ದೃಷ್ಟಿಯಂತೆ ಸೃಷ್ಟಿ

7

ದೃಷ್ಟಿಯಂತೆ ಸೃಷ್ಟಿ

ಗುರುರಾಜ ಕರ್ಜಗಿ
Published:
Updated:

ಇಡೀ ನಗರಕ್ಕೆ ನಗರವೇ ಉತ್ಸಾಹದಲ್ಲಿತ್ತು. ಇಂತಹ ಅವಕಾಶ ಜನ್ಮದಲ್ಲಿ ಒಂದು ಬಾರಿಯಾದರೂ ಸಿಗುವುದು ಸಾಧ್ಯವಿಲ್ಲ ಎಂದು ಜನ ಹೇಳಿಕೊಳ್ಳುತ್ತಿದ್ದರು. ಯಾಕೆಂದರೆ ನಗರದ ಪ್ರಮುಖರು ಒಂದು ಬಹುದೊಡ್ಡ ಯೋಜನೆಯನ್ನು ಹಾಕಿಕೊಂಡಿದ್ದರು. ಪ್ರಪಂಚದ ಮೂಲೆ ಮೂಲೆಗಳಿಂದ ಅತ್ಯಂತ ಪ್ರತಿಷ್ಠಿತವಾದ ಸಂಗ್ರಹಾಲಯಗಳಿಂದ ಸರ್ವಶ್ರೇಷ್ಠ ಕಲಾಕೃತಿಗಳನ್ನು ತರಿಸಿ ಒಂದು ಪ್ರದರ್ಶನ ಏರ್ಪಡಿಸಿದ್ದರು. ಇದೊಂದು ಅತ್ಯಪೂರ್ವವಾದ ಅವಕಾಶ.ಒಂದೊಂದು ಕಲಾಕೃತಿಯನ್ನು ನೋಡಬೇಕಾದರೂ ಬೇರೆ ಬೇರೆ ದೇಶಕ್ಕೆ ಹೋಗಬೇಕಾಗುತ್ತದೆ. ಅಂತಹುದರಲ್ಲಿ ಅವೆಲ್ಲವೂ ಒಂದೇ ಕಡೆಗೆ ಈ ನಗರಕ್ಕೆ ಬಂದು ಸೇರುವುದಾದರೆ ಎಷ್ಟು ಚೆನ್ನ. ಈ ಪ್ರದರ್ಶನಕ್ಕಾಗಿ ಇಡಿ ನಗರವೇ ಸಡಗರದಿಂದ ತುಂಬಿಕೊಂಡು ನಿಂತಿತ್ತು. ನಗರದ ಬಹುದೊಡ್ಡ ಕಟ್ಟಡವನ್ನು ಈ ಪ್ರದರ್ಶನಕ್ಕೆ ಸಿದ್ಧಗೊಳಿಸಲಾಗಿತ್ತು. ಅವುಗಳ ರಕ್ಷಣೆಗಾಗಿ ಬಿಗಿಯಾದ ಬಂದೋಬಸ್ತ್ ಕೂಡ ಸಿದ್ಧವಾಗಿತ್ತು. ಎಲ್ಲಿ ನೋಡಿದರೆ ಅಲ್ಲಿ ರಕ್ಷಣಾ ಸಿಬ್ಬಂದಿಯವರು.ಕಟ್ಟಡದ ಪ್ರತಿ ಮೂಲೆಯನ್ನು ಬಿಡದೇ ಕಣ್ಣಿಟ್ಟು ನೋಡುವ ಕ್ಯಾಮರಾಗಳು ಕಣ್ಣು ಮಿಟುಕಿಸದೇ ನೋಡತೊಡಗಿದವು. ಪ್ರದರ್ಶನದ ದಿನ ಹತ್ತಿರ ಬಂದಂತೆ ಆಯೋಜಕರ ಹೃದಯಬಡಿತ ಹೆಚ್ಚಾಗುತ್ತಿದ್ದವು. ಕಲಾಕೃತಿಗಳು ಒಂದೊಂದಾಗಿ ಬಂದು ನಗರ ಸೇರಿದವು. ಒಂದೊಂದು ಕಲಾಕೃತಿಯೂ ಅದೆಷ್ಟು ಕೋಟಿ ಹಣ ಬೆಲೆಬಾಳುವುದೋ. ನಗರದಲ್ಲಿ, ಅದರ ಸುತ್ತಮುತ್ತ ಅಚ್ಚುಕಟ್ಟಾದ ಪ್ರಚಾರ ಕಾರ್ಯ ನಡೆಯಿತು. ಜನರ ಉತ್ಸಾಹವೂ ಹೆಚ್ಚಾಗಿತ್ತಲ್ಲವೇ. ಹದಿನೈದು ದಿವಸಗಳ ಟಿಕೆಟ್ಟುಗಳು ಒಂದೇ ದಿನದಲ್ಲಿ ಮಾರಾಟವಾಗಿ ಹೋದವು.ಪ್ರದರ್ಶನದ ದಿನ ಬಂತು. ಪ್ರಧಾನಮಂತ್ರಿಗಳೇ ಬಂದು ಉದ್ಘಾಟನೆ ಮಾಡಿ ಹೋದರು. ಅವರ ಹಿಂದೆಯೇ ರಾಜಕೀಯದ ಅತಿರಥ, ಮಹಾರಥರು ಬಂದು ಹೋದರು. ವಿಪರೀತ ಜನದಟ್ಟಣೆ. ಮಹಾ, ಮಹಾ ಕಲಾವಿಮರ್ಶಕರು, ಛಾಯಾ ಚಿತ್ರಕಾರರು, ವರದಿಗಾರರು ಸಾಲುಹಿಡಿದರು. ನಂತರ ಮಧ್ಯಾಹ್ನ ಜನರಿಗಾಗಿ ಪ್ರದರ್ಶನ ಪ್ರಾರಂಭವಾಯಿತು. ಪ್ರಪಂಚದ ಸರ್ವಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ನೋಡುತ್ತ ಜನ ಮೈಮರೆತರು. ಆಗ ಒಬ್ಬ ಮಹಿಳೆ ಕೂಡ ಪ್ರದರ್ಶನ ನೋಡಲು ಬಂದಳು. ಆಕೆಯನ್ನು ನೋಡಿದರೆ ಬಹುದೊಡ್ಡ ಕಲಾವಿಮರ್ಶಕರಂತೆ ಕಾಣುತ್ತಿದ್ದಳು.ಆಕೆ ಪ್ರತಿಯೊಂದು ವರ್ಣಚಿತ್ರದ ಹತ್ತಿರ ಹೋಗುವಳು. ಅದನ್ನು ದೀರ್ಘವಾಗಿ ಗಮನಿಸಿ ಒಂದು ಕ್ಷಣ ಬಿಟ್ಟು ಚಿತ್ರದ ತೀರ ಹತ್ತಿರಕ್ಕೆ ಹೋಗಿ ಏನನ್ನೋ ನೋಡುವಳು, ತನ್ನ ಡೈರಿಯಲ್ಲಿ ವಿಷಯ ಬರೆದುಕೊಳ್ಳುವಳು. ಕೆಲವೊಂದು ಚಿತ್ರವನ್ನು ಆಳವಾಗಿ ಪರೀಕ್ಷಿಸಿ,  `ತುಂಬ ಚೆನ್ನಾಗಿದೆ'  ಎನ್ನುವಳು. ಮತ್ತೆ ಕೆಲವದರ ಮುಂದೆ ನಿಂತು ತಲೆ ಅಲ್ಲಾಡಿಸಿ ಅಸಮಾಧಾನ ತೋರುವಳು. ಅವಳನ್ನೇ ಗಮನಿಸುತ್ತಿದ್ದ ವ್ಯಕ್ತಿಗೆ ವಿಚಿತ್ರವೆನ್ನಿಸಿತು. ಈ ಕಲಾಕೃತಿಗಳು ಪ್ರಪಂಚದಲ್ಲೇ ಶ್ರೇಷ್ಠವಾದವುಗಳು, ಒಂದಕ್ಕಿಂತ ಒಂದು ಚೆನ್ನಾಗಿರುವಂಥವುಗಳು. ಈಕೆಗೆ ಯಾಕೆ ಕೆಲವು ಇಷ್ಟವಾಗಲಿಲ್ಲವೆಂಬುದು ತಿಳಿಯಲಿಲ್ಲ.ಕೊನೆಗೆ ಪ್ರದರ್ಶನದಿಂದ ಹೊರಬಂದಾಗ ಆತ ಅವಳನ್ನು ಕೇಳಿದರು,  `ನಿಮಗೆ ಪ್ರದರ್ಶನ ಹೇಗೆನ್ನಿಸಿತು'  ಆಕೆ ನಿಟ್ಟುಸಿರುಬಿಟ್ಟು ಹೇಳಿದಳು,  `ನೋಡಿ ಎಲ್ಲವನ್ನೂ ನಾನು ಡೈರಿಯಲ್ಲಿ ಬರೆದುಕೊಂಡಿದ್ದೇನೆ. 12, 48, 314 ಮತ್ತು 526 ರ ವರ್ಣಚಿತ್ರಗಳ ಚೌಕಟ್ಟಿನ ಮೇಲೆ ಸ್ವಲ್ಪ ದೂಳು ಇದೆ. ಅದನ್ನು ಇನ್ನೂ ಸರಿಯಾಗಿ ಒರೆಸಬೇಕಾಗಿತ್ತು' ಎಂದಳು. `ಅವು ಯಾರ ವರ್ಣಚಿತ್ರಗಳು'  ಕೇಳಿದ ಆ ವ್ಯಕ್ತಿ. ಆಕೆ ಮತ್ತೆ ನಿಟ್ಟುಸಿರು ಬಿಟ್ಟು ಹೇಳಿದಳು, `ನನಗೇನು ಗೊತ್ತು. 

ನನಗೆ ಈ ಕಲಾಕೃತಿಗಳು ತಿಳಿಯುವುದಿಲ್ಲ. ನಾನು ಕೇವಲ ಅವುಗಳನ್ನು ಸ್ವಚ್ಛವಾಗಿ ಇಟ್ಟಿದ್ದಾರೆಯೇ, ಇಲ್ಲವೇ ನೋಡಲು ಬಂದಿದ್ದೆ'.ಹೌದು. ನಾವು ಕೇವಲ ತಪ್ಪುಗಳನ್ನು ನೋಡಲು ಹೋಗಿ ಅತ್ಯಂತ ಸುಂದರವಾದದ್ದರ ದರ್ಶನ ಕಳೆದುಕೊಳ್ಳುತ್ತೇವೆ. ಸ್ವರ್ಗದಲ್ಲೂ ಕೊರೆ ಕಂಡು ನರಕಮಾಡಿಕೊಳ್ಳುತ್ತೇವೆ. ನಮ್ಮ ದೃಷ್ಟಿ ಶುಭವಾದದ್ದರೆಡೆಗೆ, ಸುಂದರವಾದದ್ದರೆಡೆಗೆ ಮಾತ್ರ ಹರಿಯುವಂತೆ ಮಾಡಿದರೆ ಆ ಸೌಂದರ್ಯ ನಮ್ಮ ಜೀವನವನ್ನು ತುಂಬುತ್ತದೆ, ಇಲ್ಲದಿದ್ದರೆ ಮನವೆಲ್ಲ ಕಸದ ಬುಟ್ಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry