ನಮೋ ನಿರಂಕುಶ ನಡೆಯ ಸಾಂಸ್ಥಿಕ ಬೆಲೆ

7

ನಮೋ ನಿರಂಕುಶ ನಡೆಯ ಸಾಂಸ್ಥಿಕ ಬೆಲೆ

ರಾಮಚಂದ್ರ ಗುಹಾ
Published:
Updated:
ನಮೋ ನಿರಂಕುಶ ನಡೆಯ ಸಾಂಸ್ಥಿಕ ಬೆಲೆ

ಈ ಅಂಕಣದಲ್ಲಿ ಸಮಾಜ ಮತ್ತು ರಾಜಕಾರಣಕ್ಕೆ ಒತ್ತು ನೀಡಿದ್ದೇನೆ. ಯಾಕೆಂದರೆ ಅರ್ಥಶಾಸ್ತ್ರಕ್ಕಿಂತ ಈ ಎರಡು ವಿಷಯಗಳು ನನಗೆ ಹೆಚ್ಚು ಗೊತ್ತು. ಅದಲ್ಲದೆ, ಅರ್ಥಶಾಸ್ತ್ರಜ್ಞರು ಪರಸ್ಪರರ ವಾದವನ್ನು ಒಪ್ಪಿಕೊಳ್ಳುವುದು ಬಹಳ ವಿರಳ. ನನಗೆ ಅರ್ಥಶಾಸ್ತ್ರದಲ್ಲಿ ಪರಿಣತರಾದ ಮೂವರು ಗೆಳೆಯರಿದ್ದಾರೆ- ಅವರಲ್ಲಿ ಒಬ್ಬರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ₹500 ಮತ್ತು ₹1,000 ಮುಖಬೆಲೆಯ ನೋಟು ರದ್ದತಿ ನಿರ್ಧಾರವನ್ನು ಖಂಡತುಂಡವಾಗಿ ವಿರೋಧಿಸಿದ್ದಾರೆ.ಅದನ್ನು ಅವರು ಬಹಿರಂಗವಾಗಿಯೂ ಹೇಳಿದ್ದಾರೆ. ಎರಡನೆಯವರು ಅದನ್ನು ಬಲವಾಗಿ ಒಪ್ಪುವವರು ಮತ್ತು ಅವರೂ ಅದನ್ನು ಬಹಿರಂಗವಾಗಿ ಹೇಳಿದ್ದಾರೆ. ಮೂರನೆಯವರ ಬಗ್ಗೆ ಹೇಳುವುದಾದರೆ ಅವರು ಯಾರದೇ ಪರ ವಹಿಸಲು ನಿರಾಕರಿಸುತ್ತಾರೆ; ಸಾಧಾರಣ ಪ್ರಮಾಣದ ಹಣದುಬ್ಬರ, ಭಾರಿ ಪ್ರಗತಿಯ ಸನ್ನಿವೇಶದಲ್ಲಿ ಇಂತಹ ನೀತಿಯನ್ನು ಹಿಂದೆಂದೂ ಪ್ರಯತ್ನಿಸಿ ನೋಡಲಾಗಿಲ್ಲ, ಹಾಗಾಗಿ ದೀರ್ಘಾವಧಿಯಲ್ಲಿ ಇದು ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲಾಗದು ಎಂದಷ್ಟೇ ಹೇಳುವ ಬುದ್ಧಿವಂತಿಕೆ ತೋರುತ್ತಾರೆ.ನೋಟು ರದ್ದತಿಯ ದಿಢೀರ್ ಕ್ರಮ ಭಾರತದ ಅರ್ಥವ್ಯವಸ್ಥೆಗೆ ವರವಾಗಲಿದೆಯೇ ಎಂಬುದು ನಮಗೆ ತಿಳಿಯಲು ಹಲವು ವರ್ಷಗಳು ಬೇಕು. ಆದರೆ, ಇದು ಕಾರ್ಯರೂಪಕ್ಕೆ ಬಂದ ಮೊದಲ ತಿಂಗಳಲ್ಲಿ, ದೇಶದ ಸಾಂಸ್ಥಿಕ ಜೀವನದ ಮೇಲೆ ಬಹುತೇಕ ನಕಾರಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ನಾವು ಕಾಣಬಹುದು. ಇದು ಒಬ್ಬ ವ್ಯಕ್ತಿಯ ನಿರ್ಧಾರದಿಂದಾದ ಕ್ರಮ ಎಂಬುದು ಇದಕ್ಕೆ ಕಾರಣ. ಈ ನಿರ್ಧಾರದ ಹಿಂದೆ ಪ್ರಧಾನಿಯ ಗುರುತು ಎಷ್ಟು ಬಲವಾಗಿದೆಯೆಂದರೆ ಇತಿಹಾಸ ಈ ನೀತಿಯನ್ನು ‘ನಮೋ ನಡೆ’ ಎಂದೇ ಪರಿಗಣಿಸಬಹುದು.ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ನರೇಂದ್ರ ಮೋದಿ ಅವರೇ ‘ಪ್ರಜಾಪ್ರಭುತ್ವದ ದೇವಾಲಯ’ ಎಂದು ಬಣ್ಣಿಸಿದ ಭಾರತದ ಸಂಸತ್ತಿನ ಮೇಲೆ ಈ ನಿರ್ಧಾರ ಉಂಟು ಮಾಡಿದ ಪರಿಣಾಮಗಳನ್ನು ಮೊದಲಿಗೆ ಪರಿಶೀಲಿಸೋಣ. ಸಂಸತ್ತನ್ನು ಮೊದಲೇ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಕಾಳಧನಿಕರಿಗೆ ಮುನ್ನೆಚ್ಚರಿಕೆ ದೊರೆಯುತ್ತಿತ್ತು ಎಂದು ಹೇಳಲಾಗುತ್ತಿದೆ.ನೋಟು ರದ್ದತಿ ಪರಿಣಾಮಕಾರಿ ಆಗಬೇಕಾದರೆ ಅದು ದಿಢೀರ್ ಮತ್ತು ಅನಿರೀಕ್ಷಿತ ಆಗಿರಬೇಕು. ಈ ವಾದ ನ್ಯಾಯಯುತವೇ ಆಗಿದೆ. ಆದರೆ ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿರುವುದನ್ನು ಘೋಷಿಸಿದ ಬಳಿಕ ಈ ನಿರ್ಧಾರವನ್ನು ಸಂಸತ್ತಿಗೆ ಯಾಕೆ ವಿವರಿಸಲಿಲ್ಲ ಮತ್ತು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲಿಲ್ಲ? ನೋಟು ರದ್ದತಿ ಪ್ರತಿ ಭಾರತೀಯನನ್ನು ನೇರವಾಗಿ ಬಾಧಿಸುವ ಕ್ರಮ. ಹಾಗಾಗಿ ಪ್ರತಿ ಭಾರತೀಯನನ್ನು ನೇರವಾಗಿ ಪ್ರತಿನಿಧಿಸುವ ಏಕೈಕ ಸಂಸ್ಥೆಗೆ ವಿವರಣೆ ನೀಡುವ ಕನಿಷ್ಠ ಸೌಜನ್ಯವನ್ನಾದರೂ ಪ್ರಧಾನಿ ತೊರಬೇಕಿತ್ತು.ನಮೋ ನಡೆ ಕಾರ್ಯರೂಪಕ್ಕೆ ಬಂದು ಒಂದು ತಿಂಗಳಾಯಿತು. ಈ ಕಠಿಣ ಹೊಡೆತದಿಂದ ಸಮಾಜ ಸ್ಥಗಿತಗೊಂಡಿದೆ. ಈ ಅವಧಿಯಲ್ಲಿ ಪ್ರಧಾನಿ ಕೆಲವು ಬಾರಿ ಸ್ವಲ್ಪ ಹೊತ್ತು ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ; ಆದರೆ ಮಾತನಾಡಲು ಅಥವಾ ಚರ್ಚೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಜತೆ ಚರ್ಚೆ ನಡೆಸಲು ನಿರಾಕರಿಸಿದ ಅವರು ಬೇರೆಡೆ ವಿರೋಧ ಪಕ್ಷಗಳ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ. ನೋಟು ರದ್ದತಿಯನ್ನು ವಿರೋಧಿಸುವ ಸಂಸದರು ಭ್ರಷ್ಟ ವಂಚಕರು ಎಂದು ಹೇಳಿದ್ದಾರೆ.ಸಂಸತ್ತಿನಲ್ಲಿ ಮಾತನಾಡಲು ನಿರಾಕರಿಸಿರುವ ಪ್ರಧಾನಿ, ಮುಂಬೈನಲ್ಲಿ ನಡೆದ ರಾಕ್ ಸಂಗೀತ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ವಿರೋಧ ಪಕ್ಷಗಳ ಕೆಲವು ಸಂಸದರು ಆರೋಪಿಸಿದ್ದಾರೆ. ‘ನರೇಂದ್ರ ಮೋದಿ ಆ್ಯಪ್’ ಮೂಲಕ ಅವರು ನಡೆಸಿದ ‘ಸಮೀಕ್ಷೆ’ ಸಂಸತ್ತಿನ ಬಗ್ಗೆ ಪ್ರಧಾನಿ ಹೊಂದಿರುವ ಅಸಡ್ಡೆಯನ್ನು ತೋರುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.ತಮ್ಮ ಅನುಯಾಯಿಗಳಿಂದ ನೋಟು ರದ್ದತಿ ಬಗ್ಗೆ ಭಾರಿ ‘ಅನುಮೋದನೆಯ ಮತ’ಗಳನ್ನು ಪಡೆದಿರುವುದು ಪ್ರಧಾನಿಯ ಒಣಜಂಬವನ್ನು ತೃಪ್ತಿಪಡಿಸಿರಬಹುದು. ಆದರೆ ಇದು ಸಂಸತ್ತಿನ ಪಾತ್ರ ಮತ್ತು ವಿಶ್ವಾಸಾರ್ಹತೆಯನ್ನು ಇನ್ನಷ್ಟು ಕೆಳಕ್ಕೆ ತಳ್ಳಿದೆ. ತಮ್ಮ ಅಭಿಮಾನಿಗಳ ಜತೆ ನೇರ ಸಂಪರ್ಕ ಸಾಧಿಸಲು ಬಯಸುವಾಗಲೇ ಚುನಾಯಿತ ಸಂಸದರ ಜತೆ ಚರ್ಚೆ ನಡೆಸಲು ನಿರಾಕರಿಸುವ ಮೂಲಕ ಒಮ್ಮೆ ತಾವೇ ದೇಗುಲಕ್ಕೆ ಹೋಲಿಸಿದ ಸಂಸ್ಥೆಯನ್ನು ಉದ್ದೇಶಪೂರ್ವಕವಾಗಿಯೇ ಕಳಂಕಗೊಳಿಸಿದ್ದಾರೆ. ತಡವಾಗಿಯಾದರೂ ಈಗ ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಲು ಅಥವಾ ಚರ್ಚೆ ನಡೆಸಲು ಸಿದ್ಧರಾಗಿದ್ದರೂ ಅನಾಹುತ ಆಗಿ ಹೋಗಿದೆ.ಸಂಸತ್ ಕಲಾಪಕ್ಕೆ ಮತ್ತೆ ಮತ್ತೆ ಅಡ್ಡಿಪಡಿಸುತ್ತಿರುವುದಕ್ಕೆ ಮತ್ತು ನ್ಯಾಯಯುತವಲ್ಲದ ಬೇಡಿಕೆ ಇರಿಸಿರುವುದಕ್ಕೆ (ಮತ ನೀಡಿಕೆ ಅವಕಾಶ ಇರುವ ಸೆಕ್ಷನ್‌ ಅಡಿಯಲ್ಲಿ ಚರ್ಚೆ) ಪ್ರಧಾನಿಯ ಬೆಂಬಲಿಗರು ವಿರೋಧ ಪಕ್ಷಗಳನ್ನು ದೂಷಿಸುತ್ತಿದ್ದಾರೆ. ಆದರೆ, ವಿರೋಧ ಪಕ್ಷಗಳು ಸಂಸತ್ತಿಗೆ ಅಗೌರವ ತೋರಿವೆ ಎಂಬುದು ಪ್ರಧಾನಿಯೂ ಹಾಗೆ ಮಾಡುವುದಕ್ಕೆ ನೆಪವಾಗಬಾರದು.ಶಿಥಿಲಗೊಂಡಿರುವ ಸಂಸತ್ತನ್ನು ಇನ್ನಷ್ಟು ಶಿಥಿಲಗೊಳಿಸದೆ, ಮರುಸ್ಥಾಪನೆ ಮಾಡಬೇಕು. ನಮೋ ನಡೆ ಶಿಥಿಲಗೊಳಿಸಿರುವ ಎರಡನೆಯ ಸಂಸ್ಥೆ ಸಂಪುಟ. ಅಮೆರಿಕದ ಅಧ್ಯಕ್ಷರಂತಲ್ಲದೆ, ಭಾರತದ ಪ್ರಧಾನಿ ಸಮಾನರಲ್ಲಿ ಮೊದಲಿಗ ಮಾತ್ರ. ಸಂಪುಟ ಸಹೋದ್ಯೋಗಿಗಳ ಜತೆ ಚರ್ಚಿಸಿ ಪ್ರಧಾನಿ ನಿರ್ಧಾರ ಕೈಗೊಳ್ಳಬೇಕು ಎಂಬುದು ಕ್ರಮ.ಆದರೆ, (ಮೋದಿ ಅವರು ಹಿಂದೆ ಕೈಗೊಂಡಿರುವ ಕೆಲವು ನಿರ್ಧಾರಗಳ ಹಾಗೆಯೇ) ಈ ನಿರ್ಧಾರವನ್ನೂ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ. ಅದನ್ನು ಅನುಸರಿಸುವಂತೆ ಸಚಿವರಿಗೆ ಹೇಳಲಾಗಿದೆ. ನೋಟು ರದ್ದತಿ ಬಗ್ಗೆ ಮಾಹಿತಿ ನೀಡಲು ಕರೆದ ಸಭೆಗೆ ಬರುವಾಗ ಸಚಿವರು ತಮ್ಮ ಮೊಬೈಲ್ ಫೋನ್‌ಗಳನ್ನು ಹೊರಗೆ ಇರಿಸಿ ಬರುವಂತೆ ಸೂಚಿಸಲಾಗಿತ್ತು. ಪ್ರಧಾನಿಗೆ ತಮ್ಮ ಸಂಪುಟದ ಬಗ್ಗೆ ನಂಬಿಕೆಯೇ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ.ಪ್ರಧಾನಿಗೆ ಸಂಸತ್ತಿನ ಬಗ್ಗೆ ಗೌರವ ಇಲ್ಲ ಎಂದು ಸಂಸತ್ತಿನ ಒಳಗೆ ಮತ್ತು ಹೊರಗೆ ಟೀಕೆ ಮಾಡಲಾಗುತ್ತಿದೆ. ಆದರೆ, ಸಮಾಲೋಚನೆ ಮೂಲಕ ಸರ್ಕಾರ ನಡೆಸಬೇಕು ಎಂಬುದರ ಬಗ್ಗೆ ಪ್ರಧಾನಿ ಹೊಂದಿರುವ ಅಸಡ್ಡೆಯನ್ನು ಹೇಡಿತನದಿಂದ ಎಂದು ಹೇಳಲಾಗದಿದ್ದರೂ ಇಚ್ಛಾಪೂರ್ವಕವಾಗಿಯೇ ಸಂಪುಟ ಒಪ್ಪಿಕೊಂಡಿದೆ. ತಮ್ಮ ‘ಯಜಮಾನ’ನನ್ನು ಅನುಸರಿಸುವ ವಿಚಾರದಲ್ಲಿ ಹಿರಿಯ ಸಚಿವರೂ ಸಂತೃಪ್ತರು. ಭಾರತವನ್ನು ಭವ್ಯವಾಗಿಸಲು ನಿಯೋಜಿತರಾಗಿರುವ ಪ್ರಧಾನಿಯ ಕೈಕೆಳಗೆ ಸೇವೆ ಸಲ್ಲಿಸುವುದಕ್ಕೆ ತಾವು ಕೃತಜ್ಞರು ಎಂದು ದೇಶಕ್ಕೆ ಹೇಳುತ್ತಾ ಇದನ್ನೊಂದು ಗೌರವ ಎಂದು ಅವರು ಪರಿಗಣಿಸಿದ್ದಾರೆ.ಕೇಂದ್ರ ನಗರಾಭಿವೃದ್ಧಿ, ವಾರ್ತಾ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಅವರು ‘ನ್ಯೂಡೆಲ್ಲಿ’ ಪತ್ರಿಕೆಯಲ್ಲಿ ಪ್ರಕಟಿಸಿದ ಒಂದು ಲೇಖನ ಪ್ರಾತಿನಿಧಿಕವಾಗಿದೆ. ಪ್ರಧಾನಿ ಅವರು ಉದ್ದೇಶಿಸಿರುವ ‘ಮಹತ್ ಸಾಂಸ್ಕೃತಿಕ ಕ್ರಾಂತಿ’ಯ ಒಂದು ಭಾಗ ನಮೋ ನಡೆ ಎಂದು ಈ ಲೇಖನ ಆರಂಭವಾಗುತ್ತದೆ.ನಾಯ್ಡು ಅವರ ಪ್ರಕಾರ, ಹಿಂದಿನ ಎಲ್ಲ ಪ್ರಧಾನಿಗಳು ‘ಭ್ರಷ್ಟಾಚಾರ, ಅವಕಾಶವಾದ, ದುರಾಸೆ, ದಮನ (ತುರ್ತುಪರಿಸ್ಥಿತಿ ನೆನಪಿಸಿಕೊಳ್ಳಿ?), ಅಧಿಕಾರ ದುರ್ಬಳಕೆ, ಸ್ವಜನಪಕ್ಷಪಾತ ಮತ್ತು ಸ್ವಹಿತಾಸಕ್ತಿಯ ಅವನತಿಯ ಸಂಸ್ಕೃತಿ’ ನಿರ್ಮಾಣ ಮಾಡಿದ್ದಾರೆ.(ಈ ‘ಅವನತಿಯ ಸಂಸ್ಕೃತಿ’ ನಮಗೆ ಒಂದು ಏಕೀಕೃತ ಭಾರತವನ್ನು, ಸಂಸದೀಯ ಪ್ರಜಾಸತ್ತೆಯನ್ನು, ಭಾಷಿಕ ಮತ್ತು ಧಾರ್ಮಿಕ ಬಹುತ್ವದ ಸಾಂವಿಧಾನಿಕ ಸಂರಕ್ಷಣೆಯನ್ನು, ದಲಿತರು ಮತ್ತು ಮಹಿಳೆಯರಿಗೆ ಕಾನೂನಿನ ಮುಂದೆ ಸಮಾನತೆಯನ್ನು, ಐಐಟಿಗಳನ್ನು, ಐಐಎಂಗಳನ್ನು, ಹಸಿರು, ಕ್ಷೀರ ಮತ್ತು ಮಾಹಿತಿ ಹಕ್ಕು ಕ್ರಾಂತಿಗಳನ್ನು, ಬಾಹ್ಯಾಕಾಶ ಕಾರ್ಯಕ್ರಮವನ್ನು ಮತ್ತು ಬಹಳಷ್ಟನ್ನು ನಮಗೆ ನೀಡಿದೆ).ಈಗಿನ ಪ್ರಧಾನಿ ಉದ್ದೇಶಿಸಿರುವ ‘ಮಹತ್ ಸಾಂಸ್ಕೃತಿಕ ಕ್ರಾಂತಿ’ ಈ ಎಲ್ಲ ಕೊಳೆ ಮತ್ತು ಅವನತಿಯನ್ನು ತೊಳೆದು ಹಾಕಲಿದೆ ಎಂದು ನಾಯ್ಡು ಅವರು ನಮಗೆ ಭರವಸೆ ನೀಡಿದ್ದಾರೆ. ‘ಹೊಸ ವ್ಯವಸ್ಥೆಯು ನಮ್ಮ ಸಾರ್ವಜನಿಕ ಮತ್ತು ಖಾಸಗಿ ಬದುಕನ್ನು ಪರಿವರ್ತಿಸಲಿದೆ. ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದು, ಕೆಲಸ ಮತ್ತು ವಾಸದ ಪರಿಸರವನ್ನು ಸ್ವಚ್ಛವಾಗಿ ಇರಿಸುವುದು, ಉತ್ತರದಾಯಿತ್ವ, ಪಾರದರ್ಶಕತೆ, ತಂತ್ರಜ್ಞಾನದ ಅಳವಡಿಕೆ, ಆವಿಷ್ಕಾರ ಇತ್ಯಾದಿ ಇದರಲ್ಲಿ ಒಳಗೊಳ್ಳಲಿದೆ’.ಈ ಹೊಸ ಉಪಕ್ರಮಗಳು ‘ಅವನತಿಯತ್ತ ಸಾಗುವ ಹಳೆಯ ವ್ಯವಸ್ಥೆಯನ್ನು ಅಳಿಸಿ ಹಾಕಿ ಭಾರತವನ್ನು ಶೀಘ್ರ ಪರಿವರ್ತಿಸಲಿವೆ. ಮೋದಿ ಅವರು ಸ್ವತಂತ್ರ ಭಾರತದ ಅತ್ಯಂತ ಎತ್ತರದ ನಾಯಕನಾಗಿ ಹೊರಹೊಮ್ಮಲಿದ್ದಾರೆ’ ಎಂದು ನಾಯ್ಡು ಹೇಳಿದ್ದಾರೆ.ತುರ್ತುಪರಿಸ್ಥಿತಿಯನ್ನು ಅವರು ನೆನಪಿಸಿಕೊಂಡಿರುವುದು ಆಸಕ್ತಿಕರವೂ ಬಹುಶಃ ದುರದೃಷ್ಟಕರವೂ ಆಗಿದೆ. ಒಂದು ವಿಚಾರವನ್ನು ಇಲ್ಲಿ ನೆನಪಿಸಿಕೊಳ್ಳಬಹುದು- 1975ರಿಂದ 77ರ ನಡುವಣ ಅವಧಿಯಲ್ಲಿ ಸರ್ಕಾರಿ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿದ್ದರು ಮತ್ತು ರೈಲುಗಳು ಸಮಯಕ್ಕೆ ಸರಿಯಾಗಿ ಓಡುತ್ತಿದ್ದವು.ಇನ್ನೊಂದು ಅಂಶವೆಂದರೆ, ಈಗ ನಾಯ್ಡು ಅವರು ಮಾಡುತ್ತಿರುವಂತೆ ಸಂಪುಟ ಸಚಿವರು ತಮ್ಮ ಪ್ರಧಾನಿಯನ್ನು ಭಟ್ಟಂಗಿಗಳಂತೆ ಹೊಗಳುತ್ತಿದ್ದುದನ್ನು ನೋಡಬೇಕಾದರೆ 1975ಕ್ಕೆ ಹಿಂದಿರುಗಬೇಕು. ನಾಯ್ಡು ಅವರು ಮಾತ್ರವಲ್ಲ. ಈ ಆಡಳಿತದಲ್ಲಿ ದೇವಕಾಂತ ಬರುವಾಗಳ ಸಂಖ್ಯೆಯೂ ಸಾಕಷ್ಟಿದೆ.ಮೋದಿ ಅವರ ಹಿಂದೆ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸುವ ಮೂಲಕ ಸಂಸದೀಯ ವ್ಯವಸ್ಥೆಗೆ ಹಾನಿ ಮಾಡಿದ್ದಾರೆ. ಸಚಿವೆಯೂ ಆಗಿಲ್ಲದಿದ್ದ ಸೋನಿಯಾ ಗಾಂಧಿ ಅವರಿಂದ ಆಗಾಗ ಸೂಚನೆಗಳನ್ನು ಪಡೆದುಕೊಳ್ಳುವ ಮೂಲಕ ಸಂಪುಟ ಸರ್ಕಾರದ ವ್ಯವಸ್ಥೆಯನ್ನೂ ಹಾನಿಗೆಡವಿದ್ದಾರೆ.  ಹಾಗೆಯೇ ಬಹಳ ಭಿನ್ನ ರೀತಿಯಿಂದಾದರೂ ಮೋದಿ ಅವರು ಈ ಸಂಸ್ಥೆಗಳನ್ನು ಇನ್ನಷ್ಟು ಶಿಥಿಲಗೊಳಿಸಿದ್ದಾರೆ.ನಮೋ ನಡೆಯ ನಂತರ ತನ್ನ ಹೆಸರಿಗೆ ಭಾರಿ ಹಾನಿ ಮಾಡಿಕೊಂಡಿರುವ ಮೂರನೆಯ ಸಂಸ್ಥೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ). ಸಂಸತ್ತು ಅಥವಾ ಸಂಪುಟಗಳಂತಲ್ಲದೆ, ಆರ್‌ಬಿಐ ಹಿಂದೆ ಉನ್ನತ ವಿಶ್ವಾಸಾರ್ಹತೆಯನ್ನು ಹೊಂದಿತ್ತು. ವಾಸ್ತವದಲ್ಲಿ, ನ್ಯಾಯಬದ್ಧತೆ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಭಾರತದ ಜನರು ಬಹುತೇಕ ಸಂಪೂರ್ಣ ವಿಶ್ವಾಸ ಹೊಂದಿದ್ದ ಎರಡು ಪ್ರಮುಖ ಸಾರ್ವಜನಿಕ ಸಂಸ್ಥೆಗಳಲ್ಲಿ ಇದು ಒಂದಾಗಿತ್ತು. ಇನ್ನೊಂದು ಭಾರತೀಯ ಚುನಾವಣಾ ಆಯೋಗ.ಹಿಂದಿನ ಗವರ್ನರ್ ರಘುರಾಮ್ ರಾಜನ್ ಅವರು ಸತತ ಪ್ರಯತ್ನದ ಮೂಲಕ ಆರ್‌ಬಿಐನ ಸ್ವಾಯತ್ತೆಯನ್ನು ರಕ್ಷಿಸಿಕೊಂಡಿದ್ದರು. ಅವರಿಗೆ ಎರಡನೇ ಅವಧಿ ನಿರಾಕರಿಸಿದಾಗ, ಹೆಚ್ಚು ಬಾಗಬಲ್ಲ ವ್ಯಕ್ತಿಯನ್ನು ಸರ್ಕಾರ ಬಯಸಿದೆ ಎಂಬ ವದಂತಿ ವ್ಯಾಪಕವಾಗಿತ್ತು.ನಮೋ ನಡೆಯನ್ನು ಜಾರಿಗೆ ತಂದ ರೀತಿ ಈ ವದಂತಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ನೋಟು ರದ್ದತಿಯ ಆತುರದ ಕ್ರಮದ ಬಗ್ಗೆ ತಮ್ಮ ಅತೃಪ್ತಿಯನ್ನು ರಘುರಾಮ್ ಅವರು ಸಾರ್ವಜನಿಕವಾಗಿಯೇ ವ್ಯಕ್ತಪಡಿಸಿದ್ದಾರೆ. ಗವರ್ನರ್ ಹುದ್ದೆಯಲ್ಲಿ ಅವರೇ ಇದ್ದಿದ್ದರೆ, ಸರಿಯಾದ ಯೋಜನೆ ರೂಪಿಸಿ, ಹೆಚ್ಚು ಜಾಗರೂಕತೆಯಿಂದ ನೋಟು ರದ್ದತಿ ನಿರ್ಧಾರ ಜಾರಿಗೊಳಿಸುವಂತೆ ಖಂಡಿತವಾಗಿಯೂ ಒತ್ತಾಯಿಸುತ್ತಿದ್ದರು.ನಮೋ ನಡೆಯ ಬಗ್ಗೆ ರಘುರಾಮ್ ಅವರ ಉತ್ತರಾಧಿಕಾರಿ ಜತೆ ಸಮಾಲೋಚನೆ ನಡೆಸಲಾಗಿತ್ತೇ ಎಂಬುದು ತಿಳಿದಿಲ್ಲ. (ಚಲಾವಣೆಯಿಂದ ಹಿಂದಕ್ಕೆ ಪಡೆದ ನೋಟುಗಳಿಗೆ ಬದಲಾಗಿ ಹೊಸ ನೋಟುಗಳನ್ನು ನೀಡಲು ಆರ್‌ಬಿಐ ದೀರ್ಘ ಸಮಯ ತೆಗೆದುಕೊಂಡಿರುವುದು ಈ ನಿರ್ಧಾರ ಅವರಿಗೆ ತಿಳಿದಿಲ್ಲ ಎಂಬುದನ್ನು ದೃಢಪಡಿಸುತ್ತದೆ). ಅವರು ಬಹುವಾಗಿ, ಮೌನವಾಗಿಯೇ ಇರುವುದು ನಮಗೆ ತಿಳಿದಿರುವ ವಿಚಾರ.ನೋಟು ರದ್ದತಿ ನಂತರ ಎರಡು ವಾರ ಅವರು ಯಾವ ಮಾತನ್ನೂ ಆಡಲಿಲ್ಲ. ಗೌರವಾನ್ವಿತ ನಿಯತಕಾಲಿಕವೊಂದರ ಪ್ರತಿನಿಧಿಯೊಬ್ಬರು ‘ಆರ್‌ಬಿಐನ ಗವರ್ನರ್ ಅವರನ್ನು ಯಾರಾದರೂ ಕಂಡಿದ್ದೀರಾ’ ಎಂದೂ ಪ್ರಶ್ನಿಸಿದ್ದಾರೆ. ಈ ಮಧ್ಯೆ, ಹಣಕಾಸು ಸಚಿವಾಲಯದ ಅಧಿಕಾರಿಗಳು ದಿನವೂ ನೋಟುಗಳ ಬಗ್ಗೆ ಸರಣಿ ಅಧಿಸೂಚನೆಗಳನ್ನು ಹೊರಡಿಸುತ್ತಾ ಹಿಂದೆ ಹೊರಡಿಸಿದ ಅಧಿಸೂಚನೆಗಳನ್ನು ರದ್ದುಪಡಿಸುತ್ತಿದ್ದಾರೆ. ಈ ಮೂಲಕ ಆರ್‌ಬಿಐಯೊಳಗೆ ಇನ್ನಷ್ಟು ಅತಿಕ್ರಮ ಪ್ರವೇಶ ನಡೆಸಲಾಗುತ್ತಿದೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ದಿಢೀರ್ ಹಿಂದಕ್ಕೆ ಪಡೆದ ಕ್ರಮದ ಪ್ರಯೋಜನಗಳ ಬಗ್ಗೆ ವಾದಿಸುವುದನ್ನು ನಾನು ಅರ್ಥಶಾಸ್ತ್ರಜ್ಞರಿಗೆ ಬಿಡುತ್ತೇನೆ.ಆದರೆ, ನಮೋ ನಡೆ ಈಗಾಗಲೇ ದೋಷಯುಕ್ತ ಮತ್ತು ದುರ್ಬಲವಾಗಿರುವ ಸಂಸ್ಥೆಗಳಿಗೆ ಇನ್ನಷ್ಟು ಹಾನಿ ಮಾಡಲಿದೆ ಎಂಬುದು ಭಾರತೀಯ ಪ್ರಜಾಸತ್ತೆಯ ಒಬ್ಬ ವಿದ್ಯಾರ್ಥಿಯಾಗಿ ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ.ಸಂಸತ್ತು ತರ್ಕಬದ್ಧ ಚರ್ಚಾ ಕ್ಷೇತ್ರವಾಗುವ ಅವಕಾಶ ಹಿಂದಿಗಿಂತಲೂ ಈಗ ಕಡಿಮೆಯಾಗಿದೆ. ಪ್ರಧಾನಿ ಕಚೇರಿಯನ್ನು ಮನಮೋಹನ್ ಸಿಂಗ್  ಅತಿಯಾಗಿ ದುರ್ಬಲಗೊಳಿಸಿದ್ದರೆ ಈಗ ಅದು ತನ್ನದೇ ಅನುಕೂಲಕ್ಕಾಗಿ ಅತಿಯಾಗಿ ಬಲಗೊಂಡಿದೆ. ಇನ್ನೊಂದು ತುರ್ತುಪರಿಸ್ಥಿತಿ ಉಂಟಾಗದು (ಇದನ್ನು ಮತ್ತೆ ಮತ್ತೆ ಹೇಳುವುದಕ್ಕೆ ನನಗೆ ಯಾವ ಬೇಸರವೂ ಇಲ್ಲ), ಆದರೆ ಇಂದಿರಾ ಗಾಂಧಿ ನಂತರ ಭಾರತದ ಅತ್ಯಂತ ನಿರಂಕುಶ ಪ್ರಧಾನಿ ನರೇಂದ್ರ ಮೋದಿ ಎಂಬುದನ್ನು ನಿರಾಕರಿಸುವುದಕ್ಕೆ ಸಾಧ್ಯವೇ ಇಲ್ಲ. ಸಂಪುಟದ ಸಚಿವರಲ್ಲಿಯೇ (ಅಥವಾ ವಿಶೇಷವಾಗಿ ಅವರಲ್ಲಿ) ತಮ್ಮ ಬಗ್ಗೆ ಭಕ್ತಿ ಮತ್ತು ಆರಾಧನಾ ಭಾವ ಬೆಳೆಸುವಲ್ಲಿಯೂ ಇಂದಿರಾ ಅವರನ್ನು ಮೋದಿ ಹೋಲುತ್ತಾರೆ.ಕೊನೆಯದಾಗಿ, ಒಂದು ಕಾಲದಲ್ಲಿ ತನ್ನ ಸ್ವಾಯತ್ತೆ ಮತ್ತು ನಿಷ್ಪಕ್ಷಪಾತದಿಂದಾಗಿ ಅಭಿಮಾನಕ್ಕೆ ಪಾತ್ರವಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಆಡಳಿತ ಪಕ್ಷದ ಆಟದ ಗೊಂಬೆಯಾಗಿದೆ. ಸಾಂಸ್ಥಿಕ ನಷ್ಟಗಳನ್ನು ಬದಿಗಿಡೋಣ, ನಮ್ಮ ಸಾರ್ವಜನಿಕ ಸಂವಾದ ನಮೋ ನಡೆಯಿಂದಾಗಿ ಈಗ ಇನ್ನಷ್ಟು ಕಲುಷಿತಗೊಂಡಿದೆ.ನೋಟು ರದ್ದತಿಯನ್ನು ವಿರೋಧಿಸುವವರು ವಂಚಕರು ಮತ್ತು ಅಪರಾಧಿಗಳು ಎಂದು ಹೇಳುವ ಮೂಲಕ ಪ್ರಧಾನಿಯೇ ಇದರ ನೇತೃತ್ವ ವಹಿಸಿದ್ದಾರೆ. ಗೋಪ್ಯ ಮತ್ತು ಕೊಂಕುನುಡಿಯ ಈ ರಾಜಕಾರಣವನ್ನು ಅವರ ಸಂಪುಟದ ಸದಸ್ಯರೇ ಶಕ್ತಿಯುತವಾಗಿ ಮುಂದಕ್ಕೆ ಒಯ್ದರೆ, ಅವರ ಅಭಿಮಾನಿಗಳು ಈ ಕೆಲಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದಾರೆ. ಈ ಅಂಕಣದ ವಾದವನ್ನು ಅವರು ಪ್ರತಿವಾದದ ಮೂಲಕ ಎದುರಿಸುವುದಿಲ್ಲ, ಬದಲಿಗೆ ಬೈಗುಳಗಳ ಮೂಲಕ ಎದುರಿಸುತ್ತಾರೆ ಎಂಬುದು ನನಗೆ ಖಚಿತವಾಗಿ ತಿಳಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry