ನಮ್ಮದಲ್ಲದ ರಾಜ್ಯ

7

ನಮ್ಮದಲ್ಲದ ರಾಜ್ಯ

ಗುರುರಾಜ ಕರ್ಜಗಿ
Published:
Updated:

 

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆತ ತುಂಬ ಉದಾರಿ ಹಾಗೂ ಜನಾನುರಾಗಿಯಾಗಿದ್ದ. ಸದಾ ಪ್ರಜೆಗಳ ಹಿತವನ್ನೇ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ. ಆದರೆ, ರಾಜರ ಕೆಲಸ ಎಂದಿಗೂ ಮುಗಿಯುವುದೇ ಇಲ್ಲವಲ್ಲ. ಒಂದು ಸಮಸ್ಯೆ ಪರಿಹಾರವಾದರೆ ಮತ್ತೊಂದು ಧುತ್ತನೇ ಬಂದು ಮುಂದೆ ನಿಲ್ಲುತ್ತಿತ್ತು. ಅಂತೂ ಎಲ್ಲ ಕಷ್ಟಗಳು ಪರಿಹಾರವಾದವು ಎಂದು ನಿಟ್ಟುಸಿರು ಬಿಟ್ಟು ಕುಳಿತರೆ ಮತ್ತೆ ಕಲ್ಪನೆಯೇ ಮಾಡಿರದಂತಹ ಹತ್ತು ಕಷ್ಟಗಳು ಕಾಣುತ್ತಿದ್ದವು. ರಾಜನಿಗೆ ಸಾಕಾಗಿ ಹೋಯಿತು. ಒಂದು ದಿನ ಕಾಡಿನಲ್ಲಿದ್ದ ತನ್ನ ಗುರುಗಳ ಕಡೆಗೆ ಹೋದ. ಅವರ ಮುಂದೆ ತನ್ನ ಕಷ್ಟಗಳನ್ನು ವಿಸ್ತಾರವಾಗಿ ಹೇಳಿಕೊಂಡು ಪರಿಹಾರ ಕೇಳಿದ. ಅವರು `ಅದಕ್ಕೇನು ಪರಿಹಾರ ತುಂಬ ಸುಲಭವಾಗಿದೆ, ನೀನು ರಾಜ್ಯವನ್ನು ಬಿಟ್ಟು ಕಾಡಿಗೇ ಬಂದು ಬಿಡು' ಎಂದರು ಆತ, `ಅದು ಹೇಗೆ ಸಾಧ್ಯ. ಇಷ್ಟು ವರ್ಷಗಳಿಂದ ಕಷ್ಟಪಟ್ಟು ಕಟ್ಟಿದ ರಾಜ್ಯ ನನ್ನ ಕಣ್ಣಮುಂದೆಯೇ ಹಾಳಾಗಿ ಹೋಗಬೇಕೆ' ಎಂದು ಕೇಳಿದ. `ನಿನ್ನ ರಾಜ್ಯವನ್ನು ನಿನ್ನ ಮಗನಿಗೆ ಒಪ್ಪಿಸಿಬಿಟ್ಟು ಬಂದುಬಿಡು' ಎಂದರು ಗುರುಗಳು. ` ಸ್ವಾಮೀ, ತಮಗೇ ಗೊತ್ತು, ನನ್ನ ಮಗು ಇನ್ನೂ ಹತ್ತು ವರ್ಷದ ಹುಡುಗ. ಅವನು ಹೇಗೆ ಈ ಜವಾಬ್ದಾರಿ ನಿಭಾಯಿಸಿಯಾನು. ಹಾಗಿದ್ದರೆ ನಿನ್ನ ರಾಜ್ಯವನ್ನು ನನಗೇ ಒಪ್ಪಿಸಿಬಿಡು. ನಾನೇ ಅದರ ಸಮಸ್ತ ಭಾರವನ್ನು ಹೊತ್ತುಕೊಳ್ಳುತ್ತೇನೆ' ಎಂದರು ಗುರುಗಳು.ರಾಜನಿಗೆ ಇದು ಸರಿ ಎನ್ನಿಸಿ ಮರುದಿನವೇ ಗುರುಗಳಿಗೆ ರಾಜ್ಯಾಭಿಷೇಕ ಮಾಡಿದ. ನಂತರ ಅವರಿಗೆ ನಮಸ್ಕಾರ ಮಾಡಿ ಹೊರಡಲು ಸಿದ್ಧನಾದ. `ಎಲ್ಲಿಗೆ ಹೋಗುತ್ತೀ. ಏನು ನಿನ್ನ ಮುಂದಿನ ವಿಚಾರ' ಎಂದು ಕೇಳಿದರು ಗುರುಗಳು. `ಸ್ವಾಮೀ, ಖಜಾಂಚಿಗೆ ಹೇಳಿ ಒಂದಿಷ್ಟು ಹಣ ಪಡೆದುಕೊಂಡು ಬೇರೆ ದೇಶಗಳಿಗೆ ಹೋಗಿ ವ್ಯವಹಾರ ಮಾಡಿಕೊಂಡು ಬದುಕುತ್ತೇನೆ' ಎಂದ ಮಾಜಿ ರಾಜ. `ಅಲ್ಲಪ್ಪ, ಇಡೀ ರಾಜ್ಯವನ್ನು ನನಗೆ ನೀಡಿದ ಮೇಲೆ ಖಜಾನೆಯಲ್ಲಿದ್ದ, ಹಣವೆಲ್ಲವೂ ನನ್ನದು ತಾನೇ' ಅದನ್ನು ನೀನು ಹೇಗೆ ತೆಗೆದುಕೊಳ್ಳುತ್ತೀ'. `ಹೌದು, ನಾನು ಮರೆತೇ ಬಿಟ್ಟಿದ್ದೆ ಸ್ವಾಮಿ. ಪರವಾಗಿಲ್ಲ, ಯಾವುದಾದರೊಂದು ಕೆಲಸ ಹುಡುಕಿಕೊಂಡು ಹೋಗಿ ಜೀವನ ನಡೆಸುತ್ತೇನೆ' ಎಂದ ರಾಜ.ಆಗ ಗುರುಗಳು ಹೇಳಿದರು, `ಕೆಲಸ ಮಾಡುವುದೇ ಆದರೆ ಬೇರೆಲ್ಲೋ ಏಕೆ. ನನ್ನ ಹತ್ತಿರವೇ ಕೆಲಸ ಮಾಡು. ಅದು ಈ ರಾಜ್ಯವನ್ನು ನೋಡಿಕೊಳ್ಳುವ ಕೆಲಸ. ಅದು ನಿನಗೆ ಹೇಗೋ ಅಪರಿಚಿತವಾದದ್ದೇನಲ್ಲ. ನೀನಿರುವ ಮನೆಯಲ್ಲೇ ಇರು. ರಾಜ್ಯವನ್ನು ನೋಡಿಕೊಳ್ಳುವ ಎಲ್ಲ ಕೆಲಸಗಳೂ ನಿನ್ನವೇ, ಆದರೆ ರಾಜ್ಯ ಮಾತ್ರ ನಿನ್ನದಲ್ಲ, ಅದು ನನ್ನದು. ನಾನು ಕಾಡಿನಲ್ಲೇ ಇರುತ್ತೇನೆ. ನನಗೆ ಪ್ರತಿ ತಿಂಗಳೂ ವರದಿ ಒಪ್ಪಿಸಬೇಕು.ನಿನ್ನ ಕೆಲಸಕ್ಕೆ ಸರಿಯಾಗುವ ಸಂಬಳದ ವ್ಯವಸ್ಥೆ ನಾನು ಮಾಡುತ್ತೇನೆ'. ರಾಜ ಒಪ್ಪಿ ಕೆಲಸ ಮಾಡತೊಡಗಿದ. ಮೊದಲಿಗಿಂತ ಹೆಚ್ಚು ಶ್ರಮಪಟ್ಟ, ರಾಜ್ಯ ಇನ್ನಷ್ಟು ಬಲವಾಯಿತು. ಆದರೆ ಅವನ ಮನಸ್ಸಿನಲ್ಲಿ ಮೊದಲಿನ ಆತಂಕ, ಒತ್ತಡ ಇರಲಿಲ್ಲ. ಇದು ಹೀಗೆ ಏಕೆ ಎಂದು ಗುರುಗಳನ್ನು ಕೇಳಿದಾಗ ಅವರು ಹೇಳಿದರು, `ಇದುವರೆಗೂ ರಾಜ್ಯ ನನ್ನದು, ಹೇಗಿದ್ದರೂ ಇನ್ನೂ ಬೆಳೆಸಬೇಕು ಎಂಬ ಒತ್ತಡ ಏರುತ್ತಿತ್ತು. ಈಗ ರಾಜ್ಯ ನಿನ್ನದಲ್ಲ, ಆದರೂ ನನ್ನ ಮೇಲಿನ ಗೌರವದಿಂದ ಮೊದಲಿಗಿಂತ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೀಯಾ. ಯಾವಾಗಲೂ ಇದು ನನ್ನದಲ್ಲ ಎಂಬ ಭಾವನೆಯಿಂದ ಕೆಲಸ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ'. ನಮ್ಮ ಜಗತ್ತಿನಲ್ಲಿ ಯಾವುದೂ ನಮ್ಮದಲ್ಲ, ನಾವು ಭಗವಂತನ ಕೃಪೆಯಿಂದ ಅವನು ನೀಡಿದ ಕೆಲಸವನ್ನು, ಅವನು ಅಪೇಕ್ಷಿಸಿದ ರೀತಿಯಲ್ಲಿ, ಅವನು ಹೇಳಿದಷ್ಟು ಕಾಲ ನಿಷ್ಠೆಯಿಂದ ಮಾಡಿಕೊಂಡಿರುತ್ತೇವೆ ಎಂಬ ಭಾವನೆಯಿಂದ ಮಾಡಿದರೆ ಜೀವನ ಹಗುರಾಗುತ್ತದೆ. ಅದಕ್ಕೇ ನಮ್ಮ ಎಲ್ಲ ಧರ್ಮಕಾರ್ಯಗಳಲ್ಲಿ, `ಇದಂ ನ ಮಮ' ಅಂದರೆ ಇದು ನನ್ನದಲ್ಲ ಎಂದು ಪದೇ ಪದೇ ಹೇಳಿಸುತ್ತಾರೆ. ಹಾಗೆ ಬದುಕುವುದು ಭರತನ ಉದಾಹರಣೆ. ರಾಜನಾಗಿದ್ದೂ, ಸನ್ಯಾಸಿಯಂತೆ ಬದುಕಿ, ರಾಮನ ರಾಜ್ಯವನ್ನು ಅವನ ಪ್ರತಿನಿಧಿಯಂತೆ ನಡೆಸಿದ್ದು ಭರತನ ದೊಡ್ಡತನ ಹಾಗೂ ಇತರರ ಪಾಲಿಗೆ ದೊಡ್ಡ ಮಾದರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry