ಮಂಗಳವಾರ, ಏಪ್ರಿಲ್ 13, 2021
30 °C

ದೇಶದ ಅಭಿವೃದ್ಧಿ ಯಾವ ಪಥದತ್ತ...

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಬಿಡುಗಡೆಯಾಗಿರುವ ಜನಗಣತಿ ಆಧಾರಿತ ವರದಿಯೊಂದರ ಪ್ರಕಾರ ಭಾರತದಲ್ಲಿರುವ ಅರ್ಧಕ್ಕೂ ಹೆಚ್ಚು ಮನೆಗಳಲ್ಲಿ ದೂರವಾಣಿ ಸೌಲಭ್ಯವಿದೆ, ಆದರೆ ಶೌಚಾಲಯಗಳು ಮಾತ್ರ ಇಲ್ಲ! ಈ ದೂರವಾಣಿಗಳಲ್ಲಿ ಶೇಕಡ 54ರಷ್ಟು ಮೊಬೈಲ್ ದೂರವಾಣಿಗಳು. ಭಾರತದ ಗ್ರಾಮೀಣ ಜನಸಂಖ್ಯೆಯಲ್ಲಿ ಸುಮಾರು ಮೂರನೇ ಒಂದು ಭಾಗಕ್ಕೆ ವಿದ್ಯುಚ್ಛಕ್ತಿಯ ಸೌಲಭ್ಯವಿಲ್ಲ. ಆದರೆ ನಮ್ಮ ದೇಶದ ಶೇಕಡ 69ರಷ್ಟು ಜನಸಂಖ್ಯೆ ವಾಸವಾಗಿರುವುದೇ ಗ್ರಾಮೀಣ ಪ್ರದೇಶಗಳಲ್ಲಿ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿ ಎರಡನೇ ಮನೆಯಲ್ಲಿ ಮೊಬೈಲ್, ಟಿ.ವಿ ಅಥವಾ ಇತರ ಭೋಗ ವಸ್ತುವಿದ್ದು, ಈ ಮನೆಗಳಲ್ಲಿ ಜೀವನಾವಶ್ಯಕ ವಸ್ತುಗಳಿಗಿಂಥ ಇವುಗಳ ಮೇಲೆಯೇ ಹೆಚ್ಚು ಹಣವನ್ನು ವ್ಯಯ ಮಾಡುತ್ತಿದ್ದಾರೆ ಎಂಬ ವಿಷಯವೂ ಬೆಳಕಿಗೆ ಬಂದಿದೆ. ಈ ಬೆಳವಣಿಗೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ದೇಶದ ಅಭಿವೃದ್ಧಿ ಪಥ ಎತ್ತ ಚಲಿಸುತ್ತಿದೆ ಎಂಬುದರ ಬಗ್ಗೆ ಒಂದು ಸ್ಪಷ್ಟ ಸೂಚನೆ ದೊರೆಯುತ್ತದೆ.ಭಾರತದಲ್ಲಿ ಜಾಗತೀಕರಣದ ಯುಗ ಎರಡು ದಶಕಗಳ ಹಿಂದೆ ಆರಂಭವಾದಾಗ ಅಭಿವೃದ್ಧಿಯ ಅರ್ಥವಷ್ಟೇ ಅಲ್ಲ, ಅದನ್ನು ಸಾಧಿಸುವ ಮಾರ್ಗಗಳೂ ಬದಲಾದವು. ಅದುವರೆಗೂ ರಾಜ್ಯ ಕೇಂದ್ರಿತವಾಗಿದ್ದ ಅಭಿವೃದ್ಧಿಯ ಗುರಿಗಳು, ಸಾಧನಗಳು ಮತ್ತು ಸಂಸ್ಥೆಗಳ ಸ್ವರೂಪದಲ್ಲಿ ಸ್ಪಷ್ಟ ಬದಲಾವಣೆಗಳು ಕಂಡವು. ಆರ್ಥಿಕ ವ್ಯವಸ್ಥೆಯ ಮೇಲಿದ್ದ ಸರ್ಕಾರಿ ಸ್ವಾಮ್ಯ ಮತ್ತು ಅಭಿವೃದ್ಧಿಯನ್ನು ತರುವ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಸರ್ಕಾರಗಳ ಪಾಲು - ಇವೆರಡೂ ಕ್ರಮೇಣ ಕಡಿಮೆಯಾಗುತ್ತಾ ಬಂದು, ಖಾಸಗಿ ಕ್ಷೇತ್ರ ಹೆಮ್ಮರದಂತೆ ಬೆಳೆಯತೊಡಗಿತು. ವಿಶ್ವದ ಆರ್ಥಿಕ ಭೂಪಟದಲ್ಲಿ ಅಷ್ಟೇನೂ ಗೋಚರತೆಯನ್ನು ಪಡೆಯದಿದ್ದ ಭಾರತ ಕೇವಲ 10-15 ವರ್ಷಗಳ ಅವಧಿಯಲ್ಲಿ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿತ್ತು. ಇದರ ಪರಿಣಾಮವಾಗಿ ಬೃಹತ್ ಉದ್ದಿಮೆಗಳಲ್ಲಿ, ಬಹು ಮಹಡಿ ಕಟ್ಟಡಗಳಲ್ಲಿ, ಭೋಗ ವಸ್ತುಗಳ ಮಾರುಕಟ್ಟೆಗಳಲ್ಲಿ, ವೈಭವೋಪೇತ ಮೂಲಸೌಕರ್ಯಗಳ ಸೃಷ್ಟಿಯಲ್ಲಿ ಅಪಾರ ಪ್ರಮಾಣದ ಬಂಡವಾಳ ಹೂಡಿಕೆ ಆರಂಭವಾಯಿತು. ಬಡ ದೇಶ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ದೇಶ, ಮುಂಬರುವ 2-3 ದಶಕಗಳಲ್ಲಿ ವಿಶ್ವದ ಅತ್ಯಂತ ಪ್ರಬಲ ಆರ್ಥಿಕ ಶಕ್ತಿಗಳ ಸಾಲಿಗೆ ಸೇರಲಿದೆ ಎಂಬ ಸ್ಥಿತಿಯನ್ನು ತಲುಪಿತು. ಭಾರತ ಇನ್ನೇನು ಅಭಿವೃದ್ಧಿಯನ್ನು ಸಾಧಿಸಿಯೇ ಬಿಟ್ಟಿತು ಎಂಬಂತೆ ಅನೇಕರು ಭಾವಿಸಿದರು.ಹಾಗಾದರೆ ಅಭಿವೃದ್ಧಿ ಎಂದರೇನು ಎಂಬ ಮೂಲಭೂತ ಪ್ರಶ್ನೆಯನ್ನು ನಾವು ಈಗ ಎತ್ತಬೇಕಾಗುತ್ತದೆ. ಆರ್ಥಿಕ ಬೆಳವಣಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಈ ಹೊತ್ತು ಅದರ ಪ್ರಮಾಣ ಶೇಕಡ 8 ರಿಂದ 9ರಷ್ಟು ಇದೆ. ಆರ್ಥಿಕ ಉದಾರೀಕರಣ ಮತ್ತು ಖಾಸಗೀಕರಣ ಪ್ರಕ್ರಿಯೆಗಳು ಹೊಸ ಹಾಗೂ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಿವೆ. ಆದ್ದರಿಂದ ಜನರ ಗಳಿಕಾಶಕ್ತಿ ಕೂಡ ಬಲವಾಗುತ್ತಿದೆ. ಶಿಕ್ಷಣದ ಎಲ್ಲ ಹಂತಗಳಲ್ಲೂ ಸಂಸ್ಥೆಗಳ ಸಂಖ್ಯೆಯಲ್ಲಿ ಗಮನಾರ್ಹವಾದ ಹೆಚ್ಚಳವಾಗಿದ್ದರಿಂದ ಎಲ್ಲ ವಯೋಗುಂಪುಗಳಿಗೂ ಜ್ಞಾನಾರ್ಜನೆಯ ಅವಕಾಶಗಳಲ್ಲೂ ಹೆಚ್ಚಳವಾಯಿತು, ಎಲ್ಲಕ್ಕಿಂತ ಮಿಗಿಲಾಗಿ ಇಡೀ ದೇಶವೇ ಮಾಹಿತಿ ತಂತ್ರಜ್ಞಾನ ಕ್ರಾಂತಿಯೆಂಬ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಲಾರಂಭಿಸಿತು.ಆರ್ಥಿಕ ಬೆಳವಣಿಗೆ ವ್ಯಕ್ತಿಗಳ ಜೀವನ ಮಟ್ಟದ ಹೆಚ್ಚಳಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಗಳಿಕಾ ಶಕ್ತಿ ಹೆಚ್ಚಿದಾಗ ಜೀವನದಲ್ಲಿ ಆಯ್ಕೆಗಳೂ ವಿಸ್ತೃತವಾಗುತ್ತವೆ ಎಂಬುದು ಕೂಡ ಸತ್ಯ. ಆದರೆ ಈ ಬೆಳವಣಿಗೆಗಳ ಸಕಾರಾತ್ಮಕ ಪರಿಣಾಮಗಳು ನಮ್ಮ ಸಮಾಜದ ಎಲ್ಲ ವರ್ಗಗಳಲ್ಲಿ ಸಮಾನ ಹಂಚಿಕೆಯಾಗಿವೆಯೇ? ಆರ್ಥಿಕ ಬೆಳವಣಿಗೆ ಎಂದರೆ ಸೌಲಭ್ಯಗಳ ಸಂಖ್ಯಾತ್ಮಕ ಹೆಚ್ಚಳ ಮಾತ್ರವೇ ಅಥವಾ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಗಳು ಉಂಟಾಗಿವೆಯೇ? ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಆರ್ಥಿಕ ಸುಧಾರಣೆಗಳು ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಅನುಕೂಲಗಳನ್ನು ಅನುಭವಿಸಿಕೊಂಡು ಬಂದಿರುವ ಗುಂಪುಗಳ ಸೊತ್ತಾಗಿಯೇ ಉಳಿದಿವೆಯೇ ಅಥವಾ ತಳಸ್ತರಗಳಲ್ಲಿರುವ ವರ್ಗಗಳಿಗೆ ಮೇಲ್ಮುಖ ಸಾಮಾಜಿಕ ಚಲನೆಯನ್ನು ಸಾಧಿಸಲು ಅವಕಾಶವನ್ನು ಕಲ್ಪಿಸಿವೆಯೇ? ಎಲ್ಲಕ್ಕಿಂತ ಮಿಗಿಲಾಗಿ ಈ ಆರ್ಥಿಕ ಬೆಳವಣಿಗೆ ಭಾರತೀಯ ಸಮಾಜವನ್ನು ಭಾದಿಸುತ್ತಿರುವ ಜಾತಿ-ವರ್ಗ-ಲಿಂಗ- ಪ್ರದೇಶ ಆಧಾರಿತ ಅಸಮಾನತೆಯನ್ನು ಭೇದಿಸಿ ಎಲ್ಲರಿಗೂ ಸ್ವಾಭಿಮಾನದ ಬದುಕನ್ನು ನಡೆಸಲು ಅನುವು ಮಾಡಿಕೊಟ್ಟಿದೆಯೇ? ಇವೇ ಮುಂತಾದ ಅನುಮಾನಗಳನ್ನು ವ್ಯಕ್ತಪಡಿಸುತ್ತಾ ಹೋದ ಹಾಗೆಲ್ಲ ನಾವು ಮತ್ತೆ ಅಭಿವೃದ್ಧಿ ಎಂದರೇನು ಎಂಬ ಮೂಲ ಪ್ರಶ್ನೆಗೇ ಹಿಂದಿರುಗಬೇಕಾಗುತ್ತದೆ.ಆರ್ಥಿಕ ಬೆಳವಣಿಗೆಯ ಪ್ರಭಾವ ಅತ್ಯಂತ ಪ್ರಖರವಾಗಿ ಕಾಣುತ್ತಿರುವುದು ಗ್ರಾಹಕ ವಸ್ತುಗಳಿಂದ ತುಂಬಿತುಳುಕುತ್ತಿರುವ ಮಾರುಕಟ್ಟೆಗಳಲ್ಲಿ. ಉದಾಹರಣೆಗೆ ಮೊಬೈಲ್ ದೂರವಾಣಿಗಳನ್ನೇ ತೆಗೆದುಕೊಳ್ಳೋಣ. ಪ್ರಾರಂಭದಲ್ಲಿ ಮೂವತ್ತು ಅಥವಾ ನಲವತ್ತು ಸಾವಿರ ರೂಪಾಯಿಗಳು ಬೆಲೆ ಬಾಳುತ್ತಿದ್ದ ಮೊಬೈಲ್ ಸೆಟ್ಟುಗಳು ಈವತ್ತು ಸಂತೆಗಳಲ್ಲಿ ತರಕಾರಿಗಳಂತೆ ಗುಡ್ಡೆ ಹಾಕಲ್ಪಡುತ್ತಿವೆ. ಇದರಿಂದ ಐನೂರು ರೂಪಾಯಿಗಳಿಗೆ ಒಂದು ಮೊಬೈಲ್ ಪಡೆಯಬಹುದಾದಂಥ ಪರಿಸ್ಥಿತಿ ಕೂಡ ಸೃಷ್ಟಿಯಾಗಿದೆ. ಬೆಲೆ ಇಳಿತ, ಮುಕ್ತ ಸ್ಪರ್ಧೆ ಮತ್ತು ಸುಲಭ ಲಭ್ಯತೆ ಮುಂತಾದ ಕಾರಣಗಳಿಂದಾಗಿ ಅತಿ ಹೆಚ್ಚು ಆದಾಯ ತರುವ ಉದ್ಯೋಗಗಳಲ್ಲಿರುವವರಿಂದ ಹಿಡಿದು ಅತಿ ಕಡಿಮೆ ವೇತನವನ್ನು ಪಡೆಯುವವರವರೆಗೆ ಕೋಟ್ಯಂತರ ಜನ ಮೊಬೈಲುಗಳನ್ನು ಕೊಳ್ಳಲು ಸಾಧ್ಯವಾಗಿದೆ.ಇದು ನಮಗೆ ಸಂತೋಷವನ್ನು ಕೊಡುವ ವಿಷಯವೇ ಸರಿ. ಕೇವಲ ಶ್ರಿಮಂತ ಅಥವಾ ಮೇಲ್-ಮಧ್ಯಮ ವರ್ಗದವರಿಗೆ ಮಾತ್ರ ಲಭ್ಯವಾಗಿದ್ದ ದೂರವಾಣಿ ಇಂದು ಜಾತಿ, ಲಿಂಗ, ವರ್ಗ, ಗ್ರಾಮ ಮತ್ತು ನಗರಗಳ ಭೇದವನ್ನು ಮೀರಿ ಜನರನ್ನು ಸಂಪರ್ಕ ಜಾಲದಲ್ಲಿ ತಂದಿರುವುದು ಖಂಡಿತವಾಗಿ ಸಕಾರಾತ್ಮಕ ಬೆಳವಣಿಗೆಯೇ ಸರಿ. ಆದರೆ ಮೊಬೈಲ್ ದೂರವಾಣಿ ಹೊಂದಿದ್ದ ಮಾತ್ರಕ್ಕೆ ಎಲ್ಲರ ಜೀವನ ಶೈಲಿ, ಬದುಕುವ ಪರಿಸರ ಅಥವಾ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅವರ ಸ್ಥಾನಗಳು ತಾನೇ ತಾನಾಗಿ ಬದಲಾಗಿಬಿಡುವುದಿಲ್ಲ. ದೂರವಾಣಿಗೆ ಭೌತಿಕ ಮತ್ತು ಮಾನಸಿಕ ದೂರಗಳ ಭಾರದಿಂದ ಜನರನ್ನು ವಿಮುಕ್ತಿಗೊಳಿಸುವ ಸಾಮರ್ಥ್ಯವಿದೆ. ಆದರೆ ಸಾಮಾಜಿಕ ದೂರಗಳನ್ನು ಕಡಿಮೆ ಮಾಡುವ ಅಥವಾ ತೊಡೆದು ಹಾಕುವ ಶಕ್ತಿ ಇದೆಯೇ?ಭೋಗ ವಸ್ತುಗಳ ಬಳಕೆ ಅನೇಕ ವ್ಯಕ್ತಿಗಳಿಗೆ ಆರ್ಥಿಕ ಹೊರೆಯೂ ಆಗುತ್ತದೆ. ಇಡೀ ದಿನ ದುಡಿದು ಗಳಿಸಿದ ಹಣದಲ್ಲಿ ಎಷ್ಟು ಭಾಗ ಮೊಬೈಲುಗಳ ಸಿಮ್ ಕಾರ್ಡನ್ನು ರಿ-ಚಾರ್ಜು ಮಾಡಲು ಬಳಸಬೇಕಾಗುತ್ತದೆ? ಇದು ಜೀವನಾವಶ್ಯಕತೆಗಳ ಪೂರೈಕೆಗಿಂತ ಮುಖ್ಯವೇ? ಈ ನಿಟ್ಟಿನಲ್ಲಿ ಕೆಲವರ ಆಲೋಚನೆಗಳು ಬಿಚ್ಚಿಕೊಳ್ಳುತ್ತಾ ಹೋದರೆ ಮತ್ತನೇಕರಿಗೆ ಮೊಬೈಲ್ ದೂರವಾಣಿಗಳು, ಟಿ.ವಿ. ಸೆಟ್ಟುಗಳು, ವಿಡಿಯೋ ಗೇಮ್‌ಗಳನ್ನು ಆಡಲು ಅವಕಾಶ ಕಲ್ಪಿಸುವ ವಿಹಾರ ತಾಣಗಳು, ತಂಪು ಪಾನೀಯಗಳನ್ನು, ಪಾನ್ ಬೀಡಾಗಳನ್ನೂ ಸರಬರಾಜು ಮಾಡುವ ಅಂಗಡಿಗಳೇ ಮುಖ್ಯ ಎನಿಸುತ್ತವೆ. ಬರಬರುತ್ತಾ ಭೋಗ ವಸ್ತುಗಳಿಗೂ ಅಗತ್ಯ ವಸ್ತುಗಳಿಗೂ ನಡುವೆ ಇದ್ದ ವ್ಯತ್ಯಾಸವೇ ಕಡಿಮೆಯಾಗುತ್ತಿದ್ದು, ತನಗೆ ಯಾವುದು ಮುಖ್ಯ  ಅಥವಾ  ಅಮುಖ್ಯ  ಎನ್ನುವ ತೀರ್ಮಾನವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ವ್ಯಕ್ತಿಗೆ ಇರಬೇಕು ಎನ್ನುವ ವಾದ ಗಟ್ಟಿಯಾಗುತ್ತಿದೆ. ಅಭಿವೃದ್ಧಿಯ ಮಾನದಂಡಗಳನ್ನು ಕುರಿತು ಮರು ವಿಮರ್ಶೆ ಮಾಡಬೇಕಾದ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗುತ್ತಿದೆ.ಅಭಿವೃದ್ಧಿಯೆಂದರೆ ಕೇವಲ ಅಂಕಿ-ಸಂಖ್ಯೆಗಳಲ್ಲ, ಅದಕ್ಕೊಂದು ಸಾಮಾಜಿಕ ಆಯಾಮವಿದೆ ಎಂಬ ದೃಷ್ಟಿಕೋನಕ್ಕೆ ನಾಲ್ಕು ದಶಕಗಳಿಗೂ ಮೀರಿದ ಇತಿಹಾಸವೇ ಇದೆ. ಒಂದು ದೇಶ ಎಷ್ಟರ ಮಟ್ಟಿನ ಅಭಿವೃದ್ಧಿಯನ್ನು ಸಾಧಿಸಿದೆ ಎಂದು ಅಳೆಯಲು ಬಳಸುವಂಥ ಪ್ರಮುಖ ಸೂಚ್ಯಂಕಗಳೆಂದರೆ ಅಲ್ಲಿನ ಜನರಿಗೆ ಲಭ್ಯವಾಗಿರುವ ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿ ಸೌಲಭ್ಯಗಳು, ಜೀವನ ನಿರ್ವಹಣಾ ಕೌಶಲ್ಯಗಳನ್ನು ಪಡೆಯುವ ಅವಕಾಶಗಳು, ದೌರ್ಜನ್ಯಮುಕ್ತ ಜೀವನವನ್ನು ನಡೆಸಲು ಅವಶ್ಯವಾದ ಪರಿಸರದ ಲಭ್ಯತೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ತಮ್ಮ ಬದುಕನ್ನು ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗಿರುವ ಆಯ್ಕೆಯ ಸ್ವಾತಂತ್ರ್ಯ.ಕಳೆದ ಒಂದೆರಡು ದಶಕಗಳಲ್ಲಿ ಈ ಎಲ್ಲ ಕ್ಷೇತ್ರಗಳಲ್ಲೂ ಭಾರತ ಪ್ರಗತಿಯನ್ನು ಸಾಧಿಸಿದ್ದರೂ ನಾವು ಸವೆಸಬೇಕಾದ ಹಾದಿ ಇನ್ನೂ ದೂರವಿದೆ. ಉದಾಹರಣೆಗೆ ನಮ್ಮ ಜನಸಂಖ್ಯೆಯ ಆರೋಗ್ಯ ಪರಿಸ್ಥಿತಿಯನ್ನೇ ತೆಗೆದುಕೊಳ್ಳೋಣ. ಭಾರತದಲ್ಲಿ ಜನನ ಸಮಯದ ಜೀವಿತಾಪೇಕ್ಷ 64.4 ವರ್ಷಗಳಿದ್ದು, ಶಿಶು ಮರಣ 1000 ಸಜೀವ ಜನನಗಳಿಗೆ 50ರಷ್ಟಿದೆ. ಐದು ವರ್ಷದ ಕೆಳಗಿನ ಮಕ್ಕಳ ಮರಣ ಪ್ರಮಾಣ 1000ಕ್ಕೆ 66ರಷ್ಟಿದ್ದು, ಮಾತೃ ಮೃತ್ಯತೆ 1,00,000ಕ್ಕೆ 230 ರಷ್ಟಿದೆ. ನಮ್ಮ ದೇಶದೆಲ್ಲೆಡೆ ಬೆಳೆಯುತ್ತಿರುವ ಅತ್ಯುತ್ಕಷ್ಟ  ಮಟ್ಟದ ವೈದ್ಯಕೀಯ ಸೇವೆಗಳು ಬಹುಪಾಲು ಶ್ರಿಮಂತ ಹಾಗೂ ಮಧ್ಯಮ ವರ್ಗದವರ ಸೊತ್ತಾಗಿದ್ದು, ನಗರ ಕೇಂದ್ರಿತವಾಗಿರುವುದರಿಂದಲೇ ಬಡವರು, ಗ್ರಾಮೀಣ ಜನತೆ ಹಾಗೂ ಅಂಚಿನಲ್ಲಿರುವ ಗುಂಪುಗಳಿಗೆ ತಲುಪದಿರುವುದು. ಭಾರತದ ಆರೋಗ್ಯ ರಕ್ಷಕ ಸೇವೆಗಳ ಗುಣಮಟ್ಟ ಈ ಹೊತ್ತು ಇಡೀ ವಿಶ್ವದ ಮೆಚ್ಚುಗೆಯನ್ನು ಪಡೆದಿದೆ, ನಮ್ಮ ಅಭಿವೃದ್ಧಿಯ ಸಂಕೇತವೆಂದು ಬಿಂಬಿಸಲ್ಪಡುತ್ತಿದೆ. ಆದರೆ ಇದರ ಪ್ರಯೋಜನ ಶೇಕಡ 25ರಷ್ಟು ಜನಸಂಖ್ಯೆಗೆ ದೊರೆಯುತ್ತಿದೆಯೇ ಹೊರತು, ಆರ್ಥಿಕ-ಪ್ರಾದೇಶಿಕ ಅಸಮಾನತೆಗೆ ಬಲಿಯಾಗಿರುವ ವರ್ಗಗಳಿಗಲ್ಲ.ಹೀಗೆ ಅಭಿವೃದ್ಧಿಯನ್ನು ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳಿಂದ ವಿಶ್ಲೇಷಿಸುತ್ತಾ ಹೋದ ಹಾಗೆಲ್ಲಾ ಪ್ರತಿ ಕ್ಷೇತ್ರದಲ್ಲೂ ನಮಗೆ ಉಳ್ಳವರು ಮತ್ತು ಬಡವರ ನಡುವೆ, ಶ್ರೇಣೀಕೃತ ವ್ಯವಸ್ಥೆಯಲ್ಲಿ  ವಿವಿಧ ಸ್ತರಗಳಲ್ಲಿರಿಸಲ್ಪಟ್ಟ ಜಾತಿಗಳ ನಡುವೆ, ಗ್ರಾಮ-ನಗರ ಜನಸಂಖ್ಯೆಯ ನಡುವೆ, ಪ್ರಬಲರು ಮತ್ತು ದುರ್ಬಲರ ನಡುವೆ ಉಂಟಾಗುತ್ತಿರುವ ಅಂತರ ಬಹು ಸ್ಪಷ್ಟವಾಗಿ ಗೋಚರವಾಗುತ್ತಾ ಹೋಗುತ್ತದೆ. ಶಿಕ್ಷಣ ಕ್ಷೇತ್ರದಲ್ಲೇ ಆಗಲಿ, ಉದ್ಯೋಗ ಕ್ಷೇತ್ರದಲ್ಲೇ ಆಗಲಿ ಅಥವಾ ಮೂಲ ಸೌಕರ್ಯಗಳ ಲಭ್ಯತೆಯ ವಿಚಾರದಲ್ಲಾಗಲಿ ನಾವು ಇದುವರೆಗೂ ಕಂಡಿರುವ ಬೆಳವಣಿಗೆಗಳ ಬಹು ಪಾಲು ಅನುಕೂಲಗಳನ್ನು ಪಡೆದಿರುವವರು ಆಯ್ದ ವರ್ಗಗಳು, ವ್ಯಕ್ತಿಗಳೇ ಹೊರತು ಸಮಾನ ಅವಕಾಶಗಳ ಕಲ್ಪನೆ ಇಂದಿಗೂ ಸಂಪೂರ್ಣವಾಗಿ ಸಾಕಾರವಾಗಿಲ್ಲ.ಹಾಗಾದರೆ ಅಭಿವೃದ್ಧಿಯೆನ್ನುವುದರ ನಿಜವಾದ ಅರ್ಥವೇನು? ಕಾಲದಿಂದ ಕಾಲಕ್ಕೆ ಅದರ ನಿರ್ಧಾರಕ ಅಂಶಗಳ ಸ್ವರೂಪದಲ್ಲಿ ಬದಲಾವಣೆಗಳು ಉಂಟಾದರೂ ಅಭಿವೃದ್ಧಿಯ ಕೆಲ ಮೂಲಭೂತ ಆಶಯಗಳಲ್ಲಿ ಬದಲಾವಣೆಗಳಾಗಬಾರದು. ಎಲ್ಲ ಪ್ರಜೆಗಳಿಗೂ ಆಹಾರ, ಅಕ್ಷರ, ಅರಿವು, ಆರೋಗ್ಯ, ವಸತಿ, ಸುರಕ್ಷಿತ ಜೀವನವನ್ನು ನಡೆಸಲು ಅಗತ್ಯವಾದ ಮೂಲಸೌರ್ಕಯಗಳು, ಆಯ್ಕೆಯ ಸ್ವಾತಂತ್ರ್ಯ, ಸ್ವತಂತ್ರ ಮತ್ತು ಸ್ವಾಭಿಮಾನದ ಬದುಕನ್ನು ನಡೆಸಲವಶ್ಯವಾದ ಪರಿಸರ ಲಭ್ಯವಾಗಲೇ ಬೇಕು. ಇದೆಲ್ಲದರ ಜೊತೆಜೊತೆಗೆ ಅವರವರ ಇಚ್ಛಾನುಸಾರ-ಶಕ್ತ್ಯಾನುಸಾರ ಯಾವ ವಸ್ತುಗಳನ್ನಾದರೂ ಕೊಳ್ಳಬಹುದು ಅಥವಾ ಬಿಡಬಹುದು. ಅಭಿವೃದ್ಧಿ ಎನ್ನುವುದನ್ನು ಮಾನವ ಹಕ್ಕುಗಳ ಚೌಕಟ್ಟಿನಲ್ಲಿ ವಿಶ್ಲೇಷಿಸಿದಾಗ ಮಾತ್ರ ಅದೊಂದು ಅರ್ಥಪೂರ್ಣ ಪ್ರಯತ್ನವಾಗಬಹುದಷ್ಟೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.