ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

7

ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ನಾಗೇಶ ಹೆಗಡೆ
Published:
Updated:
ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ತಿಳಿಗೊಳಕ್ಕೆ ಕಲ್ಲೆಸೆಯುವುದೆಂದರೆ ನಮ್ಮ ಸಚಿವ ಪುಂಗವರಿಗೆ ಅದೆಂಥ ಮೋಹವೋ ಏನೊ.

‘ಮಂಗನಿಂದ ಮಾನವ ಎಂಬ ಡಾರ್ವಿನ್ ಸಿದ್ಧಾಂತ ವೈಜ್ಞಾನಿಕವಾಗಿ ತಪ್ಪು! ಮಂಗವೊಂದು ಮಾನವನಾಗಿ ಬದಲಾಗಿದ್ದನ್ನು ಯಾರೂ ನೋಡಿಲ್ಲ. ಈಗಿನವರೂ ನೋಡಿಲ್ಲ; ಹಿಂದಿನ ಯಾರೂ ನೋಡಿಲ್ಲ. ಮನುಷ್ಯ ಆರಂಭದಿಂದಲೂ ಮನುಷ್ಯ ರೂಪದಲ್ಲೇ ಇದ್ದಾನೆ’- ಹೀಗೆಂದರು, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಖಾತೆಯ ಕಿರಿಯ ಸಚಿವ ಡಾ. ಸತ್ಯಪಾಲ್ ಸಿಂಗ್.

ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಕಳೆದ ಶನಿವಾರ ನಡೆದಿದ್ದ ಅಖಿಲ ಭಾರತ ವೈದಿಕ ಸಮ್ಮೇಳನದಲ್ಲಿ ಆಡಿದ ಅವರ ಈ ಮಾತುಗಳು ಜೇನುಗೂಡಿಗೆ ಕಲ್ಲೆಸೆದಂತಾಗಿದೆ. ರಾಷ್ಟ್ರದ ಶಿಕ್ಷಣ ವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದ ಸಚಿವರು ಇಂಥ ಅವೈಜ್ಞಾನಿಕ ಹೇಳಿಕೆಯನ್ನು ನೀಡಬಹುದೆ? ಅದನ್ನು ಖಂಡಿಸುವ, ಲೇವಡಿ ಮಾಡುವ ಟ್ವೀಟ್‍ಗಳು ಹರಿದಾಡಿದವು. ‘ಅಂತೂ ಬಿಜೆಪಿಯವರೂ ಕ್ರಿಶ್ಚಿಯನ್ ಮತ್ತು ಇಸ್ಲಾಮಿಕ್ ಮೂಲಭೂತವಾದಿಗಳ ಜೊತೆ ಕೈಜೋಡಿಸಿದರು’ ಎಂದೊಬ್ಬರು ಜರಿದರು. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಈಗ ಸಚಿವ ಸತ್ಯಪಾಲ್ ಸಿಂಗರ ಬೆಂಬಲಕ್ಕೆ ನಿಂತರು. ‘ಸಚಿವರು ಹೇಳಿದ್ದರಲ್ಲಿ ತಪ್ಪೇನಿಲ್ಲ, ಇಲ್ಲಿದೆ ನೋಡಿ 2006ನೇ ಇಸವಿಯಲ್ಲೇ ಇವೊಲ್ಯೂಶನ್ ನ್ಯೂಸ್ ಎಂಬ ಜಾಲತಾಣದಲ್ಲಿ ಪೂರಕ ಮಾಹಿತಿ’ ಎಂದು ಟ್ವೀಟ್ ಮಾಡಿದರು.

ರಾಜಕಾರಣಿಗಳ ಮಾತಿಗೆ ಎಂದೂ ಉದ್ವಿಗ್ನರಾಗದ ವಿಜ್ಞಾನಿಗಳು ಈ ಬಾರಿ ಧಿಗ್ಗನೆದ್ದರು. ‘ಡಾರ್ವಿನ್ ಸಿದ್ಧಾಂತ ಸರಿಯಾಗಿದೆ ಎಂಬುದು ನಮ್ಮ ಪ್ರತಿ ಪ್ರಯೋಗದಲ್ಲೂ ಪ್ರಮಾಣಿತವಾಗುತ್ತಿದೆ. ನಿಮ್ಮ ಮಾತುಗಳಿಂದಾಗಿ ಭಾರತದ ವಿಜ್ಞಾನಿಗಳ ಬಗ್ಗೆ ಅಂತಾರಾಷ್ಟ್ರೀಯ ಸ್ತರದಲ್ಲಿ ಗೌರವ ಹೊರಟು ಹೋಗುತ್ತದೆ. ವಿಕಾಸದ ಬಗೆಗಿನ ಎಲ್ಲ ಪ್ರಶ್ನೆಗಳಿಗೂ ವೇದದಲ್ಲಿ ಉತ್ತರಗಳಿವೆ ಎಂದು ನೀವು ಹೇಳಿದ್ದು ಭಾರತೀಯ ವಿಜ್ಞಾನ ಚರಿತ್ರೆಗೇ ಅವಮಾನ ಮಾಡಿದಂತಾಗಿದೆ. ಈ ಹೇಳಿಕೆಯನ್ನು ನೀವು ಹಿಂತೆಗೆದುಕೊಳ್ಳಬೇಕು’ ಎಂಬ ಪತ್ರವನ್ನು ಜಾಲತಾಣದಲ್ಲಿ ಪ್ರಕಟಿಸಿದರು.

ಸತ್ಯಪಾಲ್ ಸಿಂಗ್ ತೆಪ್ಪಗಾಗುವ ಬದಲು ಅವಸರದಲ್ಲಿ ಒಂದಿಷ್ಟು ನೆಟ್ ಸರ್ಫಿಂಗ್ ಮಾಡಿದರೆಂದು ಕಾಣುತ್ತದೆ. ‘ನಾನೂ ವಿಜ್ಞಾನಿಯೇ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಕೆಮಿಸ್ಟ್ರಿಯಲ್ಲಿ ಪಿಎಚ್‍ಡಿ ಮಾಡಿದ್ದೇನೆ. ಜಗತ್ತಿನಾದ್ಯಂತ ಡಾರ್ವಿನ್‍ನ ವಿಕಾಸವಾದಕ್ಕೆ ಎಷ್ಟೊಂದು ವಿಜ್ಞಾನಿಗಳು ಅನೇಕ ದಶಕಗಳಿಂದ ತಕರಾರು ಎತ್ತುತ್ತಿದ್ದಾರೆ’ ಎಂದೆಲ್ಲ ಹೇಳಿ, ಕೆಲವು ಉದಾಹರಣೆ ಕೊಟ್ಟರು. ಇದಕ್ಕೆ ಪ್ರತಿಯಾಗಿ ಅಪ್ಪಟ ವಿಜ್ಞಾನಿಗಳೇ ಸದಸ್ಯರಾಗಿರುವ ಮೂರು ರಾಷ್ಟ್ರಮಟ್ಟದ ವಿಜ್ಞಾನ ಅಕಾಡೆಮಿಗಳು ಸಚಿವರ ಮಾತುಗಳನ್ನು ಖಂಡಿಸಿದವು. ‘ವಿಕಾಸವಾದಕ್ಕೆ ಯಾವುದೇ ವೈಜ್ಞಾನಿಕ ಪ್ರತಿರೋಧ ಇಲ್ಲ. ಅದೊಂದು ಅಪ್ಪಟ ವೈಜ್ಞಾನಿಕ ಸಿದ್ಧಾಂತವಾಗಿದ್ದು ಭೂಮಿಯ ಮೇಲಿನ ಎಲ್ಲ ಜೀವ ಪ್ರಭೇದಗಳೂ ತಮ್ಮ ಪೂರ್ವಜರ ಸಾಮಾನ್ಯ ಮೂಲಗಳಿಂದಲೇ ವಿಕಾಸವಾಗಿವೆ. ವಿಕಾಸವಾದವನ್ನು ಶಾಲಾ ಪುಸ್ತಕಗಳಿಂದ ತೆಗೆದು ಹಾಕಿದರೆ ಅದೊಂದು ಪ್ರತಿಗಾಮೀ ಹೆಜ್ಜೆಯಾಗುತ್ತದೆ’ ಎಂದು ಹೇಳಿದವು.

ಸತ್ಯಪಾಲ್ ಸಿಂಗ್ ಪಿಎಚ್‍ಡಿಯ ನಂತರ ಐಪಿಎಸ್ ಪರೀಕ್ಷೆ ಬರೆದು ಪೊಲೀಸ್ ಅಧಿಕಾರಿಯಾಗಿ ಮುಂಬೈಯ ಪೊಲೀಸ್ ಕಮಿಶನರ್ ಆಗಿ ನಿವೃತ್ತಿ ಹೊಂದಿ ಬಿಜೆಪಿ ಸೇರಿ, ಉತ್ತರ ಪ್ರದೇಶದಲ್ಲಿ ಚುನಾವಣೆ ಗೆದ್ದು ಸಚಿವರಾದವರು. 2014ರ ವಿಜ್ಞಾನ ಕಾಂಗ್ರೆಸ್ ಮಹಾಮೇಳದಲ್ಲಿ ಬಿಜೆಪಿಯ ಉತ್ಸಾಹಿ ನೇತಾರರು ಪುರಾತನ ವಿಮಾನಗಳ ಬಗ್ಗೆ, ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಅವೈಜ್ಞಾನಿಕ ಭಾಷಣ ಮಾಡಿ ಲೇವಡಿಗೆ ತುತ್ತಾಗಿದ್ದುದು ಇವರನ್ನು ಬಾಧಿಸಿದಂತಿಲ್ಲ. ಇತ್ತೀಚೆಗೆ ಮತ್ತೆ ‘ರೈಟ್ ಸಹೋದರರಿಗಿಂತ ಎಂಟು ವರ್ಷ ಮೊದಲೇ ಮುಂಬೈಯ ಶಿವ್ಕರ್ ತಾಲ್ಪಾಡೆ ಎಂಬಾತ ವಿಮಾನವನ್ನು ಹಾರಿಸಿದ್ದ’ ಎಂಬ ಹೇಳಿಕೆ ನೀಡಿ ಮತ್ತೆ ಸಾಕಷ್ಟು ಟೀಕೆಗೊಳಗಾದವರು. ಇದೀಗ ಡಾರ್ವಿನ್ನನ್ನು ಹೀಗಳೆಯುವ ಮತ್ತು ವೇದಗಳನ್ನು ಹೊಗಳುವ ಭರದಲ್ಲಿ ತನಗೆ ವಿಜ್ಞಾನವೂ ಸ್ಪಷ್ಟವಾಗಿ ಗೊತ್ತಿಲ್ಲ, ವೇದಗಳ ಬಗೆಗೂ ಮಾಹಿತಿ ಇಲ್ಲವೆಂದು ತೋರಿಸಿದ್ದಾರೆ.

‘ಮಂಗನಿಂದ ಮಾನವರು ಸೃಷ್ಟಿಯಾದುದೇ ನಿಜವಾಗಿದ್ದರೆ ಈಗಿನ ಮಂಗಗಳೂ ಯಾಕೆ ಮಾನವರಾಗಿ ಬದಲಾಗುತ್ತಿಲ್ಲ?’ ಎಂಬ ಪ್ರಶ್ನೆ ಹೈಸ್ಕೂಲ್ ಮಕ್ಕಳಿಗೂ ಬಂದೇ ಬರುತ್ತದೆ. ಈಗಲ್ಲ, ಶತಮಾನದ ಹಿಂದಿನಿಂದಲೂ ಈ ಪ್ರಶ್ನೆ ಚಾಲ್ತಿಯಲ್ಲಿದೆ. ಅದಕ್ಕೆ ಸರಳ ಹೋಲಿಕೆಯ ಉತ್ತರ ಹೀಗಿದೆ: ಒಂದು ಗಿಡ ಬೆಳೆದಂತೆಲ್ಲ ಹೊಸ ಹೊಸ ರೆಂಬೆಕೊಂಬೆ ಬರುತ್ತವಲ್ಲ; ಈ ‘ವಿಕಾಸ ವೃಕ್ಷ’ವೂ ಹಾಗೆಯೇ. ಮೂಲದಲ್ಲಿ ಏಕಾಣುಜೀವಿ, ಪಾಚಿ, ಸಸ್ಯ, ಮೃದ್ವಂಗಿ, ಮೀನು, ಕೀಟ, ಹಾವು, ಕಪ್ಪೆ, ಪಕ್ಷಿ, ಮೊಸಳೆ ಹೀಗೆ ಶಾಖೆಗಳಾಗುತ್ತ ಸುಮಾರು ಹತ್ತು ಕೋಟಿ ವರ್ಷಗಳ ಹಿಂದೆ ಸ್ತನಿ ಎಂಬ ಹೊಸ ಶಾಖೆ ಚಿಗುರಿತು. ಅದರಿಂದ ದನ, ಬಾವಲಿ, ಕಾಡುಪಾಪ, ತಿಮಿಂಗಿಲ, ವಾನರ ಹೀಗೆ ಬೇರೆ ಬೇರೆ ಟಿಸಿಲು ಹೊಮ್ಮಿದವು. ಈ ‘ವಾನರ’ ಎಂಬ ಕೊಂಬೆಯಲ್ಲಿ ಮಂಗ, ಗೊರಿಲ್ಲ, ಚಿಂಪಾಂಜಿ, ಗಿಬ್ಬನ್, ಮನುಷ್ಯ ಹೀಗೆ ಬೇರೆ ಬೇರೆ ಶಾಖೆಯಾಗಿ ಬೆಳೆದಿವೆ.

ಚಾರ್ಲ್ಸ್‌ ಡಾರ್ವಿನ್ನನ ವಿಕಾಸ ಸಿದ್ಧಾಂತದ ವಿರುದ್ಧ ಕ್ರಿಶ್ಚಿಯನ್ ಮೂಲಭೂತವಾದಿಗಳು ಆರಂಭದಿಂದಲೂ ಆಕ್ಷೇಪಣೆ ಎತ್ತುತ್ತಲೇ ಬಂದಿದ್ದಾರೆ. ಭೂಮಿಯ ಮೇಲಿನ ಜೀವಿಗಳೆಲ್ಲ ‘ಉದ್ದೇಶಪೂರ್ವಕ ದೈವೀಸೃಷ್ಟಿ’ ಎಂದು ಅವರು ನಂಬುತ್ತಾರೆ. ಜೀವಿಗಳ ವಿಕಾಸಕ್ಕೆ ದೇವರ ಅಗತ್ಯವೇ ಇಲ್ಲ ಎಂಬ ಡಾರ್ವಿನ್ ಮಾತನ್ನು ನಂಬಿ ಜನರು ದೇವರನ್ನು ಕಡೆಗಣಿಸಿದರೆ ಚರ್ಚ್‌ನ ಪ್ರಾಮುಖ್ಯ ಕಡಿಮೆ ಆದೀತೆಂಬ ಭಯ ಅವರಿಗಿತ್ತು. ಆದರೆ ವಿಕಾಸ ಸಿದ್ಧಾಂತಕ್ಕೆ ಪುಷ್ಟಿ ಸಿಗುತ್ತ ಹೋದ ಹಾಗೆ ಧರ್ಮಭೀರುಗಳು ಸ್ವಲ್ಪ ಸ್ವಲ್ಪ ಬದಲಾಗುತ್ತ ಹೋದರು. ಅಂದರೆ, ಡಾರ್ವಿನ್ ಹೇಳಿದ್ದನ್ನು ತಮ್ಮ ‘ಬುಕ್ ಆಫ್ ಜೆನೆಸಿಸ್’ನಲ್ಲಿ ಈ ಮೊದಲೇ ಹೇಳಲಾಗಿದೆ ಎನ್ನತೊಡಗಿದರು. ‘ಆರು ದಿನಗಳಲ್ಲಿ ಜೀವಲೋಕ ಸೃಷ್ಟಿಯಾಯಿತು’ ಎಂಬ ಮಾತಿಗೆ ಬೇರೆಯದೇ ಅರ್ಥ ಕೊಟ್ಟರು. ಧರ್ಮಗ್ರಂಥದ ‘ಒಂದು ದಿನ ಎಂದರೆ ಕೋಟ್ಯಂತರ ವರ್ಷ’ ಎಂದರು. ಶಿಲಾಪದರಗಳಲ್ಲಿ ಕಾಣಸಿಗುವ ಪಳೆಯುಳಿಕೆಗಳನ್ನು ‘ದೇವರೇ ಸೃಷ್ಟಿಸಿ ಶಿಲೆಗಳಲ್ಲಿ ಅವಿತಿಟ್ಟಿದ್ದು’ ಎನ್ನತೊಡಗಿದರು.

ವಿಜ್ಞಾನದ ಮೇಲೆ ಚರ್ಚ್‌ನ ಬಿಗಿಮುಷ್ಟಿ ಎಷ್ಟಿತ್ತೆಂದರೆ ಶಾಲೆಗಳಲ್ಲಿ ವಿಕಾಸವಾದವನ್ನು ಬೋಧಿಸಬಾರದೆಂದು ಅಮೆರಿಕದ ಅನೇಕ ರಾಜ್ಯಗಳಲ್ಲಿ ಕಾನೂನನ್ನೇ ರೂಪಿಸಲಾಗಿತ್ತು. ಟೆನಿಸ್ಸಿಯ ಶಾಲೆಯೊಂದರ ಅರೆಕಾಲಿಕ ಶಿಕ್ಷಕ ಜಾನ್ ಸ್ಕೋಪ್ಸ್ ಎಂಬಾತ ವಿಕಾಸವಾದದ ಪಾಠ ಹೇಳಿದನೆಂದು ಆತನ ಮೇಲೆ ಖಟ್ಲೆ ಹಾಕಿದರು. ಈ ಸುದ್ದಿ ಇಡೀ ರಾಷ್ಟ್ರಕ್ಕೆ ಕಿಚ್ಚೆಬ್ಬಿಸಿತು. ವಿಕಾಸವಾದ ಪರ ಹಾಗೂ ಬೈಬಲ್ ಪರವಾಗಿ ವಾದಿಸಲು ಘಟಾನುಘಟಿ ವಕೀಲರು ಡೇಯ್ಟನ್ ಎಂಬ ಹಳ್ಳಿಗೇ ಬಂದರು. ಅಮೆರಿಕದ ವಿದೇಶಾಂಗ ಸಚಿವನಾಗಿ, ಮೂರು ಬಾರಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ವಿಲಿಯಮ್ ಬ್ರಯಾನ್ ಬೈಬಲ್ ಪರ ವಾದಿಸಲು ನಿಂತ. ವರದಿಗಾರರ ದಂಡೇ ಬಂತು. ರೇಡಿಯೊದಲ್ಲಿ ನೇರ ಪ್ರಸಾರಣ ನಡೆಯಿತು. ‘ಸ್ಕೋಪ್ಸ್ ಮಂಕಿ ಟ್ರಯಲ್’ ಎಂತಲೇ ಖ್ಯಾತಿ ಪಡೆದ ಈ ವಿಚಾರಣೆ ಆರು ದಿನಗಳ ಕಾಲ ನಡೆಯಿತು. ಸ್ಕೋಪ್‍ಗೆ 100 ಡಾಲರ್ ದಂಡ ವಿಧಿಸಿ ಆತನಿಗೆ ಮಾತಾಡಲು ಅವಕಾಶ ನೀಡಲಾಯಿತು. ‘ಸತ್ಯವನ್ನು ಹೇಳುವ ಹಕ್ಕನ್ನು, ಧಾರ್ಮಿಕ ಸ್ವಾತಂತ್ರ್ಯವನ್ನು ನನಗೆ ಸಂವಿಧಾನ ನೀಡಿದೆ. ನಾನು ವಿಕಾಸ ವಿಜ್ಞಾನದ ಬಗ್ಗೆ ಹೇಳುತ್ತಲೇ ಹೋಗುತ್ತೇನೆ. ನನಗೆ ನೀವು ದಂಡ ಹಾಕಿ ಅಸತ್ಯವನ್ನೇ ಗೆಲ್ಲಿಸಿದ್ದೀರಿ’ ಎಂದು ಹೇಳಿದ. ಬೈಬಲ್ ಪರ ವಾದಿಸಿದ ಬ್ರಯಾನ್ ಕೊನೆಯಲ್ಲಿ ಹೇಳಿದ ಮಾತೂ ಅಷ್ಟೇ ಮೌಲಿಕವಾಗಿದೆ: ‘ವಿಜ್ಞಾನ ಎಂಬುದು ಅದ್ಭುತ ಯಂತ್ರ ನಿಜ. ಆದರೆ ಅದು ನೈತಿಕತೆಯ ಪಾಠ ಹೇಳಲಾರದು. ವಿಜ್ಞಾನದ ಆಯುಧದಿಂದ ಮನುಷ್ಯತ್ವವನ್ನೇ ಧ್ವಂಸ ಮಾಡಲಾಗುತ್ತಿದೆ. ನೈತಿಕತೆ, ಧಾರ್ಮಿಕತೆ, ಆಧ್ಯಾತ್ಮಿಕ ಶಕ್ತಿಯೇ ಮನುಷ್ಯರನ್ನು ಕಾಪಾಡಬೇಕು’- ಹೀಗೆ ಹೇಳಿ ನಂತರ ಐದೇ ದಿನಗಳಲ್ಲಿ ಆತ ತೀರಿಕೊಂಡ. ಆ ಹಳ್ಳಿಯ, ಆ ದಿನದ ನ್ಯಾಯದ ಕಟ್ಟೆಯನ್ನು ಈಗ ಮ್ಯೂಸಿಯಂ ಮಾಡಿ ಇಡಲಾಗಿದೆ. ಈಗಲೂ ಅಮೆರಿಕದ ಸುಮಾರು ಶೇಕಡ 13ರಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ವಿಕಾಸವಾದದ ಪಾಠ ಹೇಳುವಾಗಲೆಲ್ಲ ಬೈಬಲ್ ಪಾಠವನ್ನೂ ಹೇಳುವುದು ಕಡ್ಡಾಯವಾಗಿದೆ.

ಡಾರ್ವಿನ್ ಪರ ವಿಜ್ಞಾನಿಗಳು ಅದೆಷ್ಟೇ ಖಚಿತ ಸಾಕ್ಷ್ಯಗಳನ್ನು ಮುಂದಿಡಲಿ, ಅದಕ್ಕೆ ವಿರುದ್ಧವಾದ ‘ದೈವೀಸೃಷ್ಟಿ ವಾದ’ (ಕ್ರಿಯೇಶನಿಸಂ) ಸದಾ ಜೀವಂತ ಇರುವಂತೆ ಇತರ ಶಕ್ತಿಗಳು ಶ್ರಮಿಸುತ್ತಲೇ ಇವೆ. ಅಂಥವರ ಗುಂಪಿನಲ್ಲಿ ಅಸಲೀ ವಿಜ್ಞಾನಿಗಳೂ ಇದ್ದಾರೆ. ಸತ್ಯಪಾಲ್ ಸಿಂಗ್‍ರಂಥ ಮಾಜಿ ವಿಜ್ಞಾನಿಗಳಿದ್ದಾರೆ. ಸಾವಿರಾರು ವೆಬ್‍ಸೈಟುಗಳಿವೆ; ಲಕ್ಷಾಂತರ ಪುಸ್ತಕಗಳು ಪ್ರಕಟವಾಗಿವೆ. ಅಪ್ಪಟ ವೈಜ್ಞಾನಿಕ ಎಂದು ಎಲ್ಲರೂ ನಂಬುವಂತೆ ಯಾವುದೋ ಜೀವಕೋಶದ ಎಂಥದ್ದೋ ಒಳಪೊರೆಯನ್ನು ಬಿಚ್ಚಿಟ್ಟು, ‘ಇದು ವಿಕಾಸವಾದಕ್ಕೆ ಪೂರಕವಾಗಿಲ್ಲ’ ಎಂದು ಸೂಚಿಸುತ್ತಾರೆ. ಭಕ್ತರು ಅದನ್ನೇ ದೊಡ್ಡದಾಗಿ ಬಿಂಬಿಸುತ್ತಾರೆ. ಹಾಗೆ ನೋಡಿದರೆ ಡಾರ್ವಿನ್ ಕೂಡ ತಾನು ಹೇಳಿದ್ದನ್ನು ‘ನೀವು ಮತ್ತೆ ಮತ್ತೆ ಒರೆಗಲ್ಲಿಗೆ ಹಚ್ಚಿ ನೋಡಿ’ ಎನ್ನುತ್ತ ಅಸಂಖ್ಯ ಸಾಕ್ಷ್ಯಗಳನ್ನು

ಮುಂದಿಟ್ಟನೇ ವಿನಾ ದೇವರನ್ನು ಎಲ್ಲೂ ಖಂಡಿಸಿಲ್ಲ. ಸ್ವತಃ ಪಾದ್ರಿಯಾಗಲೆಂದು ಕೇಂಬ್ರಿಜ್‍ನಲ್ಲಿ ದೇವಶಾಸ್ತ್ರದಲ್ಲಿ (ಡಿವಿನಿಟಿ) ಡಿಗ್ರಿ ಪಡೆದಿದ್ದ ಆತ ಹೆಚ್ಚೆಂದರೆ ‘ಬೈಬಲ್ ಹೀಗೆ ಹೇಳುತ್ತದೆ, ಆದರೆ ವಾಸ್ತವದಲ್ಲಿ ಹಾಗಿಲ್ಲ’ ಎಂದು ಪುರಾವೆ ಕೊಟ್ಟಿದ್ದಾನೆ. ಕೆಲವು ವಿಚಾರಗಳನ್ನು ಊಹೆಯಿಂದ ಹೇಳುವಾಗಲೂ ‘ಇನ್ನೂ ಹೆಚ್ಚಿನ ಸಾಕ್ಷ್ಯಗಳು ಮುಂದೆ ಸಿಕ್ಕಮೇಲೆ ಇದಕ್ಕೆ ಪುಷ್ಟಿ ಸಿಕ್ಕೀತು’ ಎಂದಿದ್ದಾನೆ. ಆತನ ‘ಆನ್ ದಿ ಒರಿಜಿನ್ ಆಫ್ ಸ್ಪೀಶೀಸ್’ ಎಂಬ ಮೇರುಕೃತಿಯನ್ನು ‘ಜೀವಸಂಕುಲಗಳ ಉಗಮ’ ಹೆಸರಿನಲ್ಲಿ ಕೆ. ಪುಟ್ಟಸ್ವಾಮಿ ತರ್ಜುಮೆ ಮಾಡಿದ್ದನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಡಾರ್ವಿನ್ ಆಗ ಊಹಿಸಿದ್ದರಲ್ಲಿ ಎಷ್ಟು ನಿಜವಾಗಿವೆ, ಎಷ್ಟು ತಪ್ಪಾಗಿವೆ ಎಂಬುದನ್ನೂ ಅದರಲ್ಲಿ ಸರಳವಾಗಿ ಹೇಳಲಾಗಿದೆ. ತಪ್ಪಾಗಿದ್ದಲ್ಲಿ ಕೂಡ ದೈವೀ ಹಸ್ತಕ್ಷೇಪದ ಅಗತ್ಯ ಎಲ್ಲೂ ಕಂಡುಬಂದಿಲ್ಲ.

ವಿಕಾಸವಾದವನ್ನು ಅನೇಕ ಧರ್ಮಗಳು ಭಾಗಶಃ ಒಪ್ಪಿಕೊಂಡಿವೆ. ವಿಜ್ಞಾನವೂ ದೇವರ ಕೃಪೆಯಿಂದಲೇ ದಕ್ಕುತ್ತಿದೆ ಎಂದು ಕ್ರೈಸ್ತರ ಕೆಲ ಒಳಪಂಗಡಗಳು ಹೇಳುತ್ತವೆ. ಇಸ್ಲಾಂ ಧರ್ಮ ಡಾರ್ವಿನ್ ಸಿದ್ಧಾಂತವನ್ನು ಒಪ್ಪುತ್ತಿಲ್ಲ, ಆದರೆ ಅದರ ಅಹ್ಮದಿಯಾ ಪಂಥದವರು ಒಪ್ಪುತ್ತಾರೆ. ಯಹೂದ್ಯರ ಮೂರು ಪಂಗಡಗಳು ಒಪ್ಪುತ್ತವೆ. ಒಂದು ಮಾತ್ರ ಒಪ್ಪಿಲ್ಲ. ಹಿಂದೂ ಧರ್ಮಕ್ಕೆ ಬಂದಾಗ ಕೆಲವು ಅಚ್ಚರಿಗಳನ್ನು ವಿದೇಶೀ ವಿಜ್ಞಾನಿಗಳು ಗಮನಿಸಿದ್ದಾರೆ: ವಿಶ್ವದ ಉಗಮ ಮತ್ತು ವಿಕಾಸದ ಬಗ್ಗೆ ವೇದಗಳಲ್ಲಿನ ವ್ಯಾಖ್ಯೆಗಳು ವೈಜ್ಞಾನಿಕ ಸತ್ಯಕ್ಕೆ ತೀರ ಸಮೀಪವಾಗಿವೆ ಎಂದು ಖ್ಯಾತ ಭೌತವಿಜ್ಞಾನಿ ಫ್ರೀತ್ಯೊಫ್ ಕಾಪ್ರಾ ಹೇಳಿದ್ದಾನೆ. ಬಿಗ್‍ಬ್ಯಾಂಗ್‍ಗೂ ಮುಂಚೆ ಕಾಲ ಮತ್ತು ಅವಕಾಶ ಯಾವುದೂ ಇಲ್ಲದಿದ್ದಾಗಿನ ‘ತದೇಕಂ’ ಸ್ಥಿತಿಯನ್ನು ಋಗ್ವೇದದ ನಾಸದೀಯ ಸೂಕ್ತದಲ್ಲಿ ವರ್ಣಿಸಿದ್ದು ಅದು ನಿರೀಶ್ವರವಾದದ ಪ್ರಬಲ ಉದಾಹರಣೆ ಎನ್ನಲಾಗುತ್ತಿದೆ. ‘ದೇವರಿಗಿಂತ ಮುಂಚೆ ಏನಿತ್ತು ಮೂರ್ಖರೇ!’ ಎಂದು ಪ್ರಶ್ನಿಸುವ ಜಿನಸೇನನ ಮಹಾಪುರಾಣದ ಶ್ಲೋಕವನ್ನು ಖ್ಯಾತ ವಿಶ್ವವಿಜ್ಞಾನಿ ಕಾರ್ಲ್ ಸೇಗನ್ ತನ್ನ ‘ಕಾಸ್ಮೊಸ್’ ಕೃತಿಯಲ್ಲಿ ಚರ್ಚಿಸಿದ್ದಾನೆ. ವಿಷ್ಣುವಿನ ದಶಾವತಾರಗಳು ವಿಕಾಸವಾದಕ್ಕೆ ಸಾಕಷ್ಟು ಸಮೀಪದಲ್ಲಿವೆ ಎಂದು ಹೆಸರಾಂತ ಜೀವವಿಜ್ಞಾನಿ ಜೆಬಿಎಸ್ ಹಾಲ್ಡೇನ್ ಶ್ಲಾಘಿಸಿದ್ದಾನೆ.

‘ಮಾನವ ಮಂಗನಾಗಿದ್ದಕ್ಕೆ ಸಾಕ್ಷ್ಯ ಎಲ್ಲಿದೆ?’ ಎಂಬ ತುಂಟ ಹುಡುಗನ ಪ್ರಶ್ನೆಗೆ ಡಾ. ಶಿವರಾಮ ಕಾರಂತರು ‘ನೀನೇ ಉಂಟಲ್ಲವೊ!?’ ಎಂದು ಒಗ್ಗರಣೆಯಂತೆ ಉತ್ತರಿಸಿದ್ದುದು ನಮಗೆ ಮತ್ತೆ ನೆನಪಾಗಬೇಕು. ಪುರಾತನ ಹಿಂದೂ ಚಿಂತನೆಗಳನ್ನು ವಿರೂಪಗೊಳಿಸುತ್ತ, ಆಧುನಿಕ ವಿಜ್ಞಾನವನ್ನು ಹೀಗಳೆಯುತ್ತ, ಸಮಾಜವನ್ನು ಒಡೆಯುತ್ತ ಹೋಗುವವರಿಗೆ ಹಿಂಭಾಗದಲ್ಲಿ ಬಾಲವೇನಾದರೂ ಚಿಗುರುತ್ತಿದೆಯೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry