ದ್ವೇಷದ ದಳ್ಳುರಿ

ಬುಧವಾರ, ಜೂಲೈ 17, 2019
28 °C

ದ್ವೇಷದ ದಳ್ಳುರಿ

ಗುರುರಾಜ ಕರ್ಜಗಿ
Published:
Updated:

ಮಾನವ ಇತಿಹಾಸದಲ್ಲಿ ಬಹುಶಃ ಇದಕ್ಕಿಂತ ಕರಾಳ ಅಧ್ಯಾಯ ಇನ್ನಾವುದೂ ಇರಲಾರದು ಎನ್ನಿಸುತ್ತದೆ. ಮಹಾಭಾರತ ಯುದ್ಧದಲ್ಲಿ, ಗ್ರೀಕ್ ಪುರಾಣಗಳಲ್ಲಿ ಬರುವ ಯುದ್ಧದಲ್ಲಿ ಹೋರಾಡಿ ಸತ್ತವರು ಅದೆಷ್ಟೋ ಇದ್ದಾರು. ಆದರೆ, ಮುಗ್ಧರು, ನಿರಾಯುಧರ ಮಾರಣ ಹೋಮ ನಡೆದದ್ದು ಎರಡನೇ ಮಹಾಯುದ್ಧದ ಸಮಯದಲ್ಲಿ. ಮನುಷ್ಯನಾಗಿಯೇ ಹುಟ್ಟಿದ ಒಬ್ಬ ವ್ಯಕ್ತಿ ಹೇಗೆ ರಕ್ತಪಿಪಾಸುವಾಗಿ, ರಾಕ್ಷಸನಾಗಬಹುದೆಂಬುದಕ್ಕೆ ಹಿಟ್ಲರ್ ಮಾದರಿ.ಎಪ್ಪತ್ತು ವರ್ಷಗಳ ಹಿಂದೆ ನಡೆಯಿತೆನ್ನಲಾದ ಒಂದು ಘಟನೆಯನ್ನು ದಾಖಲಿಸಿದ ರೀತಿ ಓದಿದಾಗ ನನಗೆ ಮೈಯಲ್ಲಿ ನಡುಕ ಬಂತು. ಕಣ್ಣು ಮಂಜಾದವು, ಒಂದು ಕ್ಷಣ ಬುದ್ಧಿ ಚಲನಶೀಲತೆಯನ್ನೇ ಕಳೆದುಕೊಂಡಿತು. ಫ್ರಾನ್ಸ್ ಸ್ಟ್ರಾಂಗಲ್‌ನಿಗೆ ಹಿಟ್ಲರ್‌ನಿಂದ ಆದೇಶ ಬಂತು,  `ನಿನ್ನ ಕಾರ್ಖಾನೆಯ ಕಾರ್ಯದಕ್ಷತೆ ಹೆಚ್ಚು ಮಾಡಬೇಕು, ನಿನಗೆ ನಾವು ಇನ್ನೂ ಹೆಚ್ಚು ಸಾಮಗ್ರಿ ಕಳಿಸುತ್ತೇವೆ. ಬೇಗ ಬೇಗ ಅವುಗಳ ವಿಲೇವಾರಿಯಾಗಬೇಕು. ಅದು ನಿನ್ನ ಕರ್ತವ್ಯ. ಅದಾಗದಿದ್ದರೆ ನಿನ್ನ ಪ್ರಾಣವೇ ಅದಕ್ಕೆ ಬೆಲೆ' . ಸ್ಟ್ರಾಂಗಲ್ ಚಿಂತಿಸಿದ.ಹಿಟ್ಲರ್ ಅಪೇಕ್ಷೆ ಮಾಡಿದ ರೀತಿಯಲ್ಲಿ ಕೆಲಸವಾಗಬೇಕಾದರೆ ಅವನ ಕಾರ್ಖಾನೆಯ ಕೆಲಸ ಹತ್ತು ಸಾವಿರ ಪಟ್ಟು ಹೆಚ್ಚಾಗಬೇಕು. ಅದಕ್ಕೆ ಜನರನ್ನು ತರಬೇಕು, ಜಾಗ ಹೆಚ್ಚಿಗೆ ಬೇಕು. ಅವನಿಗೆ ಬೇರೆ ದಾರಿಯೇ ಇಲ್ಲ. ತಾನು ಗುರಿಸಾಧಿಸದಿದ್ದರೆ ಪ್ರಾಣ ಹೋಗುತ್ತದೆ. ಫ್ರಾನ್ಸ್ ಸ್ಟ್ರಾಂಗಲ್‌ನ ಕಾರ್ಖಾನೆಯ ಹೆಸರು  ಟ್ರೆಬ್ಲಿಂಕಾ.ಎರಡನೇ ಮಹಾಯುದ್ಧದ ಕಾಲದಲ್ಲಿ ಯಹೂದ್ಯರ, ದೇಶ ದ್ರೋಹಿಗಳ ಮಾರಣ ಹೋಮ ಮಾಡಲು, ಯೋಜಿತ ನರಮೇಧ ಮಾಡಲು ನಿರ್ಮಿತವಾದ ಅತ್ಯಂತ ದಕ್ಷ ಐದು ಕೇಂದ್ರಗಳಲ್ಲಿ ಇದೂ ಒಂದು. ಈ ಕಾರ್ಖಾನೆಯ ಉತ್ಪಾದನೆಯೆಂದರೆ ಅತ್ಯಂತ ಹೆಚ್ಚು ಜನರನ್ನು ಕೊಲ್ಲುವುದು. ಆದೇಶದಲ್ಲಿ ತಿಳಿಸಿದಂತೆ ಹೆಚ್ಚು ಸಾಮಗ್ರಿ ಕಳಿಸುತ್ತೇವೆ ಎಂದರೆ ಇನ್ನೂ ಹೆಚ್ಚು ಜನರನ್ನು ಕೊಲ್ಲಲು ಕಳಿಸುತ್ತೇವೆ ಎಂದರ್ಥ.ಇದೇ ಸ್ಟ್ರಾಂಗಲ್‌ನ ಚಿಂತೆಗೆ ಕಾರಣವಾಗಿತ್ತು. ಹೆಚ್ಚು ಜನರನ್ನು ಕೊಲ್ಲಲು ಹೆಚ್ಚು ಜನ ಬೇಕು, ಅವರನ್ನು ಹೂಳಲು ಸ್ಥಳ ಬೇಕು, ಅದನ್ನು ಅಗಿಯಲು ಮತ್ತೆ ಜನಬೇಕು. ಹಿಂದೆ ಸೋವಿಯೆಟ್ ಯೂನಿಯನ್‌ನಲ್ಲಿ ಸಾವಿರಾರು ಜನರನ್ನು ಗುಂಡಿಕ್ಕಿ ಕೊಂದು ಸಮೂಹ ಸಮಾಧಿ ಮಾಡಿದ್ದನ್ನು ನೆನಪಿಸಿಕೊಂಡು ತಾನೂ ಹಾಗೆಯೇ ಮಾಡತೊಡಗಿದ. ಆದರೆ ಅದರಿಂದಲೂ ತನಗೆ ನೀಡಿದ ಗುರಿ ಸಾಧಿಸುವುದು ಸಾಧ್ಯವಿಲ್ಲವೆನಿಸಿತು. ಕೆಲವು ತೊಂದರೆಗಳೂ ಇದ್ದವು. ಜನರನ್ನು ಸಾಲು ಸಾಲಾಗಿ ನಿಲ್ಲಿಸಿ, ಗುಂಡಿಟ್ಟು ಕೊಂದು ಹಿಂದೆಯೆ ಇದ್ದ ಗುಂಡಿಗಳಲ್ಲಿ ಬುಲ್‌ಡೋಜರ್‌ಗಳಿಂದ ದೇಹಗಳನ್ನು ತಳ್ಳಿಸಿ ಮುಚ್ಚುವಾಗ ಬಹಳಷ್ಟು ಸಮಯ ಹಿಡಿಯುತ್ತಿತ್ತು. ಹೆಣಗಳು ಕೊಳೆತು ದುರ್ವಾಸನೆ ಬರುತ್ತಿದ್ದವು.ಅಪಾರ ಗುಂಡುಗಳು ಬೇಕಾಗುತ್ತಿದ್ದವು. ಆಗ ನಾಜಿ ವಿಜ್ಞಾನಿಗಳು ಜನರನ್ನು ಕೊಲ್ಲುವ ಹೊಸ ಆವಿಷ್ಕಾರಗಳನ್ನು ಮಾಡಿ ಸ್ಟ್ರಾಂಗಲ್‌ನಿಗೆ ತಿಳಿಸಿದರು. ಅವನ ಕೆಲಸ ಸುಸೂತ್ರವಾಯಿತು. ರಾತ್ರಿ ಹನ್ನೆರಡಕ್ಕೆ ಜನರಿಂದ ತುಂಬಿಹೋದ ರೈಲು  ಟ್ರೆಬ್ಲಿಂಕಾಕ್ಕೆ ಬರುತ್ತಿತ್ತು. ಅದರಲ್ಲಿ ಸುಮಾರು ಐದು ಸಾವಿರ ಜನ ಇರುತ್ತಿದ್ದರು. ಮರುದಿನ ಬೆಳಿಗ್ಗೆ ಹನ್ನೊಂದು ಗಂಟೆಗೆ ಅಷ್ಟೇ ಜನರನ್ನು ತುಂಬಿಕೊಂಡು ಮತ್ತೊಂದು ರೈಲು ಬರುತ್ತಿತ್ತು. ಇದು ಬರುವುದರೊಳಗಾಗಿ ರಾತ್ರಿ ರೈಲಿನಲ್ಲಿ ಬಂದಿದ್ದ ಎಲ್ಲರ ಹತ್ಯೆಯಾಗಬೇಕಿತ್ತು.  ಟ್ರೆಬ್ಲಿಂಕಾದಿಂದ ಸ್ವಲ್ಪ ದೂರದಲ್ಲಿ ಆಳವಾದ ತಗ್ಗುಗಳನ್ನು ಮಾಡಲು ಯಂತ್ರಗಳಿದ್ದವು. ಬಂದ ವ್ಯಕ್ತಿಗಳನ್ನು ಕಿಟಕಿಗಳಿಲ್ಲದ ದೊಡ್ಡ ದೊಡ್ಡ ಕೋಣೆಗಳಲ್ಲಿ ಅಮಾನುಷವಾಗಿ ಮೂಟೆಗಳಂತೆ ತುರುಕಲಾಗುತ್ತಿತ್ತು. ನಂತರ ಅವುಗಳ ಬಾಗಿಲು ಮುಚ್ಚಿ ತೀವ್ರವಾದ ವಿಷಗಾಳಿ ಬಿಡುತ್ತಿದ್ದರು. ಅರ್ಧಗಂಟೆಯ ನಂತರ ದೇಹಗಳನ್ನು ಯಂತ್ರಗಳಿಂದೆತ್ತಿ ಒಯ್ದು ತಗ್ಗುಗಳಲ್ಲಿ ಮುಚ್ಚಲಾಗುತ್ತಿತ್ತು. ಈ ರೀತಿ ಹದಿನೆಂಟು ತಿಂಗಳಲ್ಲಿ ಮೂವತ್ತು ಲಕ್ಷ ಜನರ ಕಗ್ಗೊಲೆ ನಡೆದುಹೋಯಿತು.ಸ್ಟ್ರಾಂಗಲ್ ತನ್ನ ದಿನಚರಿಯಲ್ಲಿ ಬರೆಯುತ್ತಾನೆ. `ಬೆಳಿಗ್ಗೆ ಐದು ಸಾವಿರ ಜನರ ಹತ್ಯೆಯಾದ ಮೇಲೆ ನಾನು ಫಲಾಹಾರ ಮಾಡುತ್ತಿದ್ದೆ. ಮತ್ತೆ ಮಧ್ಯಾಹ್ನ ಐದು ಸಾವಿರ ಜನರ ಸಮಾಧಿಯಾದ ಮೇಲೆ ಊಟ. ನಂತರ ಹತ್ತು ಸಾವಿರ ಜನರ ಕೊಲೆಯಾದ ಮೇಲೇಯೇ ರಾತ್ರಿಯ ಊಟ. ಉಳಿದ ಸಮಯದಲ್ಲಿ ಜೋರಾಗಿ ಶಾಸ್ತ್ರೀಯ ಸಂಗೀತ ಕೇಳುತ್ತ ಸಾವಿನ ದಾರುಣತೆ  ಮರೆಯಲು ಪ್ರಯತ್ನಿಸುತ್ತಿದ್ದೆ.ಆದರೆ ಅದು ನನ್ನನ್ನು ಎಲ್ಲಿಬಿಟ್ಟೀತು? ನನ್ನ ಕೊನೆಯ ಕ್ಷಣದವರೆಗೆ ಬೆನ್ನಟ್ಟಿ ಬರುತ್ತದೆ'. ಈ ಅನಾಹುತ ಯಾವ ಪುರುಷಾರ್ಥಕ್ಕೆ? ಈ ದ್ವೇಷ, ಅಹಂಕಾರ ಯಾರಿಗೆ ಒಳ್ಳೆಯದು ಮಾಡಿತ್ತು? ಇಂದಿಗೂ ನಾವು ಜಾತಿ ದ್ವೇಷ, ವರ್ಣದ್ವೇಷ, ದೇಶದ್ವೇಷದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಏಕೆ ತಿಳಿಯದೇ ಹೋಗಿದ್ದೇವೆ? ಯಾವುದೇ ತರಹದ ದ್ವೇಷದಿಂದ ಜಗತ್ತಿಗೆ ಕಲ್ಯಾಣವಾಗಲಾರದೆಂಬ ಇತಿಹಾಸದ ಭರತವಾಕ್ಯವನ್ನು ನಾವು ತಿಳಿದುಕೊಳ್ಳುವುದು ಸಾಧ್ಯವಾದರೆ ಮುಂದಿನ ತಲೆಮಾರುಗಳಾದರೂ ದ್ವೇಷದ ದಳ್ಳುರಿಯಿಂದ ಪಾರಾಗಿ ಪ್ರೀತಿಯ ವಿಶ್ವದಲ್ಲಿ ಒಂದಾಗಿ ಸಂತೋಷದಿಂದ ಬದುಕಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry