ನನ್ನನ್ನು ಕ್ಷಮಿಸಿ

7

ನನ್ನನ್ನು ಕ್ಷಮಿಸಿ

Published:
Updated:

ಅವನ ಹೆಸರು ಅವಿನಾಶ್. ಬಿ.ಎ ಓದಲು ಕಾಲೇಜಿಗೆ ಬಂದಾಗ ಅವನಿಗೆ ಆತ್ಮ ವಿಶ್ವಾಸದ ಕೊರತೆಯಿತ್ತು. ಅವನ ತಂದೆ ಹೈಸ್ಕೂಲ್ ಮೇಷ್ಟ್ರು. ಊರಲ್ಲಿ ಅವರಿಗೆ ಒಂದಷ್ಟು ತೋಟ, ಜಮೀನಿತ್ತು. ಅವರು ಒಳ್ಳೆಯ ಜನ. ಆದರೆ, ಮನೆಯಲ್ಲಿ ಜೀವಹಿಂಡುವ ಸಮಸ್ಯೆಗಳಿದ್ದವು. ಓದಿನಲ್ಲಿ ಜಾಣನಾದ ಅವಿನಾಶ್ ಮನೆಯ ರಗಳೆಗಳನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಂಡು ಆಗಾಗ ಖಿನ್ನನಾಗುತ್ತಿದ್ದ. ತನ್ನದೇ ಲೋಕದಲ್ಲಿ ಇರುತ್ತಿದ್ದ. ಹೊಸಬರ ಜೊತೆ ಬೆರೆಯುವ, ಗೆಳೆತನ ಬೆಳೆಸುವ ಸ್ವಭಾವ ಅವನಿಗಿರಲಿಲ್ಲ. ಒಳಗೇ ಕುದಿಯುವ ಇವನ ವ್ಯಕ್ತಿತ್ವವನ್ನು ಸರಿ ಮಾಡಬೇಕೆಂದು ಅವನ ಗುರುಗಳೊಬ್ಬರು ಬಯಸಿದರು.ಅವನ ಸ್ಥಿತಿ ಕಂಡಾಗ ಅವರಿಗೆ ಅದೇನೋ ವಿಶೇಷ ಮಮತೆ ಉಕ್ಕಿ ಬಂದಿತು. ಹೆಗಲ ಮೇಲೆ ಕೈಯಿಟ್ಟು ವಿಶ್ವಾಸದಿಂದ ಮಾತಾಡಿಸಿದರು. ಧೈರ್ಯ ತುಂಬಿ ಪ್ರೀತಿ ತೋರಿದರು. ಕೂತು ಅವನೆದೆಯಲ್ಲಿ ಸ್ಟಾಕಾಗಿದ್ದ ದುಗುಡಗಳನ್ನೆಲ್ಲಾ ಸಹನೆಯಿಂದ ಕೇಳಿದರು. ಮನೆಗೆ ಕರೆದುಕೊಂಡು ಹೋಗಿ ಸಂತೈಸಿದರು. ಹೆತ್ತ ಮಗನಿಗಿಕ್ಕುವಷ್ಟು ಕರುಳಿನ ಸ್ನೇಹ ಉಣಿಸಿದರು. ಗುರುಗಳ ಪತ್ನಿಯೂ ಹೆತ್ತ ಮಗನಂತೆ ಅವನನ್ನು ಕಂಡರು. ಅವನನ್ನು ಬಿಟ್ಟು ತಿಂಡಿ, ಊಟ ಮಾಡದ ಸ್ವಭಾವ ಮೈಗೂಡಿಸಿಕೊಂಡರು. ಅವನು ಅತ್ತಾಗೆಲ್ಲಾ ಕಣ್ಣೀರು ಒರೆಸಿದರು.ಹೊಸಬಟ್ಟೆ ತೊಡಿಸಿದರು. ಒಳ್ಳೆಯ ಪುಸ್ತಕಗಳನ್ನು ಕೊಡಿಸಿ ಅದನ್ನು ಓದುವ ಅಭ್ಯಾಸ ಬೆಳೆಸಿದರು. ನಾಟಕ, ಸಂಗೀತ, ಕಲೆಗಳ ಅಭಿರುಚಿ ಕಲಿಸಿದರು. ತಮ್ಮ ಗೆಳೆಯರಿಗೆ, ಕಳ್ಳು ಬಳ್ಳಿಗೆ ತಮ್ಮ ಕರುಳಿನ ಕುಡಿಯಿದು ಎಂದೇ ಪರಿಚಯಿಸಿದರು. ಅವಿನಾಶನನ್ನು ಗಾಢವಾಗಿ ನಂಬಿದರು. ಖಿನ್ನನಾಗಿದ್ದ ಅವಿನಾಶ್ ನಿಧಾನಕ್ಕೆ ಸಹಜ ಮನುಷ್ಯನಾಗತೊಡಗಿದ. ಕೀಳರಿಮೆ ಬಿಟ್ಟು ಸಣ್ಣಗೆ ಚಿಗುರತೊಡಗಿದ.ಅವನ ಮನಸ್ಸು ಈಗ ಮೊದಲಿಗಿಂತ ಹಗುರಾಗಿತ್ತು. ಅದು ಉಲ್ಲಾಸಗೊಂಡಿತ್ತು. ಕಳೆದು ಹೋದ ನಗು ಮರಳಿ ಬಂದಿತ್ತು. ನಿಧಾನಕ್ಕೆ ಅವಿನಾಶ್ ಓದಿನಲ್ಲಿ, ಮಾತುಕಥೆಯಲ್ಲಿ ಚೂಟಿಯಾಗತೊಡಗಿದ. ಹೊಸ ಹೊಸ ಗೆಳೆಯರನ್ನು ಸಂಪಾದಿಸಿದ. ಗುರುಗಳ ಮಾತೃ ಸ್ಪರ್ಶ ಅವನನ್ನು ಹೊಸ ಮನುಷ್ಯನನ್ನಾಗಿ ಮಾಡಿತ್ತು. ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿದ್ದವನು ಈಗ ಬದುಕನ್ನು ಪ್ರೀತಿಸತೊಡಗಿದ. ಇಡೀ ಕಾಲೇಜು ಗುರುತಿಸುವಂಥ ವಿಶಿಷ್ಟ ವ್ಯಕ್ತಿಯಾದ. ಕೆಲವೇ ತಿಂಗಳ ಹಿಂದೆ ಮೂಗ ಬಸವನಂತೆ ನೆಲನೋಡಿ ನಡೆಯುತ್ತಿದ್ದ ಅವಿನಾಶ್ ಈಗ ಹೀರೊ ಆಗಿದ್ದ. ಗುರುಗಳ ಹಿತನುಡಿ, ಅವರ ಆಸರೆ, ಅವನಲ್ಲಿ ಹೊಸ ಹುಮ್ಮಸ್ಸನ್ನು ರೂಪಿಸಿದ್ದವು. ತನಗೆ ಹೊಸ ಬಾಳನ್ನು ನೀಡಿದ ಗುರುಗಳನ್ನು ಅವನು  ಮನದಲ್ಲಿ ಆರಾಧಿಸಿತೊಡಗಿದ್ದ.ಹೀಗಿದ್ದ ಅವಿನಾಶನಿಗೆ ಏಕಾಏಕಿ ಏನಾಯಿತೋ ಗೊತ್ತಿಲ್ಲ. ದಿನಕಳೆದಂತೆ ಅವನ ವರ್ತನೆಯಲ್ಲಿ ಹೊಸ ಹೊಸ ಬದಲಾವಣೆಗಳು ಕಾಣಿಸಿಕೊಂಡವು. ಮನೆ ಮಗನಾಗಿ ತಿಂದುಂಡು ಬೆಳೆದವನು ನಿಧಾನಕ್ಕೆ ಗುರುಗಳ ಮನೆಗೆ ಬರುವುದನ್ನು ಕಡಿಮೆ ಮಾಡತೊಡಗಿದ. ಯಾಕಪ್ಪ ಮೊದಲಿನಂತೆ ಬರುತ್ತಿಲ್ಲ ಎಂದು  ಕೇಳಿದರೆ ಒಂದಕ್ಕೊಂದು ಸಂಬಂಧವಿಲ್ಲದ ಕಾರಣಗಳ ಒದರತೊಡಗಿದ. ಈಗೀಗ ಅವನ ಮಾತು ಮತ್ತು ವರ್ತನೆಗಳು ಬದಲಾಗಿರುವುದನ್ನು ಒಂದು ಎಳೆಯ ಮಗುವೂ ಗುರುತಿಸಬಹುದಿತ್ತು. ತನ್ನೂರಿನಿಂದ ಬರುವಾಗ ಗುರುಗಳಿಗಾಗಿ ತರುತ್ತಿದ್ದ ತೆಂಗಿನಕಾಯಿ, ಹೋಳಿಗೆ, ಮೊಸರಿನ ಬುತ್ತಿಗಳ ಗಂಟುಗಳನ್ನು ಆತನೀಗ ನಿಲ್ಲಿಸಿದ್ದ. ಅವು ಬೇರೆ ಮನೆಯ ದಾರಿಯಲ್ಲಿ ಚಲಿಸತೊಡಗಿದ್ದವು. ಪ್ರೀತಿಯಿಂದ ಗುರುಗಳು ಮಾತಾಡಿಸಲು ಹೋದಾಗೆಲ್ಲಾ ಅನಿಷ್ಟ ಕಂಡವನಂತೆ ಮುಖ ಜಾರಿಸತೊಡಗಿದ. ಹತ್ತಿರ ಹೋದಷ್ಟೂ ದೂರವಾಗ ಹತ್ತಿದ. ತಮ್ಮ ಸ್ವಂತ ಮಗ ಎಂದೇ ಪರಿಭಾವಿಸಿದ ಅವಿನಾಶ್ ಅಚಾನಕ್ಕಾಗಿ ಬದಲಾಗಿದ್ದು ದಂಪತಿಗಳಿಗೆ ದುಃಖ ತರಿಸಿತು. ಅವನ ಬದಲಾದ ವರ್ತನೆಯ ಮರ್ಮವೇ  ಅವರಿಗೆ ತಿಳಿಯಲಿಲ್ಲ. ಹೀಗೆ ಹೊಳೆ ದಾಟಿದ ಮೇಲೆ ಅಂಬಿಗನ ಮರೆಯುವ ಹಲವಾರು ಮಕ್ಕಳನ್ನು ಜೀವನದಲ್ಲಿ ಈಗಾಗಲೇ ನೋಡಿದ್ದ ಗುರುಗಳು ವಿಷಾದದ ಕಹಿ ನಗೆ ಚೆಲ್ಲಿ ಸುಮ್ಮನಾದರು. ಆದರೆ ಅವನನ್ನು ತುಂಬಾ ಹಚ್ಚಿಕೊಂಡಿದ್ದ  ಗುರುಗಳ ಶ್ರೀಮತಿ ಅವನನ್ನು ಮರೆಯಲಾಗದೆ ಚಡಪಡಿಸಿ ಕಣ್ಣಿರನ್ನೇ ಸುರಿಸಿದರು.   ಅವಿನಾಶ್ ಯಾಕೆ ಇದ್ದಕ್ಕಿದಂತೆ ಬದಲಾದ? ಅವನು ಮುಖ ತಿರುಗಿಸಿ ನಡೆಯುವಂಥ ಅಪರಾಧ ನಾವೇನು ಮಾಡಿದ್ದೇವೆ.? ಅವನ ಮನಸ್ಸು ನೋಯುವಂತೆ ನಾವೇನಾದರೂ ವರ್ತಿಸಿದೆವಾ? ಎಂದು ಅವರು ಮನಸನ್ನು ಹಿಂಡಿಕೊಂಡರು. ಅವನ ನಿರಾಕರಣೆಯ ರೀತಿಯೇ ನಿಗೂಢವೆನಿಸಹತ್ತಿತ್ತು. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಗುರುಗಳಿಗೆ ಮತ್ತವರ ಪತ್ನಿಯ ಮನಸ್ಸಿಗೆ ಬಾಧಿಸುವ ಅನೇಕ ಸಂಗತಿಗಳು ಇನ್ನೂ ಕಾದಿದ್ದವು.ಅವಿನಾಶ್ ದಾರಿಯಲ್ಲಿ ಒಮ್ಮೆ ಸಿಕ್ಕ. ಅವನಾಗಿಯೇ ಮಾತಾಡಿಸಬಹುದೆಂದು ಇವರು ಕಾದರು. ಆದರವನು ಮುಖ ತಿರುಗಿಸಿಕೊಂಡು ಓಡಾಡತೊಡಗಿದ. ನೋಡಿದರೂ ನೋಡದಂತೆ ಅವಿತುಕೊಳ್ಳತೊಡಗಿದ. ನಾವು ಇವನಿಗೆ ಅಂಥದ್ದೇನು ದ್ರೋಹ ಮಾಡಿದ್ದೇವೆ, ನೀವೊಮ್ಮೆ ಅವನ ಕರೆದು ಕೇಳಿ ಎಂದು ಗುರುಪತ್ನಿ ಗಂಡನಿಗೆ ತಿವಿದರು.ಗುರುಗಳಿಗೆ ತೀವ್ರ ಆಘಾತವಾಗಿತ್ತು. ಸಹಾಯ ಪಡೆದವರು ಬದಲಿಯಾಗಿ ಹೀಗೆ ಅವಮಾನ ಮಾಡಿದ ಅನೇಕ ಘಟನೆಗಳು ಅವರೆದೆಯಲ್ಲಿದ್ದವು. ಮತ್ತೆ ನೋವು ನುಂಗಿಕೊಂಡು ಹೃದಯ ಭಾರ ಮಾಡಿಕೊಂಡು ಅವರು ಸುಮ್ಮನೆ ನಿಂತರು. ಗುರುಗಳ ಎದೆಯೊಳಗೆ ಬೇಸರ, ಸಿಟ್ಟು ಉರಿಯುತ್ತಿದ್ದವು. ಇನ್ನು ಸುಮ್ಮನಿರುವುದು ಬೇಡವೆಂದು ತೀರ್ಮಾನಿಸಿದ ಅವರು ಅವನನ್ನು ಒಂದು ದಿನ ಮನೆಗೆ ಕರೆಸಿಕೊಂಡರು. ಅಂಜುತ್ತಲೇ ಮನೆಗೆ ಬಂದ ಅವಿನಾಶ್ ಕಳ್ಳ ಬೆಕ್ಕಿನಂತೆ ಬಂದು ಕೂತ. ಒಂದು ಗಂಟೆ ಅಪ್ಪ ಅಮ್ಮನ ಸ್ಥಾನದಲ್ಲಿದ್ದ ಗುರುಗಳು ಮತ್ತವರ ಪತ್ನಿ ಅವನ ಎಡಬಿಡದೆ ಪ್ರಶ್ನಿಸಿದರು. ಅವನ ನಡವಳಿಕೆಯನ್ನು ಖಂಡಿಸಿದರು. ಅತೀವ ಬೇಸರ ವ್ಯಕ್ತಪಡಿಸಿ ಹತಾಶರಾದರು. ಇಷ್ಟೆಲ್ಲಾ ಕೇಳಿಯೂ ಅವಿನಾಶ್ ಮಾತ್ರ ತುಟಿಪಿಟಿಕ್ ಎನ್ನದೆ ಮೂಕನಂತೆ ಕುಳಿತೇ ಇದ್ದ.ನಮ್ಮ ಮನೆ ಮಗನಾಗಿದ್ದ ನೀನೀಗ ಆಗಂತುಕನಂತೆ ಬಂದು ಕೂತಿದ್ದೀಯ, ನಮ್ಮ ಪ್ರೀತಿ, ಕಾಳಜಿಯಲ್ಲಿ ಏನು ವ್ಯತ್ಯಾಸವಾಯಿತು ಹೇಳು? ನಮ್ಮಿಂದ ನಿನಗೇನಾದರೂ ಅಪಚಾರ, ಅವಮಾನ ಆಯಿತೆ? ಇಲ್ಲ ರ್‍್ಯಾಂಕ್ ಬಂದನೆಂಬ ಪಿತ್ತ ನಿನ್ನ ತಲೆಗೆ ಹತ್ತಿತೆ? ನಮ್ಮ ಮನಸ್ಸಿಗೆ ನೋವಾಗುವಂತೆ ಯಾಕೆ ನಡೆದುಕೊಂಡೆ ಹೇಳು. ನಿನ್ನ ಇಷ್ಟಪಟ್ಟಿದ್ದೇ ನಾವು ಮಾಡಿದ ತಪ್ಪೇ? ಎಂದು ಬಿಡದೆ ಪ್ರಶ್ನೆಗಳ ಸುರಿಮಳೆಗೈದರು. ಅವಿನಾಶನನ್ನು ತುಂಬಾ ಹಚ್ಚಿಕೊಂಡಿದ್ದೇ ಒಂದು ಅಪರಾಧದಂತೆ ಅವರಿಗೆ ಭಾಸವಾಗತೊಡಗಿತು.    ಅವರ ಮಾತೆಲ್ಲಾ ಸುಮ್ಮನೆ ಕೇಳಿದ ಅವಿನಾಶ್ ಎದ್ದು ನಿಂತ. ಈತ ಏನೂ ಹೇಳದೆ ಸುಮ್ಮನೆ ಹೊರಟು ಹೋಗಬಹುದೆಂದು ಅವರು ಭಾವಿಸಿದರು. ಆದರೆ ಅಲ್ಲಿ ಹಾಗಾಗಲಿಲ್ಲ. ದಿಢೀರೆಂದು ನೆಲಕ್ಕೆ ಕುಸಿದ ಆತ ಗುರುಗಳ ಕಾಲಿಗೆ ದೀರ್ಘದಂಡ ನಮಸ್ಕಾರ ಹಾಕಿ ಬಿದ್ದು ಬಿಟ್ಟ. ‘ನನ್ನ ತಪ್ಪಾಗಿದೆ ಕ್ಷಮಿಸಿ ಸಾರ್’ ಎಂದು ಅಳತೊಡಗಿದ. ಗುಮ್ಮನ ಗುಸಕನಂತೆ ಕೂತಿದ್ದು, ಅಹಂಕಾರದಿಂದ ಏನಾದರೂ ಮರು ಉತ್ತರ ಕೊಟ್ಟಾನೆಂದು ಭಾವಿಸಿದ್ದ  ದಂಪತಿಗಳಿಗೆ ಅವಿನಾಶ್ ಹೀಗೆ ಭಾರಗೊಂಡು ಕುಸಿದು ಕುಂತಿದ್ದು ಬೆರಗುಗೊಳಿಸಿತು. ತಾವು ಅಂದುಕೊಂಡಂತಾಗಿಲ್ಲ. ಅವಿನಾಶನ ನಡವಳಿಕೆ ಬದಲಾಗಲು ಏನೋ ಪ್ರಬಲ ಕಾರಣವಿದೆ. ಅದನ್ನು ಅರ್ಥ ಮಾಡಿಕೊಳ್ಳದೆ ಸುಖಾಸುಮ್ಮನೆ ಇವನ ಬೈದುಬಿಟ್ಟೆವಲ್ಲ ಎಂಬ ಪಶ್ಚಾತ್ತಾಪ ಆ ದಂಪತಿಗಳಿಗೆ ಕಾಡತೊಡಗಿತು.   ಅವನು ಅಳುವ ರಭಸಕ್ಕೆ ದಂಪತಿಗಳು ಕರಗಿ ಹೋದರು. ಅವನ ಕಣ್ಣೀರಿಗೆ ತಮ್ಮ ಕಣ್ಣೀರನ್ನೂ ಬೆರೆಸಿ ಸಂತೈಸಿದರು. ತಮ್ಮ ಆರೈಕೆ ಹಾಳಾಗಿಲ್ಲ, ನಿರೀಕ್ಷೆಗಳು ತಪ್ಪಾಗಿಲ್ಲ. ಅವಿನಾಶನನ್ನು ನಾವೇ ಅರ್ಥ ಮಾಡಿಕೊಂಡಿಲ್ಲ. ಎಲ್ಲೋ ಏನೋ ಎಡವಟ್ಟಾಗಿದೆ ಪಾಪ, ಹುಡುಗ ಅಂಥವನಲ್ಲ ಅಂತನ್ನಿಸಿ ಕಣ್ಣೀರು ಒರೆಸಿ ತಾವೇ ಕ್ಷಮೆ ಕೇಳಿದರು. ಹೇಳು ಏನಾಯಿತು ಎಂದು ಆತ್ಮೀಯವಾಗಿ ಪ್ರಶ್ನಿಸಿದರು.   ಅವಿನಾಶ್ ಹೇಳುತ್ತಾ ಹೋದ. ನಾನು ನಿಮ್ಮ ಮನೆ ಮಗನಂತೆ ಇದ್ದದ್ದನ್ನು ಕೆಲ ನಿಮ್ಮ ಉಪನ್ಯಾಸಕ ಗೆಳೆಯರೇ ಸಹಿಸಲಿಲ್ಲ ಸಾರ್. ಅವರು ಯಾವ ಜಾತಿ, ನೀನು ಯಾವ ಜಾತಿ ನೆನಪಿದೆಯಾ ನಿನಗೆ?. ನಿನಗೆ ಫೈನಲ್ ಇಯರ್‌ನಲ್ಲಿ ಒಳ್ಳೆ ಮಾರ್ಕ್ಸ್ ಬೇಕು ಅಂತಿದ್ದರೆ ಮೊದಲು ಅವರಿಂದ ನೀನು ದೂರ ಇರಬೇಕು ಎಂದು ಆಗಾಗ ಎಚ್ಚರಿಸುತ್ತಲೇ ಇದ್ದರು. ನಾನದನ್ನು ಕಿವಿಗೆ ಹಾಕಿಕೊಳ್ಳಲ್ಲಿಲ್ಲ. ನಾನು ನಿಮ್ಮ ಚಮಚ, ಬಾಲ, ತುತ್ತೂರಿ, ಬಕೆಟ್ ಅಂತೆಲ್ಲಾ ನನ್ನ ಹಂಗಿಸುತ್ತಿದ್ದರೂ ನಾನು ನಿಮಗದನ್ನು ಹೇಳಲಿಲ್ಲ. ನಿಧಾನಕ್ಕೆ ನಿಮ್ಮ ಒಡನಾಟ ಕಡಿಮೆ ಮಾಡುತ್ತಾ ಬಂದೆ. ವಿಶ್ವವಿದ್ಯಾಲಯ ಸೇರಿದ ಮೇಲೂ ನನಗೆ ಈ ಅನಿಷ್ಟದ ಕಾಟ ತಪ್ಪಲಿಲ್ಲ. ಅಲ್ಲೂ ನಿಮಗಾಗದವರ ದೊಡ್ಡ ಪಡೆಯೇ ಇದೆ. ಅವರೆಲ್ಲಾ ನಾನು ಕಡ್ಡಾಯವಾಗಿ ನಿಮ್ಮ ಸಂಬಂಧ ತುಂಡರಿಸಿಕೊಳ್ಳಬೇಕು. ಇಲ್ಲದಿದ್ದರೆ ಅದರ ಪರಿಣಾಮ ನಿನ್ನ ಎಂ.ಎ ರಿಸಲ್ಟ್ ಮೇಲೂ ಆಗುತ್ತೆ ಅಂತೆಲ್ಲಾ ಹೆದರಿಸಿದರು. ಅಪ್ಪ ಅಮ್ಮನಿಗೆ, ನನಗಾಗದವರಿಗೆ ನಾನು ರ್‍‍್ಯಾಂಕ್ ಪಡದೇ ತೀರುತ್ತೇನೆ ಅಂತ ಶಪಥ ಮಾಡಿ ಬಂದಿದ್ದೆ. ಅದು ನನ್ನ ಜೀವನದ ಪರಮ ಗುರಿಯಾಗಿತ್ತು. ನನ್ನ ಗುರಿಗೆ ನೀವು ಧಕ್ಕೆಯಾಗುತ್ತಿದ್ದೀರಿ ಅನ್ನೋದಾದರೆ ಎರಡು ವರ್ಷ ತಾತ್ಕಾಲಿಕವಾಗಿ ನಿಮ್ಮ ಸಂಪರ್ಕವನ್ನೇಕೆ ತುಂಡರಿಸಿಕೊಳ್ಳಬಾರದು ಎಂದು ಆಲೋಚಿಸಿ ಬಿಟ್ಟೆ. ಸ್ವಾರ್ಥಕ್ಕಾಗಿ ನಿಮ್ಮ ಪ್ರೀತಿ, ವಿಶ್ವಾಸವ ಬಲಿಕೊಟ್ಟೆ.ನನ್ನ ಕ್ಷಮಿಸಿ ಸಾರ್.

ಇದನ್ನೆಲ್ಲಾ ಬಿಡಿಸಿ ಹೇಳಿದ್ದರೆ ನಿಮಗೆ ಸಾಕಾಗುತ್ತಿತ್ತು. ನನಗೆ ಧೈರ್ಯ ಬರಲಿಲ್ಲ. ಹೇಳಿದರೆ ನಿಮಗೆ ನೋವಾದೀತು ಎಂದು ನಾನೇ ಭಾವಿಸಿ ನಿಮ್ಮ ಪಾಲಿಗೆ ವಿಲನ್ ಆದೆ. ನಿಮ್ಮ ಫೋಟೊವನ್ನು ದಿನಾ ಪೂಜಿಸಿ ಆಮೇಲೆ ನಾನು ಕ್ಲಾಸಿಗೆ ಹೋಗುತ್ತಿದ್ದೆ ಸಾರ್. ನನಗೆ ಮರುಜನ್ಮ ಕೊಟ್ಟವರು ನೀವು. ನಿಮ್ಮ ಮರೆಯಲು ಹೇಗೆ ಸಾಧ್ಯ ಹೇಳಿ ಸಾರ್. ವಿಷದ ಮನಸ್ಸಿನ ಜನಗಳು ನನ್ನ ಆಸೆ, ಗುರಿ, ಹಾಳು ಮಾಡಿಬಿಟ್ಟಾರೆಂಬ ಆತಂಕ ನನ್ನ ಕಾಡಿ ನಾನು ಸ್ವಾರ್ಥಿಯಾಗಿ ಬಿಟ್ಟೆ. ನಿಮಗೂ ಅಮ್ಮನಿಗೂ ಅವಮಾನ ಮಾಡಿಬಿಟ್ಟೆ.   ಎಂ.ಎ ಮುಗಿದು ರ್‍್ಯಾಂಕ್ ಬಂದ ಮೇಲಾದರೂ ನಾನು ಬರಬಹುದಿತ್ತಲ್ಲ ಎಂದು ನೀವು ಅಂದುಕೊಳ್ಳಬಹುದು. ಆದರೆ, ಅಷ್ಟರಲ್ಲಿ ನನ್ನ ಜೀವನದಲ್ಲಿ ಮತ್ತೊಂದು ಆಘಾತ ನಡೆದು ಹೋಗಿತ್ತು. ನನ್ನ ಜ್ಯೂನಿಯರ್ ಹುಡುಗಿಯೊಬ್ಬಳನ್ನು ನಾನು ಪ್ರೀತಿಸಿಬಿಟ್ಟೆ. ಅವಳು ನನ್ನ ಜೀವದಂತೆ ಹಚ್ಚಿಕೊಂಡಳು. ಇದು ಇಡೀ ವಿಶ್ವವಿದ್ಯಾನಿಲಯಕ್ಕೆ ಗೊತ್ತಾಗಲು ತಡವಾಗಲಿಲ್ಲ. ಅಲ್ಲಿ ಧರ್ಮದ ವಿಷಯ ಅಡ್ಡ ಬಂದಿತ್ತು. ನಮ್ಮಿಬ್ಬರ ಧರ್ಮ ಬೇರೆ ಬೇರೆ ಎಂಬ ಸಂಗತಿಯೇ ಹೆಚ್ಚು ಗುಲ್ಲಾಯಿತು. ನಮ್ಮ ಜ್ಯೂನಿಯರ್‍್ಸ್್‌ಗಳು, ನೀನು ಸೀನಿಯರ್ ಆಗಿ ಜ್ಯೂನಿಯರ್ ಹುಡುಗೀನ ಇಷ್ಟಪಟ್ಟರೆ ನಾವೆಲ್ಲಿ ಹೋಗಬೇಕು ಎಂದು ಜಗಳಕ್ಕೆ ನಿಂತರು. ಸೀನಿಯರ್‌ಗಳು ತಮ್ಮ ಕೆಳಗಿನ ಬ್ಯಾಚಿನ  ಹುಡುಗಿಯರನ್ನು ಪ್ರೀತಿಸಬಾರದು ಎಂಬ ಅಲಿಖಿತ ನಿಯಮ ಅವರೇ ಮಾಡಿಕೊಂಡಿದ್ದಾರೆ. ತಮ್ಮ ಬ್ಯಾಚಿನವರೆಂದರೆ ತಮ್ಮ ಸ್ವಂತ ಆಸ್ತಿ, ಸ್ವತ್ತು ಎಂಬ ಅವರ ಸಂಕುಚಿತ ಹಕ್ಕುದಾರಿಕೆ ನನ್ನ ಪ್ರೀತಿಯನ್ನು ನಾಶ ಮಾಡಿತು. ನಾವಿಬ್ಬರು ಈ ಗಾಸಿಪ್, ಪಿತೂರಿ, ಕೆಟ್ಟ ಮನಸ್ಸಿನ ಒತ್ತಡಗಳ ನಡುವೆ ಸಿಲುಕಿ ನುಚ್ಚು ನೂರಾಗಿ ಶಾಶ್ವತವಾಗಿ ದೂರವಾದೆವು ಸಾರ್.   ಅಲ್ಲಿಂದ ನಾನು ಹುಚ್ಚನಂತಾಗಿದ್ದೇನೆ ಸಾರ್. ಈ ಡಿಗ್ರಿ, ಈ ಮೆಡಲ್ಲು, ಈ ಸುಡುಗಾಡು ಮಾರ್ಕ್ಸ್ ಕಾರ್ಡ್‌ಗಳನ್ನೆಲ್ಲಾ ಸುಟ್ಟು ಹಾಕಬೇಕು ಅಂತ ಅನ್ನಿಸುತ್ತಿದೆ. ನಿದ್ದೆ, ನೆಮ್ಮದಿಗಳಿಲ್ಲದ ಕರಾಳ ಕನಸುಗಳಲ್ಲಿ ರಾತ್ರಿ ಹಗಲು ಕಳೆದಿದ್ದೇನೆ. ಇದರ ಜೊತೆ ಹಾಳಾದ ನಿರುದ್ಯೋಗ ಸಮಸ್ಯೆ ಬೇರೆ. ಜೊತೆಗೆ ನಿಮ್ಮಿಂದ ದೂರವಾದ ಕೆಟ್ಟ ಸಂಕಟ. ಇದೆಲ್ಲಾ ನನ್ನ ಹಿಂಡಿ ಹಿಸುಕಿ ಹಾಕಿದೆ ಸಾರ್. ನಿಮ್ಮ ಹತ್ರ ಬರಲು ಮುಖವಿಲ್ಲದ ನಾನು ಮರೆಯಾಗಿ ಹೇಡಿಯಂತೆ ಓಡಾಡಿದೆನೇ ಹೊರತು ಧಿಮಾಕಿನಿಂದಲ್ಲ. ನನ್ನನ್ನು ಕ್ಷಮಿಸಿ ಎಂದು ಕೇಳಲೂ ನನಗೆ ಬಾಯಿಲ್ಲ. ನನ್ನ ಸ್ವಾರ್ಥ ನನಗೆ ರ್‍್ಯಾಂಕ್ ಕೊಡಿಸಿತು. ಬದಲಿಯಾಗಿ ನಿಮ್ಮ ಪ್ರೀತಿ, ಆ ಹುಡುಗಿಯ ಪ್ರೇಮ ಕಿತ್ತುಕೊಂಡಿತು. ನನ್ನ ಪ್ರೇಮ, ನಿಮ್ಮ ಸ್ನೇಹ ಉಳಿಸಿಕೊಳ್ಳಲಾಗದ ನಾನೊಬ್ಬ  ರಣಹೇಡಿ ಸಾರ್ ಸಾಧ್ಯವಾದರೆ ನನ್ನ ಕ್ಷಮಿಸಿ ಎಂದು ನಡುಗುತ್ತಾ ನಿಂತನು.   ಯೌವ್ವನದಲ್ಲಿ ಓದು ಮತ್ತು ಪ್ರೇಮಗಳೆರಡೂ ಒಟ್ಟಾಗಿ ಭಾದಿಸುತ್ತವೆ. ಓದು ಜೀವನದ ಗುರಿಯಾದರೆ, ಪ್ರೇಮ, ಪ್ರೀತಿಗಳು ಹೃದಯದ ಭಾವ ಲಹರಿಗಳು. ಎರಡನ್ನೂ ಏಕಕಾಲದಲ್ಲಿ ನಿಭಾಯಿಸುವುದು ನಿಜಕ್ಕೂ ಕಷ್ಟದ ಕೆಲಸ. ಇದರ ಜೊತೆಗೆ ಬಡತನ, ನಿರುದ್ಯೋಗಗಳೆಂಬ ಆಪತ್ತುಗಳು ಕೂಡಿಕೊಂಡರಂತೂ ಬದುಕು ಮೂರಾಬಟ್ಟೆ ಎನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry