ಧರೆಯಿಂದ ಮುಗಿಲಿಗೇರಿದ ತಾರೆ

ಮಂಗಳವಾರ, ಮಾರ್ಚ್ 26, 2019
31 °C

ಧರೆಯಿಂದ ಮುಗಿಲಿಗೇರಿದ ತಾರೆ

ಪ್ರಕಾಶ್ ರೈ
Published:
Updated:
ಧರೆಯಿಂದ ಮುಗಿಲಿಗೇರಿದ ತಾರೆ

ಬೆಂಕಿಯ ವಲಯದಲ್ಲಿ ಸಿಲುಕಿಕೊಂಡ ಕರ್ಪೂರದಂತೆ ಶ್ರೀದೇವಿಯ ಬದುಕು– ಸಾವು.

ಈ ಪ್ರಪಂಚದಲ್ಲಿ ಸೌಂದರ್ಯವೇ ತುಂಬ ಪರಿಣಾಮಕಾರಿಯಾದ ಶಿಫಾರಸ್ಸು ಪತ್ರ ಎನ್ನುತ್ತಾರೆ. ಪ್ರಕೃತಿಯ ಆ ಶಿಫಾರಸ್ಸು ಪತ್ರದೊಂದಿಗೇ ನಮ್ಮೆದುರು ನಿಂತರೂ, ನಟಿಸಿದ ಕಥಾಪಾತ್ರಗಳೇ ಆಗಿಬಿಡುವ ತನ್ನ ಸಹಜಪ್ರತಿಭೆಯೇ ಶ್ರೀದೇವಿಯ ಅಸುರಬಲ. ಇಲ್ಲದಿದ್ದರೆ ಐವತ್ತು ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಉಳಿಯುತ್ತಿರಲಿಲ್ಲ. ಒಬ್ಬ ನಟಿಯ ನಿಜವಾದ ಸೌಂದರ್ಯವಿರುವುದು ಭಾವಪೂರ್ಣವಾದ ಅಭಿನಯದಲ್ಲಿ ಎಂದು ಅವರು ಅರ್ಥ ಮಾಡಿಕೊಂಡಿದ್ದರು. ಕೇವಲ ಸೌಂದರ್ಯದ ಗೊಂಬೆಯಾದರೆ ಇನ್ನೊಂದು ಸುಂದರ ಗೊಂಬೆ ಬಂದ ತಕ್ಷಣ ಜನ ತನ್ನನ್ನು ಮರೆತುಬಿಡುತ್ತಾರೆ ಎಂಬ ಸತ್ಯದ ಕುರಿತು ಇದ್ದ ಅರಿವೇ ಆಕೆಯ ಯಶಸ್ಸಿನ ರಹಸ್ಯ.

ಭಾರತದ ಸಿನಿಮಾ ಪ್ರಪಂಚವನ್ನು ದಕ್ಷಿಣ ಭಾರತದ ಸಿನಿಮಾ, ಬಾಲಿವುಡ್‌ ಸಿನಿಮಾ ಎಂದು ಎರಡು ಭಾಗವಾಗಿ ನೋಡುತ್ತೇವೆ. ಹಿಂದಿ ಭಾಷೆಯಲ್ಲಿ ಅಮಿತಾಭ್‌ ಬಚ್ಚನ್‌ ಸೂಪರ್‌ ಸ್ಟಾರ್‌ ಆದರೂ, ದಕ್ಷಿಣ ಭಾರತದಲ್ಲಿಯೂ ಅದೇ ಮಟ್ಟದಲ್ಲಿ ಜನಪ್ರಿಯ ಎಂದು ಹೇಳಲಾಗದು. ದಕ್ಷಿಣ ಭಾರತದಲ್ಲಿ ಒಂದೊಂದು ಭಾಷೆಗೂ ಬೇರೆ ಬೇರೆ ಸೂಪರ್‌ ಸ್ಟಾರ್‌ಗಳು. ಇವರ‍್ಯಾರಿಗೂ ಉತ್ತರ ಭಾರತದಲ್ಲಿ ಅಷ್ಟೇ ಪ್ರೀತಿ, ಆದರ ದೊರಕದು. ನಟಿಯರ ವಿಷಯದಲ್ಲಿಯೂ ಇದುವೇ ನಿಜ. ಆದರೆ ನಾವು ಬದುಕಿದ ಈ ಕಾಲಘಟ್ಟದಲ್ಲಿ ಶ್ರೀದೇವಿ ಮಾತ್ರ ಇವೆಲ್ಲವನ್ನೂ ಮೀರಿದವರು.

ಯಶಸ್ಸಿನ ಉತ್ತುಂಗದಲ್ಲಿದ್ದಾಗ ಕುಟುಂಬಕ್ಕಾಗಿ, ಮಕ್ಕಳಿಗಾಗಿ ತನ್ನ ನಟನಾ ಜೀವನದಿಂದ ಹೊರಹೋಗಿ ಹಲವು ವರ್ಷಗಳ ನಂತರ ಮತ್ತೆ ಪ್ರಬಲ ತಾರೆಯಾಗಿ ‘ಇಂಗ್ಲಿಷ್‌ ವಿಂಗ್ಲಿಷ್‌’ ಚಿತ್ರದೊಂದಿಗೆ ಹಿಂತಿರುಗಿ ಬಂದವರು. ಹಿಂದಿ, ತೆಲುಗು, ತಮಿಳು, ಮಲಯಾಳಂ ಎನ್ನದೇ ಎಲ್ಲ ಭಾಷೆಯ ರಸಿಕರು ಅವರನ್ನು ಮತ್ತೆ ಸ್ವಾಗತಿಸಿ ಸಂಭ್ರಮಿಸಿದರು. ಇಂಥ ಪ್ರೀತಿ, ಗೌರವ, ಮನ್ನಣೆ ಎಲ್ಲ ಕಲಾವಿದರಿಗೂ ಸಿಗುವುದಿಲ್ಲ.

ಸೌಂದರ್ಯವೂ ಪ್ರತಿಭೆಯೂ ಅಪಾರವಾಗಿದ್ದ ಅದ್ಭುತ ಕಲಾವಿದೆ ಶ್ರೀದೇವಿ. ನನಗೂ ಆಕೆಗೂ ವಯಸ್ಸಿನಲ್ಲಿ ಅಷ್ಟೇನೂ ಅಂತರವಿಲ್ಲ. ಆದರೆ ನಾನು ಓದುತ್ತಿದ್ದಾಗ ನನ್ನ ವಯಸ್ಸಿನ ಎಲ್ಲ ಹುಡುಗರಿಗೂ ಶ್ರೀದೇವಿ ಅವರಂಥ ಪ್ರೇಯಸಿ ಸಿಗಬೇಕು ಎನ್ನುವುದು ಆಸೆಯಷ್ಟೇ ಅಲ್ಲ, ದೊಡ್ಡ ಕನಸೂ ಆಗಿತ್ತು. ಆ ಸೌಂದರ್ಯವನ್ನು ರಸಿಕನಂತೆ ನೋಡಬೇಕು ಎನ್ನುವುದಕ್ಕಿಂತ ಅದರ ದರ್ಶನಭಾಗ್ಯ ದೊರೆಯಬೇಕು ಎಂದು ಹಾತೊರೆಯುತ್ತಿದ್ದೆವು ಎನ್ನುವುದೇ ಸರಿ. ಶ್ರೀದೇವಿಯನ್ನು ದೊಡ್ಡ ತೆರೆಯಲ್ಲಿ ನೋಡುವುದೇ ಒಂದು ದರ್ಶನ.

ಒಬ್ಬ ನಟಿಯ ಆರಾಧಕನಾಗುವುದರಲ್ಲಿ ಕಾಮವಷ್ಟೇ ಪ್ರಧಾನವಾಗಿರುತ್ತದೆ. ಆ ನಟಿ ಎಂಥ ಪಾತ್ರದಲ್ಲಿ ನಟಿಸಿದರೂ ತಮ್ಮಲ್ಲಿ ಪ್ರೇಮವನ್ನೋ ಕಾಮವನ್ನೋ ಹುಟ್ಟಿಸುವುದಷ್ಟೇ ಅವಳ ಪ್ರಧಾನ ಕರ್ತವ್ಯವೆಂದು ಬರೆಯದ ಕಟ್ಟಳೆಯೊಂದಿದೆ. ಆದರೆ ಶ್ರೀದೇವಿ ಆ ಕಟ್ಟಳೆಯನ್ನು ಒಡೆದರು. ಅವರು ಅತ್ತರೆ ಎಲ್ಲರ ಕಣ್ಣುಗಳಲ್ಲಿಯೂ ಕಣ್ಣೀರು ತುಂಬಿ ತುಳುಕುತ್ತಿತ್ತು. ಅವರ ನೋಟ, ಮಾತು, ಮನಸ್ಸು ಎಲ್ಲವೂ ಒಂದು ಮಗುವನ್ನು ನೆನಪಿಸುತ್ತಲೇ ಇರುತ್ತಿತ್ತು. ‘16 ವಯದಿನಿಲೆ’ ಚಿತ್ರದಲ್ಲಿ ಒಬ್ಬ ಡಾಕ್ಟರ್‌ ಪಾತ್ರ, ಮಯಿಲ್‌ ಎಂಬ ಅವರ ಪಾತ್ರಕ್ಕೆ ಮೋಸ ಮಾಡಲು ಹವಣಿಸುತ್ತಿರುವಾಗ ಎಲ್ಲ ಪ್ರೇಕ್ಷಕರ ಮನಸ್ಸು ತತ್ತರಿಸುತ್ತಿತ್ತು. ಈ ಹೆಣ್ಣುಮಗಳಿಗೆ ಮೋಸವಾಗಬಾರದು ಎಂದು ರಸಿಕರ ಮನಸ್ಸುಗಳು ಬೇಡಿಕೊಳ್ಳುತ್ತಿದ್ದವು. ಕಥೆ, ಪಾತ್ರವನ್ನು ಮೀರಿ ಶ್ರೀದೇವಿ ಉಂಟುಮಾಡಿದ ಪರಿಣಾಮ ಅದು.

‘ಮೂನ್‌ಡ್ರಾಮ್‌ ಪಿರೈ’ ಚಿತ್ರದಲ್ಲಿ ಬುದ್ಧಿ ಸ್ವಾಧೀನ ಕಳೆದುಕೊಂಡು ಹುಚ್ಚಿಯಂತೆ ಆಕೆ ನಟಿಸಿದಳು ಮಾತ್ರ. ಆದರೆ ರಸಿಕರು ಹುಚ್ಚರಾಗಿ ಅಲೆದರು. ಆ ಚಿತ್ರದಲ್ಲಿ ಶ್ರೀದೇವಿ ಪ್ರೀತಿಸುವ ಆ ಪುಟ್ಟ ನಾಯಿಮರಿಯಾದರೂ ನಾವು ಆಗಬಾರದೇ ಎಂದು ಹಲುಬಿದರು. ಆ ಚಿತ್ರದ ಕೊನೆಯಲ್ಲಿ ಬುದ್ಧಿಮಾಂದ್ಯತೆಯಿಂದ ಗುಣವಾಗಿ, ಅಷ್ಟು ದಿನ ತನ್ನನ್ನು ಆರೈಕೆ ಮಾಡಿದ ಕಮಲ್‌ಹಾಸನ್‌ ಪಾತ್ರವನ್ನೇ ಆಕೆ ಮರೆತಾಗ, ಆಕೆಯ ಮುಂದೆ ತಿಪ್ಪರಲಾಗ ಹಾಕಿದ್ದು ಕಮಲ್‌ಹಾಸನ್‌ ಪಾತ್ರವಷ್ಟೇ ಅಲ್ಲ, ಲಕ್ಷಾಂತರ ರಸಿಕರು ಕೂಡ.

ಭಾಗ್ಯರಾಜ, ಬಾಲು ಮಹೇಂದ್ರ, ಬಾಲಚಂದರ್‌, ಮಹೇಂದ್ರನ್‌ ಇಂಥ ಶ್ರೇಷ್ಠ ನಿರ್ದೇಶಕರು ಸೃಷ್ಟಿಸಿದ ಪಾತ್ರಗಳಿಗೆ ಅವು ತನ್ನ ಆಗಿನ ವಯಸ್ಸಿಗೆ, ಅನುಭವಗಳಿಗೆ ಮೀರಿದ ಪಾತ್ರಗಳಾಗಿದ್ದರೂ ಅವುಗಳಿಗೆ ಜೀವಕೊಟ್ಟು, ಬರೀ ನಟಿಯಷ್ಟೇ ಆಗದೆ ಅವುಗಳ ಸೃಷ್ಟಿಗೂ ಕಾರಣರಾದ ಹಿರಿಮೆಯನ್ನು ಸಾಧಿಸಿದ ಶ್ರೀದೇವಿಯನ್ನು ಜನ ತಮ್ಮ ಮನೆಯವರಲ್ಲೊಬ್ಬಳು ಎಂಬಂತೆ ಪ್ರೀತಿಸಿ ಅಭಿಮಾನದಿಂದ ಕೊಂಡಾಡಿದ್ದು ನಿಜ.

ಶ್ರೀದೇವಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಮೂರು ದಿನ ಅಳುತ್ತಿದ್ದ ನನ್ನ ಮಡದಿಯನ್ನು ಸಂತೈಸುವಾಗ ಇಷ್ಟು ದಿನ ‘ಕನಸಿಕ ಕನ್ಯೆ’, ‘ದೇವಲೋಕದ ಸುಂದರಿ’ ಎಂದೆಲ್ಲ ಒಬ್ಬ ಗಂಡಿನ ದೃಷ್ಟಿಯಿಂದ ನೋಡಿದಂಥ ಶ್ರೀದೇವಿಯನ್ನು ಹೆಣ್ಣಿನ ದೃಷ್ಟಿಕೋನದಿಂದ ನೋಡಿದಾಗ ಬೇರೆಯದಾಗಿಯೇ ಕಂಡರು.

ತಮಿಳುನಾಡಿನ ಪುಟ್ಟ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ, ನಾಲ್ಕನೇ ವಯಸ್ಸಿಗೆ ಆ ಕುಟುಂಬಕ್ಕಾಗಿ ನಟಿಸಲು ಪ್ರಾರಂಭಿಸಿ, ಭಾರತೀಯರೆಲ್ಲರ ಮನಸ್ಸಿನಲ್ಲಿ ಐದು ದಶಕಗಳ ಕಾಲ ಸಿಂಹಾಸನವನ್ನು ಹಾಕಿ ರಾರಾಜಿಸಿದ ಹೆಣ್ಣನ್ನು, ಗಂಡಸರು ಕನಸಿನ ಕನ್ಯೆಯಂತೆ ನೋಡಿದ್ದರೆ, ಹೆಣ್ಣುಮಕ್ಕಳು ನಂಬಿಕೆ ಹುಟ್ಟಿಸುವ ನಕ್ಷತ್ರದಂತೆ ನೋಡಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಗಂಡಿನ ಅಧಿಪತ್ಯ ಇರುವ ಸಮಾಜದಲ್ಲಿಯೂ ಏನನ್ನಾದರೂ ಸಾಧಿಸಬೇಕು ಎನ್ನುವ ಹೆಣ್ಣುಮಕ್ಕಳಿಗೆ ಶ್ರೀದೇವಿಯ ಗೆಲುವು ತಮ್ಮ ಗೆಳತಿಯ ಗೆಲುವಿನಂತೆ, ಸಹೋದರಿಯ ಸಾಧನೆಯಂತೆ ತೋರುತ್ತಿದೆ. ಆಕೆಯ ಮರಣ ತಮ್ಮ ಆಪ್ತರೊಬ್ಬರಿಂದ ಬೇರ್ಪಟ್ಟ ಭಾವನೆಯನ್ನು ಅವರಲ್ಲಿ ಹುಟ್ಟಿಸಿದೆ. ತನ್ನ ಗೆಲುವಿನಿಂದ ನಮ್ಮೆಲ್ಲರ ಮನಗಳನ್ನು ಗೆದ್ದದ್ದೇ ಶ್ರೀದೇವಿಯ ಸಾಧನೆ.

54 ವರ್ಷವೆಂಬುದು ಮರಣಿಸಬೇಕಾದ ವಯಸ್ಸಲ್ಲ. ಆದರೆ ಅವರು ಹೀಗೆ ದಿಢೀರ್ ಎಂದು ಮರೆಯಾದದ್ದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಹೃದಯಾಘಾತದಿಂದ ಮೃತರಾದರು ಎಂಬ ಸುದ್ದಿ ಕೇಳಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಅವರನ್ನು ಆರಾಧಿಸಿದವು. ಆದರೆ ಅವರು ಬಾತ್‌ಟಬ್‌ನಲ್ಲಿ ಆಕಸ್ಮಿಕವಾಗಿ ಬಿದ್ದು ಸತ್ತರು, ಆಗ ಮದ್ಯಪಾನ ಮಾಡಿದ್ದರೇನೋ ಎಂಬ ಗಾಳಿಮಾತು ಹುಟ್ಟಿದೊಡನೆ ಯೂ ಟರ್ನ್‌ ಮಾಡಿ, ತೆಗಳಲು ಪ್ರಾರಂಭಿಸಿದವು.

ಒಬ್ಬ ನಟಿಯ ಮರಣ ಪೂಜ್ಯವಾಗುವುದಕ್ಕೂ ಅಸಹ್ಯವಾಗುವುದಕ್ಕೂ ನಡುವೆ ಇರುವ ಮಧ್ಯಂತರ ಹನ್ನೆರಡು ಗಂಟೆಗಳು ಮಾತ್ರ! ಶ್ರೀದೇವಿಯವರನ್ನು ಕಳೆದುಕೊಂಡಿದ್ದಕ್ಕಿಂತ, ಅವರು ಕುಡಿದಿದ್ದರೇ ಇಲ್ಲವೇ ಎಂಬ ಇಂಟರಗೇಷನ್‌, ಇನ್ವೆಸ್ಟಿಗೇಷನ್‌ಗಳಿಗೆ ಎಲ್ಲರೂ ಇಳಿದುಬಿಟ್ಟರು. ಬಾತ್‌ರೂಂನಲ್ಲಿ ಹೋಗಿ ಬಾತ್‌ಟಬ್‌ನಲ್ಲಿ ಹೇಗೆ ಬಿದ್ದಿರಬಹುದು ಎಂಬ ಕುರಿತು ‘ಡೆಮೊ’ ಕೊಡಲು ಶುರುಮಾಡಿಬಿಟ್ಟರು.

ದೇಶದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು, ದ್ರೋಹಗಳನ್ನು ಆಧಾರಸಹಿತವಾಗಿ ಜನರ ಮುಂದಿಡಬೇಕಾದ ಕರ್ತವ್ಯಗಳಿಗೆ ಮಾಧ್ಯಮಗಳಿಗೆ ಸಮಯವೇ ಇಲ್ಲ. ಶ್ರೀದೇವಿ ಹೇಗೆ ಮರಣಿಸಿರಬಹುದು ಎಂಬುದನ್ನು ಕಂಡುಹಿಡಿಯಲು ಪೋಸ್ಟ್‌ ಮಾರ್ಟಂ ಕತ್ತಿಯೊಂದಿಗೆ ಇಳಿದರು. ಶ್ರೀದೇವಿ ತನ್ನ ಜೀವನದಲ್ಲಿ ಯಾರನ್ನು ಪ್ರೇಮಿಸಿದರು, ಯಾರೆಲ್ಲ ಆಕೆಯನ್ನು ಪ್ರೀತಿಸಿದರು, ಆಕೆ ಏನೆಲ್ಲ ಆಪರೇಷನ್‌ಗಳನ್ನು ಮಾಡಿಕೊಂಡರು ಎಂಬೆಲ್ಲ ಸಂಗತಿಗಳ ಮೇಲೆ ಪೋಸ್ಟ್‌ ಮಾರ್ಟಂ ವರದಿಗಳನ್ನು ಅವರ ಬಾಲ್ಯದವರೆಗೂ ಹೋಗಿ ಬರೆಯಲು ಆರಂಭಿಸಿದರು. ಶ್ರೀದೇವಿಯ ಹಿಂದಿನ ಜನ್ಮದವರೆಗೆ ಹೋಗಲು ಸಾಧ್ಯವಾಗಿದ್ದಿದ್ದರೆ ಅದು ಇನ್ನೊಂದೆರಡು ದಿನಗಳ ಬ್ರೇಕಿಂಗ್‌ ನ್ಯೂಸ್‌ ಆಗಿರುತ್ತಿತ್ತು. ‘ಒಂದು ಹೆಣ್ಣು ಹೇಗೆ ಮದ್ಯ ಸೇವಿಸಲು ಸಾಧ್ಯ? ಅಂಥವರು ಸತ್ತರೆ ನಾವ್ಯಾಕೆ ಕಣ್ಣೀರಿಡಬೇಕು’ ಎಂದು ಪ್ರಶ್ನಿಸತೊಡಗಿದರು.

ಶ್ರೀದೇವಿ ಅಪರಾಧಿಯಲ್ಲ. ಕೋಟ್ಯಂತರ ರಸಿಕರನ್ನು ತನ್ನ ಸ್ವತ್ತಾಗಿ ಗಳಿಸಿದ್ದವರು. ರಾಷ್ಟ್ರಪ್ರಶಸ್ತಿ, ಹಲವಾರು ರಾಜ್ಯ ಪ್ರಶಸ್ತಿಗಳನ್ನೂ, ಅವರ ಜೀವನದ ಸಾಧನೆಗೆ ಪದ್ಮಶ್ರೀ ಪ್ರಶಸ್ತಿಯನ್ನೂ ಗಳಿಸಿದ ಕಲಾವಿದೆ. ಇದನ್ನೆಲ್ಲ ಮರೆತು ಹೆಣ್ಣು ಕುಡಿಯುವುದು ತಪ್ಪು ಎಂದು ವೀರಾವೇಶದಿಂದ ಅರಚುವ ಎಷ್ಟು ಜನರು ಮದ್ಯಪಾನದ ಅಭ್ಯಾಸ ಇಲ್ಲದವರು? ಅವರ ಸ್ನೇಹಿತರೋ, ಸಂಬಂಧಿಗಳೋ ಕುಡಿಯುವ ಅಭ್ಯಾಸವಿದ್ದು ಸತ್ತಾಗ ಇವರಿಗೆಲ್ಲ ವೇದನೆಯಾಗುವುದಿಲ್ಲವೇ? ಇನ್ನೊಬ್ಬರು ಹೇಗೆ ಬದುಕಬೇಕು ಎಂಬ ಪಾಠವನ್ನು ಹೇಳುವುದನ್ನು ನಾವು ಯಾವಾಗ ಬಿಡುತ್ತೇವೆಯೋ ಆಗಲೇ ನಾವು ಮತ್ತು ಸಮಾಜ ಎರಡೂ ಮುನ್ನಡೆಯುವುದು.

ಶ್ರೀದೇವಿ, ಮರೆಯಾದ ನಂತರವೂ ಬೆಳಕು ಚೆಲ್ಲುವ ನಕ್ಷತ್ರ. ತಮ್ಮ ಪ್ರತಿಭೆಯಿಂದ, ಸೌಂದರ್ಯದಿಂದ ಹಲವರ ಬದುಕಿನಲ್ಲಿ ಸುಂದರ ಕವನಗಳನ್ನು ಸೃಷ್ಟಿಸಿದ ದೇವತೆ. ಕ್ಯಾಮೆರಾವನ್ನು ನೋಡಿ ನಿರ್ದೇಶಕರು ನಗಲು ಹೇಳಿದರೆ, ತನ್ನ ಮುಂದಿರುವುದು ಕ್ಯಾಮೆರಾ ಅಲ್ಲ, ರಕ್ತ ಮಾಂಸ ತುಂಬಿದ ಮನುಷ್ಯ ಎಂದು ಅರಿತು ನಗಲು ಗೊತ್ತಿದ್ದ ಭಾವಪೂರ್ಣ ನಟಿ. ಹಲವಾರು ಭಾಷೆಯಲ್ಲಿ ಆಕೆ ನಟಿಸಿದ ಶ್ರೇಷ್ಠ ಸಿನಿಮಾಗಳನ್ನು ನೋಡಿದರೆ ಸಾಕು, ಆಕೆಗೆ ಇನ್ನೂ ಘನವಾದ, ಮರ್ಯಾದೆಯುತ ಶ್ರದ್ಧಾಂಜಲಿ ನೀಡಬೇಕಿತ್ತು ಎಂದು ಅರಿವಾಗುತ್ತದೆ.

ಒಬ್ಬರು ಹೇಗೆ ಸತ್ತರು ಎನ್ನುವುದಕ್ಕಿಂತ ಹೇಗೆ ಬದುಕಿದ್ದರು ಎನ್ನುವುದು ಮುಖ್ಯ. ಶ್ರೀದೇವಿಯ ಅದ್ಭುತ ಬದುಕು ಮರಣವಿಲ್ಲದ ದೊಡ್ಡ ಬದುಕು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry