ನನ್ನ ಮೊದಲ ಶಾಟ್

7

ನನ್ನ ಮೊದಲ ಶಾಟ್

ದ್ವಾರಕೀಶ್
Published:
Updated:
ನನ್ನ ಮೊದಲ ಶಾಟ್

ಅಂಗಡಿಯಲ್ಲಿ ಕೆಲಸ ಮಾಡುವಾಗಲೇ ನಾನು ಟೈರ್ ತರಲೆಂದು ಒಮ್ಮೆ ಮದ್ರಾಸ್‌ಗೆ ಹೋಗಿದ್ದೆ. ಇನ್ನೊಮ್ಮೆ ಸೋದರಮಾವ ಹುಣಸೂರು ಕೃಷ್ಣಮೂರ್ತಿಯವರ ಮನೆಗೆ ಅಮ್ಮ ಕರೆದುಕೊಂಡು ಹೋಗಿದ್ದರು. 1957-58ರಲ್ಲಿ ನಾವು ಅಲ್ಲಿಗೆ ಹೋಗಿದ್ದೆವು.ಎಡ್ವರ್ಡ್ಸ್ ಇಲಿಯಟ್ಸ್ ರಸ್ತೆಯಲ್ಲಿ ಅವರ ಮನೆಯಿತ್ತು. ಅದಾಗಲೇ `ಕೃಷ್ಣಗಾರುಡಿ~ ಎಂಬ ಸಿನಿಮಾ ನಿರ್ದೇಶಿಸಿದ್ದವರು ನಮ್ಮ ಮಾವ. ಆದರೂ ಅವರಲ್ಲಿ ಬಡತನವಿತ್ತು. ಅವರಿಗೆ ನಮ್ಮ ಅಮ್ಮನೇ ಸಹಾಯ ಮಾಡಿದ್ದನ್ನೂ ನಾನು ನೋಡಿದ್ದೆ.ನಿರ್ದೇಶಕ ವೈ.ಆರ್.ಸ್ವಾಮಿ ಅವರ ತಂಗಿ ಮನೆಯ ಮಹಡಿ ಮೇಲೆ ಮಾವನ ಮನೆಯಿತ್ತು. ಅಲ್ಲಿನ ಕಷ್ಟಗಳನ್ನು ನೋಡಿದ ನಂತರವೂ ನನ್ನ ಸಿನಿಮಾ ಆಸೆ ಮಾತ್ರ ಕಡಿಮೆಯಾಗಲೇ ಇಲ್ಲ. ಮೈಸೂರಿನಿಂದ ಬೆಂಗಳೂರಿಗೆ ಬಂದಿಳಿದ ಮೇಲೆ ನಾನು ಸಿನಿಮಾಗೆಂದು ಮದ್ರಾಸ್‌ನತ್ತ ಪ್ರಯಾಣ ಮಾಡಲು ನಿರ್ಧರಿಸಿದ್ದೆ.ಬಹುಶಃ 1962ರ ಏಪ್ರಿಲ್ ತಿಂಗಳು. ಶಂಕರಮಠ ರಸ್ತೆಯಲ್ಲಿದ್ದ ಅಂಬುಜಾ ಮನೆಗೆ ಹೋದೆ. `ಅಂಬುಜೀ, ನಾನು ಆಟೊಮೊಬೈಲ್ ವ್ಯಾಪಾರ ಬಿಟ್ಟು ಸಿನಿಮಾದಲ್ಲಿ ಅಭಿನಯಿಸಲು ಹೊರಟಿದ್ದೇನೆ. ಹೋಗಲಾ?~ ಅಂತ ಕೇಳಿದೆ. `ದ್ವಾರ್ಕಿ, ನಿನ್ನಿಷ್ಟವೇ ನನ್ನಿಷ್ಟ. ನಾನು ನಿನ್ನನ್ನು ಇಷ್ಟಪಟ್ಟಿದ್ದಾಗಿದೆ. ನಿನ್ನ ಎಲ್ಲವನ್ನೂ ಇಷ್ಟಪಡಲೇಬೇಕು~ ಎಂದು ಅವಳು ಹೇಳಿದಳು. ಹುಚ್ಚುಹುಚ್ಚಾಗಿದ್ದ ನನ್ನನ್ನು ಅಂಬುಜಾ ಸಹಿಸಿಕೊಂಡಿದ್ದೇ ಆ ಘೋಷವಾಕ್ಯ ಅವಳಲ್ಲಿ ಇದ್ದಿದ್ದರಿಂದ. ನನ್ನ ಏರಿಳಿತಗಳೆರಡನ್ನೂ ಅವಳು ಸಮಾನವಾಗಿ ಸ್ವೀಕರಿಸಿದ್ದು ಕೂಡ ಅದರಿಂದಲೇ.ನಾನು ಮೊನ್ನೆ ಮೊನ್ನೆ ವೀಣಾ ವಿದ್ವಾನ್ ಎಸ್.ಬಾಲಚಂದರ್ ಅವರ ಬದುಕಿನ ಕತೆಯ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಅವರು ಸಂಗೀತಗಾರನೊಬ್ಬನ ಕಥೆ ಬರೆದಿದ್ದಾರೆ. ಆ ಸಂಗೀತಗಾರನಿಗೆ ಸಿನಿಮಾದಲ್ಲಿ ನಟಿಸಿ, ಹಾಡುವ ಅವಕಾಶ ಒದಗಿಬರುತ್ತದೆ. ಅದನ್ನು ಅವನು ತನ್ನ ತಂದೆಯ ಎದುರು ಹೇಳುತ್ತಾನೆ. `ಸಂಗೀತಗಾರ ಕ್ಯಾಮೆರಾ ಮುಂದೆ ಬರುವುದಾ~ ಎಂದು ಆ ತಂದೆ ಜಗಳವಾಡುತ್ತಾರೆ. ತಂದೆ-ಮಗನ ಮಧ್ಯೆ ದೊಡ್ಡ ವಾಗ್ವಾದ ನಡೆದು, ಮಗ ಸಿನಿಮಾಗೆ ಹೋಗುವ ಹಟಕ್ಕೆ ಬೀಳುತ್ತಾನೆ. ಆಗ ಆ ತಂದೆ ಬಾವಿಗೆ ಬಿದ್ದು ಅಸುನೀಗುತ್ತಾರೆ. ಇದು ಮದುರೆಯಲ್ಲೋ, ತಿರುಚಿಯಲ್ಲೋ ನಡೆದ ಘಟನೆ ಎಂದು ಕಾಣುತ್ತದೆ. ಸಿನಿಮಾ ಬಗ್ಗೆ ಮಡಿವಂತರಿಗೆ ತುಂಬಾ ಕೆಟ್ಟ ಭಾವನೆ ಇದ್ದ ಕಾಲವದು. ನಾನು ಚಿತ್ರರಂಗಕ್ಕೆ ಹೋಗಬೇಕು ಎಂದು ಬಯಸಿದಾಗಲೂ ಅದೇ ಭಾವನೆ ಅನೇಕರಲ್ಲಿ ಇತ್ತು. ಅದರ ಅರಿವಿದ್ದೂ ಸಿನಿಮಾಗೆ ಹೋಗಲೇಬೇಕೆಂಬ ಹಟ ಮಾತ್ರ ನನ್ನಿಂದ ದೂರವಾಗಿರಲಿಲ್ಲ.`ವೀರಸಂಕಲ್ಪ~ ಚಿತ್ರದಲ್ಲಿ ಅಭಿನಯಿಸಲೆಂದು ಮದ್ರಾಸ್‌ಗೆ ಹೊರಟೆ. ಆ ಸಂದರ್ಭದಲ್ಲಿ ಸೋದರಮಾವನ ಮನೆ ರಾಯಪೇಟದಲ್ಲಿತ್ತು. ಹಿಂದೆ ಇದ್ದ ಮನೆಗಿಂತ ಇದು ಚೆನ್ನಾಗಿತ್ತು. ಅವರ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿತ್ತೆಂಬುದಕ್ಕೆ ಅದೇ ಸಾಕ್ಷಿ. ಅವರ ಮನೆ ನಾಟಕದವರ ಮನೆಯಂತಿತ್ತು. ನಾನು, ಎಂ.ಪಿ.ಶಂಕರ್, ಬಿ.ಎಂ.ವೆಂಕಟೇಶ್, ರಾಜೇಶ್, ಶ್ರೀರಂಗಮೂರ್ತಿ, ಸಿ.ವಿ.ಶಿವಶಂಕರ್, ಭಾರ್ಗವ ಎಲ್ಲರೂ ಅಲ್ಲಿದ್ದೆವು. ನನ್ನ ಅತ್ತೆ ಅನ್ನಪೂರ್ಣೇಶ್ವರಿ ಅಷ್ಟೂ ಜನರಿಗೆ ಎಲೆಗಳನ್ನು ಹಾಕಿ, ಸ್ವಲ್ಪವೂ ಬೇಜಾರಿಲ್ಲದೆ ಪಾಂಗಿತವಾಗಿ ಊಟ ಬಡಿಸುತ್ತಿದ್ದರು. ಆ ಊಟಕ್ಕಾಗಿ ನಾವೆಲ್ಲಾ ಕಾಯುತ್ತಿದ್ದೆವು. ಅಷ್ಟು ಜನ ಸ್ನಾನ ಮಾಡಬೇಕಿದ್ದರಿಂದ ಬೆಳಗಿನ ಜಾವ ಮೂರು ಗಂಟೆಗೇ ಎದ್ದು, ಹತ್ತಿರದ ಹ್ಯಾಂಡ್ ಬೋರ್‌ವೆಲ್‌ನಲ್ಲಿ ನೀರು ಪಂಪ್ ಮಾಡಿಕೊಂಡು, ತಣ್ಣೀರುಸ್ನಾನ ಮಾಡುತ್ತಿದ್ದೆವು. ಕಿಟ್ಟಣ್ಣ (ಹುಣಸೂರು ಕೃಷ್ಣಮೂರ್ತಿ) ಆಗ ಹಡ್ಸನ್ ಕಾರು ಇಟ್ಟುಕೊಂಡಿದ್ದರು. ನಮ್ಮೆಲ್ಲರ ಪಾಲಿಗೆ ಅದು ಬಸ್‌ನಂತಾಗಿಬಿಟ್ಟಿತ್ತು. ಆ ಕಾರಿನಲ್ಲಿ ಹನ್ನೆರಡು ಜನ ಹೋಗುತ್ತಿದ್ದೆವು. ಸ್ನಾನ ಮಾಡಿಕೊಂಡು ಸಿದ್ಧರಾಗಿ, ಬೆಳಗಿನ ಜಾವ ನಾಲ್ಕು ನಾಲ್ಕೂವರೆಗೆಲ್ಲಾ ನಾವು ಕಾರು ಹತ್ತಿ ಕೂರುತ್ತಿದ್ದೆವು. ಅದು ಪಾಂಡಿ ಬಜಾರ್‌ಗೆ ಹೋಗುತ್ತಿತ್ತು. ಅಲ್ಲೊಂದು ಕಾಫಿಯನ್ನೋ ಟೀಯನ್ನೋ ಕುಡಿದು ಕೋಡಂಬಾಕಂನ ಕೊನೆಯ ಭಾಗದಲ್ಲಿದ್ದ ಗೋಲ್ಡನ್ ಸ್ಟುಡಿಯೋಗೆ ಹೋಗುತ್ತಿದ್ದೆವು.ನಾನು ಮೊದಲ ಮೇಕಪ್ ಹಾಕಿಸಿಕೊಂಡ ದಿನವಿನ್ನೂ ನೆನಪಿದೆ. `ರಾಹುಕಾಲ ಇಲ್ಲದ ಟೈಮ್ ನೋಡಿ ಇವನಿಗೆ ಮೇಕಪ್ ಹಾಕಿ~ ಎಂದು ಕಿಟ್ಟಣ್ಣ ಹೇಳಿದ್ದರು. ಅಂದು ಮಧ್ಯಾಹ್ನ 1.30ರಿಂದ ರಾಹುಕಾಲವಿತ್ತು. 12 ಗಂಟೆಗೆ ನನಗೆ ಮೇಕಪ್ ಹಾಕಿದವರು ಮಹದೇವಯ್ಯ. ಮುಂದೆ ಅವರು ನಿರ್ಮಾಪಕರೂ ಆದರು. ರತ್ನಕುಮಾರಿ ಎಂಬ ನಟಿಯನ್ನು ಕರೆದುಕೊಂಡು ಬಂದು ದೊಡ್ಡ ನಟಿಯಾಗಿ ಬೆಳೆಯಲು ಕಾರಣರಾದರು. ಆ ರತ್ನಕುಮಾರಿಯೇ ಮುಂದೆ ವಾಣಿಶ್ರೀ ಆದದ್ದು. ಆಂಧ್ರದಲ್ಲಿ ಅವರು ಅತ್ಯಂತ ಬೇಡಿಕೆಯ ನಾಯಕನಟಿಯಾಗಿ ಹೆಸರಾದರು.ಕೇವಲ ಮೇಕಪ್‌ಮನ್ ಅಷ್ಟೇ ಆಗಿಲ್ಲದ ಮಹದೇವಯ್ಯನವರಿಗೆ ಆ ದಿನ ನನ್ನ ಮುಖ ಸಿಕ್ಕಿಬಿಟ್ಟಿತ್ತು. ನನ್ನ ಮೊಂಡು ಮೂಗನ್ನು ನೇರಗೊಳಿಸಬೇಕೆಂಬುದು ಅವರ ಯತ್ನ. ಅಲ್ಲಿ ಶೇಡ್, ಇಲ್ಲಿ ಶೇಡ್ ಅಂತ ಏನೇನೋ ಹಾಕಿ ಪ್ರಯತ್ನಿಸಿದರು. ಆ ಮೂಗು ಹೇಗೆ ನೇರವಾದೀತು? ಕ್ಯಾಮೆರಾಮನ್ ವೇಣು ಎಂಬುವರೂ ಬಂದರು. `ಎಲ್ಲಿಂದ ಬಂತಯ್ಯಾ ಈ ಮೂಗು. ಈ ಕಡೆ ಲೈಟ್ ಹಾಕಿದರೆ ಹಂಗೆ ಕಾಣುತ್ತೆ. ಆ ಕಡೆ ಹಾಕಿದರೆ ಹಿಂಗೆ ಕಾಣುತ್ತೆ. ಯಾವ ಸೀಮೆ ಮೂಗಯ್ಯಾ ಇದು~ ಎಂದರು. ಮಹದೇವಯ್ಯನವರ ಕೈಗೆ ಮುಖ ಒಪ್ಪಿಸಿ ಕುಳಿತಿದ್ದ ನನ್ನ ಮನದಲ್ಲಿ ನಟಿಸಬೇಕೆಂಬ ಬಯಕೆಯಷ್ಟೇ ಇತ್ತು. ಅವರೆಲ್ಲಾ ನನ್ನ ಮೂಗಿನ ಕುರಿತೇ ಸಾಕಷ್ಟು ಹೊತ್ತು ಚರ್ಚೆ ನಡೆಸಿದರು.ನಾಲ್ಕು ಗಂಟೆಯ ನಂತರ ನನ್ನ ಜೀವನದ ಮೊಟ್ಟ ಮೊದಲ ಶಾಟ್ ಬಂತು. ಎಂ.ಪಿ.ಶಂಕರ್ ಜಗರಾಯನ ಪಾತ್ರ ಮಾಡಿದ್ದರು. ಅವರು ಸಿಂಹಾಸನದ ಮೇಲೆ ಕೂರು ಎಂದು ನನಗೆ ಹೇಳುವುದು. ನಾನು ಆ ಸಿಂಹಾಸನ ಏರಿ ಕೂರುವುದೇ ಆ ಶಾಟ್. ನನ್ನ ಶಾಟ್‌ನ ಚಿತ್ರೀಕರಣ ನಡೆಯುತ್ತಿದ್ದ ಸ್ಟುಡಿಯೋದಲ್ಲೇ ಇನ್ನೊಂದು ಚಿತ್ರೀಕರಣ ನಡೆಯುತ್ತಿತ್ತು. ಪಂಡರೀಬಾಯಿ ಹಾಗೂ ರಮಾದೇವಿ ಅದರಲ್ಲಿ ತೊಡಗಿಕೊಂಡಿದ್ದರು. ಅವರಿಬ್ಬರೂ ನಾನು ಸಿಂಹಾಸನ ಹತ್ತಿದ ಮೊದಲನೇ ಶಾಟ್ ನೋಡಿದರು. `ಇವನ್ಯಾರು ಕುಳ್ಳ. ಬಹಳ ಚುರುಕಾಗಿ ಇದಾನೆ. ಎಲ್ಲಿಂದ ಕರೆದುಕೊಂಡು ಬಂದಿರಿ ಇವನನ್ನು~ ಎಂದು ರಮಾದೇವಿ ಕಿಟ್ಟಣ್ಣನನ್ನು ಕೇಳಿದರು. `ಅವನು ನನ್ನ ಸೋದರಳಿಯ. ಹಾಗೆಲ್ಲಾ ನೀನು ದೃಷ್ಟಿ ಹಾಕಬೇಡ. ಚಿತ್ರರಂಗದಲ್ಲಿ ಅವನು ಸಿಂಹಾಸನದ ಮೇಲೆ ಕೂತಿರಬೇಕು. ಅದಕ್ಕೇ ಮೊದಲ ಶಾಟ್‌ನಲ್ಲೇ ಅವನನ್ನು ಸಿಂಹಾಸನದ ಮೇಲೆ ಕೂರಿಸಿದ್ದೇನೆ~ ಎಂದು ಮಾವ ರಮಾದೇವಿಯರಿಗೆ ಹೇಳಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.ಹತ್ತು ನಿಮಿಷಗಳಾಗಿತ್ತಷ್ಟೆ. ಕ್ಯಾಮೆರಾಮನ್ ಬಂದು, `ಸಿಂಹಾಸನ ಇಳಿಯುವ ಶಾಟ್ ಕೂಡ ಇದ್ದರೆ ಅದನ್ನೂ ತೆಗೆದುಬಿಡೋಣ. ಲೈಟಿಂಗ್ ಎಲ್ಲಾ ಸಿದ್ಧವಾಗಿದೆ~ ಎಂದರು. ಕಿಟ್ಟಣ್ಣ ಸಿಂಹಾಸನದಿಂದ ಇಳಿಯುವ ಶಾಟನ್ನು ಕೂಡ ತೆಗೆದರು. ಆ ಮೊದಲ ಶಾಟ್ ಒಂದು ವಿಧದಲ್ಲಿ ನನ್ನ ಸಿನಿಮಾ ಬದುಕಿನ ರೂಪಕ. ಸಿಂಹಾಸನದ ಮೇಲೆ ಕೂತು ಠೀವಿಯಿಂದ ಬೀಗಿದ ನಾನು ಪದೇಪದೇ ಅದೇ ಸಿಂಹಾಸನದಿಂದ ಕೆಳಗಿಳಿದದ್ದೂ ಇದೆ.ಗೋಲ್ಡನ್ ಸ್ಟುಡಿಯೋಗೆ ದಕ್ಷಿಣ ಭಾರತದ ಬೇರೆಬೇರೆ ಚಿತ್ರರಂಗಗಳ ದಿಗ್ಗಜರು ಬರುತ್ತಿದ್ದರು. ನಾನು ರೆಕಾರ್ಡಿಂಗ್ ನಡೆಯುವ ಪ್ರಕ್ರಿಯೆಯನ್ನು ನೋಡಿ ರೋಮಾಂಚಿತನಾಗಿದ್ದೆ. ರಾಮನಾಥ್, ರಾಜಾ ಹಾಗೂ ಜಿಕ್ಕಿ ಎಂಬ ಎಂಜಿನಿಯರ್‌ಗಳು ರೆಕಾರ್ಡಿಂಗ್ ಮಾಡುತ್ತಿದ್ದುದನ್ನು ನೋಡಿದ ನನಗೆ ಆಗ ಅದೆಲ್ಲವೂ ಬೆರಗು.`ವೀರಸಂಕಲ್ಪ~ ಚಿತ್ರೀಕರಣ ಶುರುವಾದರೂ ನಾಯಕಿ ಇನ್ನೂ ಆಯ್ಕೆಯಾಗಿರಲಿಲ್ಲ. ಆಗ ತೆಲುಗು ನಾಟಕಗಳನ್ನು ಆಡಿಸುತ್ತಿದ್ದ ಚಂಚುರಾಮಯ್ಯ ಎಂಬೊಬ್ಬರು ಮಹದೇವಯ್ಯನವರ ಜೊತೆ ಮಾವನ ಮನೆಗೆ ಬಂದರು. ರತ್ನಕುಮಾರಿ ಎಂಬ ಹುಡುಗಿಯ ಫೋಟೊ ತೋರಿಸಿದರು. ತಮ್ಮ ಚಿತ್ರದಲ್ಲಿ ಎಲ್ಲರೂ ಹೊಸಬರೇ ಇರಬೇಕು ಎಂಬುದು ಕಿಟ್ಟಣ್ಣನ ನಿರ್ಧಾರವಾಗಿತ್ತು. ಅನೇಕ ಹುಡುಗಿಯರ ಫೋಟೊಗಳನ್ನು ನಾಯಕಿ ಪಾತ್ರಕ್ಕಾಗಿ ನೋಡಿ ತಿರಸ್ಕರಿಸಿದ್ದ ಅವರಿಗೆ ರತ್ನಕುಮಾರಿ ಪಾತ್ರಕ್ಕೆ ಹೊಂದುತ್ತಾರೆ ಎಂದೆನ್ನಿಸಿತು. ಆಮೇಲೆ ನಾನೇ ಹಡ್ಸನ್ ಕಾರಿನಲ್ಲಿ ರತ್ನಕುಮಾರಿಯವರನ್ನು ಕರೆದುಕೊಂಡು ಬಂದೆ. ಅವರು ಮೊದಲ ಶಾಟ್‌ನಲ್ಲೇ `ಸಿಟ್ಯಾಕೋ ಸಿಡುಕ್ಯಾಕೋ ನನ್ನ ಜಾಣ~ ಹಾಡಿಗೆ ಅಭಿನಯಿಸಿದರು.ಕೋಡಂಬಾಕಂನಲ್ಲಿ ರೈಲ್ವೆಗೇಟ್ ದಾಟಿದ ಮೇಲೆ ಸಾಲುಸಾಲು ಸ್ಟುಡಿಯೋಗಳು. ಅಲ್ಲಿಗೆ ಹೋಗುವ ಕಾರುಗಳೆಲ್ಲಾ ಅಲ್ಲಿ ನಿಲ್ಲುತ್ತಿದ್ದವು. ಆಗ ಕಾರುಗಳಿಗೆ ಟಿಂಟೆಡ್ ಗಾಜುಗಳು ಇರುತ್ತಿರಲಿಲ್ಲ. ಎನ್‌ಟಿಆರ್, ಎಂಜಿಆರ್, ಸಾವಿತ್ರಿ, ವೈಜಯಂತಿ ಮಾಲಾ ಎಲ್ಲರ ದರ್ಶನವೂ ಅಲ್ಲಿ ಸಾಧ್ಯ. ಅವರನ್ನೆಲ್ಲಾ ನೋಡಲು ಜನಜಾತ್ರೆಯೇ ಆಗುತ್ತಿತ್ತು.ನಾವೂ ಕಾರಿನಿಂದ ಕತ್ತನ್ನು ಎತ್ತರ ಮಾಡಿಕೊಂಡು ಆ ಎಲ್ಲಾ ನಟ-ನಟಿಯರನ್ನು ಕುತೂಹಲದಿಂದ ನೋಡುತ್ತಿದ್ದೆವು. ರತ್ನಕುಮಾರಿ ಕೂಡ ಹಾಗೆಯೇ ನೋಡುತ್ತಿದ್ದರು. ಮುಂದೆ ಅದೇ ರತ್ನಕುಮಾರಿ ತಮ್ಮ ನಾಯಕಿಯಾಗಬೇಕು ಎಂದು ದೊಡ್ಡ ನಟರೆಲ್ಲಾ ಬಯಸಿದ್ದು ಸಿನಿಮೀಯ ಎನ್ನಿಸಿದರೂ ಸತ್ಯ.

ಮುಂದಿನ ವಾರ: ನನ್ನೊಳಗೆ ನಿರ್ಮಾಪಕ  ಹುಟ್ಟತೊಡಗಿದ್ದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry