ಶನಿವಾರ, ಏಪ್ರಿಲ್ 17, 2021
27 °C

ನಮ್ಮದೇ ಹಾಡು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಆಫ್ರಿಕಾ ಖಂಡದ ತೀರ ಒಳಪ್ರದೇಶಗಳಲ್ಲಿರುವ ಒಂದು ಆದಿವಾಸಿಗಳ ನಾಡಿನಲ್ಲಿ ಇರುವ ಒಂದು ನಡವಳಿಕೆಯ ಬಗ್ಗೆ ನಾನೆಲ್ಲೋ ಓದಿದ್ದೆ. ಆ ಆದಿವಾಸಿಗಳ ಗುಂಪಿನಲ್ಲಿ ಯಾವುದಾದರೂ ಹುಡುಗಿ ಗರ್ಭಿಣಿಯಾದಳು ಎಂದು ತಿಳಿದ ತಕ್ಷಣ ಆ ಗುಂಪಿನ ಹಿರಿಯ ಮಹಿಳೆಯರು ಆ ಹುಡುಗಿಯನ್ನು ಕರೆದುಕೊಂಡು ಕಾಡಿನೊಳಗೆ ಇನ್ನಷ್ಟು ದೂರ ಹೋಗಿಬಿಡುತ್ತಾರಂತೆ.

 

ಅವರು ಎಲ್ಲಿ ಹೋಗುತ್ತೇವೆಂಬುದನ್ನು ಯಾವ ಗಂಡಸರಿಗೂ ಹೇಳುವುದಿಲ್ಲ. ಯಾವಾಗ ಮರಳಿ ಬರುತ್ತೇವೆಂಬುದನ್ನು ತಿಳಿಸುವುದಿಲ್ಲ. ಕೆಲವೊಮ್ಮೆ ಮೂರು-ನಾಲ್ಕು ದಿನಗಳ ಒಳಗೇ ಮರಳಿ ಬಂದು ಬಿಡುತ್ತಾರೆ. ಮತ್ತೆ ಕೆಲವೊಮ್ಮೆ ಒಂದೊಂದು ತಿಂಗಳೂ ಹೋಗಬಹುದು. ಅವರು ಕಾಡಿನಲ್ಲಿ ಅಷ್ಟೂ ದಿನ ಏನು ಮಾಡುತ್ತಾರೆಂಬುದು ವಿಶೇಷ.ನಮ್ಮ ಪಟ್ಟಣಗಳಲ್ಲಿ ಎಷ್ಟೋ ವಿದ್ಯಾವಂತ ಮಹಿಳೆಯರು ಮಾಡದ್ದನ್ನು ಅವರು ಮಾಡುತ್ತಾರೆ. ಆ ಹುಡುಗಿಗೆ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬಗ್ಗೆ ತಿಳಿಸುತ್ತಾರೆ. ಈಗಿನಿಂದ ಮಗು ಜನಿಸುವವರೆಗೂ ಆಕೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನೂ, ಕಾಳಜಿಯನ್ನೂ, ವಿವರವಾಗಿ ನೋಡಿಕೊಳ್ಳುವ ಬಗ್ಗೆ ಪ್ರತಿಯೊಂದನ್ನೂ ಹೇಳಿಕೊಡುತ್ತಾರೆ. ಇದಾದ ನಂತರ ಆಕೆಯನ್ನು ನೆಲದ ಮೇಲೆ ಮಲಗಿಸಿ ಹಿರಿಯ ಹೆಣ್ಣುಮಕ್ಕಳು ಆಕೆಯ ಹೊಟ್ಟೆಯ ಮೇಲೆ ತಮ್ಮ ಕೈಗಳನ್ನಿಟ್ಟು ಕುಳಿತುಕೊಳ್ಳುತ್ತಾರೆ.ದಿನವೂ ತಾಸೆರಡು ತಾಸು ಹಾಗೆಯೇ ಕಣ್ಣುಮುಚ್ಚಿಕೊಂಡು ಹೊಟ್ಟೆಯ ಮೇಲೆ ಕೈ ಇಟ್ಟು ಕುಳಿತಾಗ ಅವರಿಗೊಂದು ಧ್ವನಿ ಕೇಳಿಸುತ್ತದಂತೆ. ಅವರ ಪ್ರಕಾರ ಪ್ರಾಣ ಅಂಕುರವಾದ ಕ್ಷಣದಿಂದ ಆ ಮಗುವಿಗೆ ಅದರದೇ ಆದ ಒಂದು ಧ್ವನಿ ಇರುತ್ತದಂತೆ. ಆ ಹೆಣ್ಣುಮಕ್ಕಳಿಗೆ ಆ ಧ್ವನಿ ತರಂಗಗಳು ಕೇಳಿಸಿದೊಡನೆ ಅವರೆಲ್ಲ ಗುಂಪಾಗಿ ಕುಳಿತು ಅದನ್ನು ಜೋರಾಗಿ ಹೇಳತೊಡಗುತ್ತಾರೆ. ಕೆಲವೊಮ್ಮೆ ಒಂದೇ ದಿನದಲ್ಲಿ, ಕೆಲವೊಮ್ಮೆ ಎರಡು-ಮೂರು ದಿನಗಳಲ್ಲಿ ಆ ಧ್ವನಿಗೊಂದು ರಾಗ ಸೇರಿಸಿ ಹಾಡುತ್ತಾರೆ. ಆ ಹಾಡು ಆ ಮಗುವಿಗೆ ಮಾತ್ರ ಮೀಸಲು. ಹಾಡು ಸೃಷ್ಟಿಯಾದ ಮೇಲೆ ಮನೆಗೆ ಎಲ್ಲರೂ ಮರಳುತ್ತಾರೆ. ಅದನ್ನು ತಮ್ಮ ಊರಿನ ಎಲ್ಲರಿಗೂ ತಿಳಿಸಿ ಗುಂಪಾಗಿ ಹಾಡುತ್ತಾರೆ.ಮಗು ಹುಟ್ಟುವ ಸಮಯದಲ್ಲಿ ಮಹಿಳೆಯರೆಲ್ಲ ಸುತ್ತನೆರೆದು ಇದೇ ಹಾಡು ಹಾಡುತ್ತಾರೆ. ಮಗುವಿಗೆ ನಾಮಕರಣ ಮಾಡುವಾಗ, ಬೇಟೆಯಾಡುವುದನ್ನು ಕಲಿಸುವ ದಿನ, ಮದುವೆಯಾಗುವ ದಿನ ಇದೇ ಹಾಡನ್ನು ಹಾಡುತ್ತಾರೆ. ಆದರೆ ಆ ವ್ಯಕ್ತಿಗೆ ಮತ್ತೊಂದು ಮಗುವಾಗುವಾಗ ಆ ಮಗುವಿಗೆ ಮತ್ತೊಂದು ಹಾಡು. ಒಂದು ದಿನ ಈ ವ್ಯಕ್ತಿ ಸಾಯುವ ಕ್ಷಣ ಬಂದಾಗ ಅವನ ಹಾಸಿಗೆಯ ಸುತ್ತ ನೆರೆದು ಅವನದೇ ಹಾಡನ್ನು ಹಾಡುತ್ತ, ಸತ್ತ ನಂತರ ಕ್ರಿಯೆ ಮಾಡುವಾಗಲೂ ಅದೇ ಹಾಡು. ಈ ಹಾಡನ್ನು ಬೇರೆ ಯಾರಿಗೂ ಬಳಸುವುದಿಲ್ಲ.  ಇದು ನನಗೆ ಬಹಳ ಸಾಂಕೇತಿಕವಾದದ್ದೆಂದು ತೋರುತ್ತದೆ.ನಮ್ಮ ವೈಯಕ್ತಿಕ ಜೀವನವೇ ಒಂದು ಹಾಡು. ನಮ್ಮೆಲ್ಲರಿಗೂ ಒಂದೊಂದು ಹಾಡು ಇದೆ. ಅದು ನಮ್ಮದು ಮಾತ್ರ. ಆ ಹಾಡು ನಮ್ಮ ವ್ಯಕ್ತಿತ್ವದ ವಿಶೇಷ ಕುರುಹು. ಆದರೆ ಆ ಆಫ್ರಿಕಾ ದೇಶದ ಆದಿವಾಸಿಗಳಂತೆ ನಾವು ನಮ್ಮ ಹಾಡನ್ನು ಉಳಿಸಿಕೊಳ್ಳದೇ ಯಾರ ಯಾರದೋ ಹಾಡನ್ನು ನಮ್ಮದಾಗಿಸಿಕೊಳ್ಳಲು ಹೆಣಗಿ ಸೋಲುತ್ತೇವೆ. ನಮ್ಮತನ  ಕಳೆದುಕೊಂಡು ಇನ್ನಾರೂ ಆಗದೇ ತ್ರಿಶಂಕುವಾಗುತ್ತೇವೆ. ನಾವೆಷ್ಟೇ ಪ್ರಯತ್ನಿಸಿದರೂ ಮತ್ತೊಬ್ಬರಂತಾಗುವುದು ಅಸಾಧ್ಯ. ಇದು ಸೃಷ್ಟಿಯ ನಿಯಮ. ನಾವು ಹೇಗಿದ್ದೇವೊ ಹಾಗೆಯೇ ಚೆನ್ನಾಗಿದ್ದೇವೆ, ವಿಶೇಷವಾಗಿದ್ದೇವೆ. ಹಾಗೆಯೇ ಉಳಿದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಇದೇ ಆ ಆಫ್ರಿಕಾದ ಆದಿವಾಸಿಗಳ ನಡವಳಿಕೆಯ ಮುಖ್ಯ ಸಂದೇಶ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.