ನನ್ನ ಬದುಕಿನ ಟ್ರೇಲರ್

7

ನನ್ನ ಬದುಕಿನ ಟ್ರೇಲರ್

ದ್ವಾರಕೀಶ್
Published:
Updated:

ಜೀವನವನ್ನು ಕೂಡ ನಾನು ಸಿನಿಮಾ ಧಾಟಿಯಲ್ಲೇ ಹೇಳಲು ಇಷ್ಟಪಡುತ್ತೇನೆ. ಕೆಲವೊಮ್ಮೆ ಟ್ರೇಲರ್ ಚೆನ್ನಾಗಿದ್ದು, ಸಿನಿಮಾ ಡಬ್ಬಾ ಆಗಿರುತ್ತದೆ. ಆಗೀಗ ಟ್ರೇಲರ್, ಸಿನಿಮಾ ಎರಡೂ ಚೆನ್ನಾಗಿರುತ್ತದೆ. ನನ್ನ ಅನುಭವ ಕಲಿಸಿದ ಪಾಠದಿಂದ ಟ್ರೇಲರ್, ಸಿನಿಮಾ ಎರಡನ್ನೂ ಚೆನ್ನಾಗಿ ಹೇಳಬಲ್ಲೆ ಎಂಬ ನಂಬಿಕೆ ಇದೆ.ಕತೆಯನ್ನು ನೇರವಾಗಿ ಶುರುಮಾಡಲೋ, ಫ್ಲ್ಯಾಷ್‌ಬ್ಯಾಕ್‌ನಲ್ಲಿ ಶುರುಮಾಡಲೋ ಎಂಬುದು ನನ್ನ ಗೊಂದಲ. ಸಿನಿಮಾಗೆ ಕತೆಯ ಜೊತೆ ಚಿತ್ರಕತೆಯೂ ಮುಖ್ಯ. ಕೆಟ್ಟ ಕತೆಯನ್ನು ಒಳ್ಳೆಯ ಚಿತ್ರಕತೆಯಿಂದ ಹೇಳಬಹುದು. ಒಳ್ಳೆ ಕತೆಯನ್ನು ಕೆಟ್ಟ ಚಿತ್ರಕತೆಯಿಂದ ಹಾಳು ಮಾಡಲೂಬಹುದು.ಒಂದು ಸಿನಿಮಾಗೆ ಚಿತ್ರಕತೆ ಬಹಳ ಮುಖ್ಯ. ನನ್ನ ಬದುಕಿನ ಚಿತ್ರಕತೆಯೂ ಇದಕ್ಕೆ ಹೊರತಲ್ಲ. ನಾವು ಎಷ್ಟೇ ಜಾಗರೂಕತೆಯಿಂದ ಚಿತ್ರಕತೆ ಮಾಡಿದರೂ ದೇವರು ಮಾಡುವ ಚಿತ್ರಕತೆ ಎಲ್ಲಕ್ಕಿಂತ ಮಿಗಿಲು. ಬದುಕಿನಲ್ಲಿ ಅವನು ಕೊಡುವ ಟ್ವಿಸ್ಟ್‌ಗಳು ಹಾಗಿರುತ್ತವೆ.ಯಾವುದೇ ಕೆಲಸ ಪ್ರಾರಂಭಿಸಬೇಕಿದ್ದರೂ ನಾವು ದೇವರನ್ನು ನೆನೆಯುತ್ತೇವೆ. `ಶುಕ್ಲಾಂಭರದರಂ~ ಹೇಳುತ್ತೇವೆ. ವಿಮಾನ ಎತ್ತರಕ್ಕೆ ಹಾರಬಹುದು. ಆದರೆ, ಅದನ್ನು ಹತ್ತಲು ಇರುವ ಚಿಕ್ಕ ಏಣಿ ತುಂಬಾ ಮುಖ್ಯ. ಅದಿಲ್ಲದಿದ್ದರೆ ಹಾರುವ ವಿಮಾನ ಹತ್ತುವುದಾದರೂ ಹೇಗೆ? ನಾನು ಸಿನಿಮಾ ಬದುಕಿನ ವಿಮಾನ ಹತ್ತಲು ಕೂಡ ಏಣಿಗಳಿದ್ದವು.ಮೊದಲ ಏಣಿ- ಮಾವ ಹುಣಸೂರು ಕೃಷ್ಣಮೂರ್ತಿ. ನನ್ನ ಬದುಕಿನಲ್ಲಿ ಮೊಟ್ಟ ಮೊದಲು ಮೇಕಪ್ ಹಾಕಿಸಿದ್ದು ಅವರು. ಅವರಿಂದಲೇ ಚಿತ್ರರಂಗದಲ್ಲಿ ನಾನು ಬೆಳೆಯಲು ಸಾಧ್ಯವಾಯಿತು. `ವೀರಸಂಕಲ್ಪ~ ಚಿತ್ರಕ್ಕೆ ಬಣ್ಣಹಚ್ಚಿದ ಮೇಲೆ ಮತ್ತೆ ನಾನು ಹಿಂತಿರುಗಿ ನೋಡಲಿಲ್ಲ. ಎರಡನೇ ಏಣಿ- ರಾಜ್‌ಕುಮಾರ್.1969ರಲ್ಲಿ ನಾನು ನಿರ್ಮಾಪಕನಾದದ್ದು ಅವರಿಂದಲೇ. ಆಗ ನನ್ನ ವಯಸ್ಸು ಬರೀ ಇಪ್ಪತ್ತೇಳು. ರಾಜ್‌ಕುಮಾರ್ ಹಾಗೂ ಅವರ ಸಹೋದರ ವರದಪ್ಪನವರು ಮನಸ್ಸು ಮಾಡದೇ ಹೋಗಿದ್ದರೆ ನಾನು ನಿರ್ಮಾಪಕ ಆಗುತ್ತಿರಲಿಲ್ಲ. ಅವತ್ತಿನ `ಮೇಯರ್ ಮುತ್ತಣ್ಣ~ ಬರುತ್ತಿರಲಿಲ್ಲ.

 

ಕೇವಲ ಒಂದು ಲಕ್ಷದ ಹತ್ತು ಸಾವಿರ ರೂಪಾಯಿಗೆ ಆ ಕಾಲದಲ್ಲಿ ಆ ಸಿನಿಮಾ ಮಾಡಿದೆ. ಆಗ ನೆಗೆಟಿವ್ ಬೆಲೆ ಬರೀ 220 ರೂಪಾಯಿ. ಸೌಂಡ್ ರೋಲ್ ಬೆಲೆ 30 ರೂಪಾಯಿ. ಮೂರನೇ ಏಣಿ- ಕೆ.ಎಸ್.ಎಲ್.ಸ್ವಾಮಿ. ಅವರನ್ನು ನಾನು ರವಿ ಅಣ್ಣ ಅಂತಲೇ ಕರೆಯುವುದು.`ಗಾಂಧಿನಗರ~ ಚಿತ್ರದಲ್ಲಿ ನನಗೆ ಅವರೊಂದು ಪಾತ್ರ ಕೊಟ್ಟಿದ್ದರು. ನಿರ್ಮಾಪಕರು ಆ ಪಾತ್ರಕ್ಕೆ ದ್ವಾರಕೀಶ್ ಬೇಡ ಎಂದರಂತೆ. ಆಗ ರವಿ ಅಣ್ಣ ಫೈಲನ್ನು ಎಸೆದು, ದ್ವಾರಕೀಶ್ ಆ ಪಾತ್ರ ಮಾಡದಿದ್ದರೆ ಸಿನಿಮಾ ಮಾಡುವುದೇ ಇಲ್ಲ ಎಂದು ಹಟ ಮಾಡಿದರಂತೆ. ಅವರ ಆ ಪ್ರೀತಿ ಬಲು ದೊಡ್ಡದು.ನಾಲ್ಕನೇ ಏಣಿ- ನನ್ನ ಬಳಿಗೆ ಅಂಕಲ್ ಒಂದು ಚಾನ್ಸ್ ಕೊಡಿ ಎನ್ನುತ್ತಾ ಬಂದು, ನೋಡನೋಡುತ್ತಲೇ ಎತ್ತರ ಬೆಳೆದು, ನನ್ನನ್ನೂ ಬೆಳೆಸಿ, ಹೃದಯದ ಒಳಹೊಕ್ಕಿದ್ದ ವಿಷ್ಣುವರ್ಧನ್. ಆಪ್ತಮಿತ್ರನಾಗಿ ಆತ ನನಗೆ ಸಿಗದೇ ಹೋಗಿದ್ದಿದ್ದರೆ ನಾನು ಇಷ್ಟೊಂದು ಒಳ್ಳೆಯ ಚಿತ್ರಗಳನ್ನು ಮಾಡಲು ಆಗುತ್ತಿರಲಿಲ್ಲ.

 

`ವಿಷ್ಣುವರ್ಧನನ ಜೊತೆ ದ್ವಾರಕೀಶ್ ಬಹಳ ಗುದ್ದಾಡಿದ~ ಅಂತ ಜನ ಮಾತಾಡಿಕೊಳ್ಳಬಹುದು. ಆದರೆ, ಅವನ ಜೊತೆಗಿನ ಒಡನಾಟದ ಬೆಲೆ ನನಗಷ್ಟೇ ಗೊತ್ತು. ಪ್ರೀತಿ ಎಲ್ಲಿ ಇರುತ್ತದೋ ಅಲ್ಲಿ ಗುದ್ದಾಟವೂ ಇರುತ್ತದೆ. ಅವನು ಹಾಗೂ ನನ್ನ ನಡುವಿನ ಪ್ರೀತಿ ತುಂಬಾ ಮಹತ್ವದ್ದು.ಅದನ್ನು ನನಗೆ ಮರೆಯಲು ಸಾಧ್ಯವೇ ಇಲ್ಲ. ಐದನೇ ಏಣಿ- ರಜನೀಕಾಂತ್. 1982ರಲ್ಲಿ ಬೆಂಗಳೂರು ಬಿಟ್ಟು ಮದ್ರಾಸಿಗೆ ನಾನು ಹೋದೆ. ಐದು ಮಕ್ಕಳ ಸಮೇತ ಅಲ್ಲಿಗೆ ಹೋದ ನಾನು ದಿಕ್ಕುತೋಚದಂತಾಗಿದ್ದೆ.

 

ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಾನು ನನ್ನ ಕುಟುಂಬ ನಾಲ್ಕು ತಿಂಗಳು ಕಳೆದೆವು. ಅಲ್ಲಿ ನನಗೆ ಬೆಳಕು ಕೊಟ್ಟವನು ರಜನೀಕಾಂತ್. ತಮಿಳುನಾಡಿನಲ್ಲಿ ನಾನು ಹೆಸರು ಮಾಡಲು ಕಾರಣನಾಗಿದ್ದೇ ಆ ರಜನೀಕಾಂತ್. ಮೂರು ವರ್ಷದಲ್ಲಿ ಅವನು ಹೀರೋ ಆಗಿದ್ದ ಮೂರು ಸಿನಿಮಾ ಮಾಡಿದೆ.

 

ನನಗೆ ತಿಳಿದ ಮಟ್ಟಿಗೆ ತಮಿಳುನಾಡಿನಲ್ಲಿ ಮೂರು ವರ್ಷದಲ್ಲಿ ರಜನೀಕಾಂತ್ ನಾಯಕತ್ವದ ಮೂರು ಸಿನಿಮಾಗಳನ್ನಾಗಲೀ, ಎರಡು ವರ್ಷದಲ್ಲಿ ಶ್ರೀದೇವಿ- ರಜನೀಕಾಂತ್ ಜೋಡಿಯ ಎರಡು ಸಿನಿಮಾಗಳನ್ನಾಗಲೀ ಯಾರೂ ಮಾಡಿಲ್ಲ. ಅವನು ಬೆನ್ನುತಟ್ಟಿ, `ದ್ವಾರಕೀಶ್ ಬನ್ನಿ, ನಾನು ಇದೀನಿ~ ಅಂತ ಪ್ರೀತಿಯಿಂದ ಕರೆದು, ಕಾಲ್‌ಷೀಟ್ ಕೊಟ್ಟ.ನನ್ನ ಬದುಕಿನಲ್ಲಿ ಬಂದ ಈ ಐವರಿಗೆ ಹಾಗೂ ಸದಾ ನನ್ನ ಬೆನ್ನಹಿಂದೆ ಇರುವ ರಾಘವೇಂದ್ರ ಸ್ವಾಮಿಗೆ ನನ್ನ ನಮಸ್ಕಾರ.`ಕಾಲವನ್ನು ತಡೆಯೋರು ಯಾರೂ ಇಲ್ಲ. ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ~ ಎಂಬ ಹಾಡಿನ ಸಾಲು ಪದೇಪದೇ ನನ್ನ ಮನಸ್ಸಿನಲ್ಲಿ ಮೂಡುತ್ತದೆ. ಐವತ್ತು ವರ್ಷ ನಾನು ಗೆದ್ದಾಗ, ಬಿದ್ದಾಗ ಯಾವುದೋ ಒಂದು ಅಗೋಚರ ಶಕ್ತಿ ಮಾನಸಿಕ ಬೆಂಬಲಕ್ಕೆ ನಿಂತಿದ್ದಿದೆ.

 

ಅದು ರಾಘ ವೇಂದ್ರ ಸ್ವಾಮಿ ಅನ್ನುವುದು ನನ್ನ ನಂಬಿಕೆ. ಏಕಾಂತದಲ್ಲಿ ಕೂತು ಐವತ್ತು ವರ್ಷ ಚಿತ್ರೋದ್ಯಮದಲ್ಲಿ ನಾನು ಕಳೆದೆನಾ? ಇಷ್ಟು ವರ್ಷಗಳು ಐದೇ ನಿಮಿಷದಂತೆ ಕಾಣುತ್ತಿದೆಯಲ್ಲ... ಹೀಗೇ ಏನೇನೋ ಅನ್ನಿಸುತ್ತದೆ.ನನ್ನ ಬದುಕಿನ ಚಿತ್ರಕಥೆಯನ್ನು ಈಗ ನಾನು ಹೇಗಿದ್ದೇನೆ ಎಂಬುದರಿಂದಲೇ ಪ್ರಾರಂಭಿಸುತ್ತೇನೆ. ನನ್ನ ಬದುಕಿನ ಸಿನಿಮಾದು `ಹ್ಯಾಪಿ ಓಪನಿಂಗ್~. ನಾನು- ನನ್ನ ಹೆಂಡತಿ ಅಂಬುಜ. ಅದಾದ ಮೇಲೆ ಡಾಟ್ ಶೈಲಜಾ ಅನ್ನಬೇಕು.

 

ದ್ವಾರಕೀಶ್-ಅಂಬುಜಾ. ಶೈಲಜಾ! ಸಂತೋಷ್, ಯೋಗೀಶ್, ಗಿರೀಶ್, ಸುಖೀಶ್, ಅಭಿಲಾಷ್- ಇವರೆಲ್ಲಾ ನನ್ನ ಐದು ಮಕ್ಕಳು. ಎಲ್ಲರಿಗೂ ಮದುವೆಯಾಗಿದೆ. ನನ್ನ ಮಕ್ಕಳೆಲ್ಲಾ ಪದವೀಧರರು.ಸೊಸೆಯರೆಲ್ಲಾ ಸ್ನಾತಕೋತ್ತರ ಪದವೀಧರರು. ನಾಲ್ಕು ಮುದ್ದಾದ ಮೊಮ್ಮಕ್ಕಳಿವೆ. ಮಕ್ಕಳಲ್ಲಿ ಹೆಣ್ಣುಮಕ್ಕಳಿಲ್ಲ. ಮೊಮ್ಮಕ್ಕಳಲ್ಲಿ ಗಂಡುಮಕ್ಕಳಿಲ್ಲ. ನನ್ನ ಬದುಕಿನಲ್ಲಿ ಅಂಬುಜಾ ಮೂರನೇ ರೀಲಲ್ಲಿ ಬಂದಳು. ಶೈಲಜಾ ಹತ್ತನೇ ರೀಲಲ್ಲಿ ಬಂದಳು. ಇದೇ ದೇವರು ಬರೆದ ಚಿತ್ರಕಥೆ.

 

ಹೇಳುವುದು, ಅರಗಿಸಿಕೊಳ್ಳುವುದು ಬಹಳ ಕಷ್ಟ. ನಾನು ಯಾವುದನ್ನೂ ದೊಡ್ಡದು ಮಾಡಲಿಲ್ಲ. ಎಲ್ಲವನ್ನೂ ಚಿಕ್ಕದು ಮಾಡಿಕೊಂಡರೆ ಜೀವನ ಚೆನ್ನಾಗಿರುತ್ತದೆ. ಯಾಕೆಂದರೆ, ಹತ್ತನೇ ರೀಲಿನಲ್ಲಿ ಶೈಲಜಾ ಬಂದದ್ದು ದೊಡ್ಡ ಟ್ವಿಸ್ಟ್. ಮಗ ಎಂಜಿನಿಯರ್ ಆಗಿದ್ದ ಘಟ್ಟದಲ್ಲಿ ಆದ ಟ್ವಿಸ್ಟ್ ಇದು.ನನ್ನ ಬದುಕು `ಹ್ಯಾಪಿ~ ಆಗಿದೆ. ಹೆಂಡತಿ ಅಂಬುಜಾ ಅಮೆರಿಕದಲ್ಲಿರುವ ದೊಡ್ಡ ಮಗ ಸಂತೋಷನ ಮನೆಗೆ ಹೋಗಿ ಮೂರು ತಿಂಗಳಾಯಿತು. ಇನ್ನು ಮೂರು ತಿಂಗಳು ಅವಳು ಅಲ್ಲೇ ಇರುತ್ತಾಳೆ. ಮೊನ್ನೆ ಒಂದು ದಿನ ಶೈಲಜಾ ಫೋನ್ ಮಾಡಿ ಮೈಸೂರಿನಲ್ಲಿ ಅವಳ ಮ್ಯಾನೇಜರ್ ಮಗಳ ಮದುವೆಗೆ ಬರಹೇಳಿದಳು.

 

ಈಗ ನಾನು ಹೆಚ್ಚು ಪ್ರಯಾಣ ಮಾಡುವುದಿಲ್ಲವಾದರೂ ಅವಳ ಬಲವಂತಕ್ಕೆ ಮಣಿದೆ. ಆರು ತಿಂಗಳಾಗಿತ್ತು, ಮೈಸೂರಿನ ಕಡೆಗೆ ಹೋಗಿ. ಸಂಜೆ ನಾಲ್ಕೂವರೆ ಗಂಟೆ ಹೊತ್ತಿಗೆ ತಲುಪಿದೆ. ಐವತ್ತು ವರ್ಷದ ಹಿಂದೆ ನಾಬಿಟ್ಟ ಮೈಸೂರು ಅದು.ಯಾಕೋ ಚಾಮುಂಡೇಶ್ವರಿಯ ದರ್ಶನ ಮಾಡುವ ಮನಸ್ಸಾಯಿತು. ಅಲ್ಲಿ ಜನರಿರುತ್ತಾರೆ ಎಂದು ಕೇಳಿದ್ದೆ. ಅದಾಗಲೇ ಸಂಜೆ ಐದು ಗಂಟೆಯಾಗಿತ್ತು. ಆರಕ್ಕೆ ಬಾಗಿಲು ಮುಚ್ಚುತ್ತಾರೆ. ಹಾಗಾಗಿ ದೇವಸ್ಥಾನದವರಿಗೆ ಫೋನ್ ಮಾಡಿ ಬರುತ್ತೇನೆಂದು ಹೇಳಿದೆ. ಒಬ್ಬ ಸಚಿವರ ನೆರವನ್ನೂ ಪಡೆದುಕೊಳ್ಳಲು ಯತ್ನಿಸಿದೆ.

 

ಆದರೆ, ದುರದೃಷ್ಟವಶಾತ್ ಅವರ ಪಿ.ಎ. ನಂಬರ್ ಸರಿಯಾದ ಸಮಯದಲ್ಲಿ ಸಂಪರ್ಕಕ್ಕೆ ಸಿಗಲಿಲ್ಲ. ನನ್ನ ಪಾಡಿಗೆ ನಾನು ಅಲ್ಲಿಗೆ ಹೋಗಿಯೇಬಿಟ್ಟೆ. ದೇವಸ್ಥಾನದಿಂದ ಸ್ವಲ್ಪ ದೂರದಲ್ಲೇ ಕಾರನ್ನು ನಿಲ್ಲಿಸಬೇಕು. ನನಗೆ ಹತ್ತು ವರ್ಷದ ಹಿಂದೆ `ಬೈಪಾಸ್ ಸರ್ಜರಿ~ ಆಗಿರುವುದರಿಂದ ತುಂಬಾ ದೂರ ನಡೆಯಲು ಆಗುವುದಿಲ್ಲ. ಅಡ್ಡಗೇಟಿನ ಮುಂದೆ ನನ್ನ ಕಾರು ನಿಂತಿತು.

 

ನಾನು ಬಾಗಿಲು ತೆಗೆದದ್ದೇ ಅಲ್ಲಿದ್ದ ಹುಡುಗ ಓಡೋಡಿ ಬಂದು, `ಬನ್ನಿ ಸಾರ್~ ಎಂದ. ಪೊಲೀಸರೆಲ್ಲಾ ನನ್ನ ನೆರವಿಗೆ ಬಂದರು. ಯಾವ ವಿಐಪಿಗೂ ಕಡಿಮೆ ಇಲ್ಲದಂತೆ ಚಾಮುಂಡಿಯ ದರ್ಶನವಾಯಿತು.ಜೀವನದಲ್ಲಿ ನಾನೂ ಜನರನ್ನು ಸಂಪಾದನೆ ಮಾಡಿದ್ದೀನಲ್ಲಾ ಎಂದು ಹೆಮ್ಮೆ ಎನ್ನಿಸಿತು.

ಬೆಟ್ಟ ಇಳಿದು ಮತ್ತೆ ಮೈಸೂರಿಗೆ ಬಂದೆ. ಐವತ್ತು ವರ್ಷದ ಹಿಂದೆ ನಾನು ಅದೇ ಊರನ್ನು ಬಿಟ್ಟಿದ್ದ ದಿನ ನೆನಪಾಯಿತು. 

 

 ಮುಂದಿನ ವಾರ:  ನನ್ನ ಹೃದಯದ ಬಗೆಬಗೆಯ ಆಸೆಗಳು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry