ಬುಧವಾರ, ನವೆಂಬರ್ 13, 2019
23 °C

ಧೃತಿಗೆಡದ ಶ್ರಮದ ಫಲ

ಗುರುರಾಜ ಕರ್ಜಗಿ
Published:
Updated:

1110

ಕೆಲವರಿಗೆ ಆ ಚಟ ಇರುತ್ತದೆ. ತಮ್ಮದಲ್ಲದ ಕೆಲಸದಲ್ಲಿ ಮೂಗು ತೂರಿಸಿಕೊಂಡು ಹೋಗಿ ತಮಗೂ ತೊಂದರೆ ಮಾಡಿಕೊಳ್ಳುತ್ತಾರೆ, ಉಳಿದವರನ್ನೂ ಇಕ್ಕಟ್ಟಿಗೆ ಸಿಕ್ಕಿಸುತ್ತಾರೆ. ಆದರೆ ಕೆಲವು ಬುದ್ಧಿವಂತರು ಯಾವುಯಾವುದೋ ಕೆಲಸದಲ್ಲಿ ತೂರಿಕೊಂಡು ಹೋಗಿ ಹೇಗೋ ಪಾರಾಗಿ ಬಂದುಬಿಡುತ್ತಾರೆ. ನಮ್ಮ ಕಪ್ಪೆಕ್ಕ ಈ ಗುಂಪಿಗೆ ಸೇರಿದವಳು.ಕಪ್ಪೆಕ್ಕ ಚಿಕ್ಕವಳಾಗಿದ್ದಾಗ ಅವಳ ಅಮ್ಮ ಪ್ರೀತಿಯಿಂದ ಪುಟ್ಟ ಕಪ್ಪೆಕ್ಕ ಎಂದು ಕರೆಯುತ್ತಿದ್ದಳು. ಆಗ ಆಕೆ ಕಪ್ಪೆಗಳ ಪರಿವಾರದಲ್ಲೆ ತುಂಬ ಚೂಟಿ. ತಾವಿದ್ದ ತೋಟದ ಹೊಂಡದಲ್ಲಿ ಎಂದೂ ಒಂದೆಡೆಗೆ ಕುಳಿತವಳಲ್ಲ. ಅಮ್ಮ ಆಕೆಯನ್ನು ಹೊಡೆದು, ತಳ್ಳಿಕೊಂಡು ಹೊಂಡಕ್ಕೆ ಬರಬೇಕಿತ್ತು. ಈಗಂತೂ ಅವಳು ದೊಡ್ಡವಳಾದ ಮೇಲೆ ಆಕೆಯನ್ನು ಹಿಡಿಯುವುದೇ ಸಾಧ್ಯವಿಲ್ಲ.ಕಪ್ಪೆಕ್ಕನಿಗೆ ಇನ್ನಿಲ್ಲದ ಕುತೂಹಲ. ಹೊಂಡದಿಂದ ಕುಪ್ಪಳಿಸುತ್ತ ಹೋಗಿ ರೈತ ಸಾಕಿದ ಕೋಳಿ ಮನೆಯ ಹತ್ತಿರ ಹೋಗುವಳು. ಕಿಂವ್, ಕಿಂವ್ ಎಂದು ಕೂಗುತ್ತ ತಿರುಗುತ್ತಿದ್ದ ಕೋಳಿಗಳ ಸುತ್ತ ಅನೇಕ ದೊಡ್ಡ ದೊಡ್ಡ ನೊಣಗಳು ಹಾರಾಡುವುದು ಸಾಮಾನ್ಯ. ಕಪ್ಪೆಕ್ಕ ಬರುವುದೂ ಅದಕ್ಕೇ. ಆಕೆಯ ಉದ್ದವಾದ ನಾಲಿಗೆಗೆ ಒಂದೆರಡು ದೊಡ್ಡ ನೊಣಗಳು ಸಿಕ್ಕರೆ ಸಾಕು ಊಟವಾದಂತೆ.ಅಂದೂ ಹಾಗೆಯೇ ಬಂದಿದ್ದಳು ಕಪ್ಪೆಕ್ಕ. ಹೆಚ್ಚಿನ ಕುತೂಹಲದಿಂದ ಕೋಳಿ ಮನೆಯನ್ನು ದಾಟಿ ಮುಂದೆ ಡೈರಿ ಫಾರಂಗೆ ಬಂದಳು. ಅಲ್ಲಿ ಹಾಲು, ಬೆಣ್ಣೆ, ಕೆನೆ ಎಲ್ಲ ಇರುವುದರಿಂದ ಹೆಚ್ಚು ನೊಣಗಳು ಇರುತ್ತವೆ ಎಂದು ಯಾರೋ ಆಕೆಗೆ ಹೇಳಿದ್ದರು. ಆಕೆ ಡೈರಿಯ ಸುತ್ತು ಹಾಕಿದಳು. ಸಂಜೆಯಾದ್ದರಿಂದ ಒಳಗೆ ಯಾರೂ ಇಲ್ಲ, ನಿಧಾನವಾಗಿ ಒಳಗೆ ನುಗ್ಗಿದಳು. ಹಾಲು, ಮೊಸರು, ಬೆಣ್ಣೆಗಳ ವಾಸನೆ ಮುಖಕ್ಕೆ ಅಪ್ಪಳಿಸಿತು. ಕಪ್ಪೆಕ್ಕ ತುಟಿಯ ಮೇಲೆ ನಾಲಿಗೆಯನ್ನು ಹೊರಳಿಸಿದಳು, ಕಣ್ಣು ಅರಳಿದವು.ಜಾರುವ ನೆಲದ ಮೇಲೆ ಕುಣಿಯುತ್ತ ಕಪ್ಪೆಕ್ಕ ಮುಂದೆ ನಡೆದಳು. ಅಲ್ಲೊಂದು ಇಟ್ಟಿಗೆಗಳಿಂದ ಮಾಡಿದ ಎರಡು ಮೆಟ್ಟಿಲುಗಳಿದ್ದವು. ಕಪ್ಪೆಕ್ಕ ಅವುಗಳನ್ನೇರಿದಳು. ಆ ಮೇಲಿನಿಂದ ಪಕ್ಕದಲ್ಲೆೀ ಇದ್ದ ದೊಡ್ಡ ಸ್ಟೀಲಿನ ಬಕೆಟ್‌ನ್ನು ನೋಡಿದಳು. ಅದರ ಮುಕ್ಕಾಲು ಭಾಗ ಕೆನೆಯಿಂದ ತುಂಬಿತ್ತು! ಕಪ್ಪೆಕ್ಕ ಮೂಗು ಅರಳಿಸಿದಳು, ತಾಜಾ ಕೆನೆಯ ವಾಸನೆ ಘಂ ಎಂದು ಬಡಿಯಿತು, ಬಾಯಿಯಲ್ಲಿ ನೀರೂರಿತು. ಆಸೆಯನ್ನು ತಡೆದುಕೊಳ್ಳಲಾರದೇ ಕಪ್ಪೆಕ್ಕ ಠಣ್ ಎಂದು ಹಾರಿದಳು. ಬಕೆಟ್‌ನ ಅಂಚಿಗೆ ಬಡಿದು ಕೆಳಗೆ ಬಿದ್ದಳು. ಮತ್ತೆ ಮೆಟ್ಟಿಲನ್ನೇರಿ, ಶಕ್ತಿ ಹಾಕಿ ಜೋರಾಗಿ ಹಾರಿದಳು.ಈಗ ಬಕೆಟ್‌ನ ಅಂಚಿನ ಮೇಲೆ ಕೂಡ್ರುವುದರ ಬದಲು ಬಕೆಟ್‌ನಲ್ಲೇ ಬಿದ್ದಳು. ಮೃದುವಾದ ಕೆನೆಯಲ್ಲಿ ಪುಳಕ್ಕನೇ ಮುಳುಗಿದಳು. ಕೈಕಾಲು ಬಡಿದು ಮೇಲಕ್ಕೆ ಬಂದಳು. ಸಂತೋಷದಿಂದ ಕೆನೆಯನ್ನು ಬಾಯಿ ಚಪ್ಪರಿಸಿ ತಿಂದಳು, ಕೆನೆಯಲ್ಲಿ ಈಸಾಡಿದಳು. ಅರ್ಧ ಗಂಟೆಯಲ್ಲಿ ಕಪ್ಪೆಕ್ಕನ ಹೊಟ್ಟೆ ತುಂಬಿತು. ಇನ್ನು ರೈತ ಬರುವುದರಲ್ಲಿ ಪಾರಾಗಬೇಕೆಂದು ಬಕೆಟ್‌ನಿಂದ ಹಾರಲು ಪ್ರಯತ್ನಿಸಿದಳು. ಆಗಲೇ ಇಲ್ಲ. ಹಾರಲು ಕೆಳಗೆ ಭದ್ರ ನೆಲೆ ಇಲ್ಲ, ಮೈಗೆಲ್ಲ ಕೆನೆ ಸವರಿದ್ದರಿಂದ ಬಕೆಟ್‌ನ ಒಳಮೈ ಜಾರುತ್ತಿದೆ.ಹತ್ತಾರು ಬಾರಿ, ನೂರಾರು ಬಾರಿ ಕಪ್ಪೆಕ್ಕ ಹಾರಿದಳು, ಜಾರಿ ಬಿದ್ದಳು. ಸತ್ತೇ ಹೋಗುತ್ತೇನೆ ಎನ್ನಿಸಿತು. ಆದರೆ ಕಪ್ಪೆಕ್ಕ ತುಂಬ ಚತುರೆ, ಪರಿಶ್ರಮಿ ಮತ್ತು ಸೃಜನಶೀಲೆ. ಎದೆಗೆಡದೆ ತನಗೆ ಗೊತ್ತಿದ್ದ ಒಂದೇ ಕೆಲಸ, ಕೈ ಕಾಲು ಬಡಿಯುವುದನ್ನು ಮುಂದುವರೆಸಿದಳು.ಇನ್ನೇನು ಕೈಕಾಲು ಬಿದ್ದುಹೋಗುತ್ತವೆ ಎನ್ನಿಸುವಂತಾದಾಗ ತಕ್ಷಣ ಕಾಲಿಗೆ ಭದ್ರತೆ ದೊರಕಿದಂತಾಯಿತು. ಕೈಕಾಲಿನಿಂದ ಒಂದೇ ಸಮನೆ ಕಡೆದಾಗ ಕೆನೆ ಬೆಣ್ಣೆಯಾಗಿ ತೇಲುತ್ತಿದೆ! ಅದು ಗಟ್ಟಿಯಾಗಿ ತೇಲತೊಡಗಿದಾಗ ಕಪ್ಪೆಕ್ಕ ಅದರ ಮೇಲೆ ಹತ್ತಿ ಎಲ್ಲ ಶಕ್ತಿಯನ್ನು ಹಾಕಿ ಹಾರಿ ಬಕೆಟ್‌ನ ಹೊರಗೆ ಬಿದ್ದಳು. ನಂತರ ಕುಪ್ಪಳಿಸುತ್ತ ಮನೆ ಸೇರಿದಳು. ತನ್ನ ಮೈಗೆ ಅಂಟಿದ್ದ ಕೆನೆ, ಬೆಣ್ಣೆಯ ರುಚಿಯನ್ನು ಮನೆ ಮಂದಿಗೆಲ್ಲ ನೀಡಿದಳು. ಎಲ್ಲರೂ ಭಲೇ ಎಂದರು.ನಾವು ಎಷ್ಟೋ ಅಶಕ್ತರೆನಿದ್ದರೂ ನಮ್ಮ ಮಿತಿಯಲ್ಲಿ ಸಾಧ್ಯವಿರುವ ಕೆಲಸವನ್ನು ಧೈರ್ಯದಿಂದ, ತಾಳ್ಮೆಯಿಂದ, ಪರಿಶ್ರಮದಿಂದ, ಸೃಜನಶೀಲತೆಯಿಂದ ಮಾಡಿದರೆ ಯಶಸ್ಸು ಖಚಿತವಾಗಿಯೂ ದೊರಕುತ್ತದೆ.

ಪ್ರತಿಕ್ರಿಯಿಸಿ (+)