ನಕ್ಕು, ನನ್ನನ್ನು ನಗಿಸುವ ಇವಳ್ಯಾರು....?

7

ನಕ್ಕು, ನನ್ನನ್ನು ನಗಿಸುವ ಇವಳ್ಯಾರು....?

ಪ್ರಕಾಶ್ ರೈ
Published:
Updated:
ನಕ್ಕು, ನನ್ನನ್ನು ನಗಿಸುವ ಇವಳ್ಯಾರು....?

ಧರ್ಮರಾಜನು ಉರುಳಿಸಿದ ದಾಳ...

ಜುದಾಸ್ ಏಸುವಿಗೆ ಕೊಟ್ಟ ಮುತ್ತು...

ಬುದ್ಧನು ಸಂಧಿಸಿದ ಮರಣ...

ಗಾಂಧಿ ಕಂಡ ಅರೆನಿರ್ವಾಣ...

ಹೀಗೆ ಯಾವುದೋ ಒಂದು ಕ್ಷಣ ಎಲ್ಲರ ಬದುಕನ್ನೂ ಬಡಿದೆಬ್ಬಿಸಿ, ತಲೆಕೆಳಗಾಗಿಸಿ, ಬದಲಾಯಿಸಿ ಬಿಡುತ್ತದೆ. ಹೀಗೆ ಹಲವು ಕ್ಷಣಗಳಿಂದಾಗಿ ರೂಪುಗೊಂಡದ್ದು ತಾನೇ ನಮ್ಮೆಲ್ಲರ ಬದುಕು?

ಟ್ರಾಫಿಕ್ ಸಿಗ್ನಲ್‌ವೊಂದರಲ್ಲಿ ಕಾರಲ್ಲಿ ಕೂತು ಕಾಯುತ್ತಿದ್ದೆ. ಸಾಕಷ್ಟು ಕೆಲಸಗಳು, ಯೋಚನೆಗಳು, ಯೋಜನೆಗಳು ಮೆದುಳು ತುಂಬ ಆಕ್ರಮಿಸಿದ್ದವು. ತುಂಬಾ ತುರ್ತು ಕೆಲಸವಿದ್ದವನಂತೆ ಕಂಡ ಸೈಕಲ್ ಸವಾರನೊಬ್ಬ ‘ರೀ ಸ್ವಾಮಿ, ಕಾರನ್ನು ಸ್ವಲ್ಪ ಬಲಕ್ಕೆ ತಗೊಂಡು ಸ್ವಲ್ಪ ಜಾಗ ಬಿಡ್ರೀ’ ಎಂದು ನಗುತ್ತಲೇ ಕಾರು ಚಾಲಕನೊಬ್ಬನನ್ನು ಬೈಯ್ಯುತ್ತಿದ್ದ. ಎಲ್ಲರಿಗೂ ಅವರವರದ್ದೇ ಅವಸರ; ಕಮಿಟ್‌ಮೆಂಟ್ಸ್.

ಇದ್ದಕ್ಕಿದ್ದಂತೆ ದೂರದಲ್ಲೆಲ್ಲೋ ಕೇಳತೊಡಗಿತು ಆ ತಾಳ- ‘ಟಂಡಣಕಾ, ಟಂಡಣಕಾ, ಣಕಾ ಣಕಾ ಟಂಡಣಕ...’ ಹೀಗೆ ತಮಟೆ ಬಾರಿಸುತ್ತಾ, ಮೈಮೇಲೆ ಬಂದವರಂತೆ ಕುಣಿಯುತ್ತಾ... ಒಬ್ಬರ ಬದುಕಿನ ಕೊನೆಯ ಪ್ರಯಾಣದ ಆರಂಭ ಆ ದಾರಿಯಲ್ಲಿ ಹಾದುಬಂತು. ಮುಖ್ಯರಸ್ತೆ, ಹೆವಿ ಟ್ರಾಫಿಕ್, ಪೊಲೀಸ್‌ನವರು, ಜನರು... ಹೀಗೆ ಯಾರನ್ನೂ ಲೆಕ್ಕಿಸದೆ ಹೂವನ್ನು ಕಿತ್ತು ಕಿತ್ತು, ಬೀಸಿ ಬೀಸಿ ಎಸೆದು ಸಾಗುತ್ತಿದೆ ಆ ಮೆರವಣಿಗೆ. ‘ಟಂಡಣಕಾ, ಟಂಡಣಕಾ, ಣಕಾ ಣಕಾ ಟಂಡಣಕ...’ ತಮಟೆಯ ನಾದ. ಕಾರಿನ ಡೋರಿನ ಮೇಲಿದ್ದ ನನ್ನ ಕೈಗಳು ತಂತಾನೆ ತಾಳ ಹಾಕುತ್ತಿವೆ. ಇಳಿದು ಒಂದು ಡಾನ್ಸ್ ಮಾಡಲೇ ಎಂದೆನಿಸುತ್ತಿದೆ. ಆ ಗಾಡಿಯಲ್ಲಿ ಮಲಗಿ ಸಾಗುತ್ತಿದ್ದ ಹಿರಿಯ ಜೀವ ನನ್ನನ್ನು ಕಂಡು- ‘ಬಾರಯ್ಯಾ ಮಹಾನುಭಾವ, ಬಂದು ಕುಣೀತಿಯಾ... ಹೀಗೆ ನೀನು ಬಂದಾಗಲೇ ನನ್ನ ಮಗ ನಿನ್ನ ಸಾವಿಗೆ ಬಂದು ಕುಣೀತಾನೆ’ ಎನ್ನುತ್ತಾ ಕರೆಯುವಂತಿದೆ. ಆ ಕ್ಷಣದಲ್ಲಿ ಸಿಗ್ನಲ್ ಹಸಿರಿಗೆ ಬಿದ್ದು, ಕೈ ಗೇರ್ ಮೇಲೆ ಹೋಗಿ ಕಾರು ಹೊರಟಿತು.

***

ಬದುಕು ಹೀಗೇ ಸಾಗಿದೆ ನನಗೆ. ಪ್ರತಿ ಕ್ಷಣವೂ ಬದುಕಬೇಕು ನಾನು. ಅಷ್ಟೇ. ಎಲ್ಲಾ ಊರು ನನ್ನದೇ, ಎಲ್ಲಾ ಮನುಷ್ಯರೇ... ನನ್ನವರೇ ಅನ್ನುವುದು ನನ್ನ ಫಿಲಾಸಫಿ. ‘ಇಂದು ಹೊಸತಾಗಿ ಮತ್ತೆ ಹುಟ್ಟಿದೆ’ ಎಂದರು ಕವಿ ಭಾರತಿ. ನನ್ನನ್ನು ಕೇಳಿದರೆ, ‘ನಾನು ಈಗಷ್ಟೇ ಹುಟ್ಟಿದ್ದೇನೆ. ನನ್ನನ್ನು ನಾನು ಮಗುವಾಗಿಸುವ ಪ್ರಯತ್ನ ಮಾಡುತ್ತಲೇ ಇರುತ್ತೇನೆ’. ಹಲವಾರು ಬಾರಿ ಸೋಲಬಹುದು, ಕೆಲವೊಮ್ಮೆ ಗೆಲ್ಲಬಹುದು. ಆ ಕೆಲವೊಮ್ಮೆ ಗೆಲ್ಲಲು ಎಷ್ಟು ಸಲವಾದರೂ ಸೋಲಲು ಸಿದ್ಧನಾಗಿರುತ್ತೇನೆ.

‘ಪ್ರಕಾಶ ನೀನು ಯಾರೋ’- ಅಂತ ಕೇಳಿದರೆ. ನನ್ನ ಉತ್ತರ- ‘ನಾನೊಬ್ಬ ಪಯಣಿಗ. ಟ್ರಾವೆಲರ್’. ಟೂರಿಸ್ಟ್‌ಗೂ ಟ್ರಾವೆಲರ್‌ಗೂ ಬಹಳ ವ್ಯತ್ಯಾಸವಿದೆ. ಟೂರಿಸ್ಟ್ ಆಗಿದ್ದರೆ ಎಲ್ಲಿ ಹೋಗುತ್ತೇವೆ, ಹೇಗೆ ಹೋಗುತ್ತೇವೆ, ಎಲ್ಲಿ ಉಳಿದುಕೊಳ್ಳುತ್ತೇವೆ, ಏನೆಲ್ಲಾ ನೋಡುತ್ತೇವೆ- ಹೀಗೆ ಪ್ರತಿಯೊಂದು ವಿಷಯವನ್ನೂ ತೀರ್ಮಾನಿಸುತ್ತೇವೆ. ಆದರೆ ಪಯಣಿಗ ಹಾಗಲ್ಲ. ಯಾವುದೇ ಪ್ಲಾನು, ನಿರ್ದಿಷ್ಟ ಗಡಿಗಳು ಇರುವುದಿಲ್ಲ. ಅವನಿಗೆ ಪಯಣಿಸಬೇಕು ಅಷ್ಟೇ. ಒಂದು ಕುರ್ಚಿಯಲ್ಲಿ ಅಲುಗಾಡದಂತೆ ಕಟ್ಟಿ ಹಾಕಿದರೂ, ನಮ್ಮ ಮನಸ್ಸು ಎತ್ತಾದರೂ ಪಯಣಿಸುತ್ತಿರುತ್ತದಲ್ಲ. ಅಂಥ ಪಯಣವದು.

ಈ ಬಸ್‌ಸ್ಟಾಪ್‌ಗಳಿವೆ ನನಗೆ. ಚೆನ್ನೈನಲ್ಲಿ ಕೈಬೀಸಿ ಕರೆಯುವ ಸಮುದ್ರ ತೀರದಲ್ಲೊಂದು ಪುಟ್ಟ ಮನೆ. ಹೈದರಾಬಾದ್– ಮಹಾಬಲಿಪುರಂಗಳಲ್ಲಿ ದಟ್ಟ ಗಿಡಮರಗಳ ತೋಟದಲ್ಲಿ ಗುಡಿಸಲು. ಮುಂಬೈಯಲ್ಲಿ ಆಕಾಶಕ್ಕೆ ಮುಖ ಮಾಡಿ ನಿಂತ 26ನೇ ಅಂತಸ್ತಿನಲ್ಲೊಂದು ಫ್ಲ್ಯಾಟ್. ಕಡಲ ಮನೆಯಲ್ಲಿ ಅಲೆಯಂತಿರುವೆ. ತೋಟದ ಮನೆಯಲ್ಲಿ ಹೂವಾಗಿ ನಗುವೆ. ಮುಂಬೈ ಮನೆಯ ಬಾಲ್ಕನಿಯಲ್ಲಿ ಕೂತರೆ, ಆಕಾಶದಲ್ಲಂದು ನಕ್ಷತ್ರವೊಂದು ಹೊಸದಾಗಿ ಮೂಡಿರುತ್ತದೆ. ಆದರೆ ತಿಂಗಳಲ್ಲಿ ಮೂರು ವಾರ ನಾನು ಇಲ್ಲೆಲ್ಲಿಯೂ ಇರುವುದಿಲ್ಲ. ಯಾವುದೋ ಒಂದು ಊರಿನಲ್ಲಿ, ಇನ್ಯಾವುದೋ ಕೆಲಸದ ನಿಮಿತ್ತ ಓಡಾಡುತ್ತಲೇ ಇರುತ್ತೇನೆ. ನಾನು ಎಲ್ಲಿರುತ್ತೇನೋ ಅದೇ ಆವತ್ತಿನ ವಿಳಾಸ, ನನ್ನ ಮನಸ್ಸಿನೊಳಗಿರುವುದು ನನ್ನ ಮನೆ. ಊರು ಬದಲಾದರೂ ಪ್ರಪಂಚಕ್ಕೆ ಒಂದೇ ಆಕಾಶ ತಾನೆ...!

***

‘ಲೋ... ಪ್ರಕಾಶ ಯಾಕೋ ಹೀಗಿದ್ದೀಯಾ...?'

‘ಹೇಗಿದ್ದೇನೆ...?'

‘ಸಿನಿಮಾದಲ್ಲಿ ಗಟ್ಟಿ ಸ್ಥಾನ, ಅವಕಾಶಗಳು ಇರುವಾಗ ಟಿ.ವಿ ಸೀರಿಯಲ್‌ಗಳಲ್ಲಿ ಏಕೆ ಆ್ಯಕ್ಟ್ ಮಾಡ್ತೀಯಾ...?’

‘ನಾನು ನಟಿಸುವವನು. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಏಕೆ ಮಾಡ್ತೀಯಾ ಅಂತ ಕೇಳಿ. ಅದು ನ್ಯಾಯವಾದ ಪ್ರಶ್ನೆ. ನಾನೊಬ್ಬ ನಟ. ನನಗೆ, ಪಾತ್ರವೋ, ಕಥೆಯೋ ಇಷ್ಟವಾದರೆ ಬೀದಿ ನಾಟಕಗಳಲ್ಲೂ ನಟಿಸುತ್ತೇನೆ’.

‘ಮೊದಲು ಈ ವಿತಂಡವಾದಗಳನ್ನು ಮಾಡೋದು ನಿಲ್ಲಿಸು... ನಟಿಸುತ್ತಾ ಚೆನ್ನಾಗಿ ಸಂಪಾದಿಸಿ, ಚೆನ್ನಾಗಿ ಕೂಡಿಡುವುದನ್ನು ಬಿಟ್ಟು, ಸಿನಿಮಾಗಳನ್ನು ನಿರ್ಮಿಸಿ ಏಕೆ ದುಡ್ಡು ಕಳಕೊಳ್ತೀಯಾ ಮಾರಾಯ...!'

‘ದ್ವಂದ್ವಾರ್ಥ ಸಂಭಾಷಣೆಗಳು, ಆಭಾಸ ತರುವ ಕಥೆಗಳನ್ನು ಒಳಗೊಂಡ ಸಿನಿಮಾ ನಿರ್ಮಿಸಿದರೆ ಸಮಾಜವನ್ನು ಕೆಡಿಸುತ್ತಿದ್ದೇನೆ ಅಂತ ಬೈಯಿ. ಆದರೆ ‘ನಾನು ನನ್ನ ಕನಸು’, ‘ಒಗ್ಗರಣೆ’, ‘ಇದೊಳ್ಳೆ ರಾಮಾಯಣ’ದಂಥ ಸಿನಿಮಾಗಳನ್ನು ನಿರ್ಮಿಸದೆ, ಸಂಪಾದಿಸಿದ್ದನ್ನೆಲ್ಲಾ ಕೂಡಿಟ್ಟು, ನನ್ನ ಮಕ್ಕಳನ್ನು ಆ ಆಸ್ತಿಗಳಿಗೆ ವಾಚ್‌ಮನ್‌ಗಳಾಗಿ ಮಾಡಲೇ...?’

‘ಅದೆಲ್ಲಾ ಸರಿ, ಎಲ್ಲವನ್ನೂ ಸಾಧಿಸಿದ ಮೇಲೆ ಹೀಗೇಕೆ ಅನವಶ್ಯಕವಾಗಿ ರಾಜಕೀಯ ಪ್ರಜ್ಞೆ, ಅದೂ ಇದೂ ಅಂತ ಜನರನ್ನು ಎದುರು ಹಾಕಿಕೊಳ್ಳುತ್ತಿದ್ದೀಯಾ...?’

‘ಕೆರೆಯ ನೀರನ್ನು ಕೆರೆಗೆ ಚೆಲ್ಲಬೇಕು. ಸಮಾಜದಿಂದ ಪಡೆದುಕೊಂಡದ್ದನ್ನು ತಿರುಗಿ ಕೊಡುವ ಮನಃಸಾಕ್ಷಿ ಬೇಕು, ಗೆಳೆಯಾ... ತುಂಬ ವಿಭಿನ್ನವಾಗಿ ಮಾತನಾಡುತ್ತಿದ್ದೀನಿ ಅಂದುಕೊಂಡಿದ್ದೀಯಾ. ನೋಡ್ತಾ ಇರು. ಎಂದಾದರೂ ಒಂದು ದಿನ ಬದುಕು ಎಲ್ಲವನ್ನೂ ನಿನಗೆ ಅರ್ಥಮಾಡಿಸುತ್ತದೆ’.

***

ಕರೆಕ್ಟ್, ನಾನು ಎಲ್ಲವನ್ನೂ ನನ್ನ ಅನುಭವದ ಮೂಲಕವೇ ತಿಳಿದುಕೊಳ್ಳಲು ಬಯಸುವೆ. ಭಾವನೆಗಳನ್ನು, ಸಂಬಂಧಗಳನ್ನು, ಕನಸುಗಳನ್ನು, ಸಂತೋಷಗಳನ್ನು, ದುಃಖಗಳನ್ನು... ಎಲ್ಲವನ್ನೂ ಅವುಗಳ ರಸಿಕನಾಗಿ ನೋಡುತ್ತಾ ಅನುಭವಿಸುವುದೇ, ಬದುಕಲ್ಲವೇ...?

ನನ್ನ ಬದುಕನ್ನು ನಾನು ಬದುಕುತ್ತೇನೆ, ಬಿಟ್ಟುಬಿಡಿ. ನಿಮ್ಮ ಭಯಗಳನ್ನ, ಆಸೆಗಳನ್ನ, ನಿಮ್ಮ ಗೊಂದಲಗಳನ್ನ ನನ್ನ ಮೇಲೆ ಹೇರಬೇಡಿ. ಪ್ಲೀಸ್. ಇನ್ನೊಬ್ಬರ ಬದುಕನ್ನು ನನ್ನಿಂದ ಬದುಕಲಾಗದು.

ಹೊತ್ತಿ ಉರಿಯುವ ಸಿಗರೇಟಿನಿಂದ ಹೊಳಪು, ಕೈಪಾತ್ರೆಯಲ್ಲೊಂದಷ್ಟು ಮಧು, ಸ್ನೇಹಿತರೋ... ಪ್ರೇಯಸಿಯರೋ... ಇವರ ನೆನಪುಗಳಲ್ಲಿ ಯಾವುದೋ ಒಂದು, ನನ್ನನ್ನು ತೀಡಿ ತೀಡಿ ಗಿಟಾರಿನಂತೆ ನುಡಿಸುತ್ತಲೇ ಇದೆ. ಸಂತೋಷವೋ, ದುಃಖವೋ ಯಾವುದೋ ಒಂದು ನನ್ನ ಬದುಕಿನ ಹಾಡನ್ನು ನನ್ನೊಳಗೆ ಗುನುಗುತ್ತಲೇ ಇದೆ. ಸುಂದರವಾಗಿ, ಸೂಕ್ಷ್ಮವಾಗಿ ನೇಯಲ್ಪಟ್ಟ ಸೀರೆಯಲ್ಲಿ ಅದರ ನೂಲಿನ ಆರಂಭವನ್ನು ಹುಡುಕುವ ಹಾಗೇ ನನ್ನ ಬದುಕಿನ ಹುಡುಕಾಟ.

ನನ್ನ ಮಾತೃಭಾಷೆ ಕನ್ನಡವಾದರೂ ಕೆಲವೊಮ್ಮೆ ತೆಲುಗಿನಲ್ಲಿ ಚಿಂತಿಸುತ್ತೇನೆ, ತಮಿಳಿನಲ್ಲಿ ಬಾಳುತ್ತೇನೆ. ಇಂಗ್ಲಿಷ್ ಒಂದನ್ನು ಇಟ್ಟುಕೊಂಡು ಪ್ರಪಂಚವೆಲ್ಲಾ ತಿರುಗುತ್ತೇನೆ. ‘ಜಪಾನ್ ಭಾಷೆಯ ಸಿನಿಮಾದಲ್ಲಿ ನಟಿಸುತ್ತೀಯಾ ಪ್ರಕಾಶ’ ಎಂದರೆ- ‘ಒಂದೆರಡು ವಾರ ಟೈಂ ಕೊಡಿ. ಜಪಾನ್ ಭಾಷೆ ಕಲಿತು ನನ್ನ ದನಿಯಲ್ಲೇ ಆ ಭಾಷೆ ಮಾತನಾಡುವೆ’ ಎನ್ನುವೆ. ನನಗೆ ಯಾವುದನ್ನೇ ಆದರೂ ಕಲಿಯಬೇಕು, ತಿಳಿದುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು, ರುಚಿ ಕಂಡುಕೊಳ್ಳಬೇಕು, ಎಲ್ಲದರ ರಸಿಕನಾಗಿರಬೇಕು ಎನ್ನುವ ತವಕ. ಆದ್ದರಿಂದಲೇ ಎಲ್ಲ ಭಾಷೆಗಳೂ ನನ್ನ ಭಾಷೆಗಳಾಗಿವೆ. ಪ್ರೇಮ, ಕಾಮ, ಶೋಕ, ಸಂತೋಷ, ದುಡಿಮೆ, ಸೋಮಾರಿತನ ಎನ್ನುವ ವಿಧವಿಧವಾದ ಕೊರತೆಗಳಿಂದಲೂ, ಗುಣಗಳಿಂದಲೂ ಬದುಕುವ ಮನುಷ್ಯರೊಂದಿಗೆ, ಅದೇ ಗುಣಗಳೊಂದಿಗೂ, ಕೊರತೆಗಳೊಂದಿಗೂ ಬದುಕುವ ಮನುಷ್ಯನಾಗಿದ್ದಾನೆ ಪ್ರಕಾಶ್ ರೈ/ರಾಜ್.

ನನ್ನ ಮಗ ಸಿದ್ಧಾರ್ಥ ನನ್ನನ್ನು ಅಗಲಿ ಹೋದ. ಸುಂದರ ಕವಿತೆಯಂತೆ ಅವನಿದ್ದ. ಆಟವಾಡುವಾಗ ಎಡವಿಬಿದ್ದು ಪೆಟ್ಟಾಯಿತು. ಆಸ್ಪತ್ರೆಗೆ ಸೇರಿಸಿದೆವು. ಒಂದು ರಾತ್ರಿ ಕನಸಿನಂತೆ, ಕರ್ಪೂರದಂತೆ ಗಾಳಿಯಲ್ಲಿ ಕರಗಿಹೋದ. ತೋಟದಲ್ಲಿ ಅವನನ್ನು ಸಮಾಧಿ ಮಾಡಿದೆ. ಅಲ್ಲಿ ಈಗ ಹೂವಾಗಿ ಅರಳಿ, ನಗುತ್ತಿದ್ದಾನೆ. ‘ಟಂಡಣಕಾ, ಟಂಡಣಕಾ, ಣಕಾ ಣಕಾ ಟಂಡಣಕಾ...’ ಎಂದು ನಾನು ಗುನುಗಿದರೆ ಗಿಡಮರಗಳಲ್ಲಿ ಅವನ ಕೈಗಳಂತಿರುವ ಕೊಂಬೆಗಳು ತಾಳ ಹಾಕುತ್ತಿವೆ.

ಸಿದ್ಧಾರ್ಥನ ಬದಲಿಗೆ ಈ ನನ್ನ ಪ್ರಪಂಚಕ್ಕೆ ಬಂದವಳು ಪುಟ್ಟ ಮಗಳು ಮೇಘನಾ. ಅವನ ನೆನಪಾದಾಗ ಅಳು ಉಕ್ಕಿ ಬರುತ್ತದೆ. ಆದರೆ ಇವಳಾರೋ ಒಬ್ಬಳು, ಮೇಘನಾ ಅಂತ. ಹೊಸದಾಗಿ ಬಂದು ಕಿಲ ಕಿಲ ಅಂತ ತಾನು ನಗುತ್ತಾ, ನನ್ನನ್ನೂ ನಗಿಸುತ್ತಿದ್ದಾಳೆ.

ಬದುಕಿನ ಎಂಥ ಡಿಸೈನ್ ಅಪ್ಪಾ ಇದು.

ಹೀಗೆ ಬಹಳಷ್ಟು ಮಾತನಾಡೋಣ. ನನ್ನ ಪಯಣಗಳ ಭಾಗವಾಗಿಯೇ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಸಣ್ಣ ಝರಿಯಲ್ಲಿ ನೀರಿನಾಟವಾಡುವಂತೆ, ಹಾಡೊಂದನ್ನು ನಾವಿಬ್ಬರೂ ಸೇರಿ ಗುನುಗುವಂತೆ, ಮಳೆಯಲ್ಲಿ ಮಕ್ಕಳಾಗಿ ಕುಣಿಯುವಂತೆ... ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

Come, let’s start the music...

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry