ನನಸಾಗಲಿ `ನಾಗರಿಕ ಬಜೆಟ್' ಎಂಬ ಕನಸು

7

ನನಸಾಗಲಿ `ನಾಗರಿಕ ಬಜೆಟ್' ಎಂಬ ಕನಸು

ಡಾ.ಆರ್.ಬಾಲಸುಬ್ರಹ್ಮಣ್ಯಂ
Published:
Updated:
ನನಸಾಗಲಿ `ನಾಗರಿಕ ಬಜೆಟ್' ಎಂಬ ಕನಸು

ಫೆಬ್ರುವರಿ 8ರಂದು ರಾಜ್ಯ ಬಜೆಟ್ ಮಂಡಿಸಲಿರುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇತ್ತೀಚೆಗೆ ಪ್ರಕಟಿಸಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಅವರು ಈ ಘೋಷಣೆ ಮಾಡಿರುವುದರ ಹಿಂದೆ, ತಮ್ಮ ಸರ್ಕಾರ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸುವ ಉದ್ದೇಶದ ಹೊರತು ಬೇರೇನೂ ಇದ್ದಂತೆ ಕಾಣುವುದಿಲ್ಲ.

ಕಳೆದ ವರ್ಷ ಆಗಿನ ಮುಖ್ಯಮಂತ್ರಿ, ರಾಜ್ಯದಲ್ಲೇ ಮೊದಲ ಬಾರಿಗೆ ತಾವು ಬೃಹತ್ ಬಜೆಟ್ ಮಂಡಿಸಿ ಅತಿ ದೊಡ್ಡ ರಾಜಕೀಯ ಸಾಧನೆ ಮಾಡಿರುವುದಾಗಿ ಬಣ್ಣಿಸಿಕೊಂಡಿದ್ದರು. ಆದರೆ, ಆ ಹಣವನ್ನು ನಿಜಕ್ಕೂ ಖರ್ಚು ಮಾಡಿದ ಬಗ್ಗೆ ಯಾವುದೇ ವಿಶ್ಲೇಷಣೆಯಾಗಲೀ ಸ್ಪಷ್ಟನೆಯಾಗಲೀ ನಮಗೆ ಸಿಗಲಿಲ್ಲ. ಅಲ್ಲದೆ, ಅಂತಹ ಬೃಹತ್ ಬಜೆಟ್ ರಾಜ್ಯದ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮವೇನು ಮತ್ತು ಅದರಿಂದ ನಾಗರಿಕರಿಗೆ ಆದ ಲಾಭವೇನು ಎಂಬುದು ಸಹ ಸ್ಪಷ್ಟವಾಗಲಿಲ್ಲ.

ನನಗಿನ್ನೂ ಚೆನ್ನಾಗಿ ನೆನಪಿದೆ. ನಾನು ಚಿಕ್ಕವನಿದ್ದಾಗ ಪತ್ರಿಕೆಗಳಲ್ಲಿ ಬರುತ್ತಿದ್ದ ಬಜೆಟ್ ಭಾಷಣವನ್ನು ನನ್ನ ತಂದೆ, ಅದೊಂದು ಪರಮ ಪವಿತ್ರವಾದ ಕರ್ತವ್ಯವೇನೋ ಎಂಬಂತೆ ಓದುತ್ತಿದ್ದರು. ಆದರೆ ಅದಕ್ಕೆ ಅವರು ಯಾಕೆ ಅಷ್ಟೊಂದು ಮಹತ್ವ ಕೊಡುತ್ತಿದ್ದರು ಎಂಬುದು ಆಗ ನನಗೆ ತಿಳಿದಿರಲಿಲ್ಲ. ಎಷ್ಟೇ ಆಗಲಿ, ನಾವು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದೆವು ಮತ್ತು ನನ್ನ ತಂದೆ ಮಧ್ಯಮ ದರ್ಜೆಯ ಸರ್ಕಾರಿ ಅಧಿಕಾರಿಯಾಗಿದ್ದರು.

ಆದರೆ ವರ್ಷಂಪ್ರತಿ ನಡೆಯುವ ಈ ಬೆಳವಣಿಗೆ ಪ್ರತಿ ಭಾರತೀಯನ ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ನಂತರವಷ್ಟೇ ನನಗೆ  ಅರ್ಥವಾಗುತ್ತಾ ಹೋಯಿತು. ಅದು ಹೊಸ ತೆರಿಗೆ ಜಾರಿಯೇ ಆಗಿರಬಹುದು, ಸಬ್ಸಿಡಿ ಹಿಂತೆಗೆತ ಇರಬಹುದು, ನೂತನ ಕಾರ್ಯಕ್ರಮ, ಸರ್ಕಾರದ ಹೊಸ ಪ್ರಯತ್ನ ಅಥವಾ ಪರಿಷ್ಕೃತ ನೀತಿ ಆಗಿರಬಹುದು... ಎಲ್ಲವೂ ತಮ್ಮದೇ ಆದ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಸಾಮಾನ್ಯವಾಗಿ ಬಜೆಟ್‌ನಂತಹ ಮಹತ್ವದ ಪ್ರಕ್ರಿಯೆಯನ್ನು ರಚಿಸಿ, ಅಂತಿಮಗೊಳಿಸುವವರು ಒಂದಷ್ಟು ಅಧಿಕಾರಿಗಳು ಮತ್ತು ಕೆಲ ರಾಜಕಾರಣಿಗಳನ್ನು ಒಳಗೊಂಡ ಬಳಗ ಮಾತ್ರ. ಇಂತಹದ್ದೊಂದು ಪ್ರಮುಖ ಕ್ರಿಯೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ತೀರಾ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಗಣ್ಯ ನಾಗರಿಕರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದೆ.ನಮ್ಮ ಬಜೆಟ್‌ನ್ನು ಪಾರದರ್ಶಕ, ಅರ್ಥಪೂರ್ಣ ಆಗಿಸಲು ಹಾಗೂ ಅದು ನೀಡುವ ಭರವಸೆಗಳಿಗೆ ಸರ್ಕಾರವನ್ನು ಹೊಣೆ ಮಾಡಲು ಇಷ್ಟು ಸಾಕೇ? ಬಜೆಟ್ ಮೇಲೆ ಚರ್ಚೆ ನಡೆಸಿ ಅದಕ್ಕೆ ಅಂಗೀಕಾರ ನೀಡುವುದು ಶಾಸಕಾಂಗದ ಪ್ರಮುಖ ಕಾರ್ಯ ಆಗಿರುವಾಗ, ತಮ್ಮ ಆಕಾಂಕ್ಷೆಗಳನ್ನು ಅರುಹಲು ಮತ್ತು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಜನಸಾಮಾನ್ಯರನ್ನು ಪ್ರೋತ್ಸಾಹಿಸುವ ಅಗತ್ಯ ಇಲ್ಲವೇ? ಇದೆ ಎಂದಾದರೆ, ತಾನು ಅತ್ಯಂತ ಪವಿತ್ರ ಹಾಗೂ ವಿಶೇಷವಾದ ರಹಸ್ಯ ಕಾರ್ಯ ಎಂದು ಪರಿಗಣಿಸಿರುವ ಈ ಪ್ರಕ್ರಿಯೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಗೆ ಸರ್ಕಾರ ಅನುವು ಮಾಡಿಕೊಡುವುದೇ?

ಆಡಳಿತದ ಏಣಿ: ಕಳೆದ ದಶಕದಿಂದ ಕೆಲವು ದೇಶಗಳು ಬಜೆಟ್ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ಆಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವುದನ್ನು ನಾವು ಕಾಣುತ್ತಿದ್ದೇವೆ. ಅಂತರ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯೊಂದು 85 ದೇಶಗಳಲ್ಲಿ ನಡೆಸಿದ ಸಮೀಕ್ಷೆಯನ್ನು ಆಧರಿಸಿದ `ಮುಕ್ತ ಬಜೆಟ್ ಸೂಚ್ಯಂಕ'ದ ಬಗ್ಗೆ ಬ್ರಿಟನ್ ನಿಯತಕಾಲಿಕ `ದಿ ಎಕಾನಮಿಸ್ಟ್' ವರದಿ ಮಾಡಿದೆ. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ, ಬ್ರಿಟನ್‌ನಂತಹ ದೇಶಗಳು ಮುಂಚೂಣಿಯಲ್ಲಿದ್ದರೆ, ಭಾರತ ಕೆಳ ಹಂತದಲ್ಲಿರುವುದು ತಿಳಿದುಬರುತ್ತದೆ.ಬಹುತೇಕ ಬಡ ರಾಷ್ಟ್ರಗಳು ಪಟ್ಟಿಯಲ್ಲಿ ಕೆಳಗಿನ ಸ್ಥಾನ ಪಡೆದಿರುವುದನ್ನು ನೋಡಿದರೆ ಬಡತನಕ್ಕೂ ಬಜೆಟ್‌ನ ಅಪಾರದರ್ಶಕತೆಗೂ ಸಂಬಂಧ ಇದೆ ಎಂದು ನಂಬುವಂತೆ ಆಗುತ್ತದೆ. ಮಧ್ಯಮ ಆರ್ಥಿಕತೆಯನ್ನು ಹೊಂದಿರುವ ಚೀನಾ ಮತ್ತು ನೈಜೀರಿಯಾ ದೇಶಗಳು ಈ ಪಟ್ಟಿಯಲ್ಲಿ ಕಡೆಯಲ್ಲಿವೆ. ಪ್ರತಿ ವರ್ಷವೂ ತಮ್ಮ ಬಜೆಟ್ ತಯಾರಿಕಾ ಪ್ರಕ್ರಿಯೆಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಮೂಲಕ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಡಳಿತದ ಏಣಿಯನ್ನು ಏರಲು ಸಾಧ್ಯ.

ಆದರೆ ಅದನ್ನು ಕಾರ್ಯರೂಪಕ್ಕೆ ತರಲು ರಾಜಕೀಯ ಮತ್ತು ಅಧಿಕಾರಶಾಹಿ ಮನಸ್ಸು ಮಾಡಬೇಕು ಅಷ್ಟೆ.

ತಾವು ಮಾಡುವ ಕೆಲಸಕ್ಕೆ ಹಾಗೂ ಅದನ್ನು ಕಾರ್ಯರೂಪಕ್ಕೆ ತರುವ ರೀತಿಗೆ ಸರ್ಕಾರಗಳು ನಾಗರಿಕರಿಗೆ ಹೊಣೆ ಆಗಿರುತ್ತವೆ.

ಹೊಣೆ ಆಗುವುದು ಎಂದರೆ, ಸರ್ಕಾರ ಜಾರಿಗೆ ತರುವ ನೀತಿಗಳು ಹಾಗೂ ಯೋಜನೆಗಳು ಜನರ ಆದ್ಯತೆ, ಅಗತ್ಯ ಮತ್ತು ಆಕಾಂಕ್ಷೆಗಳನ್ನು ಪ್ರತಿಫಲಿಸಬೇಕು ಎಂದರ್ಥ. ತನ್ನ ನೀತಿಗಳು, ಯೋಜನೆಗಳ ಜಾರಿಗಾಗಿ ಕೈಗೊಂಡ ಕ್ರಮಗಳನ್ನು ಫಲಿತಾಂಶದ ಸಮೇತ ಜನರ ಮುಂದಿಡುವುದು ಸಹ ಹೊಣೆಗಾರಿಕೆ ಎನಿಸಿಕೊಳ್ಳುತ್ತದೆ. ಈ ರೀತಿ ಸರ್ಕಾರಗಳು ಜವಾಬ್ದಾರಿ ಹೊರುವಂತೆ ಮಾಡುವುದು ನಾಗರಿಕರ ಕರ್ತವ್ಯ. ಅದಕ್ಕಾಗಿ ಅವರು ಸಾರ್ವಜನಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು, ತಾವು ನಂಬಿದ ಮಂದಿಗೆ ಮತ ಚಲಾಯಿಸಬೇಕು, ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಬೇಕು, ಅದರ ನೀತಿಗಳು, ಯೋಜನೆಗಳನ್ನು ವಿಮರ್ಶಿಸಬೇಕು ಮತ್ತು ದಾರಿ ತಪ್ಪುತ್ತಿರುವುದು ಕಂಡುಬಂದಾಗ ಪ್ರಶ್ನೆ ಮಾಡಬೇಕು.

ಇಂತಹದ್ದೊಂದು ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರಗಳು ಮೊದಲು ಮುಂದಡಿ ಇಡಬೇಕು. ಅರ್ಥಪೂರ್ಣವಾದ ರೀತಿಯಲ್ಲಿ ನಾಗರಿಕರು ಪಾಲ್ಗೊಳ್ಳುವಂತಹ ವಾತಾವರಣವನ್ನು ನಿರ್ಮಿಸಿ ಅವರನ್ನು ಪ್ರೋತ್ಸಾಹಿಸಬೇಕು. ನಾಗರಿಕರು ಸರ್ಕಾರಿ ಮಾಹಿತಿ ಪಡೆಯುವುದನ್ನು ಸುಲಭಸಾಧ್ಯ ಆಗಿಸುವ ಮೂಲಕ ಈ ಕಾರ್ಯ ಆರಂಭವಾಗಬೇಕು. ಹಾಗೆಂದರೆ ಬರೀ ದಾಖಲೆಗಳನ್ನು ಒದಗಿಸುವುದಷ್ಟೇ ಅಲ್ಲ, ಅವರಿಗೆ ಅದು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗುತ್ತದೆ.

ಸರ್ಕಾರದ ಕಾರ್ಯ ಅತ್ಯಂತ ತಾಂತ್ರಿಕ ಮಟ್ಟದಲ್ಲಿ ಇದ್ದಾಗ, ತಾಂತ್ರಿಕ ದಾಖಲೆಗಳು ಲಭ್ಯವಾಗುವಂತೆ ನೋಡಿಕೊಂಡರಷ್ಟೇ ಸಾಲದು. ಸಂಕೀರ್ಣವಾದ ಪರಿಕಲ್ಪನೆಗಳು ಮತ್ತು ರೂಢಿಗತವಲ್ಲದ ಪರಿಭಾಷೆಗಳಿಂದ ಸಾಮಾನ್ಯ ಜನರು ತಬ್ಬಿಬ್ಬಾಗಬಹುದು.

ಹೀಗಾಗಿ ಮಾಹಿತಿ ಒದಗಿಸುವುದು ಎಂದರೆ, ಸಾಮಾನ್ಯ ಜನರು ಅರ್ಥ ಮಾಡಿಕೊಂಡು ಗ್ರಹಿಸಬಹುದಾದ ಭಾಷೆ ಹಾಗೂ ಶೈಲಿಯಲ್ಲಿ ನೀಡುವುದು ಎಂದರ್ಥ. ಇದು ಬರೀ ಬಜೆಟ್‌ಗಷ್ಟೇ ಅಲ್ಲ, ಸರ್ಕಾರದ ಇತರ ಯಾವುದೇ ನೀತಿ ಮತ್ತು ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಳಿಗೂ ಅನ್ವಯವಾಗುತ್ತದೆ. ಬಜೆಟ್‌ನ ಪ್ರಮುಖ ದಾಖಲೆಗಳಾದ ಬಜೆಟ್ ಪೂರ್ವ ಹೇಳಿಕೆ ಮತ್ತು ಆರ್ಥಿಕ ಸಮೀಕ್ಷೆಗಳು, ಕಾರ್ಯಾಂಗದ ಬಜೆಟ್ ಪ್ರಸ್ತಾವ, ಬಜೆಟ್ ವಿಧಾಯಕಗಳು, ವಾರ್ಷಿಕ, ಅರೆ ವಾರ್ಷಿಕ, ವರ್ಷಾಂತ್ಯದ ವರದಿಗಳು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಗಳು ಹಾಗೂ ಮಹಾಲೇಖಪಾಲರ ಲೆಕ್ಕಪರಿಶೋಧನಾ ವರದಿಯ ದಾಖಲೆಗಳು ಜನರಿಗೆ ಸಿಗುವಂತೆ ಇರಬೇಕು.

ಸರ್ಕಾರ ಸಾರ್ವಜನಿಕರಿಂದ ಹೇಗೆ ಹಣವನ್ನು ಒಟ್ಟುಗೂಡಿಸುತ್ತಿದೆ ಮತ್ತು ಅದನ್ನು ಯಾವ ರೀತಿ ಖರ್ಚು ಮಾಡುತ್ತಿದೆ ಎಂಬುದರ ಸ್ಪಷ್ಟ ಚಿತ್ರಣ ಪಡೆಯಲು ಜನರಿಗೆ ಇದು ಅವಶ್ಯಕ. ಸರ್ಕಾರ ಸಿದ್ಧಪಡಿಸುವ ಎಂದಿನ ಈ ಬಜೆಟ್ ಮತ್ತು ಲೆಕ್ಕಪರಿಶೋಧನಾ ದಾಖಲೆಗಳ ಜೊತೆಗೆ `ನಾಗರಿಕ ಬಜೆಟ್' ಎಂಬ ಹೆಚ್ಚುವರಿ ದಾಖಲೆಯನ್ನೂ ಸರ್ಕಾರ ಹೊಂದಬೇಕಾಗುತ್ತದೆ. ಇದು ಸಾಮಾನ್ಯ ಜನರಿಗೆಂದೇ ವಿಶೇಷವಾಗಿ ಸಿದ್ಧಗೊಂಡ ಮತ್ತು ಯಾವುದೇ ಮುಚ್ಚುಮರೆ ಇಲ್ಲದೆ ಅಭಿವೃದ್ಧಿ ಪಡಿಸಿದ ದಾಖಲೆ ಆಗಿರಬೇಕಾಗುತ್ತದೆ.ಆದರೆ ಈಗ ಇತರ ದಾಖಲೆಗಳು ಸಾಕಷ್ಟು ಅಂಕಿ ಸಂಖ್ಯೆಯಿಂದಾಗಿ ತಾಂತ್ರಿಕ ಗೋಜಲುಗಳಿಂದ ಕೂಡಿದ್ದು, ಸಾಮಾನ್ಯ ಓದುಗರಿಗೆ ಅರ್ಥವೇ ಆಗದಂತೆ ಇರುತ್ತವೆ. `ನಾಗರಿಕ ಬಜೆಟ್' ಇಂತಹ ಅಡೆತಡೆಗಳಿಗೆ ಹೊರತಾಗಿರಬೇಕು. ಆವರೆಗೆ ಬಜೆಟ್‌ನ ಗಂಧ ಗಾಳಿ ಸಹ ಅರಿಯದ ಮತ್ತು ಯಾವುದೇ ರೀತಿಯ ತಾಂತ್ರಿಕ ಪರಿಣತಿ ಇಲ್ಲದ ಓದುಗರು ಅಥವಾ ಬಳಕೆದಾರರು ಸಹ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು.

ಜನರ ಹಣ: ಸರ್ಕಾರದ ಹಣ ಜನರ ಹಣ ಎಂಬುದನ್ನು ನಾವು ಮರೆಯಬಾರದು. ಜನ ಕಟ್ಟುವ ತೆರಿಗೆ ಮತ್ತು ಶುಲ್ಕದಿಂದ, ಜನರಿಗೆ ಸೇರಿದ ರಾಷ್ಟ್ರೀಯ ಸಂಪತ್ತಿನ ಭಾಗವಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಿಂದ ಸರ್ಕಾರಕ್ಕೆ ಹಣ ಬರುತ್ತದೆ. ಒಂದು ವೇಳೆ ಸಾಲದ ರೂಪದಲ್ಲಿ ಹಣ ಬಂದರೂ ಅಂತಿಮವಾಗಿ ಅದನ್ನು ತೀರಿಸುವವರು ಸಾರ್ವಜನಿಕರೇ. ಈ ಹಣಕ್ಕೆ ಸರ್ಕಾರವು ಜನರಿಗೆ ಹೊಣೆಯಾಗಿರುತ್ತದೆ. ತಾನು ಅಭಿವೃದ್ಧಿಪಡಿಸಿದ ಬಜೆಟ್ ಸಾರ್ವಜನಿಕವಾಗಿ ಸಿಗುವಂತೆ ನೋಡಿಕೊಳ್ಳುವುದೇ  ಅದರ ಹೊಣೆಗಾರಿಕೆ ಪ್ರದರ್ಶನಕ್ಕೆ ಇರುವ ಒಂದು ಮಾರ್ಗ. ಹಣವನ್ನು ಹೇಗೆ ವ್ಯಯಿಸಲಾಗಿದೆ ಎಂದು ವಿವರಿಸುವ ಆರ್ಥಿಕ ವರದಿಗಳನ್ನು ಪ್ರಕಟಿಸುವುದು ಈ ನಿಟ್ಟಿನಲ್ಲಿ ಮತ್ತೊಂದು ಮಾರ್ಗ.

ಬಜೆಟ್ ಮಾಹಿತಿ ಕೆಲವೊಮ್ಮೆ ಅತ್ಯಂತ ಸಂಕೀರ್ಣವಾಗಿದ್ದು, ಸವಾಲು ಒಡ್ಡುವಂತೆ ಇರಬಹುದು. ಸರ್ಕಾರದ ವಿವಿಧ ಇಲಾಖೆಗಳು ವಿವಿಧ ಸಂದರ್ಭಗಳಲ್ಲಿ ಒದಗಿಸಿದ ಮಾಹಿತಿಯನ್ನು ಅದು ಹೊಂದಿರಬಹುದು, ಆ ಮಾಹಿತಿ ಹಲವೆಡೆ ಹಂಚಿ ಹೋಗಿರಬಹುದು. ಬಹುತೇಕ ಸಂದರ್ಭಗಳಲ್ಲಿ ಅದು ಸರ್ಕಾರದ ಆಂತರಿಕ ಬಳಕೆಗಾಗಿ ಬರೆದುಕೊಂಡ ದಾಖಲೆಯೂ ಆಗಿರಬಹುದು. ಹೀಗಾಗಿ ಅದರಲ್ಲಿ ಜನಸಾಮಾನ್ಯರಿಗೆ ಅರ್ಥವಾಗದಂತಹ ತಾಂತ್ರಿಕ ಅಂಶಗಳೇ ಬಳಕೆಯಾಗಿರುವ ಸಂಭವ ಹೆಚ್ಚಾಗಿರುತ್ತದೆ.ತಮಗಾಗಿ ಏನನ್ನು ಮಂಡಿಸಲಾಗಿದೆ ಎಂಬುದು ಅರ್ಥವಾಗದೇ ಹೋದಾಗ ಜನ ಆ ಬಗ್ಗೆ ಪ್ರಶ್ನೆಗಳನ್ನು ಕೇಳಲಾರರು. ಆಗ ಸರ್ಕಾರವನ್ನು ಹೊಣೆ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. `ನಾಗರಿಕ ಬಜೆಟ್' ಇಂತಹ ಕೊರತೆಗಳನ್ನೆಲ್ಲ ನೀಗುವಂತಿರಬೇಕು. ಅದು ಇಡೀ ಬಜೆಟ್‌ನ ಮೂಲ ಮಾಹಿತಿಯ ಸಾರಾಂಶವನ್ನು ಸರಳ ಮತ್ತು ಸ್ಪಷ್ಟವಾದ ಭಾಷೆಯಲ್ಲಿ ವಿವರಿಸುವ ದಾಖಲೆಯಂತೆ ಇರಬೇಕು.

ಆಗ ಬಜೆಟ್ ಅನ್ನು ಅರ್ಥ ಮಾಡಿಕೊಳ್ಳಲು ಸಮರ್ಥರಾಗುವ ನಾಗರಿಕರು, ಸರ್ಕಾರ ತಮ್ಮ ಹೆಸರಿನಲ್ಲಿ ಮಾಡಿದ ಕಾರ್ಯಕ್ಕೆ ವಿವರಣೆ ಬಯಸಿ ಪ್ರಶ್ನೆಗಳನ್ನು ಕೇಳಲು ಮುಂದಾಗುತ್ತಾರೆ. ಆ ಮೂಲಕ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಲು ಸಮರ್ಥರಾಗುತ್ತಾರೆ.

ಎಷ್ಟೇ ಆಗಲಿ `ನಾಗರಿಕ ಬಜೆಟ್'ನ ಮೊದಲ ಫಲಾನುಭವಿಗಳು ನಾಗರಿಕರೇ ಅಲ್ಲವೇ? ಈ ಬಜೆಟ್‌ನ ಪ್ರಮುಖ ಉದ್ದೇಶ, ಸರ್ಕಾರದ ಕಾರ್ಯವೈಖರಿ ಬಗ್ಗೆ ಅವರ ತಿಳಿವಳಿಕೆಯನ್ನು ವಿಸ್ತರಿಸುವುದು ಮತ್ತು ಅದರಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗುವಂತೆ ನೋಡಿಕೊಳ್ಳುವುದೇ ಆಗಿರುತ್ತದೆ. `ನಾಗರಿಕ ಬಜೆಟ್'ನಿಂದ ಸರ್ಕಾರಕ್ಕೂ ಲಾಭವಿದೆ. ಬಜೆಟ್ ಬಗ್ಗೆ ಸಾರ್ವಜನಿಕರ ಅರಿವಿನ ವ್ಯಾಪ್ತಿ ವಿಸ್ತರಿಸುವ ಅವಕಾಶ ಸರ್ಕಾರಕ್ಕೆ ಲಭಿಸುತ್ತದೆ. ಬಜೆಟ್ ಕುರಿತ ತನ್ನ ದೃಷ್ಟಿಕೋನವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಮಾಧ್ಯಮವಾಗಿಯೂ ಅದು ಕೆಲಸ ಮಾಡುತ್ತದೆ.

ದುರಾಡಳಿತ ಮತ್ತು ಭ್ರಷ್ಟಾಚಾರದ ಈ ದಿನಗಳಲ್ಲಿ ಜನರೆಡೆಗಿನ ತನ್ನ ಹೊಣೆಗಾರಿಕೆಯನ್ನು ಪ್ರದರ್ಶಿಸಲು ಸರ್ಕಾರಕ್ಕೆ ಸಿಗುವ ಒಂದು ಪರಿಣಾಮಕಾರಿ ಮಾರ್ಗವೂ ಅದಾಗಬಲ್ಲದು. ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಬಜೆಟ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಮಾತ್ರವಲ್ಲ, ಅದು ತಮ್ಮ ಕಲ್ಯಾಣದ ಕೀಲಿ ಕೈ ಸಹ ಎಂಬುದನ್ನು ಬಹುತೇಕ ನಾಗರಿಕರು ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಹೀಗಾಗಿ, ನಿರ್ಣಾಯಕವಾದ ಆರ್ಥಿಕ ನೀತಿಗೆ ಸಂಬಂಧಿಸಿದ ಮಾಹಿತಿಗಳು ಮತ್ತು ಬಜೆಟ್ ನಿರ್ಧಾರಗಳನ್ನು ಜನಸಾಮಾನ್ಯರ ಗ್ರಹಿಕೆಗೆ ನಿಲುಕುವಂತೆ ಮಾಡುವ ಸಮರ್ಥ ಪ್ರಯತ್ನವು, ಸರ್ಕಾರದ ನ್ಯಾಯಸಮ್ಮತ ನಡವಳಿಕೆಯ ಬಗ್ಗೆ ಅವರಲ್ಲಿ ಗೌರವ ಹೆಚ್ಚುವಂತೆ ಮಾಡುತ್ತದೆ.

ಜನರಿಗೆ ಶಿಕ್ಷಣ ನೀಡುವ ಸಾಧನವಾಗಿ, ಸರ್ಕಾರಿ ವ್ಯವಹಾರಗಳಲ್ಲಿ ಅವರು ಸ್ವತಃ ಪಾಲ್ಗೊಳ್ಳಲು ಪ್ರೋತ್ಸಾಹ ನೀಡುವ ಮಾರ್ಗವಾಗಿಯೂ `ನಾಗರಿಕ ಬಜೆಟ್' ಬಳಕೆಯಾಗಬಲ್ಲದು. ಬಜೆಟ್‌ನ್ನು ಹೇಗೆ ರಚಿಸಿ ಜಾರಿಗೆ ತರಲಾಗುತ್ತದೆ, ಪ್ರತಿ ಹಂತದಲ್ಲೂ ಅದರ ನಿರ್ವಹಣೆಯ ಹೊಣೆ ಯಾರದು ಎಂಬುದನ್ನು ತಿಳಿಸಿಕೊಡುವ ವಾಹಕ ಸಹ ಅದಾಗಿರುತ್ತದೆ. ಇದೇ ವೇಳೆ, ರಾಜಕೀಯ ಹಿತಾಸಕ್ತಿಗಳು ಅದನ್ನು ತಮ್ಮ ಪ್ರಚಾರದ ಭಾಗವನ್ನಾಗಿ ಮಾಡಿಕೊಳ್ಳದಂತೆ ನಾವು ಎಚ್ಚರ ವಹಿಸಬೇಕಾಗುತ್ತದೆ.

ವಿವಿಧ ಬಗೆಯ ಕಾರ್ಯ ನಿರ್ವಹಣೆ ಮತ್ತು ಸೇವೆ ಒದಗಿಸುವಿಕೆ ಸರ್ಕಾರದ ಯಾವ ಯಾವ ಹಂತದಲ್ಲಿ ಹೇಗೆ ನಡೆಯುತ್ತದೆ ಮತ್ತು ನಿರ್ದಿಷ್ಟವಾಗಿ ಯಾವ ಇಲಾಖೆ ಅದರ ಹೊಣೆಗಾರಿಕೆ ಹೊತ್ತಿರುತ್ತದೆ ಎಂಬುದನ್ನು ಸರ್ಕಾರ `ನಾಗರಿಕ ಬಜೆಟ್'ನ ಮೂಲಕ ಸ್ಪಷ್ಟಪಡಿಸಬಹುದು. ಇದರಿಂದ, ಮಾಹಿತಿ ಕೋರಿ ಬರುವ ಹಲವಾರು ಅಸಮಂಜಸ ಕೋರಿಕೆಗಳನ್ನು ಕಡಿಮೆ ಮಾಡಿ, ಸರ್ಕಾರದ ಕಾರ್ಯ ಬಾಹುಳ್ಯವನ್ನು ತಗ್ಗಿಸಬಹುದು. ಈ ಬಜೆಟ್‌ನ ತಿರುಳು ಸೂಕ್ತವಾಗಿದ್ದು ಅದನ್ನು ಮಂಡಿಸುವ ರೀತಿ ಸಮರ್ಪಕವೂ, ಪ್ರೋತ್ಸಾಹದಾಯಕವೂ ಆಗಿದ್ದ ಪಕ್ಷದಲ್ಲಿ, ಅದು ಸರ್ಕಾರ ಮತ್ತು ನಾಗರಿಕರ ನಡುವಿನ ಚರ್ಚೆಗೆ ನೆರವಾಗುವ ಅಮೂಲ್ಯವಾದ ಸಾಧನ ಆಗಬಲ್ಲದು.

ಇಂತಹದ್ದೊಂದು `ನಾಗರಿಕ ಬಜೆಟ್'ನ್ನು ಸಿದ್ಧಪಡಿಸಿ ಮಂಡಿಸುವುದಕ್ಕೆ ಸಾಕಷ್ಟು ರಾಜಕೀಯ ಎದೆಗಾರಿಕೆ ಮತ್ತು ಇಚ್ಛಾಶಕ್ತಿ ಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವ ಮತ್ತು ನಾಗರಿಕರ ಹಕ್ಕುಗಳ ಬಗ್ಗೆ ನಂಬಿಕೆ ಹೊಂದುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಬಹುದು. ಅದಕ್ಕೆ, ಸರ್ಕಾರ ಎಂದರೆ ಆಶ್ರಯದಾತ ಎಂಬ ಚಿಂತನಾ ಧಾಟಿ ಬದಲಾಗಿ, ಸಬಲ ಮತ್ತು ಪ್ರಬುದ್ಧ ನಾಗರಿಕರ ಪಾತ್ರವನ್ನು ಗುರುತಿಸುವ ಕಾರ್ಯ ಆರಂಭವಾಗಬೇಕಿದೆ. ಈ ಎಲ್ಲ ಕೆಲಸಗಳೂ ನಡೆದಾಗಷ್ಟೇ ನಮ್ಮ ಮುಖ್ಯಮಂತ್ರಿಗಳು ಮತ್ತು ಸರ್ಕಾರಗಳು ತಾವು ಉತ್ತಮ ಆಡಳಿತ ನೀಡುತ್ತಿರುವುದಾಗಿ ಹೇಳಿಕೊಳ್ಳಬಹುದು. ಅಲ್ಲಿಯವರೆಗೂ ಅವರು ವರ್ಷವರ್ಷಕ್ಕೂ ನೀಡುವ ಅದೇ ಸಾಧಾರಣ ಬಜೆಟ್‌ನ ನಡುವೆಯೇ ನಾವು ಬದುಕಬೇಕಾಗುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry