ದಿಲ್ಲಿಯ ಪರೇಡ್‌ನಲ್ಲಿ ಕಾಣದ ಕಣ್ಕಟ್ಟು

7

ದಿಲ್ಲಿಯ ಪರೇಡ್‌ನಲ್ಲಿ ಕಾಣದ ಕಣ್ಕಟ್ಟು

ನಾಗೇಶ್ ಹೆಗಡೆ
Published:
Updated:
ದಿಲ್ಲಿಯ ಪರೇಡ್‌ನಲ್ಲಿ ಕಾಣದ ಕಣ್ಕಟ್ಟು

ನವದೆಹಲಿಯ ರಾಜಪಥದಲ್ಲಿ ಈ ದಿನ ನಡೆಯುವ ವೈಭವದ ಗಣತಂತ್ರ ಮೆರವಣಿಗೆಯನ್ನು ನೋಡಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ: ಥಳಥಳ ಕ್ಷಿಪಣಿಗಳು, ಬಾಂಬರ್‌ಗಳು, ಹೊಚ್ಚ ಹೊಸ ‘ಧನುಷ್’ ತುಪಾಕಿ, ನೆಲ ನಡುಗಿಸುತ್ತ ಸಾಗುವ ಮಿಲಿಟರಿ ಟ್ಯಾಂಕ್‌ಗಳು, ತಂತ್ರಜ್ಞಾನದ ಪರಾಕಾಷ್ಠೆಯನ್ನು ಸಾರುವ ರಡಾರ್‌ಗಳನ್ನು ನೋಡುತ್ತೀರಿ. ಗೋಬರ್ ಅನಿಲ ಸ್ಥಾವರದ ಪ್ರತಿಕೃತಿಯನ್ನು ಕಂಡಿರಾ?ಗಗನಯಾತ್ರಿಗಳಂತೆ ವೇಷ ತೊಟ್ಟು ಗಗನಚುಂಬಿಗಳ ಬೆಂಕಿ ಆರಿಸಬಲ್ಲ ಅಗ್ನಿಶಾಮಕ ಯೋಧರನ್ನು ನೋಡುತ್ತೀರಿ. ಗ್ರಾಮೀಣ ಹುಲ್ಲಿನ ಗುಡಿಸಲಿಗೆ ಅಗ್ನಿರೋಧಕ ದ್ರವವನ್ನು ಸಿಂಚನ ಮಾಡುತ್ತಿರುವ ಬೊಂಬೆಯನ್ನು ಕಂಡಿರಾ? ಮಿರುಗುಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು ನಕ್ಕು ನರ್ತಿಸುವ ಆದಿವಾಸಿಗಳನ್ನೂ ಗಿರಿಜನರನ್ನೂ ನೋಡುತ್ತೀರಿ. ಅವರ ಬದುಕಿನಲ್ಲಿ ತುಸು ನೆಮ್ಮದಿಯ ಉಸಿರನ್ನು ತುಂಬಬಲ್ಲ ಹೊಗೆರಹಿತ ಒಲೆಗಳ ಆಳೆತ್ತರದ ಪ್ರತಿಕೃತಿಯನ್ನು ಕಂಡಿರಾ? ಅದರ ಸುತ್ತ ನಲಿಯುವ ಲಲನೆಯರನ್ನು?‘ಗ್ರೀನ್ ಇಂಡಿಯಾ- ಕ್ಲೀನ್ ಇಂಡಿಯಾ’ ಘೋಷಣೆಯನ್ನು ಬಿಂಬಿಸುವ ತೋರುಬಂಡಿಯಲ್ಲಿ (ಟ್ಯಾಬ್ಲೊ) ನಿಂತಲ್ಲೇ ನಿಂತು ಶಿಸ್ತಾಗಿ ಕಸಗುಡಿಸುವ ನಾಟಕದ ನೇತಾರರು ಕಾಣುತ್ತಾರೆ. ಗುಡಿಸಿ ಹಾಕಿದ ಪ್ಲಾಸ್ಟಿಕ್ ರಾಶಿಯನ್ನು ಅಚ್ಚುಕಟ್ಟಾಗಿ ವಿಲೆವಾರಿ ಮಾಡಬಲ್ಲ ಪಳಪಳ ಯಂತ್ರ ಸ್ಥಾವರವನ್ನು ನೋಡಿದಿರಾ?ನೋಡಿಲ್ಲ ಅಲ್ಲವೆ? ಅವೆಲ್ಲ ಅಪ್ರಾಸಂಗಿಕ ಸಂಗತಿಗಳೆಂದು ಕೆಲವರಿಗೆ ಅನ್ನಿಸಲೂಬಹುದು. ಗಣರಾಜ್ಯೋತ್ಸವ ಪರೇಡ್ ಅಂದರೆ ನಮ್ಮ ದೇಶ ಅದೆಷ್ಟು ಭದ್ರವಾಗಿದೆ, ಶುಭ್ರವಾಗಿದೆ, ಅದೆಂಥ ಸುಖಸಂತಸ ನೆಲೆಸಿದೆ ಎಂಬುದನ್ನು ಬಿಂಬಿಸುವ ಮೆರವಣಿಗೆ. ನಮ್ಮೆಲ್ಲರ ಹೃದಯದಲ್ಲಿ ಹೆಮ್ಮೆಯ ತರಂಗಗಳನ್ನು ಎಬ್ಬಿಸಿ, ವೈರಿಯ ಎದೆಯಲ್ಲಿ ಕಂಪನ ಹುಟ್ಟಿಸುವುದು ಅದರ ಉದ್ದೇಶ. ಮಿಲಿಟರಿ ತಾಕತ್ತಿನಲ್ಲಿ, ವಿಜ್ಞಾನ- ತಂತ್ರಜ್ಞಾನದಲ್ಲಿ, ಸಾಮಾಜಿಕ ಸಾಧನೆಯ ಶೋದಲ್ಲಿ ನಮ್ಮನ್ನೆಲ್ಲ ಮಿಂದೇಳಿಸಿ ನಮ್ಮದೇ ಆತ್ಮವಿಶ್ವಾಸವನ್ನು ಹೆಚ್ಚಿಸುವ ಬೆಡಗಿನ ಪ್ರದರ್ಶನ ಅದು. ಹಿಂದೆ ರಾಜರ ಎದುರು ನಡೆಯುತ್ತಿದ್ದ ಪಥಸಂಚಲನ ಈಗ ಉಳ್ಳವರೆದುರು ನಡೆಯುತ್ತಿದೆ. ವಾಸ್ತವ ಏನೆಂದರೆ, ಕೋರೈಸುವ ಈ ಪರೇಡಿನಲ್ಲಿ ಏನನ್ನು ತೋರಿಸುತ್ತಿಲ್ಲ ಎಂಬುದರಲ್ಲೇ ಎಷ್ಟೊಂದು ಕತೆಗಳು ಅಡಗಿರುತ್ತವೆ.ಸ್ವಚ್ಛ ಭಾರತ ಅಭಿಯಾನವನ್ನೇ ನೋಡಿ: ತ್ಯಾಜ್ಯಗಳನ್ನು ನಗರಗಳಿಂದ ಗುಡಿಸಿ ಹಳ್ಳಿಗೆ ತಳ್ಳುವ ಕೆಲಸ ತುಸು ಜಾಸ್ತಿ ಆಯಿತೇ ವಿನಾ ತಿಪ್ಪೆಯನ್ನು ಕಡಿಮೆ ಮಾಡುವ ಅಥವಾ ಸುರಕ್ಷಿತ ವಿಲೆವಾರಿ ಮಾಡುವ ನಿಟ್ಟಿನಲ್ಲಿ ಮಾದರಿ ಎನ್ನಿಸಬಹುದಾದ ಒಂದು ಹೊಸ ಉದಾಹರಣೆಯೂ ನಮಗೆ ದಕ್ಕಲಿಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಳ್ಳಕೊಳ್ಳಗಳಲ್ಲಿ ತುಂಬಿದ್ದು ಸಾಲದು ಎಂಬಂತೆ ಬೇರೆ ದೇಶಗಳಿಂದಲೂ ನಾವು ಗುಡ್ಡದಷ್ಟು ತ್ಯಾಜ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ.ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊಸದರಲ್ಲಿ ಬಹು ಉತ್ಸಾಹದಿಂದ ತ್ಯಾಜ್ಯಗಳ ಆಮದನ್ನು ನಿಷೇಧಿಸಿತ್ತು. ಆದರೆ ಉದ್ಯಮಿಗಳ ಒತ್ತಡ ಎಷ್ಟಿತ್ತೆಂದರೆ, ಮತ್ತೆ ನಿಷೇಧವನ್ನು ಸಡಿಲಿಸಿ ‘ವಿಶೇಷ ಆರ್ಥಿಕ ವಲಯ’ದಲ್ಲಿ ಮಾತ್ರ ಪ್ಲಾಸ್ಟಿಕ್ ತ್ಯಾಜ್ಯಗಳ ಆಮದಿಗೆ ಅನುಮತಿ ನೀಡಿತು. ಮೇಲ್ನೋಟಕ್ಕೆ ನಮ್ಮ ಕೆಲವರಿಗೆ ಅದರಲ್ಲಿ ಉದ್ಯೋಗವಿದೆ ನಿಜ. ಆದರೆ ಆಚಿನ ದೇಶಗಳನ್ನು ಸ್ವಚ್ಛ ಇಡಲೆಂದು ನಮ್ಮ ದೇಶದ ವಿದ್ಯುತ್ ಶಕ್ತಿಯನ್ನೇ ವ್ಯಯ ಮಾಡಿ, ನಮ್ಮ ದೇಶದ ಗಾಳಿ, ನೀರು, ನೆಲ ಕೊಳಕು ಮಾಡಿ, ಎಂಜಲು ಪ್ಲಾಸ್ಟಿಕ್ಕಿಗೆ ಮರುಜನ್ಮ ಕೊಟ್ಟು ನಾವು ಕಳಪೆ ಬಕೆಟ್ಟು, ದುರ್ಬಲ ಕುರ್ಚಿ, ದೇಗುಲಕ್ಕೆ ಒಯ್ಯುವ ಹೂಬುಟ್ಟಿಗಳನ್ನಾಗಿ, ಚೀಲಗಳನ್ನಾಗಿ ಬಳಸುತ್ತೇವೆ. ತ್ಯಾಜ್ಯದಿಂದ ತಯಾರಾದ  ಚುನಾವಣಾ ಪ್ರಚಾರ ಪತಾಕೆಗಳು ದೇಶದ ಚರಂಡಿಗಳನ್ನು ಭರ್ತಿ ಮಾಡುತ್ತವೆ. ಕಳಪೆ ಪ್ಲಾಸ್ಟಿಕ್ಕಿನ ಪುಟ್ಟಪುಟ್ಟ ರಾಷ್ಟ್ರಧ್ವಜಗಳನ್ನು ಮಕ್ಕಳು ಹೆಮ್ಮೆಯಿಂದ ಗಣತಂತ್ರ ದಿನದಂದು ಬೀಸುತ್ತ ಆಮೇಲೆ ಬಿಸಾಡುತ್ತವೆ. ಈ ಇಡೀ ರೀಸೈಕಲ್ ಉದ್ಯಮದಿಂದ ಸರ್ಕಾರಕ್ಕೆ ಬರುವ ತೆರಿಗೆ ಹಣವನ್ನೇ ಬಳಸಿ ರಾಜಪಥದ ಪರೇಡಿಗೆಂದು ಒಂದು ಅಚ್ಚುಕಟ್ಟಾದ, ವೈಜ್ಞಾನಿಕ ರೀಸೈಕ್ಲಿಂಗ್ ಘಟಕದ ಮಾದರಿಯನ್ನು ತಯಾರಿಸಿದ್ದರೆ ಆಗಿತ್ತು. ಅದೂ ಸಾಧ್ಯವಿಲ್ಲ, ಏಕೆಂದರೆ ವಿಶೇಷ ಆರ್ಥಿಕ ವಲಯದ ಉದ್ಯಮಿಗಳಿಂದ ತೆರಿಗೆ ವಸೂಲಾತಿಯೂ ಇಲ್ಲ.ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೆವಾರಿಯ ಒಂದೆರಡು ಮಿನುಗು ಉದಾಹರಣೆಗಳು ನಮ್ಮಲ್ಲಿವೆ ನಿಜ. ಪುಣೆಯ ಡಾ. ಮೇಧಾ ತಾಡಪತ್ರೀಕರ್ ಹಾಗೂ ಶಿರೀಶ್‌ಗೆ ಪ್ಲಾಸ್ಟಿಕ್ ತಿಪ್ಪೆ ನೋಡಿ ನೋಡಿ ಬೇಜಾರಾಗಿತ್ತು. ಸಮಸ್ಯೆಗೆ ಪರಿಹಾರ ಹುಡುಕಲೇಬೇಕೆಂದು ಪಟ್ಟು ಹಿಡಿದರು. ಪ್ಲಾಸ್ಟಿಕ್ ಎಂದರೆ ಉಜ್ವಲ ಇಂಧನ ತಾನೆ? ಕಟ್ಟಿಗೆ, ಇದ್ದಿಲಿಗಿಂತ ಅದರಲ್ಲಿ ಶಾಖಾಂಶ ಅಂದರೆ ಕೆಲೊರಿಫಿಕ್ ವ್ಯಾಲ್ಯೂ ಜಾಸ್ತಿ ಇರುತ್ತದೆ. ಒಂದು ಗ್ರಾಮ್ ಕಲ್ಲಿದ್ದಲಿನಲ್ಲಿ 27 ಕಿಲೊಜ್ಯೂಲ್ಸ್ (ಕೆಜೆ) ಶಾಖಾಂಶ ಇದ್ದರೆ, ಪ್ಲಾಸ್ಟಿಕ್ಕಿನಲ್ಲಿ 40 ಕೆಜೆ, ಸೀಮೆ ಎಣ್ಣೆಯಲ್ಲಿ 48 ಕೆಜೆ ಶಾಖಾಂಶ ಇದೆ. ತೈಲದಿಂದಲೇ ತಯಾರಾಗುವ ಪ್ಲಾಸ್ಟಿಕ್ಕಿನಿಂದ ಮತ್ತೆ ತೈಲ ತಯಾರಿಸಲೆಂದು ಮೇಧಾ ಒಂದಿಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕುಕ್ಕರ್‌ಗೆ ತುಂಬಿ ಬಿಸಿ ಮಾಡಿದರು. ಎಣ್ಣೆಯಂಥ ದ್ರವ ಮತ್ತು ಗಸಿ ಉಳಿಯಿತು. ಆ ಎಣ್ಣೆಯನ್ನು ಸೋಸಿದರೆ ಅದು ತೈಲದಂತೆ ಚೆನ್ನಾಗಿ ಉರಿಯುತ್ತದೆ ಎಂಬುದನ್ನು ಕಂಡುಕೊಂಡರು.ಒಂದು ದೊಡ್ಡ ಡ್ರಮ್ಮಿನಲ್ಲಿ ಅವರು ಇನ್ನಷ್ಟು ಪ್ಲಾಸ್ಟಿಕ್ ತುಂಬಿ ಬಿಗಿಯಾಗಿ ಮುಚ್ಚಿ ಅದೇ ಪ್ರಯೋಗ ಮಾಡಿದರು. ಎಣ್ಣೆ (ಮಿಶ್ರತೈಲ) ಚೆನ್ನಾಗಿ ಬಂತು. ತಳದ ಗಸಿಯನ್ನು ಡಾಂಬರಿನಂತೆ ಬಳಸಬಹುದು ಎಂಬುದೂ ಗೊತ್ತಾಯಿತು. ಡಾ. ಮೇಧಾ ನೆರೆಹೊರೆಯ ಮಹಿಳೆಯರನ್ನು ಸೇರಿಸಿ ‘ರುದ್ರಾ ಪರಿಸರ ಸುಧಾರಣಾ ಸಂಸ್ಥೆ’ಯನ್ನು ಕಟ್ಟಿದರು. ದುರ್ವಾಸನೆ ಸೂಸದ ಹಾಗೆ ಪ್ಲಾಸ್ಟಿಕ್ಕನ್ನು ಕರಗಿಸಬಲ್ಲ ಒಂದು ಫ್ಯಾಕ್ಟರಿಯನ್ನೇ ಹೂಡಿದರು. ಅದರಲ್ಲಿ ನೂರು ಕಿಲೊ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕರಗಿಸಿದರೆ 60 ಲೀಟರ್ ಮಿಶ್ರತೈಲ ಸಿಗುತ್ತದೆ. ಕಡಿಮೆ ಬೆಲೆಯ ಆ ತೈಲಕ್ಕೆ ಫ್ಯಾಕ್ಟರಿಗಳಲ್ಲಿ, ಬಾಯ್ಲರ್‌ಗಳಲ್ಲಿ ಬೇಡಿಕೆ ಬಂತು. ರಸ್ತೆಗೆ ಡಾಂಬರು ಹಾಕುವ ಗುತ್ತಿಗೆದಾರರಿಂದ ಗಸಿಗೂ ಬೇಡಿಕೆ ಬಂತು. ಪುಣೆಯ ಆರು ಸಾವಿರ ಮನೆಗಳಿಂದ ಪ್ಲಾಸ್ಟಿಕ್ ಸಂಗ್ರಹಿಸಿ ಈಗಿವರು ತೈಲ ತಯಾರಿಸುತ್ತಿದ್ದಾರೆ.ಪ್ಲಾಸ್ಟಿಕ್ಕನ್ನು ‘ಹೆಪ್ಪುಗಟ್ಟಿದ ತೈಲ’ ಎನ್ನುತ್ತಾರೆ. ತಿಪ್ಪೆಗಳಲ್ಲಿ, ಮೂಲೆಯಲ್ಲಿ, ಯಾವ ತಗ್ಗಿನಲ್ಲಿ ಎಲ್ಲಿ ನೋಡಿದಲ್ಲಿ ಈ ಉರುವಲ ಚದುರಿ ಬಿದ್ದಿರುತ್ತದೆ. ಇದುವರೆಗೆ ಸೃಷ್ಟಿಯಾದ ಎಲ್ಲ ಪ್ಲಾಸ್ಟಿಕ್ ವಸ್ತುಗಳೂ ಮಣ್ಣಿನಲ್ಲಿ, ನೀರಿನಲ್ಲಿ ಕೊನೆಗೆ ಸೂಕ್ಷ್ಮ ಕಣಗಳ ರೂಪದಲ್ಲಿ ಗಾಳಿಯಲ್ಲಿ ಬೆರೆತಿವೆ. ನಾವೇ ಬಿಸಾಕಿದ ಪ್ಲಾಸ್ಟಿಕ್ ಎಲ್ಲೆಲ್ಲೋ ಸುತ್ತಾಡಿ ಮತ್ತೆ ನಮ್ಮ ಶ್ವಾಸಕೋಶದ ಮತ್ತು ಜೀರ್ಣಾಂಗಗಳ ಮೂಲಕ ರಕ್ತಕ್ಕೆ ಸೇರುತ್ತಿರುತ್ತದೆ. ಅಲ್ಲಿ ನಮ್ಮ ಹಾರ್ಮೋನಿನ ಅಣಕುರೂಪ ತಳೆದು ಆರೋಗ್ಯವನ್ನು ಕೆಡಿಸುತ್ತದೆ. ಅವರವರ ಪ್ರಕೃತಿಗೆ ತಕ್ಕಂತೆ ಕೆಲವರಲ್ಲಿ ಬೊಜ್ಜು, ಮಧುಮೇಹ, ಷಂಡತನ; ಇನ್ನು ಕೆಲವರಿಗೆ ಆಸ್ತಮಾ, ಕ್ಯಾನ್ಸರ್, ಮತ್ತೊಬ್ಬರಿಗೆ ಗರ್ಭಕೋಶದ ಊತ, ಬಂಜೆತನ, ಮೂತ್ರಕೋಶ ವೈಫಲ್ಯ ಹೀಗೆ ಸಾಂಕ್ರಾಮಿಕವಲ್ಲದ ಎಲ್ಲ ಕಾಯಿಲೆಗಳಿಗೂ ಪ್ಲಾಸ್ಟಿಕ್ ಕಣಗಳಿಂದ ಹೊಮ್ಮುವ ಡಯಾಕ್ಸಿನ್, ಫ್ಯೂರಾನ್ಸ್, ಬಿಸ್‌ಫಿನಾಲ್-ಎ ಮುಂತಾದ ವಿಷ ಸಂಯುಕ್ತಗಳೇ ಕಾರಣ ಎನ್ನುವುದಕ್ಕೆ ಬೇಕಾದಷ್ಟು ವೈಜ್ಞಾನಿಕ ಸಾಕ್ಷ್ಯಗಳಿವೆ. ತೆರೆದ ಬಯಲಲ್ಲಿ ಪ್ಲಾಸ್ಟಿಕ್ಕನ್ನು ಸುಟ್ಟರೆ ಹೊಮ್ಮುವ ವಿಷಕಾರಿ ಹೊಗೆಯಂತೂ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಅತಿ ದೊಡ್ಡ ಕಂಟಕ ಎನಿಸಿ, ಆಸ್ಪತ್ರೆಗಳಿಗೆ ಭಾರೀ ಆದಾಯ ಕೊಡುತ್ತದೆ.ನಿಮ್ಮ ಊರಿನ ಮುನಿಸಿಪಾಲಿಟಿ ಅಥವಾ ನಗರ ಪಾಲಿಕೆಯ ಆರೋಗ್ಯ ಇಲಾಖೆ ಎಂದಾದರೂ ಇದರ ಬಗ್ಗೆ ಎಚ್ಚರಿಕೆ ನೀಡಿದೆಯೆ? ಬದಲಿಗೆ, ಪೌರಕಾರ್ಮಿಕ ಸಿಬ್ಬಂದಿಯೇ ಕಸ ಗುಡಿಸಿ, ಪ್ಲಾಸ್ಟಿಕ್ ರಾಶಿಗೆ ಕಡ್ಡಿಗೀರುತ್ತಾರೆ ತಾನೆ? ನಮ್ಮ ಎಲ್ಲ ನಗರ, ಎಲ್ಲ ಪಟ್ಟಣಗಳಲ್ಲೂ ತೀರ ಕೆಳವರ್ಗದ ಸಂಚಾರಿ ಶ್ರಮಜೀವಿಗಳು ಅಡುಗೆ ಬೇಯಿಸಲು ಪುರುಳೆ, ಕಾಗದ, ಸೌದೆಗಾಗಿ ಪರದಾಡುತ್ತಾರೆ. ಅನ್ನಭಾಗ್ಯವೇನೊ ಸಿಕ್ಕೀತು; ಆದರೆ  ಹೊಗೆರಹಿತ ಒಲೆಭಾಗ್ಯ ಯಾರಿಗಿದೆ? ಒಲೆಗೆ ಬೆಂಕಿ ಹೊತ್ತಿಸಲೆಂದು ಪ್ಲಾಸ್ಟಿಕ್ ಚಿಂದಿಯನ್ನೇ ತಮ್ಮ ಇಕ್ಕಟ್ಟಾದ ಗೂಡುಗಳಲ್ಲಿ ಉರಿಸಿ ಅವರು ನಾನಾ ಬಗೆಯ ಕಾಯಿಲೆಗಳ ಗೂಡಾಗುತ್ತಾರೆ. ಅಡುಗೆ ಒಲೆಯ ಹೊಗೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೊಂದು ಸಂಶೋಧನೆ, ಎಷ್ಟೊಂದು ವಿಸ್ತರಣಾ ಕೆಲಸಗಳು ನಡೆಯುತ್ತಿವೆ.ಸುಡಾನಿನ ಡಾರ್ಫರ್ ಎಂಬಲ್ಲಿ ಬಡವರ್ಗಕ್ಕೆಂದು ವಿತರಿಸಲಾದ ಒಲೆಯ ಕಲ್ಯಾಣಕಾರಿ ಗುಣಗಳನ್ನು ಮೆಚ್ಚಿ ವಿಶ್ವಸಂಸ್ಥೆ ಅದನ್ನು ಎಲ್ಲೆಡೆ ಅನುಸರಿಸಬೇಕಾದ ‘ಸುವರ್ಣ ಮಾನದಂಡ’ ಎಂತಲೇ ಘೋಷಿಸಿದೆ. ಅಮೆರಿಕದ ಎಮ್‌ಐಟಿಯ ಡಿ-ಲ್ಯಾಬ್‌ನಲ್ಲಿ ರೂಪಿಸಲಾದ ಅಡುಗೆ ಒಲೆಯನ್ನು ಜನಪ್ರಿಯಗೊಳಿಸಲು ಕನ್ನಡತಿ ಮೇಘಾ ಹೆಗಡೆ ಆಫ್ರಿಕದ ಉಗಾಂಡಾ ದೇಶದ ಹಳ್ಳಿಗಳನ್ನು ಸುತ್ತುತ್ತಾಳೆ. ಅವಳ ತಂಡಕ್ಕೆ  ‘ಹೊಗೆರಹಿತ ಒಲೆಗಳ ಗ್ಲೋಬಲ್ ಅಲೈಯನ್ಸ್‌’ನ ಮಾನ್ಯತೆ ಕೂಡ ಸಿಕ್ಕಿದೆ. ನಮ್ಮ ತಂತ್ರವಿದ್ಯಾ ವಿಶಾರದರು ವಿದೇಶೀ ಮೂಲದ ಬೋಫೊರ್ಸ್ ಗನ್ನನ್ನೇ ಬಿಚ್ಚಿನೋಡಿ ಅದಕ್ಕಿಂತ ಉತ್ತಮವಾದ ‘ಧನುಷ್’ ತುಪಾಕಿಯನ್ನು ಸಿದ್ಧಪಡಿಸಿ ಮಿಲಿಟರಿಗೆ ವರ್ಗಾಯಿಸುತ್ತಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 25 ವರ್ಷ ಹಿಂದೆಯೇ ತಯಾರಾದ ಹೊಗೆರಹಿತ ಒಲೆಯನ್ನು ಸುಧಾರಿಸಿ ಹಳ್ಳಿಗರಿಗೆ ವರ್ಗಾಯಿಸುವುದು ಯಾಕೊ ಸಾಧ್ಯವಾಗುತ್ತಿಲ್ಲ. ಪ್ಲಾಸ್ಟಿಕ್ ವರ್ಗಕ್ಕೇ ಸೇರಿದ ಪಾಲಿಮರ್ ದ್ರವ್ಯದಿಂದ ಸೋಗೆ ಗುಡಿಸಲುಗಳಿಗೆ ಅತ್ಯಲ್ಪ ವೆಚ್ಚದಲ್ಲಿ ಬೆಂಕಿ ನಿರೋಧಕ ಲೇಪನ ಕೊಡಲು ಸಾಧ್ಯವಿದೆ. ವರ್ಧಾದಲ್ಲಿ ಗಾಂಧೀ ಆಶ್ರಮದ ಸಮೀಪದ ಹಳ್ಳಿಗಳಲ್ಲಿ 40 ವರ್ಷಗಳ ಹಿಂದೆಯೇ ಗುಡಿಸಲುಗಳಿಗೆ ಇಂಥ ದ್ರವವನ್ನು ವಿಜ್ಞಾನಿಗಳು ಸಿಂಪಡನೆ ಮಾಡಿದ್ದರು.  ಯಾರೇನೂ ಲೆಕ್ಕ ಇಟ್ಟಿಲ್ಲವಾದರೂ ನಮ್ಮ ದೇಶದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಲಕ್ಷಾಂತರ ಗುಡಿಸಲುಗಳು ಬೆಂಕಿಗೆ ಆಹುತಿ ಆಗುತ್ತಿರುತ್ತವೆ. ಯಾವುದಾದರೂ ಪಂಚಾಯ್ತಿಯಲ್ಲಿ ಈ ಅಲ್ಪವೆಚ್ಚದ ಸಿಂಪರಣೆ ವ್ಯವಸ್ಥೆಯನ್ನು ನೋಡಿದ್ದೇವೆಯೆ?ಗೋಬರ್ ಅನಿಲದ ಪರೇಡ್‌ಗೆ ಬರೋಣ. ಬಡರಾಷ್ಟ್ರಗಳಲ್ಲಿ ಹೊಗೆಯನ್ನು ಕಮ್ಮಿ ಮಾಡಬೇಕು ಎಂಬ ಉದ್ದೇಶದಿಂದ ‘ಸ್ವಚ್ಛ ಅಭಿವೃದ್ಧಿ ಕಾರ್ಯತಂತ್ರ’ದ ಹೆಸರಿನಲ್ಲಿ ಭಾರೀ ಮೊತ್ತದ ವಿದೇಶೀ ಹಣ ನಮ್ಮತ್ತ ಬರುತ್ತಿದೆ. ಭೂತಾಪ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಶ್ರೀಮಂತ ರಾಷ್ಟ್ರಗಳು ತಮ್ಮ ತಪ್ಪಿಗೆ ಪರಿಹಾರ ರೂಪದಲ್ಲಿ ಹಿಂದುಳಿದ ದೇಶಗಳಿಗೆ ಹಣ ನೀಡುತ್ತವೆ. ಜಪಾನೀ ಪ್ರಧಾನಿ ಶಿಂಝೋ ಅಬೆಯವರು ಭಾರತಕ್ಕೆ ಹಣ ನೀಡುವುದಾಗಿ ಮೋದಿಯವರಿಗೆ ಹೇಳಿದ್ದರು. ಆದರೆ ಹಾಗೆ ಬರುವ ಹಣವೆಲ್ಲ ಗಾಳಿಯಂತ್ರ, ಸೌರಫಲಕ ತಯಾರಿಸುವ ದೊಡ್ಡ ಕಂಪನಿಗಳ ಪಾಲಾಗುತ್ತಿದೆ. ಹಳ್ಳಿಗಳಲ್ಲಿ ಗೋಬರ್ ಅನಿಲ ಸ್ಥಾವರಗಳನ್ನು ಹೂಡಿದರೆ ಸೆಗಣಿಯಿಂದ ನೇರ ಆಕಾಶಕ್ಕೆ ಹೋಗುವ ಮೀಥೇನ್ ಅನಿಲವನ್ನು ಕೂಡಿಟ್ಟು (ಅದು ಕಾರ್ಬನ್ ಡೈಆಕ್ಸೈಡ್‌ಗಿಂತ 20 ಪಟ್ಟು ತೀವ್ರವಾಗಿ ಭೂಮಿಯನ್ನು ಬಿಸಿ ಮಾಡುತ್ತದೆ) ಒಲೆ ಉರಿಸಬಹುದು. ಸೌದೆ ಹೊಗೆಯನ್ನೂ ನಿಯಂತ್ರಿಸಬಹುದು. ವಿದೇಶೀ ಹಣದ ತುಸು ಭಾಗವನ್ನು ಗೊಬ್ಬರ ಅನಿಲ ಸ್ಥಾವರಗಳಿಗೆ ಬಳಸಬಹುದಿತ್ತಲ್ಲ? ಈ ಪ್ರಸ್ತಾವವನ್ನು ಮುಂದಿಟ್ಟರೆ ‘ಛೇ ಅದು ವಿಶ್ವಾಸಾರ್ಹ ತಂತ್ರಜ್ಞಾನವೇ ಅಲ್ಲ; ಗೋಬರ್ ಗ್ಯಾಸಿಗೆ ಹಣ ಸುರಿಯುವುದು ವ್ಯರ್ಥ’ ಎಂದು ಒಂದೇ ಮಾತಿನಲ್ಲಿ ಕೇಂದ್ರ ಅಕ್ಷಯ ಶಕ್ತಿ ಸಂಪನ್ಮೂಲ ಸಚಿವಾಲಯದ ನಿರ್ದೇಶಕರು ತಳ್ಳಿಹಾಕಬೇಕೆ?‘ಮಲೆನಾಡಿನಲ್ಲಿ ಸಾವಿರಾರು ಗೊಬ್ಬರ ಅನಿಲ ಸ್ಥಾವರಗಳು ಚೆನ್ನಾಗಿ ಕೆಲಸ ಮಾಡುತ್ತಿವೆ, ನೋಡಬನ್ನಿ ಎಂದರೂ ದಿಲ್ಲಿಯ ಅಧಿಕಾರಿಗಳಿಗೆ ಆಸಕ್ತಿ ಇಲ್ಲ’ ಎನ್ನುತ್ತಾರೆ, ಶಿರಸಿಯ ಉತ್ಸಾಹಿ ಇಂಧನತಜ್ಞ ಆನಂದ ಬಿಸ್ಲಕೊಪ್ಪ. ‘ಹಾಲಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿರುವ ನಮ್ಮ ದೇಶ, ಮೀಥೇನ್ ಅನಿಲವನ್ನು ಆಕಾಶಕ್ಕೆ ಉಡಾಯಿಸುವಲ್ಲೂ ಮೊದಲ ಸ್ಥಾನದಲ್ಲಿದೆ. ಯಾರೆದುರು ನಿಂತು ತಲೆ ಚಚ್ಚಿಕೊಳ್ಳೋಣ ಹೇಳಿ?’ ಎಂದು ಅವರು ಕೇಳುತ್ತಾರೆ. ಇತ್ತ ಹೊಗೆ ಸೂಸುವ ಒಲೆಗಳಿಂದಾಗಿ ವಿದೇಶೀಯರ ದೃಷ್ಟಿಯಲ್ಲಿ ಭಾರತೀಯರು ತಲೆ ತಗ್ಗಿಸಬೇಕಾಗಿದೆ.ಗ್ರಾಮೀಣ ಬದುಕಿನ ಗುಣಮಟ್ಟವನ್ನು ತುಸುಮಟ್ಟಿಗೆ ಸುಧಾರಿಸಬಲ್ಲ ಈ ಎಲ್ಲ ತಂತ್ರಜ್ಞಾನಗಳೂ ಅಲ್ಲಲ್ಲಿ ಕೆಲಸ ಮಾಡುತ್ತಿವೆ; ಪ್ರಭುತ್ವಕ್ಕೆ ಮಾತ್ರ ಗೊತ್ತಿಲ್ಲ. ನಮ್ಮ ಎಂಜಿನಿಯರ್‌ಗಳ ಥಳಕಿನ ಸಾಧನೆಗಳು ದಿಲ್ಲಿಯ ಗಣತಂತ್ರ ಪರೇಡ್‌ನಲ್ಲಿ ಮಿಂಚುತ್ತವೆ. ಅದನ್ನು ನೋಡಿ ಕಣ್ತುಂಬಿಸಿಕೊಳ್ಳುವ ಅವಕಾಶವೂ ತಳಮಟ್ಟದ ಶ್ರಮಜೀವಿಗಳಿಗೆ ಇಲ್ಲ. ಕ್ಷಮಿಸಿ, ಇಂದಿನ ಸಡಗರದ ಸಂದರ್ಭದಲ್ಲಿ ಹೇಳಬಾರದ ಸಂಗತಿಗಳೇನೊ ಇವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry