5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ನಂಬಿಕೆಯ ಫಲ

ಗುರುರಾಜ ಕರ್ಜಗಿ
Published:
Updated:

ಅಮೆರಿಕದ ರಾಜಕೀಯ ಪತ್ರಕರ್ತ, ಲೇಖಕ ಹಾಗೂ ಪ್ರಾಧ್ಯಾಪಕರಾಗಿದ್ದ ನಾರ್ಮನ್ ಕಸಿನ್ಸ್‌ ಅವರ ಪುಸ್ತಕ ಓದುತ್ತಿದ್ದೆ. ಅದರಲ್ಲಿ ದಾಖಲಾದ ಘಟನೆಯೊಂದು ನನ್ನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ.ಒಂದು ತುರುಸಿನ ಫುಟ್‌ಬಾಲ್ ಪಂದ್ಯ ನಡೆದಿತ್ತು. ಮೈದಾನ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆಟ ನಡೆದಾಗ ಕ್ಷಣಕ್ಷಣಕ್ಕೂ ಜನರ ಆವೇಶ ಹೆಚ್ಚುತ್ತಿತ್ತು. ಒಂದು ಆಟ ಮುಗಿಯಿತು. ಮತ್ತೊಂದು ಆಟ ಪ್ರಾರಂಭವಾಗಲು ಅರ್ಧ ಗಂಟೆ ಸಮಯವಿತ್ತು. ಆಗ ಐದು ಜನರು ಕ್ರೀಡಾಂಗಣದಲ್ಲಿದ್ದ ವೈದ್ಯರ ಕೊಠಡಿಗೆ ಬಂದರು.ಅವರೆಲ್ಲರಿಗೂ ತಲೆಸಿಡಿದುಹೋಗುವಷ್ಟು ತಲೆನೋವು, ತಲೆಸುತ್ತು ಮತ್ತು ತಡೆಯಲಾರದಷ್ಟು ಹೊಟ್ಟೆನೋವು. ವೈದ್ಯರು ಅವರೆಲ್ಲ­ರನ್ನೂ ಪರೀ­ಕ್ಷಿಸಿ­ದರು. ತಪಾಸಣೆಯಿಂದ ತಿಳಿದುಬಂದದ್ದೆಂದರೆ ಐವರೂ ಪಂದ್ಯ ಪ್ರಾರಂಭ­ವಾಗುವ ಮೊದಲು ಮೈದಾನದ ಒಳಗೇ ಇದ್ದ ತಂಪು ಪಾನೀಯದ ಅಂಗಡಿ­ಯಿಂದ ಪಾನೀಯ­ಗಳನ್ನು ಕುಡಿದಿದ್ದರು.ಅವರನ್ನು ಅಲ್ಲಿಯೇ ಮಲಗಿಸಿ ವೈದ್ಯರು ಉಳಿದವರನ್ನು ಎಚ್ಚರಿಸಲು ಮೈಕಿನಲ್ಲಿ ಘೋಷಣೆ ಮಾಡಿಸಿದರು, ಮೈದಾನದ ಈ ಭಾಗದಲ್ಲಿರುವ ಪಾನೀಯದ ಅಂಗಡಿಯಿಂದ ತಂಪು ಪಾನೀಯವನ್ನು ಕುಡಿದ ಕೆಲವರಿಗೆ ತಲೆನೋವು, ಹೊಟ್ಟೆನೋವು, ತಲೆಸುತ್ತು ಬಂದ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಪ್ರೇಕ್ಷಕರು ಆ ಪಾನೀಯಗಳನ್ನು ಕುಡಿಯ­ದಿರುವುದು ಕ್ಷೇಮ. ಹತ್ತು ನಿಮಿಷಗಳಲ್ಲಿ ಈ ವೈದ್ಯರ ದವಾಖಾನೆಯಲ್ಲಿ ನಿಲ್ಲಲಾಗ­ದಷ್ಟು ಜನ ನುಗ್ಗಿ ಬಂದರು. ನೂರಾರು ಜನ ವಾಂತಿ ಮಾಡಿಕೊಳ್ಳು­ತ್ತಿದ್ದಾರೆ!ಕೆಲವರು ಹೊಟ್ಟೆನೋವಿನಿಂದ, ತಲೆನೋವಿನಿಂದ ಕುಸಿದು ಬೀಳುತ್ತಿ­ದ್ದಾರೆ. ಇದೊಂದು ತುರ್ತು ಪರಿಸ್ಥಿ­ತಿಯೇ ನಿರ್ಮಾಣವಾಯಿತು. ಪೊಲೀಸರು ಹೋಗಿ ತಂಪು ಪಾನೀಯದ ಅಂಗಡಿಯನ್ನು ಬಂದು ಮಾಡಿ ಅಲ್ಲಿಯ ಎಲ್ಲ ಪಾನೀಯಗಳನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಿದರು. ಮುಂದಿನ ಆಟವನ್ನು ಒಂದು ತಾಸಿನ ಮಟ್ಟಿಗೆ ಮುಂದಕ್ಕೆ ಹಾಕಿ, ಹತ್ತಾರು ಆಂಬುಲನ್ಸ್‌ಗಳನ್ನು ತರಿಸಿ ರೋಗಿ­ಗ­ಳನ್ನೆಲ್ಲ ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಕೆಲವರ ಸ್ಥಿತಿಯಂತೂ ಕಳ­ವಳಕಾರಿಯಾಗಿತ್ತು.ವೈದ್ಯರು ಮೊದಲಿನ ಐದು ಜನರ ಪರೀಕ್ಷೆಯನ್ನು ಮುಂದುವರೆಸಿದರು. ಇವರೆಲ್ಲರೂ ಪಂದ್ಯಕ್ಕೆ ಬರುವುದಕ್ಕಿಂತ ಮೊದಲು ದಾರಿಯಲ್ಲಿ ಆಲೂಗೆಡ್ಡೆ­ಯಿಂದ ಮಾಡಿದ ಪದಾರ್ಥವನ್ನು ತಿಂದಿದ್ದರು. ಪೋಲೀಸರು ಹೋಗಿ ಆ ಅಂಗಡಿ­ಯಿಂದ ಆಲೂಗೆಡ್ಡೆಯ ತಿನಿಸನ್ನು ತಂದರು. ಅದನ್ನು ಪರೀಕ್ಷೆ ಮಾಡಿದಾಗ ತಿಳಿದ ಅಂಶವೆಂದರೆ ಅವು ಕೊಳೆತ ಆಲೂಗೆಡ್ಡೆಗಳು, ಅಲ್ಲದೇ ತಿನಿಸನ್ನು ಮಾಡಿ ಬಹಳ ಹೊತ್ತಾಗಿದ್ದರಿಂದ ಅದೊಂದು ವಿಷ ಪದಾರ್ಥವೇ ಆಗಿತ್ತು.ಹಾಗಾದರೆ ಇವರ ಅನಾರೋಗ್ಯಕ್ಕೆ ಕಾರಣ ತಂಪು ಪಾನೀಯವಲ್ಲ, ಆಲೂಗೆಡ್ಡೆಯ ತಿನಿಸು. ಅದು ಖಾತ್ರಿಯಾದೊಡನೆ ವೈದ್ಯರು ಮತ್ತೊಂದು ಫೋಷಣೆ ಮಾಡಿಸಿದರು. ಇತ್ತೀಚಿನ ಪರೀಕ್ಷೆಗಳಂತೆ ಮೈದಾನದ­ಲ್ಲಿರುವ ಅಂಗಡಿಯ ತಂಪುಪಾನೀಯ­ಗಳಲ್ಲಿ ತಕ­ರಾರು ತರುವ ಯಾವ ಅಂಶಗಳೂ ಇಲ್ಲ. ಆದ್ದರಿಂದ ಅಂಗಡಿಯನ್ನು ಮತ್ತೆ ತೆರೆ­ಯಲಾಗಿದೆ. ತಕ್ಷಣವೇ ಮೈದಾನದಲ್ಲಿದ್ದವರು ಈ ವಿಷಯವನ್ನು ಆಸ್ಪತ್ರೆಗೆ ದಾಖಲಾದ­ವರಿಗೆ ಫೋನ್ ಮಾಡಿ ತಿಳಿಸಿದರು. ಆಶ್ಚರ್ಯ! ಅವರ ರೋಗ­ಲಕ್ಷಣಗಳೆಲ್ಲ ಮಾಯವಾದವು. ಅರ್ಧ ಗಂಟೆಯಲ್ಲಿ ಅವರೆಲ್ಲ ಆಸ್ಪತ್ರೆಯಿಂದ ಬಿಡುಗಡೆ­ಯಾಗಿ ಮನೆ ಸೇರಿದರು.ಅದಕ್ಕೇ ಕಸಿನ್ಸ್‌ ಹೇಳುತ್ತಾರೆ, ಇದು ಬಲವಾದ ನಂಬಿಕೆ ಮಾಡುವ ಕ್ರಿಯೆ. ಯಾವುದೋ ವಿಷಯವನ್ನು ಬಲವಾಗಿ ನಂಬಿದರೆ ಅದು ಹಾಗೆಯೇ ಆಗುತ್ತದೆ. ಇದು ಆಗುವುದೇ ಇಲ್ಲ ಎಂದು ಖಚಿತವಾಗಿ ನಂಬಿಕೊಂಡರೆ ಆಗುವ ಕೆಲಸವೂ ಆಗುವುದಿಲ್ಲ.ಗಾಂಧೀಜಿ ಹೇಳಿದ್ದು ಇದೇ ಮಾತನ್ನು, ಘನವಾದ ನಂಬಿಕೆ ಒಂದು ಬಹುದೊಡ್ಡ ಶಕ್ತಿ. ಕೆಲಸ ಮಾಡಲು ಸಾಧ್ಯವಾಗುವುದಕ್ಕೆ, ಆಗದಿರುವುದಕ್ಕೂ ಇದೇ ಮೂಲ ಕಾರಣ. ಧನಾತ್ಮಕವಾದ ನಂಬಿಕೆ ಬಹುದೊಡ್ಡ ಸಾಧನೆ ಮೂಡಿಸುತ್ತದೆ. ನಂಬಿಕೆ ಕುಸಿದರೆ ಕಣ್ಣ ಮುಂದಿದ್ದ ಸಾಧಾರಣ ಗುರಿಯೂ ಮಾಯವಾ­ಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry