ದೇವೇಗೌಡರು ಹಾದಿಯಲ್ಲಿ ಹಾವು ಕಂಡರೇ?...

7

ದೇವೇಗೌಡರು ಹಾದಿಯಲ್ಲಿ ಹಾವು ಕಂಡರೇ?...

Published:
Updated:
ದೇವೇಗೌಡರು ಹಾದಿಯಲ್ಲಿ ಹಾವು ಕಂಡರೇ?...

ಒಂದು ಮಾತನ್ನು ಇಲ್ಲಿ ಸ್ಪಷ್ಟಪಡಿಸಿಬಿಡಬೇಕು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನದ ಬಗೆಗೆ ಇರುವ ಕಾಳಜಿಯನ್ನು, ಬದ್ಧತೆಯನ್ನು ಯಾರೇ ಆಗಲಿ ಪ್ರಶ್ನಿಸುವುದು ಕಷ್ಟ. ಅವರು 80ರ ದಶಕದಲ್ಲಿಯೇ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ತಮ್ಮ ಇಲಾಖೆಗೆ 300 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜತೆಗೆ ಜಗಳ ಮಾಡಿಕೊಂಡರು. ಆಗಲೇ ಹೆಗಡೆಯವರು ಸೀರೆ -ಪಂಚೆ, ತಾಳಿ ಭಾಗ್ಯ, ವಿಧವಾ ವೇತನ ಇತ್ಯಾದಿ ಜನಪ್ರಿಯ ಯೋಜನೆಗಳ ಬೆನ್ನು ಹತ್ತಿದ್ದರು. ಹೆಗಡೆಯವರ ಜತೆಗೆ ಎಂದೂ ಅಂಥ ಮಧುರ ಸಂಬಂಧ ಇರದ ಗೌಡರಿಗೆ ನೀರಾವರಿ ಯೋಜನೆ ಒಂದು ರಾಜಕೀಯ ದಾಳವೂ ಆಗಿತ್ತು ಎಂದು ವಾದಿಸುವವರು ಇದ್ದರು. ಈಗಲೂ ಇರಬಹುದು. ಆದರೆ, ಆ ಕಾಲದಲ್ಲಿಯೇ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಒದಗಿಸದೇ ಇದ್ದರೆ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವುದು ಕಷ್ಟ ಎಂಬ ವಾಸ್ತವದ ಅರಿವು ಗೌಡರಿಗೆ ಇತ್ತು. ಪಕ್ಕದ ಆಂಧ್ರಪ್ರದೇಶದಲ್ಲಿ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಬೃಹತ್ ನೀರಾವರಿ ಯೋಜನೆಗಳು ಆಗಲೇ ಜಾರಿಯಲ್ಲಿ ಇದ್ದುದೂ ಗೌಡರಿಗೆ ಗೊತ್ತು ಇತ್ತು. ಆದರೆ, ಹೆಗಡೆಯವರು ಹಣ ಬಿಡುಗಡೆ ಮಾಡಲೇ ಇಲ್ಲ. ಗೌಡರು ಬರೀ ರಾಜಕೀಯ ಉದ್ದೇಶಕ್ಕಾಗಿ ನೀರಾವರಿ ಯೋಜನೆಗಳ ಮಹತ್ವ ಪ್ರಸ್ತಾಪ ಮಾಡಿದ್ದರೆ ಮುಂದೆ ತಾವು ಪ್ರಧಾನಿ ಆಗಿದ್ದಾಗ ತ್ವರಿತ ನೀರಾವರಿ ಯೋಜನೆಯಡಿ ಕೃಷ್ಣಾ ಕೊಳ್ಳದ ಯೋಜನೆಗಳಿಗೆ 125  ಕೋಟಿ ರೂಪಾಯಿ ಹಣ ಬಿಡುಗಡೆ ಮಾಡುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದ ಪ್ರಧಾನಿ ಆಗಿದ್ದ ಗೌಡರಿಗೆ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಹೀಗೆ ವಿಶೇಷ ಅನುದಾನ ಬಿಡುಗಡೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಆದರೂ ಅವರು ಧೈರ್ಯ ಮಾಡಿದರು. ಆ ಪುಣ್ಯದ ಫಲ ಅವರಿಗೆ ತಟ್ಟಿತು. ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಆಲಮಟ್ಟಿ ಯೋಜನೆಯನ್ನು ರಾಷ್ಟ್ರಕ್ಕೆ ಅರ್ಪಿಸುವ ಭಾಗ್ಯ ಅವರಿಗೆ ಸಿಕ್ಕಿತು. 90ರ ದಶಕದಲ್ಲಿ ನಾನು ಬೆಳಗಾವಿ ಜಿಲ್ಲೆಯ ವರದಿಗಾರನಾಗಿದ್ದಾಗ ಒಮ್ಮೆ ದೇವೇಗೌಡರು ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಾ ಕೊಳ್ಳದ ಮಲಪ್ರಭಾ- ಘಟಪ್ರಭಾ ಯೋಜನೆಗಳ ಪ್ರಗತಿ ಕುಂಠಿತವಾಗಿರುವ ಬಗ್ಗೆ ಕಂಠೋದ್ಗತವಾಗಿ ಕೊಟ್ಟ ಮಾಹಿತಿ ನಮ್ಮನ್ನು ಬೆರಗುಗೊಳಿಸಿತ್ತು. ಈಗ ಅವರು ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಈಗಲೂ ನಮ್ಮ ನೀರಾವರಿ ಯೋಜನೆಗಳ ಬಗ್ಗೆ ಬೆರಳ ತುದಿಯಲ್ಲಿಯೇ ಮಾಹಿತಿ ಇರುವ ಒಬ್ಬಿಬ್ಬರು ರಾಜಕಾರಣಿಗಳಲ್ಲಿ ದೇವೇಗೌಡರು ಅಗ್ರಗಣ್ಯರು.ನೀರಾವರಿ ಬಗ್ಗೆ ಇಷ್ಟೆಲ್ಲ ನೈಜ ಕಾಳಜಿ ಇರುವ ದೇವೇಗೌಡರು ಮುಖ್ಯಮಂತ್ರಿ ಪದವಿಯನ್ನು ಬಿಟ್ಟು ಪ್ರಧಾನಿ ಹುದ್ದೆಗೆ ಹೋಗುವುದಕ್ಕಿಂತ ಮುಂಚೆ ಕೃಷ್ಣಾ ಕೊಳ್ಳದ ಯೋಜನೆಗಳಲ್ಲಿ ತುಂಡು ಗುತ್ತಿಗೆ ಪದ್ಧತಿಯನ್ನು ಅನುಸರಿಸಿದ್ದು ವಿವಾದಕ್ಕೆ ಕಾರಣವಾಯಿತು. 1995-98ರ ನಡುವಿನ ಅವಧಿಯಲ್ಲಿ ನಡೆದ ಈ ಅಕ್ರಮದ ಮೊತ್ತ ಈಗಿನ ಹಗರಣಗಳಿಗೆ ಹೋಲಿಸಿದರೆ ಭಾರಿ ದೊಡ್ಡದೇನೂ ಅಲ್ಲ. ಆದರೂ ಈ ಹಗರಣಕ್ಕೆ ದೊಡ್ಡ ಇತಿಹಾಸವೇ ಇದೆ. ಮೊದಲು ಈ ಹಗರಣ ಬಯಲಿಗೆ ಬಂದುದು ವೈಜನಾಥ ಪಾಟೀಲರ ಅಧ್ಯಕ್ಷತೆಯ ವಿಧಾನ ಮಂಡಳದ ಅಂದಾಜು ಸಮಿತಿಯ ವರದಿಯಲ್ಲಿ.

 

ಈ ವರದಿಯ ಮುಖ್ಯಾಂಶಗಳು :

1. ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ಅನುಷ್ಠಾನದಲ್ಲಿ ಸಿಮೆಂಟ್, ಉಕ್ಕು ಮತ್ತು ಸ್ಫೋಟಕಗಳ ಖರೀದಿಯಲ್ಲಿ ಖೊಟ್ಟಿ ಬಿಲ್‌ಗಳನ್ನು ಸೃಷ್ಟಿ ಮಾಡಿ ಹಣ ದುರುಪಯೋಗ ಮಾಡಲಾಗಿದೆ.

 

2. ಒಬ್ಬ ಗುತ್ತಿಗೆದಾರನಿಂದ ಒಂದಕ್ಕಿಂತ ಹೆಚ್ಚು ಕಾಮಗಾರಿ ಮಾಡಿಸಿ ಕಡಿಮೆ ಗುಣಮಟ್ಟದ ಕೆಲಸಕ್ಕೆ ಹೆಚ್ಚಿನ ದರದಲ್ಲಿ ಹಣ ಪಾವತಿ ಮಾಡಲಾಗಿದೆ. ಕಾಲುವೆಗಳ ನಿರ್ಮಾಣ ಮಾಡುವಾಗ ಅದು ಮೆದು ಬಂಡೆ ಜಾಗವಾಗಿದ್ದರೂ ಗಟ್ಟಿ ಬಂಡೆ ಜಾಗ ಎಂದು ಉಲ್ಲೇಖಿಸಿ ಹೆಚ್ಚಿನ ಹಣ ನೀಡಲಾಗಿದೆ.3. ಕಾಲುವೆಗಳ ದುರಸ್ತಿ ಮಾಡದೆ, ಮಾಡಲಾಗಿದೆ ಎಂದು ಖರ್ಚು  ತೋರಿಸಲಾಗಿದೆ.

 

4.  ಕಾಲುವೆಗಳ ಹೂಳು ತೆಗೆಯದೆ, ತೆಗೆಯಲಾಗಿದೆ ಎಂದು ತೋರಿಸಲಾಗಿದೆ.5. ಶಹಾಪುರ-ಕೆಂಭಾವಿ ವಿಭಾಗಗಳ ವಿತರಣಾ ನಾಲೆಗಳ ಭೂಮಿ ಅಗೆತದ ಕಾಮಗಾರಿಗಳಲ್ಲಿ ಗುತ್ತಿಗೆದಾರರು 25.42  ಕೋಟಿ ರೂಪಾಯಿಗಳಿಗೆ ನೀಡಿದ ಸುಳ್ಳು ಬಿಲ್‌ಗಳಿಗೆ ಹಣ ಪಾವತಿ ಆಗಿದೆ.6. ಸೋಲಾರ್ ಫಲಕಗಳ ಖರೀದಿಯಲ್ಲಿ ಮಾರುಕಟ್ಟೆ ದರಕ್ಕಿಂತ 5,000 ರೂಪಾಯಿಗಳಷ್ಟು ಹೆಚ್ಚಿನ ಹಣ ಪಾವತಿ ಮಾಡಲಾಗಿದೆ, ಇತ್ಯಾದಿ. ಇತ್ಯಾದಿ...ಇದರಲ್ಲಿ ಕೆಲವು ಪ್ರಕರಣಗಳನ್ನು ಸಿಐಡಿ ಮತ್ತೆ ಇನ್ನು ಕೆಲವು ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಅಂದಾಜು ಸಮಿತಿ ಶಿಫಾರಸು ಮಾಡಿತ್ತು. ಹೆಚ್ಚೂ ಕಡಿಮೆ ಇದೇ ಅಂಶಗಳನ್ನು ಸಿಎಜಿ ವರದಿಯೂ ದೃಢಪಡಿಸಿತು. ಆದರೆ, ಸರ್ಕಾರ ಸಿಐಡಿ ಅಥವಾ ಸಿಬಿಐಗೆ ಪ್ರಕರಣವನ್ನು ವಹಿಸದೇ ನಿವೃತ್ತ ಮುಖ್ಯ ಕಾರ್ಯದರ್ಶಿ ಎ.ಬಿ.ದಾತಾರ್ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿತು. ಸಮಿತಿಯು ಇಲಾಖೆ ಕ್ರಮಕ್ಕೆ ಸೂಚಿಸಿತು. ಈ ಮಧ್ಯೆ ಬೆಂಗಳೂರಿನ ನಿವೃತ್ತ ಮುಖ್ಯ ಎಂಜಿನಿಯರ್ ಎಚ್.ಟಿ.ಸೋಮಶೇಖರ ರೆಡ್ಡಿಯವರು ಇದೇ ಪ್ರಕರಣವನ್ನು ಇಟ್ಟುಕೊಂಡು ಹೈಕೋರ್ಟ್ ಮೆಟ್ಟಿಲು ಏರಿದರು. ಅವರ ಅರ್ಜಿಯ ಮೇಲೆ ಆಗಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಮತ್ತು ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಅವರನ್ನು ಒಳಗೊಂಡ ಪೀಠ  ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಎದುರು ಅರ್ಜಿ ಹಾಕಿಕೊಂಡು ಸೂಕ್ತ ಕ್ರಮಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಆದೇಶ ನೀಡಿತು. ಅದರ ಫಲವಾಗಿ ಸರ್ಕಾರ ಸಿಐಡಿ ವಿಚಾರಣೆಗೆ ಆದೇಶ ನೀಡಿತು. ಅದಕ್ಕೆ ಅಧಿಕಾರಿಗಳ ಸೂಕ್ತ  ಸಹಕಾರ ಸಿಗಲಿಲ್ಲ. ಸಿಐಡಿ  ಅಧಿಕಾರಿಗಳು ಮುಂದಿನ ಕ್ರಮಕ್ಕಾಗಿ ತನ್ನ ಕಾನೂನು ಸಲಹೆಗಾರರನ್ನು ಸಂಪರ್ಕಿಸಿದಾಗ ಅವರಿಂದ, `ಸಿಐಡಿ ಅಧಿಕಾರಿಗಳಿಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು, ಅನೇಕ ಸಾರಿ ಪತ್ರ ವ್ಯವಹಾರ ಮಾಡಿದಾಗಲೂ ಪೂರ್ಣ ಪ್ರಮಾಣದ ದಾಖಲೆಗಳನ್ನು ಒದಗಿಸಲಿಲ್ಲ. ಹಾಗೂ ಖಚಿತ ಉತ್ತರ ಕೊಡದೆ ಅಸ್ಪಷ್ಟ ಮಾಹಿತಿ ನೀಡಿದರು. ಹೀಗಾಗಿ ವಿಚಾರಣೆಗೆ ಬದಲಾಗಿ ತನಿಖೆ ಕೈಗೊಂಡರೆ ಆರೋಪಗಳನ್ನು ಎಳೆಎಳೆಯಾಗಿ ಬಿಡಿಸಿ ಕ್ರಮ ಕೈಗೊಳ್ಳಬಹುದು. ಅದಕ್ಕಾಗಿ ಸಂಬಂಧಪಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು~ ಎಂಬ ಸಲಹೆ ಬಂತು. ಅದರ ಪರಿಣಾಮ ಎಂಬಂತೆ ಕಳೆದ ತಿಂಗಳು 24ರಂದು ಸಂಜೆ ವಿಧಾಸೌಧದ ಠಾಣೆಯಲ್ಲಿ ಸಿಐಡಿಯ ಡಿವೈಎಸ್‌ಪಿ ಶಂಕರಪ್ಪ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದರು. ಅವರು ದಾಖಲು ಮಾಡಿದ ಪ್ರಥಮ ವರ್ತಮಾನ ವರದಿಯ ಆಪಾದಿತರ ಕಲಂನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.ಅತ್ತ ದೂರು ದಾಖಲು ಆಗುತ್ತಿದ್ದಂತೆಯೇ ಇತ್ತ ದೇವೇಗೌಡರು `ಮಹಾಭಾರತ ಯುದ್ಧ ಶುರುವಾಯಿತು~ ಎಂದು ಘೋಷಿಸಿದರು. ಸಿಐಡಿಯ ಡಿಜಿಪಿ ಶಂಕರ್ ಬಿದರಿ ಅವರ ಜನ್ಮ ಜಾಲಾಡಿದರು. ಅವರ ಹಿಂದೆ ಯಡಿಯೂರಪ್ಪ ಇದ್ದಾರೆ ಎಂದರು. ಅತ್ತ ಕುಮಾರಸ್ವಾಮಿಯವರು ಇನ್ನೂ ಒಂದು  ಹೆಜ್ಜೆ ಮುಂದೆ ಹೋಗಿ ಬಿದರಿಯವರು ಕಾಂಗ್ರೆಸ್ ಟಿಕೆಟ್‌ನಿಂದ ಮುಂದಿನ ಚುನಾವಣೆಗೆ  ಸ್ಪರ್ಧಿಸಲಿದ್ದಾರೆ ಎಂದೂ ಪ್ರಕಟಿಸಿಬಿಟ್ಟರು. ಇದೆಲ್ಲ ವಿಚಿತ್ರ ಮತ್ತು ತಮಾಷೆ ಅನಿಸುತ್ತದೆ. ತಮ್ಮ ಕುಟುಂಬವೇನಾದರೂ ಅಕ್ರಮ ಮಾಡಿದ್ದರೆ ಅದರ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಸವಾಲು ಹಾಕಿದ್ದ ಕುಮಾರಸ್ವಾಮಿಯವರು ಈಗ ಕೇವಲ ಒಂದು ದೂರು ದಾಖಲು ಆದರೆ ಇಷ್ಟೆಲ್ಲ ರಂಪ ರಾದ್ಧಾಂತ ಏಕೆ ಮಾಡುತ್ತಾರೆ? ಗೌಡರೇಕೆ ಮಹಾಭಾರತ ಯುದ್ಧ ಶುರುವಾಯಿತು ಎನ್ನುತ್ತಾರೆ? ಪ್ರಸಕ್ತ ರಾಜಕಾರಣದಲ್ಲಿ ನಿತ್ಯ ಒಬ್ಬೊಬ್ಬರ ವಿರುದ್ಧ ದೂರು ಬರುತ್ತಿವೆ. ಪ್ರಥಮ ವರ್ತಮಾನ ವರದಿ ದಾಖಲಾಗುತ್ತಿವೆ. ಎಲ್ಲರೂ ಹೀಗೆಯೇ ಮಹಾಭಾರತ-ರಾಮಾಯಣ ಯುದ್ಧ ಶುರುವಾಯಿತು ಎಂದು ಪತ್ರಿಕಾಗೋಷ್ಠಿ ಕರೆದು ಘೋಷಿಸಲು ಆಗುತ್ತದೆಯೇ?ತನಿಖಾಧಿಕಾರಿ ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲು ಆಗುತ್ತದೆಯೇ? ಇನ್ನು ಮುಂದೆ ಯಡಿಯೂರಪ್ಪ, ಅಶೋಕ, ನಿರಾಣಿ ಅವರೆಲ್ಲ ಹೀಗೆಯೇ ಮಾತನಾಡಬಹುದು! ದೇವೇಗೌಡರಂಥ ಹಿರಿಯ ರಾಜಕಾರಣಿ ಹೀಗೆ ಗುಡುಗು ಹಾಕಿದರೆ ಯಾವುದಾದರೂ ಒಂದು ತನಿಖೆ  ಸರಾಗವಾಗಿ ನಡೆಯಲು ಸಾಧ್ಯವೇ? ತನಿಖೆ ಮಾಡುವ ಅಧಿಕಾರಿ ಇವರನ್ನೆಲ್ಲ ಎದುರು ಹಾಕಿಕೊಳ್ಳಲು ಆಗುತ್ತದೆಯೇ? ಆಗುವುದಿಲ್ಲ ಎಂಬುದಕ್ಕೆ ಶಂಕರ್ ಬಿದರಿಯವರ ಪ್ರತಿಕ್ರಿಯೆಯೇ ಸಾಕ್ಷಿ. ಅವರು, `ಈ ಗೊಡವೆಯೇ ಬೇಡ. ಲೋಕಾಯುಕ್ತಕ್ಕೆ ಪ್ರಕರಣ ವಹಿಸಿ ಬಿಡಿ~ ಎಂದಿದ್ದಾರೆ. ದೇವೇಗೌಡರು, ಕೃಷ್ಣಾ ಕೊಳ್ಳದ ಯೋಜನೆಯನ್ನು ಆಗ ನಿರ್ವಹಿಸಿದ ಅಧಿಕಾರಿಗಳು ಧೈರ್ಯವಾಗಿ ಇರಬೇಕು ಎಂದು ಅಭಯವನ್ನೂ ನೀಡಿದ್ದಾರೆ. ಅಂದರೆ ತಾವು ಮಾತ್ರವಲ್ಲ ಅಧಿಕಾರಿಗಳ ಗೊಡವೆಗೆ ಹೋದರೆ ಎಚ್ಚರ ಎಂದೂ ಅವರು ತನಿಖಾಧಿಕಾರಿಗಳನ್ನು ಬೆದರಿಸಿದ್ದಾರೆ!ರಾಜಕಾರಣದಲ್ಲಿ ಹೀಗೆಲ್ಲ ಆರೋಪ ಬರುವುದು ಸಹಜ. `ತನಿಖೆ ಆಗಲಿ. ತಪ್ಪಿತಸ್ಥ ಎಂದು ಕಂಡು ಬಂದರೆ ಶಿಕ್ಷೆ ಎದುರಿಸುವೆ~ ಎಂದು ಗೌಡರು ಹೇಳಿದ್ದರೆ  ಕಾನೂನಿನ ಸಹಜ ಪ್ರಕ್ರಿಯೆಯಲ್ಲಿ ಅವರಿಗೆ ನಂಬಿಕೆ ಇದೆ ಎಂದು ಅನಿಸುತ್ತಿತ್ತು. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾದುದರ ಹಿಂದೆ ರಾಜಕೀಯ ಇದೆ ಎಂದು ಅವರಿಗೆ ಅನಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಕರ್ನಾಟಕದಲ್ಲಿ ಈಗ `ಬೇಟೆ  ರಾಜಕೀಯ~ವೇ ನಡೆದಿದೆ. ಮಾಹಿತಿ ಹಕ್ಕು ಕಾಯ್ದೆ ಹಾಗೂ ಸಕ್ರಿಯವಾಗಿರುವ ಲೋಕಾಯುಕ್ತ ಹೀಗೆ ಬೇಟೆ ಆಡುವವರಿಗೆ ಒಂದು ಅಸ್ತ್ರವಾಗಿ ಸಿಕ್ಕಿವೆ. ಅದನ್ನು ಮೊದಲು ಯಾರು ಬಳಸಿಕೊಂಡರು ಎಂಬುದು ಈಗ ಜನಜನಿತ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಬಹುತೇಕ ರಾಜಕಾರಣಿಗಳು ಗಾಜಿನ ಮನೆಯಲ್ಲಿ ಇರುವವರು. ಇನ್ನೊಬ್ಬರ ಮನೆಯ ಮೇಲೆ ಕಲ್ಲು ಎಸೆದರೆ ತಮ್ಮ ಮನೆಯ ಮೇಲೂ ಕಲ್ಲು ಬೀಳಬಹುದು ಎಂಬ ಎಚ್ಚರಿಕೆ ಅಗತ್ಯ. ಯಡಿಯೂರಪ್ಪ ಅವರನ್ನು ಬಲಿ ಹಾಕಿರುವ ಗೌಡರಿಗೆ ಈಗ ಅದೇ  ಬಾಣ ತಿರುಗಿ ಬರುತ್ತಿದೆ. ಮೊದಲು ಕುಮಾರಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಾಯಿತು. ನಂತರ ಎಚ್.ಡಿ. ಬಾಲಕೃಷ್ಣೇಗೌಡರ ವಿರುದ್ಧ ಪ್ರಕರಣ ದಾಖಲಾಯಿತು. ಕೃಷ್ಣಾ ಮೇಲ್ದಂಡೆ ಯೋಜನೆ ಅಕ್ರಮದ ವಿರುದ್ಧದ ಪ್ರಕರಣ ಪರೋಕ್ಷವಾಗಿ ದೇವೇಗೌಡರ  ವಿರುದ್ಧ ಇರುವಂಥದು. ಅದಾದ  ಕೆಲವೇ ದಿನಗಳಲ್ಲಿ ಎಚ್.ಡಿ.ರೇವಣ್ಣ ಅವರ ವಿರುದ್ಧವೂ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಗೌಡರ ಕುಟುಂಬಕ್ಕೆ ಆಪ್ತರಾಗಿದ್ದ ಕರ್ನಾಟಕ ಲೋಕ ಸೇವಾ  ಆಯೋಗದ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣ ಅವರು ಜೈಲಿಗೆ ಹೋಗಿದ್ದಾರೆ. ಹೀಗೆಯೇ ಬಿಟ್ಟರೆ ಅಪಾಯ ಮನೆ ಬಾಗಿಲಿಗೇ ಬಂದು ಬಿಡಬಹುದು ಎಂದು ಬೆಚ್ಚಿಯೇ ದೇವೇಗೌಡರು ರೌದ್ರಾವತಾರ ತಾಳಿ ಮಹಾಭಾರತ ಯುದ್ಧದ ಮಾತು ಆಡುತ್ತಿದ್ದಾರೆ.ಅವರು ಮಾತಿನ ಮಧ್ಯೆ ಜಾತಿ ರಾಜಕೀಯವನ್ನೂ ಪ್ರಸ್ತಾಪ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮ ನಡೆದುದು 95-98ರ ನಡುವೆ. ವೈಜನಾಥ  ಪಾಟೀಲ ಸಮಿತಿ ವರದಿ ಕೊಟ್ಟುದು 98ರಲ್ಲಿಯೇ. ಆಗ ದೇವೇಗೌಡರ ಪಕ್ಷವೇ ರಾಜ್ಯವನ್ನು ಆಳುತ್ತಿತ್ತು. ವೈಜನಾಥ ಪಾಟೀಲರು ವಿಧಾನ ಮಂಡಲದ ಅಂದಾಜು ಸಮಿತಿ ಅಧ್ಯಕ್ಷರಾಗಿ ವರದಿ ಕೊಟ್ಟಿದ್ದರು. ಆಗಲೂ ಜಾತಿಯೇ ಕೆಲಸ ಮಾಡುತ್ತಿತ್ತೇ? ತದನಂತರ ಸಿಎಜಿ ವರದಿ ಬಂತು. ಅದೂ ಜಾತಿ ಆಧಾರದಿಂದಲೇ ವರದಿ ಕೊಟ್ಟಿತು ಎಂದು ಅನ್ನಲಾದೀತೇ? ಈ ಅಕ್ರಮವನ್ನು ಒಂದು ತಾರ್ಕಿಕ ಕೊನೆಗೆ ತೆಗೆದುಕೊಂಡು ಹೋಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವ ನಿವೃತ್ತ ಮುಖ್ಯ ಎಂಜಿನಿಯರ್ ಎಚ್.ಟಿ. ಸೋಮಶೇಖರ ರೆಡ್ಡಿ ಅವರದು ಯಾವ ಜಾತಿ? ಎಲ್ಲವನ್ನೂ ಜಾತಿ ದೃಷ್ಟಿಯಿಂದಲೇ ನೋಡುತ್ತ ಹೋದರೆ ಅದಕ್ಕೆ ಅಂತ್ಯ ಎಂಬುದು ಇದೆಯೇ? ನಿಜ, ಈಗ ಕರ್ನಾಟಕದಲ್ಲಿ ಆಡಳಿತ ಎಂಬುದು ಎರಡು ಪ್ರಮುಖ ಜಾತಿಗಳ ನಡುವೆ ಒಡೆದು ಹೋಗಿದೆ. ಒಂದು ಕಡೆ ಒಕ್ಕಲಿಗ ಅಧಿಕಾರಿಗಳು ಇದ್ದಾರೆ. ಇನ್ನೊಂದು ಕಡೆ ಲಿಂಗಾಯತ ಅಧಿಕಾರಿಗಳು ಇದ್ದಾರೆ. ಈ ಎರಡು ಪ್ರಬಲ ಜಾತಿಗಳ ಅಧಿಕಾರಿಗಳ ನಡುವೆ ವಿವಿಧ ಇತರ ಸಮುದಾಯದ ಅಧಿಕಾರಿಗಳೂ ಇದ್ದಾರಲ್ಲ? ಪ್ರಬಲ ಜಾತಿಗಳ ಅಧಿಕಾರಿಗಳು ತಮ್ಮ ತಮ್ಮ ಸಮುದಾಯದ `ಯಜಮಾನರ ಧ್ವನಿಯಾಗಿ~ ಕೆಲಸ ಮಾಡಿದರೆ ಉಳಿದ ಸಮುದಾಯಗಳ ಅಧಿಕಾರಿಗಳು ಏನು ಮಾಡಬೇಕು? ಹೋಗಲಿ ಸರ್ಕಾರದ ಆಡಳಿತ ಎಂಬುದು ಹೀಗೆ ತಮ್ಮ  ವಿರುದ್ಧದ ಜಾತಿಯ ರಾಜಕಾರಣಿಗಳ ವಿರುದ್ಧ ಹುನ್ನಾರ ಮಾಡುವುದೇ? ಹಾಗಾದರೆ ಜನಕಲ್ಯಾಣದ ಕೆಲಸ ಯಾರು ಮಾಡುತ್ತಾರೆ?...ಕುಮಾರಸ್ವಾಮಿಯವರ ಬಗೆಗೂ ಒಂದು ಮಾತು ಹೇಳಬೇಕು. ಅವರು ತಮ್ಮ ವಿರುದ್ಧ ಯಾರಾದರೂ ಇದ್ದಾರೆ ಎಂದು ಅನಿಸಿದರೆ ಅವರ ಜಾತಕ ಬಿಚ್ಚಿ ಇಡುವ ಬೆದರಿಕೆ ಹಾಕುತ್ತಿದ್ದಾರೆ. ಮೊದಲು ಸಂತೋಷ ಹೆಗ್ಡೆಯವರದಾಯಿತು. ಈಗ ಶಂಕರ್ ಬಿದರಿಯವರ ಸರದಿ. ಅವರು ಯಾವ ಕಾಲಕ್ಕಾಗಿ ಕಾಯುತ್ತಿದ್ದಾರೆ? ಯಾವಾಗ ಜಾತಕ ಬಿಚ್ಚಿ ಇಡುತ್ತಾರೆ?  ಕೆಟ್ಟ ಪತ್ರಕರ್ತರು ಹೀಗೆಯೇ ಅಲ್ಲವೇ ಹೆದರಿಸುವುದು? ಕುಮಾರಸ್ವಾಮಿಯವರು ಭಿನ್ನ ಎಂದುಕೊಂಡಿದ್ದೇನೆ!

                                                           

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry