ದುಬೈನಲ್ಲಿ ಕಳೆದ ವಾರ ಮೃತಪಟ್ಟಿದ್ದ ಬಹುಭಾಷಾ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಬುಧವಾರ ಇಲ್ಲಿ ನಡೆಯಿತು.

7

ದುಬೈನಲ್ಲಿ ಕಳೆದ ವಾರ ಮೃತಪಟ್ಟಿದ್ದ ಬಹುಭಾಷಾ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಬುಧವಾರ ಇಲ್ಲಿ ನಡೆಯಿತು.

ಎ.ಸೂರ್ಯ ಪ್ರಕಾಶ್
Published:
Updated:

ಭಯೋತ್ಪಾದನೆಯ ಮುಂದುವರಿಕೆ ವಿರುದ್ಧದ ಪ್ರತಿಷ್ಠಾನವು (Foundation Against Continuing Terrorism – FACT) ‘ಔರಂಗಜೇಬ ಮತ್ತು ದಾರಾ ಶಿಕೋ – ಇಬ್ಬರು ಸಹೋದರರ ಕಥೆ’ ಎಂಬ ವಿಚಾರವಾಗಿ ಈಚೆಗೆ ಆಯೋಜಿಸಿದ್ದ ವಿನೂತನ ಸಮ್ಮೇಳನದ ಆತಿಥ್ಯವನ್ನು ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ವಹಿಸಿತ್ತು. ಈ ಕಾರ್ಯಕ್ರಮದಲ್ಲಿ ಈ ಇಬ್ಬರು ವ್ಯಕ್ತಿಗಳಿಗೆ ಸಂಬಂಧಿಸಿದ ವಸ್ತುಪ್ರದರ್ಶನ ಕೂಡ ಇತ್ತು. ಮಧ್ಯಯುಗದ ಇತಿಹಾಸವನ್ನು ನಾವು ಅರ್ಥ ಮಾಡಿಕೊಂಡಿರುವಲ್ಲಿ ಆಗಿರುವ ಲೋಪವನ್ನು ಸರಿಪಡಿಸಲು ಆಯೋಜಿಸಿದ ಇಂತಹ ಮೊದಲ ಕಾರ್ಯಕ್ರಮ ಇದು.

ಷಹಜಹಾನನ ಈ ಇಬ್ಬರು ಪುತ್ರರ ಜೀವನದಲ್ಲಿ ಇದ್ದ ಭಾರೀ ವ್ಯತ್ಯಾಸವನ್ನು ಈ ಸಮ್ಮೇಳನ ಹಾಗೂ ವಸ್ತುಪ್ರದರ್ಶನ ಹೊರಗೆಡವಿತು. ಮಧ್ಯಯುಗದ ಈ ಇಬ್ಬರು ವ್ಯಕ್ತಿಗಳನ್ನು ನಾವು ಅರ್ಥ ಮಾಡಿಕೊಂಡಿರುವ ರೀತಿಯಲ್ಲಿ ಕೆಲವು ಬದಲಾವಣೆ ತಂದುಕೊಳ್ಳುವ ಅಗತ್ಯ ಇದೆ ಎಂಬ ಸಂದೇಶವನ್ನೂ ಇವು ನೀಡಿದವು. ಸ್ವಾತಂತ್ರ್ಯಾನಂತರ ದೇಶವನ್ನು ಆವರಿಸಿಕೊಂಡ ಪೊಳ್ಳು–ಜಾತ್ಯತೀತವಾದಿ ವಾತಾವರಣವು ನಿರಂಕುಶ ಔರಂಗಜೇಬನನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ, ಅವನನ್ನು ವೈಭವೀಕರಿಸುವಂತೆ ಮಾಡಿತು. ಇದೇ ವೇಳೆ, ಧರ್ಮಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ್ದ, ಜಾತ್ಯತೀತ ಮೌಲ್ಯಗಳನ್ನು ಮತ್ತು ಕೆಲವು ತಾತ್ವಿಕತೆಗಳನ್ನು ಪ್ರಚುರಪಡಿಸುವ ಕೆಲಸ ಮಾಡಿದ್ದ ದಾರಾ ಶಿಕೋನನ್ನು ಮರೆಯುವಂತೆ ಮಾಡಿತು.

ಈ ಸಮ್ಮೇಳನವು, ಈ ಇಬ್ಬರು ಸಹೋದರರ ಜೀವನ ಶೈಲಿಯಲ್ಲಿ ಇದ್ದಂತಹ ಭಿನ್ನತೆಗಳ ಬಗ್ಗೆ ಮಾತನಾಡಿತು, ಇಸ್ಲಾಂ ಮತ್ತು ಹಿಂದೂ ಧರ್ಮಗಳ ಬಗ್ಗೆ ಇವರಿಬ್ಬರ ನಡುವೆ ಇದ್ದ ಭಿನ್ನ ಧೋರಣೆಗಳ ಬಗ್ಗೆಯೂ ಪ್ರಸ್ತಾಪಿಸಿತು. ಔರಂಗಜೇಬನ ವಿಚಾರದಲ್ಲಿ ಈ ಕೆಳಗಿನ ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು: ಹಿಂದೂಗಳ ದೇವಸ್ಥಾನಗಳು ಹಾಗೂ ಶಾಲೆಗಳನ್ನು ನಾಶ ಮಾಡುವಂತೆ ಔರಂಗಜೇಬ 1669ರ ಏಪ್ರಿಲ್‌ 9ರಂದು ತನ್ನ ಅಧಿಕಾರಿಗಳಿಗೆ ಆದೇಶಿಸಿದ. ಇದು ಬನಾರಸ್‌ನಲ್ಲಿನ ಕಾಶಿ ವಿಶ್ವನಾಥ ದೇಗುಲ, ಮಥುರಾದಲ್ಲಿನ ಶ್ರೀಕೃಷ್ಣ ದೇವಸ್ಥಾನ ಮತ್ತು ಸೋಮನಾಥ ದೇವಸ್ಥಾನದ ನಾಶಕ್ಕೆ ಕಾರಣವಾಯಿತು. ಮಥುರಾದಲ್ಲಿನ ದೇವಸ್ಥಾನ ನಾಶ ಮಾಡಿದ ನಂತರ, ಅಲ್ಲಿ ದೊಡ್ಡ ಮಸೀದಿ ನಿರ್ಮಿಸಲಾಯಿತು. ಅಲ್ಲಿನ ಮೂರ್ತಿಗಳನ್ನು ಆಗ್ರಾಕ್ಕೆ ತಂದು, ಅಲ್ಲಿನ ಬೇಗಂ ಸಾಹಿಬ್‌ ಮಸೀದಿಯ ಮೆಟ್ಟಿಲುಗಳ ಅಡಿ ಹುಗಿಯಲಾಯಿತು – ‘ಅವುಗಳ ಮೇಲೆ ಜನ ನಡೆಯುತ್ತಿರಲಿ ಎಂಬ ಉದ್ದೇಶದಿಂದ’.

ಇದಾದ ಹತ್ತು ವರ್ಷಗಳ ನಂತರ, ಅಂದರೆ 1679ರ ಏಪ್ರಿಲ್‌ 2ರಂದು ಔರಂಗಜೇಬ ಜಜಿಯಾ ತೆರಿಗೆ ವಿಧಿಸಿದ. ಹಿಂದೂಗಳು ತಮ್ಮ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಲು ಈ ತೆರಿಗೆ ಪಾವತಿಸಬೇಕಿತ್ತು. ಇಂತಹ ಕೆಲಸಗಳ ಪಟ್ಟಿಗೆ ಕೊನೆಯಿಲ್ಲ, ಆದರೆ ಈ ವ್ಯಕ್ತಿಯ ಜೀವನದ ಬಗ್ಗೆ ಬಹಿರಂಗವಾಗಿರುವ ಕೆಲವು ಅಂಶಗಳು ಇಲ್ಲಿವೆ: ಇಸ್ಲಾಂಗೆ ಮತಾಂತರ ಆದವರಿಗೆ ಸರ್ಕಾರಿ ಉದ್ಯೋಗ ಮತ್ತು ಜೈಲುಶಿಕ್ಷೆಯ ಅವಧಿಯನ್ನು ಮೊಟಕುಗೊಳಿಸುವ ಆಮಿಷ ಒಡ್ಡಿದ್ದ. 1665ರ ಏಪ್ರಿಲ್‌ನಲ್ಲಿ ಔರಂಗಜೇಬನು, ಆಮದು ಮಾಡಿಕೊಳ್ಳುವ ವಸ್ತುಗಳ ಸೀಮಾ ಸುಂಕದ ವಿಚಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ (ಶೇಕಡ 2.5ರಷ್ಟು) ಒಂದು ದರ ಮತ್ತು ಹಿಂದೂ ವ್ಯಾಪಾರಿಗಳಿಗೆ (ಶೇಕಡ 5ರಷ್ಟು) ಇನ್ನೊಂದು ದರ ನಿಗದಿಪಡಿಸಿದನು. 1668ರಲ್ಲಿ ಈತ ಹಿಂದೂ ಜಾತ್ರೆಗಳನ್ನು ನಿಷೇಧಿಸಿದ. 1671ರಲ್ಲಿ ಎಲ್ಲ ಹಿಂದೂ ಮುಖ್ಯ ಗುಮಾಸ್ತರನ್ನು, ಲೆಕ್ಕಾಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿ, ಅವರ ಜಾಗಕ್ಕೆ ಮುಸ್ಲಿಮರನ್ನು ನೇಮಕ ಮಾಡಿದ.

ಸಿಖ್ಖರ ವಿಚಾರದಲ್ಲಿ ಔರಂಗಜೇಬ ಅತ್ಯಂತ ದ್ವೇಷದಿಂದ ವರ್ತಿಸಿದ. ಸಿಖ್ಖರ ಶ್ರದ್ಧಾ ಕೇಂದ್ರಗಳನ್ನು ನಾಶ ಮಾಡುವಂತೆ ಆತ ಆದೇಶಿಸಿದ್ದ, ಗುರು ತೇಜ್‌ ಬಹದ್ದೂರ್‌ ಅವರನ್ನು ಬಂಧಿಸಿದ್ದ, ಹಲವು ದಿನಗಳ ಕಾಲ ಅವರಿಗೆ ಹಿಂಸೆ ನೀಡಿದ, ಅವರು ಇಸ್ಲಾಂಗೆ ಮತಾಂತರ ಹೊಂದಲು ನಿರಾಕರಿಸಿದ ಕಾರಣಕ್ಕೆ ಅವರ ತಲೆ ಕತ್ತರಿಸಿದ. ಗುರು ಗೋವಿಂದ ಸಿಂಗರ ಅವಧಿಯಲ್ಲೂ ಔರಂಗಜೇಬ ಸಿಖ್ಖರ ಮೇಲಿನ ಪ್ರಹಾರ ಮುಂದುವರಿಸಿದ, ಗೋವಿಂದ ಸಿಂಗರ ನಾಲ್ವರು ಮಕ್ಕಳನ್ನು ಹತ್ಯೆ ಮಾಡಿದ. ಔರಂಗಜೇಬ ಕೈಗೊಂಡ ಈ ತೀರ್ಮಾನಗಳನ್ನು, ಅವನ ಕೃತ್ಯಗಳನ್ನು ಇತಿಹಾಸಕಾರ ಜದುನಾಥ ಸರ್ಕಾರ್‌ ದಾಖಲಿಸಿದ್ದಾರೆ.

ಈಗ ನಾವು ಔರಂಗಜೇಬನ ಸಹೋದರ ದಾರಾ ಶಿಕೊ ಬಗ್ಗೆ ಗಮನ ಹರಿಸೋಣ. ದಾರಾ ಧರ್ಮವನ್ನು ಆಳವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಯಾಗಿದ್ದ. ಟೆಲ್ಮಡ್‌, ಹೊಸ ಒಡಂಬಡಿಕೆ, ವೇದಾಂತ ಮತ್ತು ಸೂಫಿಗಳ ಬಗ್ಗೆ ಅಧ್ಯಯನ ಮಾಡಿದ್ದ. ಹಿಂದೂ ಪಂಡಿತರ ನೆರವು ಪಡೆದು ಉಪನಿಷತ್ತುಗಳ ಪರ್ಷಿಯನ್ ಆವೃತ್ತಿಯೊಂದನ್ನು ರಚಿಸಿದ್ದ. ಹಿಂದೂ ಮತ್ತು ಇಸ್ಲಾಂ ಧರ್ಮಗಳ ನಡುವಣ ಸಮಾನ ಅಂಶಗಳನ್ನು, ಎಲ್ಲ ಧರ್ಮಗಳಲ್ಲೂ ಇರುವ ವೈಶ್ವಿಕ ಸತ್ಯಗಳನ್ನು ಕಂಡುಕೊಳ್ಳುವ ತವಕ ಅವನಲ್ಲಿ ಇತ್ತು ಎನ್ನಲಾಗಿದೆ. ತನ್ನ ತಾತ್ವಿಕತೆಯನ್ನು ಬೆಳೆಸಿಕೊಳ್ಳಲು ದಾರಾ ಶಿಕೊ, ಹಿಂದೂ ಯೋಗಿ ಲಾಲ್‌ ದಾಸ್ ಮತ್ತು ಮುಸ್ಲಿಂ ಶಿಕ್ಷಕ ಫಕೀರ್ ಸರ್ಮದ್ ಅವರಲ್ಲಿ ಅಧ್ಯಯನ ನಡೆಸಿದ್ದ. ದಾರಾ ಶಿಕೊನ ಒಂದು ಕೃತಿಯ ಹೆಸರು ‘ಮಜ್ಮುಆ–ಉಲ್–ಬಹ್ರೇನ್’ (ಎರಡು ಸಾಗರಗಳ ಸಮ್ಮಿಲನ). ಇದರ ಉದ್ದೇಶ ಹಿಂದೂ ಮತ್ತು ಇಸ್ಲಾಂ ಧರ್ಮಗಳ ನಡುವಣ ಸಮಾನ ಅಂಶಗಳನ್ನು ಕಂಡುಕೊಳ್ಳುವುದಾಗಿತ್ತು.

ಔರಂಗಜೇಬನಿಂದ ಹತ್ಯೆಯಾಗುವುದಕ್ಕೂ ಮೊದಲು ದಾರಾ ಶಿಕೊನನ್ನು ಹೇಗೆ ಸಂಪ್ರದಾಯ ವಿರೋಧಿ ಎಂದು ಬಿಂಬಿಸಲಾಯಿತು ಎಂಬ ಬಗ್ಗೆ ಜದುನಾಥ ಸರ್ಕಾರ್ ಬರೆದಿದ್ದಾರೆ. ‘ನಾಸ್ತಿಕನಾಗಿದ್ದಕ್ಕೆ ಮತ್ತು ಇಸ್ಲಾಮಿಕ್ ಸಂಪ್ರದಾಯದಿಂದ ದೂರವಾಗಿದ್ದಕ್ಕೆ ದಾರಾ ಶಿಕೊಗೆ ಮರಣ ದಂಡನೆ ವಿಧಿಸುವುದು ಸೂಕ್ತ ಎಂಬ ಆದೇಶಕ್ಕೆ ಸಾಮ್ರಾಟನ ಆಸ್ಥಾನದಲ್ಲಿನ ಧಾರ್ಮಿಕ ವಿದ್ವಾಂಸರು ಸಹಿ ಮಾಡಿದ್ದರು’.

ಔರಂಗಜೇಬನ ಅಧಿಕಾರದ ಅಡಿ ಪ್ರಕಟವಾದ ಅಧಿಕೃತ ಇತಿಹಾಸದಲ್ಲಿ ಈ ರಾಜಕೀಯ ಹತ್ಯೆಯನ್ನು ಹೀಗೆ ಸಮರ್ಥಿಸಿಕೊಳ್ಳಲಾಯಿತು: ‘ದಾರಾನ ಜೀವನದಿಂದಾಗಿ ಕಾನೂನಿನ ಸ್ತಂಭಗಳಿಗೆ ಮತ್ತು ನಂಬಿಕೆಗಳಿಗೆ ಹಲವು ಬಗೆಯ ಬೆದರಿಕೆಗಳು ಎದುರಾದವು. ಹಾಗಾಗಿ, ಸಾರ್ವಜನಿಕ ನೆಮ್ಮದಿಯನ್ನು ಹಾಳುಮಾಡುವ ದಾರಾ ಶಿಕೊನನ್ನು ಜೀವಂತವಾಗಿರಲು ಬಿಡುವುದು ಕಾನೂನಿಗೆ ವಿರುದ್ಧ ಎಂದು ಸಾಮ್ರಾಟನು ನಂಬಿಕೆಗಳು ಹಾಗೂ ಪವಿತ್ರ ಕಾನೂನನ್ನು ರಕ್ಷಿಸುವ ಅನಿವಾರ್ಯತೆಯಿಂದಾಗಿ, ಮತ್ತು ಪ್ರಭುತ್ವದ ಕಾರಣಗಳಿಗಾಗಿ, ತೀರ್ಮಾನಿಸಿದನು’.

ಈ ವಿಚಾರಗಳು, ಈ ಇಬ್ಬರು ವ್ಯಕ್ತಿಗಳ ಜೀವನದ ಬಗ್ಗೆ ಮೂಲಭೂತ ಅಂಶಗಳನ್ನು ನಮಗೆ ತಿಳಿಸುತ್ತವೆ. ಔರಂಗಜೇಬ ಪ್ರತಿಪಾದಿಸಿದ ಪ್ರತಿ ವಿಚಾರವೂ ನಮ್ಮ ಸಂವಿಧಾನದ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದ್ದವು. ಇದೇ ವೇಳೆ, ದಾರಾ ಶಿಕೊನ ತಾತ್ವಿಕ ಹುಡುಕಾಟಗಳು ಸಮಾನತೆ, ವೈವಿಧ್ಯದಲ್ಲಿ ಏಕತೆಯ ಸಾಂವಿಧಾನಿಕ ಗುರಿಗಳಿಗೆ ಪೂರಕವಾಗಿ ಇವೆ. ಹೀಗಿರುವಾಗ, ಜಾತ್ಯತೀತ, ಪ್ರಜಾತಂತ್ರವಾದಿ ಭಾರತವು ನಿರಂಕುಶ ಆಡಳಿತಗಾರ ಔರಂಗಜೇಬನನ್ನು ವೈಭವೀಕರಿಸಿದ್ದು ಹೇಗೆ, ದಾರಾ ಶಿಕೊನನ್ನು ಇತಿಹಾಸದ ಕಸದ ಬುಟ್ಟಿಗೆ ಎಸೆದಿದ್ದು ಹೇಗೆ?

ನೆಹರೂವಾದಿ ರಾಜಕೀಯ ನಾಯಕತ್ವ ಮತ್ತು ಆ ನಾಯಕತ್ವದ ಸುತ್ತ ಸುತ್ತುತ್ತಿದ್ದ ಬುದ್ಧಿಜೀವಿಗಳು ತಮ್ಮ ಜಾತ್ಯತೀತ ವಿರೋಧಿ ನಿಲುವನ್ನು ಎಷ್ಟರಮಟ್ಟಿಗೆ ಕೊಂಡೊಯ್ದರು ಅಂದರೆ, ದೆಹಲಿಯ ಪ್ರಮುಖ ರಸ್ತೆಯೊಂದಕ್ಕೆ ಔರಂಗಜೇಬನ ಹೆಸರನ್ನಿಟ್ಟರು. ಈ ರಸ್ತೆಗೆ ‘ಎ.ಪಿ.ಜೆ. ಅಬ್ದುಲ್ ಕಲಾಂ ರಸ್ತೆ’ ಎಂಬ ಹೆಸರು ಇಡುವ ಮೂಲಕ ಈ ತಪ್ಪನ್ನು ಎರಡು ವರ್ಷಗಳ ಹಿಂದೆ ಸರಿಪಡಿಸಲಾಯಿತು. ಆದರೆ ಆರು ದಶಕಗಳಿಂದ ಆಡಳಿತ ವ್ಯವಸ್ಥೆಯನ್ನೇ ಒತ್ತೆಯಾಗಿ ಇರಿಸಿಕೊಂಡಿರುವ ‍ಪೊಳ್ಳು–ಜಾತ್ಯತೀತವಾದಿ ಚಿಂತನೆಗಳ ಮನಸ್ಥಿತಿ ಹೇಗಿದೆ ಅಂದರೆ, ಈ ಮಾದರಿಯ ಚಿಂತನೆ ಹೊಂದಿರುವವರು ಈ ರಸ್ತೆಯ ಹೆಸರು ಬದಲಿಸಿದಾಗ, ಔರಂಗಜೇಬನ ಬೆಂಬಲಕ್ಕೆ ನಿಂತಿದ್ದರು.

ಆದರೆ ಇಲ್ಲಿರುವ ಪ್ರಶ್ನೆ, ‘ಔರಂಗಜೇಬ ರಸ್ತೆ’ಯನ್ನು ‘ಎ.ಪಿ.ಜೆ. ಅಬ್ದುಲ್ ಕಲಾಂ ರಸ್ತೆ’ ಎಂದು ಮರುನಾಮಕರಣ ಮಾಡಿದ್ದು ಏಕೆ ಎಂಬುದಲ್ಲ. ನಾವು ಕೇಳಿಕೊಳ್ಳಬೇಕಿರುವ ಪ್ರಶ್ನೆ: ಔರಂಗಜೇಬನಂತಹ ಕ್ರೂರಿ, ಅವಿವೇಕಿ, ಮುಸ್ಲಿಂ ಕೋಮುವಾದಿಯನ್ನು ಭಾರತದ ಪ್ರಭುತ್ವ ಇಷ್ಟು ವರ್ಷಗಳ ಕಾಲ ಏಕೆ ವೈಭವೀಕರಿಸಿತು? ಈ ಭಯಾನಕ ಆಲೋಚನೆಯ ಹಿಂದಿದ್ದವರು ಯಾರು? ದೇಶದ ಬಹುತ್ವವಾದಿ, ಪ್ರಜಾತಂತ್ರವಾದಿ ವ್ಯವಸ್ಥೆಯ ಮೇಲೆ ಏಕೆ ಈ ದೌರ್ಜನ್ಯ ನಡೆಯಿತು, ಇದನ್ನು ಜಾತ್ಯತೀತ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳನ್ನು ಪ್ರತಿಪಾದಿಸುವ ಸಂವಿಧಾನವನ್ನು ಸ್ವೀಕರಿಸಿದ ನಂತರವೂ ಆರು ದಶಕಗಳವರೆಗೆ ಮುಂದುವರಿಯಲು ಏಕೆ ಅವಕಾಶ ಕೊಡಲಾಯಿತು?

ಫ್ರಾನ್ಸ್ವಾ ಗೊತಿಯೆ ಅವರು ಆಯೋಜಿಸಿದ ಈ ಸಮ್ಮೇಳನವು ಪೊಳ್ಳು–ಜಾತ್ಯತೀತವಾದಿ ನೆಲೆಯಿಂದ ಜಾತ್ಯತೀತವಾದಿ ನೆಲೆಯತ್ತ, ಮಧ್ಯಯುಗದಿಂದ ಆಧುನಿಕ ಯುಗದತ್ತ ಭಾರತವನ್ನು ಒಯ್ಯುವ ಪ್ರಕ್ರಿಯೆಯಲ್ಲಿ  ಇನ್ನೊಂದು ಪ್ರಮುಖ ಹೆಜ್ಜೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry