ನಂಬಿಕೆ ಎಂಬ ಕೋಟೆಗೆ ಬೇಕು ಮೌಲ್ಯಗಳ ಬುನಾದಿ

7

ನಂಬಿಕೆ ಎಂಬ ಕೋಟೆಗೆ ಬೇಕು ಮೌಲ್ಯಗಳ ಬುನಾದಿ

ಡಾ.ಆರ್.ಬಾಲಸುಬ್ರಹ್ಮಣ್ಯಂ
Published:
Updated:
ನಂಬಿಕೆ ಎಂಬ ಕೋಟೆಗೆ ಬೇಕು ಮೌಲ್ಯಗಳ ಬುನಾದಿ

ಮಾನವೀಯ ಮೌಲ್ಯ ತೀವ್ರವಾಗಿ ಕುಸಿದಿರುವ ಮತ್ತು ಎಲ್ಲೆಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ಪ್ರಪಂಚವೇ ಇಂದು ನಮಗೆ ಕಾಣಿಸುತ್ತಿದೆ. ಇದರಿಂದ, ಬದುಕುಳಿಯಲು ಇರುವುದು ಇದೊಂದೇ ಮಾರ್ಗ ಎಂದು ನಾವು ನಂಬುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕೆಲ ದಿನಗಳ ಹಿಂದೆ ಬೀದಿ ಬದಿ ವ್ಯಾಪಾರಿಯಿಂದ ನಾನು ಮಾವಿನ ಹಣ್ಣು ಖರೀದಿಸುತ್ತಿದ್ದೆ. ವ್ಯಾಪಾರಿ ಹಣ್ಣುಗಳನ್ನು ತೂಕ ಮಾಡುತ್ತಿದ್ದಾಗ `ಇವನ ತಕ್ಕಡಿ ನಿಜವಾಗಲೂ ಸರಿಯಾಗಿದೆಯೇ?,  ಒಂದು ವೇಳೆ ಕೊಳೆತ ಹಣ್ಣುಗಳನ್ನೇನಾದರೂ ಇವನು ನನಗೆ ಗೊತ್ತಾಗದಂತೆ, ಚೆನ್ನಾಗಿರುವ ಹಣ್ಣುಗಳ ಜೊತೆ ಸೇರಿಸಿ ಕೊಟ್ಟುಬಿಟ್ಟರೆ ಏನು ಮಾಡುವುದು?~ ಎಂಬ ಪ್ರಶ್ನೆಗಳು ನನ್ನಲ್ಲಿ ಮೂಡಿದವು. ಆಗಿನ ನನ್ನ ಮನಃಸ್ಥಿತಿ ಹೇಗಿತ್ತೆಂದರೆ ಮೋಸ ಹೋಗುವುದನ್ನೇ ನಾನು ನಿರೀಕ್ಷಿಸುತ್ತಿದ್ದೇನೇನೋ ಎಂಬಂತಿತ್ತು ಮತ್ತು ಹಣ್ಣು ಮಾರುವವನೂ ಪ್ರಾಮಾಣಿಕ, ನಿಷ್ಠ ವ್ಯಕ್ತಿಯಾಗಿರಲೂಬಹುದು ಎಂಬುದನ್ನು ಯೋಚಿಸುವುದು ಸಹ ನನಗೆ ಬೇಕಿರಲಿಲ್ಲ.ನಾವು ಪ್ರತಿಯೊಬ್ಬರೂ ಆಟೊ ಹತ್ತಿದಾಗ, ಅದರ ಮೀಟರ್ ಅಕ್ರಮವಾಗಿ ಹೆಚ್ಚು ಓಡಿಬಿಟ್ಟರೆ ಎಂದೋ ಅಥವಾ ಈ ಆಟೊ ಡ್ರೈವರ್ ನಮ್ಮಿಂದ ಹೆಚ್ಚು ಹಣ ವಸೂಲಿ ಮಾಡಿಬಿಟ್ಟರೆ ಎಂಬಂತಹ ಯೋಚನೆಗಳನ್ನು ಎಷ್ಟು ಸಲ ತಾನೇ ಮಾಡಿಲ್ಲ? ಏನೇ ಆದರೂ, ನಮ್ಮ ಸುತ್ತಮುತ್ತ ಇನ್ನೂ ಒಳ್ಳೆಯ ವ್ಯಕ್ತಿಗಳು ಇದ್ದಾರೆ ಮತ್ತು ಪ್ರತಿಯೊಬ್ಬರೂ ನಮಗೆ ಮೋಸ ಮಾಡುವುದಕ್ಕೆ ಅಥವಾ ನಮ್ಮನ್ನು ದೋಚುವುದಕ್ಕೇ ಕಾಯ್ದುಕೊಂಡೇನೂ ಇಲ್ಲ ಎಂಬ ಸತ್ಯವನ್ನು ನಂಬಲು ನಾವ್ಯಾಕೆ ಸಿದ್ಧರಿಲ್ಲ?ಈ ಸಂದರ್ಭದಲ್ಲಿ, ನನ್ನ ಸ್ನೇಹಿತೆಯೊಬ್ಬಳು ಹೇಳಿದ್ದ ಸಂಗತಿ ನನಗೆ ನೆನಪಾಗುತ್ತಿದೆ. ಒಂದು ದಿನ ಅವಳು ಒಬ್ಬಳೇ ರಾತ್ರಿ ಮನೆಗೆ ಹಿಂದಿರುಗುತ್ತಿದ್ದಳು. ಆಗ ವಿದ್ಯುತ್ ಕೈಕೊಟ್ಟಿದ್ದರಿಂದ ಬೀದಿ ದೀಪ ಇಲ್ಲದೆ ಕತ್ತಲು ಆವರಿಸಿತ್ತು. ಬಸ್ ನಿಲ್ದಾಣದಿಂದ ತನ್ನನ್ನು ಮನೆಗೆ ಕರೆದೊಯ್ಯಲು ಬರುವಂತೆ ಹೇಳಲು ಅವಳು ತನ್ನ ಸಹೋದರನನ್ನು ಸಂಪರ್ಕಿಸಲು ಯತ್ನಿಸಿದಳಾದರೂ ಅದು ಸಾಧ್ಯವಾಗಿರಲಿಲ್ಲ.

 

ಆಗ ಅನಿವಾರ್ಯವಾಗಿ ಒಬ್ಬಳೇ ಮನೆಗೆ ನಡೆದು ಹೋಗಲು ನಿರ್ಧರಿಸಿದಳು. ಆದರೆ ಹೀಗೆ ಒಬ್ಬಂಟಿಯಾಗಿ ಹೋಗುತ್ತಿದ್ದೇನೆ ಎಂಬುದನ್ನು ನೆನಪಿಸಿಕೊಂಡೇ ಆತಂಕಕ್ಕೆ ಒಳಗಾಗಿದ್ದ ಆಕೆಗೆ, ಇದ್ದಕ್ಕಿದ್ದಂತೆ ಯಾರಾದರೂ ಬಂದು ತನ್ನ ಸರ ಕಿತ್ತುಕೊಂಡು ಹೋಗಿಬಿಟ್ಟರೆ ಅಥವಾ ಇನ್ನೇನಾದರೂ ದುಸ್ಸಾಹಸಕ್ಕೆ ಕೈಹಾಕಿದರೆ ಎಂಬ ಚಿಂತೆ ಆರಂಭವಾಯಿತು. ಗಾಬರಿಗೊಂಡಿದ್ದ ಅವಳನ್ನು ಕಂಡು, ರಸ್ತೆಯಲ್ಲಿ ಹೋಗುತ್ತಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಆಕೆಯ ಮನೆಯವರೆಗೂ ಅವಳೊಡನೆಯೇ ನಡೆದುಕೊಂಡು ಬರುವುದಾಗಿ ಹೇಳಿದರು.ಇದನ್ನು ಕೇಳಿ ಅವಳ ಆತಂಕ ಇನ್ನೂ ಹೆಚ್ಚಾಯಿತು. `ಅಯ್ಯೋ ಈ ವ್ಯಕ್ತಿ ಮನಸ್ಸಿನಲ್ಲೇನಾದರೂ ಸಂಚು ಹೂಡಿಕೊಂಡೇ ಹೀಗೆ ನೆರವಾಗುವ ನಾಟಕ ಆಡುತ್ತಿರಬಹುದೇನೋ~ ಎನಿಸಲು ಆರಂಭಿಸಿತು. ಆದರೆ ಆ ವ್ಯಕ್ತಿ ಮಾತ್ರ ಏನೊಂದೂ ಮಾತನಾಡದೆ ಆಕೆಯ ಜೊತೆಜೊತೆಯಲ್ಲೇ ಹೆಜ್ಜೆಹಾಕಿದರು. ಆಕೆ ಸುರಕ್ಷಿತವಾಗಿ ಮನೆ ತಲುಪಿದಳೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಮುಂದೆ ಸಾಗಿದರು. ಆದರೆ ನನ್ನ ಸ್ನೇಹಿತೆಗೆ ಈ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ `ಛೆ ಎಂತಹ ಪ್ರಾಮಾಣಿಕ ವ್ಯಕ್ತಿಯ ಮೇಲೆ ಸಂದೇಹಪಟ್ಟುಬಿಟ್ಟೆನಲ್ಲಾ~ ಎಂದು ತನ್ನ ಬಗ್ಗೆಯೇ ತನಗೆ ನಾಚಿಕೆ ಉಂಟಾಗುತ್ತಿತ್ತು.ಇಂತಹ ಪರಿಸ್ಥಿತಿಗೆ ಏನು ಕಾರಣ ಮತ್ತು ಯಾರು ಹೊಣೆ? ನಂಬಿಕೆಯ ಕೊರತೆಯು ಭಾರತೀಯರಾದ ನಮಗೆ ನಮ್ಮ ಸಂಸ್ಕೃತಿಯಿಂದಲೇ ಸ್ವಭಾವಜನ್ಯವಾಗಿ ಬಂದುಬಿಟ್ಟಿದೆಯೇ ಅಥವಾ ಇಂದಿನ ಆಧುನಿಕ ಬದುಕಿನ ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳು ನಮ್ಮ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರ ಬಗ್ಗೆಯೂ ನಾವು ಜಾಗರೂಕರಾಗಿ ವರ್ತಿಸುವಂತೆ ಮಾಡುತ್ತಿವೆಯೇ? ನಮ್ಮ ಬದುಕು ಬರೀ ನಕಾರಾತ್ಮಕ ಧೋರಣೆಗಳಿಂದಲೇ ತುಂಬಿಹೋಗಿದೆ ಮತ್ತು ಸಂಶಯದ ವಾತಾವರಣವನ್ನು ನಾವು ನಿರಂತರವಾಗಿ ಬಲಗೊಳಿಸುತ್ತಾ ಬಂದಿದ್ದೇವೆ ಎಂಬುದನ್ನು ಪರಿಶೀಲಿಸುವ ಗೋಜಿಗೇ ನಾವು ಹೋಗುತ್ತಿಲ್ಲ.ಇಂತಹ ವಾತಾವರಣದಲ್ಲಿ ನಮ್ಮಳಗೆ ಮತ್ತು ಇತರರಲ್ಲಿ ಇರುವ ಒಳ್ಳೆಯ ಗುಣಗಳನ್ನು ಗುರುತಿಸುವ ಕಾರ್ಯವನ್ನು ಸಂಪೂರ್ಣವಾಗಿ ನಾವು ನಿಲ್ಲಿಸಿಯೇಬಿಟ್ಟಿದ್ದೇವೆ. ನಮ್ಮ ಸಮಾಜ ಮತ್ತು ಅದು ನಮಗೆ ಕಲಿಸಿಕೊಟ್ಟ ಮೌಲ್ಯಗಳಿಗೆ ಇಂದು ಏನಾಗಿದೆ? ಸ್ಥಳೀಯ ಸ್ನೇಹಿತರು ಹಾಗೂ ಅವರ ಸಾಂಪ್ರದಾಯಿಕ ವಿವೇಚನೆಯಿಂದ ಕಲಿಯಲು ನಮಗೆ ಸಾಧ್ಯವಿಲ್ಲವೇ?1988ರಲ್ಲಿ ನಡೆದ ಘಟನೆಯೊಂದನ್ನು ನಾನಿಲ್ಲಿ ಹೇಳಬಯಸುತ್ತೇನೆ. ಬ್ರಹ್ಮಗಿರಿಯಲ್ಲಿ ನಾವು ಆಗಷ್ಟೇ ಆದಿವಾಸಿಗಳ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದೆವು. 28 ಜನರ ಆ ಮೊದಲ ತಂಡಕ್ಕಾಗಿ ಶಾಲೆಯಲ್ಲಿ ಅಡುಗೆ ಸಿದ್ಧಪಡಿಸುವುದು ಮತ್ತು ಊಟ ಮಾಡುವುದು ಒಂದು ಮೋಜಿನ ಸಂಗತಿಯೇ ಆಗಿತ್ತು. ದಿನನಿತ್ಯವೂ ರಾಗಿ ಮುದ್ದೆ ಮತ್ತು ಸಾಂಬಾರ್ ಮಾಡುವುದೆಂದು ನಿರ್ಧರಿಸಿದ್ದೆವು. ಅದಕ್ಕಾಗಿ ಒಲೆ ಉರಿಸಲು ಬೇಕಾದ ಕಟ್ಟಿಗೆಯನ್ನು ಕೆಲವರು ಸಂಗ್ರಹಿಸಿ ತರಬೇಕಿತ್ತು.ನಾವು ಕೆಲವರು ತರಕಾರಿ ಹೆಚ್ಚಿ ಕೊಡುತ್ತಿದ್ದೆವು. ಬೇಯಿಸಿದ್ದ ರಾಗಿ ಹಿಟ್ಟಿನಿಂದ ಕೆಲ ಮಕ್ಕಳು ಮುದ್ದೆ ಕಟ್ಟುತ್ತಿದ್ದರು. ಕೆಲವರು ತಮ್ಮ ಸ್ನೇಹಿತರಿಗೆ ಊಟ ಬಡಿಸುವ ಹೊಣೆ ಹೊತ್ತುಕೊಂಡರೆ, ಇನ್ನು ಕೆಲವರು ಎಲ್ಲಾ ಮುಗಿದ ಮೇಲೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈಜೋಡಿಸುತ್ತಿದ್ದರು. ಶೈಕ್ಷಣಿಕ ಕಾರ್ಯಕ್ಕಿಂತ ಹೆಚ್ಚಿನ ಸಮಯ ಈ ಕಾರ್ಯಗಳಿಗೇ ವಿನಿಯೋಗವಾಗುತ್ತಿತ್ತಾದರೂ ಅದರಲ್ಲೇ ಒಂದು ರೀತಿಯ ಮೋಜು ಇರುತ್ತಿತ್ತು.ಒಂದು ದಿನ ರಾಗಿ ಮುದ್ದೆ ಕಟ್ಟುವ ಸರದಿ ಮಂಜು ಎಂಬ 7 ವರ್ಷದ ಬಾಲಕನಿಗೆ ಬಂತು. ಆ ದಿನ ಅವನು ತನ್ನೊಡನೆ ತನ್ನ ಚಿಕ್ಕ ತಂಗಿ ಸುನಂದಾಳನ್ನೂ ಶಾಲೆಗೆ ಕರೆತಂದಿದ್ದ. ಅವಳನ್ನು ನೋಡಿದ ಕೂಡಲೇ ನನ್ನ ಮನಸ್ಸಿನಲ್ಲಿ `ಅಯ್ಯೋ ದೇವರೇ ಊಟಕ್ಕೆ ಇನ್ನೊಂದು ಹೊಟ್ಟೆ ಸೇರಿಕೊಂಡಿತಲ್ಲಪ್ಪಾ~ ಎನಿಸಿತು. ಅವಳಿಗೂ ಸೇರಿಸಿ ಮಂಜು 29 ಮುದ್ದೆಗಳನ್ನು ಕಟ್ಟುತ್ತಾನೆ ಎಂದೇ ನಾನು ಎಣಿಸಿದ್ದೆ.ಆದರೆ ಆಶ್ಚರ್ಯವೆಂದರೆ ಮಂಜು ಎಂದಿನಂತೆ 28 ಮುದ್ದೆಗಳನ್ನಷ್ಟೇ ಕಟ್ಟಿದ್ದ. ಇದನ್ನು ಕಂಡು ಕುತೂಹಲಗೊಂಡ ನಾನು ಸುಮ್ಮನೇ `ಅವನು ಏನು ಮಾಡುತ್ತಾನೆ?~ ಎಂದು ಗಮನಿಸುತ್ತಾ ಇದ್ದೆ. ಎಲ್ಲ 28 ತಟ್ಟೆಗಳನ್ನೂ ಇಟ್ಟಾದ ಬಳಿಕ ಅವನು ತನ್ನ ತಂಗಿಯನ್ನು ಪಕ್ಕದಲ್ಲೇ ಕೂರಿಸಿಕೊಂಡ. ನಂತರ ತನ್ನ ಪಾಲಿನ ಮುದ್ದೆಯನ್ನು ನಿಧಾನವಾಗಿ ಎರಡು ಭಾಗ ಮಾಡಿ ಒಂದನ್ನು ಅವಳಿಗೆ ಕೊಟ್ಟ.ನನಗೆ ಕುತೂಹಲ ತಡೆಯಲಾಗಲಿಲ್ಲ. ಊಟ ಮುಗಿಯುವುದನ್ನೇ ಕಾಯುತ್ತಿದ್ದು ಬಳಿಕ ಅವನನ್ನು ಬದಿಗೆ ಕರೆದೊಯ್ದು `ನಿನ್ನ ತಂಗಿಗಾಗಿ ಒಂದು ಹೆಚ್ಚು ಮುದ್ದೆಯನ್ನು  ಯಾಕೆ ಕಟ್ಟಲಿಲ್ಲ?~ ಎಂದು ಕೇಳಿಯೇಬಿಟ್ಟೆ. ಆಗ ಅವನು ಕೊಟ್ಟ ಉತ್ತರ ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ. ಆ ಮುಗ್ಧ ಮಗು ತನ್ನ ಆದಿವಾಸಿ ಜನರು ಹಿಂದಿನಿಂದ ಕಟ್ಟಿಕೊಂಡು ಬಂದ ಮೌಲ್ಯಗಳ ಒಳನೋಟವನ್ನೇ ಆ ಮೂಲಕ ನನ್ನೆದುರು ತೆರೆದಿಟ್ಟಿತ್ತು.ತನ್ನ ತಂದೆತಾಯಿ ಬಿದಿರಿನ ಉತ್ಪನ್ನಗಳನ್ನು ಮಾರಲು ಸಂತೆಗೆ ಹೋಗಿದ್ದರಿಂದ ತಂಗಿಯನ್ನು ನೋಡಿಕೊಳ್ಳಬೇಕಾದ ಹೊಣೆ ಅವನ ಮೇಲೇ ಬಿದ್ದಿತ್ತು. ಆದರೆ ಈ ಕಾರಣದಿಂದ ಶಾಲೆಗೆ ತಪ್ಪಿಸಿಕೊಳ್ಳುವುದು ಅವನಿಗೆ ಬೇಕಿರಲಿಲ್ಲ. ಹೀಗಾಗಿ ತನ್ನೊಟ್ಟಿಗೆ ಅವನು ತಂಗಿಯನ್ನೂ ಕರೆತಂದಿದ್ದ. ಆದರೆ ಆಕೆಯ ಹೊಟ್ಟೆ ತುಂಬಬೇಕಾದದ್ದು ತನ್ನ ಕರ್ತವ್ಯವಾಗಿದ್ದರೂ ಆ ಕಾರಣದಿಂದ ಸಹಪಾಠಿಗಳು ತಮ್ಮ ಪಾಲಿನ ಆಹಾರವನ್ನು ತನ್ನ ತಂಗಿಗಾಗಿ ಕೊಡುವುದು ಸಹ ಅವನಿಗೆ ಇಷ್ಟವಿರಲಿಲ್ಲ. ಎಂತಹ ಸೂಕ್ಷ್ಮ ವಿವೇಚನೆ ಆ ಸಣ್ಣ ಮಗುವಿನಲ್ಲಿ ಅಡಗಿತ್ತು!ಆಗ ನನಗೆ ಈ ಶಾಲೆ ನಿಜವಾಗಲೂ ನನಗೆ ಶಿಕ್ಷಣ ನೀಡುತ್ತಿದೆ ಎಂದು ಅನಿಸಿತು. ಇದು ನನ್ನ ಜೊತೆಜೊತೆಗೇ ಬೆಳೆದುಬಂದಿದ್ದ ಎಲ್ಲ ಬಗೆಯ ಸ್ವಾರ್ಥಗಳನ್ನೂ ಮರೆಯಲು, ನನ್ನ ಕಾರ್ಯಗಳಿಗೆ ನಾನೇ ಹೊಣೆಯಾಗಬೇಕೇ ಹೊರತು ಅದನ್ನು ಸಮಾಜ, ಕುಟುಂಬ ಅಥವಾ ಸ್ನೇಹಿತರ ಮೇಲೆ ಹೊರಿಸಬಾರದು ಎಂಬುದನ್ನು ಅರಿಯಲು ದಾರಿ ಮಾಡಿಕೊಟ್ಟಿತು.ನಾನು ಭೇಟಿಯಾಗುವ ಪ್ರತಿ ವ್ಯಕ್ತಿಯಲ್ಲೂ ಒಬ್ಬ ಶಿಕ್ಷಕ ಅಡಗಿರುತ್ತಾನೆ ಮತ್ತು ನಮ್ಮ ಸುತ್ತಮುತ್ತ ಘಟಿಸುವ ಎಲ್ಲ ಸಂಗತಿಗಳಿಂದಲೂ ನಾವು ಕಲಿಯಬೇಕಾದುದು ಬಹಳಷ್ಟಿದೆ ಎಂಬ ಸತ್ಯವನ್ನೂ ನನಗೆ ಮನವರಿಕೆ ಮಾಡಿಕೊಟ್ಟಿತು. ಅವನ ಮಾತುಗಳನ್ನು ಕೇಳಿದಾಗ ನನಗೆ ಕಣ್ಣೀರನ್ನು ತಡೆಯಲಾಗಲಿಲ್ಲ. ತಾನು ಹೇಳಿದ ಯಾವ ಮಾತಿನಿಂದ ನನಗೆ ಇಷ್ಟು ನೋವಾಯಿತು ಎಂಬುದನ್ನು ಗ್ರಹಿಸಲು ಅವನು ಪ್ರಯತ್ನಿಸುತ್ತಿದ್ದ.ಯಾಕೆಂದರೆ  ಆ ದಿನ ಸಹ ಅವನಿಗೆ ಎಂದಿನಂತೆಯೇ ಒಂದು ದಿನವಾಗಿತ್ತು ಮತ್ತು ಅವನು ಬದುಕುತ್ತಿದ್ದ ರೀತಿಯೇ ಹಾಗಿತ್ತು! ಅವನ ಈ ಪರಿಯ ಮೌಲ್ಯಗಳು ಅವನ ಪೂರ್ವಜರಿಂದ, ಅವನ ಸಂಸ್ಕೃತಿಯಿಂದ, ಪ್ರಕೃತಿ ಮತ್ತು ಅರಣ್ಯದೊಟ್ಟಿಗೆ ಸಹಬಾಳ್ವೆ ನಡೆಸುತ್ತಾ ಬಂದಿದ್ದ ಅವನ ಕುಟುಂಬವರ್ಗದಿಂದ ಅವನಿಗೆ ಬಳುವಳಿಯಾಗಿ ಬಂದಿದ್ದವು. ಹೀಗೆ ನಮ್ಮ ಸುತ್ತಮುತ್ತಲಿನ ವಾತಾವರಣದಿಂದ ಇಂತಹ ಸಂಗತಿಗಳನ್ನು ನಾವು ಕಲಿತದ್ದೇ ಆದರೆ ಜೀವನ ಉತ್ತಮ ಎನಿಸಬಹುದೇನೋ.ನಮ್ಮ ಕುಟುಂಬ, ಶಾಲೆ, ಪರಿಸರ ಮತ್ತು ನಾವು ಒಟ್ಟಿಗೇ ಬದುಕುವ ಜನರಿಂದ ನಮ್ಮ ಮೌಲ್ಯಗಳು ರೂಪುಗೊಳ್ಳುತ್ತವೆ. ದಿನನಿತ್ಯದ ನಮ್ಮ ಸಂವಹನಗಳು, ಅನುಭವಗಳು ಸಮಾಜದಲ್ಲಿ ಮತ್ತು ನಮ್ಮಳಗೆ ನಮ್ಮ ನಡವಳಿಕೆ ಹಾಗೂ ವರ್ತನೆಯನ್ನು ನಿರಂತರವಾಗಿ ರೂಪಿಸುತ್ತಾ ಸಾಗುತ್ತವೆ. ಪ್ರಬಲವಾದ `ಸತ್ಸಂಗ~ ಭಾರತೀಯ ಸಮಾಜಕ್ಕೆ ಹೊಸದೇನಲ್ಲ. ಜನ್ಮಜಾತವಾಗಿ ನಾವು ಒಳ್ಳೆಯವರೇ; ಅಷ್ಟೇ ಅಲ್ಲ ಮಾನವೀಯ ಅಂತಃಕರಣ ಸಹ ನಮ್ಮಳಗೆ ಅಡಗಿದೆ ಎಂಬುದನ್ನು ನಮಲ್ಲಿ ನಾವು ನಿರಂತರವಾಗಿ ಜ್ಞಾಪಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ.ಶಿಕ್ಷಣ, ಅನುಭವ, ಸಮಾಜ ಮತ್ತು ಜನರೊಟ್ಟಿಗೆ ನಮ್ಮ ದಿನನಿತ್ಯದ ವ್ಯವಹಾರಗಳು ನಮ್ಮನ್ನು ಪ್ರತಿಗಾಮಿಯನ್ನಾಗಿ ಹಾಗೂ ಪ್ರತಿಯೊಬ್ಬರ ಬಗ್ಗೆಯೂ ಎಚ್ಚರಿಕೆಯಿಂದ ವರ್ತಿಸುವಂತೆ ಮಾಡಿಬಿಟ್ಟಿವೆ. ಆದರೆ ಇಂತಹ ಪರಿಸ್ಥಿತಿಯನ್ನು  ಬದಲಿಸಬೇಕಾದ ಅಗತ್ಯ ಈಗ ನಮಗಿದೆ.ಪ್ರಸಕ್ತ ಸ್ಥಿತಿಯನ್ನು ಬದಲಿಸಬೇಕಾದರೆ ಒಳ್ಳೆಯವರಾಗಿ ಇರುವುದು ಮತ್ತು ಒಳ್ಳೆಯದನ್ನು ಮಾಡುವುದು ನಮ್ಮ ಮುಂದಿರುವ ಮಾರ್ಗ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಾವು ಪ್ರತಿಯೊಬ್ಬರೂ ಯಾವುದನ್ನು ವ್ಯಕ್ತಪಡಿಸುತ್ತೇವೋ ಅದೆಲ್ಲದರ ಒಟ್ಟು ಮೊತ್ತವೇ ಸಾಮಾಜಿಕ ಮೌಲ್ಯ. ಹೀಗಾಗಿ ಈ ನಿಟ್ಟಿನಲ್ಲಿ ಮೊದಲು ನಮ್ಮ ವರ್ತನೆ ಮತ್ತು ಜೀವನದ ಬಗೆಗಿನ ದೃಷ್ಟಿಕೋನ ಬದಲಾಗಬೇಕಾಗಿದೆ.ದಿನನಿತ್ಯದ ಆಗುಹೋಗುಗಳಲ್ಲಿ ಪ್ರೀತಿ ಮತ್ತು ನಂಬಿಕೆಯ ವಾತಾವರಣವನ್ನು ನಾವು ಮರಳಿ ತರಬೇಕಾಗಿದೆ. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ಚಿಂತೆ ಮಾಡಬೇಕಾದ ಪ್ರಮೇಯವಾಗಲೀ ಅಥವಾ ನಮ್ಮ ಎದುರಿಗಿನ ವ್ಯಕ್ತಿಗಳ ಬಗ್ಗೆ ಅನವಶ್ಯಕವಾಗಿ ಜಾಗರೂಕತೆ ವಹಿಸಬೇಕಾದ ಅಗತ್ಯವಾಗಲೀ ನಮಗೆ ಬರುವುದಿಲ್ಲ.

(ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry