ದೇವರ ಇರುವಿಕೆ

7

ದೇವರ ಇರುವಿಕೆ

ಗುರುರಾಜ ಕರ್ಜಗಿ
Published:
Updated:

ಗುರು ಶಿಷ್ಯರಿಬ್ಬರೂ ಕಾಡಿನಲ್ಲಿ ತಪಸ್ಸಿಗೆ ಹೋಗಿದ್ದರು. ಯಾವ ಜನಸಂಪರ್ಕವಿಲ್ಲದೇ ಆರು ತಿಂಗಳು ಕಾಡಿನಲ್ಲಿದ್ದು ಮರಳಿ ತಮ್ಮ ಊರಿಗೆ ಮರಳಿದ್ದಾರೆ. ತಾವು ಮೊದಲಿದ್ದ ಗುಡಿಸಿಲಿನ ಬಳಿಗೆ ಹೋದಾಗ ಅವರು ಕಂಡಿದ್ದೇನೆಂದರೆ ಗುಡಿಸಲಿನ ಮೇಲಿನ ಛಾವಣಿ ಗಾಳಿಗೆ ಅರ್ಧಕ್ಕರ್ಧ ಹಾರಿ ಹೋಗಿದೆ!ಗುಡಿಸಲಿನ ಆಕಾರ  ನೋಡುವಂತಿಲ್ಲ. ಶಿಷ್ಯನಿಗೆ ದುಃಖ ತಡೆಯಲಾಗ ಲಿಲ್ಲ, ತಾವು ಮಾಡಿದ ತಪಸ್ಸಿನ ಫಲ ಇದೇನೇ? ಏನು ಅರ್ಥ ಈ ಭಕ್ತಿಗೆ? ಈ ಜಗತ್ತಿನಲ್ಲಿ ಆಧ್ಯಾತ್ಮಿಕತೆಗೆ ಯಾವ ಅರ್ಥವೂ ಇಲ್ಲ, ದೇವರೂ ಇಲ್ಲ, ಅವನು ಇರುವುದಾಗಿದ್ದರೆ ನಮಗೇಕೆ ಈ ತೊಂದರೆ ಬರಬೇಕಿತ್ತು?. ಹೀಗೆ ಕೊರಗಿದ ಶಿಷ್ಯ ಗುರುವನ್ನು ನೋಡಿದ. ಆತ ನೆಲದ ಮೇಲೆ ಮೊಣಕಾಲೂರಿ ಕೈಗಳನ್ನು ಆಕಾಶ ದೆಡೆಗೆ ಮಾಡಿ ಜೋರಾಗಿ ಪ್ರಾರ್ಥಿಸುತ್ತಿದ್ದ. ‘ಭಗವಂತಾ ನಿನ್ನ ಲೀಲೆಯನ್ನು ತಿಳಿದವರಾರು? ನಿನ್ನಷ್ಟು ಕರುಣಿಗಳು ಯಾರಾದರೂ ಇರುವುದು ಸಾಧ್ಯವೇ? ಆರು ತಿಂಗಳು ಕಾಡಿನಲ್ಲಿ, ಬಯಲಿನಲ್ಲಿ ಬದುಕಿಬಂದ ನಮಗೆ ಹೊಂದಿಕೊಳ್ಳಲು ತೊಂದರೆಯಾಗಬಾರದೆಂದು ಮಾಳಿಗೆಯಲ್ಲಿ ಅರ್ಧವನ್ನು ಮಾತ್ರ ಹಾರಿಸಿಬಿಟ್ಟು ಅರ್ಧ ಬಯಲು, ಅರ್ಧ ಆವರಣವನ್ನು ಉಳಿಸಿದ್ದೀಯಾ ಪ್ರಭು’. ಗುರುವಿನ ಈ ಪ್ರಾರ್ಥನೆಗೆ ಹೇಗೆ ಪ್ರತಿಕ್ರಿಯಿಸುವುದು ಎಂದು ಶಿಷ್ಯನಿಗೆ ತಿಳಿಯಲಿಲ್ಲ.ಅಂದು ಮಧ್ಯರಾತ್ರಿಯ ಹೊತ್ತಿಗೆ ಗುಡುಗು ಮಿಂಚುಗಳ ಆರ್ಭಟ ಶುರುವಾಗಿ ಭಾರ  ಮಳೆ ಅಪ್ಪಳಿಸತೊಡಗಿತು. ಗುಡಿಸಲಿನ ಒಳಗೆ ನೀರು ಸುರಿಯಿತು. ಶಿಷ್ಯ ಹೊರಗೋಡಿ ಬಂದ. ಗುಡಿಸಲಿನ ಒಳಗೇನು ಹೊರಗೇನು? ಚಳಿಯಲ್ಲಿ ನಡುಗುತ್ತಲಿದ್ದ. ಮಳೆಯಲ್ಲಿ ತೋಯಿಸಿ­ಕೊಂಡಾಗ ಮತ್ತಷ್ಟು ಸಿಟ್ಟು ಉಕ್ಕಿತು. ಪ್ರಾಮಾಣಿಕರಿಗೆ, ದೈವಭಕ್ತರಿಗೆ ಆಗುವುದೇ ಹೀಗೆ ಎಂದುಕೊಂಡ. ಆಗ ಗುರು ಹೊರಗೆ ಬಂದು ಮಳೆಯಲ್ಲಿ ನೆನೆಯುತ್ತ ಸಂತೋಷದಿಂದ ಕುಣಿಯತೊಡಗಿದ. ‘ಪ್ರಭೂ, ನಿನ್ನ ಲೀಲೆ ನಿನಗೆ ಮಾತ್ರ ಗೊತ್ತು. ನಿನ್ನ ಹಾಗೆ ಯಾರಾದರೂ ದಯೆ ತೋರಿಯಾರೇ? ಆರು ತಿಂಗಳು ಕಾಡಿನಲ್ಲಿ ಅಲೆದಲೆದು ಸರಿಯಾಗಿ ಸ್ನಾನ ಮಾಡಲಿಲ್ಲ ಎಂದುಕೊಂಡು ಆಗಸದಿಂದ ಶುದ್ಧವಾದ ನೀರು ಸುರಿಸಿ ನಮಗೆ ಸ್ನಾನ ಮಾಡಿಸುತ್ತಿದ್ದೀಯಾ ಭಗವಂತ? ನಿನ್ನ ಕರುಣೆಗೆ ನಾನು ಸದಾ ಕೃತಜ್ಞ. ಧನ್ಯ ಪ್ರಭೂ’ ಎಂದು ಹೊಗಳುತ್ತಿದ್ದ.ಶಿಷ್ಯನಿಗೆ ತಡೆದುಕೊಳ್ಳುವುದಾಗಲಿಲ್ಲ. ಗುರುವಿನ ಬಳಿಗೆ ಹೋಗಿ ಕೇಳಿದ, ‘ಗುರುಗಳೇ ನಿಮ್ಮ ಚರ್ಯೆಯೇ ನನಗೆ ಅರ್ಥವಾಗುವುದಿಲ್ಲ. ಪ್ರತಿಯೊಂದಕ್ಕೂ ಒಂದು ಮಿತಿ ಇದೆ. ನನಗೆ ಇದೇ ಮಿತಿ. ಪ್ರತಿಬಾರಿ ತೊಂದರೆಯಾದಾಗಲೂ ಅದೇ ಭಗವಂತನ ಕರುಣೆ ಎಂದು ಹಾಡಿ ಕುಣಿಯುತ್ತೀರಿ. ಯಾಕೆ ಹೀಗೆ ಮಾಡು ತ್ತೀರಿ? ಎಲ್ಲಿ ಭಗವಂತನನ್ನು ಮತ್ತು ಅವನ ಕರುಣೆಯನ್ನು ಕಂಡಿರಿ’. ಗುರು ಕುಣಿತ ನಿಲ್ಲಿಸಿದ. ಶಿಷ್ಯನನ್ನೇ ದಿಟ್ಟಿಸಿ ಕ್ಷಣಕಾಲ ನೋಡಿದ. ನಂತರ ಹೇಳಿದ, ‘ನಿನಗೊಂದು ವಿಷಯ ಗೊತ್ತೇ? ಭಗವಂತ ಇದ್ದಾನೋ ಇಲ್ಲವೋ ನನಗೆ ತಿಳಿಯದು. ನಿಜವಾಗಿ ಹೇಳಬೇಕೆಂದರೆ ನಾನು ಯಾರಿಗೆ ಪ್ರಾರ್ಥನೆ ಮಾಡುತ್ತಿದ್ದೇನೆಂಬುದೂ ಗೊತ್ತಿಲ್ಲ. ನನಗೆ ತಿಳಿದಿರುವುದು ಒಂದೇ. ನಾನು ಹಿಡಿದಿರುವ ದಾರಿಯಿಂದ ನನಗೆ ತೃಪ್ತಿ, ಸಂತೋಷ ದೊರೆತಿದೆ. ಆದ್ದರಿಂದ ಅದು ಸರಿಯಾದ ದಾರಿ. ನೀನು ಮಾಡುವ ರೀತಿಯಿಂದ ನಿನಗೆ ದುಃಖ, ಅತೃಪ್ತಿಯಾಗಿದೆ. ಆದ್ದರಿಂದ ಅದು ಸರಿಯಾದ ದಾರಿಯಲ್ಲ. ಕಂಡ ಅಥವಾ ಕಾಣದ ಶಕ್ತಿಗೆ ಕೃತಜ್ಞತೆ ಸಲ್ಲಿಸುವುದು ನನ್ನಲ್ಲಿ ತೃಪ್ತಿಯನ್ನುಂಟುಮಾಡುತ್ತದೆ. ಅಷ್ಟು ಸಾಕು ನನಗೆ’. ಇಷ್ಟು ಹೇಳಿದ ಆತ ಮತ್ತೆ ಕುಣಿಯತೊಡಗಿದ. ‘ಪ್ರಭೂ ನಿನ್ನ ಲೀಲೆ ಯಾರಿಗೆ ತಿಳಿದೀತು ಇಂಥ ಶಿಷ್ಯನನ್ನು ದಯಪಾಲಿಸಿ ಜೀವನವನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೀ ನಿನಗೆ ನನ್ನ ಕೋಟಿ ಪ್ರಣಾಮಗಳು’.ಶಿಷ್ಯ ಒಂದು ಕ್ಷಣ ಗುರುವನ್ನೇ ನೋಡಿದ. ನಂತರ ತಾನೂ ಕುಣಿಯತೊಡಗಿದ, ‘ಪ್ರಭೂ, ಭಗವಂತ, ಏನು ನಿನ್ನ ಲೀಲೆ? ಇಂಥ ಗುರುವನ್ನು ಕೊಟ್ಟು ಜೀವನದಲ್ಲಿ ಸಂತೃಪ್ತಿ ಪಡುವುದು ಹೇಗೆ ಎಂದು ಕಲಿಸುತ್ತಿದ್ದೀಯಲ್ಲ. ನಿನಗೆ ನಾನು ಸದಾ ಋಣಿ’. ಇಬ್ಬರೂ ತನ್ಮಯರಾಗಿ ಕುಣಿಯುತ್ತಿದ್ದರು. ಇದು ದೇವರ ಬಗ್ಗೆ ತಿಳುವಳಿಕೆಯುಳ್ಳ ವ್ಯಕ್ತಿಗಳ ದೃಷ್ಟಿ. ಜೀವನ ದಲ್ಲಿ ಅನಿವಾರ್ಯವಾಗಿ ಇರುವ, ಕಾಣುವ ಓರೆಕೋರೆಗಳನ್ನು, ಕೊಳಕನ್ನು ಬದಿಗಿರಿಸುತ್ತ ಶುಭ­ವಾದದ್ದನ್ನೂ, ಸುಂದರವಾ­ದದ್ದನ್ನೂ, ಸ್ವೀಕರಿಸುತ್ತ ಅದನ್ನು ಭಗವಂತನ ಕೃಪೆಯೆನ್ನುವುದು ನಮ್ಮ ಹೃದಯದಲ್ಲಿ ತೃಪ್ತಿಯನ್ನು, ಸಂತೋಷ ವನ್ನು ತುಂಬಿಕೊಳ್ಳುವ ಒಂದು ರೀತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry