ಗುರುವಾರ , ಡಿಸೆಂಬರ್ 12, 2019
17 °C

ದೆಹಲಿಗೆ ವಿತ್ತ, ಪ್ರಾದೇಶಿಕತೆಯತ್ತ ಚಿತ್ತ

ನಾರಾಯಣ ಎ
Published:
Updated:
ದೆಹಲಿಗೆ ವಿತ್ತ, ಪ್ರಾದೇಶಿಕತೆಯತ್ತ ಚಿತ್ತ

ಕರ್ನಾಟಕದಲ್ಲಿ ಬಿಜೆಪಿಗೆ ತಾನು ಕಾಂಗ್ರೆಸ್ ವಿರುದ್ಧ ಹೆಣೆದಿರುವ ವ್ಯೂಹದ ದೌರ್ಬಲ್ಯ ತಿಳಿದಿಲ್ಲ. ಅಥವಾ ತಿಳಿದೂ ತಿಳಿದೂ ಯಾವುದೋ ಲೆಕ್ಕಾಚಾರದಿಂದ ಅದು ಹಾಗೆ ಮಾಡುತ್ತಿದೆ. ಏನೇ ಆದರೂ ಪರಿಣಾಮ ಮಾತ್ರ ಒಂದೇ. 

 

ಕರ್ನಾಟಕದ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿರುವ ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ಇಲ್ಲಿಂದ ಯಥೇಚ್ಛವಾಗಿ ಹಣ ಒಯ್ದು ನೀಡುತ್ತಿದ್ದಾರೆ ಎನ್ನುವ ಎಲ್ಲರೂ ಬಲ್ಲ ಸತ್ಯಕ್ಕೆ ಬಿಜೆಪಿ ಒಂದು ಪುರಾವೆ ಮುಂದಿಟ್ಟಿದೆ. ಆ ಮೂಲಕ ಚುನಾವಣೆಗೆ ಮುನ್ನ ಕಾಂಗ್ರೆಸ್ಸನ್ನು ಇನ್ನೊಂದು ಸುತ್ತು ನಿಸ್ತೇಜಗೊಳಿಸುವುದು ಬಿಜೆಪಿಯ ತಂತ್ರ.

 

ಇದರಿಂದ ಕಾಂಗ್ರೆಸ್ಸಿಗೆ ಗಾಸಿಯಾಯಿತೋ  ಬಿಟ್ಟಿತೋ ಎನ್ನುವುದಕ್ಕಿಂತ ಮುಖ್ಯವಾಗುವುದು ಏನು ಎಂದರೆ ಈ ತಂತ್ರ ಸ್ವತಃ ಬಿಜೆಪಿಗೆ ಸ್ವಯಂಘಾತಕವಾಗಬಹುದು ಎನ್ನುವುದು. ಯಾಕೆಂದರೆ ಬಿಜೆಪಿ ಮುಂದಿರಿಸಿದ್ದು ಭ್ರಷ್ಟಾಚಾರದ ವಿಚಾರವಲ್ಲ. ಅದು ಜನರ ಮುಂದಿರಿಸಿದ್ದು ಭ್ರಷ್ಟಾಚಾರಕ್ಕಿಂತ ಮಿಗಿಲಾದ ಇನ್ನೊಂದು ಸಮಸ್ಯೆಯನ್ನು. ರಾಷ್ಟ್ರ ಮಟ್ಟದ ಪಕ್ಷವೊಂದು ರಾಜ್ಯವೊಂದರಲ್ಲಿ ಆಡಳಿತ ನಡೆಸುವಾಗ ಆ ರಾಜ್ಯ ಅನುಭವಿಸುವ ಅಸಹಾಯಕತೆಯನ್ನು. ರಾಜ್ಯ ನಾಯಕರು ಪಕ್ಷದ ರಾಷ್ಟ್ರೀಯ ತಿಜೋರಿಯನ್ನು ತುಂಬಲು ಅನಿವಾರ್ಯವಾಗಿ ರಾಜ್ಯದ ಸಂಪತ್ತನ್ನು ಬಳಸಿಕೊಳ್ಳಬೇಕಾದ ವಾಸ್ತವವನ್ನು.

 

ರಾಷ್ಟ್ರ ಮಟ್ಟದ ಪಕ್ಷವಾದ ಬಿಜೆಪಿ ಕೂಡಾ ಈ ವಾಸ್ತವದ ಭಾಗ. ಆದುದರಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯಮಟ್ಟದಿಂದ ಹೋಗುವ ದೇಣಿಗೆಯ ವಿಚಾರವನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ಬಿಜೆಪಿ ರಾಜ್ಯದ ಜನರಿಗೆ ಪರೋಕ್ಷವಾಗಿ ತಿಳಿಸಿದ್ದು ಏನನ್ನು ಎಂದರೆ ರಾಷ್ಟ್ರೀಯ ಪಕ್ಷವೊಂದು ಕರ್ನಾಟಕವನ್ನು ಆಳುವಷ್ಟೂ ಕಾಲ ರಾಜ್ಯಕ್ಕೆ ಈ ಗೋಳು ತಪ್ಪುವುದಿಲ್ಲ ಎನ್ನುವ ಸಂದೇಶವನ್ನು.  

 

ರಾಷ್ಟ್ರ ಮಟ್ಟದ ಪಕ್ಷವೊಂದು ಕರ್ನಾಟಕವನ್ನು ಆಳುತ್ತಿದ್ದರೆ ರಾಜ್ಯದ ಸಂಪತ್ತು ಒಂದಲ್ಲ ಒಂದು ರೂಪದಲ್ಲಿ ಆ ಪಕ್ಷದ ದೇಶವ್ಯಾಪಿ ರಾಜಕೀಯ ಅಗತ್ಯಗಳನ್ನು ಪೂರೈಸಲು ರವಾನೆಯಾಗುತ್ತಲೇ ಇರುತ್ತದೆ ಎನ್ನುವ ಕಟು ವಾಸ್ತವವನ್ನು. 

 

ಈ ಸಂದೇಶ ಜನರಿಗೆ ಎಷ್ಟು ಹೆಚ್ಚು ತಲುಪುತ್ತದೋ ಅಷ್ಟರಮಟ್ಟಿಗೆ ಅದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನಾಭಿಪ್ರಾಯ ರೂಪಿಸುತ್ತದೆ. ಆ ಅಭಿಪ್ರಾಯ ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ವಿರುದ್ಧವೂ ಇರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಮತ್ತು ಜನತಾ ದಳ ನಾಯಕರು, ‘ಬಿಜೆಪಿ ಕೂಡಾ ಹಿಂದೆ ಇದನ್ನೇ ಮಾಡುತ್ತಿತ್ತು’ ಎನ್ನುವುದಕ್ಕೆ ಪುರಾವೆ ಒದಗಿಸುತ್ತಿದ್ದಾರೆ.

 

ಈ ಎಲ್ಲ ವಿದ್ಯಮಾನಗಳು ಒಕ್ಕೂಟ ವ್ಯವಸ್ಥೆಯ ದೊಡ್ಡ ಅನ್ಯಾಯದ ಕತೆಯೊಂದನ್ನು ನಮ್ಮ ಮುಂದೆ ಬಿಚ್ಚಿಡುತ್ತಿವೆ. ಇಲ್ಲಿ ಅನ್ಯಾಯಕ್ಕೆ ಒಳಗಾಗುತ್ತಿರುವುದು ರಾಷ್ಟ್ರ ಮಟ್ಟದ ಪಕ್ಷವೊಂದನ್ನು ಆಡಳಿತ ಪಕ್ಷವಾಗಿ ಹೊಂದಿರುವ ರಾಜ್ಯಗಳು. ಪ್ರಾದೇಶಿಕ ಪಕ್ಷಗಳು ಆಳ್ವಿಕೆ ನಡೆಸುವ ರಾಜ್ಯಗಳು ಕೇಂದ್ರ ಸರ್ಕಾರವನ್ನು ಬೇರೆ ಬೇರೆ ರೀತಿಯ ಅಸಹಾಯಕತೆಯಲ್ಲಿ  ಸಿಲುಕಿಸಿ ಅಧಿಕೃತವಾಗಿ ಹೆಚ್ಚಿನ ಸಂಪತ್ತು ಕೇಂದ್ರದಿಂದ ತಮ್ಮ ತಮ್ಮ ರಾಜ್ಯಗಳಿಗೆ ಹರಿಯುವಂತೆ ಮಾಡುತ್ತವೆ.

 

ಇನ್ನೊಂದೆಡೆ ಅವುಗಳಿಗೆ ತಮ್ಮ ರಾಜ್ಯದ ಸಂಪತ್ತನ್ನು ಪಕ್ಷ-ರಾಜಕೀಯ ಉದ್ದೇಶಗಳಿಗಾಗಿ ರಾಜ್ಯದ ಹೊರಗೆ ಸಾಗಿಸುವ ಅನಿವಾರ್ಯ ಇರುವುದಿಲ್ಲ. ರಾಷ್ಟ್ರ ಮಟ್ಟದ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳ ಕತೆ ಇದಕ್ಕೆ ತದ್ವಿರುದ್ಧ. ಅವುಗಳಿಗೆ ಒಂದೆಡೆ ಕೇಂದ್ರದಿಂದ ಅಧಿಕೃತವಾಗಿ ಸಿಗಬೇಕಾದದ್ದು ಸರಿಯಾಗಿ ಸಿಗುವುದಿಲ್ಲ. ಇನ್ನೊಂದೆಡೆ  ಈ ರಾಜ್ಯಗಳ ಸಂಪತ್ತು ಪಕ್ಷ ರಾಜಕಾರಣದ ಅಗತ್ಯಗಳನ್ನು  ಪೂರೈಸಲು ಅನಧಿಕೃತವಾಗಿ ದೆಹಲಿಯತ್ತ ಹರಿಯುತ್ತದೆ. 

 

ದಕ್ಷಿಣ ರಾಜ್ಯಗಳ ಪೈಕಿ ಈ ಹೊಡೆತ ಅನುಭವಿಸುತ್ತಿರುವುದು ಸದ್ಯಕ್ಕೆ ಕರ್ನಾಟಕ ಮಾತ್ರ. ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆಯೂರಿ ಎಷ್ಟೋ ಸಮಯವಾಗಿದೆ. ತೆಲಂಗಾಣದಲ್ಲೂ ಪ್ರಾದೇಶಿಕ ಪಕ್ಷವೇ ಚುಕ್ಕಾಣಿ ಹಿಡಿದಿದೆ. ಕೇರಳದಲ್ಲಿ ರಾಷ್ಟ್ರೀಯ ಪಕ್ಷಗಳೇ ಇರುವಂತೆ ಮೇಲ್ನೋಟಕ್ಕೆ ಗೋಚರಿಸುತ್ತದೆ. ಆದರೆ ಅಲ್ಲಿನ ರಾಜಕೀಯದ ಮೇಲ್ಮೈಯನ್ನು ತುಸು ಗೀರಿದರೆ ಕಾಣುವ ಚಿತ್ರಣವೇ ಬೇರೆ. ಆ ರಾಜ್ಯ, ರಾಷ್ಟ್ರೀಯ ಪಕ್ಷಗಳನ್ನು ತನಗೆ ಬೇಕಾದ೦ತೆ ಪಳಗಿಸಿ ಯುಡಿಎಫ್ ಮತ್ತು ಎಲ್‌ಡಿಎಫ್ ಎಂಬ ಎರಡು ಸ್ಥಳೀಯ ಒಕ್ಕೂಟಗಳಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳನ್ನು ಕ್ರಮವಾಗಿ ಬೆಸೆದು ಪ್ರಾದೇಶಿಕ ಪಕ್ಷದ ಪರಿಕಲ್ಪನೆಗೆ ತನ್ನದೇ ಆದ ಭಾಷ್ಯ ಬರೆದುಕೊಂಡಿದೆ.

 

ಕರ್ನಾಟಕದಿಂದ ದೆಹಲಿಗೆ ಹಣಕಾಸು ಸಾಗಿಸುವ ವ್ಯವಸ್ಥೆ ಎಂದಿನಿಂದ ಪ್ರಾರಂಭವಾಯಿತು ಎನ್ನುವುದಕ್ಕೆ ಅಧಿಕೃತ ದಾಖಲೆಗಳಿಲ್ಲ. ಎಲ್ಲವೂ ಗುಟ್ಟಾಗಿ ನಡೆಯುವ ವ್ಯವಹಾರಗಳು. ಕಾಂಗ್ರೆಸ್ 1969ರಲ್ಲಿ ಇಬ್ಭಾಗವಾದ ನಂತರ ಇದು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡ ಪಿಡುಗು ಎ೦ದು ಹೇಳಲಾಗುತ್ತಿದೆ. ಕರ್ನಾಟಕದ ಕಾಂಗ್ರೆಸ್ ಮುಖ್ಯಮಂತ್ರಿಗಳ ಪೈಕಿ ದಿವಂಗತ ದೇವರಾಜ ಅರಸು ಅವರು ಈ ಅನಿಷ್ಟದ ಬಗ್ಗೆ ನಿರ್ಭಿಡೆಯಿಂದ ಮಾತನಾಡಿದ ದಾಖಲೆಗಳಿವೆ.

 

ಅಂದರೆ ಅಂತಹ ಬಲಿಷ್ಠ ನಾಯಕರಾಗಿದ್ದ ಅರಸು ಅವರಿಗೆ ಕೂಡಾ ಪಕ್ಷ ರಾಜಕಾರಣದ ಈ ಬೇಡಿಕೆಯನ್ನು ತಿರಸ್ಕರಿಸಲು ಸಾಧ್ಯವಾಗಿರಲಿಲ್ಲ. ಒಂದು ರೀತಿಯಲ್ಲಿ ಅರಸು ಅವರ ರಾಜಕೀಯದ ಅಂತ್ಯಕ್ಕೂ ಕಾರಣವಾದ ವಿದ್ಯಮಾನ ಇದು. ಕಾಂಗ್ರೆಸ್ಸಿನಿಂದ ಹೊರಬಂದ ನಂತರ ಪ್ರಬಲವಾದ ಪ್ರಾದೇಶಿಕ ಪಕ್ಷವೊಂದನ್ನು ಕರ್ನಾಟಕದಲ್ಲಿ ಕಟ್ಟಬೇಕು ಎನ್ನುವ ಅವರ ಅರ್ಧಕ್ಕೆ ಉಳಿದ ಯೋಜನೆಗೆ ಕೂಡಾ ದೆಹಲಿಗೆ ಹಣ ಸಾಗಿಸುವ ವಿಚಾರದಲ್ಲಿ ಅವರು ಅನುಭವಿಸಿದ ನೋವೇ ಪ್ರೇರಣೆ ಎಂದು ನಾವು ಊಹಿಸಬಹುದು. 

 

ಸಮಸ್ಯೆ ಹಳೆಯದು. ಅದನ್ನು ಸಾಬೀತುಪಡಿಸಲು ಸಿಗುವ ಪುರಾವೆ ಸತ್ವವಿಲ್ಲದ್ದು. ಆದರೂ ಈಗ ಈ ಕುರಿತಂತೆ ಬಿಜೆಪಿ ಎಬ್ಬಿಸಿರುವ ರಾಡಿ ಎಂದಿಗಿಂತ ಹೆಚ್ಚಿನ ಪ್ರಾಧಾನ್ಯ ಪಡೆದುಕೊಂಡಿದ್ದರೆ ಅದಕ್ಕೆ ಕಾರಣವಿದೆ. ಕರ್ನಾಟಕದ ರಾಜಕೀಯ ಸ೦ದರ್ಭ ಈಗ ಬದಲಾಗುತ್ತಿದೆ.  ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕುತ್ತಾ ಬರುತ್ತಿರುವ ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ವತಃ  ಕರ್ನಾಟಕದ ಮತದಾರರಲ್ಲಿ ಇತ್ತೀಚೆಗೆ ಒಂದು ಪ್ರಮಾಣದ ಅಸಹನೆ, ಜುಗುಪ್ಸೆ ಪ್ರಾರಂಭವಾಗಿದೆ.

 

ಹೋದ ವರ್ಷ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳು, ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡ ರೀತಿ, ‘ನೀಟ್’ ಪರೀಕ್ಷೆಯ ವಿವಾದ, ಜಲ್ಲಿಕಟ್ಟು ವಿಚಾರದಲ್ಲಿ ಕೇಂದ್ರ ಸರ್ಕಾರ ತೋರಿದ ಆಸಕ್ತಿಯನ್ನು ಅದು ಕಂಬಳದ ವಿಚಾರದಲ್ಲಿ ತೋರಿಸದೆ ಇದ್ದದ್ದು, ಬರ ಪರಿಹಾರಕ್ಕೆ ನೆರವು ಒದಗಿಸುವಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಸರ್ಕಾರಗಳು ರಾಜ್ಯವನ್ನು ಕಡೆಗಣಿಸಿವೆ ಎನ್ನುವ ಆಪಾದನೆ ಇತ್ಯಾದಿಗಳೆಲ್ಲ ಕರ್ನಾಟಕದಲ್ಲಿ ರಾಷ್ಟ್ರ ಮಟ್ಟದ ಪಕ್ಷಗಳ ಬಗ್ಗೆ ಒಂದು ರೀತಿಯ ಮರುಚಿಂತನೆಗೆ ವೇದಿಕೆ ಒದಗಿಸಿದವು.

 

ಈಗ ಬಿಜೆಪಿ ಮತ್ತು  ಕಾಂಗ್ರೆಸ್ ನಾಯಕರು ಪರಸ್ಪರರ ವಿರುದ್ಧ ಎತ್ತಿ ತೋರಿಸುತ್ತಿರುವ ರಾಜಕೀಯ ಹಣಕಾಸಿನ ಅನಧಿಕೃತ ವ್ಯವಹಾರ ಕೂಡಾ ಈ ಒಕ್ಕೂಟ ಸಂಘರ್ಷದ ಮುಂದುವರಿದ ಭಾಗದಂತೆ ಕಾಣುತ್ತದೆ. ರಾಷ್ಟ್ರ ಮಟ್ಟದ ಪಕ್ಷಗಳ ಬಗ್ಗೆ ಹುಟ್ಟಿಕೊಂಡಿರುವ ಅಸಹನೆಯನ್ನು ಈ ಸಂಘರ್ಷ ಇನ್ನೊಂದು ರೀತಿಯಲ್ಲಿ ಸಾಂದ್ರಗೊಳಿಸುತ್ತಿದೆ.

 

ಕರ್ನಾಟಕದಲ್ಲಿ, ನೆರೆ ರಾಜ್ಯಗಳಲ್ಲಿ ಹುಟ್ಟಿಕೊಂಡಂತೆ ಪ್ರಾದೇಶಿಕ ಪಕ್ಷಗಳು ಯಾಕೆ ಹುಟ್ಟಿ ಬೆಳೆಯಲಿಲ್ಲ ಎಂಬ ಒಂದು ಪ್ರಶ್ನೆ ಆಗಾಗ ರಾಜಕೀಯ ವಿಶ್ಲೇಷಕರನ್ನು ಕಾಡಿದ್ದಿದೆ. ಈ ಪ್ರಶ್ನೆಗೆ ಉತ್ತರವಾಗಿ ಕರ್ನಾಟಕದ ಜನ ಹೆಚ್ಚು ರಾಷ್ಟ್ರೀಯವಾದಿಗಳಾಗಿದ್ದಾರೆ, ಅವರಿಗೆ ತೀವ್ರವಾದ ಪ್ರಾದೇಶಿಕ ಅಸ್ಮಿತೆಯ ಪರಿಕಲ್ಪನೆ ಇಲ್ಲ... ಇತ್ಯಾದಿ ಕಾರಣಗಳನ್ನು ನೀಡಲಾಗುತ್ತದೆ.  ಕರ್ನಾಟಕದ ಸ್ಥಿತಿ ಏನು ಎಂದರೆ ಇಲ್ಲಿ ಅಂತಹ ರಾಜಕೀಯ ಭಾವನೆಗಳನ್ನು ಹುಟ್ಟುಹಾಕಿ ಬೆಳೆ ತೆಗೆಯಬಲ್ಲ ಒಬ್ಬ ನಾಯಕ ಇರಲಿಲ್ಲ. ಇದ್ದ  ನಾಯಕರಿಗೆ ರಾಷ್ಟ್ರೀಯ ಪಕ್ಷಗಳು ನೆಲೆ ಒದಗಿಸಿದವು.

 

ಕಾಲಕಾಲಕ್ಕೆ ಕರ್ನಾಟಕದಲ್ಲಿ ಕಾಣಿಸಿಕೊಂಡ ಪ್ರಾದೇಶಿಕ ಪಕ್ಷಗಳು ಹೆಚ್ಚು ಕಾಲ ಉಳಿಯಲಿಲ್ಲ ನಿಜ. ಆದರೆ ಹಾಗಾಗುವುದಕ್ಕೆ ಇಲ್ಲಿನ ಜನರಿಗೆ ಪ್ರಾದೇಶಿಕ ಪಕ್ಷಗಳ ವಿಚಾರದಲ್ಲಿ ಇರುವ ಒಲವು ನಿಲುವುಗಳು ಕಾರಣ ಎನ್ನುವುದಕ್ಕಿಂತ ಹೆಚ್ಚಾಗಿ ಗೋಚರಿಸುವ ಸತ್ಯ ಏನು ಎಂದರೆ  ಅಂತಹ ಪಕ್ಷಗಳನ್ನು ಕಟ್ಟಿದ ನಾಯಕರಿಗೆ ಭದ್ರವಾದ ರಾಜಕೀಯ ನೆಲೆಯಾಗಲೀ ಸೂಕ್ಷ್ಮವಾದ ಪ್ರಾಯೋಗಿಕ ಮುನ್ನೋಟಗಳಾಗಲೀ ಇರಲಿಲ್ಲ ಎನ್ನುವುದು.

 

ಈ ಎಲ್ಲಾ ಗುಣಗಳಿದ್ದ ದೇವರಾಜ ಅರಸು ತಮ್ಮ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯೋಗ ಪ್ರಾರಂಭವಾಗುತ್ತಲೇ ತೀರಿಕೊಂಡರು. ಕರ್ನಾಟಕದ ಇನ್ನೊಬ್ಬ ಪ್ರಾದೇಶಿಕ ಪಕ್ಷಗಳ ಸರದಾರ ಎಸ್‌. ಬಂಗಾರಪ್ಪ ಅವರಿಗೆ ಪ್ರತೀ ಬಾರಿ ಹೊಸ ಪಕ್ಷ ಹುಟ್ಟುಹಾಕುವ ಉದ್ದೇಶ ಇದ್ದದ್ದು ತನ್ನ ಮೂಲ ಪಕ್ಷವನ್ನು ಒಂದು ಚುನಾವಣೆಯ ಮಟ್ಟಿಗೆ ಸೋಲಿಸುವುದಷ್ಟೇ ಆಗಿತ್ತು.  ಜನತಾ ಪರಿವಾರದ ಇಬ್ಬರು ಹಿರಿಯ ನಾಯಕರು ಪ್ರಾದೇಶಿಕ ಪಕ್ಷ ಕಟ್ಟಿದ ಕತೆಯೂ ಹೀಗೆಯೇ ಸಾಗುತ್ತದೆ.

 

ಆ ನಂತರ ಮೂವರು ಉದ್ಯಮಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ಸ್ಥಾಪಿಸಿದ ಪ್ರಾದೇಶಿಕ ಪಕ್ಷಗಳಾಗಲೀ, 2013ರ ಚುನಾವಣೆಗೆ ಮುನ್ನ ಅಸಂತೃಪ್ತ ನಾಯಕರಿಬ್ಬರು  ಹುಟ್ಟು  ಹಾಕಿದ ಪ್ರಾದೇಶಿಕ  ಪಕ್ಷಗಳಾಗಲೀ ಗಂಭೀರವಾದ ಪ್ರಯೋಗಗಳಾಗಿರಲೇ ಇಲ್ಲ. ಯಾವುದೇ ರೀತಿಯ ಹೊಸ ಯೋಚನೆಗಳನ್ನು, ಯೋಜನೆಗಳನ್ನು, ತತ್ವಗಳನ್ನು ಜನರ ಮುಂದಿಡದೆ ದಿಢೀರ್ ಯಶಸ್ಸು ಬಯಸಿದ ಕಾರಣ ಇವ್ಯಾವುವೂ ಹೆಚ್ಚು ಕಾಲ ಉಳಿಯಲಿಲ್ಲ. 

ಕರ್ನಾಟಕದ ಜನ ಪ್ರಾದೇಶಿಕ ಪಕ್ಷಗಳನ್ನು ಸ್ವೀಕರಿಸಲಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಈ ಪಕ್ಷಗಳು, ಜನ ಅವುಗಳ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರುವ ಮುನ್ನವೇ ಮರೆಯಾಗಿಬಿಟ್ಟಿದ್ದವು. ಆದುದರಿಂದ ಪ್ರಾದೇಶಿಕ ಪಕ್ಷಗಳ ಪ್ರಯೋಗ ಕರ್ನಾಟಕದ ಮಟ್ಟಿಗೆ ಅಪ್ರಸ್ತುತ ಎನ್ನುವುದಕ್ಕಿಂತ ಅಂತಹ ಗಂಭೀರ ಪ್ರಯತ್ನಗಳೇ  ನಡೆದಿಲ್ಲ ಎನ್ನುವುದು ಹೆಚ್ಚು ಸರಿ.

 

ರಾಷ್ಟ್ರೀಯ ಪಕ್ಷಗಳ ಬಗ್ಗೆ ರಾಜ್ಯದಲ್ಲಿ ಆರಂಭವಾಗಿರುವ ಸಣ್ಣ ಅಸಹನೆಯನ್ನು ರಾಜಕೀಯ ಬಂಡವಾಳವನ್ನಾಗಿಸಿಕೊಳ್ಳಬಲ್ಲ ದೊಡ್ಡ ಯೋಚನೆಯ ನಾಯಕರು ಇದ್ದರೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಯೋಗಕ್ಕೆ ಈಗ ಇನ್ನೊಂದು ಅವಕಾಶ ಇದ್ದಂತೆ ತೋರುತ್ತದೆ. ಪ್ರಾದೇಶಿಕ ಪಕ್ಷ ಎನ್ನುವುದನ್ನು ಇಲ್ಲಿ ಕೇವಲ ಭೌಗೋಳಿಕ ದೃಷ್ಟಿಯಿಂದಷ್ಟೇ ಕಾಣಬೇಕಾಗಿಲ್ಲ.

 

ಪ್ರಾದೇಶಿಕ ಎಂದರೆ ರಾಷ್ಟ್ರ ಮಟ್ಟದ ಪಕ್ಷಗಳಿಗಿಂತ ಭಿನ್ನವಾಗಿ ಯೋಚಿಸಬಲ್ಲ ಪಕ್ಷ, ರಾಜಕೀಯದ ಸಿದ್ಧಮಾದರಿಗಳನ್ನು ಮೀರಿ ಈ ಕಾಲದ ಅಗತ್ಯಗಳಿಗೆ ಸ್ಪಂದಿಸಬಲ್ಲ ರಾಜಕೀಯದ ಹೊಸ ಮಾದರಿಯನ್ನು ಮುಂದಿಡಬಲ್ಲ ಪಕ್ಷ. ದೇಶದಲ್ಲಿ ಈತನಕ ಹುಟ್ಟಿ, ಬೆಳೆದು, ಅಧಿಕ್ಕಾರಕ್ಕೆ ಬಂದಿರುವ ಪ್ರಾದೇಶಿಕ ಪಕ್ಷಗಳಲ್ಲಿ ಹಲವು ವ್ಯಕ್ತಿ ಕೇಂದ್ರೀಕೃತ  ಪಕ್ಷಗಳಾದರೆ, ಇನ್ನು ಕೆಲವು ಒಂದೋ-ಎರಡೋ ಕುಟುಂಬಗಳಿಗೆ ಸೀಮಿತವಾದ ಪಕ್ಷಗಳು, ಇನ್ನು ಕೆಲವು ಜಾತಿ ಆಧಾರಿತ ಪಕ್ಷಗಳು. ಕೆಲವೊಮ್ಮೆ ಪ್ರಾದೇಶಿಕ ಪಕ್ಷಗಳು ಕೂಡಾ ರಾಷ್ಟ್ರ ಮಟ್ಟದ ಪಕ್ಷಗಳ ಮಿನಿಯೇಚರ್ ಅವತರಣಿಕೆಗಳಂತೆಯೇ ಕಾರ್ಯವೆಸಗಿವೆ. ಆದುದರಿಂದ ಈಗ ಇರುವ ಪ್ರಾದೇಶಿಕ ಪಕ್ಷಗಳಲ್ಲಿ ಮಾದರಿ ಎನ್ನುವುದು ಯಾವುದೂ ಇಲ್ಲ.

 

ಕರ್ನಾಟಕಕ್ಕೆ ಬೇಕಿರುವುದು ಕರ್ನಾಟಕದ್ದೇ ಆದ ಮಾದರಿ. ಅದು ಏಕ ಕಾಲಕ್ಕೆ ರಾಷ್ಟ್ರೀಯ ಪಕ್ಷಗಳಿಗೆ ಹೇಗೆ ಪರ್ಯಾಯವೊ, ಹಾಗೆಯೇ ಸದ್ಯ ಇರುವ ಪ್ರಾದೇಶಿಕ ಪಕ್ಷಗಳ ಮಾದರಿಗೂ ಒಂದು ಪರ್ಯಾಯವಾಗುವ ಅಗತ್ಯವಿದೆ. ಪ್ರಾದೇಶಿಕ ಎಂದರೆ ಸಂಕುಚಿತ ಎಂದಲ್ಲ. ಪ್ರಾದೇಶಿಕ ಎಂದರೆ ರಾಷ್ಟ್ರೀಯತೆಗೆ ವಿರುದ್ಧ ಎಂದಲ್ಲ. ಪ್ರಾದೇಶಿಕ ಎನ್ನುವುದು ದೇಶದಲ್ಲಿ ಪ್ರದೇಶವನ್ನೂ ಪ್ರದೇಶದಲ್ಲಿ ದೇಶವನ್ನೂ ಕಾಣಬಲ್ಲ ಕಲ್ಪನೆ. ಭಾರತದ ಒಕ್ಕೂಟ ವ್ಯವಸ್ಥೆಯ ತತ್ವವೂ ಇದೇ ಆಗಿದೆ. 

 

ದೇಶದಾದ್ಯಂತ ರಾಜಕೀಯದಲ್ಲಿ ಹಲವು ರೀತಿಯ ಆರೋಗ್ಯಕರ ಪ್ರಯೋಗಗಳು ಪ್ರಾರಂಭವಾಗಿವೆ. ಹಣ, ಜಾತಿ ಇತ್ಯಾದಿಗಳನ್ನು ಮೀರಿದ ರಾಜಕೀಯವೊಂದು ಸಾಧ್ಯ ಎನ್ನುವ ಹೊಳಹುಗಳು ಅಲ್ಲಲ್ಲಿ ಗೋಚರಿಸುತ್ತಿವೆ. ರಾಜ್ಯದ ಇತರ ರಂಗಗಳಲ್ಲಿ ಕಾಣಿಸಿಕೊಂಡ ಉದ್ಯಮಶೀಲತೆ, ಪ್ರಯೋಗಶೀಲತೆ ಮತ್ತು ವೃತ್ತಿಪರ ನೈಪುಣ್ಯವನ್ನು ರಾಜಕೀಯದಲ್ಲಿ ಕಾಣಲು ರಾಜ್ಯ ಹಾತೊರೆಯುತ್ತಿದೆ.

 
ಪ್ರತಿಕ್ರಿಯಿಸಿ (+)