದಿಲ್ಲಿಗೆ ಈ ಮಾತು ಕೇಳಿಸಿತೆ? ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.