ಸೋಮವಾರ, ಡಿಸೆಂಬರ್ 9, 2019
26 °C

ನನ್ನ ಮೊಹ್ಮದ ಸಿಕ್ಕರೂ ಹುಡುಕಾಟ ನಿಲ್ಲಲಿಲ್ಲ!

ಟಿ.ಕೆ.ತ್ಯಾಗರಾಜ್
Published:
Updated:
ನನ್ನ ಮೊಹ್ಮದ ಸಿಕ್ಕರೂ ಹುಡುಕಾಟ ನಿಲ್ಲಲಿಲ್ಲ!

ನಮ್ಮ  ಪ್ರಭೂ, ನಿಶ್ಚಯವಾಗಿಯೂ, ನೀನು ಮನುಷ್ಯರೆಲ್ಲರನ್ನೂ ಒಂದು ದಿವಸ ಒಂದುಗೂಡಿಸಲಿರುವೆ, ಆ ದಿವಸದ (ಆಗಮನದ) ಬಗ್ಗೆ ಏನೇನೂ ಸಂಶಯವಿಲ್ಲ, ನಿಶ್ಚಯವಾಗಿಯೂ ಅಲ್ಲಾಹನು ವಾಗ್ದಾನ ಉಲ್ಲಂಘಿಸನು.

-(ಸೂರಃ ಆಲೆ-ಇಮ್ರಾನ್‌ನ 9ನೇ ಆಯತ್)

ನಾನು ಮಡಿಕೇರಿಯ ಸೇಂಟ್ ಮೈಖೇಲ್ಸ್ ಶಾಲೆಯಲ್ಲಿ ಸುಮಾರು ನಾಲ್ಕೂವರೆ ದಶಕಗಳ ಹಿಂದೆ ಐದನೇ ತರಗತಿ ಓದುತ್ತಿದ್ದಾಗ ಎಂ.ಎ.ಮೊಹ್ಮದ್ ನನ್ನ ಸಹಪಾಠಿಯಾಗಿದ್ದವನು. ಅದೇಕೆ ಐದನೇ ತರಗತಿ ಓದುತ್ತಿದ್ದಾಗ ಸಹಪಾಠಿಯಾಗಿದ್ದವನು ಎನ್ನುತ್ತಿದ್ದೇನೆಂದರೆ ಆ ವರ್ಷ ನಡೆದ ಘಟನೆಯೊಂದರಿಂದಲೇ ಅವನು ನನಗೆ ಹೆಚ್ಚಾಗಿ ಕಾಡುತ್ತಿರುವುದು. ಆ ನಂತರ ಅವನು ನನ್ನೊಂದಿಗೆ ಅದೇ ಶಾಲೆಯಲ್ಲಿ ಓದಿದನೋ ಇಲ್ಲವೋ ಎಂಬುದು ಇವತ್ತಿಗೂ ನೆನಪಾಗುತ್ತಿಲ್ಲ.

ಆದರೆ ಅವನ ಚಹರೆ ನನಗಿನ್ನೂ ನೆನಪಿದೆ. ಅವನು ಕೆಂಪಗೆ ಟೊಮ್ಯಾಟೊ ಹಣ್ಣಿನಂತೆ ಗುಂಡಗಿದ್ದ. ಮುಳ್ಳಿನಂಥ ಕೂದಲುಗಳಿದ್ದ ತಂಬಿಗೆಯಂಥ ತಲೆ. ಹಾರೆಯಂತೆ ಬಲಿಷ್ಠವಾಗಿದ್ದ ಕೈಕಾಲುಗಳು. ಒಂದೊಂದೂ ಸಣ್ಣ ಸುತ್ತಿಗೆಯಂತೆ ಶಕ್ತಿಶಾಲಿಯಾಗಿದ್ದ ಕೈಬೆರಳುಗಳು. ಅದೊಂಥರಾ ಹಸಿರು ಮಿಶ್ರಿತ ಕಂದು ಬಣ್ಣದ ಕಣ್ಣುಗಳು. ಅವನಿಗೆ ನನ್ನ ಮೇಲೆ ಅದೆಂಥದ್ದೋ ಪ್ರೀತಿ. ಶಾಲೆಗೆ ಬಂದರೆ ಸಾಕು ನನ್ನ ಪಕ್ಕದಲ್ಲೇ ಕೂರಬೇಕು, ನನ್ನ ಜತೆಯೇ ಇರಬೇಕು.

ನಮ್ಮ ಶಾಲೆಯ ಚರ್ಚ್ ಬಳಿಯೇ ಫಾದರ್ ಜೇಮ್ಸ್ ರಾವ್  ಅವರ ನಿವಾಸ ಇತ್ತು. ಬ್ರಾಹ್ಮಣರಾಗಿದ್ದ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದರಂತೆ. ತುಂಬ ಸುಂದರವಾಗಿದ್ದ ಜೇಮ್ಸ್ ರಾವ್ ಇಂಗ್ಲಿಷ್ ಚಲನಚಿತ್ರಗಳಲ್ಲಿ ಬರುವ ಕೆಂಪಗಿನ ಫಾದರ್‌ರಂತೆಯೇ ಕಾಣುತ್ತಿದ್ದರು. ದೇವರಂಥ ಮನುಷ್ಯ. ಅಚ್ಚುಕಟ್ಟಾಗಿ ಟ್ರಿಮ್ ಮಾಡಿದ್ದ ಕಪ್ಪಗಿನ ಗಡ್ಡ. ತಲೆಯ ಮೇಲೆ ಉರುಟಾದ ಒಂದು ಟೋಪಿ. ಅದೆಂಥದ್ದೋ ಆಕರ್ಷಣೆ ಅವರಲ್ಲಿ. ಅಧ್ಯಾಪಕರಾಗಿದ್ದ ಸಿಸ್ಟರ್ ಲಾರೆನ್ಷಿಯಾ, ಸಿಸ್ಟರ್ ರೋಸಿ, ಸಿಸ್ಟರ್ ಮರಿಯಾ, ಸಿಸ್ಟರ್ ಸ್ಟೆಲ್ಲಾ ಮೇರಿ, ಲಕ್ಷ್ಮೀ, ಭುವನೇಶ್ವರಿ, ಪಿಂಟೋ, ಲಕ್ಷ್ಮಣ್ ಎಲ್ಲರೂ ನಮ್ಮನ್ನೆಲ್ಲ ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಹೆರಾಲ್ಡ್ ಮೈಖೇಲ್, ರಾಜಸುಬ್ರಹ್ಮಣ್ಯ, ಎಂ.ಐ.ನಾಣಯ್ಯ, ಜೋಕಿಂ, ಬೊಳ್ಳಮ್ಮ, ಮ್ಯಾಗಿ, ಭಾಗಿ, ಪೆಚ್ಚ (ಫೆಲಿಕ್ಸ್) ನನ್ನ ಸಹಪಾಠಿಗಳಲ್ಲಿ ಕೆಲವರು. ಫಾದರ್ ಆಗಲಿ, ಸಿಸ್ಟರ್ಸ್‌  ಆಗಲೀ ಯಾರೂ ನಮಗೆ ಕ್ರೈಸ್ತ ಅನುಯಾಯಿಗಳಂತೆ ಪಾಠ ಮಾಡಿರಲಿಲ್ಲ. ಅನ್ಯ ಧರ್ಮೀಯರೆಂಬ ತಾರತಮ್ಯ ಮಾಡಿರಲಿಲ್ಲ. ಅವರೆಲ್ಲ ಕಲಿಸಿದ್ದು ನಮಗೆ ನಿಜಧರ್ಮದ ಮಾನವೀಯ ಪ್ರೀತಿಯ ಪಾಠ. ನಾವೆಲ್ಲ ಸಹಪಾಠಿಗಳು ಯಾವುದೇ ಸಂತಸದ ಗಳಿಗೆಯನ್ನು ಕಳೆದುಕೊಳ್ಳುತ್ತಿರಲಿಲ್ಲ. ಜಗಳವಾಡಿದರೂ ಬಾಲ್ಯದ ಹುಡುಗಾಟದ ಜಗಳವಾಗಿತ್ತೇ ಹೊರತು ಅದಕ್ಯಾವ ಕೊಳಕು ಲೇಪವೂ ಇರಲಿಲ್ಲ. ಒಬ್ಬರಿಗೆ ಇನ್ನೊಬ್ಬರ ಜಾತಿ ಗೊತ್ತಿರಲಿಲ್ಲ, ಅದನ್ನು ತಿಳಿದುಕೊಳ್ಳಬೇಕೆಂಬ ಕೆಟ್ಟ ಕುತೂಹಲವೂ ಇರಲಿಲ್ಲ. ಅಂಥ ಮುಗ್ಧ ಮನಸ್ಸು. 

ಅದೊಂದು ದಿನ ಫಾದರ್ ಜೇಮ್ಸ್ ರಾವ್ ನಿವಾಸದ ಬಳಿಯೇ ಇದ್ದ ವಾಟರ್ ಟ್ಯಾಂಕನ್ನು ಒಡೆದು ಇನ್ನಷ್ಟು ದೊಡ್ಡದಾದ ಟ್ಯಾಂಕ್ ಕಟ್ಟಿಸಿದ್ದರು. ಅಷ್ಟು ಎತ್ತರದ ಟ್ಯಾಂಕ್‌ನಲ್ಲಿ ಏನೆಲ್ಲ ಇರಬಹುದು ಎಂಬ ಕುತೂಹಲದಿಂದ ಟ್ಯಾಂಕಿನ ಪಕ್ಕದ ಮೆಟ್ಟಲುಗಳನ್ನೇರಿ ಇಣುಕಿ ನೋಡಿದೆ. ಅದರೊಳಗೋ ಬಣ್ಣ ಬಣ್ಣದ ಮೀನುಗಳು. ಅವುಗಳನ್ನು ಹಿಡಿಯುವ ಸಲುವಾಗಿ ಬಗ್ಗಿದ್ದೇ ತಡ ನೀರಿನಲ್ಲಿ ನಾನು ಬಿದ್ದಿರುವುದಷ್ಟೇ ಗೊತ್ತು. ಇನ್ನೇನು ಸತ್ತೇ ಹೋಗುತ್ತಿದ್ದೇನೆ ಅನ್ನಿಸುವಷ್ಟರಲ್ಲೇ ಅದೆಲ್ಲಿದ್ದನೋ ಮೊಹ್ಮದ ಟ್ಯಾಂಕಿಗೆ ಹಾರಿ ನನ್ನನ್ನು ಎಳೆದು ಹೊರ ತಂದು ಕಾಪಾಡಿದ್ದ. ಅವನೇನೂ ನನಗಿಂತ ವಯಸ್ಸಿನಲ್ಲಿ ದೊಡ್ಡವನಾಗಿರಲಿಲ್ಲ. ಆದರೆ ನನಗಿಂತ ದೃಢಕಾಯನಾಗಿದ್ದ. ಅವನಿಗೂ ಈಜು ಬರುತ್ತಿರಲಿಲ್ಲ. ಆದರೆ ನನ್ನನ್ನು ಕಾಪಾಡಲೇಬೇಕೆಂಬ ಛಲ ಮಾತ್ರ ಟ್ಯಾಂಕಿಗೆ ಧುಮುಕುವ ಸಾಹಸಕ್ಕೆ  ಧೈರ್ಯ ನೀಡಿತ್ತು. ಟ್ಯಾಂಕಿನ ಪಕ್ಕದಲ್ಲೇ ನಿಂತಿದ್ದ ನನ್ನ ಪಕ್ಕದ ಮನೆಯವಳೂ ಆಗಿದ್ದ ಕ್ಲಾಸ್‌ಮೇಟ್ ಲತಾ ನಾನು ನೀರಿಗೆ ಬಿದ್ದಿರುವುದನ್ನು ನೋಡಿ ಅಳುತ್ತಾ ನಿಂತಿದ್ದಳು.

ನನ್ನನ್ನು ಕಾಪಾಡಿದ ಮೊಹ್ಮದನನ್ನು, ನನ್ನ ನಿಜವಾದ ಗೆಳೆಯನನ್ನು ನಾನು ಮರೆಯುವುದಾದರೂ ಹೇಗೆ ಸಾಧ್ಯ? ಈ ಕಾರಣಕ್ಕೆ ಆತನ ಬಗೆಗಿನ ಕೃತಜ್ಞತೆಯಿಂದ ದಶಕಗಳ ಹಿಂದಿನ ಸಹಪಾಠಿಯಾಗಿದ್ದ ನನ್ನ ಮೊಹ್ಮದನಿಗಾಗಿ ಇತ್ತೀಚಿನ ವರ್ಷಗಳಲ್ಲಿ ಹುಡುಕಾಟ ಶುರು ಮಾಡಿದ್ದೆ. ಮಡಿಕೇರಿಯ ಬಹುತೇಕ ಎಲ್ಲ ನನ್ನ ಶಾಲಾ ದಿನಗಳ ಗೆಳೆಯರು, ಮುಸ್ಲಿಮರೇ ಮಾಲೀಕರಾಗಿರುವ ಅದೆಷ್ಟೋ ಅಂಗಡಿಗಳು, ಮಸೀದಿಗಳು, ನನ್ನ ಮುಸ್ಲಿಂ ಗೆಳೆಯರು.. ಹೀಗೆ ಮಡಿಕೇರಿಗೆ ಹೋದಾಗೆಲ್ಲ ಅವನ ಚಹರೆಗಳನ್ನು ವಿವರಿಸಿ ವಿಚಾರಿಸಿದ್ದೇನೆ. ಯಾರಿಂದಲೂ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಎಲ್ಲಿ ಹೋದ ನನ್ನ ಪ್ರೀತಿಯ ಗೆಳೆಯ? ಶಿವನನ್ನು ಹುಡುಕುತ್ತಾ ಅಲೆದ ಸಿದ್ಧರಾಮನ ಹಾಗೆ ಎಲ್ಲೆಲ್ಲೋ ಅಲೆದರೂ ನನ್ನ ಮೊಹ್ಮದ ಸಿಗಲೇ ಇಲ್ಲ ಎಂಬ ನಿರಾಶೆಯ ಭಾವದಲ್ಲಿ ವರ್ಷಗಳನ್ನೇ ಕಳೆದಿದ್ದೇನೆ. ಸೇಂಟ್ ಮೈಖೇಲ್ಸ್ ಶಾಲೆಯಲ್ಲಿ ಹಳೆಯ ದಾಖಲೆಗಳನ್ನಾದರೂ ಹುಡುಕಿಸಿ ಅವನ ವಿಳಾಸ ಪಡೆದು ಹೋಗೋಣವೆಂದರೆ ಅಲ್ಲಿ ಅಷ್ಟೊಂದು ಹಳೆಯ ದಾಖಲೆಯನ್ನು ಉಳಿಸಿರುವ ಸಾಧ್ಯತೆಯೇ ಇಲ್ಲ ಎಂದು ಮಿತ್ರರೊಬ್ಬರು ಹೇಳಿದ ಕಾರಣ ಅಂಥಾ ಪ್ರಯತ್ನವನ್ನೂ ಕೈ ಬಿಟ್ಟಿದ್ದೆ.

ನನ್ನ ಗೆಳೆಯ ಎಂ.ಎಚ್.ಯೂನಸ್ ಕೂಡಾ ನಾನು ಮಡಿಕೇರಿಗೆ ಹೋದಾಗೆಲ್ಲ ಮೊಹ್ಮದನನ್ನು ಹುಡುಕುವ ಪರಮ ಪವಿತ್ರ ಕಾರ್ಯದಲ್ಲಿ ಸಾಧ್ಯವಾದಷ್ಟೂ ನೆರವಾಗುತ್ತಿದ್ದ. ಕಳೆದ ವರ್ಷ ಅವನ ಡಿಸೈನರ್‌ವೇರ್ ಷೋರೂಂನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಇನ್ನೊಬ್ಬ ಗೆಳೆಯನ ಜತೆ ಮೊಹ್ಮದನ ಕುರಿತು ಪ್ರಸ್ತಾಪಿಸಿದೆವು. ಮೊಹ್ಮದನ ಬಗ್ಗೆ ಎಲ್ಲ ರೀತಿಯ ಮಾಹಿತಿ ಪಡೆದ ಆತ, ನೀವು ಹೇಳಿದಂತೆ ಅವನು ಎಂ.ಎ. ಮೊಹ್ಮದ್ ಅಲ್ಲ, ಎಂ.ಯು.ಮೊಹ್ಮದ್. ಅವನ ತಂದೆ ಉಮ್ಮರ್ ಅಂತ. ನೀವು ಹೇಳಿದ ಅವಧಿಯಲ್ಲಿ ಸೇಂಟ್ ಮೈಖೇಲ್ಸ್‌ನಲ್ಲಿ ಓದುತ್ತಿದ್ದ ಮೊಹ್ಮದ್ ಅವನೊಬ್ಬನೇ. ನೀವು ಹೇಳಿದ ಎಲ್ಲ ಲಕ್ಷಣಗಳೂ ಅವನವೇ ಎಂದು ಹೇಳುತ್ತಿದ್ದಂತೆ ಅದೆಷ್ಟು ಖುಷಿಯಾಯಿತೋ. ಅವನ ಭೇಟಿಯ ಕಲ್ಪನೆಯಲ್ಲಿ ವಿಹರಿಸುತ್ತಿದ್ದ ನನಗೆ ಆತ,  ‘ಆದರೆ ಅವನು ಈಗಿಲ್ಲ. ಕೆಲವು ವರ್ಷಗಳ ಹಿಂದೆ ಅಬ್ಬಿಫಾಲ್ಸ್‌ನಲ್ಲಿ ಜಾರಿ ಬಿದ್ದು ಮುಳುಗುತ್ತಿದ್ದ ಇನ್ಯಾರನ್ನೋ ಬದುಕಿಸಲು ಹೋಗಿ ಪ್ರಾಣ ಕಳೆದುಕೊಂಡ’ ಎನ್ನುತ್ತಿದ್ದಂತೆ ಕಣ್ಣೆದುರು ಕತ್ತಲೆ ಆವರಿಸಿದಂತಾಯಿತು. ಮಾತೇ ಹೊರಡದಂಥ ಸ್ಥಿತಿ. ಅಳು ಬಂದರೂ ಅವರೆದುರು ಅಳು ತಡೆದುಕೊಂಡೆ. ಮನೆಗೆ ವಾಪಸಾಗಿ ಅವನು ಹೀಗೆ ಸಿಗಬಾರದಿತ್ತು ಎಂದುಕೊಂಡು ಸಮಾಧಾನ ಆಗುವವರೆಗೂ ಬಿಕ್ಕಿ ಬಿಕ್ಕಿ ಅತ್ತೆ.

ಆದರೆ ಈ ಪ್ರಕರಣ ಅಲ್ಲಿಗೇ ಕೊನೆಗೊಳ್ಳಲಿಲ್ಲ. ನಾನು ಬೆಂಗಳೂರಿಗೆ ವಾಪಸಾದ ಮೇಲೆ ಗೆಳೆಯ ಯೂನಸ್ ಫೋನ್ ಮಾಡಿ, ‘ನೀವು ಹೇಳುತ್ತಿರುವ ಮೊಹ್ಮದ್ ಇನಿಷಿಯಲ್ಸ್‌ಗೂ ಸತ್ತು ಹೋಗಿದ್ದಾನೆ ಎಂದುಕೊಂಡಿರುವ ಮೊಹ್ಮದ್ ಇನಿಷಿಯಲ್ಸ್‌ಗೂ ವ್ಯತ್ಯಾಸವಿದೆ. ನನಗೆ ಮಾತ್ರ ಆತ ನಿಮ್ಮ ಮೊಹ್ಮದ್ ಅಲ್ಲ ಎಂದೇ ಅನ್ನಿಸುತ್ತಿದೆ. ನಾನು ಹುಡುಕುವ ಪ್ರಯತ್ನವನ್ನಂತೂ ನಿಲ್ಲಿಸುವುದಿಲ್ಲ’ ಎಂದು ಹೇಳಿದ್ದ. ಅವನು ನನ್ನನ್ನು ಸಮಾಧಾನಪಡಿಸಲು ಈ ಮಾತು ಹೇಳುತ್ತಿದ್ದಾನೆಂದೇ ನಾನು ಭಾವಿಸಿದ್ದೆ. ಎರಡು ದಿನಗಳೂ ಕಳೆದಿರಲಿಲ್ಲ. ಮತ್ತೆ ಯೂನಸ್ ಕರೆ ಮಾಡಿದ್ದ. ‘ನೀವು ಹೇಳಿದ ಮೊಹ್ಮದ್ ಮನೆ ಸ್ಟೋನ್ ಹಿಲ್ ಹತ್ತಿರ ಇದೆ. ಮೃತಪಟ್ಟ ಮೊಹ್ಮದ್ ಮನೆ ಗಣಪತಿ ಬೀದಿಯಲ್ಲಿದೆ. ಆತ ನಿಮಗಿಂತ ಕನಿಷ್ಠ ಎಂದರೂ ಹತ್ತು ಹನ್ನೆರಡು ವರ್ಷ ದೊಡ್ಡವನೇ ಇರಬೇಕು. ಈಗ ಭಾವಿಸಿರುವಂತೆ ಮೊಹ್ಮದ್ ಸಾವನ್ನಪ್ಪಿರುವ ಸಾಧ್ಯತೆ ಇಲ್ಲ. ಅವನ ಸಂಬಂಧಿಕರು ಸಿಕ್ಕಿದ್ದಾರೆ. ನಿಮ್ಮ ಮೊಹ್ಮದ್ ಸೌದಿ ಅರೇಬಿಯಾದ ಜೆಡ್ಡಾ ದಲ್ಲಿದ್ದಾನಂತೆ. ಸದ್ಯ ಮಗಳ ಮದುವೆಗಾಗಿ ಹೈದರಾಬಾದ್‌ಗೆ ಬಂದಿದ್ದಾನೆ ಎಂದು ಹೇಳುತ್ತಿದ್ದಾರೆ. ಅವನ ಮೊಬೈಲ್ ನಂಬರ್‌ಗೆ ಪ್ರಯತ್ನಿಸುತ್ತಿದ್ದೇನೆ. ನನಗೆ ನಂಬರ್ ಸಿಕ್ಕಿದ ನಂತರ ನಿಮ್ಮ ಮೊಹ್ಮದನೇ ಆತ ಎಂಬುದನ್ನು ಖಾತ್ರಿಪಡಿಸಿಕೊಂಡು ನಿಮಗೆ ತಿಳಿಸುತ್ತೇನೆ’ ಎಂದ.

ಯೂನಸ್ ಮಾತಿನಿಂದ ಮತ್ತೆ ಆಶಾಭಾವನೆ ಅರಳತೊಡಗಿತು. ಒಂದೇ ದಿನದ ನಂತರ ಮತ್ತೆ ಫೋನ್ ಮಾಡಿದ ಯೂನಸ್, ‘ನಿಮ್ಮ ಮೊಹ್ಮದ್ ನನಗೆ ಫೋನ್‌ನಲ್ಲಿ ಸಿಕ್ಕಿದ. ನೀರಿನ ಟ್ಯಾಂಕ್‌ಗೆ ಬಿದ್ದಿದ್ದ ನಿಮ್ಮನ್ನು ಕಾಪಾಡಿದ ಘಟನೆಯನ್ನು ಹೇಳಿದಾಗ, ‘ಹೌದು. ಅವತ್ತು ದೇವರು ನನಗೆ ಆ ರೀತಿ ಸೂಚಿಸಿದ್ದರಿಂದ ತ್ಯಾಗನನ್ನು ಕಾಪಾಡುವುದು ಸಾಧ್ಯವಾಯಿತು. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ’ ಎಂದ. ನಿಮ್ಮ ಬಗ್ಗೆ ವಿಚಾರಿಸಿಕೊಂಡ’ ಎಂದು ಹೇಳಿ ಆತನ ಮೊಬೈಲ್ ನಂಬರನ್ನೂ ನೀಡಿದ. ಅದೆಂಥ ಖುಷಿ. ಸಂಭ್ರಮಿಸಬೇಕಾದ ಗಳಿಗೆಯದು. ನಾನೂ ಮೊಹ್ಮದನಿಗೆ ಕರೆ ಮಾಡಿದೆ. ಹೌದು. ಅದೇ ಮೊಹ್ಮದ. ವಯಸ್ಸಿನ ಕಾರಣದಿಂದ ಧ್ವನಿಯಲ್ಲಿ ಬದಲಾವಣೆಯಾಗಿದ್ದರೂ ಬಾಲ್ಯದ ಮೊಹ್ಮದನ ಧ್ವನಿ ಗುರುತಿಸಿದ್ದೆ. ಅವನೂ ವಾಟ್ಸ್ ಆ್ಯಪ್‌ನಲ್ಲಿ ತನ್ನ ಫೋಟೊ ಕಳುಹಿಸಿದ. ಯಾವುದೇ ಅನುಮಾನವೂ ಉಳಿದಿರಲಿಲ್ಲ. ಈಗ ಉದ್ಯಮಿಯಾಗಿದ್ದಾನೆ. ಅವನು ಮಗಳ ಮದುವೆ ಮುಗಿಸಿ ದುಬೈಗೆ ವಾಪಸಾಗುವ ಆತುರದಲ್ಲಿದ್ದ. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ನನಗೆ ತಕ್ಷಣ ಹೈದರಾಬಾದ್‌ಗೆ ಹೋಗಿ ಅವನನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ.

ಈ ಮಧ್ಯೆ ಇದೇ ಘಟನೆ ಆಧರಿಸಿ ಕತೆಯೊಂದನ್ನು ಬರೆಯಲು ಆರಂಭಿಸಿದೆ. ಮೊಹ್ಮದ ಸಿಕ್ಕರೂ ನನ್ನ ಅಂತರಂಗದ ಹುಡುಕಾಟ ನಿಂತಿರಲಿಲ್ಲ. ನಾನು ಹುಡುಕುತ್ತಿರುವ  ಮೊಹ್ಮದ ಯಾರು ಎನ್ನುವ ಅನುಮಾನ ನನ್ನನ್ನೇ ಕಾಡತೊಡಗಿತು. ನಾನು ಹುಡುಕುತ್ತಿದ್ದುದು ನನ್ನ ಮೊಹ್ಮದನನ್ನು ರೂಪಿಸಿದ ಸಲ್ಲಲ್ಲಾಹು ಅಲೈಹಿವ ಸಲ್ಲಂ ಮೊಹ್ಮದ್ (ಪೈಗಂಬರ್) ಇರಬಹುದೇ ಎಂಬ ತಾಕಲಾಟದಲ್ಲಿ ಮುಳುಗಿಹೋದೆ.  ನಮ್ಮೊಳಗನ್ನು ಹುಡುಕುವ ಕಾರ್ಯ ಒಂದು ನಿರಂತರ ಪ್ರಕ್ರಿಯೆ. ಒಂದರ್ಥದಲ್ಲಿ ಆಧ್ಯಾತ್ಮಿಕ ಸಂಘರ್ಷದ ಈ ಪ್ರಶ್ನೆಗೆ ಉತ್ತರ ಸಿಗದೇ ಕತೆಯೂ ಪೂರ್ಣಗೊಳ್ಳಲಿಲ್ಲ.

ಈಗ ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ಬೀಸುತ್ತಿರುವ ಕೋಮು ವಿಷಗಾಳಿ ಒಬ್ಬೊಬ್ಬರನ್ನೇ ಬಲಿ ತೆಗೆದುಕೊಳ್ಳುತ್ತಿರುವ ನಡುವೆಯೇ ಮತ್ತೆ ಮತ್ತೆ ಮೊಹ್ಮದ ನನ್ನನ್ನು ಕಾಡುತ್ತಿದ್ದಾನೆ. ಸಹೋದರರಂತೆ ಸೌಹಾರ್ದದಿಂದ ಬದುಕುತ್ತಿದ್ದವರ ನಡುವೆ ಚುನಾವಣಾ ವ್ಯಾಪಾರ ಬಿರುಸಾಗಿ ನಡೆಯುತ್ತಿದೆ. ವಾತಾವರಣ ಕಲುಷಿತಗೊಳಿಸಿದವರೇ ಅಬ್ಬರಿಸುತ್ತಿದ್ದಾರೆ. ಹೆಣವನ್ನು  ಮೆರವಣಿಗೆಯಲ್ಲಿ ಕೊಂಡೊಯ್ಯುವವರು ಅರ್ಥವಿಲ್ಲದ ಸಂಬಂಧ ಕಲ್ಪಿಸಿ ಬೋಲೋ ಭಾರತ್ ಮಾತಾಕೀ ಜೈ ಎಂದು ಕೂಗುತ್ತಿದ್ದಾರೆ. ಕೋಮುವಾದವನ್ನೇ ಧರ್ಮ ಎಂಬಂತೆ, ರಾಷ್ಟ್ರೀಯತೆ ಎಂಬಂತೆ ಬಿಂಬಿಸುತ್ತಿರುವವರು ಹೆಣಗಳ ಮರೆಯಲ್ಲಿ ವಿಕಟನಗೆ ಬೀರುತ್ತಿದ್ದಾರೆ. ಸ್ವಾತಂತ್ರ್ಯವನ್ನೇ ಸ್ವೈರತೆಯಾಗಿಸಿಕೊಂಡ ಅತಿ ಅಲ್ಪಸಂಖ್ಯಾತ ಸಮುದಾಯವೊಂದು ಕಾನೂನು ಪಾಲನೆಗಿಂತ ತಮ್ಮದೇ ಆದ ಸುಪ್ತ ಕಾನೂನೊಂದನ್ನು ಅನಧಿಕೃತವಾಗಿ ದೇಶದಾದ್ಯಂತ ವಿಸ್ತರಿಸುವ ಹವಣಿಕೆಯಲ್ಲಿ ನೆಮ್ಮದಿಯನ್ನೇ ಹಾಳುಗೆಡವುತ್ತಿದೆ. ಮಲಿನಗೊಂಡ ಮನಸುಗಳು ನಿರ್ಮಿಸುತ್ತಿರುವ ರೋಗಗ್ರಸ್ತ ಸಮಾಜವನ್ನೇ ಆರೋಗ್ಯವಂತ ಸಮಾಜ ಎಂಬಂತೆ ನಂಬಿಸಲಾಗುತ್ತಿದೆ. ಸುಳ್ಳನ್ನೇ ಸತ್ಯ ಎಂಬ ಸಂಚು ರೂಪಿಸಿದವರ ನಡುವೆ ಅದೆಷ್ಟೋ ಮುಗ್ಧರು ತಮ್ಮ ಸಾವಿನ ಕುಣಿಕೆ ಹಿಡಿದುಕೊಂಡು ಓಡಾಡುತ್ತಿರುವುದು ಆತಂಕ ಹುಟ್ಟಿಸುವಂತಿದೆ.

ನಾನಾ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳ ಬಹುತ್ವದ ಭಾರತದಲ್ಲಿ ತದ್ವಿರುದ್ಧ ದಿಕ್ಕಿನಲ್ಲಿ ಸಾಗಬೇಕೆಂಬ ಹುಸಿ ಏಕತೆಯನ್ನು ಒದರುವವರ ವಂಚನೆಯಿಂದ ಪಾರಾಗಿ ಸಮನ್ವಯ, ಸಾಮರಸ್ಯದಿಂದ ಬದುಕುವುದಕ್ಕೆ ಎಲ್ಲರ ಮನಸ್ಸು ಮಲ್ಲಿಗೆಯಾಗಬೇಕು. ಇದು ಸಾಧ್ಯವಾಗುವುದಕ್ಕೆ ಕಬೀರ ಹೇಳಿದ ನಮ್ಮೆದೆಯೊಳಗಿನ ನಿರಾಕಾರ ರಾಮನನ್ನು (ಅಯೋಧ್ಯೆಯ ರಾಮನಲ್ಲ) ನನ್ನ ಮೊಹ್ಮದ ಹುಡುಕಬೇಕು. ಏಸುವಿಗೆ ಪ್ರೇರಣೆಯಾದ ಬುದ್ಧನನ್ನು ಮೈಖೇಲ ಅರಸಬೇಕು, ಮ್ಯಾಗಿ, ಭಾಗಿಯರು ತಮ್ಮಂತರಂಗದಲ್ಲಿ ಬಸವಣ್ಣನನ್ನೂ ಹುಡುಕುವುದು ಸಾಧ್ಯವಾಗಬೇಕು. ಇದು ಒಬ್ಬರು ಇನ್ನೊಬ್ಬರ ನಂಬಿಕೆಯನ್ನು ಅರಿತು ಪರಸ್ಪರ ಗೌರವಿಸುವ ಸಹನೆಯನ್ನು ಕಲಿಯುವ ಬಗೆ. ಈ ಅಂತರಂಗದ ಹುಡುಕಾಟ ಪ್ರಕ್ರಿಯೆಯಲ್ಲಿ ಅರಳುವ ಮನುಷ್ಯ ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಬಲ್ಲನು. ಈ ಅರಿವು ಮಾತ್ರ ನಮ್ಮನ್ನು ಕಾಯಬಲ್ಲುದು. ಅದಕ್ಕಾಗಿಯೇ ಎರಡು ಅತಿರೇಕಗಳ ನಡುವೆ ಮೌನಕ್ಕೆ ಶರಣಾಗಿ ಭಾವಬೆಸುಗೆಯ ವಿವೇಕದ ಬೆಳಕಿನಲ್ಲಿ ನಾವು ಮುನ್ನಡೆಯಬೇಕು.

ಪ್ರತಿಕ್ರಿಯಿಸಿ (+)