ನಂಜನ ಬೀಡಿ ಮತ್ತು ಶ್ರೀರಂಗರ ‘ಬಬ್ಬೂರುಕಮ್ಮೆ ’ !

7

ನಂಜನ ಬೀಡಿ ಮತ್ತು ಶ್ರೀರಂಗರ ‘ಬಬ್ಬೂರುಕಮ್ಮೆ ’ !

ಐ.ಎಂ.ವಿಠಲಮೂರ್ತಿ
Published:
Updated:
ನಂಜನ ಬೀಡಿ ಮತ್ತು ಶ್ರೀರಂಗರ ‘ಬಬ್ಬೂರುಕಮ್ಮೆ ’ !

ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭ. ಅಭಿನಂದಿಸಲು ಅವರ ಮನೆಗೆ ತೆರಳಿ ಸಂಸ್ಕೃತಿ ಇಲಾಖೆ ನಿರ್ದೇಶಕನೆಂದು ಪರಿಚಯಿಸಿಕೊಂಡೆ. ತುಂಬಾ ಖುಷಿಯಲ್ಲಿದ್ದರು. ಸಾಹಿತಿಗಳು, ಅವರ ಬಂಧುಗಳು ಜೊತೆ­ಯಲ್ಲಿದ್ದರು. ಅವರ ಜೇಬಿನಿಂದ ಚಾಕೊಲೆಟ್‌ ತೆಗೆದು ‘ಪ್ರಶಸ್ತಿ ಬಂದಿದ್ದಕ್ಕೆ ನಿಮಗೆ ಸಿಹಿ’ ಎಂದು ಕೊಟ್ಟರು.ಒಂದು ಉದ್ದದ ಕ್ಲೋಸ್‌ ಕಾಲರ್‌ ಕೋಟು, ಅದರ ಮೇಲೊಂದು ಮಫ್ಲರ್‌, ತಲೆ ಮೇಲೊಂದು ಗಟ್ಟಿ ರಟ್ಟಿನ ನಸ್ಯಬಣ್ಣದ ಟೋಪಿ, ಹಣೆಯ ಮೇಲೆ ಅಯ್ಯಂಗಾರರ ನಾಮ. ನಗುಮುಖದ ಮಾಸ್ತಿ ಅವರದು ಸಂಬಂಧಿಗಳ ನೆನಪು ತರುವ ಆತ್ಮೀಯತೆ. ಜ್ಞಾನಪೀಠ ಪ್ರಶಸ್ತಿ ಅವರಿಗೆ ಬಹಳ ಹಿಂದೆಯೇ ಬರಬೇಕಾಗಿತ್ತೆಂದು ಹಲವರು ಮಾತನಾಡುತ್ತಿದ್ದುದು ಅವರಿಗೆ ತಿಳಿ­ದಿತ್ತು. ಅದಕ್ಕೆ ಮಾಸ್ತಿಯವರ ಮಾತು ಬೇರೆ­ಯದೇ ಆಗಿತ್ತು. ‘ನೋಡಪ್ಪಾ, ಹಬ್ಬ ಹರಿದಿನ­ಗಳಲ್ಲಿ ವಿಶೇಷ ಸಿಹಿ ತಯಾರಿಸಿದರೆ ಯಾರಿಗೆ ಮೊದಲು ಕೊಡುತ್ತಾರೆ? ಮನೆಯ ಮಕ್ಕಳಿಗೆ ಅಲ್ವೆ? ಹಾಗೆ ಪ್ರಶಸ್ತಿಯನ್ನು ಮೊದಲು ಕಿರಿಯ­ರಿಗೆ ಕೊಟ್ಟಿದ್ದಾರೆ. ಈಗ ನನಗೆ ಕೊಟ್ಟಿದ್ದಾರೆ. ಏನು ತಪ್ಪಿದೆ’ ಎಂದು ನಕ್ಕು ಬಿಡುತ್ತಿದ್ದರು.ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಾಸ್ತಿಯವರಿಗೆ ಅಭಿನಂದನಾ ಸಮಾರಂಭ. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಸಚಿವರಾದ ಜೀವರಾಜ ಆಳ್ವ, ಆರ್‌.ರಘುಪತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಎಸ್‌. ನಿಸಾರ್‌ ಅಹಮದ್‌ ಮುಂತಾದವರು ಭಾಗವಹಿಸಿದ್ದರು. ನಮ್ಮ ಇಲಾಖೆಯಿಂದ ಏರ್ಪಡಿಸಿದ್ದ ಭಾವಸ್ಪರ್ಶಿ ಸಮಾರಂಭ. ಕಿಕ್ಕಿರಿದು ತುಂಬಿದ್ದ ಸಭಾಂಗಣ. ಆತ್ಮೀಯವಾದ ಅಭಿನಂದನಾ ನುಡಿಗಳು, ಶ್ಯಾಮಲಾ ಭಾವೆಯವರ ಗಾಯನ. ಏನು ಸಡಗರ–ಸಂಭ್ರಮ.ನಿಸಾರ್‌ ಅಹಮದ್‌ ಅವರು ಸಾಹಿತ್ಯ ಅಕಾಡೆ-ಮಿ­ಯಿಂದ ಮಾಸ್ತಿಯವರಿಗೆ ಮತ್ತೊಂದು ಅಭಿನಂದನಾ ಸಮಾರಂಭ ಏರ್ಪಡಿ­ಸಿ­ದ್ದರು. ಅತಿಥಿಯಾಗಿ ಆಹ್ವಾನಿತನಾಗಿದ್ದೆ. ‘ಯವನಿಕಾ’ದ ಎರಡನೇ ಮಹಡಿ ಸಭಾಂಗಣದಲ್ಲಿ ಸಮಾರಂಭ ಏರ್ಪಾಟಾಗಿತ್ತು. ಮೆಟ್ಟಿಲೇರಿ ಹೋಗುತ್ತಿದ್ದಾಗ ಆದ್ಯ ರಂಗಾಚಾರ್ಯರು (ಶ್ರೀರಂಗ) ಪತ್ನಿ ಶಾರದಾ ಅವರೊಂದಿಗೆ ಬರುತ್ತಿದ್ದರು. ನನ್ನನ್ನು ಗುರ್ತಿಸಿ, ವಿಧಾನಸೌಧದಲ್ಲಿ ನಡೆದ ಅಭಿನಂದನಾ ಸಮಾರಂಭದ ಬಗೆಗೆ ಮೆಚ್ಚುಗೆ ಮಾತುಗಳನ್ನಾಡಿದರು. ಮುಂದುವರಿಸಿ ‘ನೀವು ಬಬ್ಬೂರುಕಮ್ಮೆಯವರೇ’ ಎಂದರು. ನನಗದು ಅರ್ಥವಾಗದೆ ‘ಇಲ್ಲ’ವೆಂದೆ. ‘ಹಾಗಾದರೆ ಹೊಯ್ಸಳ ಕರ್ನಾಟಕರೇ’ ಎಂದರು. ಆಗ ನನಗರಿವಾಯ್ತು, ಅವರು ನಾನು ಬ್ರಾಹ್ಮಣ­ನೆಂದು ತೀರ್ಮಾನಿಸಿ ನನ್ನ ಉಪಜಾತಿ ವಿಚಾರಿಸು­ತ್ತಿದ್ದಾರೆಂದು. ‘ಮತ್ತೆ ತಾವು ಯಾವುದು’ ಎಂದು ಹಟ ಬಿಡದೆ ಮುಂದುವರಿಸಿದರು. ನಾನು ‘ಅಖಿಲ ಕರ್ನಾಟಕದವ’ನೆಂದೆ. ನನಗೆ ತುಂಬ ಮುಜುಗರವಾಗಿತ್ತು. ನನ್ನ ಜಾತಿ ಬಗೆಗೆ ಇಂತಹ ಉದ್ಧಾಮ ಸಾಹಿತಿ, ನಾಟಕಕಾರ, ವಿಚಾರವಾದಿ, ಚಿಂತಕ ಏಕೆ ಹೀಗೆ ವಿಚಾರಿಸಿ­ದರೆಂದು ತಿಳಿಯಲಿಲ್ಲ. ಇಂದಿಗೂ ತಿಳಿದಿಲ್ಲ.ಜಾತೀಯತೆ ಬಗೆಗಿನ ನನ್ನ ಮೊದಲ ಅನುಭವ­ವನ್ನು ಇಲ್ಲಿ ಹೇಳಲೇಬೇಕು. ನಮ್ಮೂರು ಕೀತೂರಿನಿಂದ ಗೆಂಡೆಹಳ್ಳಿ ಶಾಲೆಗೆ ಹೋಗುತ್ತಿದ್ದೆ. ನಮ್ಮೂರಿನ ಮಾಟನ ಮಗ ನಂಜ ಕೂಡ ನನ್ನೊಡನೆ ಶಾಲೆಗೆ ಬರುತ್ತಿದ್ದ. ನಂಜನ ತಂದೆ ಮಾಟ ಅದ್ಭುತ ಜಾನಪದ ಗಾಯಕ. ನಮ್ಮನ್ನು ಸದಾ ರಂಜಿಸುತ್ತಿದ್ದ. ಒಂದುದಿನ ನಂಜ ಅವನಪ್ಪನ ಜೇಬಿನಿಂದ ಬೀಡಿ ಕದ್ದು ತಂದಿದ್ದ. ‘ಅಯ್ಯರೇ ಬೀಡಿ ಸೇದೋಣ’ ಎಂದು ಬೆಂಕಿಕಡ್ಡಿ ಗೀರಿ ಬೀಡಿ ಹಚ್ಚೇಬಿಟ್ಟ. ಒಂದೆರಡು ದಮ್‌ ಎಳೆದು ನನಗೆ ಕೊಟ್ಟ. ದೊಡ್ಡ ಸಾಹಸ ಮಾಡುತ್ತಿರುವವನಂತೆ ನಾನೂ ಒಂದೆರಡು ದಮ್‌ ಎಳೆದು ಹೊಗೆ ಬಿಟ್ಟಿದ್ದೆ ಅಷ್ಟೇ. ಹಿಂದಿನಿಂದ ಒಂದು ಬೈಸಿಕಲ್‌ನ ಡಬಲ್‌ ಬೆಲ್‌ ‘ಟ್ರಿಂಗ್‌ ಟ್ರಿಂಗ್‌’ ಎಂದಿತು. ತಿರುಗಿ ನೋಡುತ್ತೇವೆ ನಮ್ಮ ಗಬ್ಬಲಗೋಡು ಕೃಷ್ಣಪ್ಪ ಮೇಷ್ಟ್ರು! ಗಾಬರಿಯಿಂದ ಏನೂ ತೋಚದೆ ಗಡಿಬಿಡಿಯಲ್ಲಿ ಬೀಡಿ ಬಿಸಾಡಿ ಸುಮ್ಮನೆ ನಿಂತೆವು. ನಮ್ಮನ್ನು ಏನೂ ಮಾತನಾಡಿಸದೆ ಮೇಷ್ಟ್ರು ಶಾಲೆಗೆ ಹೋದರು. ನಾವು ಶಾಲೆ ತಲುಪಿದಾಕ್ಷಣ ನಮ್ಮಿಬ್ಬರನ್ನು ಕರೆಯಿಸಿ ಕೈಮುಂದೆ ಚಾಚುವಂತೆ ಹೇಳಿ ಬೆತ್ತದ ರುಚಿ ತೋರಿಸಿದರು. ‘ಇವನ ಜೊತೆ ಸೇರಿ, ನೀನೂ ಹಾಳಾಗ್ತಿಯಾ’ ಎಂದು ಅವರು ನಂಜನ ಜಾತಿ ನಿಂದಿಸಿ ಹೇಳಿದ ನೆನಪು. ಅಂದು ಮಕ್ಕಳಾಗಿದ್ದ ನಮಗೆ ಈ ಜಾತೀಯತೆ ಅವಾಂತರಗಳು ತಿಳಿದಿರಲಿಲ್ಲ.ಸರ್ಕಾರಿ ಸೇವೆಗೆ ಸೇರಿದ ಮೇಲೆ ಕ್ರಮೇಣ ಈ ಜಾತೀಯತೆಯ ಭಯಾನಕ ಮುಖದ ಅರಿವಾಗ-­ತೊಡಗಿತು. ನಮ್ಮ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಜಾತೀಯತೆ ಒಂದು ಅಸಹ್ಯ ಪಿಡುಗು. ಒಂದು ಜಾತಿಯವರು ಮುಖ್ಯಮಂತ್ರಿ­ಯಾದರೆ ಆ ಜಾತಿಯ ಜವಾನನಿಂದ ಹಿಡಿದು ಹಿರಿಯ ಐಎಎಸ್‌, ಐಪಿಎಸ್‌ ಅಧಿಕಾರಿಗಳವರೆಗೆ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಮುಖ್ಯ­ಮಂತ್ರಿಗಳಿಗೆ ಸ್ವಜಾತಿ ಮಠಾಧೀಶರು, ನಿವೃತ್ತ ಅಧಿಕಾರಿಗಳು, ರಾಜಕಾರಣಿಗಳು ನೀಡುವ ಪುಕ್ಕಟೆ ಸಲಹೆಗಳಿಗೆ ಮಿತಿಯಿಲ್ಲ. ತಮ್ಮ ಜಾತಿಯ ಯಾವ ಅಧಿಕಾರಿಗಳನ್ನು ಯಾವ ಆಯ­ಕಟ್ಟಿನ ಸ್ಥಳಕ್ಕೆ ನೇಮಿಸಬೇಕು, ಮುಖ್ಯ­ಮಂತ್ರಿ ಕಚೇರಿಗೆ ಯಾರನ್ನು ನೇಮಿಸಬೇಕು... ಹೀಗೆ ಹಲವಾರು ಕುತಂತ್ರಗಳು ನಡೆದು ಇವರು ಹೆಣೆಯುವ ಜಾಲಕ್ಕೆ ಅಧಿಕಾರಿಗಳು ಸಹ ಜಾತಿ ಆಧಾರದ ಮೇಲೆ ವಿಭಜನೆಗೊಂಡು ಜಾತೀಯತೆ ಹೆಚ್ಚುಗಾರಿಕೆಯನ್ನು ಮೆರೆಯುತ್ತಾರೆ. ಮುಖ್ಯ­ಮಂತ್ರಿಗಳು, ಮಂತ್ರಿಗಳು, ಅಧಿಕಾರಿಗಳು ಸಂವಿಧಾನಕ್ಕೆ ಬದ್ಧರಾಗಿ ಜಾತ್ಯತೀತ ಮನೋಭಾವ ಮೆರೆಯಬೇಕಾದವರು ಅದನ್ನು ಮರೆಯುತ್ತಾರೆ. ಸ್ವಜನ ಪಕ್ಷಪಾತವೇ ಆಡಳಿತಕ್ಕೆ ಅನುಕೂಲಸಿಂಧು ಸಿದ್ಧಾಂತವಾಗುತ್ತದೆ. ತಾವು ಕುಲೋದ್ಧಾರಕರು ಎಂಬ ಭ್ರಮೆಯಲ್ಲಿ ತೇಲುತ್ತಾರೆ. ಈ ಜಾತಿಯವರು ಅಧಿಕಾರ­ದಲ್ಲಿದ್ದಾಗ ಆ ಜಾತಿಯವರು ಅವರು ಅಧಿಕಾರ­ದಲ್ಲಿದ್ದಾಗ ಇವರು ‘ಆಡಳಿತದಲ್ಲಿ ಜಾತೀಯತೆ ಮಾಡುತ್ತಿದ್ದಾರೆ’ ಎಂದು ದೂಷಿಸುವುದು ವಾಡಿಕೆಯಾಗಿಬಿಟ್ಟಿದೆ.ಒಂದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಅದರ ನಾಯಕತ್ವವನ್ನು ಯಾರು ವಹಿಸುತ್ತಾರೆಂಬುದು ತಿಳಿದಾಕ್ಷಣ ನಡೆಯುವ ಗುಪ್ತ ಸಭೆಗಳು, ಸಮಾಲೋಚನೆಗಳು ಯಾರಿಂದ ಶಿಫಾರಸು ಮಾಡಿಸಿದರೆ ಯಾವ ಹುದ್ದೆ ಅಲಂಕರಿಸಬಹುದು ಎಂಬುದರ ಬಗೆಗೆ ನಡೆಯುವ ಹುನ್ನಾರಗಳು... ಸಮೀಪದಿಂದ ಗಮನಿಸಿದವರಿಗೆ ಮಾತ್ರ ಅದರ ಒಳಸಂಚುಗಳ ಅರಿವಾಗುತ್ತದೆ. ಇಂತಹ ವ್ಯವಸ್ಥೆಯೊಳಗಿದ್ದು ಅದರ ದೌರ್ಬಲ್ಯಕ್ಕೆ ಒಳಗಾಗದಿರುವುದು ಒಂದು ಸಾಧನೆ.ರಾಮಕೃಷ್ಣ ಹೆಗಡೆಯವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿದ್ದಾಗ ಯಾವುದೇ ಮಂತ್ರಿಗಳು ತಮ್ಮ ಸ್ವಜಾತಿ ಸಿಬ್ಬಂದಿಯನ್ನು ಆಪ್ತ­ಶಾಖೆಗೆ ನೇಮಿಸಿಕೊಳ್ಳಬಾರದೆಂದು ಆದೇಶಿಸಿ­ದ್ದರು. ಆದರೆ, ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಗಳಾಗುವ ವೇಳೆಗೆ ಈ ಆದೇಶಕ್ಕೆ ಬಹಳಷ್ಟು ವಿನಾಯ್ತಿಗಳಾದವು. ಸಚಿವರ ಮತ್ತವರ ಜಾತಿಗಳ ಅಗ್ರಗಣ್ಯರ ಒತ್ತಡ ತಾಳ­ಲಾರದ ಹೆಗಡೆಯವರು ತಾವೇ ಹೊರಡಿಸಿದ ಒಂದು ಉತ್ತಮ ಆದೇಶದ ಕುರಿತು ನಿರ್ಲಿಪ್ತ­ರಾದರು. ಈಗ ಪ್ರತಿಯೊಬ್ಬರೂ ಸ್ವಜಾತಿ­ಯವರನ್ನೇ ಆಪ್ತ ಶಾಖೆಗೆ ತೆಗೆದುಕೊಳ್ಳುವುದು ಪದ್ಧತಿಯಾಗಿದೆ. ನನ್ನ ಆಪ್ತಶಾಖೆಯಲ್ಲಿದ್ದ ಒಬ್ಬರನ್ನು ತಮ್ಮ ಜಾತಿಯವರೆಂದು ತಿಳಿದು ಬೆಳಗಾವಿ ಭಾಗದ ಪ್ರಭಾವಿ ವಿಧಾನ ಪರಿಷತ್‌ ಸದಸ್ಯರೊಬ್ಬರು ಅವರ ಆಪ್ತ ಸಹಾಯಕನ ಹುದ್ದೆಗೆ ನೇಮಿಸಲು ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಿದರು.ಆದರೆ, ಆ ಅಧಿಕಾರಿ ತಮ್ಮ ಜಾತಿಯವರಲ್ಲ ಎಂದು ತಿಳಿದಾಕ್ಷಣ ಕೊಟ್ಟಿದ್ದ ಟಿಪ್ಪಣಿಯನ್ನು ವಾಪಸು ಪಡೆದು, ತಮ್ಮ ಜಾತಿಯವರನ್ನೇ ಹುಡುಕಿಕೊಂಡರು. ದಕ್ಷತೆಯನ್ನು ಗಾಳಿಗೆ ತೂರಿ ಜಾತಿಗೆ ಮಣೆ ಹಾಕಿದರು. ಹೇಗಿದೆ ನಮ್ಮ ಜಾತ್ಯತೀತ ಆಡಳಿತ?

ನಾನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕನಾಗಿದ್ದೆ. ನನ್ನ ಸ್ಥಳಕ್ಕೆ ಬರಲು ಒಬ್ಬ ಅಧಿಕಾರಿ ಪ್ರಭಾವಿ ಮಠಾಧೀಶರೊಬ್ಬರಿಂದ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದರು. ಇದರಿಂದ ನನ್ನ ಅವಧಿಪೂರ್ವ ವರ್ಗಾವಣೆಗೆ ಟಿಪ್ಪಣಿ ಸಿದ್ಧ­ವಾಗಿತ್ತು. ಮುಖ್ಯಮಂತ್ರಿ ಜೆ.ಎಚ್‌. ಪಟೇಲರು ನನ್ನನ್ನು ಕರೆಯಿಸಿ ವರ್ಗಾವಣೆ ಹಿನ್ನೆಲೆಯನ್ನು ತಿಳಿಸಿ ‘ನೀನು ಎಲ್ಲಿಗೆ ಹೋಗಬೇಕು ಹೇಳು. ಈ ಜಾತಿ ಕಾಟದಿಂದ ನನಗೆ ಮುಕ್ತಿಯಿಲ್ಲ’ ಎಂದರು. ‘ಸಾರ್‌, ತಾವು ಮುಖ್ಯಮಂತ್ರಿಗಳು. ನನ್ನನ್ನು ಕರೆದು ಇದನ್ನು ತಿಳಿಸುವ ಅಗತ್ಯವಿರಲಿಲ್ಲ. ಆದರೆ, ಆ ಸೌಜನ್ಯ ತೋರಿಸಿದ್ದೀರಿ. ಅದಕ್ಕೆ ನಾನು ಕೃತಜ್ಞ’ ಎಂದೆ. ಕೆಲವು ದಿನಗಳ ನಂತರ ತುಮಕೂರು ಜಿಲ್ಲಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶಿಸಿತು. ಈ ವಿಷಯ ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ ಪಟೇಲರಂತಹ ಜಾತ್ಯತೀತ ಮುಖ್ಯಮಂತ್ರಿಗೆ ಅವರ ಸುತ್ತಲಿದ್ದ ಜಾತಿಪಡೆ ಅವರನ್ನು ಸ್ವತಂತ್ರರಾಗಿ ಕಾರ್ಯ­ನಿರ್ವಹಿಸಲು ಬಿಡಲಿಲ್ಲ.ಮುಖ್ಯವಾಹಿನಿಯಲ್ಲಿಲ್ಲದ ಜಾತಿಗಳ ಅಧಿಕಾರಿ­ಗಳು ಯಾವುದಾದರೊಂದು ಬಲಿಷ್ಠ ಜಾತಿಯವರ ಹಿಂಬಾಲಕರಾಗಬೇಕು. ಇಲ್ಲ­ವಾದಲ್ಲಿ ಅವರಿಗೆ ಅತಂತ್ರ ಕಾಡುತ್ತದೆ. ಅವರ ಅಸಹಾಯಕತೆಯನ್ನು ನಾನು ಬಹು ನೋವಿನಿಂದ ಗಮನಿಸಿದ್ದೇನೆ. ಅವರ ಪರಿಸ್ಥಿತಿ ಊರಿನ ಕೇರಿಯಲ್ಲಿರುವ ಒಬ್ಬ ದಲಿತನಿಗೂ ಕಡೆಯಾದಂತಹದ್ದು. ‘ಸಾರ್‌ ನಾನು ತಿಗಳ­ರವನು, ತಳವಾರರ ಪೈಕಿ, ಕುಂಬಾರರ ಪೈಕಿ, ಬೆಸ್ತರ ಪೈಕಿ, ಬೋವಿಗಳ ಪೈಕಿ ನಮಗೆ ಯಾರದೂ ಬೆಂಬಲ ಇಲ್ಲ. ತಾವು ಸ್ವಲ್ಪ ಸಹಾಯಮಾಡಿ’ ಎಂದು ಗೋಗರೆಯುವ ನೌಕರರನ್ನು ಕಂಡಿದ್ದೇನೆ. ಮನೆಯಲ್ಲಿ ಮೊದಲ ಅಕ್ಷರಸ್ಥ ಪೀಳಿಗೆಯವರಾದ ಅವರು ಸ್ವಾಭಿಮಾನ ಹಾಗೂ ಗೌರವದಿಂದ ಬಾಳಬೇಕಾದವರು. ಆದರೆ, ಅತಂತ್ರರಾಗಿ, ಅಸಹಾಯಕರಾಗಿ ದೈನೇಸಿ ಸ್ಥಿತಿ ತಲುಪುತ್ತಾರೆ. ಹೊರಗಿನ ಜಗತ್ತಿನ ಜನರಿಗೆ ಸಮಪಾಲು, ಸಮಬಾಳು ಒದಗಿಸಬೇಕಾದ ಸರ್ಕಾರಿ ಅಧಿಕಾರಿಯ ಪರಿಸ್ಥಿತಿಯೇ ಇದಾದರೆ ಉಳಿದವರ ಪಾಡೇನು?ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ಒಂದು ವಿಚಿತ್ರ ಪರಿಸ್ಥಿತಿಯನ್ನು ನಾವು ಒಪ್ಪಿಕೊಂಡು ಅದು ಸಹಜವೆಂಬಂತೆ ಹೊಂದಾಣಿಕೆ ಮಾಡಿ­ಕೊಂಡಿದ್ದೇವೆ. ಮುಖ್ಯಮಂತ್ರಿಗಳಿಗೆ ಮಾತ್ರ ಸಂವಿಧಾನಾತ್ಮಕವಾಗಿ ಕರ್ತವ್ಯ ಮತ್ತು ಜವಾಬ್ದಾರಿ ಇದೆ ಎಂಬುದನ್ನು ಮರೆತು ಅವರ ಅಳಿಯ, ಮಗಳು, ಮಗ, ಹತ್ತಿರದ ಸಂಬಂಧಿಕರು ಸರ್ಕಾರದ ಒಂದು ಭಾಗವಾಗಿ ಬಿಡುತ್ತಾರೆ. ಯಾವುದೇ ಜವಾಬ್ದಾರಿಯಿಲ್ಲದೆ ಸರ್ಕಾರದ ಎಲ್ಲ ತೀರ್ಮಾನಗಳಲ್ಲಿ ಪಾಲು­ದಾರರಾಗುತ್ತಾರೆ. ಕೆಲವು ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿ­ಗಳು, ಹಿರಿಯ ಅಧಿಕಾರಿಗಳು ಈ ‘ಎಕ್ಸ್ಟ್ರಾ ಕಾನ್ ಸ್ಟಿಟ್ಯೂಷನಲ್ ಅಥಾರಿಟಿ’ ಯಿಂದ ಸಲಹೆ, ಆದೇಶ ಪಡೆದು ಕಾರ್ಯನಿರ್ವಹಿಸಿ ಆಡಳಿತ ವ್ಯವಸ್ಥೆಯನ್ನು ಅಧೋಗತಿಗೆ ಕೊಂಡೊಯ್ದಿ­ದ್ದಾರೆ. ಎಷ್ಟೋ ಸಲ ಮುಖ್ಯಮಂತ್ರಿಗಳು ವರ್ಗಾವಣೆ, ಮಂಜೂರಾತಿಗಳನ್ನು ಇಂಥವರ ಕೈಗೆ ಕೊಟ್ಟು ತಾವು ಆರಾಮವಾಗಿರುತ್ತಾರೆ.ಲೋಕಾಯುಕ್ತ ದಾಳಿ ಎದುರಿಸಿದ್ದ ಅಧಿಕಾರಿಯೊಬ್ಬರು ಸೇವಾ ಹಿರಿತನವಿಲ್ಲದಿದ್ದರೂ ಸ್ವಜಾತಿ ಶಾಸಕರ ರಾಜಕೀಯ ಬೆಂಬಲದಿಂದ, ಒಂದು ವಸ್ತುನಿಷ್ಠವಲ್ಲದ ತೀರ್ಮಾನದಿಂದ ಮುಖ್ಯ ಕಾರ್ಯದರ್ಶಿಯಾದರು. ನ್ಯಾಯ­ಯುತ­ವಾಗಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಏರಬೇಕಾದವರು ಅನ್ಯಾಯಕ್ಕೆ ಒಳಗಾದರು. ಸೇವಾ ಹಿರಿತನ, ದಕ್ಷತೆ, ಪ್ರಾಮಾಣಿಕತೆ ಮಾನ-­ದಂಡವಾಗುವ ಬದಲು ಜಾತಿಯೊಂದೇ ಮಾನ­ದಂಡವಾಯಿತು. ಇದು ರಾಜ್ಯದ ಆಡಳಿತ ಚರಿತ್ರೆಯಲ್ಲಿ ಒಂದು ಕಪ್ಪುಚುಕ್ಕೆಯಾಗಿ ದಾಖಲೆ­ಯಾಯಿತು.ಹೊಸ ಮುಖ್ಯಮಂತ್ರಿಗಳು ಬಂದಾಗ ಅವರ  ಮಕ್ಕಳು, ಅವರ ಅಳಿಯ, ಅವರ ಸಂಬಂಧಿ­ಗಳು.. ಹೀಗೆ ಹೊಸ ನಾಟಕದ ಆರಂಭ. ಆದರೆ, ಪಾತ್ರಧಾರಿಗಳು ಮಾತ್ರ ಮತ್ತೊಂದು ಜಾತಿಗೆ ಸೇರಿದ ಅಧಿಕಾರಿಗಳು. ಈ ಜಾತೀಯ ವರ್ಗಾವಣೆಗಳಿಗಾಗಿ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು, ಶಾಸಕರ ನಡುವೆ ನಡೆಯುವ ಸಂಘರ್ಷ ಅತಿರೇಕಕ್ಕೆ ತಲುಪಿದ್ದನ್ನು ಇಡೀ ನಾಡಿನ ಜನ ನೋಡಿದ್ದಾರೆ. ಆಡಳಿತದಲ್ಲಿ ಜಾತೀಯತೆ ಒಂದು ದೊಡ್ಡ ಅನಿಷ್ಟ ಪಿಡುಗು ಎಂಬುದು ನನ್ನ ಖಚಿತವಾದ ಅಭಿಪ್ರಾಯ. ಇಷ್ಟೆಲ್ಲ ಸರ್ಕಸ್‌ಗಳ ನಡುವೆ ಒಬ್ಬ ಮುಖ್ಯಮಂತ್ರಿ ಇಲ್ಲವೆ ಮಂತ್ರಿಗಳ ಜಾತಿಯ ಯಾರೂ ಉದ್ಧಾರವಾಗಲು ಸಾಧ್ಯವಿಲ್ಲ ಎಂಬ ಕನಿಷ್ಠ ಸತ್ಯ ಇನ್ನೂ ಅರ್ಥವಾಗದಿರುವುದೇ ಈ ಆಡಳಿತ ವ್ಯವಸ್ಥೆಯ ವಿಪರ್ಯಾಸ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry