ದೇವರ ವರ

7

ದೇವರ ವರ

ಗುರುರಾಜ ಕರ್ಜಗಿ
Published:
Updated:

ಬಹಳ ಹಿಂದೆ ಪುರಾತನ ಚೀನಾ ದೇಶದಲ್ಲಿ ಚಕ್ರವರ್ತಿಯೊಬ್ಬನಿದ್ದ. ಅವನು ಬಹಳ ಜ್ಞಾನಿಯೆಂಬ ನಂಬಿಕೆ ಜನರಿಗಿತ್ತು.ಒಂದು ದಿನ ಚಕ್ರವರ್ತಿ ತನ್ನ ಮಂತ್ರಿಗಳಿಗೆ ಹೇಳಿದ, `ನನಗೆ ಬುದ್ಧ ದೇವಸ್ಥಾನಕ್ಕೆ ಹೋಗುವ ಮನಸ್ಸಾಗಿದೆ. ದಯವಿಟ್ಟು ಎಲ್ಲ ತಯಾರಿಗಳನ್ನು ಮಾಡಿ.~

ಹಿರಿಯ ಮಂತ್ರಿಗೆ ರಾಜರನ್ನು ಹೊಗಳುವುದು ಹೇಗೆ ಎಂಬುದು ಚೆನ್ನಾಗಿ ತಿಳಿದಿತ್ತು. ಆತ ನೆಲದವರೆಗೂ ತಲೆ ಬಾಗಿಸಿ ಹೇಳಿದ, `ಮಹಾಪ್ರಭುಗಳು ದೇವಸ್ಥಾನಕ್ಕೆ ಹೋಗುವ ಅವಶ್ಯಕತೆಯೇ ಇಲ್ಲ~ ಎಂದ.`ಹೌದೇ? ಯಾಕೆ ಹಾಗೆ ಹೇಳುತ್ತೀರಿ?~ ಎಂದು ಆಶ್ಚರ್ಯದಿಂದ ಕೇಳಿದ ಚಕ್ರವರ್ತಿ.

ಮತ್ತೆ ಮಂತ್ರಿ ತಲೆಬಾಗಿಸಿ ವಿನಯದಿಂದ ಹೇಳಿದ, `ಬುದ್ಧನ ಜೀವನ ಸಂದೇಶವೇ ಹೃದಯದ ಅನುಕಂಪೆ, ಕರುಣೆ. ತಾವು ಮಹಾಪ್ರಭುಗಳು, ನಮ್ಮ ದೇಶದ ಅತ್ಯಂತ ಸಾಮಾನ್ಯ ಜನರಿಗಾಗಿ ನಿಮ್ಮ ಹೃದಯದಲ್ಲಿ ಕರುಣೆಯ ಸಾಗರವೇ ಇದೆ. ಆದ್ದರಿಂದ ತಾವು ಸದಾಕಾಲ ಬುದ್ಧನಲ್ಲೇ, ಅವನ ಸನ್ನಿಧಿಯಲ್ಲಿಯೇ ಇರುವುದರಿಂದ ದರ್ಶನಕ್ಕೆಂದು ವಿಶೇಷವಾಗಿ ದೇವಸ್ಥಾನಕ್ಕೆ ಹೋಗುವ ಅಗತ್ಯವಿಲ್ಲ.~ `ಬಹಳ ಸುಂದರವಾದ ವಾಖ್ಯೆ. ಆದರೆ ನಾನೊಂದು ಕಥೆ ಕೇಳಿದ್ದೆ. ಅದನ್ನು ನಿಮಗೆ ಹೇಳಬಯಸುತ್ತೇನೆ~ ಎಂದು ಕಥೆ ಹೇಳಿದ ಚಕ್ರವರ್ತಿ.ಒಬ್ಬ ಅತ್ಯಂತ ಶ್ರದ್ಧಾಳುವಾದ ಬೌದ್ಧಬಿಕ್ಕು ಇದ್ದ. ಅವನ ಜೀವನದ ಒಂದೇ ಉದ್ದೇಶವೆಂದರೆ ಬೋಧಿಸತ್ವನನ್ನು ನೋಡುವುದು. ಅವನು ಪ್ರತಿಯೊಂದು ಕ್ಷೇತ್ರವನ್ನು ಸುತ್ತಿದ, ಬೋಧಿಸತ್ವನ ಬಗ್ಗೆ ಇದ್ದ ಪ್ರತಿಯೊಂದು ಪುಸ್ತಕವನ್ನು ಓದಿದ, ಸದಾ ಈ ದರ್ಶನಕ್ಕಾಗಿ ಪ್ರತಿಕ್ಷಣವೂ ಕಾಯ್ದ.ವರ್ಷಗಳು ಕಳೆದವು. ಕೊನೆಗೆ ಅವನ ಪ್ರಯತ್ನಕ್ಕೆ ಯಶ ದೊರಕಿತು. ಯಾವುದೋ ಒಂದು ಕ್ಷೇತ್ರದಲ್ಲಿ ಬೋಧಿಸತ್ವ ತನ್ನ ಅಪಾರವಾದ, ದೈವತ್ವದ ಪ್ರಕಾಶದೊಂದಿಗೆ ಈ ಬೌದ್ಧಬಿಕ್ಕುವಿನ ಮುಂದೆ ಬಂದಿಳಿದ. ಬೋಧಿಸತ್ವನನ್ನು ಕಂಡೊಡನೆ ಆನಂದಾಶ್ರುಗಳನ್ನು ಸುರಿಸುತ್ತ ಗದ್ಗದಿತನಾಗಿ ಸ್ತುತಿಸುತ್ತ ಮೊಳಕಾಲೂರಿ ಕುಳಿತುಬಿಟ್ಟ ಈ ಬೌದ್ಧಬಿಕ್ಕು.ಬೋಧಿಸತ್ವ ಕೇಳಿದ,  ಏಕೆ ನನ್ನನ್ನು ಅಷ್ಟು ಹುಡುಕಿಕೊಂಡು ಬಂದೆ?

 ದಯಾಳುವೇ, ನಾನು ನಿನಗೆ ಒಂದೇ ಪ್ರಶ್ನೆ ಕೇಳಬಯಸುತ್ತೇನೆ .

 ಆಗಲಿ, ಕೇಳು ನಿನ್ನ ಪ್ರಶ್ನೆಯನ್ನು ಎಂದ ಬೋಧಿಸತ್ವ. ನಾವು ಕಷ್ಟದಲ್ಲಿದ್ದಾಗ, ದಾರಿ ತೋರದಿದ್ದಾಗ ನಿನ್ನ ಕೃಪೆಗಾಗಿ ಪ್ರಾರ್ಥನೆ ಮಾಡುತ್ತೇವೆ. ನೀನೂ ಹಾಗೆಯೇ ಆತಂಕದಲ್ಲಿದ್ದಾಗ ಯಾರನ್ನಾದರೂ ಕುರಿತು ಪ್ರಾರ್ಥನೆ ಮಾಡುತ್ತೀಯಾ?  ಖಂಡಿತವಾಗಿಯೂ ಮಾಡುತ್ತೇನೆ. ಪ್ರತಿಬಾರಿ ಸಮಸ್ಯೆ ಬಂದಾಗ ಬೋಧಿಸತ್ವನನ್ನೇ ಪ್ರಾರ್ಥಿಸುತ್ತೇನೆ.

 ಆದರೆ ನೀನೇ ಬೋಧಿಸತ್ವನಲ್ಲವೇ? ನಿನ್ನನ್ನೇ ನೀನು ಪ್ರಾರ್ಥನೆ ಮಾಡುವುದೇ?  ಆತಂಕದಿಂದ ಕೇಳಿದ ಬಿಕ್ಕು. ಹೌದಪ್ಪ, ಸಹಾಯವನ್ನು ಬೇರೆಯವರಿಂದ ಕೇಳುವುದಕ್ಕಿಂತ ನನ್ನಿಂದಲೇ ಕೇಳುವುದು ಒಳ್ಳೆಯದಲ್ಲವೇ? ನಿನ್ನ ಸಮಸ್ಯೆಗೆ ಪರಿಹಾರ ನೀನೇ ಕಂಡುಕೊಳ್ಳಬೇಕಲ್ಲ?   ಎಂದು ಹೇಳಿ ಬೋಧಿಸತ್ವ ಮರೆಯಾದ.ಈ ಕಥೆಯನ್ನು ಹೇಳಿ ಚಕ್ರವರ್ತಿ ಹೇಳಿದ,  ಬುದ್ಧ ನಮ್ಮ ಹೃದಯದಲ್ಲಿಯೇ ಇದ್ದಾನೆ. ಆದರೆ ದೇವಸ್ಥಾನಕ್ಕೆ ಹೋದಾಗ, ಭಗವಂತನನ್ನು ಪ್ರಾರ್ಥಿಸುವಾಗ ನಮ್ಮನ್ನು ನಾವೇ ಪ್ರಾರ್ಥಿಸಿಕೊಳ್ಳುತ್ತೇವೆ. ಆಗ ನಮ್ಮಲ್ಲಿ ಆತ್ಮವಿಶ್ವಾಸ, ಹುಮ್ಮಸ್ಸು ಮತ್ತು ಶ್ರದ್ಧೆ ಉಕ್ಕಿ ಬರುತ್ತದೆ. ಅದೇ ನಮಗೆ ಭಗವಂತ ನೀಡುವವರ. ಆದ್ದರಿಂದ ನಾಳೆ ದೇವಸ್ಥಾನಕ್ಕೆ ಹೋಗುತ್ತೇನೆ, ಸಿದ್ಧತೆ ಮಾಡಿ  ಎಂದ ನಡೆದ.ಚಕ್ರವರ್ತಿಗೆ ಹೊಗಳುಭಟ್ಟರಿದ್ದಂತೆ ನಮ್ಮ ಮನಸ್ಸಿನಲ್ಲೂ ಅಂಥ ಕೆಲವು ಮೂಲೆಗಳಿವೆ. ಅಲ್ಲಿಯ ಧ್ವನಿಗಳು ನಮ್ಮ ಅಹಂಕಾರವನ್ನು ಉತ್ತೇಜಿಸುತ್ತವೆ. ನಾನೇನೂ ಮಾಡುವುದು ಅವಶ್ಯವಿಲ್ಲ, ನಾವು ಪರಿಪೂರ್ಣರು ಎಂದು ಹೇಳುತ್ತವೆ. ಆದರೆ ನಮ್ಮ ಜೀವನದ ಸಂಪೂರ್ಣ ಜವಾಬ್ದಾರಿ ನಮ್ಮದೇ.ಆಗಾಗ ನಮ್ಮ ಮನಸ್ಸು ಎತ್ತಿ ಎತ್ತಿ ಕೊಡುವ ಅಹಂಕಾರದ ಮಾತುಗಳನ್ನು ತುಳಿದು ಅದೇ ಮನಸ್ಸಿನ ಇನ್ನೊಂದು ಮೂಲೆಯಲ್ಲಿದ್ದ ಶ್ರದ್ಧೆ ಎಂಬ ದೇವಸ್ಥಾನದಲ್ಲಿ ನಮ್ಮ ಶಕ್ತಿಯನ್ನೇ ಆವಾಹಿಸಿದ್ದಾದರೆ ಅಲ್ಲಿಂದ ಪುಟಿದೆದ್ದ ಆತ್ಮವಿಶ್ವಾಸವೇ ನಮಗೆ ದೊರೆಯುವ ವರ. ಈ ವರವೇ ನಮ್ಮನ್ನು ನಮ್ಮ ಜೀವನದ ಚಕ್ರವರ್ತಿಯನ್ನಾಗಿ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry