ಭಾನುವಾರ, ನವೆಂಬರ್ 17, 2019
29 °C

ದೆಹಲಿ ಸೃಷ್ಟಿಸುವ ಭ್ರಮೆಗಳ ಸುಳಿ

ರಾಮಚಂದ್ರ ಗುಹಾ
Published:
Updated:

ರಾಷ್ಟ್ರವೊಂದನ್ನು ಅರಸುತ್ತಿರುವ ರಾಜಧಾನಿ ದೆಹಲಿ ಎಂದು ತಮಿಳು ಅರ್ಥಶಾಸ್ತ್ರಜ್ಞ ದಿವಂಗತ ಎಸ್. ಗುಹನ್ ಹೇಳುತ್ತಿದ್ದರು. ಮೇ 29ರಿಂದ ಜೂನ್ 11ರವರೆಗಿನ ಹದಿನೈದು ದಿನಗಳ ಅವಧಿಯಲ್ಲಿ ಆ ಮಾತು ನನಗೆ ನೆನಪಿಗೆ ಬಂತು. ಆ ಹದಿನೈದು ದಿನಗಳಲ್ಲಿ, ರಾಷ್ಟ್ರೀಯ ಟಿವಿ ಚಾನೆಲ್‌ಗಳನ್ನು ಯಾರಾದರೂ ವೀಕ್ಷಿಸಿದ್ದಲ್ಲಿ ಅಥವಾ ರಾಷ್ಟ್ರೀಯ ವೃತ್ತಪತ್ರಿಕೆಗಳನ್ನು ಓದ್ದ್ದಿದಲ್ಲಿ, ಬಾಬಾ ರಾಮ್‌ದೇವ್ ಎಂಬಂಥ  ವ್ಯಕ್ತಿಯ ವಿಚಾರ ಅಥವಾ ಆಚಾರಗಳ ಜೊತೆ ಇಡೀ ಭಾರತ ಒಂದಲ್ಲ ಒಂದು ವಿಧದಲ್ಲಿ ತೊಡಗಿಕೊಂಡಿದೆ ಎಂದು ಅಂದುಕೊಳ್ಳಬೇಕಿತ್ತು. ರಾಮ್‌ದೇವ್ ಏನು ಹೇಳಿದರು ಅಥವಾ ಏನನ್ನು ಹೇಳಲಿಲ್ಲ ಎಂಬುದರಿಂದ ಹಿಡಿದು, ಅವರ ಮಾತುಗಳು, ಮೌನಗಳವರೆಗೆ ಅವರ ಅನುಯಾಯಿಗಳು ಹಾಗೂ ಎದುರಾಳಿಗಳು ಹೇಗೆ ವ್ಯಾಖ್ಯಾನ ಮಾಡಿದರೆಂಬ ವಿಷಯಗಳೇ ಅನೇಕ  ಸುದ್ದಿ ಬುಲೆಟಿನ್‌ಗಳಲ್ಲಿ ತುಂಬಿದ್ದವು.ರಾಮ್‌ದೇವ್ ಹಾಗೂ ಅವರ `ತಮಾಷಾ~ವೇ ಭಾರತದ 120ಕೋಟಿ ಜನರ ಆಸಕ್ತಿಯ ಕೇಂದ್ರಬಿಂದುವೇನೊ ಎಂಬ ರೀತಿಯಲ್ಲಿ ವಿದೇಶಿಯರು ಅಥವಾ ಹೊರರಾಷ್ಟ್ರಗಳಿಂದ ಬಂದವರು ಭಾವಿಸುವಷ್ಟು ಮಟ್ಟಿಗೆ ಈ ವರದಿಗಳಲ್ಲಿ ರಾಮ್‌ದೇವ್ ಅವರನ್ನು ಬಿಂಬಿಸಲಾಗುತ್ತಿತ್ತು.ಆ ಹದಿನೈದು ದಿನಗಳ ಅವಧಿಯಲ್ಲಿ ಅರ್ಧದಷ್ಟು ದಿನಗಳನ್ನು ಕರ್ನಾಟಕದಲ್ಲಿ, ಇನ್ನರ್ಧದಷ್ಟು ದಿನಗಳನ್ನು ತಮಿಳುನಾಡಿನಲ್ಲಿ ನಾನು ಕಳೆದಿದ್ದೆ. ಈ ಎರಡೂ ರಾಜ್ಯಗಳಲ್ಲಿ, ಗ್ರಾಮೀಣ ಜನಸಂಖ್ಯೆಯ ಬಹಳಷ್ಟು ಮಂದಿಗೆ ರಾಮ್‌ದೇವ್ ಹಾಗೂ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಏನೇನೂ ಗೊತ್ತಿಲ್ಲ.  ತಮ್ಮ ಪಾಡಿಗೆ ತಾವು ಕೃಷಿ, ಕೂಲಿ ಕೆಲಸ, ವ್ಯಾಪಾರ. ಓದು, ನಿದ್ದೆ ಎಂಬಂತಹ ಮಾಮೂಲಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ನಗರಪ್ರದೇಶಗಳಲ್ಲೂ ಬಹಳಷ್ಟು ಮಂದಿಗೆ ರಾಮ್‌ದೇವ್ ಹಾಗೂ ಅವರ ಚಟುವಟಿಕೆಗಳ ಬಗ್ಗೆ ಹೆಚ್ಚೇನೂ  ತಿಳಿದಿರಲಿಲ್ಲ. ಬಹುಶಃ ಚೆನ್ನೈ, ಬೆಂಗಳೂರುಗಳಲ್ಲಿ, ಇಂಗ್ಲಿಷ್ ಮಾತನಾಡುವ ಮಧ್ಯಮ ವರ್ಗದ ಜನತೆಯ ಗಮನವನ್ನು ಈ `ತಮಾಷಾ~ ಸೆಳೆದುಕೊಂಡಿರಲಿಕ್ಕೂ ಸಾಕು. ಯಾಕೆಂದರೆ ಕೆಲಸ ಮುಗಿಸಿ ಮನೆಗೆ ಮರಳಿದ ನಂತರ ಟಿವಿಯಲ್ಲಿ ವಾರ್ತೆಗಳನ್ನು ನೋಡುವುದು ಅವರಿಗೆ ರೂಢಿಯಾಗಿರುತ್ತದೆ. ಹೀಗಿದ್ದೂ, ಬೆಂಗಳೂರು ಹಾಗೂ ಚೆನ್ನೈನ ಜನಸಾಮಾನ್ಯರು, ಗ್ರಾಮಗಳಲ್ಲಿನ ತಮ್ಮ ಸೋದರರಂತೆಯೇ ರಾಮ್‌ದೇವ್, ಅವರ ಸಹಚರರು ಹಾಗೂ ಟೀಕಾಕಾರರ ಬಗ್ಗೆ  ಹೆಚ್ಚೇನೂ ತಿಳಿದವರಲ್ಲ ಅಥವಾ  ಆ ಬಗ್ಗೆ ಉದಾಸೀನ ಹೊಂದಿದವರು.ಹಿಂದೂ ಸಂಸ್ಕೃತಿಯ ಕುರಿತು ರಾಮ್‌ದೇವ್ ಅವರ ಸ್ತುತಿಪಾಠ, ವಿದೇಶಿ ವಿಚಾರಗಳು ಹಾಗೂ ವಿದೇಶಿ ವ್ಯಕ್ತಿಗಳ ಕುರಿತಂತೆ ಅವರ ಅಸಹನೆ, `ಹಿಂದುತ್ವದ ಸಿದ್ಧಾಂತ~ವನ್ನೇ ಅನುರಣಿಸುತ್ತದೆ. ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರೆಲ್ಲಾ ಅವರ ಈ ಆಂದೋಲನವನ್ನು ಬೆಂಬಲಿಸುತ್ತಿದ್ದಾರೆ; ಅನೇಕ ಆರ್‌ಎಸ್‌ಎಸ್ ಕಾರ್ಯಕರ್ತರೂ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಕರ್ನಾಟಕದಲ್ಲಿ ಈಗ ಬಿಜೆಪಿ ಆಡಳಿತವಿದೆ.ಹಿಂದುತ್ವದ ಪ್ರವೃತ್ತಿಗಳನ್ನು ಹೊಂದಿರುವಂತಹ ಮುಖ್ಯಮಂತ್ರಿ, ತಮಿಳುನಾಡಿನಲ್ಲೆಗ ಆಡಳಿತ ಸೂತ್ರವನ್ನು ಹಿಡಿದಿದ್ದಾರೆ. ಹೀಗಿದ್ದೂ, ಮೇ 29ರಿಂದ ಜೂನ್11ರವರೆಗಿನ ಆ ಹದಿನೈದು ದಿನಗಳ ಅವಧಿಯಲ್ಲಿ, ರಾಮ್‌ಲೀಲಾ ಮೈದಾನದಲ್ಲಿನ ರಾಮ್‌ದೇವ್ ಉಪವಾಸದ ಸುತ್ತಮುತ್ತಲ ವಿದ್ಯಮಾನಗಳ ಲಕ್ಷ್ಯವೇ ಇಲ್ಲದೆ ಈ ರಾಜ್ಯಗಳ ಬಹುಸಂಖ್ಯಾತ ನಿವಾಸಿಗಳು ತಮ್ಮ ಸಹಜ ಜೀವನ ನಡೆಸಿದ್ದಾರೆ.ಪೂರ್ವ ಹಾಗೂ ಈಶಾನ್ಯ ರಾಜ್ಯಗಳ ಜನತೆಗೆ ರಾಮ್‌ದೇವ್ ಹಾಗೂ ಅವರ ಕೆಲಸಗಳ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ ಎಂದು ನಿರೀಕ್ಷಿಸಬಹುದು. ಅವರಿಗೆ ಪಶ್ಚಿಮ ಬಂಗಾಳದಲ್ಲಿ ಕೆಲವೇ ಅನುಯಾಯಿಗಳಿದ್ದಾರೆ, ಮೇಘಾಲಯ ಅಥವಾ ನಾಗಾಲ್ಯಾಂಡ್‌ನಲ್ಲಂತೂ ಇನ್ನೂ ಬಹಳ ಕಡಿಮೆ ಅನುಯಾಯಿಗಳಿದ್ದಾರೆ. ಆದರೆ ಆ ಹದಿನೈದು ದಿನಗಳಲ್ಲಿ ನಾನು ಕಂಡುಕೊಂಡಂತೆ, ಅವರ ಚಟುವಟಿಕೆಗಳು ಕರ್ನಾಟಕ ಅಥವಾ ತಮಿಳುನಾಡಿನಲ್ಲೂ ಹೆಚ್ಚಿನ ಆಸಕ್ತಿ ಕೆರಳಿಸುವಂತಹದ್ದಲ್ಲ. ವಾಸ್ತವಿಕವಾದ ಈ ವಿದ್ಯಮಾನವನ್ನು ನವದೆಹಲಿಯ ಟೆಲಿವಿಷನ್ ಸ್ಟುಡಿಯೊಗಳ ಆ್ಯಂಕರ್‌ಗಳು ಮುಚ್ಚಿಟ್ಟಿದ್ದುದು ಸ್ಪಷ್ಟವಾಗಿತ್ತು.ಉಪವಾಸ ಹಾಗೂ ನಂತರದ ಪರಿಣಾಮಗಳ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳ  ವರದಿಗಳಲ್ಲಿ, ಪ್ರಾಂತೀಯ ಪೂರ್ವಗ್ರಹಗಳು ಎದ್ದುಕಾಣುತ್ತಿತ್ತು. ಜೂನ್ 4-5ರ ರಾತ್ರಿ ಪೊಲೀಸರ ಕಾರ್ಯಾಚರಣೆ ಸಮರ್ಥನೀಯವಾದುದೇ ಅಲ್ಲ. ಯೋಗ ಶಿಬಿರವೆಂದು ಪ್ರಚಾರ ಮಾಡಲಾಗಿದ್ದ ಸಮಾವೇಶ, ರಾಜಕೀಯ ಭ್ರಷ್ಟಾಚಾರದ ಬಗೆಗಿನ ಕಲಹಪ್ರಿಯ ಪ್ರವಚನವಾಗುತ್ತದೆಂಬುದು ಪೊಲೀಸರಿಗೆ ಮುಂಚೆಯೇ ತಿಳಿದಿತ್ತು.ರಾಮ್‌ದೇವ್ ಇದನ್ನು ಮೊದಲೇ ಸ್ಪಷ್ಟಪಡಿಸಿದ್ದರು. ಕಾನೂನಿನ ಪ್ರಕಾರ ಸರಿಯಾದ ಕ್ರಮ ಎಂದರೆ, ಶಿಬಿರ ಆರಂಭಕ್ಕೆ ಮೊದಲೇ ಅನುಮತಿ ನೀಡದಿರಬಹುದಿತ್ತು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವಷ್ಟು ಮಟ್ಟಿಗೆ ಶಿಬಿರದಲ್ಲಿ ಗಂಭೀರ ಸ್ಥಿತಿ ಉಂಟಾದಾಗ ಮಧ್ಯ ಪ್ರವೇಶಿಸಲು ತಾಳ್ಮೆಯಿಂದ ಪೊಲೀಸರು ಕಾದಿರಬಹುದಿತ್ತು.  ಪೊಲೀಸರ ಕ್ರಮ, ವ್ಯಾಪಕವಾದ ಖಂಡನೆಗೆ ಗುರಿಯಾದದ್ದು ಸರಿಯಾದದ್ದೇ. ಆದರೆ, ಈ ಸಂದರ್ಭದಲ್ಲಿ ದೆಹಲಿ ಮಾಧ್ಯಮದ ಪ್ರತಿಕ್ರಿಯೆಯನ್ನು ಅರಗಿಸಿಕೊಳ್ಳುವುದೇ ಕಷ್ಟವೆನಿಸಿತು. ರಾಮ್‌ಲೀಲಾ ಮೈದಾನದಲ್ಲಿ ಲಾಠಿ ಬೀಸಿದ ಪೊಲೀಸರ ದೃಶ್ಯಗಳನ್ನು ನಿರಂತರವಾಗಿ ಟಿವಿ ಚಾನೆಲ್ಲುಗಳು ಪ್ರಸಾರ ಮಾಡಿದವು. ಜೊತೆಗೆ  ಆ ರಾತ್ರಿಯ ಘಟನೆಯನ್ನು 1975ರ ತುರ್ತುಪರಿಸ್ಥಿತಿ ಅಥವಾ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೂ ಹೋಲಿಕೆ ಮಾಡಿ ಅರ್ಥಹೀನ ಅಥವಾ ಸ್ವಹಿತಾಸಕ್ತಿಯ ಪಕ್ಷಗಳು ನೀಡಿದ ವ್ಯಾಖ್ಯಾನಗಳನ್ನು ನಿರಂತರವಾಗಿ ಪ್ರಸಾರ ಮಾಡಿದವು.ರಾಮ್‌ದೇವ್ ಉಪವಾಸ ಗಳಿಸಿಕೊಂಡ ಪ್ರಚಾರ, ರಾಷ್ಟ್ರೀಯ ಮಾಧ್ಯಮ ಎನಿಸಿಕೊಂಡವರ ಪ್ರಾಂತೀಯ ದೃಷ್ಟಿಕೋನಗಳನ್ನು ಪ್ರತಿನಿಧಿಸಿದರೆ, ಆ ನಂತರದ ಘಟನಾವಳಿಗಳ ಕುರಿತಂತಹ ಚರ್ಚೆಗಳು ಸ್ಪಷ್ಟ ರಾಜಕೀಯ ದೃಷ್ಟಿಕೋನದ ಬರವನ್ನೂ ಎತ್ತಿ ಸಾರಿದವು. ಪೊಲೀಸ್ ದೌರ್ಜನ್ಯಗಳ ಪ್ರಮಾಣಕ್ಕೆ ಹೋಲಿಸಿದರೆ ರಾಮ್‌ಲೀಲಾ ಮೈದಾನದಲ್ಲಿ ಅಂದು ರಾತ್ರಿ ಘಟಿಸಿದ್ದು `ಸತ್ಸಂಗ~ವೆಂದೇ ಹೇಳಬಹುದೇನೊ. ಕಳೆದ ಐದು ವರ್ಷಗಳಲ್ಲಿ ಛತ್ತೀಸ್‌ಗಢದ ಪೊಲೀಸರು, ನಿಯಮಿತವಾಗಿ ಮನೆಗಳನ್ನು, ಬೆಳೆಗಳನ್ನು ಸುಡುತ್ತಿದ್ದಾರೆ. ಗ್ರಾಮಸ್ಥರ ಮೇಲೆ ಆಕ್ರಮಣಗಳನ್ನೂ ಮಾಡುತ್ತಿದ್ದಾರೆ. ಈ ಗ್ರಾಮಸ್ಥರ ಅಪರಾಧವೆಂದರೆ, `ಸಲ್ವಾಜುಡುಂ~ ಎಂದು ಕರೆಯಲಾಗುವ ರಾಜ್ಯ ಸರ್ಕಾರ ಪ್ರಾಯೋಜಿತ ಸಶಸ್ತ್ರ ಶಾಂತಿ ಪಾಲನಾ ಪಡೆಯನ್ನು ಅನುಮೋದಿಸದಿರುವುದು. ಹೀಗಿದ್ದೂ ಅಂತಹ ಪೊಲೀಸ್ ದೌರ್ಜನ್ಯದ ಉದಾಹರಣೆಯನ್ನು ದೆಹಲಿಯಿಂದ  ಪ್ರಕಟವಾಗುವ ಒಂದೇ ಒಂದು ಪತ್ರಿಕೆಯೂ ತನ್ನ ಮುಖಪುಟದಲ್ಲಿ  ಪ್ರಕಟಿಸಿಲ್ಲ. ದೆಹಲಿಯಿಂದ ಕಾರ್ಯ ನಿರ್ವಹಿಸುವ ಚಾನೆಲ್, ತನ್ನ ವಾರ್ತಾ ಬುಲೆಟಿನ್‌ನಲ್ಲಿ ಮುಖ್ಯ ಸುದ್ದಿಯಾಗಿ ಎಂದೂ ಪ್ರಸಾರ ಮಾಡಿಲ್ಲ.ಛತ್ತೀಸ್‌ಗಢದ ಪೊಲೀಸ್ ದೌರ್ಜನ್ಯಗಳ ಬಗ್ಗೆ ನಾನು ಮಾತನಾಡುತ್ತೇನೆ, ಏಕೆಂದರೆ ನನಗೇ ಸ್ವತಃ ಅದರ ಮಾಹಿತಿ ಇದೆ. ಇತರ ವಿದ್ವಾಂಸರು ಅಥವಾ ಲೇಖಕರು ಒರಿಸ್ಸಾ ಅಥವಾ ಮಣಿಪುರದಲ್ಲಿನ ಆದಿವಾಸಿ ವಲಯದಲ್ಲಿನ ಪೊಲೀಸ್ ದೌರ್ಜನ್ಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲರು. ರಾಮ್‌ಲೀಲಾ ಮೈದಾನದ ಕಾರ್ಯಾಚರಣೆಯಲ್ಲಿ ರಾಜ್‌ಬಾಲಾ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ.

 

ಅದು ವಿಷಾದದ ಸಂಗತಿ ಮಾತ್ರವಲ್ಲ, ದುರಂತವೇ. ಈ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಬೇಕಾದದ್ದೂ ಸರಿಯಾದದ್ದೆ. ಆದರೆ ಭಾರತದ ಇತರ ಭಾಗಗಳಲ್ಲೂ ಪೊಲೀಸರ ಅತಿರೇಕ ಹಾಗೂ ಕ್ರೌರ್ಯದಿಂದ ಗಾಯಗೊಂಡ ಅಥವಾ ಸತ್ತ ಮಹಿಳೆಯರಿಗೂ ಸಮಾನ ಗಮನ ನೀಡಬೇಕು ತಾನೆ? ಛತ್ತೀಸ್‌ಗಢ, ಒರಿಸ್ಸಾ ಹಾಗೂ ಮಣಿಪುರ ರಾಜ್ಯಗಳಲ್ಲಿ ನೂರಾರು ರಾಜ್‌ಬಾಲಾಗಳಿದ್ದಾರೆ. ದೆಹಲಿಯ ಯಾವ ಪತ್ರಿಕೆಯ ಮುಖಪುಟದಲ್ಲಾಗಲಿ ಅಥವಾ ಟೆಲಿವಿಷನ್‌ನ ವಾರ್ತಾ ಬುಲೆಟಿನ್‌ನ ಮುಖ್ಯ ಸುದ್ದಿಯಲ್ಲಾಗಲಿ ಒಮ್ಮೆಯೂ ಈ ಯಾರ ಹೆಸರೂ ಕಂಡುಬಂದಿಲ್ಲ.  ಈ ವಿಷಯದಲ್ಲಿ ಇಡೀ ವಿಶ್ವಕ್ಕೆ ಅಮೆರಿಕ ಹೇಗೋ, ಹಾಗೆ ಇಡೀ ಭಾರತಕ್ಕೆ ದೆಹಲಿ ಎಂದು ನನ್ನ ಅತ್ಯಂತ ಆಪ್ತ ಸ್ನೇಹಿತೆ (ಎಂದರೆ ನನ್ನ ಪತ್ನಿ) ಹೇಳುತ್ತಾಳೆ. ವಿಯೆಟ್ನಾಮಿ ಜನರ ವಿರುದ್ಧ ಅಮೆರಿಕಾ ಸಾರಿದ ಯುದ್ಧದಲ್ಲಿ ಸುಮಾರು 60,000 ಅಮೆರಿಕನ್ ಸೈನಿಕರು ಸತ್ತರು. ಈ ಎಲ್ಲರ ಹೆಸರುಗಳನ್ನೂ ವಾಷಿಂಗ್ಟನ್‌ನಲ್ಲಿರುವ ಸ್ಮಾರಕದಲ್ಲಿ ಕೆತ್ತಲಾಗಿದೆ. ಬಹುಶಃ 15 ಲಕ್ಷ ವಿಯೆಟ್ನಾಮಿಗಳೂ ಆ ಯುದ್ಧದಲ್ಲಿ ಸತ್ತರು. ಅವರೆಲ್ಲಾ  ಕನಿಷ್ಠ ಅಮೆರಿಕಾದ್ಲ್ಲಲಂತೂ ಅನಾಮಧೇಯರಾಗಿದ್ದಾರೆ.ಇಂದಿಗೂ ಅನೇಕ ಡಜನ್ ಇರಾಕಿಗಳು ಅಥವಾ ಆಫ್ಘನ್ ನಾಗರಿಕರ ಸಾವುಗಳಿಗಿಂತ ಒಬ್ಬ ಅಮೆರಿಕನ್ ಸೈನಿಕನ ಸಾವು `ನ್ಯೂಯಾರ್ಕ್ ಟೈಮ್ಸ~ನಲ್ಲಿ ದೊಡ್ಡ ಸುದ್ದಿಯಾಗುತ್ತದೆ.ಕೆಲವು ವರ್ಷಗಳ ಹಿಂದೆ, ಜೆಸ್ಸಿಕಾ ಲಾಲ್ ಎಂಬ ಮಹಿಳೆಯ ಕೊಲೆಯ ಸುತ್ತ ವಾರಗಟ್ಟಲೆ ದೆಹಲಿ ಮಾಧ್ಯಮಗಳು ಗಿರಕಿ ಹೊಡೆದಿದ್ದವು. ರಾಜ್‌ಬಾಲಾ ಗಾಯಗೊಂಡ ಘಟನೆಯೂ ಅಪರಾಧವೆ. ಅದಕ್ಕೆ ಕಾರಣಕರ್ತರಾದವರಿಗೆ ಕಾನೂನಿನ  ಪ್ರಕಾರ ಶಿಕ್ಷೆಯಾಗಬೇಕು. ಸರಿ. ಆದರೆ ಇತರ ರಾಜ್ಯಗಳಲ್ಲಿ ಘಟಿಸುವ ಮಹಿಳೆಯರ ಮೇಲಾಗುವ ದೌರ್ಜನ್ಯಗಳು ಹಾಗೂ ಕೊಲೆ ಪ್ರಕರಣಗಳಿಗೆ ಅದೇ ರೀತಿಯ ಗಮನವನ್ನು ಮಾಧ್ಯಮಗಳು ಹಾಗೂ ಕಾನೂನು ವ್ಯವಸ್ಥೆ ಏಕೆ ನೀಡುತ್ತಿಲ್ಲ?  ದೆಹಲಿಯ ಒಬ್ಬ ಪ್ರಜೆಯ ಜೀವ ದೆಹಲಿಯಿಂದ ಆಚೆ ಇರುವಂತಹ ಐನೂರು ಅಥವಾ ಸಾವಿರ ಭಾರತೀಯರ ಜೀವಗಳಿಗೆ ಸಮಾನವಾದುದು ಕಾರಣವೆ?ರಾಷ್ಟ್ರದ ರಾಜಧಾನಿಯ ಮಾಧ್ಯಮ ರಾಷ್ಟ್ರದ ಇತರ ಭಾಗಗಳಿಂದ ಪೂರ್ಣ ಬೇರ್ಪಟ್ಟಂತೆಯೇ ಇದೆ. ಇದನ್ನು ಬಾಬಾ ರಾಮ್‌ದೇವ್ ಅವರೇ ಸ್ವತಃ  ಚೆನ್ನಾಗಿ ಅರಿತುಕೊಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಾಗಿ ರಾಮ್‌ದೇವ್ ಹೇಳುತ್ತಾರೆ. ಇದಕ್ಕಾಗಿ ದೆಹಲಿಯಲ್ಲಿ ಒಂದು ಉಪವಾಸ, ಸದ್ಯದ ಯುಪಿಎ ಸರ್ಕಾರಕ್ಕೆ ಸಾಕು; ಏಕೆಂದರೆ ಭಾರತದ ಇತಿಹಾಸದಲ್ಲಿ ಅದು ಅತ್ಯಂತ ಭ್ರಷ್ಟ ಕೇಂದ್ರ ಸರ್ಕಾರ. ಹೀಗಿದ್ದೂ ರಾಜಕೀಯ ಭ್ರಷ್ಟಾಚಾರವೆಂಬುದು ಭಾರತದ ಇತರ ಭಾಗಗಳಲ್ಲೂ ಸರ್ವಾಂತರ್ಯಾಮಿಯಾಗಿಯೇ ಇದೆ.ಕರ್ನಾಟಕದ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಅರಣ್ಯ ಪ್ರದೇಶದಲ್ಲಿ ಪರಿಸರ ಹಾಗೂ ಕಾರ್ಮಿಕ ನಿಯಮಗಳನ್ನು ಗಾಳಿಗೆ ತೂರಿ ಲಕ್ಷಗಟ್ಟಲೆ ಟನ್‌ಗಳ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ರಫ್ತು ವ್ಯವಹಾರಗಳ ಮೂಲಕ ಅಧಿಕಾರವನ್ನು ಕೊಂಡುಕೊಂಡ ಗಣಿ ದೊರೆಗಳು ಸಚಿವರುಗಳಾಗಿದ್ದಾರೆ. ಅವರ ಲೂಟಿಯ ಪ್ರಮಾಣದ ಅಗಾಧತೆಯನ್ನು ನಾಗರಿಕ ಹಕ್ಕುಗಳ ವಕೀಲ ದಿವಂಗತ ಕೆ ಜಿ ಕಣ್ಣಬೀರನ್ ಅತ್ಯುತ್ತಮವಾಗಿ ವ್ಯಕ್ತಪಡಿಸಿರುವುದು ಹೀಗೆ: `ಬಳ್ಳಾರಿಯ ಗಣಿ ದೊರೆಗಳಿಗೆ ಹೋಲಿಸಿದಲ್ಲಿ ನಾದಿರ್ ಷಾ ನದು ಬರೀ ಜೇಬುಗಳ್ಳತನ~ ಎಂದು ತಾವು ಸಾಯುವುದಕ್ಕಿಂತ ಕೆಲವು ದಿನ ಮುಂಚೆ ಹೇಳಿದ್ದರು.

ರಾಮ್‌ದೇವ್ ಅವರು ಬೆಂಗಳೂರಿಗೆ ಬಂದು ರಾಜಕೀಯ ಭ್ರಷ್ಟಾಚಾರದ ವಿರುದ್ಧ ಉಪವಾಸ ಆರಂಭಿಸಿದಲ್ಲಿ ನಾನು ಅವರ ಜೊತೆ ಇರುತ್ತೇನೆ. ಅದೇ ತರಹ ಕರ್ನಾಟಕದ ಅನೇಕ ಜನರೂ ಇರುತ್ತಾರೆ. ಆದರೆ ರಾಮ್‌ದೇವ್ ಇಲ್ಲಿಗೆ ಬರುವುದಿಲ್ಲ.

 

ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು ಅವರು ಹಿಂದಿಯಲ್ಲಿ ಮಾತ್ರ ಬಹಳ ಪರಿಣಾಮಕಾರಿಯಾಗಿ ಮಾತನಾಡುತ್ತಾರೆ; ಆ ಭಾಷೆಯನ್ನು ರಾಜ್ಯದಲ್ಲಿ ಅರ್ಥ ಮಾಡಿಕೊಳ್ಳುವ ಮಂದಿ ಕಡಿಮೆ ಇದ್ದಾರೆ. ಎರಡನೆಯದು, ತಾವು ರಾಜಕೀಯ ಪಕ್ಷಗಳಿಗೆ ಸೇರಿದವರಲ್ಲ ಎಂಬಂಥ ಅವರ ದೃಢವಾದ ಹೇಳಿಕೆಗಳ ಮಧ್ಯೆಯೂ ಅವರು ಸಂಘ ಪರಿವಾರಕ್ಕೆ ಹೆಚ್ಚು ಹತ್ತಿರವಾಗಿದ್ದಾರೆ; ಬಿಜೆಪಿ ಆಡಳಿತದ ಸರ್ಕಾರಕ್ಕೆ ಇರಿಸುಮುರಿಸು ಮಾಡಲು ಅವರು ಬಯಸುವುದಿಲ್ಲ. ಮೂರನೆಯದು, ದೆಹಲಿಯಲ್ಲಿ ಮಾಡುವ ಉಪವಾಸ ರಾಷ್ಟ್ರೀಯ ಮಾಧ್ಯಮದ ಗಮನವನ್ನು ಸೆಳೆದಷ್ಟು ಬೆಂಗಳೂರಿನಲ್ಲಿ ಅದೇ ಉದ್ದೇಶಕ್ಕೇ ಉಪವಾಸ ಮಾಡಿದರೂ ಅದು ಅಷ್ಟೇ ಗಮನ ಸೆಳೆಯುವುದಿಲ್ಲ ಎಂಬುದೂ ಅವರಿಗೆ ಚೆನ್ನಾಗಿ ಗೊತ್ತು.

ಪ್ರತಿಕ್ರಿಯಿಸಿ (+)